ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಕೋ ರಜನಿ ದೂರವಾದ

Last Updated 29 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ
1982ರಿಂದ 1986ರವರೆಗೆ ಸಿನಿಮಾ ಬಿಟ್ಟು ಬೇರೇನನ್ನೂ ಯೋಚಿಸಲು ನನಗೆ ಪುರುಸೊತ್ತೇ ಇರಲಿಲ್ಲ. ಯಾವುದಾದರೂ ಚಿತ್ರ ನೋಡಿ, ಅದು ಹಿಡಿಸಿದರೆ ಕನ್ನಡದಲ್ಲಿ ಅದನ್ನು ಹೇಗೆ ರೂಪಿಸಿದರೆ ಚೆನ್ನ ಎಂದು ತಕ್ಷಣಕ್ಕೆ ಮನಸ್ಸು ಯೋಚಿಸುತ್ತಿದ್ದ ಕಾಲಘಟ್ಟ ಅದು. `ಗೆದ್ದ ಮಗ', `ಬ್ರಹ್ಮಗಂಟು', `ಪ್ರಚಂಡ ಕುಳ್ಳ', `ಇಂದಿನ ರಾಮಾಯಣ', `ಮದುವೆ ಮಾಡು ತಮಾಷೆ ನೋಡು', `ಆನಂದ ಭೈರವಿ', `ಪೊಲೀಸ್ ಪಾಪಣ್ಣ', `ನೀ ಬರೆದ ಕಾದಂಬರಿ', `ಅಡತ್ತವಾರಿಸ್', `ನಾನ್ ಅಡಿಮೆ ಇಲ್ಲೈ', `ಗಂಗ್ವಾ' ಹೀಗೆ ಒಂದಾದಮೇಲೆ ಒಂದರಂತೆ ಚಿತ್ರಗಳನ್ನು ನಿರ್ಮಿಸಿದೆ. ಪ್ರೀತಿ ಪಾತ್ರರ ಒತ್ತಾಯಕ್ಕೆ ಮಣಿದು ನಿರ್ದೇಶಕನೂ ಆದೆ. ನಾಲ್ಕು ವರ್ಷದ ಅವಧಿಯಲ್ಲಿ ಹನ್ನೆರಡು ಚಿತ್ರಗಳನ್ನು ನಿರ್ಮಿಸುವುದು ತಮಾಷೆಯ ಮಾತಲ್ಲ. ಅವುಗಳಲ್ಲಿ ಮೂರು ರಜನೀಕಾಂತ್ ಅಭಿನಯದ ಚಿತ್ರಗಳೆಂಬುದು ಇನ್ನೊಂದು ಮುಖ್ಯವಾದ ಅಂಶ. 
 
`ನನ್ನನ್ನು ತಡೆಯೋರು ಯಾರೂ ಇಲ್ಲ' ಎಂದೇ ಬೀಗುತ್ತಿದ್ದೆ. ಮನೆ ಮುಂದೆ ನಿಲ್ಲುತ್ತಿದ್ದ ಕಾರುಗಳು, ಬಂದು ಹೋಗುತ್ತಿದ್ದ ಫೈನಾನ್ಶಿಯರ್‌ಗಳು, ಚಿತ್ರವನ್ನು ತಮಗೇ ನೀಡಿ ಎಂದು ದುಂಬಾಲುಬೀಳುತ್ತಿದ್ದ ವಿತರಕರು, ರಜನಿಗೂ ನನಗೂ ಇರುವ ಅಪರೂಪದ ಸಂಬಂಧವನ್ನು ಪುಂಖಾನುಪುಂಖವಾಗಿ ವರದಿ ಮಾಡಲು ಹಾತೊರೆಯುತ್ತಿದ್ದ ಮಾಧ್ಯಮದವರು ಇವರೆಲ್ಲ ನನ್ನಲ್ಲಿಗೆ ಧಾವಿಸಿ ಬರುತ್ತಿದ್ದುದಕ್ಕೆ ಅಂಬುಜಾ ಸಾಕ್ಷಿಯಾಗಿದ್ದಳು. ತಮಿಳುನಾಡಿನಲ್ಲಿ ನಾಲ್ಕು ವರ್ಷ ನನ್ನ ಹೆಸರು ಚಾಲ್ತಿಯಲ್ಲಿತ್ತು. 
 
`ಗಂಗ್ವಾ' ಹಿಂದಿ ಸಿನಿಮಾ ಮಾಡಿದ್ದಂತೂ ದೊಡ್ಡ ಸಂಭ್ರಮ. ಆ ಚಿತ್ರ ಮಾಡಿದ ಮೇಲೆ ಉತ್ತರ ಭಾರತದ ದೊಡ್ಡ ದೊಡ್ಡ ವಿತರಕರೆಲ್ಲ ನನಗೆ ಪರಿಚಿತರಾದರು. ಮುಂದೆ ಯಾವ ಚಿತ್ರವನ್ನು ನಾನು ನಿರ್ಮಿಸುತ್ತೇನೆ ಎಂಬ ಕುತೂಹಲ ಅವರೆಲ್ಲರಿಗೂ ಇತ್ತು. 
 
1985ರ ವರ್ಷಾಂತ್ಯದ ಆಚರಣೆಯ ಕುರಿತು ನಾನು ಕಳೆದ ವಾರ ಹೇಳಿದ್ದೆ. ಮತ್ತೆ ಮತ್ತೆ ಅದೇ ದಿನ ಕಣ್ಮುಂದೆ ಬರುತ್ತದೆ. ಈಗ ತಾರೆಯರಾಗಿ ಮಿಂಚುತ್ತಿರುವವರು ಆಗ ಪುಟಪುಟನೆ ನನ್ನ ಮನೆಯಲ್ಲಿ ಓಡಾಡಿಕೊಂಡಿದ್ದರು. ಕಾಲ್‌ಷೀಟ್ ಸಿಗುವುದು ಕೂಡ ಕಷ್ಟ ಎಂಬಂಥ ನಟೀಮಣಿಯರು ಆ ದಿನ ರಾತ್ರಿ ನನ್ನ ಮನೆಯ ಪಾರ್ಟಿಗೆ ಹಾಜರಿ ಹಾಕಿದ್ದರು. ರಜನೀಕಾಂತ್, ವಿಷ್ಣುವರ್ಧನ್ ತರಹದ ಘಟಾನುಘಟಿಗಳಲ್ಲದೆ ತಮಿಳುನಾಡು ಹಾಗೂ ಮುಂಬೈನ ಪ್ರತಿಷ್ಠಿತ ನಿರ್ಮಾಪಕ, ವಿತರಕರೆಲ್ಲಾ ಅಲ್ಲಿ ಜಮೆಗೊಂಡಿದ್ದರು. ಆ ಪಾರ್ಟಿ ಶುರುವಾದಾಗ `ನಾನೇ ರಾಜ' ಎಂದುಕೊಂಡಿದ್ದೆ. ಆಮೇಲೆ ನನ್ನ ಅಂತರಾತ್ಮ `ರಾಜ ಅಲ್ಲ; ಕೊತ್ತಂಬರಿ ಬೀಜ' ಎಂದು ಲೇವಡಿ ಮಾಡಿತು. ಪಾರ್ಟಿ ಮುಗಿದ ನಂತರದ ಕೆಲವು ಕ್ಷಣ ಮನಸ್ಸಿನಲ್ಲಿ ಆತಂಕದ ಮೋಡ ಕವಿಯಿತು. ಸುಪ್ತಪ್ರಜ್ಞೆ ಯಾಕೆ ಹೀಗೆಲ್ಲಾ ಎಚ್ಚರಿಸುತ್ತಿದೆ ಎಂದು ಚಿಂತೆಗೀಡಾದೆ. ಅಲ್ಲಿಯವರೆಗಿನ ನಾಲ್ಕು ವರ್ಷ ನಾನು ತಲೆಕೆಡಿಸಿಕೊಂಡಿದ್ದು ಚಿತ್ರಗಳ ಕುರಿತಾಗಿ. ವೈಯಕ್ತಿಕವಾಗಿ ಅಷ್ಟು ಖಿನ್ನನಾದವನೇ ಅಲ್ಲ. 
 
ಅದ್ಯಾವ ಭ್ರಮೆಯಲ್ಲಿ ಇದ್ದೆನೋ, ವಿನಾಶ ಕಾಲದಲ್ಲಿ ದೇವರು ಯಾಕೆ ವಿಪರೀತ ಬುದ್ಧಿ ಕೊಟ್ಟನೋ ವಿಷ್ಣುವರ್ಧನ್ ನನ್ನಿಂದ ದೂರವಾದ. 
ನಾನು ಹಿಂದಿ ಚಿತ್ರಗಳನ್ನು ನಿರ್ಮಿಸತೊಡಗಿದಾಗ ವಿಷ್ಣುವರ್ಧನ್ ಪದೇಪದೇ ಆ ವಿಷಯವಾಗಿ ಚರ್ಚಿಸುತ್ತಿದ್ದ. ಹಿಂದಿ ಸಿನಿಮಾದಲ್ಲಿ ನಟಿಸುವುದು ಅವನ ಬಯಕೆಯೂ ಆಗಿತ್ತು. ತನ್ನನ್ನು ಹಾಕಿಕೊಂಡು ಒಂದು ಹಿಂದಿ ಚಿತ್ರ ಮಾಡುವಂತೆ ಅನೇಕ ಸಲ ನನ್ನನ್ನು ಕೇಳಿಕೊಂಡಿದ್ದ. ನನಗೂ ಅವನ ಬಯಕೆ ಈಡೇರಿಸಬೇಕೆಂದು ಅನ್ನಿಸಿತ್ತು. ಆದರೆ, `ಗಂಗ್ವಾ' ಚಿತ್ರ ನಾನು ನಿರೀಕ್ಷಿಸಿದಷ್ಟು ಆದಾಯ ತರಲಿಲ್ಲ. ಹಾಗಾಗಿ ಆ ಯೋಚನೆ ಈಡೇರುವ ಗಳಿಗೆ ಕೂಡಿಬರಲಿಲ್ಲ. ಕನ್ನಡದಲ್ಲಿ ತನ್ನನ್ನು ಹಾಕಿಕೊಂಡು ಚಿತ್ರಗಳನ್ನು ಮಾಡಿ, ಅದರಿಂದ ಬಂದ ಹಣವನ್ನು ಹಿಂದಿ ಸಿನಿಮಾ ಮೇಲೆ ಹೂಡುತ್ತಿದ್ದೇನೆ ಎಂದೂ ವಿಷ್ಣು ಪದೇಪದೇ ವಾದ ಮಾಡಿದ್ದ. ಇಬ್ಬರ ನಡುವೆ ಆ ವಿಷಯವಾಗಿ ದೊಡ್ಡ ಚರ್ಚೆಯೇ ನಡೆದಿತ್ತು. `ಗಂಗ್ವಾ' ಚಿತ್ರವನ್ನು ನಾನು ಮಾಡಿದ್ದೇ ಹಿಂದಿ ಚಿತ್ರರಂಗದಲ್ಲಿ ಪಳಗೋಣ ಎಂಬ ಹೆಬ್ಬಯಕೆಯಿಂದ. ಅಮಿತಾಬ್ ಬಚ್ಚನ್-ಕಮಲ ಹಾಸನ್, ಅಮಿತಾಬ್ ಬಚ್ಚನ್-ರಜನೀಕಾಂತ್ ಕಾಂಬಿನೇಷನ್‌ನ ಚಿತ್ರಗಳು ಆಗ ಬಂದಿದ್ದವು. ಅವುಗಳ ಗುಂಗು ನನಗೂ ಹತ್ತಿತ್ತು. ಅಮಿತಾಬ್-ರಜನಿ ಹಾಕಿಕೊಂಡು ಒಂದು ಸಿನಿಮಾ ಮಾಡಿದರೆ ಹೇಗೆ ಎಂದು ನಾನೂ ಯೋಚಿಸಿದ್ದೆ. 
 
ಅಮಿತಾಬ್ ನನ್ನ ಮೆಚ್ಚಿನ ನಟ. ಅಂಥ ಯೋಜನೆಗಳು ಕೈಗೂಡಿದ್ದಿದ್ದರೆ ವಿಷ್ಣುವರ್ಧನ್ ಹಾಗೂ ರಜನೀಕಾಂತ್ ಕಾಂಬಿನೇಷನ್‌ನಲ್ಲಿ ಹಿಂದಿ ಚಿತ್ರ ನಿರ್ಮಿಸುವ ನಿರ್ಧಾರವನ್ನು ಖಂಡಿತ ಮಾಡುತ್ತಿದ್ದೆ. ರಜನೀಕಾಂತ್ ಜೊತೆಗೂ ನನ್ನ ಇಂಥ ಬಯಕೆಗಳನ್ನು ಹಂಚಿಕೊಂಡಿದ್ದೆ. ಅದನ್ನು ಹೇಳಿದಾಗಲೆಲ್ಲಾ ರಜನಿ ನನ್ನನ್ನು ಹುರಿದುಂಬಿಸುತ್ತಿದ್ದ. `ಗಂಗ್ವಾ'ಗೆ ಸಿಕ್ಕ ಮಂಕಾದ ಪ್ರತಿಕ್ರಿಯೆ ನನ್ನನ್ನೂ ಮಂಕಾಗಿಸಿತು. ಆದ್ದರಿಂದ ಹಿಂದಿ ಸಿನಿಮಾರಂಗದಲ್ಲಿ ಹೆಚ್ಚು ಸಾಹಸ ಮಾಡುವ ಮನಸ್ಥಿತಿ ನನ್ನಲ್ಲಿ ಉಳಿಯಲಿಲ್ಲ. ಮುಂದೆ ವಿಷ್ಣುವರ್ಧನ್ ತಾನೇ ಹಿಂದಿ ಚಿತ್ರಗಳನ್ನು ಮಾಡಿದ. ಅವನ ಆ ಛಲ ನನಗೂ ಇಷ್ಟ. ತಾನು ತನಗೊಂದು ಹಿಂದಿ ಸಿನಿಮಾ ಮಾಡಲಿಲ್ಲ ಎಂಬ ಬೇಸರ ವಿಷ್ಣುವಿಗೆ ಇತ್ತು. 
 
ಮದ್ರಾಸ್‌ನಲ್ಲಿ ನಾನು ಹೆಸರು ಮಾಡಲು ರಜನೀಕಾಂತ್ ಕಾರಣ. ಅದಕ್ಕಾಗಿ ಅವನಿಗೆ ಧನ್ಯವಾದ. ಅವನಿಂದ ಕಲಿಯುವುದು ಬಹಳ ಇತ್ತು. ನಿರ್ಮಾಪಕ ಬಯಸುವ ನಟ ಹೇಗಿರಬೇಕು ಎಂಬುದಕ್ಕೆ ಅವನು ಮಾದರಿಯಾಗಿದ್ದ. ಪಾತ್ರ ಬೇಡುವ ದೇಹಭಾಷೆಯಿಂದ ಹಿಡಿದು ಸಂಭಾಷಣೆ ಹೇಳುವವರೆಗೆ ಅವನು ಅಚ್ಚುಕಟ್ಟಾಗಿ ಹೋಂವರ್ಕ್ ಮಾಡಿಕೊಳ್ಳುತ್ತಿದ್ದ. `ಗಂಗ್ವಾ' ಹಿಂದಿ ಚಿತ್ರಕ್ಕಂತೂ ಅವನು ರಾತ್ರಿಯೆಲ್ಲಾ ತಾಲೀಮು ನಡೆಸಿದ್ದನ್ನು ಕಂಡಿದ್ದೇನೆ. ಚಿತ್ರೀಕರಣಕ್ಕೆ ತಡವಾಗಿ ಬರುತ್ತಿರಲಿಲ್ಲ. 
 
1986ರ ಫೆಬ್ರುವರಿಯಲ್ಲಿ `ನಾನ್ ಅಡಿಮೆ ಇಲ್ಲೈ' ತೆರೆಕಂಡಿತು. ಆನಂತರ ಆದದ್ದು ದೊಡ್ಡ ಆಘಾತ. ಸಿನಿಮಾ ಓಡಲಿಲ್ಲ. ರಜನಿ ಬಯಸಿದಂತೆ ನಾನೇ ಆ ಚಿತ್ರವನ್ನು ನಿರ್ದೇಶಿಸಿದ್ದೆ. ಅವನಿಗೆ ಪೂರ್ತಿ ಹಣವನ್ನು ಕೊಟ್ಟಿದ್ದೆನೋ ಇಲ್ಲವೋ ಗೊತ್ತಿಲ್ಲ. ಅವನು ದೂರವಾದ. ನಾನು, ಅವನು ಇಬ್ಬರೂ ರಾಘವೇಂದ್ರ ಸ್ವಾಮಿಯ ಭಕ್ತರು. ನಾವಿಬ್ಬರೂ ದೂರಾದದ್ದು ಏಕೆ ಎಂದು ಪದೇಪದೇ ರಾಘವೇಂದ್ರ ಸ್ವಾಮಿಯಲ್ಲೇ ಕೇಳುತ್ತಿದ್ದೇನೆ.

ಅವರು ರಜನಿಗೆ ನನ್ನ ಮೊರೆಯನ್ನು ಮುಟ್ಟಿಸುತ್ತಾರೆಂಬುದು ನಂಬಿಕೆ. ಇತ್ತೀಚೆಗೆ ಅಂಬರೀಷ್‌ಗೆ ಅರವತ್ತು ತುಂಬಿದ ಸಮಾರಂಭಕ್ಕೆ ರಜನೀಕಾಂತ್ ಬಂದಿದ್ದ. ಅಲ್ಲಿಗೆ ನಾನೂ ಹೋಗಿದ್ದೆ. ಅವನು ಎಲ್ಲೋ ಇದ್ದ. ನಾನು ಇನ್ನೆಲ್ಲೋ ಇದ್ದೆ. 
 
ರಜನಿಯ ಉತ್ಸಾಹ ಅಪರಿಮಿತವಾದದ್ದು. ಅವನು `ಹ್ಞೂಂ' ಅನ್ನುವುದೂ ಒಂದೇ, ಚಾಮುಂಡಿಬೆಟ್ಟದ ಬಸವಣ್ಣ ಅಂಬಾ ಅನ್ನುವುದೂ ಒಂದೇ. ಆದರೆ, ಒಮ್ಮೆ `ಹ್ಞೂಂ' ಎಂದುಬಿಟ್ಟರೆ ಮುಗಿಯಿತು; ಎಲ್ಲಾ ಜವಾಬ್ದಾರಿಯನ್ನು ಅವನೇ ವಹಿಸಿಕೊಳ್ಳುತ್ತಿದ್ದ. 
 
ರಜನಿ ಸೂಪರ್‌ಸ್ಟಾರ್ ಎಂಬುದಕ್ಕೆ ಓಡಿದ ಸಿನಿಮಾಗಳಷ್ಟೇ ಸಾಕ್ಷಿಯಲ್ಲ. ಅವನ ಸಿನಿಮಾ ತೆಗೆಯುವಾಗ ನಾವು ಬಳಸಿದ ಫಿಲ್ಮ್ ರೀಲ್‌ಗಳಲ್ಲಿ (ನೆಗೆಟಿವ್) ವೇಸ್ಟೇಜ್ ಇರುತ್ತಿತ್ತು. ಸಾಮಾನ್ಯವಾಗಿ ವೇಸ್ಟ್ ಫಿಲ್ಮ್ ರೀಲಿನ ಬೆಲೆ 3 ರೂಪಾಯಿ ಇರುತ್ತಿತ್ತು. ರಜನಿ ಚಿತ್ರಗಳ ವೇಸ್ಟೇಜ್‌ಗೆ 100 ರೂಪಾಯಿ ಕೊಡಲು ಸಿದ್ಧವಿರುತ್ತಿದ್ದರು. ಚಿತ್ರದ ಮುಹೂರ್ತದ ದಿನವೇ ವೇಸ್ಟೇಜ್ ನೆಗೆಟಿವ್‌ಗೆ ಬುಕ್ ಮಾಡಲು ನಾಮುಂದು ತಾಮುಂದು ಎಂದು ಬರುತ್ತಿದ್ದರು. ಅಲ್ಲಿ ಖರೀದಿಸಿದ ವೇಸ್ಟೇಜ್ ನೆಗೆಟಿವ್‌ಗಳನ್ನು ಸಂತೆಗಳಲ್ಲಿ ಲಾಭಕ್ಕೆ ಮಾರುತ್ತಿದ್ದರಂತೆ. ರಜನಿ ಚಿತ್ರದ ವೇಸ್ಟೇಜ್ ವಾಸ್ತವದಲ್ಲಿ `ವೇಸ್ಟೇಜ್' ಆಗಿಯೇ ಇರಲಿಲ್ಲ. 
 
`ದ್ವಾರ್ಕಿ ಸಾರ್, ನೀವು ಅಮಿತಾಬ್ ಬಚ್ಚನ್ ಇದ್ದಹಾಗೆ. ಮತ್ತೆ ಗೆದ್ದು ಬರುತ್ತೀರಿ' ಎಂದು ರಜನಿ ಆಗ ಹೇಳಿದ್ದ. ಅವನ ಮಾತು ಸುಳ್ಳಾಗಲಿಲ್ಲ. ಸೋತು ಸುಣ್ಣವಾಗಿದ್ದ ನಾನು ಮತ್ತೆ ಮತ್ತೆ ಗೆದ್ದೆ. ಅದು ಬೇರೆಯದೇ ಕಥೆ. 
 
ಮುಂದಿನ ವಾರ: ಆಫ್ರಿಕಾದಲ್ಲಿ ಶೀಲಾ ಸಾಹಸ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT