ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್‌ಸ್ಟ್ರೀಟ್ ಪ್ರತಿಭಟನೆ: ಅಮೆರಿಕಕ್ಕೆ ಅಗ್ನಿಪರೀಕ್ಷೆ

Last Updated 7 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಕಳೆದ ಏಳು ವಾರಗಳಿಂದ ಅಮೆರಿಕಾ ದೇಶದಾದ್ಯಂತ ವಿನೂತನ ಪ್ರತಿಭಟನೆಯೊಂದು ನಡೆಯುತ್ತಿದೆ. ನ್ಯೂಯಾರ್ಕ್ ನಗರದ ಆರ್ಥಿಕ ವಲಯವೆಂದೇ ಪ್ರಖ್ಯಾತವಾಗಿದ್ದು ಅಮೆರಿಕಾ ದೇಶದ ಹಣಕಾಸು ವ್ಯವಹಾರಗಳ ಕೇಂದ್ರ ಬಿಂದುವಾಗಿರುವ ವಾಲ್‌ಸ್ಟ್ರೀಟ್ ಪ್ರದೇಶದಲ್ಲಿ ಈ ಹೋರಾಟ ಸೆಪ್ಟೆಂಬರ್ 17ರಂದು ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೆ ಈ ದೇಶದ ಎಪ್ಪತ್ತಕ್ಕೂ ಹೆಚ್ಚು ನಗರಗಳಲ್ಲಿ ವ್ಯಾಪಿಸಿರುವ ವಾಲ್‌ಸ್ಟ್ರೀಟ್ ಪ್ರತಿಭಟನೆಗಳನ್ನು ಅಮೆರಿಕಾ ದೇಶ ಕಂಡ `ಪ್ರಥಮ ಜನಾಂದೋಲನ~ ಎಂದು ಬಿಂಬಿಸಲಾಗುತ್ತಿದ್ದು, ಈ ಹೋರಾಟ ಭವಿಷ್ಯದಲ್ಲಿ ದೇಶದ ರಾಜಕೀಯ ಮತ್ತು ಆರ್ಥಿಕ ನೀತಿಗಳ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಲಿದೆ ಎಂದು ಹೇಳಲಾಗುತ್ತಿದೆ.
ವಾಲ್‌ಸ್ಟ್ರೀಟ್ ಪ್ರತಿಭಟನಾಕಾರರು ತಮ್ಮ ಹೋರಾಟಕ್ಕೆ ಅಳವಡಿಸಿಕೊಂಡಿರುವ ಎರಡು ಘೋಷಣೆಗಳು ಅದರ ಹಿಂದಿರುವ ಹತಾಶಾ ಮನಃಸ್ಥಿತಿಗಳಿಗೆ ಸಾಕ್ಷಿಯಾಗಿವೆ.

`ವಾಲ್‌ಸ್ಟ್ರೀಟನ್ನು ವಶಕ್ಕೆ ತೆಗೆದುಕೊಳ್ಳಿ~ (ಆಕ್ಯುಪೈ ವಾಲ್‌ಸ್ಟ್ರೀಟ್) ಹಾಗೂ `ಶೇಕಡ 99ರಷ್ಟು ಇರುವವರು ನಾವೇ~ (ವಿ ಆರ್ ದಿ 99 ಪರ್ಸೆಂಟ್) ಎಂಬ ಕೂಗು ಅಮೆರಿಕಾದ ಎಲ್ಲೆಡೆ ಕೇಳಿಬರುತ್ತಿದ್ದು ಈ ಪ್ರತಿಭಟನೆಗಳು ದೇಶ ಎದುರಿಸುತ್ತಿರುವ ಅನೇಕ ಸಂದಿಗ್ಧಗಳು ಹಾಗೂ ಸವಾಲುಗಳಿಗೆ ಸಾಕ್ಷಿಯಾಗಿವೆ.

ವಾಲ್‌ಸ್ಟ್ರೀಟ್ ಪ್ರದೇಶ, ಅಮೆರಿಕಾ ದೇಶವೇ ಅಲ್ಲದೆ ಇಡೀ ವಿಶ್ವದ ಅನೇಕ ಆರ್ಥಿಕ ಏಳು-ಬೀಳುಗಳನ್ನು ನಿರ್ಧರಿಸುವ ಹಾಗೂ ಶ್ರೀಮಂತ ಉದ್ದಿಮೆಗಳಿಗೆ ಮತ್ತು ಸ್ಟಾಕ್ ಮಾರ್ಕೆಟ್ ವ್ಯವಹಾರಗಳಿಗೆ ಕೇಂದ್ರ ಸ್ಥಾನವಾಗಿರುವಂಥ ಒಂದು ಪ್ರಬಲ ಆರ್ಥಿಕ ವಲಯ. ಇಲ್ಲಿನ ಹಣಕಾಸು ವಹಿವಾಟುಗಳನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿರುವ ಪ್ರಬಲ-ಪ್ರಭಾವಿ ವ್ಯಕ್ತಿಗಳು ತಮ್ಮ ಲಾಭಗಳಿಕೆಗಾಗಿ ಇಡೀ ದೇಶವನ್ನು ಒತ್ತೆಯಿಟ್ಟುಕೊಂಡಿದ್ದು ಜನಸಾಮಾನ್ಯರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಅಲಕ್ಷಿಸಿರುವುದು ವಾಲ್‌ಸ್ಟ್ರೀಟ್ ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿರುವುದು. ಅಮೆರಿಕಾದಲ್ಲಿ ದಿನದಿಂದ ದಿನಕ್ಕೆ ಸಾಮಾಜಿಕ ಆರ್ಥಿಕ ಅಸಮಾನತೆ ಹೆಚ್ಚುತ್ತಿದ್ದು ಈ ಪರಿಸ್ಥಿತಿಯಿಂದ ಹೊರ ಬರಬೇಕಾದರೆ ವಾಲ್‌ಸ್ಟ್ರೀಟ್ ಪ್ರದೇಶದ ಮೇಲಿನ ಶ್ರೀಮಂತರ ಹಿಡಿತವನ್ನು ಮೊದಲು ತೊಡೆದು ಹಾಕಬೇಕು, ಈ ದೇಶದ ಭವಿಷ್ಯವಿರುವುದು ಬಂಡವಾಳಶಾಹಿ ಶಕ್ತಿಗಳ ಕೈಯಲ್ಲಲ್ಲ ಎಂಬ ವಿಷಯವನ್ನು ಸರ್ಕಾರಕ್ಕೆ ಹಾಗೂ ನಾಗರಿಕ ಸಮಾಜಕ್ಕೆ ಮನನ ಮಾಡಿಕೊಡುವುದು ವಾಲ್‌ಸ್ಟ್ರೀಟ್ ಪ್ರತಿಭಟನೆಗಳ ಮೂಲ ಉದ್ದೇಶ.

ವಾಲ್‌ಸ್ಟ್ರೀಟ್ ಪ್ರತಿಭಟನಾಕಾರರು ಈ ಪ್ರದೇಶದಲ್ಲಿರುವ ಸಾರ್ವಜನಿಕ ಪಾರ್ಕೊಂದರಲ್ಲಿ ನೆಲೆಯೂರಿದ್ದು ಈ ವಲಯದ ಮೇಲೆ ತಮ್ಮದೂ ಹಕ್ಕಿದೆ ಎಂಬ ಸ್ಪಷ್ಟ ಸಂದೇಶವನ್ನು ಆಡಳಿತಾತ್ಮಕ ವ್ಯವಸ್ಥೆಗೆ ನೀಡುತ್ತಿದ್ದಾರೆ. ನಾಗರಿಕ ಕ್ರಾಂತಿಯೊಂದು ಅಮೆರಿಕಾದಲ್ಲಿ ಸದ್ಯದಲ್ಲೇ ಸಂಭವಿಸಲಿದೆ ಎಂಬ ಅರ್ಥ ಬರುವ ಫಲಕಗಳನ್ನು ಹೊತ್ತ ಪ್ರತಿಭಟನಾಕಾರರು ಹಗಲು ರಾತ್ರಿಯೆನ್ನದೆ, ಚಳಿ-ಮಳೆ, ಮಂಜು, ತಣ್ಣನೆಯ ಗಾಳಿಯಂಥ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳನ್ನೂ ಲೆಕ್ಕಿಸದೆ ತಮ್ಮ ಹೋರಾಟವನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ದೇಶ ಈ ಹೊತ್ತು ಕಾಣುತ್ತಿರುವ ಒಂದು ವೈಶಿಷ್ಟ್ಯ.

ವಾಲ್‌ಸ್ಟ್ರೀಟ್ ಪ್ರತಿಭಟನೆಗಳ ಎರಡನೆಯ ಸಂದೇಶ `ಶೇಕಡ 99 ರಷ್ಟಿರುವವರು ನಾವೇ~ ಎಂಬುದಕ್ಕೂ ಒಂದು ವಿಶೇಷವಾದ ಅರ್ಥವಿದೆ. ದೇಶದ ಸಂಪತ್ತಿನ ಬಹು ಭಾಗ ಕೇಂದ್ರೀಕೃತವಾಗಿರುವುದು ಶೇಕಡ ಒಂದರಷ್ಟು ಜನಸಂಖ್ಯೆಯ ಬಳಿ. ಇವರ ಹಣಕಾಸು ವ್ಯವಹಾರಗಳು, ಐಷಾರಾಮಿ ಜೀವನ ಶೈಲಿ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಸರ್ಕಾರಿ ವ್ಯವಸ್ಥೆಯ ಮೇಲೆ ಈ ವರ್ಗ ಹೊಂದಿರುವ ಪ್ರಭಾವ ಈ ಹೊತ್ತು ದೇಶದಲ್ಲಿ ತಾಂಡವವಾಡುತ್ತಿರುವ ಸಮಸ್ಯೆಗಳಿಗೆ ಮೂಲ ಕಾರಣ ಎನ್ನುವುದು ಬಹು ಜನರಲ್ಲಿ ಕಂಡು ಬರುತ್ತಿರುವ ಅಸಮಾಧಾನ.

ಸುಮಾರು ನಾಲ್ಕು ವರ್ಷಗಳ ಹಿಂದೆ ಅಮೆರಿಕಾ ಆರ್ಥಿಕ ಹಿಂಬೀಳಿಕೆಯ ಸುಳಿಗೆ ಸಿಲುಕಿದಾಗಿನಿಂದ ಹಿಡಿದು ಇಂದಿನವರೆಗೆ `ಇಲ್ಲಿ ಎಲ್ಲವೂ ಸರಿಯಾಗಿಲ್ಲ~ ಎನ್ನುವುದು ನಮಗೆಲ್ಲ ತಿಳಿದ ವಿಷಯವೇ. ಕಾಲದಿಂದ ಕಾಲಕ್ಕೆ ಪರಿಸ್ಥಿತಿಯಲ್ಲಿ ಆಶಾದಾಯಕವಾದ ಬದಲಾವಣೆಗಳು ಸಂಭವಿಸುತ್ತಿವೆ ಎಂಬ ಸಂದೇಶವನ್ನು ಸಾರುವ ಅಂಕಿಅಂಶಗಳು ಸರ್ಕಾರಿ ವಲಯದಿಂದ ಬಿಡುಗಡೆಯಾಗುತ್ತಿದ್ದರೂ ಕೆಳ-ಮಧ್ಯಮ ವರ್ಗ, ಬಡವರು, ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಇಲ್ಲಿಗೆ ತಂಡೋಪತಂಡವಾಗಿ ವಲಸೆ ಬಂದಿರುವ ಶ್ರಮಿಕ ವರ್ಗ ಹಾಗೂ ಜೀವನ ನಿರ್ವಹಣೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಅಲ್ಪಸಂಖ್ಯಾತ ಗುಂಪುಗಳಲ್ಲಿ ಕೆಳ ಸ್ತರಗಳಲ್ಲಿರುವಂಥ ಈ ವರ್ಗಗಳ ಜೀವನದ ಗುಣಮಟ್ಟ ದಿನೇ ದಿನೇ ಇಳಿಯುತ್ತಿದೆ. ಒಂದೆಡೆ ಕಣ್ಣು ಕೋರೈಸುತ್ತಿರುವ ಸಂಪತ್ತಿನ ಪ್ರದರ್ಶನ, ಮತ್ತೊಂದೆಡೆ ರಸ್ತೆ ಬದಿಗಳಲ್ಲಿ ಕವಡೆ ಕಾಸಿಗಾಗಿ ಅಂಗಲಾಚುವಂಥ ಜನ ಇವೆರಡೂ ವೈರುಧ್ಯಗಳೂ ಈ ಸಮಾಜದಲ್ಲಿ ಒಟ್ಟೊಟ್ಟಿಗೆ ಕಂಡು ಬರುತ್ತಿರುವುದರಿಂದಲೇ ವಾಲ್‌ಸ್ಟ್ರೀಟ್ ಪ್ರತಿಭಟನಾಕಾರರು ಕಾರ್ಪೊರೇಟ್ ದೊರೆಗಳ, ಭ್ರಷ್ಟ ರಾಜಕಾರಣಿಗಳ `ಆರ್ಥಿಕ ವಸಾಹತುಶಾಹೀಕರಣ~ದ ವಿರುದ್ಧ ಬೀದಿಗಿಳಿದು ದೇಶದ ವಿಶ್ವದ, ಎಲ್ಲಕ್ಕಿಂತ ಮಿಗಿಲಾಗಿ ಮಾಧ್ಯಮಗಳ ಗಮನ ಸೆಳೆಯಲು ಮುಂದಾಗಿರುವುದು.

ಅಮೆರಿಕಾ ದೇಶದಾದ್ಯಂತ ಹರಡುತ್ತಿರುವ ಪ್ರತಿಭಟನೆಗಳ ಮತ್ತೊಂದು ವೈಶಿಷ್ಟ್ಯವೆಂದರೆ ಜನಾಂಗ, ಭಾಷೆ, ರಾಷ್ಟ್ರೀಯತೆ, ಕುಲ, ವರ್ಣ, ವಯಸ್ಸು, ಲಿಂಗ ಹಾಗೂ ರಾಜಕೀಯ ಪಕ್ಷ ಭೇದಗಳಿಲ್ಲದೆ ಜನರು ಸಹಸ್ರಾರು ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಕೈ ಜೋಡಿಸಿರುವುದು. ಒಬಾಮಾ ನೇತೃತ್ವದ ಸರ್ಕಾರದಿಂದ ಬಹು ನಿರೀಕ್ಷೆಗಳನ್ನಿಟ್ಟುಕೊಂಡು ಪ್ರಗತಿಪರವಾದಂಥ ನಿಲುವುಗಳನ್ನೂ ನೀತಿಗಳನ್ನೂ ನಿರೀಕ್ಷಿಸಿದ ಕೋಟ್ಯಂತರ ಮತದಾರರಿಗೆ ಅಮೆರಿಕಾ ಚಲಿಸುತ್ತಿರುವ ರೀತಿ ಸಾಕಷ್ಟು ನಿರಾಶೆಯನ್ನು ತಂದಿದೆ.

ಸಮಾನತಾವಾದ ಹಾಗೂ ಸಮಾಜವಾದದಂಥ ತತ್ವಗಳಲ್ಲಿ ನಂಬಿಕೆಗಳನ್ನಿಟ್ಟುಕೊಂಡು ಆಫ್ರಿಕನ್‌ಅಮೆರಿಕನ್ ಮೂಲದ ನಾಯಕತ್ವ ತರಬಹುದಾದಂಥ ಹೊಸ ಅಲೆಯನ್ನು ಕಾತರದಿಂದ ಕಾಯುತ್ತಿದ್ದವರು ಇಂದು ಕಾಣುತ್ತಿರುವುದು ಮತ್ತದೇ ಕಾರ್ಪೊರೆಟ್ ಸಂಸ್ಥೆಗಳ ಅಟ್ಟಹಾಸ ಹಾಗೂ ಜನ ಸಾಮಾನ್ಯರ ಬದುಕಿನ ಬವಣೆಗಳನ್ನು ಕುರಿತ ಅವರ ಅಸೂಕ್ಷ್ಮ ನಿಲುವುಗಳು. ಸಹಜವಾಗಿಯೇ ಅವರಲ್ಲಿ ಹತಾಶಾ ಪ್ರಜ್ಞೆ ಮನೆ ಮಾಡಿರುವುದು, ಬೀದಿಗಿಳಿದು ಹೋರಾಡಲು ಅವರನ್ನು ಪ್ರೇರೇಪಿಸಿರುವುದು.

ವಾಲ್‌ಸ್ಟ್ರೀಟ್ ಪ್ರತಿಭಟನೆಗಳ ಹಿಂದೆ ಎಷ್ಟೇ ಆಕ್ರೋಶ ಅಸಮಾಧಾನಗಳಿದ್ದರೂ ಪ್ರತಿಭಟನಾಕಾರರು `ಅಹಿಂಸೆ~ಯ ಮಾರ್ಗವನ್ನು ಅನುಸರಿಸಿರುವುದು ಈ ಹೋರಾಟವನ್ನು ಕುರಿತಂತೆ ಜನಾನುರಾಗ ಹೆಚ್ಚಲು ಕಾರಣವಾಗಿದೆ. ಭಾರತದ ಸತ್ಯಾಗ್ರಹ ಚಳವಳಿಯ ಬಗ್ಗೆ ತಿಳಿದವರು ವಾಲ್‌ಸ್ಟ್ರೀಟ್ ಪ್ರತಿಭಟನೆಗಳನ್ನು ಅದಕ್ಕೆ ಹೋಲಿಸುತ್ತಿದ್ದಾರೆ. ಇದೊಂದು ನಾಗರಿಕ ಹಕ್ಕುಗಳ ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟವಾಗಿರುವುದರಿಂದ ಪ್ರತಿಭಟನಾಕಾರರು ಇಟ್ಟಿರುವುದು `ಉದ್ಯೋಗ~, `ವಸತಿ~, `ಆಹಾರ~, `ಸುಭದ್ರ-ಸುರಕ್ಷಿತ ಜೀವನ ನಡೆಸಲು ಅವಕಾಶ~ ಮತ್ತು `ಕಾರ್ಪೊರೆಟ್‌ಗಳ ಕಪಿಮುಷ್ಠಿಯಿಂದ ವಿಮುಕ್ತಿ~ ಇವೇ ಮುಂತಾದ ಬೇಡಿಕೆಗಳನ್ನು. ತಮ್ಮ ಹಾಗೂ ಇತರ ಪ್ರಜೆಗಳ ಬದುಕಿನ ನೆಲೆಗಳನ್ನು ಕಂಡುಕೊಳ್ಳಲು ವಾಲ್‌ಸ್ಟ್ರೀಟ್ ಪ್ರತಿಭಟನಾಕಾರರು ಈ ಹೋರಾಟಕ್ಕಿಳಿದಿರುವುದರಿಂದ ಇದಕ್ಕೆ ಸಾಮಾನ್ಯ ಜನರಿಂದ ನಾನಾ ರೀತಿಗಳಲ್ಲಿ ನೆರವು ಮೂಡಿ ಬರುತ್ತಿದೆ.

ಈ ಹೋರಾಟ ಪ್ರಾರಂಭವಾದಾಗ ಬಹುತೇಕ ಪ್ರದೇಶಗಳಲ್ಲಿ ಹವಾಮಾನ ಪರಿಸ್ಥಿತಿ ಅನುಕೂಲವಾಗಿಯೇ ಇತ್ತು. ಆದರೆ, ಕಳೆದೆರಡು ವಾರಗಳಿಂದ ಚಳಿ ಹೆಚ್ಚುತ್ತಿದೆ. ಕೆಲವೆಡೆಗಳಲ್ಲಂತೂ ನಿರಂತರವಾಗಿ ಮಳೆ ಸುರಿಯುತ್ತಿದೆ. ಆದಾಗ್ಯೂ ಪ್ರತಿಭಟನಾಕಾರರು ತಮ್ಮ ಗುರಿಯಿಂದ ಹಿಂದೆ ಸರಿದಿಲ್ಲ. ಮೊನ್ನೆ ಮೊನ್ನೆ ನ್ಯೂಯಾರ್ಕ್ ನಗರದಲ್ಲಂತೂ ಮಂಜು ಸುರಿದು ಜನರಿಗೆ ಅತೀವ ಸಂಕಷ್ಟ ಎದುರಾದಾಗಲೂ ಈ ಪ್ರತಿಭಟನಾಕಾರರು ಎದೆಗುಂದದೆ ತಮ್ಮ ಹೋರಾಟ ಮುಂದುವರಿಸಿದ್ದು ಅವರೆ ಮನಃಸ್ಥಿತಿ ಯಾವ ದಿಕ್ಕಿನಲ್ಲಿ ಚಲಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿತ್ತು. ಮುಂಬರುವ ದಿನಗಳಲ್ಲಿ ಹವಾಮಾನದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಮುನ್ಸೂಚನೆಗಳು ದೇಶದ ನಾನಾ ಭಾಗಗಳಲ್ಲಿ ಮೂಡಿ ಬರುತ್ತಿದ್ದು ಈ ಪ್ರತಿಭಟನೆಗೆ ಈ ಪ್ರತಿಕೂಲ ಪರಿಸರ ಒಂದು ಅಡ್ಡಿಯಾಗಬಹುದೇ ಎಂಬ ಪ್ರಶ್ನೆ ಈಗಾಗಲೇ ಎದ್ದಿದೆ.

ನಾನು ಕಂಡಂತೆ ವಾಲ್‌ಸ್ಟ್ರೀಟ್ ಹೋರಾಟಗಳಲ್ಲಿ ಯುವಜನತೆಯ ಭಾಗವಹಿಸುವಿಕೆ ಎದ್ದು ಕಾಣುವಂಥ ಮತ್ತೊಂದು ಅಂಶ. ಹೆಚ್ಚುತ್ತಿರುವ ಶೈಕ್ಷಣಿಕ ಸಾಲ, ಬೆಳೆಯುತ್ತಿರುವ ನಿರುದ್ಯೋಗ ಹಾಗೂ ಸಮರ್ಥ-ಪ್ರಾಮಾಣಿಕ ಪಾತ್ರ ಮಾದರಿಗಳ ಅಭಾವ- ಇವು ಈ ದೇಶದ ಯುವ ಜನತೆ ಎದುರಿಸುತ್ತಿರುವಂಥ ಪರಿಸ್ಥಿತಿ. ಎಲ್ಲೋ ಒಂದೆಡೆ ತಮಗೆ ಆದರ್ಶಗಳನ್ನು ಬೋಧಿಸುವ ಅನೇಕರು, ಸ್ವತಃ ಅವುಗಳನ್ನು ತಮ್ಮ ವೈಯಕ್ತಿಕ ಬದುಕಿನಲ್ಲಿ ಪಾಲಿಸುತ್ತಿಲ್ಲ ಎಂಬ ಭಾವನೆ ಯುವ ಜನತೆಯಲ್ಲಿ ಬೆಳೆಯುತ್ತಿದ್ದು, ವಾಲ್‌ಸ್ಟ್ರೀಟ್ ಪ್ರತಿಭಟನೆಗಳೊಡನೆ ಅವರು ತಮ್ಮನ್ನು ಗುರುತಿಸಿಕೊಳ್ಳಲು ಮೂಲ ಕಾರಣ. ತಾವು ಈಗಿನಿಂದಲೇ ತಮ್ಮ ಬದುಕನ್ನು ನಕಾರಾತ್ಮಕವಾಗಿ ಪ್ರಭಾವಿಸುವಂಥ ಶಕ್ತಿಗಳ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸದಿದ್ದರೆ ಮುಂದೆ ತಮಗೇನೂ ಉಳಿಯಲಾರದು ಎಂಬ ತೀರ್ಮಾನಕ್ಕೆ ಅನೇಕ ಯುವಕ-ಯುವತಿಯರು ಬಂದಿದ್ದಾರೆ.

ದೇಶದೆಲ್ಲೆಡೆ ನಡೆಯುತ್ತಿರುವ ಈ ಪ್ರತಿಭಟನೆಗೆ ಜನ ಬೆಂಬಲವೇನೋ ದೊರೆತಿದೆ, ನಿಜ. ಆದರೆ ಇದನ್ನು ಕುರಿತ ಸರ್ಕಾರ ಹಾಗೂ ಕಾರ್ಪೊರೆಟ್ ದೊರೆಗಳ ಪ್ರತಿಕ್ರಿಯೆಯಾದರೂ ಹೇಗಿದೆ? ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಪ್ರತಿಭಟನಾಕಾರರನ್ನು ಚೆದುರಿಸಲು, ಅವರನ್ನು ಬೆದರಿಸಲು ಪೊಲೀಸರು ಹಿಂಸೆಯ ಪ್ರಯೋಗ ಮಾಡಿದಂಥ ನಿದರ್ಶನಗಳೂ ಇವೆ. ತಮ್ಮ ನೋವುಗಳನ್ನು ಕಾಳಜಿಗಳನ್ನೂ ವ್ಯಕ್ತಪಡಿಸಲು ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಈ ದೇಶದಲ್ಲಿದೆ ಎಂದು ಹೇಳುತ್ತಲೇ ಸರ್ಕಾರಿ ವ್ಯವಸ್ಥೆ ಈ ಪ್ರತಿಭಟನೆಯನ್ನು ದಮನ ಮಾಡಲು ಪ್ರಯತ್ನಿಸುತ್ತಿದೆ.

ಇದುವರೆಗೂ ಅಹಿಂಸಾ ಮಾರ್ಗವನ್ನೇ ಪ್ರತಿಭಟನಾಕಾರರು ಅನುಸರಿಸಿಕೊಂಡು ಬಂದಿದ್ದರೂ ಎಲ್ಲೋ ಒಂದೆರಡು ಸ್ಥಳಗಳಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ಕೆಲವರು ಸಾರ್ವಜನಿಕ ಆಸ್ತಿ, ಶಾಂತಿಗೆ ಭಂಗ ಬರುವಂತೆ ನಡೆದುಕೊಂಡಿದ್ದು ಇಂಥ ಘಟನೆಗಳು ಮುಂದುವರೆದರೆ ಹೋರಾಟ ದುರ್ಬಲವಾಗಿ ಅದರ ಮೂಲ ಉದ್ದೆೀಶಕ್ಕೇ ಚ್ಯುತಿ ಬರಬಹುದು ಎಂಬ ಭಯವೂ ಅನೇಕ ನಾಗರಿಕರಲ್ಲಿದೆ.

ಇನ್ನು ಕಾರ್ಪೊರೆಟ್ ಸಂಸ್ಥೆಗಳು, ಬ್ಯಾಂಕುಗಳು ಮತ್ತು ಬಂಡವಾಳಶಾಹಿ ವ್ಯವಸ್ಥೆ ಅದೇ ಉದ್ಧಟತನದ ಮನಃಸ್ಥಿತಿಯಲ್ಲಿ ಮುಂದುವರೆದಿದ್ದು ಯಾವುದೇ ಕಾರಣಕ್ಕೂ ಲಾಭಗಳಿಕೆಯ ತಮ್ಮ ಗುರಿಯಿಂದ ಹಿಂದೆ ಸರಿಯಲು ಸಾಧ್ಯವೇ ಇಲ್ಲ ಎನ್ನುವ ಸಂದೇಶವನ್ನೂ ಪ್ರತಿಭಟನಾಕಾರರಿಗೆ ಮುಟ್ಟಿಸುತ್ತಿವೆ.

ಈ ಹಂತದಲ್ಲಿ ವಾಲ್‌ಸ್ಟ್ರೀಟ್ ಪ್ರತಿಭಟನೆಯ ಭವಿಷ್ಯವನ್ನು ಕುರಿತು ಯಾವುದೇ ಸ್ಪಷ್ಟ ಚಿತ್ರಣ ಮೂಡಿ ಬರದೇ ಹೋದರೂ ಅಮೆರಿಕಾದಲ್ಲಿ ಜನಾಂದೋಲನವೊಂದು ಪ್ರಾರಂಭವಾಗಿರುವುದಕ್ಕೆ ಎಲ್ಲ ಸೂಚನೆಗಳೂ ಇವೆ. ಈ ಹೋರಾಟ ಎತ್ತಿರುವ ಕೆಲ ಮೂಲಭೂತ ಪ್ರಶ್ನೆಗಳು ಅಮೆರಿಕನ್ ಸಮಾಜದ ಅನೇಕ ಕಟು ಸತ್ಯಗಳನ್ನು ಸುತ್ತುವರೆದಿರುವ ಪರದೆಯನ್ನು ಸರಿಸುತ್ತಿವೆ. ಎಲ್ಲಕ್ಕಿಂತ ಮಿಗಿಲಾಗಿ ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗಳ ಮೇಲೆ ಗಂಭೀರ ಪರಿಣಾಮವನ್ನೂ ಬೀರಲಿದೆ.

ನಿಮ್ಮ ಅನಿಸಿಕೆಗಳನ್ನು ತಿಳಿಸಿ:(ಛಿಜಿಠಿಜಛ್ಛಿಛಿಛಿಚಿಚ್ಚಃಟ್ಟಚ್ಜಚ್ಞಜಿ.್ಚಟ.ಜ್ಞಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT