ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಲೀನ ತರುವುದೇ ಶಾಲೆಗಳನ್ನು ಸಮೀಪ?

Last Updated 27 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಶಿಕ್ಷಣ ಹಕ್ಕು ಕಾಯಿದೆ ಜಾರಿಗೆ ಬಂದ ಕಳೆದೆರಡು ವರುಷಗಳಿಂದೀಚೆಗೆ ಒಂದಲ್ಲ ಒಂದು ಕಾರಣಕ್ಕೆ ಕರ್ನಾಟಕದಲ್ಲಿ ಶಾಲಾ ಶಿಕ್ಷಣ ವಿವಾದಗಳ ಸುಳಿಗೆ ಸಿಲುಕುತ್ತಿದೆ. ಇವುಗಳ ಸಾಲಿಗೆ ಇತ್ತೀಚೆಗೆ ಸೇರಿರುವುದು ಮೂವತ್ತು(30)ಕ್ಕೂ ಕಡಿಮೆ ಸಂಖ್ಯೆಯ ಮಕ್ಕಳಿರುವ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಗಳನ್ನು ಸಮೀಪದಲ್ಲಿರುವ ಶಾಲೆಗಳೊಡನೆ ವಿಲೀನಗೊಳಿಸಬೇಕೆಂದು ರಾಜ್ಯ ಸರ್ಕಾರದಿಂದ ನೇಮಕಮಾಡಿರುವ ತಜ್ಞರ ಸಮಿತಿಯೊಂದು ಮಾಡಿರುವ ಶಿಘಾರಸು.

ಕರ್ನಾಟಕ ರಾಜ್ಯದಲ್ಲಿ 6 ಮತ್ತು 7 ನೇ ತರಗತಿಗಳಲ್ಲಿ ಮಕ್ಕಳ ದಾಖಲಾತಿ ಇಳಿಮುಖವಾಗುತ್ತಿದೆ.  6712 ಉನ್ನತ ಪ್ರಾಥಮಿಕ ಶಾಲೆಗಳಲ್ಲಿ 30ಕ್ಕಿಂತ ಕಡಿಮೆ ಸಂಖ್ಯೆಯ ಮಕ್ಕಳಿದ್ದಾರೆ ಎನ್ನುವುದು ವರದಿಯಿಂದ ಹೊರಹೊಮ್ಮಿರುವ ಒಂದು ಪ್ರಮುಖ ಅಂಶ.

ಇದರೊಡನೆ 2,510 ಪ್ರಾಥಮಿಕ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಸಂಖ್ಯೆಯ ಮಕ್ಕಳಿದ್ದು, 693 ಶಾಲೆಗಳಲ್ಲಿ ಕೇವಲ ಐದೇ (05) ಮಕ್ಕಳಿದ್ದಾರೆ ಎಂಬ ಆಘಾತಕಾರಿ ಸಂಗತಿಯನ್ನು ಕೂಡ ತಜ್ಞರ ಸಮಿತಿಯ ವರದಿ ಹೊರಹಾಕಿದೆ. ಈ ಎಲ್ಲ ಶಾಲೆಗಳ ಒಟ್ಟು ಸಂಖ್ಯೆ ಹತ್ತಿರ ಹತ್ತಿರ 10,000 ವಾಗುತ್ತದೆ.

ತಜ್ಞರ ಸಮಿತಿ, ವಿಶೇಷವಾಗಿ 6 ಮತ್ತು 7ನೇ ತರಗತಿಗಳಲ್ಲಿ 30ಕ್ಕಿಂತ ಕಡಿಮೆ ದಾಖಲಾತಿ ಇದ್ದಂಥ ಶಾಲೆಗಳನ್ನು ಸಮೀಪದ ಶಾಲೆಗಳೊಡನೆ ವಿಲೀನಗೊಳಿಸುವಂತೆ ಸರ್ಕಾರಕ್ಕೆ ಸೂಚನೆಯನ್ನು ನೀಡಿದೆ. ಮೇಲ್ನೋಟಕ್ಕೆ ಈ ಸಲಹೆ ಅತ್ಯಂತ ಸೂಕ್ತವೂ ಪ್ರಸ್ತುತವೂ ಎಂಬಂತೆ ಭಾಸವಾಗುತ್ತದೆ. ದಾಖಲಾತಿ ಕಡಿಮೆ ಇರುವ ಶಾಲೆಗಳನ್ನು ನಡೆಸಿಕೊಂಡು ಹೋಗುವುದು ಆಡಳಿತ್ಮಾತಕ ಮತ್ತು ಆರ್ಥಿಕ ದೃಷ್ಟಿಯಿಂದ ಸರ್ಕಾರಕ್ಕೆ ಹೊರೆಯೆನಿಸುವುದು ಸಹಜವೇ.

ಒಂದು ಆದೇಶದಿಂದ ಸರ್ಕಾರ ಶಾಲೆಗಳ ವಿಲೀನ ಪ್ರಕ್ರಿಯೆಗೆ ಚಾಲನೆಯನ್ನು ಕೂಡ ನೀಡಬಹುದು. ಹತ್ತು ಸಾವಿರ ಶಾಲೆಗಳನ್ನು ವಿಲೀನ ಮಾಡಿದರೂ ಶೇಕಡ 22ರಷ್ಟು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಮಾತ್ರ ಈ ನಿರ್ಧಾರ ಅನ್ವಯಿಸಲಿದ್ದು, ಅದೇನು ಅತಿ ದೊಡ್ಡ ಪ್ರಮಾಣದ ಬದಲಾವಣೆಯಲ್ಲ ಎಂಬ ಭಾವನೆಯೂ ಬರಬಹುದು.
 
ಆದರೆ ವಿಲೀನದ ವಿಷಯವನ್ನು ಇಷ್ಟೊಂದು ಸರಳೀಕೃತವಾಗಿ ಪರಿಗಣಿಸಲಾಗುವುದಿಲ್ಲ. ಇಂತಹುದೊಂದು ನಿರ್ಧಾರ ನಕಾರಾತ್ಮಕ ಗೋಚರ ಮತ್ತು ಅಗೋಚರ ಪರಿಣಾಮಗಳೆರಡಕ್ಕೂ ದಾರಿ ಮಾಡಿಕೊಡುತ್ತದೆ.

ಶಾಲೆಗಳ ವಿಲೀನ ಎಂದರೆ ಒಂದರ್ಥದಲ್ಲಿ ಆ ಶಾಲೆಗಳನ್ನು ಮುಚ್ಚಿದಂತೆಯೇ. ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಾ ಹೋದ ಹಾಗೆಲ್ಲಾ ಖಾಸಗಿ ಶಿಕ್ಷಣ ವಲಯ ವಿಸ್ತೃತವಾಗುತ್ತದೆ. ಜಾಗತೀಕರಣದ ಯುಗ ಆರಂಭವಾದ ಮೇಲೆ ಸರ್ಕಾರ ನಿಧಾನವಾಗಿ ಶಿಕ್ಷಣ ಕ್ಷೇತ್ರದ ಮೇಲಿನ ತನ್ನ ಸ್ವಾಮ್ಯವನ್ನು ಕಳೆದುಕೊಳ್ಳುತ್ತಾ ಬರುತ್ತಿದೆ.

ಕರ್ನಾಟಕದಲ್ಲೂ ಪ್ರಾಥಮಿಕ ಶಾಲೆಗಳಿಂದ ಹಿಡಿದು ವಿಶ್ವವಿದ್ಯಾಲಯಗಳವರೆಗೆ, ಇಡೀ ಶಿಕ್ಷಣ ವ್ಯವಸ್ಥೆ ಖಾಸಗಿ ಬಂಡವಾಳ ಹೂಡಿಕೆಗೆ, ಲಾಭಗಳಿಕೆಗೆ ಒಂದು ಸಿದ್ಧಕ್ಷೇತ್ರವಾಗಿ ಪರಿಣಮಿಸಿದೆ.

ಶ್ರಿಮಂತ ಅಥವಾ ಮಧ್ಯಮವರ್ಗದ ಕುಟುಂಬಗಳಿಗೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುವುದು ಹೊರೆ ಎನಿಸಲಾರದು. ಆದರೆ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಶಾಲೆಗಳು ದೂರವಾಗುತ್ತಿದ್ದಂತೆ ಶಿಕ್ಷಣವೂ ದುರ್ಲಭವಾಗುತ್ತಾ ಹೋಗಬಹುದು.

ಸರ್ಕಾರ  ಬಡವರ ಮನೆ ಬಾಗಿಲಿಗೆ  ಶಿಕ್ಷಣ ಎಂದು ಸಾರುತ್ತ ಮನೆಯ ಬದಿಯಲ್ಲಿ ಇರುವ ಶಾಲೆಗಳನ್ನು ಮುಚ್ಚುತ್ತಾ ಹೋದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳಿಗೆ ಶಿಕ್ಷಣ ದೊರೆಯುವುದಾದರು ಹೇಗೆ?

ಸಮೀಪದ ಶಾಲೆಗಳೊಡನೆ ಕಡಿಮೆ ದಾಖಲಾತಿ-ಹಾಜರಾತಿ ಇರುವ ಶಾಲೆಗಳನ್ನು ಮಕ್ಕಳು ಎಷ್ಟು ಸುಲಭವಾಗಿ ತಲುಪುವುದು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುವ ಸಮಿತಿಯ ಭಾವನೆ ಒಪ್ಪುವಂತಹುದೇ. ಆದರೆ  ಸಮೀಪದ ಶಾಲೆ  ಎನ್ನುವ ಪರಿಕಲ್ಪನೆಗೆ ಸಾರ್ವತ್ರಿಕ ಸ್ವೀಕೃತಿ ಇರುವಂಥ ನಿರೂಪಣೆಯನ್ನು ನಮ್ಮ ಸಾಮಾಜಿಕ-ಸಾಂಸ್ಕೃತಿಕ ಸಂದರ್ಭಗಳಲ್ಲಿ ನೀಡಲಾಗುವುದಿಲ್ಲ.
 
ಬಡವರು, ಹೆಣ್ಣುಮಕ್ಕಳು, ದೈಹಿಕ ಮತ್ತು ಮಾನಸಿಕ ದೌರ್ಬಲ್ಯಗಳಿಂದ ನರಳುತ್ತಿರುವಂಥ ಮಕ್ಕಳು, ಕಲಿಯುವುದರ ಜೊತೆಗೆ ಸಾಂಸಾರಿಕ ಜವಾಬ್ದಾರಿಗಳನ್ನೂ ಹೊರಬೇಕಾದಂಥ ಸ್ಥಿತಿಯಲ್ಲಿರುವ ವಿದ್ಯಾರ್ಥಿ ಸಮುದಾಯ-ವಿಶೇಷವಾಗಿ ಈ ವರ್ಗಗಳಿಗೆ ಸೇರಿದ ಅನೇಕ ಮಕ್ಕಳಿಗೆ ಊರ ಶಾಲೆಯನ್ನು ಮುಚ್ಚುವುದೆಂದರೆ, ಶಿಕ್ಷಣದ ಪಯಣ ನಿಂತಂತೆಯೇ ಸರಿ. ಇದು ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಅನ್ವಯಿಸುತ್ತದೆ.

ಊರಿನಲ್ಲಿರುವ ಶಾಲೆಗಳನ್ನು ಮುಚ್ಚಿದರೆ ಅಥವಾ ತರಗತಿಗಳನ್ನು ಬೇರೆಡೆ ಸ್ಥಳಾಂತರಿಸಿದರೆ (ಅದರಲ್ಲೂ 6-7 ತರಗತಿಗಳು) ಅನೇಕ ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಬೇರೆ ಊರಿಗೆ (ಇಲ್ಲಿ ಸಮೀಪದ ಲೆಕ್ಕಾಚಾರಗಳೇ ಬೇರೆ ಆಗಿರುತ್ತವೆ) ಕಳುಹಿಸಲು ಒಪ್ಪಲಾರದ ಸಾಧ್ಯತೆಯಿದೆ.

ಕಿರಿಯ ಪ್ರಾಥಮಿಕ ಶಾಲೆ ಇದ್ದೂರಿನಲ್ಲೇ ಇದ್ದಾಗ ತಮ್ಮ ಹೆಣ್ಣುಮಕ್ಕಳನ್ನು ಆ ಶಾಲೆಗೆ ಕಳುಹಿಸಲು ಬಹುತೇಕ ಪೋಷಕರಲ್ಲಿ ಸಹಜ ಉತ್ಸುಕತೆ ಇರುವುದು ನಾವು ಇತ್ತೀಚಿನ ವರುಷಗಳಲ್ಲಿ ಗಮನಿಸುತ್ತಿರುವ ಒಂದು ಬೆಳವಣಿಗೆ. ಆದರೆ ಹಿರಿಯ ಪ್ರಾಥಮಿಕ ಶಾಲೆ ಊರಿನಿಂದ ಸ್ವಲ್ಪ ದೂರದಲ್ಲಿದ್ದಾಗಲೂ ಅನೇಕ ಕುಟುಂಬಗಳು ಹೆಣ್ಣುಮಕ್ಕಳನ್ನು ಆ ಶಾಲೆಗಳಿಗೆ ಕಳುಹಿಸಲು ಹಿಂಜರಿಯುತ್ತಾರೆ. ಇದಕ್ಕೆ ಕಾರಣಗಳಿಲ್ಲದಿಲ್ಲ.

ಶಿಕ್ಷಣ ಲಿಂಗ ಸಮಾನತೆಯ ಹೋರಾಟದಲ್ಲಿ ಅತ್ಯಂತ ಪ್ರಬಲ ಆಯುಧ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಶಿಕ್ಷಣವನ್ನು ಪಡೆಯಲು ಇರುವ ಅವಕಾಶಗಳ ಬಳಕೆಯಲ್ಲಾಗಲಿ ಅಥವಾ ಅದನ್ನು ಪಡೆಯುವಲ್ಲಿ ಎದುರಾಗುವ ಅಡ್ಡಿಗಳ ವಿಷಯದಲ್ಲಾಗಲಿ ಹೆಣ್ಣು ಮತ್ತು ಗಂಡು ಮಕ್ಕಳ ನಡುವೆ ದೇಶದ ಅನೇಕ ಪ್ರದೇಶಗಳಲ್ಲಿ ಗಮನಾರ್ಹವಾದ ವ್ಯತ್ಯಾಸಗಳಿವೆ.

ಹೆಣ್ಣಿನ ದೇಹರಚನೆಯ ಕಾರಣದಿಂದಾಗಿ ಆಕೆ ಒಳಗಾಗಬಹುದಾದ ದೈಹಿಕ ದೌರ್ಜನ್ಯಕ್ಕೆ ಹೆದರಿ ಪೋಷಕರು ತಮ್ಮ ಹೆಣ್ಣುಮಕ್ಕಳ ರಕ್ಷಣೆಯ ಬಗ್ಗೆ ಸಹಜವಾಗಿಯೇ ಹೆಚ್ಚು ಕಾತುರರಾಗಿರುತ್ತಾರೆ. ಶಾಲೆಗೂ ವಾಸಸ್ಥಾನಕ್ಕೂ ನಡುವೆ ಎಲ್ಲಿ ವಾಹನ ಸಂಪರ್ಕ ಸಮರ್ಪಕವಾಗಿದೆಯೋ ಅಲ್ಲಿ ಮಕ್ಕಳು ಒಂದು ಸುರಕ್ಷಿತ ವಲಯದಲ್ಲಿರುತ್ತಾರೆ.

ಆದರೆ ದುರ್ಗಮ ಹಾದಿಗಳು, ಕಾಲ್ದಾರಿಗಳು, ಜನ ನಿಬಿಡ ಪ್ರದೇಶಗಳಲ್ಲಿ ಕಾಲ್ನಡಿಗೆಯಲ್ಲೇ ಶಾಲೆಗಳಿಗೆ ಹೋಗಬೇಕಾದ ಹೆಣ್ಣು ಮಕ್ಕಳಿಗೆ ಅಪಾಯ ಉಂಟಾಗಬಹುದು ಎಂಬ ಹೆದರಿಕೆಯೇ ತಂದೆ ತಾಯಿಗಳ ಆತಂಕಕ್ಕೆ ಕಾರಣವಾಗಬಹುದು.

ಒಂದೆಡೆ ಎಲ್ಲ ಹೆಣ್ಣು ಮಕ್ಕಳು ಕನಿಷ್ಠ  ಪ್ರೌಢಶಾಲಾ ಶಿಕ್ಷಣವನ್ನು ಮುಗಿಸುವವರೆಗಾದರೂ ಶಾಲೆಗಳಲ್ಲಿರಬೇಕು, ಎಲ್ಲಿಯವರೆಗೂ ಅವರು ಶಾಲೆಯಲ್ಲಿ ಮುಂದುವರೆಯುತ್ತಾರೋ ಅಲ್ಲಿಯವರೆಗೂ ಅವರನ್ನು ಬಾಲ್ಯ ವಿವಾಹ, ಅಪ್ರಾಪ್ತ ವಯಸ್ಸಿನ ತಾಯ್ತನ ಮುಂತಾದ ಸಾಮಾಜಿಕ ಪಿಡುಗುಗಳಿಂದ ರಕ್ಷಿಸಬಹುದು ಎನ್ನುವುದಕ್ಕೆ ಅನೇಕ ನಿದರ್ಶನಗಳು ನಮ್ಮ ಮುಂದಿವೆ. ಆದರೆ ಹತ್ತಿರದಲ್ಲಿರುವ ಉನ್ನತ ಪ್ರಾಥಮಿಕ ಶಾಲೆಗಳನ್ನೇ ತೆಗೆದುಬಿಟ್ಟರೆ ಅವರು ಪ್ರೌಢಶಾಲೆಗಳಿಗೆ ಹೋಗುವುದೆಂತು?

ಒಂದು ಶಾಲೆಯನ್ನು ಮತ್ತೊಂದು ಶಾಲೆಯೊಡನೆ ವಿಲೀನಗೊಳಿಸಿದಾಗ, ಆ ಶಾಲೆಯಲ್ಲಿ ಕಲಿಯುತ್ತಿದ್ದ ಮಕ್ಕಳು ಹೊಸದೊಂದು ಜಾಗಕ್ಕೆ ಹೋಗಬೇಕು. ಹೊಸ ಜಾಗ ಎಷ್ಟು ಸಮೀಪದಲ್ಲಿದೆ ಎನ್ನುವುದೊಂದೇ ಇಲ್ಲಿ ಮುಖ್ಯ ಪ್ರಶ್ನೆಯಲ್ಲ. ಏಕೆಂದರೆ ಸಮೀಪ ಎನ್ನುವ ಪದವನ್ನು ಕೇವಲ ಭೌತಿಕ ದೂರದಿಂದ ಅಳೆಯಲು ಸಾಧ್ಯವಿಲ್ಲ. ಊರಿನಲ್ಲೇ ಶಾಲೆ ಇದ್ದರೂ  ಕೆಲವು ಪೋಷಕರು ತಮ್ಮ ಮಕ್ಕಳನ್ನು ಆ ಶಾಲೆಗೆ ಕಳುಹಿಸಲು ಸಿದ್ಧರಿಲ್ಲದಿರಬಹುದು.

ಸರ್ಕಾರಿ ಮೂಲದಿಂದಲೇ ಲಭ್ಯವಿರುವ ಒಂದು ವರದಿಯಂತೆ ಕರ್ನಾಟಕ ರಾಜ್ಯದ ಶೇಕಡ 98 ರಷ್ಟು ಜನಸಂಖ್ಯೆಗೆ ಒಂದು (01) ಕಿಲೋಮೀಟರ್ ದೂರದಲ್ಲಿ ಕಿರಿಯ ಪ್ರಾಥಮಿಕ ಶಾಲೆ (1-4ನೇ ತರಗತಿ) ಮತ್ತು ಎರಡು (02) ಕಿಲೋಮೀಟರ್ ದೂರದಲ್ಲಿ ಹಿರಿಯ ಪ್ರಾಥಮಿಕ ಶಾಲೆ (1-7ನೇ ತರಗತಿ)ಗಳನ್ನು ತೆರೆಯಲಾಗಿದೆ.

ಇಷ್ಟು ಹತ್ತಿರದಲ್ಲಿ ಶಾಲೆಗಳಿದ್ದ ಮೇಲೆ ಎಲ್ಲ ಮಕ್ಕಳೂ ಶಾಲೆಗೆ ಹೋಗುತ್ತಿಲ್ಲವೇಕೆ? ಎಂಬುದು ಮೊದಲನೆಯ ಪ್ರಶ್ನೆ. ಎರಡನೆಯ ಪ್ರಶ್ನೆಯೆಂದರೆ ಶಾಲೆಗೆ ಹೋಗಲು ಹಿಂಜರಿಯುತ್ತಿರುವ ಅಥವಾ ಸಾಧ್ಯವಾಗದಂಥ ಸ್ಥಿತಿಯಲ್ಲಿರುವ ಮಕ್ಕಳನ್ನು ಬೇರೆ ಊರಿನಲ್ಲಿರುವ ಶಾಲೆಗಳಿಗೆ ಕಳುಹಿಸಲು ಕುಟುಂಬಗಳು ಮತ್ತು ಸಮುದಾಯಗಳು ಎಷ್ಟರ ಮಟ್ಟಿಗೆ ತಯಾರಾಗಿರುತ್ತವೆ ಎಂಬುದು.

ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ವಿಲೀನದ ವಿಷಯವನ್ನು ವಿಶ್ಲೇಷಿಸಿದ್ದರೆ ಮಕ್ಕಳ ಕಡಿಮೆ ದಾಖಲಾತಿ ಸಮಸ್ಯೆಗೆ ಹೆಚ್ಚು ವಾಸ್ತವವಾದ ಪರಿಹಾರ ದೊರೆಯುತ್ತಿತ್ತೇನೋ ಎನಿಸುತ್ತದೆ.

ಸರ್ಕಾರಕ್ಕೆ ಸಲ್ಲಿಸಿರುವ ತಜ್ಞರ ಸಮಿತಿ ಮೂಲ ಸೌಕರ್ಯಗಳ ಬಲವರ್ಧನೆಯ ಬಗ್ಗೆ ಪ್ರಸ್ತಾಪ ಮಾಡಿದೆ ನಿಜ. ಕಾಲದಿಂದ ಕಾಲಕ್ಕೆ ಬಿಡುಗಡೆಯಾಗುತ್ತಿರುವ ರಾಜ್ಯ ಶಿಕ್ಷಣ ಇಲಾಖೆಯ ವರದಿಗಳಲ್ಲಿ ಕೊಠಡಿಗಳು, ಶೌಚಾಲಯಗಳು, ಆಟದ ಮೈದಾನಗಳು, ಅಡುಗೆ ಕೋಣೆಗಳು ಮುಂತಾದ ಶಾಲಾ ಮೂಲ ಸೌಕರ್ಯಗಳಲ್ಲಿ ಹೆಚ್ಚಳವಾಗುತ್ತಿರುವ ಬಗ್ಗೆ ಪ್ರಸ್ತಾಪವಿರುತ್ತದೆ. ಆದರೆ ಮಕ್ಕಳ ಶಾಲಾ ದಾಖಲಾತಿ-ಹಾಜರಾತಿ ವೃದ್ಧಿಯಾಗಬೇಕಾದರೆ ಸಮುದಾಯದ ಮೂಲ ಸೌಕರ್ಯಗಳ ಗುಣಮಟ್ಟ ಕೂಡ ಹೆಚ್ಚಬೇಕು.

ಕಳೆದ 10-12 ವರುಷಗಳಲ್ಲಿ ಶಾಲೆಗಳ ಸಂಖ್ಯೆಯಲ್ಲಿ ಶೇಕಡ 25ರಷ್ಟು ಹೆಚ್ಚಳವಾಗಿದೆ ಎಂಬುದು ಒಂದು ಅಂದಾಜು. ಸರ್ಕಾರ ಮತ್ತು ನಾಗರಿಕ ಸಂಸ್ಥೆಗಳ ಪ್ರಯತ್ನಗಳಿಂದಾಗಿ ಶಾಲಾ ದಾಖಲಾತಿಯ ಪ್ರಮಾಣವೂ ಹೆಚ್ಚಿದೆ.

ಆದರೆ ಶಾಲೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಮಕ್ಕಳನ್ನು ಆಕರ್ಷಿಸಲು, ಅಥವಾ ದಾಖಲಾದ ಮಕ್ಕಳನ್ನು ಉಳಿಸಿಕೊಳ್ಳಲು ಅವಶ್ಯವಾದ ರಸ್ತೆ, ಸಾರಿಗೆ ಸಂಪರ್ಕ, ಮೆಟ್ರಿಕ್ ಪೂರ್ವ ವಸತಿ ನಿಲಯಗಳು, ಸಮುದಾಯದ ಸಹಭಾಗಿತ್ವ ಮುಂತಾದ ಅಂಶಗಳನ್ನೊಳಗೊಂಡ  ಬೆಂಬಲ ವ್ಯವಸ್ಥೆಯೊಂದರ ಅಗತ್ಯವೂ ಇದೆ.

ಈ ವಿಚಾರಕ್ಕೆ ಗಮನ ಹರಿಸದಿದ್ದರೆ ಗೋವಿಂದಾ ಸಮಿತಿ ಸೂಚಿಸಿರುವಂತೆ ಶಾಲೆಗಳ ವಿಲೀನವಾಗಲಿ, ಹಿರಿಯ ಪ್ರಾಥಮಿಕ ಶಾಲೆಗಳಿಗೆ 8ನೇ ತರಗತಿಯನ್ನು ಸೇರಿಸುವುದರಿಂದಲಾಗಲಿ (ಇದು ಎಂದೋ ಆಗಬಹುದಾಗಿದ್ದಂಥ ಕೆಲಸ) ತಾನೇ ತಾನಾಗಿ ಶಾಲಾ ದಾಖಲಾತಿ ಹೆಚ್ಚಿಬಿಡುವ ಸಾಧ್ಯತೆ ಕಡಿಮೆ.

ಕಡಿಮೆ ಸಂಖ್ಯೆಯ ಮಕ್ಕಳಿರುವ ಶಾಲೆಗಳನ್ನೇನೊ ಸಮೀಪದ ಶಾಲೆಗಳೊಡನೆ ವಿಲೀನಗೊಳಿಸಬಹುದು. ಈಗಾಗಲೇ ಇರುವ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿಯನ್ನೂ ತೆರೆಯಬಹುದು. ಆದರೆ ಈ ಬದಲಾವಣೆಗಳನ್ನು ನಿಭಾಯಿಸಲು ಅವಶ್ಯವಾದ ಮಾನವ ಸಂಪನ್ಮೂಲದ ಸೃಷ್ಟಿ ಮಾಡುವುದು ಕೂಡ ಅಷ್ಟೇ ಮುಖ್ಯವಲ್ಲವೇ?

ಈಗಾಗಲೇ ಅಧ್ಯಾಪಕರ ಹಾಗೂ ಆಡಳಿತಾತ್ಮಕ ಸಿಬ್ಬಂದಿಯ ಕೊರತೆಯಿಂದ ಅನೇಕ ಶಾಲೆಗಳು ನರಳುತ್ತಿವೆ. ಶಾಲೆಗಳನ್ನು ವಿಲೀನಗೊಳಿಸುವುದರಿಂದ ಆ ಶಾಲೆಗಳ ಶಿಕ್ಷಕರ ಸೇವೆಯನ್ನು ಹೊಸ ಶಾಲೆಗಳಲ್ಲಿ ಬಳಸಿಕೊಳ್ಳಬಹುದು, ಇದರಿಂದ ಶಿಕ್ಷಕರ ಕೊರತೆಯನ್ನು ನೀಗಿಸುವ ಸಾಧ್ಯತೆ ಇದೆ ಎಂಬ ಸಮಿತಿಯ ಸಲಹೆ ಕೂಡ ಎಷ್ಟರ ಮಟ್ಟಿಗೆ ಅಧ್ಯಾಪಕರ ಅಭಾವದ ಸಮಸ್ಯೆಗೆ ಒಂದು ವಾಸ್ತವ ಪರಿಹಾರ ಎಂಬ ಅನುಮಾನ ಕೂಡ ಬರುತ್ತಿದೆ.

ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ಶಿಕ್ಷಕರ ಚಲನೆ ಅಷ್ಟು ಸುಲಭವೇ ಎನ್ನುವುದು ಮೊದಲ ಪ್ರಶ್ನೆ. ಈ ಸ್ಥಾನ ಬದಲಾವಣೆಗೆ ಶಿಕ್ಷಕ ವರ್ಗದ ಪ್ರತಿಕ್ರಿಯೆಯೇನು? ಹೊಸ ಅಥವಾ ವಿಲೀನಗೊಂಡ ಶಾಲೆಗಳ ಭೌತಿಕ ಮತ್ತು ಶೈಕ್ಷಣಿಕ ಪರಿಸರಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಶಿಕ್ಷಕರಿಗಿರುವ ತಯಾರಿಯೆಂತಹುದು?

ಹೊಸ-ಹೊಸ ವಿಷಯಗಳನ್ನು ಬೋಧನೆ ಮಾಡಲು ಅವಶ್ಯವಾದ ತರಬೇತಿ ಅವರಲ್ಲಿ ಎಷ್ಟು ಮಂದಿಗಿದೆ? ಶಾಲಾ ಬೋಧನೆಗೆ ಅರೆಕಾಲಿಕ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕೆನ್ನುವ ಸೂಚನೆ ಎಷ್ಟರ ಮಟ್ಟಿಗೆ ಸಂಗತ? ಈಗಾಗಲೇ ಕಾಲೇಜುಗಳಲ್ಲಿ ಹೆಚ್ಚುತ್ತಿರುವ ಅರೆಕಾಲಿಕ ಅಥವಾ ಅತಿಥಿ ಉಪನ್ಯಾಸಕರ ಸಂಖ್ಯೆ ತಂದೊಡ್ಡುತ್ತಿರುವ ಸಮಸ್ಯೆಗಳಿಂದ ನಾವು ಇನ್ನೂ ಪಾಠ ಕಲಿತಿಲ್ಲವೇ? ಈ ಪ್ರಶ್ನೆಗಳಿಗೆಲ್ಲಾ ತಜ್ಞರ ಸಮಿತಿ ಶಿಕ್ಷಕರೊಡನೆ ಸಮಾಲೋಚನೆ ನಡೆಸಿ ಉತ್ತರಗಳನ್ನು ಕಂಡುಕೊಳ್ಳಲೆತ್ನಿಸಿದ್ದರೆ ಸೂಕ್ತವಾಗುತ್ತಿತ್ತು.

ಕರಡು ವರದಿಯನ್ನು ಸಾರ್ವಜನಿಕ ಪ್ರತಿಕ್ರೆಯೆಗಳಿಗೆ ಈಗ ತೆರೆದಿಡುವ ಬದಲು, ಅಧ್ಯಯನದ ಹಂತದಲ್ಲೇ ಸಮುದಾಯ ಮಟ್ಟದಲ್ಲಿ ಎಲ್ಲಾ ಭಾಗಿದಾರರನ್ನೂ ಒಳಗೊಂಡಂತೆ ಅಭಿಪ್ರಾಯ ಸಂಗ್ರಹಣೆ ಮತ್ತು ಅನುಭವ ಹಂಚಿಕೆಗೆ ಅವಕಾಶ ಮಾಡಿಕೊಟ್ಟಿದ್ದರೆ ಹೆಚ್ಚು ಅರ್ಥಪೂರ್ಣವಾದ ಸುಧಾರಣೆಗಳನ್ನು ತರಲು ಸಾಧ್ಯವಿತ್ತೇನೋ ಎನಿಸುತ್ತದೆ.

ಇಷ್ಟೇ ಅಲ್ಲದೆ 2010ರಲ್ಲೇ ರಾಜ್ಯದಲ್ಲಿ ಖಾಸಗಿ ಸಂಸ್ಥೆಯೊಂದು ಸರ್ಕಾರಕ್ಕೆ ಸಲ್ಲಿಸಿದ  ಕರ್ನಾಟಕದಲ್ಲಿ ಸಣ್ಣ ಶಾಲೆಗಳ ಅಧ್ಯಯನ ಎಂಬ ವರದಿಯಲ್ಲಿ ಪ್ರಸ್ತಾಪಿಸಲಾಗಿರುವ ಕಡಿಮೆ ದಾಖಲಾತಿಗೆ ಕಾರಣವಾಗುವ ಅಂಶಗಳು ಹಾಗೂ ಅದನ್ನು ಸರಿಪಡಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಶಿಕ್ಷಣ ಇಲಾಖೆ ಗಮನ ಹರಿಸಿದ್ದರೆ ತಿಳಿದಿರುವ ವಿಷಯಗಳ ಬಗ್ಗೆಯೇ ಮತ್ತೆ ಮತ್ತೆ ತಿಳಿವಳಿಕೆ ನೀಡುವ ಅಗತ್ಯವಿರುತ್ತಿರಲ್ಲಿಲ್ಲ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT