ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರೀರ ವಾಣಿ

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಾತಿಗೂ ಶರೀರಕ್ಕೂ ಇರುವ ಸಂಬಂಧ ತಿಳಿಯುವುದಕ್ಕೆ ತೊಡಗಿದರೆ ಮನುಷ್ಯನಿಗೂ ಇತರ ಜೀವಿಗಳಿಗೂ ಇರುವ ಸಂಬಂಧ ಕೂಡ ಕಾಣುತ್ತದೆ. ನರಮಂಡಲ, ಮಿದುಳು, ಭಾಷೆಯ ತಜ್ಞರು ಕಂಡುಕೊಂಡಿರುವ ಸಂಗತಿಗಳು, ಮಾಡಿರುವ ಊಹೆಗಳು ಇಡೀ ಜೀವ ಜಾಲದ ಬಗ್ಗೆಯೇ ಗೌರವ, ಪ್ರೀತಿ ಹುಟ್ಟಿಸುತ್ತವೆ.
 
ಮಾತಾಡಬಲ್ಲ ಮನುಷ್ಯನ ಬಗ್ಗೆ ಹೆಮ್ಮೆಯನ್ನೂ ಮೂಲತಃ ಮನುಷ್ಯನೂ ಮಿಕ್ಕೆಲ್ಲ ಜೀವಿಗಳ ಹಾಗೆಯೇ ಅನ್ನುವ ವಿನಯವನ್ನೂ ಹುಟ್ಟಿಸುತ್ತವೆ. ಮಾತನ್ನು ನಿರ್ವಹಿಸುವುದಕ್ಕೆ ಮನುಷ್ಯ ಶರೀರ ಕೂಡ ಹಲವು ಸಾವಿರ ಸಾವಿರ ವರ್ಷಗಳ ಅವಧಿಯಲ್ಲಿ ಸಜ್ಜಾಗಬೇಕಾಯಿತು.

ಮನುಷ್ಯನ ಪೂರ್ವೇತಿಹಾಸದಲ್ಲಿ ಮಾತು ಆಗಷ್ಟು ಈಗಷ್ಟು ಅನ್ನುವ ಹಾಗೆ ತುಣುಕು ತುಣುಕು ಸೇರಿ ರೂಪುಗೊಂಡಿರಬಹುದು ಅನ್ನುವ ಊಹೆ ಇದೆ. ಮಾತು ಸಾಧ್ಯವಾಗುವುದಕ್ಕೆ ನಾಲ್ಕು ಅಂಗಗಳು ಬೇಕು, ಮತ್ತೆ ಆ ನಾಲ್ಕಕ್ಕೂ ಸಂಬಂಧವಿದ್ದು ಒಟ್ಟಿಗೇ ಕೆಲಸಮಾಡಬೇಕು.

ನಮ್ಮಿಂದ ಮಾತು ಹೊಮ್ಮುವುದಕ್ಕೆ ಎರಡು ಅಂಗ, ಬೇರೆಯವರ ಮಾತನ್ನು ಗ್ರಹಿಸುವುದಕ್ಕೆ ಇನ್ನೆರಡು. ಆಡುವ ಬಾಯಿ ಕೇಳುವ ಕಿವಿ ಕಾಣಿಸುತ್ತವೆ; ಇವನ್ನು ನಿಯಂತ್ರಿಸುವ ಮಿದುಳಿನ ಇನ್ನೆರಡು ಭಾಗ ಕಾಣುವುದಿಲ್ಲ.

ಮನುಷ್ಯರು ಮಾಡುವ ಸದ್ದುಗಳನ್ನು ಗ್ರಹಿಸುವುದಕ್ಕೆ ಮನುಷ್ಯರ ಮನಸ್ಸು ಸಜ್ಜಾಗಿರುತ್ತದೆ. ಇತರ ಹಲವು ಸದ್ದುಗಳ ನಡುವೆ ಮನುಷ್ಯರ ಮಾತು, ದನಿಗಳನ್ನು ನಮ್ಮ ಕಿವಿ ಸಹಜವಾಗಿಯೇ ಅನ್ನುವಂತೆ ಆಯ್ದುಕೊಳ್ಳುತ್ತವೆ.

ಹಿನ್ನೆಲೆಯ ಸದ್ದುಗಳನ್ನೆಲ್ಲ ನಿರ್ಲಕ್ಷಿಸಿ ಕೇವಲ ಮನುಷ್ಯರ ದನಿಗಳನ್ನು ಮಾತ್ರ ಆಯ್ದುಕೊಳ್ಳಬಲ್ಲ ಶ್ರವಣ ಸಾಧನ ನಿರ್ಮಿಸುವುದಕ್ಕೆ ಇನ್ನೂ ಆಗಿಲ್ಲ. ಯಾವುದೇ ಪ್ರಾಣಿ ತಾನೂ ಹುಟ್ಟಿಸಬಲ್ಲಂಥ ಸದ್ದುಗಳನ್ನು ಆಲಿಸುವುದಕ್ಕೆ ಹುಟ್ಟಿನಿಂದಲೇ ತಯಾರಾಗೇ ಹುಟ್ಟಿರುವುದು ಆಶ್ಚರ್ಯ.

ಸದ್ದನ್ನು ಗುರುತಿಸುವ ಶಕ್ತಿ ಅಂಥವೇ ಸದ್ದುಗಳನ್ನು ನುಡಿಯಬಲ್ಲ ಶಕ್ತಿಗಿಂತ ಮೊದಲೇ ತಲೆ ಎತ್ತಿರುತ್ತದೆ. ಕೇಳುವ ಕೌಶಲ ಆಡುವ ಕೌಶಲ ಎರಡೂ ಬೇರೆ ಬೇರೆ. ಎಷ್ಟೋ ಸಸ್ತನಿಗಳಿಗೆ ಮನುಷ್ಯ ಭಾಷೆಯ ಪದಗಳನ್ನೂ ವಾಕ್ಯಗಳನ್ನೂ ಕೇಳಿ ಅರ್ಥಮಾಡಿಕೊಳ್ಳುವ ಕೌಶಲವಿದ್ದರೂ ಸ್ವತಃ ನುಡಿಯಲಾರವು.

ಕಿವಿಯ ಮೂಲಭೂತ ಗುಣಗಳು ಮನುಷ್ಯರಿಗೂ ಪ್ರಾಣಿವರ್ಗಕ್ಕೂ ಸಮಾನ. ಎರಡರಿಂದ ನಾಲ್ಕು ತಿಂಗಳ ವಯಸ್ಸಿನ ಮಕ್ಕಳು `ಪ~ ಮತ್ತು `ಬ~ಗಳ ವ್ಯತ್ಯಾಸ ಅರಿಯಬಲ್ಲರು, ಆದರೆ `ಬ~, `ದ~ ಮತ್ತು `ಗ~ ಕಾರದ ಬಗೆಗಳನ್ನು ಅರಿಯಲಾರರು. ಮೊಮ್ಮಗ ಸಮರ್ಥ ಮೂಗು ಅನ್ನಲು `ಮೂದು~, ಗುಡ್ಡ ಅನ್ನಲು `ದುದ್ದ~ ಅನ್ನುತಿದ್ದ. ಮಾತಿನ ದನಿಗಳನ್ನು ವರ್ಗೀಕರಿಸಿಟ್ಟುಕೊಳ್ಳುವ ಸಾಮರ್ಥ್ಯ ಮಕ್ಕಳಿಗೆ ಇರುವ ಹಾಗೇ ರೆಸಸ್, ಚಿನ್‌ಚಿಲಾ ಕೋತಿಗಳಂಥ ಪ್ರೈಮೇಟುಗಳಿಗೂ ಇದೆಯಂತೆ. ಪ್ರೈಮೇಟು ಕಿವಿ ತೀರ ಸೂಕ್ಷ್ಮ.

ಮಕ್ಕಳು ತಾವು ಉಚ್ಚರಿಸಬಲ್ಲ ಶಬ್ದಗಳಿಗಿಂತ ಹೆಚ್ಚಿನ ಶಬ್ದಗಳನ್ನು ಖಚಿತವಾಗಿ ಗುರುತಿಸುತ್ತಾರೆ. ಒಂದು ಊಹೆ ಹೀಗಿದೆ- ವ್ಯಂಜನದ ಸದ್ದುಗಳ ತಾನ ತರಂಗಾಂತರ (ಪಿಚ್ ಫ್ರೀಕ್ವೆನ್ಸಿ) ಒಣ ಕೊಂಬೆ, ತರಗೆಲೆಗಳ ಮುರಿತಕ್ಕೆ ಸಮವಾಗಿರಬಹುದು; ನಮ್ಮ ಕಿವಿ ಸೂಕ್ಷ್ಮತೆ ಮರದ ಮೇಲಿನ ನಮ್ಮ ಬಂಧುಗಳೊಡನೆ ಬೆಸೆಯುವ ಲಕ್ಷಣವೂ ಇದ್ದೀತು.

ನುಡಿ ಗ್ರಹಣವೆನ್ನುವುದು ಕೇವಲ ಸದ್ದುಗಳ ವ್ಯತ್ಯಾಸದ ಆಲಿಕೆ ಮಾತ್ರವಲ್ಲ. ಯಾರು ಮಾತಾಡುತಿದ್ದಾರೆ, ಭಾವವೇನು ಇತ್ಯಾದಿ ಕೂಡ ಮನುಷ್ಯರಿಗೆ ಗೊತ್ತಾಗುತ್ತದೆ. ದನಿ ಮತ್ತು ಭಾವದ ಸಂಬಂಧ ಇತರ ಪ್ರಾಣಿಗಳಿಗೂ ಸಾಧ್ಯ. ದನಿ ಹಿಡಿಯುವುದು ಭಾವವನ್ನು ಅರಿಯುವುದು ಮಿದುಳಿನ ಬೇರೆ ಬೇರೆ ಭಾಗಗಳ ಕೆಲಸ.

ಕೇಳಲು ಅಗತ್ಯವಾದ ಶರೀರಾಂಗವು ಮನುಷ್ಯರು ವಾ-ನರ ದಾಯಾದಿಗಳಿಂದ ಬೇರೆಯಾಗುವ ಮೊದಲೇ ಶರೀರಾಂತರ್ಗತವಾಗಿದ್ದು ಮನುಷ್ಯರ್ಲ್ಲಲಿ ಪರಿಷ್ಕಾರಗೊಂಡಿದೆ ಅನ್ನುವ ಊಹೆ ಇದೆ.

ಹೊರ ಹಾಕುವ ಉಸಿರನ್ನು ಬಳಸಿಯೇ ಬಹಳಷ್ಟು ಮಾತು ರೂಪಪಡೆಯುತ್ತದೆ. ಉಸಿರನ್ನು ಹೊರಗೆ ದಬ್ಬುವುದಕ್ಕೆ ಶ್ವಾಸಕೋಶ ಬೇಕು. ಹೊರಬಿದ್ದ ಉಸಿರನ್ನು ಸದ್ದಾಗಿ ಪರಿವರ್ತಿಸಲು ದನಿಪೆಟ್ಟಿಗೆ ಬೇಕು. ಹೊರಬರುವ ಉಸಿರನ್ನು ಅಲ್ಲಲ್ಲ ತಡೆದು ಬೇಕಾದ ಸದ್ದು ಹುಟ್ಟುವ ಹಾಗೆ ಮಾಡುವುದಕ್ಕೆ ಮಾಂಸಲವಾದ ನಾಲಗೆ, ಒಂದೇ ಅಳತೆಯ ಪ್ರಮಾಣಬದ್ಧ ಹಲ್ಲು, ಸಶಕ್ತ ತುಟಿಗಳು ಬೇಕು. ಶ್ವಾಸಕೋಶವೋ ತುಂಬ ಪ್ರಾಚೀನ.

ಮೀನು ತೇಲುವುದಕ್ಕೆ ಸಹಾಯಮಾಡುವ ಗಾಳಿ ಚೀಲದಿಂದ ಶ್ವಾಸಕೋಶ ಬೆಳೆಯಿತು ಅಂದ ಡಾರ್ವಿನ್. ಈಗಿನ ಸಂಶೋಧನೆ ಶ್ವಾಸಕೋಶದಿಂದ ಸ್ವಿಮ್ ಬ್ಲಾಡರ್ ಅನ್ನುತ್ತದೆ. ಕೆಲವು ಮೀನುಗಳ್ಲ್ಲಲಿ ಈ ಗಾಳಿಚೀಲಕ್ಕೂ ಉಸಿರುನಾಳಕ್ಕೂ ಸಂಬಂಧ ಉಳಿದಿದೆ. ನೀರ ಮೇಲಕ್ಕೆ ಬಂದು ಗಾಳಿ ನುಂಗಿ ಬ್ಲಾಡರ್ ದೊಡ್ಡದು ಮಾಡಿಕೊಳ್ಳುತ್ತವೆ.

ಗಂಟಲಗೂಡಿನಲ್ಲೊಂದು ದನಿಪೆಟ್ಟಿಗೆ. ಅದರ್ಲ್ಲಲಿ ದನಿತಂತು ಅನ್ನುವ ಮಾಂಸದ ತೆಳು ಪದರಗಳು. ನೀರಿನೊಳಗಿನ ಮೀನು ಗಾಳಿ ಎಳೆದುಕೊಂಡಾಗ ನೀರು ಶ್ವಾಸಕೋಶಕ್ಕೆ ನುಗ್ಗದ ಹಾಗೆ ತಡೆಯುವುದಕ್ಕೆ ಇದ್ದ ಕವಾಟ ಇದಿರಬಹುದು.

ಯಾವುದೇ ಶ್ರಮದ ಕೆಲಸ ಮಾಡುವಾಗ ಉಸಿರು ಹಿಡಿಯುವುದಕ್ಕೆ ಶ್ವಾಸಕೋಶದ ಬಾಗಿಲು ಭದ್ರಮಾಡುವ ಹಾಗೆ ಈ ಪದರಗಳು ವಾ-ನರಗಳಲ್ಲಿ ಬಳಕೆಯಾಗಿದ್ದಿರಬಹುದು. ತೊಲೆ ಹಿಡಿದು ತೂಗಾಡುವಾಗ ಅಥವ ಭಾರದ ಸೂಟ್‌ಕೇಸು ಎತ್ತುವಾಗ, ಮಲವಿಸರ್ಜನೆ ಕಷ್ಟವಾದಾಗ ಈ ಪದರಗಳು ಹೀಗೆ ಶ್ವಾಸಕೋಶದ ಬಾಗಿಲು ಹಾಕುತ್ತವೆ. ಮಾತು ಆಡುವುದಕ್ಕೆ ಗಾಳಿತಡೆಯುವ ಈ ಸಾಮರ್ಥ್ಯ ಬಳಸಿಕೊಂಡದ್ದು ಯಾಕೋ ಹೇಗೋ ಯಾವಾಗಲೋ!

ಮನುಷ್ಯರ ಗಂಟಲಗೂಡು ಮಿಕ್ಕ ವಾ-ನರಗಳಲ್ಲಿರುವುದಕ್ಕಿಂತ ಗಂಟಲಿನ ಕೆಳಭಾಗದ್ಲ್ಲಲಿದೆ, ಹೆಚ್ಚು ಸರಳವಾಗಿದೆ. ಯಾಕೆ? ಗೊತ್ತಿಲ್ಲ. ಮನುಷ್ಯ ಎರಡು ಕಾಲುಗಳ ಮೇಲೆ ನಡೆಯಲು ಶುರುಮಾಡಿದಾಗಲೇ ಶರೀರ ರಚನೆಯಲ್ಲೂ ಬದಲಾವಣೆಗಳು ತೊಡಗಿದವು, ಅದರ್ಲ್ಲಲಿ ಇದೂ ಒಂದು ಅನ್ನುತ್ತಾರೆ.

ಅಲ್ಲ, ವಾ-ನರಗಳು ಕಣ್ಣು ಕೈಗಳ ಹೊಂದಾಣಿಕೆ ಸಾಧಿಸಿ ಆಹಾರ ಹುಡುಕುತ್ತ ಅಲೆಯತೊಡಗಿದಾಗ ದೃಷ್ಟಿ ಪರಿಷ್ಕಾರವಾಯಿತು, ಆದರೆ ವಾಸನೆ ಹಿಡಿಯುವ ಸಾಮರ್ಥ್ಯ ಕುಗ್ಗಿತು. ಪರಿಣಾಮವಾಗಿ ವಾ-ನರಗಳ ಮೂಗು ತುದಿ ಗಿಡ್ಡವಾಗಿ, ಅದರ ಪರಿಣಾಮವಾಗಿ ಮೇಲು ದವಡೆಯ ಗಾತ್ರ ಕುಗ್ಗಿ, ಆದರೂ ನಾಲಗೆ ಹಾಗೇ ಉಳಿಯಿತು; ನಾಲಗೆ ಹೆಚ್ಚು ಮಾಂಸಲವಾಗಿದ್ದರಿಂದ ಗಂಟಲಗೂಡನ್ನು ಕತ್ತಿನ ಕೆಳಭಾಗಕ್ಕೆ ದಬ್ಬಿಕೊಳ್ಳಬೇಕಾಯಿತು; ಗಂಟಲಗೂಡು ಕೆಳಗೆ ಇಳಿದದ್ದರಿಂದ ಮಾತಿಗೆ ಅನುಕೂಲವಾಯಿತು ಅಂತಲೂ ಅನ್ನುತ್ತಾರೆ. ಮಿಕ್ಕ ವಾ-ನರಗಳು ತಿನ್ನುವಾಗ ಶ್ವಾಸಕೋಶದ ದಾರಿ ಬಂದ್ ಆಗುವ ಹಾಗೆ ಮನುಷ್ಯರ್ಲ್ಲಲಿ ಆಗುವುದಿಲ್ಲ.

ಗಂಟಲಗೂಡು ಈಗಿರುವ ಸ್ಥಾನಕ್ಕೆ ಯಾವಾಗ ಬಂತೋ ಗೊತ್ತಿಲ್ಲ. 100,000 ವರ್ಷಗಳಷ್ಟು ಹಿಂದಿನದೆಂದು ಹೇಳಲಾದ ಮನುಷ್ಯನದೂ ಆಗಿರಬಹುದಾದ ತಲೆಬುರುಡೆಯೊಂದರ್ಲ್ಲಲಿ ನಾಲಗೆ, ಉಸಿರು ನಾಳ, ಗಂಟಲ ಮಾಂಸಖಂಡಗಳ ಚಲನೆಗೆ ಸಹಾಯ ಮಾಡುವ  ್ಠ ಆಕಾರದ ಹಯಾಯ್ಡ ಮೂಳೆ ದೊರೆತಿದೆ.

ಕೆಳಗಿಳಿದ ಗಂಟಲಗೂಡು ಆಧುನಿಕ ಮನುಷ್ಯನ ದನಿಕಾಲುವೆಯಾಯಿತು. ಗಂಟಲ ಗೂಡಿನಿಂದ ಬಾಯಿವರೆಗೆ ಇರುವ ತಲೆಕೆಳಗಾದ ಇಂಗ್ಲಿಷ್ ಔ ಅಕ್ಷರದಂಥ ಭಾಗ ಉಚ್ಚರಿಸಬಹುದಾದ ಸದ್ದುಗಳ ಸಂಖ್ಯೆಯನ್ನೂ ನಿಖರತೆಯನ್ನೂ ಹೆಚ್ಚಿಸಿತು.

ಚಿಂಪಾಂಜಿಗಳ ಕೂಗು ಭ್ರೂಣರೂಪಿಯಾದ ಉಲಿದನಿಗಳು. ಮಾತಿನ ಶಬ್ದಗಳಿಗೆ ಮೂಲಾಧಾರವಾದ ಚೌಕಟ್ಟು ಅದೇ. ಯಾವುದೇ ಉಲಿದನಿಯ ತಿರುಳು ಅದರಲ್ಲಿರುವ ಸ್ವರ. ಅನೇಕ ಪ್ರಾಣಿಗಳು, ವಾ-ನರಗಳು ಆದಿಮ ಸ್ವರಗಳನ್ನು ಹೊರಡಿಸುತ್ತವೆ. ಸ್ವರಗಳು ಸಹಜ, ಯಾಕೆಂದರೆ ತೀರ ಸರಳ ಪ್ರಾಣಿಗಳು ಬುಲ್‌ಫ್ರಾಗ್‌ನಂಥವು ಕೂಡ ಪ್ರತ್ಯೇಕ ಸ್ವರಗಳನ್ನು ಹೊರಡಿಸಬಲ್ಲವು.
 
ಮನುಷ್ಯರು ಬಳಸುವ ತೆರಪಿಲ್ಲದೆ ಉಚ್ಚರಿಸಬಲ್ಲ ಸ್ವರಗಳಿಗೂ ಬುಲ್‌ಫ್ರಾಗ್‌ಗಳ ಕೂಟಕರೆಗೂ ಧ್ವನಿಲಕ್ಷಣಗಳ್ಲ್ಲಲಿ, ಶರೀರವರ್ತನೆಯ್ಲ್ಲಲಿ ಯಾವ ವ್ಯತ್ಯಾಸವೂ ಇಲ್ಲವಂತೆ. ಚಿಂಪಾಂಜಿಗಳು ಕೂಡ ಸ್ವರದಂಥ ಸದ್ದು ಮಾಡುತ್ತವೆ.

ಚಿಂಪಾಂಜಿಗಳಿಗಿಲ್ಲದ ಎರಡು ಮುಖ್ಯ ಸೌಲಭ್ಯಗಳು ಮನುಷ್ಯರಿಗಿವೆ. ಒಂದು, ಮನುಷ್ಯರ ನಾಲಗೆ ಚಿಕ್ಕದು, ದಪ್ಪ, ಅದರ ಮೇಲೆ ಹತೋಟಿ ಸಾಧ್ಯ; ಇನ್ನೊಂದು, ಚಿಂಪಾಂಜಿಗಳು ಮೂಗಿನ ಮೂಲಕ ಸ್ವರಗಳನ್ನು ಸೃಷ್ಟಿಸಿದರೆ ಮನುಷ್ಯರು ಬಾಯಿಯ ಮೂಲಕ ಸ್ವರ ಹೊರಡಿಸಬಲ್ಲರು.

ಗಂಟಲಗೂಡು ಕೆಳಗಿಳಿದು ಎಲ್ ಆಕಾರ ತಾಳಿದ್ದರಿಂದ ಮನುಷ್ಯರು ಮೂಗಿನ ಅಂಗುಳದ ಮೃದುಭಾಗವನ್ನು ಎತ್ತರಿಸಿ ಒಳಪೊಳ್ಳೆ(ಕ್ಯಾವಿಟಿ)ಯನ್ನು ಮುಚ್ಚಬಹುದು. ಇದಾಗುವ ಮೊದಲು ಮೂಗಿನಿಂದ ಹೊರಡುವ ಶಬ್ದಗಳಷ್ಟೇ ಇದ್ದವು. ಅವನ್ನು ನಾಸಿಕವಲ್ಲದ ಶಬ್ದಗಳಂತೆ ಪ್ರತ್ಯೇಕವಾಗಿ ಗುರುತಿಸುವುದು ಕಷ್ಟ.

ಹೀಗಾಗಿ ಮನುಷ್ಯರು ಇ, ಅ, ಉ ಎಂಬ ಮೂರು ಅತಿವಿರುದ್ಧ ಗುಣದ ಸ್ವರಗಳನ್ನು ಆಡಬಲ್ಲರು. ಇವು ಮಿಕ್ಕ ಸ್ವರಗಳಿಗಿಂತ ಸ್ಥಿರ. ನಾಲಗೆಯ ಮುಂಭಾಗ ಮೇಲೆತ್ತಿ ಉಚ್ಚರಿಸುವ ಇ ಅದಕ್ಕೆ ಪ್ರತಿಸಮತೋಲದ ಹಾಗೆ ನಾಲಗೆ ಹಿಂದೆಳೆದುಕೊಂಡು ಹಿಂಭಾಗ ಎತ್ತರಿಸಿ ಉ, ಬಲುಮಟ್ಟಿಗೆ ಬಾಯಿ ತೆರೆದು, ನಾಲಗೆ ಬಲುಮಟ್ಟಿಗೆ ಬಾಯ ಮಧ್ಯದಲ್ಲಿ ಕೆಳಗಿದ್ದು ಉಚ್ಚರಿಸುವ ಅ. ಈ ಮೂರು ಸ್ವರಗಳಿರದಿದ್ದರೆ ತೀರ ಕೆಲವೇ ಪದಶಬ್ದಗಳನ್ನು ಮಾತ್ರ ಸುಲಭವಾಗಿ ಗುರುತಿಸಬಹುದಿತ್ತು ಅಷ್ಟೆ. ಕೇವಲ ಮನುಷ್ಯರು ಮಾತ್ರ ಇವನ್ನು ಉಚ್ಚರಿಸಬಲ್ಲರು ಅನ್ನುತ್ತಾರೆ. ಈ ಮುಖ್ಯಸ್ವರಗಳು ವಶವಾಗುವವರೆಗೆ ಸ್ಪಷ್ಟವಾದ ಪದಶಬ್ದಗಳ ಸೃಷ್ಟಿ ಸಾಧ್ಯವಾಗದು.

`ಪ~, `ಬ~, `ಮ~ಗಳನ್ನು ಉಚ್ಚರಿಸುವಾಗ ಮನುಷ್ಯರು ತುಟಿಗೆ ತುಟಿ ತಾಗಿಸುವ ಹಾಗೇ ಎಲ್ಲ ವಾ-ನರಗಳೂ ಮಾಡುತ್ತವೆ. ಮನುಷ್ಯ ಕೂಸುಗಳು ಖಚಿತವಾಗಿ ಸೃಷ್ಟಿಸುವ ಮೊದಲ ವ್ಯಂಜನ ಸದ್ದುಗಳು ಕೂಡ ಇವೇ. ನಾಲಗೆ ತುದಿಯನ್ನು ಹಲ್ಲಿಗೆ ತಾಗಿಸಿ, ಬಾಯ ಚಾವಣಿಗೆ ತಾಗಿಸಿ ದ, ಸ, ತ ಗಳನ್ನು ಹೇಳುವ ಅಭ್ಯಾಸ ಆಮೇಲಿನದು. ಆದರೆ ಕೇವಲ ಮನುಷ್ಯರು ಮಾತ್ರ ಕ ಮತ್ತು ಗ ಗಳನ್ನು ನುಡಿಯಬಲ್ಲರಂತೆ.

ಮನುಷ್ಯನ ಶರೀರದ ಶಬ್ದ ವಲಯದ ಯಾವ ಅಂಗವೂ ಕೇವಲ ಮಾತನ್ನು ಸೃಷ್ಟಿ ಮಾಡುವುದಕ್ಕೆಂದೇ ಇರುವುದಿಲ್ಲ. ಅಗಿಯುವುದಕ್ಕೆ ಹಲ್ಲು, ಆಹಾರ ಅಟ್ಟಾಡಿಸುವುದಕ್ಕೆ ಎಲುಬಿಲ್ಲದ ಮಾಂಸಲವಾದ ನಾಲಗೆ, ಬಗೆಬಗೆಯ ಮುಖಭಾವದ ತೋರ್ಪಡಿಕೆಗೆ, ಮುಖ್ಯವಾಗಿ ನಗುವುದಕ್ಕೆ, ಮೋರೆ ಮತ್ತು ತುಟಿಯ ಮಾಂಸಖಂಡಗಳು; ಶರೀರದಲ್ಲಿರುವ ಅಂಗಗಳನ್ನೇ ಮಾತಿಗೆ ಬಳಸಿಕೊಂಡದ್ದೋ, ಹಾಗೆ ಬಳಸಿಕೊಂಡದ್ದರಿಂದ ಈ ಅಂಗಗಳು ಈ ರೂಪತಾಳಿದವೋ, ಗೊತ್ತಿಲ್ಲ.

ಶಬ್ದಗಳೇ ಸಕಲವೂ ಅಲ್ಲ; ಲಯ ಇರಬೇಕು, ಸ್ವರಭಾರ ಇರಬೇಕು. ಇವು ಉಲಿಗಳಿಗೆ ಅಟ್ಟಣೆ ಇದ್ದಹಾಗೆ. ಚಿಂಪಾಂಜಿಗಳು ತಾನ (ಪಿಚ್) ಬದಲಿಸಬಲ್ಲವು, ಸದ್ದಿನ ಶಬ್ದ ಜೋರು, ಮೆಲ್ಲ ಮಾಡಬಲ್ಲವು, ಅಂದರೆ `ಮನುಷ್ಯ~ರಾಗುವ ಮೊದಲೇ ಸ್ವರಭಾರಕ್ಕೆ ಅಗತ್ಯವಾದ ಸಂಯೋಜನೆ ಲಭ್ಯವಾಗಿತ್ತು.

ಇವನ್ನೆಲ್ಲ ಸಂಯೋಜಿಸುವ ವ್ಯವಸ್ಥೆಯೊಂದು ಬೇಕು. ನೋಡಿ, ತೀರ ಸರಳವಾದ ಒಂದಕ್ಷರದ ನುಡಿ ನುಡಿಯುವುದಕ್ಕೂ ದೇಹದೊಳಗಿನ ಅವಕಾಶದ್ಲ್ಲಲಿ ಎಪ್ಪತ್ತು ಸ್ನಾಯುಗಳ, ವಪೆಯಿಂದ ತುಟಿಯವರೆಗೆ ಎಂಟರಿಂದ ಹತ್ತು ದೇಹಭಾಗಗಳ ಸಂಯೋಜನೆ ಏಕಕಾಲದಲ್ಲಿ ನಡೆಯಬೇಕು!

ಕೂಸಿನ ಹೊಸ ಬಾಯಿ, ಕೊರಳ ತಗ್ಗಿನ ಗಂಟಲಗೂಡು, ಪ್ರಾಚೀನ ಕಿವಿ ಇವೆಲ್ಲ ಉಪಯೋಗಕ್ಕೆ ಬರಬೇಕಿದ್ದರೆ ಬೆಳೆದ ಮಿದುಳಿರಬೇಕು. ಆಧುನಿಕ ಮನುಷ್ಯರ ಮಿದುಳು ಸರಾಸರಿ ಚಿಂಪಾಂಜಿ ಮಿದುಳಿಗಿಂತ ಮೂರುಪಟ್ಟು ದೊಡ್ಡದು. ಮಿದುಳಿನ ಗಾತ್ರಕ್ಕೂ ಭಾಷೆಗೂ ಸಂಬಂಧವೇನು? ಭಾಷೆ ಮತ್ತು ಮಿದುಳಿನ ಸಂಗಮದ ಕತೆ ಮುಂದೆ ನೋಡೋಣ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT