ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರವಾಗದ ಸ್ನೇಹಹಸ್ತ

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

`ಮಹಾ ಬ್ರಾಹ್ಮಣ~, `ಮಹಾಕ್ಷತ್ರಿಯ~ದಂಥ ಮಹಾನ್ ಕೃತಿಗಳನ್ನು ನೀಡಿದ ದಾರ್ಶನಿಕರಾದ ದೇವುಡು ನರಸಿಂಹಶಾಸ್ತ್ರಿಗಳು ಬೆಂಗಳೂರಿನಲ್ಲಿ ಇದ್ದಾಗ ಅವರ ಮನೆಯ ಹತ್ತಿರವೇ ಮುನಿಸ್ವಾಮಪ್ಪ ಎಂಬ ಯಜಮಾನರು ವಾಸವಾದ್ದರು. ಅವರಿಗೆ ದೇವುಡು ಬಗ್ಗೆ ತುಂಬ ಗೌರವ, ಪ್ರೀತಿ. ಆಗಾಗ ದೇವುಡು ಅವರ ಮನೆಗೆ ಬಂದು ಹೋಗುತ್ತಿದ್ದರು.

ಮುನಿಸ್ವಾಮಪ್ಪನವರಿಗೆ ಒಂದಷ್ಟು ಜಮೀನಿತ್ತು. ಅದನ್ನು ಬಿಟ್ಟರೆ ಅವರಿಗೆ ಮತ್ತಾವ ಆಧಾರವೂ ಇರಲಿಲ್ಲ. ದುರ್ದೈವದಿಂದ ಅವರ ಜಮೀನನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಆಜ್ಞೆ ಹೊರಡಿಸಿತ್ತು.

ಆಗ ಭೂ ಸ್ವಾಧೀನ ಮಾಡಿಕೊಂಡರೆ ದೊರೆಯುವ ಪರಿಹಾರ ಧನ ಕಡಿಮೆಯಾಗುತ್ತಿತ್ತು. ಮುನಿಸ್ವಾಮಪ್ಪನವರು ಆ ಜಮೀನನ್ನು ಸಣ್ಣ, ಸಣ್ಣ ಸೈಟುಗಳನ್ನಾಗಿ ಮಾಡಿ ಮಾರಿ ತಮ್ಮ ಮಕ್ಕಳಿಗೆ ಜೀವನಕ್ಕೆ ಏನಾದರೂ ಅಧಾರ ಮಾಡಬೇಕೆಂದಿದ್ದರು. ಈಗ ಅದಕ್ಕೂ ಕಲ್ಲು ಬೀಳುವಂತಿತ್ತು.

ಆಗಿನ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರಿಗೆ ದೇವುಡು ಅವರ ಮೇಲೆ ಅಪಾರ ಗೌರವವಿದ್ದದ್ದು ಮುನಿಸ್ವಾಮಪ್ಪನವರಿಗೆ ತಿಳಿದಿತ್ತು. ಆದ್ದರಿಂದ ದೇವುಡು ಅವರಿಂದ ಮುಖ್ಯಮಂತ್ರಿಗಳಿಗೆ ಹೇಳಿಸಿದರೆ ಈ ಸ್ವಾಧೀನ ಪ್ರಕ್ರಿಯೆ ನಿಲ್ಲಿಸಬಹುದೆಂದು ಯೋಚಿಸಿ ದೇವುಡು ಅವರ ಮನೆಗೆ ಹೋದರು. ತಮ್ಮ ಕಷ್ಟವನ್ನು ಹೇಳಿಕೊಂಡು ಸಹಾಯಕ್ಕಾಗಿ ಪ್ರಾರ್ಥಿಸಿದರು.

ದೇವುಡು ಅವರಿಗೆ ಅವರ ಮಾತಿನಲ್ಲಿ ಅರ್ಥವಿದೆಯೆಂದು ಎನ್ನಿಸಿ ಸಹಾಯಕ್ಕಾಗಿ ಪ್ರಯತ್ನಿಸುವುದಾಗಿ ಮಾತುಕೊಟ್ಟರು. ಒಂದು ಅನುಕೂಲವಾದ ದಿನವನ್ನು ನೋಡಿಕೊಂಡು ಮುಖ್ಯಮಂತ್ರಿಗಳನ್ನು ಕಂಡರು. ಮುನಿಸ್ವಾಮಪ್ಪನವರ ಕಷ್ಟವನ್ನು ವಿವರಿಸಿ ಏನಾದರೂ ಸಹಾಯ ಮಾಡುವುದು ಸಾಧ್ಯವಾದರೆ ತಮಗೆ ಸಂತೋಷವಾಗುತ್ತದೆಂದು ಹೇಳಿದರು.

ಕೆಂಗಲ್ ಹನುಮಂತಯ್ಯನವರು ಅಧಿಕಾರಿಗಳಿಗೆ ಹೇಳಿ ಆ ಫೈಲು ತರಿಸಿ ನೋಡಿದರು. ಮುನಿಸ್ವಾಮಪ್ಪನವರ ಬೇಡಿಕೆ ಅವರಿಗೆ ನ್ಯಾಯವಾಗಿಯೇ ಕಂಡಿರಬೇಕು. ಅದಲ್ಲದೇ ದೇವುಡು ಅದನ್ನು ಶಿಫಾರಸು ಮಾಡಿರುವುದರಿಂದ ಅದರಲ್ಲಿ ಸತ್ಯಾಂಶ ಹೆಚ್ಚಾಗಿಯೇ ಇರಬೇಕು ಮತ್ತು ದೇವುಡು ತಮ್ಮ ಲಾಭಕ್ಕಾಗಿ ಏನನ್ನೂ ಕೇಳುತ್ತಿಲ್ಲ ಎಂಬುದು ಸ್ಪಷ್ಟವಾಯಿತು. ತಕ್ಷಣವೇ ಅಧಿಕಾರಿಗಳಿಗೆ ಹೇಳಿ ಸ್ವಾಧೀನ ಪ್ರಕ್ರಿಯೆಯ ಸರಕಾರಿ ಆಜ್ಞೆಯನ್ನು ಹಿಂತೆಗೆದುಕೊಳ್ಳುವಂತೆ ಆದೇಶ ನೀಡಿದರು.

ಈ ಸಂತೋಷದ ವಿಷಯ ಮುನಿಸ್ವಾಮಪ್ಪನವರಿಗೆ ತಲುಪುತ್ತಲೇ ದೇವುಡು ಮನೆಗೆ ಹೋಗಿ ಸಿಹಿ ಹಂಚಿ ತಮ್ಮ ಕೃತಜ್ಞತೆಯನ್ನು ತಿಳಿಸಿದರು. ನಂತರ ಆ ಜಮೀನನ್ನು ಸೈಟುಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಲು ಸಿದ್ಧಪಡಿಸಿಕೊಂಡರು.
 
ಒಂದು ದಿನ ದೇವುಡು ಅವರ ಮನೆಗೆ ಬಂದು ತಾವು ಮಾಡಿದ ಯೋಜನೆಯನ್ನು, ನಕ್ಷೆಯನ್ನು ವಿವರಿಸಿ,  `ಶಾಸ್ತ್ರಿಗಳೇ, ತಮ್ಮ ಉಪಕಾರದಿಂದಾಗಿ ಈ ಯೋಜನೆ ಆಗುತ್ತಿದೆ. ನಾನು ಈ ಸೈಟುಗಳನ್ನು ಮಾರಿದರೆ ನನಗೂ ಒಂದಷ್ಟು ದುಡ್ಡು ಬರುತ್ತದೆ. ತಮಗೂ ಇಬ್ಬರು ಗಂಡುಮಕ್ಕಳಿದ್ದಾರೆ. ನಾನು ನಿಮ್ಮ ಇಬ್ಬರೂ ಮಕ್ಕಳ ಹೆಸರಿನಲ್ಲಿ ಒಂದೊಂದು ಸೈಟು ರಿಜಿಸ್ಟರ್ ಮಾಡಿಸಿಕೊಟ್ಟುಬಿಡುತ್ತೇನೆ. ದಯವಿಟ್ಟು ಒಪ್ಪಿಸಿಕೊಳ್ಳಬೇಕು~ ಎಂದು ಕೇಳಿಕೊಂಡರು.

ಇದನ್ನು ದೇವುಡು ಸರ್ವಥಾ ಒಪ್ಪಲಿಲ್ಲ. ಮುನಿಸ್ವಾಮಪ್ಪನವರು ಮತ್ತೆ ಮತ್ತೆ ಒತ್ತಾಯ ಮಾಡಿದಾಗ ಖಡಾಖಂಡಿತವಾಗಿ, `ಮುನಿಸ್ವಾಮಪ್ಪನವರೇ, ನನ್ನ ಮಕ್ಕಳಿಗೆ ಸೈಟು ಬೇಕೆಂಬ ಯೋಚನೆಯಿಂದ ನಾನು ನಿಮಗೆ ಸಹಾಯ ಮಾಡಲಿಲ್ಲ. ನೀವೊಬ್ಬ ಸಜ್ಜನ ಸ್ನೇಹಿತರೆಂದು ಮಾತ್ರ ಸಹಾಯ ಮಾಡಿದೆ. ನನ್ನನ್ನು ಬಲವಂತಮಾಡಬೇಡಿ. ಇನ್ನು ಮುಂದೆ ಈ ಸೈಟುಗಳ ವಿಷಯಬಿಟ್ಟು ಏನಾದರೂ ಮಾತನಾಡುವುದಿದ್ದರೆ ಮಾತ್ರ ನಮ್ಮ ಮನೆಗೆ ಬನ್ನಿ~ ಎಂದು ಮಾತು ಮುಗಿಸಿದರು.  ಮುನಿಸ್ವಾಮಪ್ಪನವರು ಮುಂದೆ ಈ ವಿಷಯದಲ್ಲಿ ಮಾತನ್ನಾಡಲಿಲ್ಲ.

ಇದು ಹಿರಿಯರು ನಡೆದು ತೋರಿದ ದಾರಿ. ನಾವು ಮಾಡುವ ಸಹಾಯಕ್ಕಾಗಿ ಪ್ರತಿಫಲವನ್ನು ಪಡೆಯಲೇಬೇಕೆಂಬ ಅವಶ್ಯಕತೆ ಇಲ್ಲ. ಹಾಗೆ ಅಪೇಕ್ಷಿಸಿದರೆ ಅದು ಸ್ನೇಹಹಸ್ತವಾಗದೇ ವ್ಯಾಪಾರವಾಗುತ್ತದೆ.

(ಕೃಪೆ: ಹೊ.ರಾ. ಸತ್ಯನಾರಾಯಣರಾವ್ ಸಂಪಾದಿಸಿದ  `ದೇವುಡು ದರ್ಶನ~  ಗ್ರಂಥ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT