ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಹಳಿಗಳ ನಡುವಿನ ಅಂತರ

Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಭಾರತೀಯ ರೈಲು ವ್ಯವಸ್ಥೆಯಲ್ಲಿ ಎರಡು ಹಳಿಗಳ ನಡುವಿನ ಅಂತರ ನಾಲ್ಕು ಬಗೆಯದಾಗಿದೆ. ಬಹಳ ಹಿಂದೆ ಇದ್ದ ನ್ಯಾರೋ ಗೇಜ್ ಹಳಿಗಳ ನಡುವಿನ ಅಂತರ ಎರಡು ಅಡಿ ಆರು ಇಂಚು. ನಂತರ ಮೀಟರ್ ಗೇಜ್‌ನಲ್ಲಿ ಅಂತರ ಮೂರು ಅಡಿ ಮೂರು ಇಂಚು. ಆದರೆ ಬಹಳ ದಿನಗಳವರೆಗೆ ಚಾಲನೆಯಲ್ಲಿದ್ದ ಸ್ಟ್ಯಾಂಡರ್ಡ್ ಗೇಜ್‌ನಲ್ಲಿದ್ದ ಅಂತರ ನಾಲ್ಕು ಅಡಿ ಎಂಟೂವರೆ ಇಂಚು. ಈಗಿರುವ ಬ್ರಾಡ್‌ಗೇಜ್‌ನಲ್ಲಿ ಅಂತರ ಐದು ಅಡಿ ಆರು ಇಂಚು.

ಈ ಮಾಹಿತಿಯನ್ನು ನೀಡಲು ಒಂದು ಉದ್ದೇಶವಿದೆ. ಅಮೆರಿಕೆಯ ಸ್ಟ್ಯಾಂಡರ್ಡ್ ರೈಲಿನ ಹಳಿಗಳ ನಡುವಿನ ಅಂತರವೂ ನಾಲ್ಕು ಅಡಿ ಎಂಟೂವರೆ ಇಂಚು. ಇದೊಂದು ವಿಚಿತ್ರ ಸಂಖ್ಯೆ. ಅದನ್ನು ಐದು ಅಡಿ ಮಾಡಬಹುದಿತ್ತು ಅಥವಾ ನಾಲ್ಕುವರೆ ಅಡಿ ಮಾಡಬಹುದಿತ್ತು. ಈ ಸಂಖ್ಯೆಯೇ ಹೇಗೆ ಬಂತು ಎಂದು ಪರಿಶೀಲನೆ ಮಾಡಿದವರು ಒಂದು ವಿಶೇಷವನ್ನು ತಿಳಿಸುತ್ತಾರೆ.

ಇಂಗ್ಲೆಂಡಿನಲ್ಲಿ ರೈಲ್ವೆಯನ್ನು ನಿರ್ಮಿಸಿದವರೇ ಅಮೆರಿಕೆಯ ರೈಲು ವ್ಯವಸ್ಥೆಯನ್ನು ಕಟ್ಟಿದ್ದರಿಂದ ಅದೇ ಅಳತೆಯನ್ನು ಇಲ್ಲೂ ಬಳಸಿದರು. ಹಾಗಾದರೆ ಇಂಗ್ಲೆಂಡಿನಲ್ಲಿ ಏಕೆ ಇದೇ ಅಳತೆಯನ್ನು ಇಟ್ಟುಕೊಂಡರು? ಅದಕ್ಕೆ ಕಾರಣ ರೈಲ್ವೆಯನ್ನು ನಿರ್ಮಿಸುವ ಮೊದಲು ರಸ್ತೆಯ ಟ್ರ್ಯಾಮ್‌ನ್ನು ಕಟ್ಟಿದ್ದರು. ಅಲ್ಲಿ ಹಳಿಗಳ ನಡುವಿನ ಅಂತರ ಇದೇ ಅಗಿತ್ತು. ಟ್ರ್ಯಾಮ್‌ನ ಹಳಿಗಳ ಅಂತರ ಅಭ್ಯಾಸವಾದ್ದರಿಂದ ರೈಲಿನದೂ ಅದೇ ಆಯಿತು. ಆದರೆ ಟ್ರ್ಯಾಮ್ ಹಳಿಗಳ ನಡುವಿನ ಅಂತರ ಇಷ್ಟೇಕೆ ಆಯಿತು?

ಯುರೋಪಿನ ಅಂತೆಯೇ ಇಂಗ್ಲೆಂಡಿನ ರಸ್ತೆಗಳನ್ನು ಮಾಡಿದವರು ರೋಮನ್ನರಂತೆ. ಆ ರಸ್ತೆಗಳಲ್ಲಿ ಆಗ ಜನಪ್ರಿಯವಾದ ಕುದುರೆಗಾಡಿಗಳು ಓಡಾಡುತ್ತಿದ್ದವು. ಕುದುರೆಗಾಡಿಗಳಿಗೆ ಗಾಲಿಗಳನ್ನು ಮತ್ತು ಗಾಲಿಗಳ ನಡುವಿನ ಅಚ್ಚುಗಳನ್ನು ಮಾಡಿದ ಕಮ್ಮೋರರೇ ಟ್ರ್ಯಾಮ್‌ನ ಗಾಲಿ, ಅಚ್ಚುಗಳನ್ನು ಮಾಡಿದ್ದರು. ಕುದುರೆ ಗಾಡಿಗಳ ಗಾಲಿಗಳ ನಡುವಿನ ಅಂತರವೂ ನಾಲ್ಕು ಅಡಿ ಎಂಟೂವರೆ ಇಂಚು. ತಿಳಿಯಿತಲ್ಲ, ಟ್ರ್ಯಾಮ್‌ನ ಹಾಗೂ ನಂತರ ರೈಲ್ವೆಯ ಹಳಿಗಳ ನಡುವಿನ ಅಂತರದ ಗುಟ್ಟು?

ಅದು ಸರಿ ಸ್ವಾಮಿ ಆದರೆ ರೋಮನ್ನರು ತಮ್ಮ ಕುದುರೆಗಾಡಿಗಳ ಗಾಲಿಗಳ ನಡುವಿನ ಅಂತರವನ್ನೂ ನಾಲ್ಕು ಅಡಿ ಎಂಟೂವರೆ ಇಂಚು ಏಕಿಟ್ಟರು? ರೋಮನ್ನರು ತಮ್ಮ ಕುದುರೆಗಾಡಿಗಳಿಗೆ ಎರಡು ಕುದುರೆ ಕಟ್ಟುತ್ತಿದ್ದರು. ಮೊದಮೊದಲು ಗಾಡಿಗಳು ಇಕ್ಕಟ್ಟಾಗಿದ್ದವಂತೆ. ಆಗ ಕುದುರೆಗಳ ಹಿಂಭಾಗಗಳು ಒಂದಕ್ಕೊಂದು ಬಡಿದು ಗಾಯವಾಗುತ್ತಿತ್ತಂತೆ. ಅದಕ್ಕಾಗಿ ಗಾಡಿಯನ್ನು ಸ್ವಲ್ಪ ಸ್ವಲ್ಪವೇ ಅಗಲಮಾಡುತ್ತ ಬಂದರು. ತುಂಬ ಅಗಲವಾದರೆ ಗಾಡಿ ತುಂಬ ಅಲುಗಾಡುತ್ತಿತ್ತು. ಈ ಕಾರಣಕ್ಕಾಗಿ ಅವರು ಎರಡು ದೊಡ್ಡ ಬಲಿಷ್ಠವಾದ ಕುದುರೆಗಳ ಹಿಂಭಾಗಗಳು ಒಂದಕ್ಕೊಂದು ತಾಗಿರಬಾರದು ಮತ್ತು ಅವು ತುಂಬ ದೂರವೂ ಹೋಗಬಾರದು ಎಂದು ಯೋಚಿಸಿ ಗಾಡಿಗಳನ್ನು ರಚಿಸಿದರು. ಆಗ ಆದರ ಅಳತೆ ನಾಲ್ಕು ಅಡಿ ಎಂಟೂವರೆ ಇಂಚು!

ಅರ್ಥವಾಯಿತಲ್ಲ, ಕುದುರೆಗಳ ಹಿಂಭಾಗದ ಗಾತ್ರದ ಮೇಲೆ ನಿರ್ಮಾಣವಾದದ್ದು ರೋಮನ್‌ರ ಕುದುರೆಗಾಡಿ. ಅದೇ ಅಳತೆಯನ್ನು ಬಳಸಿ ಇಂಗ್ಲೆಂಡಿನ ಕುದುರೆಗಾಡಿಗಳು ನಿರ್ಮಾಣವಾದವು. ಕುದುರೆಗಾಡಿಗಳನ್ನು ಮಾಡಿದವರೇ ಟ್ರ್ಯಾಮ್‌ನ ಗಾಲಿಗಳನ್ನು ಮಾಡಿದರು. ಅದನ್ನೇ ಮಾದರಿಯಾಗಿಟ್ಟುಕೊಂಡು ಇಂಗ್ಲೆಂಡಿನ ರೈಲು ಬಂದಿತು. ಇದೇ ಜನ ಅಮೇರಿಕೆಯಲ್ಲಿ ರೈಲು ಮಾಡಿದರೂ ಅದೇ ಅಳತೆ ಉಳಿಯಿತು. ಇಂಗ್ಲೆಂಡಿನ ಜನರೇ ಭಾರತದಲ್ಲೂ ರೈಲ್ವೆ ಹಾಕಿದರಲ್ಲವೇ?

ಪ್ರಪಂಚದ ಅತಿದೊಡ್ಡ ಅತ್ಯುತ್ತಮ ಹಾಗೂ ಪ್ರಗತಿಶೀಲವಾದ ಸಾಗಾಣಿಕೆಯ ವ್ಯವಸ್ಥೆಯಾದ ರೈಲ್ವೆಯ ಹಳಿಗಳ ಅಂತರದ ಮೂಲ ಎರಡು ಕುದುರೆಗಳ ಹಿಂಭಾಗದ ಅಳತೆ! ಮನಸ್ಸಿನ ಅಭ್ಯಾಸಬಲದ ಪ್ರತಿಬಂಧಕವನ್ನು ದಾಟುವುದು ಬಲುಕಷ್ಟ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT