ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಬಜೆಟ್‌ನಲ್ಲಿ ಮಹಿಳೆಗೆ ಸಿಕ್ಕಿದ್ದೇನು?

Last Updated 15 ಜುಲೈ 2013, 19:59 IST
ಅಕ್ಷರ ಗಾತ್ರ

ಭಾರತದ ಮಹಾ ಲೇಖಪಾಲರು (ಸಿಎಜಿ) ಈ ವರ್ಷದ ಆರಂಭದಲ್ಲಿ ನೀಡಿರುವ ವರದಿಯಲ್ಲಿದ್ದ ಮಾಹಿತಿ ಇದು. ರಾಜ್ಯದಲ್ಲಿ ಲಿಂಗಾನುಪಾತ ಸುಧಾರಣೆ ಹಾಗೂ ಲಿಂಗ ಸಮಾನತೆ ಉತ್ತೇಜನಕ್ಕೆ ಸಂಬಂಧಿಸಿದ ಯೋಜನೆಗಳ ಕಾರ್ಯ ನಿರ್ವಹಣೆ ಹಾಗೂ ಅನುಷ್ಠಾನ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಾವುದೇ ವಿಶ್ಲೇಷಣೆ ಅಥವಾ ಅವಲೋಕನಗಳನ್ನು ನಡೆಸಿಲ್ಲ ಎಂದು  ಸಿಎಜಿ ವರದಿ ಆಕ್ಷೇಪ ಎತ್ತಿತ್ತು. ಜೆಂಡರ್ ಬಜೆಟಿಂಗ್ ಘಟಕದ (ಜೆಂಡರ್ ಬಜೆಟಿಂಗ್ ಸೆಲ್ -ಜಿಬಿಸಿ) ಸಲಹೆಯಂತೆ ಹಣಕಾಸು ಹಂಚಿಕೆ ಮಾಡಿಲ್ಲ. ಅನುಷ್ಠಾನ ಹಂತದಲ್ಲಿ  ದೋಷಗಳಾಗಿವೆ ಎಂದೂ ಈ ವರದಿ  ಹೇಳಿತ್ತು.

ಮಹಿಳೆಯರಿಗೆ ಸಂಬಂಧಿಸಿದಂತೆ ಸಂಪನ್ಮೂಲದ ಹಂಚಿಕೆ  ಹಾಗೂ ವೆಚ್ಚದ ಪ್ರಮಾಣವನ್ನು ಜೆಂಡರ್ ಬಜೆಟಿಂಗ್ ಘಟಕ ಗುರುತಿಸುತ್ತದೆ. ಹಾಗೆಯೇ, ಮಹಿಳೆಗೆ ಸಂಬಂಧಿಸಿದ ಸರ್ಕಾರಿ ನೀತಿಗಳು ಹಾಗೂ ಬದ್ಧತೆಗಳಿಗಾಗಿ ಎಷ್ಟರ ಮಟ್ಟಿಗೆ  ಹಣ ವ್ಯಯವಾಗಿದೆ ಎಂಬುದನ್ನೂ ರಾಜ್ಯ ಹಣಕಾಸು ಇಲಾಖೆಯಿಂದ ಸ್ಥಾಪಿತವಾಗಿರುವ ಈ ಘಟಕ ಪರಿಶೀಲಿಸುತ್ತದೆ.

“ಜೆಂಡರ್ ಬಜೆಟಿಂಗ್ ಎಂದರೆ ಮಹಿಳೆಯರಿಗೇ ಪ್ರತ್ಯೇಕ ಬಜೆಟ್ ಅಲ್ಲ. ಲಿಂಗ ನಿರ್ದಿಷ್ಟ ಪರಿಣಾಮಗಳನ್ನು ಗುರುತಿಸುವುದಕ್ಕಾಗಿ ಸರ್ಕಾರದ ಬಜೆಟ್‌ನ ವಿಶ್ಲೇಷಣೆಯ ಒಂದು ವಿಧಾನ ಇದು. ಜೆಂಡರ್ ಬದ್ಧತೆಗಳನ್ನು ಬಜೆಟ್ ಬದ್ಧತೆಯಾಗಿಸುವ ಪ್ರಕ್ರಿಯೆ ಇದು” ಎಂಬುದು ಬ್ರಿಟಿಷ್ ಸಮಾಜ ವಿಜ್ಞಾನಿ ಡಯಾನೆ ಎಲ್ಸನ್ ಅವರ ವಿವರಣೆ. 

ಹೆಣ್ಣು ಭ್ರೂಣ ಹತ್ಯೆ ತಡೆಗಾಗಿ ಹಿಂದಿನ ಬಿಜೆಪಿ ಸರ್ಕಾರ ಆರಂಭಿಸಿದ `ಭಾಗ್ಯಲಕ್ಷ್ಮಿ' ಸೇರಿದಂತೆ ಮಹಿಳೆಗೆ ಸಂಬಂಧಿಸಿದ ಯೋಜನೆಗಳ ಮಿತಿಗಳು, ಅನುಷ್ಠಾನದಲ್ಲಿನ ದೋಷಗಳ ಕುರಿತು ಚರ್ಚೆಗಳು ಮುಂದುವರಿಯುತ್ತಿರುವಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವಾರ ಮಂಡಿಸಿದ ಬಜೆಟ್‌ನಲ್ಲಿ  ಮಹಿಳೆಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಪ್ರಕಟಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಈ ಬಜೆಟ್‌ನಲ್ಲಿ ಮೀಸಲಿರಿಸಿರುವ ಹಣ 3,466 ಕೋಟಿ ರೂಪಾಯಿ.

ಭೂಮಿಗೆ ಬಿದ್ದ ಬೀಜ
ಎದೆಗೆ ಬಿದ್ದ ಅಕ್ಷರ
ಇಂದಲ್ಲ ನಾಳೆ ಫಲ ಕೊಡುವುದು


ಎಂಬಂತಹ ದೇವನೂರ ಮಹಾದೇವ ಅವರ ಸಾಲುಗಳನ್ನು  ಶಿಕ್ಷಣದ ಯೋಜನೆಗಳನ್ನು ಮಂಡಿಸುವ ಮುಂಚೆ ಸಿದ್ದರಾಮಯ್ಯನವರು ಸೂಕ್ತವಾಗಿ ಪ್ರಸ್ತಾಪಿಸುತ್ತಾರೆ. ಆದರೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಗಳನ್ನು ಮಂಡಿಸುವ ಮೊದಲು ಅವರು ಹೇಳುವ ವಾಕ್ಯಗಳನ್ನು ಗಮನಿಸಿ. 

`ನಮ್ಮ ಸಮಾಜದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಪಾವಿತ್ರ್ಯದ  (ಒತ್ತು ನನ್ನದು) ಸ್ಥಾನವಿದೆ. ಈ ಆಶಯದ ಹಿನ್ನೆಲೆಯಲ್ಲಿ ನಮ್ಮ ಸರ್ಕಾರವು ಮಹಿಳೆಯರ ಸಬಲೀಕರಣಕ್ಕೆ ಮತ್ತು ಮಕ್ಕಳ ಅಭಿವೃದ್ಧಿಗೆ ಆದ್ಯತೆಯನ್ನು ನೀಡುತ್ತದೆ'. ಇಂತಹ  ಸವಕಲಾದ ಮಾತುಗಳನ್ನೇ ಪುನರುಚ್ಚರಿಸುತ್ತಾ `ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ' ಶೀರ್ಷಿಕೆ ಅಡಿ ಒಂದಿಷ್ಟು  ತಮ್ಮ ಯೋಜನೆಗಳ ವಿವರಗಳನ್ನು ಬಿಚ್ಚಿಟ್ಟಿದ್ದಾರೆ ಮುಖ್ಯಮಂತ್ರಿಗಳು.

`ಯತ್ರ ನಾರ್ಯಸ್ತು ಪೂಜ್ಯಂತೆ ರಮಂತಾ ದೇವತಾಃ' ಎನ್ನುತ್ತಾ ಹೆಣ್ಣಿಗೆ ಪೂಜನೀಯವಾದ, ಪಾವಿತ್ರ್ಯದ ಸ್ಥಾನಮಾನವನ್ನು ನೀಡುತ್ತಲೇ ಹೆಣ್ಣನ್ನು ದಾಸಿಯಾಗಿ ಕಾಣುವ ಭಾರತೀಯ ಮನೋಧರ್ಮದ ವಿರುದ್ಧ ಮಹಿಳೆಯರು ಹೋರಾಡುತ್ತಲೇ ಇರುವುದು ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯನವರಿಗೆ ತಿಳಿಯದ ಸಂಗತಿಯಂತೂ ಅಲ್ಲ. ಮಹಿಳೆಗೆ ಸಂಬಂಧಿಸಿದಂತೆ ಭಾಷೆ ಹಾಗೂ ಪದಗಳ ಆಯ್ಕೆಯಲ್ಲೂ ಲಿಂಗಸಂಬಂಧ ಸೂಕ್ಷ್ಮತೆಗಳು ವ್ಯಕ್ತವಾಗಬೇಕಿರುವ ದಿನಮಾನಗಳು ಇವು. ಸರ್ಕಾರದ ನೀತಿಗಳನ್ನು ವಿವರಿಸುವ ಆಯವ್ಯಯ ಮುಂಗಡಪತ್ರದಲ್ಲಂತೂ ಅವು ಸ್ಪಷ್ಟವಾಗಿ ವ್ಯಕ್ತವಾಗಬೇಕಾದುದು ಅಗತ್ಯ.

ಬಜೆಟ್ ಎಂಬುದು ಸರ್ಕಾರದ ಬಹುಮುಖ್ಯ ನೀತಿಗಳನ್ನು ವಿವರಿಸುವ ಸಾಧನ ಎಂಬುದು ಸರ್ವವಿದಿತ. ನೀತಿಗಳ ಅನುಷ್ಠಾನದಲ್ಲಿ ಹಣ ಹಂಚಿಕೆಯ ವಿವರಗಳನ್ನು ಬಜೆಟ್ ನೀಡುತ್ತದೆ. ಸಾರ್ವಜನಿಕ ವೆಚ್ಚಗಳಲ್ಲಿ ಮಹಿಳೆಯರ ಕಾಳಜಿಗಳನ್ನು ಪ್ರತಿಬಿಂಬಿಸಲು ಹಾಗೂ ಆದ್ಯತೆಗಳನ್ನು ಗುರುತಿಸಲು `ಜೆಂಡರ್ ಬಜೆಟಿಂಗ್' ಎಂಬುದು ನೆರವಾಗುತ್ತದೆ. `ಜೆಂಡರ್ ಬಜೆಟಿಂಗ್' ಪರಿಕಲ್ಪನೆಗೆ ಅಧಿಕೃತವಾಗಿ ಚಾಲನೆ ದೊರೆತಿದ್ದು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರು 2005-06ರ ಸಾಲಿನಲ್ಲಿ ಮಂಡಿಸಿದ ಕೇಂದ್ರ ಆಯವ್ಯಯ ಪತ್ರದಲ್ಲಿ. ಗಂಡು - ಹೆಣ್ಣು ಅಸಮಾನತೆಯ ನೆಲೆಯನ್ನು ಸಮಾನತೆಯ ನೆಲೆಯತ್ತ ಒಯ್ಯಲು `ಆರ್ಥಿಕ ಚಿಂತನೆ'ಯಲ್ಲಿ ಇರಿಸಿದಂತಹ ಮೊದಲ ಹೆಜ್ಜೆಯಾಗಿತ್ತು ಅದು. ಜೆಂಡರ್ ಆಧಾರಿತ ಆಯವ್ಯಯವನ್ನು 2007-08ರಿಂದ  ಕರ್ನಾಟಕ ಸರ್ಕಾರವೂ ಪ್ರಕಟಿಸುತ್ತಾ ಬಂದಿದೆ.

ಮಹಿಳೆಯನ್ನು ಕೇಂದ್ರೀಕರಿಸಿದಂತಹ ಬಜೆಟ್ ಏಕೆ ಅಗತ್ಯ ಎಂಬುದು ಪ್ರಶ್ನೆ. ಅಂಕಿ ಅಂಶಗಳನ್ನೇ ನೋಡಿ. ವಿಶ್ವದಲ್ಲಿ ಮೂರನೇ ಎರಡರಷ್ಟು ಮಹಿಳೆಯರು ಅನಕ್ಷರಸ್ಥರು. ಕರ್ನಾಟಕದಲ್ಲಿ ಸಾಕ್ಷರ ಮಹಿಳೆಯರ ಪ್ರಮಾಣ  ಇನ್ನೂ ಶೇ 68ರ ಮಟ್ಟದಲ್ಲಿದೆ. ಹಾಗೆಯೇ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆರಿಗೆ ಸಂದರ್ಭಗಳಲ್ಲಿ ಮಹಿಳೆಯರು ಸಾಯುವುದು ಮುಂದುವರಿದಿದೆ.

ಕರ್ನಾಟಕದಲ್ಲಿ ಒಂದು ಲಕ್ಷ ಹೆರಿಗೆಗಳಲ್ಲಿ 178 ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಈ ಪ್ರಮಾಣ ನಮ್ಮ ನೆರೆಯ ದಕ್ಷಿಣ ರಾಜ್ಯಗಳಿಗಿಂತ ಅತಿ ಹೆಚ್ಚು ಎಂಬುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ದೃಷ್ಟಿಯಿಂದ, ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ 41 ತಾಯಿ, ಶಿಶು ಆರೋಗ್ಯ ರಕ್ಷಣಾ ಕೇಂದ್ರಗಳಲ್ಲಿನ (ಎಂಸಿಎಚ್ ಯೂನಿಟ್ಸ್) ಹಾಸಿಗೆ ಸಾಮರ್ಥ್ಯವನ್ನು ಮುಂದಿನ 3 ವರ್ಷಗಳ ಅವಧಿಯಲ್ಲಿ ಹೆಚ್ಚುವರಿಯಾಗಿ 2500 ಸಂಖ್ಯಾಬಲಕ್ಕೆ ಹೆಚ್ಚಿಸಲು ರಾಜ್ಯ ಬಜೆಟ್‌ನಲ್ಲಿ ಉದ್ದೇಶಿಸಿರುವುದು ಒಪ್ಪಬಹುದಾದದ್ದು.

ಹಾಗೆಯೇ ಗದಗದಲ್ಲಿರುವ ಸರ್ಕಾರಿ ಹೆರಿಗೆ ಆಸ್ಪತ್ರೆಯ ಆಧುನೀಕರಣ ಮತ್ತು ವಿಸ್ತರಣೆಗಾಗಿ 8 ಕೋಟಿ ರೂಪಾಯಿ ಒದಗಿಸುವ ಭರವಸೆಯನ್ನು ನೀಡಲಾಗಿದೆ. ಬಿಪಿಎಲ್ ಕುಟುಂಬಗಳ ದೃಷ್ಟಿಹೀನ ಮಹಿಳೆಯರಿಗೆ  ಎರಡು ಹೆರಿಗೆಯವರೆಗೆ  ಪ್ರತಿ ಹೆರಿಗೆಯ ನಂತರ  2 ವರ್ಷಗಳ ಅವಧಿಗೆ ಆರೋಗ್ಯ ಹಾಗೂ ಪೌಷ್ಟಿಕ ಆಹಾರ ದೃಷ್ಟಿಯಿಂದ ತಿಂಗಳಿಗೆ 2000 ರೂಪಾಯಿಗಳ ಶಿಶುಪಾಲನೆ ಭತ್ಯೆ ನೀಡುವ ಭರವಸೆ ನೀಡಲಾಗಿದೆ.

32.50 ಲಕ್ಷ ಯುವತಿಯರಿಗೆ ಋತುಚಕ್ರ ಸಂದರ್ಭದಲ್ಲಿ ಶುಚಿತ್ವ ಕಾಪಾಡಲು 10 ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಡ್‌ಗಳನ್ನು ಉಚಿತವಾಗಿ ಸರಬರಾಜು ಮಾಡುವ ಬದ್ಧತೆಯನ್ನೂ ಬಜೆಟ್ ನೀಡಿದೆ. ಆದರೆ ಈ ಫಲಾನುಭವಿಗಳ ಗುರುತಿಸುವಿಕೆ ಹೇಗೆ? ಉಚಿತ ನ್ಯಾಪ್‌ಕಿನ್ ಪ್ಯಾಡ್‌ಗಳ ನೀಡಿಕೆ ಎಷ್ಟು ಬಾರಿ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲ.

ಅನೇಕ ಯೋಜನೆಗಳು ಈಗಾಗಲೇ ಅಸ್ತಿತ್ವದಲ್ಲಿರುವಂತಹ ಯೋಜನೆಗಳೇ. ಇವುಗಳಿಗೆ ಅಲ್ಪಸ್ವಲ್ಪ ಬದಲಾವಣೆ ಹಾಗೂ  ವಿಸ್ತರಣೆಗಳನ್ನು ಮಾಡಲಾಗಿದೆ. ಉದಾಹರಣೆಗೆ  ಮಾಜಿ ದೇವದಾಸಿಯರಿಗೆ ನೀಡುತ್ತಿರುವ ಮಾಸಾಶನವನ್ನು  ರೂ 400 ದಿಂದ ರೂ 500ಕ್ಕೆ ಏರಿಸಲಾಗಿದೆ. ನಿವೇಶನ ಹೊಂದಿರುವ ಮಾಜಿ ದೇವದಾಸಿಯರಿಗೆ ಮನೆಗಳನ್ನು ನಿರ್ಮಿಸಲು ನೀಡುತ್ತಿರುವ ಸಹಾಯಧನವನ್ನು ರೂ 40,000 ದಿಂದ  ರೂ 1,20,000ಕ್ಕೆ ಏರಿಸಲಾಗಿದೆ.  ಐಸಿಡಿಎಸ್ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರಿಗೆ ನೀಡುತ್ತಿರುವ ಗೌರವಧನವನ್ನು ಕ್ರಮವಾಗಿ  ರೂ 500 ಹಾಗೂ ರೂ  250 ಹೆಚ್ಚಿಸುವ ಪ್ರಸ್ತಾವವಿದೆ.

ಮಕ್ಕಳ ಅಗತ್ಯಗಳಿಗೆ ಗಮನ ನೀಡುವುದು ಲಿಂಗ ಸಂವೇದನಾಶೀಲತೆಯನ್ನು ಸಹಜವಾಗಿಯೇ ಪ್ರತಿಬಿಂಬಿಸುತ್ತದೆ ಎಂದು ಭಾವಿಸುವುದು ಸಾಮಾನ್ಯ ಸಂಗತಿ. ಮಹಿಳೆ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿಗೆ  ಭಾರತದಂತಹ ರಾಷ್ಟ್ರದಲ್ಲಿ ಒಂದೇ ಸಚಿವಾಲಯ ಬೇರೆ ಇರುವುದರಿಂದಲೂ ಈ ಭಾವನೆ ಮತ್ತಷ್ಟು ಬಲವಾಗಲು ಸಾಧ್ಯ. ಮಗು ಹೆರುವ ಕ್ರಿಯೆ ಹಾಗೂ ನಂತರದ ಹೊಣೆಗಾರಿಕೆಗಳಿಂದಾಗಿ ಮಕ್ಕಳು ಜೆಂಡರ್ ವಿಚಾರದ ವ್ಯಾಪ್ತಿಯಲ್ಲಿ ಬರುತ್ತಾರೆ ಎಂಬುದೂ ಸರಿ. ಆದರೆ ಮಹಿಳೆಯದೇ ವೈಯಕ್ತಿಕ ಹಕ್ಕುಗಳಿಗೆ ನೀಡಬೇಕಾದ ಗಮನ ನೀಡುವುದೂ ಅಗತ್ಯ. 

ಬದಲಾಗುತ್ತಿರುವ ಕಾಲದಲ್ಲಿ, ನಗರ ಪ್ರದೇಶಗಳಲ್ಲಿ ತಮ್ಮದೇ ನೆಲೆ ಕಂಡುಕೊಳ್ಳುತ್ತಿರುವ ಅವಿವಾಹಿತ ಉದ್ಯೋಗಸ್ಥ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ. ಈ ವರ್ಗಕ್ಕೆ ತೆರಿಗೆ ರಿಯಾಯಿತಿ, ಉದ್ಯೋಗಸ್ಥ ಮಹಿಳೆಯರ ಅನಕೂಲಕ್ಕಾಗಿ ಹೆಚ್ಚಿನ ಹಾಸ್ಟೆಲ್‌ಗಳು, ಮನೆ ಖರೀದಿಗೆ ಆಸ್ತಿ ತೆರಿಗೆ ರಿಯಾಯಿತಿ, ಬ್ಯಾಂಕ್ ಸಾಲಗಳು - ಹೀಗೆ ಅನೇಕ ಯೋಜನೆಗಳು ಹೆಣ್ಣುಮಕ್ಕಳ ಸಬಲೀಕರಣಕ್ಕೆ ನೆರವಾಗುವಂತಹ ಕ್ರಮಗಳು. ಆದರೆ ಅಲ್ಪಸಂಖ್ಯಾತ ಹೆಣ್ಣುಮಕ್ಕಳ ಮದುವೆಗೆ ಆರ್ಥಿಕ ಸಹಾಯ ಒದಗಿಸುವ ಹೊಸ ಯೋಜನೆಯಾಗಲಿ, ಅಂಗವಿಕಲ ವ್ಯಕ್ತಿಗಳೊಡನೆ ವಿವಾಹ ಏರ್ಪಡುವ ಪ್ರಕರಣಗಳಲ್ಲಿ ನಿರಂತರ ಮಾಸಿಕ ಆದಾಯ ದೊರಕಿಸಲು ಅಂಗವಿಕಲ ವ್ಯಕ್ತಿಯ ಹೆಸರಲ್ಲಿ ರೂ 50,000 ಹೂಡಿಕೆಯ ರೂಪದಲ್ಲಿ ನೀಡುವ ಕಾರ್ಯಕ್ರಮವಾಗಲಿ ಓಲೈಕೆಯ ರಾಜಕಾರಣದ ಭಾಗವಷ್ಟೇ. 

ಆದರೆ ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗ ಅಭಿವೃದ್ಧಿ ಕಾರ್ಯಕ್ರಮಗಳಡಿ ಪ್ರಕಟಿಸಿರುವ ಕೆಲವು ಕಾರ್ಯಕ್ರಮಗಳು ಸಕಾರಾತ್ಮಕವಾದುದಾಗಿವೆ. ಹಿಂದುಳಿದ ವರ್ಗಗಳ ಎಂಜಿನಿಯರಿಂಗ್, ವೈದ್ಯಕೀಯ ವಿದ್ಯಾರ್ಥಿನಿಯರು ಹಾಗೂ ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಪ್ರತಿ ಜಿಲ್ಲೆಯಲ್ಲೂ 100 ಸಂಖ್ಯಾ ಬಲದ ವಿದ್ಯಾರ್ಥಿ ನಿಲಯ ಸ್ಥಾಪನೆ ಅಂತಹದೊಂದು ಹೆಜ್ಜೆ.  ಪರಿಶಿಷ್ಟ ಜಾತಿ, ಪಂಗಡಗಳ ನಿರುದ್ಯೋಗಿ ಯುವಕ, ಯುವತಿಯರಿಗೆ ಕೌಶಲ ಅಭಿವೃದ್ಧಿಗಾಗಿ ತರಬೇತಿ ಕಾರ್ಯಕ್ರಮಗಳ ಉದ್ದೇಶವೂ ಒಳ್ಳೆಯದೆ.

ಆದರೆ ಇವು ಬರೀ ಸಾಮಾನ್ಯ ಘೋಷಣೆಗಳಾಗದೆ ನಿರ್ದಿಷ್ಟ ಕಾರ್ಯಕ್ರಮಗಳಾಗಿ ಎಷ್ಟರ ಮಟ್ಟಿಗೆ ಜಾರಿಯಾಗುತ್ತವೆ ಎಂಬುದು ಮುಖ್ಯ.
ಮಾಸಾಶನ ನೀಡುವ ಪರಿಪಾಠ ಹೊಸದಲ್ಲ. ಈಗಾಗಲೇ ವಿಧವೆಯರು, ಅಂಗವಿಕಲರು ಮುಂತಾದವರಿಗೆ ಮಾಸಾಶನ ನೀಡುವ ಯೋಜನೆ ರಾಜ್ಯದಲ್ಲಿ ಜಾರಿಯಲ್ಲಿದೆ. ಈ ಬಾರಿ `ಮನಸ್ವಿನಿ' ಯೋಜನೆ ಅನ್ವಯ 40 ವರ್ಷ ದಾಟಿದ ಬಿಪಿಎಲ್ ವರ್ಗದ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರು ರೂ 500 ಮಾಸಾಶನಕ್ಕೆ ಅರ್ಹರಾಗುತ್ತಾರೆಂಬುದು ವಿಶೇಷ.  ಹಾಗೆಯೇ `ಮೈತ್ರಿ' ಹೊಸ ಯೋಜನೆ ಮೂಲಕ ರೂ 500 ಮಾಸಾಶನ ಪಡೆದುಕೊಳ್ಳಲಿರುವ ಲೈಂಗಿಕ ಅಲ್ಪಸಂಖ್ಯಾತರಿಗೆ ಅವರ ಬಹು ಕಾಲದ ಬೇಡಿಕೆ ಈಡೇರಿದಂತಾಗಲಿದೆ. ರಾಜ್ಯದಲ್ಲಿ ಸುಮಾರು 30,000 ಲೈಂಗಿಕ ಅಲ್ಪಸಂಖ್ಯಾತರು ಇದ್ದಾರೆ ಎಂಬ ಅಂದಾಜಿದೆ.

ಸರ್ಕಾರಿ ಪಾಠಶಾಲೆಗಳಲ್ಲಿ 1ನೇ ತರಗತಿಗೆ ಹೆಣ್ಣುಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಉತ್ತೇಜಿಸಲು ಪ್ರತಿದಿನದ ಹಾಜರಾತಿಗೆ ರೂ 2 ಪ್ರೋತ್ಸಾಹಧನ ನೀಡುವ ಯೋಜನೆ ಹೊಸತಲ್ಲ. ವಾಸ್ತವವಾಗಿ ಹೆಣ್ಣುಮಕ್ಕಳು ಮಧ್ಯದಲ್ಲೇ ಶಾಲೆ ಬಿಡುವ ಪ್ರವೃತ್ತಿ ಇರುವುದು ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳಲ್ಲಿ. ಇನ್ನು ಹೆಣ್ಣುಮಕ್ಕಳಿಗೆ 15 ಜಿಲ್ಲೆಗಳಲ್ಲಿ ಸರ್ಕಾರಿ ಮಹಿಳಾ ಕಾಲೇಜುಗಳ ಸ್ಥಾಪನೆ ಉದ್ದೇಶವಂತೂ ಯಥಾಸ್ಥಿತಿವಾದದ ಹಳೆಯ ಸಾಂಪ್ರದಾಯಿಕ ದೃಷ್ಟಿಕೋನದಿಂದ ಮುಂದೆ ಸಾಗಿದಂತೆ ಕಾಣುವುದಿಲ್ಲ. ಮಹಿಳಾ ವಿಶ್ವವಿದ್ಯಾಲಯ ವ್ಯಾಪ್ತಿಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಉದ್ದೇಶದ ಪ್ರಾದೇಶಿಕ ಕೇಂದ್ರವೊಂದನ್ನು ಮಂಡ್ಯದಲ್ಲಿ ಸ್ಥಾಪಿಸುವುದಕ್ಕಾಗಿ ರೂ 30 ಕೋಟಿ ಅನುದಾನ ನೀಡುವ ಪ್ರಸ್ತಾವವೂ ವಿವಾದಾತ್ಮಕವಾದದ್ದು.

ಶಿಕ್ಷಣ, ಆರೋಗ್ಯ ಹಾಗೂ ಕ್ಷೇಮಾಭಿವೃದ್ಧಿಗಳಂತಹ ಸಾಮಾಜಿಕ ಅಥವಾ `ಸಾಫ್ಟ್' ವಲಯಗಳಿಗಷ್ಟೇ ಜೆಂಡರ್ ಬಜೆಟಿಂಗ್ ಪರಿಕಲ್ಪನೆ ಅನ್ವಯಿಸುವುದಿಲ್ಲ. ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಲಿಂಗಸಾಮರಸ್ಯದ ಸಮತೋಲನ ಕಾಯ್ದುಕೊಳ್ಳಲು ಜೆಂಡರ್ ಬಜೆಟಿಂಗ್ ಸಾಧನವಾಗುತ್ತದೆ. ಕೃಷಿ, ವಾಣಿಜ್ಯ, ವಿದ್ಯುತ್, ಕೈಗಾರಿಕೆ, ಪೊಲೀಸ್, ನಗರ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನದಂತಹ ವಲಯಗಳಲ್ಲಿಯೂ ಜೆಂಡರ್ ಬಜೆಟಿಂಗ್ ಪರಿಕಲ್ಪನೆ ಸಾಕಾರಗೊಳ್ಳಬೇಕು. ಆಗ ಅದು ಲಿಂಗ ನ್ಯಾಯ ಬಜೆಟ್ ಎಂಬ ಪರಿಕಲ್ಪನೆಗೆ ಹತ್ತಿರವಾಗಬಹುದು. ಆರ್ಥಿಕತೆಯಲ್ಲಿ ತಮ್ಮ ನ್ಯಾಯಬದ್ಧ ನೆಲೆಯನ್ನು ಮಹಿಳೆಯರು ಪಡೆದುಕೊಳ್ಳುವುದಕ್ಕಾಗಿ ಹಣ ಹಂಚಿಕೆಯನ್ನು ಹೆಚ್ಚಿಸಲು ತನ್ನ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನೇ ಸರ್ಕಾರ ಪುನರ್‌ರೂಪಿಸಬೇಕಿದೆ ಎಂಬಂತಹ ವಾಗ್ವಾದಗಳಿವೆ.

ಸರ್ಕಾರಿ ಅನುದಾನದಿಂದ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಮದುವೆಯಾಗುವವರ ವಿವಾಹಗಳ ನೋಂದಣಿಯನ್ನು ಮಹಿಳೆ ರಕ್ಷಣೆ ಖಾತರಿಗಾಗಿ ಇನ್ನು ಮುಂದೆ ಕಡ್ಡಾಯಗೊಳಿಸಲಾಗುವುದು. ಹಾಗೆಯೇ ಮಹಿಳೆಯರ ದೌರ್ಜನ್ಯ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ 10 ತ್ವರಿತ ನ್ಯಾಯಾಲಯಗಳ ಸ್ಥಾಪನೆಗೂ ಸರ್ಕಾರ ಮುಂದಾಗಿದೆ. ಇದು ಸರಿಯಾದ ಕ್ರಮ. ಜೊತೆಗೇ ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 8500 ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ನೇಮಕ ಮಾಡಿಕೊಳ್ಳುವ ವಿಚಾರವನ್ನೂ ಸಿದ್ದರಾಮಯ್ಯನವರು ಪ್ರಸ್ತಾಪಿಸಿದ್ದಾರೆ. ಆದರೆ ಈ ಪೈಕಿ ಎಷ್ಟು ಮಂದಿ ಮಹಿಳಾ ಪೊಲೀಸರಿರುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ದೆಹಲಿ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ನಂತರ ಆಕೆಯ ಸಾವಿನ ಹಿನ್ನೆಲೆಯಲ್ಲಿ  ಪೊಲೀಸ್ ಪಡೆಯಲ್ಲಿ ಮಹಿಳೆಯರ ಪ್ರಮಾಣವನ್ನು ಶೇ 33ಕ್ಕೆ ಏರಿಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಕಳೆದ ಜನವರಿ ತಿಂಗಳಲ್ಲಿ ಕರೆ ನೀಡಿತ್ತು. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಮಹಿಳೆಯನ್ನು ಬರೀ ಫಲಾನುಭವಿಗಳಾಗಿಯೇ ಬಿಂಬಿಸುವುದು ಬದಲಾಗಬೇಕಿದೆ. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಆಕೆಯೂ ಸಮಾನ ಪಾಲುದಾರಳಾಗಬೇಕು ಎಂಬ ಬಗ್ಗೆ ಆಳುವವರ ದೃಷ್ಟಿಕೋನದಲ್ಲಿ ಅಪಾರ ಬದಲಾವಣೆಗಳಾಗಬೇಕಾಗಿದೆ.

1974ರಲ್ಲಿ ಮಹಿಳೆಯರ ಸ್ಥಾನಮಾನ ಕುರಿತಂತಹ ವರದಿ `ಸಮಾನತೆಯತ್ತ' ಪ್ರಕಟವಾದಾಗಲಿಂದಲೂ ಸಾರ್ವಜನಿಕ ವೆಚ್ಚದಲ್ಲಿ ಲಿಂಗ ದೃಷ್ಟಿಕೋನದ ಅಗತ್ಯವನ್ನು ಪ್ರತಿಪಾದಿಸುತ್ತಾ ಬರಲಾಯಿತು. 1997-98ರಲ್ಲಿ ಮಹಿಳಾ ಘಟಕ ಯೋಜನೆಯಲ್ಲಿ (ವಿಮೆನ್ ಕಂಪೊನೆಂಟ್ ಪ್ಲಾನ್) ಮಹಿಳೆಯರಿಗಾಗಿ ಔಪಚಾರಿಕವಾಗಿ ಹಣ ಮೀಸಲಿಡುವುದು ಆರಂಭವಾಯಿತು. ಆದರೆ ಸಂಪನ್ಮೂಲಗಳ ಹಂಚಿಕೆಯಲ್ಲಿ ಲಿಂಗ ಸಂವೇದನಾಶೀಲತೆ ಆರಂಭವಾದದ್ದು 7ನೇ ಪಂಚ ವಾರ್ಷಿಕ ಯೋಜನೆಯಲ್ಲಿ (1987-1992).  ಮಹಿಳಾ ಸಂಬಂಧಿ ವಲಯಗಳಿಗೆ ಕನಿಷ್ಠ ಶೇ 30ರಷ್ಟು ಹಣವನ್ನು ಮೀಸಲಿರಿಸಲಾಗುವುದು ಎಂದು ಒಂಬತ್ತನೇ ಪಂಚವಾರ್ಷಿಕ ಯೋಜನೆಯಲ್ಲಿ ಹೇಳಲಾಗಿತ್ತು.

ಜೆಂಡರ್ ಬಜೆಟಿಂಗ್‌ಗೆ ಇಂತಹದ್ದೇ ಮಾದರಿ ಎಂಬುದೇನೂ ಸೃಷ್ಟಿಯಾಗಿಲ್ಲ. ಆದರೆ ಪುರುಷರು, ಮಹಿಳೆಯರು, ಬಾಲಕಿಯರು ಹಾಗೂ ಬಾಲಕರ ಮೇಲೆ ಬಜೆಟ್‌ನಿಂದಾಗುವ ಪರಿಣಾಮಗಳೇನು ಎಂಬುದು ಮುಖ್ಯ. ಬಜೆಟ್  ಪ್ರಕ್ರಿಯೆಯೊಳಗೇ ಜೆಂಡರ್ ದೃಷ್ಟಿಕೋನ ಅಂತರ್ಗತವಾಗಬೇಕು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT