ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಕ್ಷೇತ್ರಗಳು, ಚುನಾವಣೆಗಳು ಮತ್ತು ಶೈಕ್ಷಣಿಕ ವಿಚಾರಗಳು

Last Updated 18 ಜೂನ್ 2012, 19:30 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯದ ವಿಧಾನ ಪರಿಷತ್ತಿನ ಮೂರು ಶಿಕ್ಷಕ ಹಾಗೂ ಮೂರು ಪದವೀಧರ ಕ್ಷೇತ್ರಗಳಿಗೆ ನಡೆದ ಚುನಾವಣೆಗಳ ಫಲಿತಾಂಶಗಳು ಕಳೆದ ವಾರ ಪ್ರಕಟವಾಗಿವೆ.

ಹಿಂದೆಂದೂ ಕಾಣದ ಅಬ್ಬರದ ಪ್ರಚಾರ, ಅಭ್ಯರ್ಥಿಗಳು ಹಾಗೂ ಅವರಅನುಯಾಯಿಗಳಿಂದ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯ ಬಗ್ಗೆ ಪರಸ್ಪರ ದೋಷಾರೋಪಣೆ ಹಾಗೂ ಕೆಲ ಕ್ಷೇತ್ರಗಳಲ್ಲಿ ಮತದಾರರ ಅನಪೇಕ್ಷಿತ ನಡವಳಿಕೆಯ ಬಗ್ಗೆ ಮೂಡಿ ಬಂದ ವರದಿಗಳು - ಈ ಬಾರಿಯ ಚುನಾವಣೆಗಳ ಸಂದರ್ಭದಲ್ಲಿ ವಿಶೇಷವಾಗಿ ಗಮನ ಸೆಳೆದಂಥ

ವಿಚಾರಗಳು. ಈ ಹೊತ್ತು ಫಲಿತಾಂಶಗಳ ವಿಶ್ಲೇಷಣೆ ನಡೆಯುತ್ತಿದ್ದು ಕೆಲ ಅಭ್ಯರ್ಥಿಗಳು, ಅವರ ಬೆಂಬಲಿಗರು ಹಾಗೂ ಮಾಧ್ಯಮ ವರದಿಗಳು ಸೋಲು-ಗೆಲುವುಗಳನ್ನು ಜಾತಿ, ಹಣಬಲ ಅಥವಾ ತೋಳ್ಬಲಗಳಂಥ ಅಂಶಗಳ ಚೌಕಟ್ಟಿನಲ್ಲಿ ಅಳೆಯಲೆತ್ನಿಸುತ್ತಿರುವುದು ಶಿಕ್ಷಣ ಕ್ಷೇತ್ರದ ಬಗ್ಗೆ ನೈಜ ಕಾಳಜಿ ಇರುವವರನ್ನೆಲ್ಲ ಬೆಚ್ಚಿ ಬೀಳಿಸಿದೆ.

ಈ ಬಾರಿಯ ಶಿಕ್ಷಕರ ಕ್ಷೇತ್ರಗಳಿಗೆ ನಡೆದ ಚುನಾವಣೆಗಳಿಗೂ ಸಾರ್ವತ್ರಿಕ ಚುನಾವಣೆಗಳಿಗೂ ನಡುವೆ ಗಮನಾರ್ಹವಾದ ವ್ಯತ್ಯಾಸವೇನೂ ಕಂಡು ಬರಲಿಲ್ಲ. ಚುನಾವಣೆ ಎಂದ ಮೇಲೆ ಇವೆಲ್ಲ ಸಹಜವೇ. ಇಂಥ ಪ್ರವೃತ್ತಿಗಳಿಗೆ ವಿಶೇಷವಾದ ಅರ್ಥವನ್ನು ಕಲ್ಪಿಸುವ ಅಗತ್ಯವಿಲ್ಲ ಎಂಬ ಮಾತು ಕೂಡ ಅಲ್ಲಲ್ಲಿ ಕೇಳಿ ಬರುತ್ತಿದೆ.

ಆದರೆ ಇದು ಒಪ್ಪಲಾಗದ ಭಾವನೆ. ಏಕೆಂದರೆ ಶಿಕ್ಷಕರಾಗಲಿ ಅವರನ್ನು ಪ್ರತಿನಿಧಿಸುವವರಾಗಲಿ ಸಮಾಜದಲ್ಲಿ ಒಂದು ವಿಶಿಷ್ಟ ಗುಂಪೆಂದು ಗುರುತಿಸಲ್ಪಟ್ಟಿರುವುದರಿಂದ ಶಿಕ್ಷಕರ ಕ್ಷೇತ್ರಗಳ ಚುನಾವಣೆಗಳ ಬಗ್ಗೆ ಕೆಲ ನಿರೀಕ್ಷೆಗಳಿರುತ್ತವೆ.

ನಮ್ಮ ದೇಶದಲ್ಲಿ ಇಂದು ಪ್ರತಿ ಕ್ಷೇತ್ರದಲ್ಲೂ ರಾಜಕೀಯ ಮಿಳಿತವಾಗಿರುವುದನ್ನು ನಾವು ಒಪ್ಪಿಕೊಂಡು ಬಿಟ್ಟಿದ್ದರೂ ಶಿಕ್ಷಣ ಕ್ಷೇತ್ರ ಹಾಗೂ ಅದನ್ನು ಮುನ್ನಡೆಸಿಕೊಂಡು ಹೋಗುವಂಥ ವ್ಯಕ್ತಿ-ವ್ಯವಸ್ಥೆಗಳಿಗೆ ಸ್ವಯಂ-ವಿಧಿತ ಸಂಹಿತೆಯೊಂದರ ಅಗತ್ಯವಿದೆ.

ಶಿಕ್ಷಕರನ್ನೇಕೆ ಒಂದು ವಿಶಿಷ್ಟ ವರ್ಗವನ್ನಾಗಿ ಪರಿಗಣಿಸಬೇಕು ಎನ್ನುವುದಕ್ಕೆ ವೈಚಾರಿಕವಾದಂಥ ಆಧಾರಗಳನ್ನು ನೀಡಬಹುದು. ಸಮಾಜ ಆಲೋಚಿಸುವಂಥ ರೀತಿಯನ್ನು ಪ್ರಭಾವಿಸಬಹುದಾದಂಥ ಶಕ್ತಿ ಶಿಕ್ಷಕರಿಗಿರುವುದರಿಂದ ಅವರು ಜನಾಭಿಪ್ರಾಯ ಮೂಡಿಸುವವರ ಸಾಲಿಗೆ ಸೇರುತ್ತಾರೆ.

ಸಮಾಜದ ಓರೆ-ಕೋರೆಗಳನ್ನು ಗುರುತಿಸಿ, ಅವುಗಳನ್ನು ತಿದ್ದುವಂಥ ಜವಾಬ್ದಾರಿಯನ್ನು ಹೊರಬಲ್ಲಂಥ ಸಾಮರ್ಥ್ಯ ಕೂಡ ಶಿಕ್ಷಕರಿಗಿದೆ. ಆ ಕಾರಣಕ್ಕೇ ತಮ್ಮ ಅನುಕರಣೀಯ ಗುಣಗಳಿಂದ ಶಿಕ್ಷಕರು ಸಮಾಜಕ್ಕೆ ಮಾದರಿಗಳಾಗಬಹುದು.

ಬೇರೆ ಯಾವುದೇ ವೃತ್ತಿ ಗುಂಪಿಗೆ ಇಲ್ಲದಿರುವಂಥ ಒಂದು ಅನುಕೂಲವೂ ಶಿಕ್ಷಕರಿಗಿದೆ. ಅದೇನೆಂದರೆ ಅವರ ಮಾತುಗಳನ್ನಾಲಿಸುವ, ಬದುಕುವ ರೀತಿ-ನೀತಿಗಳನ್ನು ಗಮನಿಸುವ ಒಂದು  ಸಿದ್ಧ ಪ್ರೇಕ್ಷಕ  ವರ್ಗ ಅವರ ಮುಂದಿರುವುದು. ಇದರಿಂದ ಭವಿಷ್ಯದಲ್ಲಿ ಸಮಾಜವನ್ನು ನಡೆಸಲಿರುವ ಯುವ ಜನಾಂಗ ಚಿಂತಿಸುವ -ಬದುಕುವ ಪರಿಯನ್ನು ಪ್ರಭಾವಿಸುವಂಥ ಪ್ರಯತ್ನವನ್ನೂ ಅವರು ಮಾಡಬಹುದಾದ ಸಾಧ್ಯತೆಯೂ ಇದೆ.

ಆದರೆ ಈ ಎಲ್ಲ ಆದರ್ಶ ಸ್ಥಿತಿಗಳೂ ಸಾಕಾರವಾಗಬೇಕಾದರೆ ಶಿಕ್ಷಕರಾದವರೆಲ್ಲ ವೈಯಕ್ತಿಕ ಮತ್ತು ವೃತ್ತಿ ಬದುಕುಗಳ ನಡುವೆ ಒಂದು ಸ್ಪಷ್ಟಗೆರೆ ಎಳೆದು ವೃತ್ತಿಯ ಹಿತಾಸಕ್ತಿಗಳನ್ನು ಕಾಪಾಡುವಂಥ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಂಡಾಗ ಮಾತ್ರ.

ಇನ್ನು ಪ್ರತ್ಯೇಕ ಶಿಕ್ಷಕ ಕ್ಷೇತ್ರಗಳ ವಿಚಾರ. ಸಮಾಜದಲ್ಲಿ ನೂರಾರು ವೃತ್ತಿ ಗುಂಪುಗಳಿರುವಾಗ, ಶಿಕ್ಷಕರಿಗೇಕೆ ಪ್ರತ್ಯೇಕ ಪ್ರಾತಿನಿಧ್ಯ ಎನ್ನುವ ಪ್ರಶ್ನೆ ಸಹಜವಾಗಿಯೇ ಅನೇಕರನ್ನು ಭಾದಿಸುತ್ತದೆ. ಆದರೆ ರಾಜ್ಯವೊಂದರ ಶಾಸಕಾಂಗದ ಮೇಲ್ಮನೆಯಲ್ಲಿ ಒಂದು ಪ್ರತ್ಯೇಕ ಕ್ಷೇತ್ರವನ್ನು ಶಿಕ್ಷಕರಿಗಾಗಿಯೇ ಮೀಸಲಿಟ್ಟಿರುವುದಕ್ಕೆ ಕಾರಣಗಳಿವೆ.
 
ಸಮಾಜ ಚಲಿಸುವ ದಿಕ್ಕನ್ನು ವಿಶಿಷ್ಟವಾಗಿ ಪ್ರಭಾವಿಸಬಹುದಾದ ಜವಾಬ್ದಾರಿಯನ್ನು ಹೊತ್ತಿರುವ ಶಿಕ್ಷಕ ಸಮುದಾಯದ ಆಶೋತ್ತರಗಳು, ಕಾಳಜಿಗಳು, ಭಾವನೆಗಳು, ಸವಾಲುಗಳು ಹಾಗೂ ಸಮಸ್ಯೆಗಳಿಗೆ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯವಸ್ಥೆ ಸ್ಪಂದಿಸಬೇಕೆಂಬುದು ಒಂದು ಕಾರಣ.

ಶಿಕ್ಷಕರ ಧ್ವನಿಗಳು ಹಾಗೂ ಅನುಭವಗಳು ಅಭಿವೃದ್ಧಿಗೆ ಸಂಬಂಧಿಸಿದ ನೀತಿಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಬಿಂಬಿತವಾದರೆ ಸಮಾಜಕ್ಕೆ ಒಳಿತಾಗಬಹುದೆಂಬುದು ಮತ್ತೊಂದು ಆಶಯ. ಒಟ್ಟಿನಲ್ಲಿ ಶಿಕ್ಷಕ ವರ್ಗವನ್ನು ಈ ಸಮಾಜ ಒಂದು ಆದರ್ಶದ ವಲಯದಲ್ಲಿಟ್ಟು ನೋಡುವುದರಿಂದ ಅವರನ್ನು ಒಳಗೊಂಡಂಥ ಯಾವುದೇ ವಿಚಾರದ ಸುತ್ತ ಅನೇಕ ನಿರೀಕ್ಷೆಗಳಿರುತ್ತವೆ. ಶಿಕ್ಷಕ ಕ್ಷೇತ್ರಗಳ ಚುನಾವಣೆಗಳೂ ಇದಕ್ಕೆ ಹೊರತಾಗಿಲ್ಲ.

ಮೊನ್ನೆ ಮೊನ್ನೆ ನಡೆದ ಶಿಕ್ಷಕರ ಕ್ಷೇತ್ರಗಳ ಚುನಾವಣೆಗಳನ್ನು ಕಾಡಿದ ಅಪಸ್ವರಗಳು ಎಲ್ಲೋ ಒಂದೆಡೆ ಶಿಕ್ಷಣ ಕ್ಷೇತ್ರವೇ ತಾಳ ತಪ್ಪುತ್ತಿರುವ ಸ್ಪಷ್ಟ ಸಂದೇಶವನ್ನು ಸಾರುತ್ತಿವೆ. ಶಿಕ್ಷಕರ ಕ್ಷೇತ್ರದಂಥ ವಿಶಿಷ್ಟವಾದ ಮತ ಕ್ಷೇತ್ರಕ್ಕೆ ನಡೆಯುವ ಚುನಾವಣೆ ವ್ಯಕ್ತಿ ಪ್ರತಿಷ್ಠೆ ಅಥವಾ ಪಕ್ಷಗಳ ಬಲ ಪ್ರದರ್ಶನಕ್ಕಿಂತ ವಿಷಯಾಧಾರಿತ ಹೋರಾಟವಾಗಿ ರೂಪುಗೊಳ್ಳಬೇಕು.

ಇಲ್ಲಿ ಯಾರು ಗೆದ್ದರು, ಯಾರು ಸೋತರು ಎನ್ನುವ ಪ್ರಶ್ನೆಗಳಿಗಿಂತ ಏಕೆ ಗೆಲ್ಲಬೇಕು ಅಥವಾ  ಏಕೆ ಗೆಲ್ಲಲಾಗುವುದಿಲ್ಲ ಎನ್ನುವ ಪ್ರಶ್ನೆಗಳು ಮುಖ್ಯ. ಗೆಲುವು ಅಥವಾ ಸೋಲಿನ ಸಾಧ್ಯತೆಗಳು ಮತ್ತು ಸವಾಲುಗಳನ್ನು ಕುರಿತ ಚರ್ಚೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳ ಚೌಕಟ್ಟಿನಲ್ಲಿ ನಡೆಯದೆ, ಪಕ್ಷ ರಾಜಕಾರಣ, ಜಾತಿ ನಿಷ್ಠೆ, ವ್ಯಕ್ತಿ ನಿಷ್ಠೆ, ಅಧಿಕಾರದ ಬಳಕೆ ಅಥವಾ ದುರ್ಬಳಕೆಗಳಂಥ ವಿಷಯಗಳ ಹಿನ್ನೆಲೆಯಲ್ಲಿ ನಡೆಯುತ್ತಿರುವುದು ಭಯ ಹುಟ್ಟಿಸುತ್ತಿದೆ. ಭವಿಷ್ಯಕ್ಕೆ ಎಚ್ಚರಿಕೆಯ ಕರೆಗಂಟೆಗಳನ್ನು ಬಾರಿಸುತ್ತಿದೆ.

ಶಿಕ್ಷಕರ ಕ್ಷೇತ್ರಗಳ ಚುನಾವಣೆಗಳಿಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಹಾಗೂ ಅವರ ಮತಗಳ ನೆಲೆಗಳ ಜಾತಿಯಾಧಾರಿತ ವಿಶ್ಲೇಷಣೆ ಪ್ರಾರಂಭವಾದಾಗ ಅನೇಕರಿಗೆ ಇದರಿಂದ ಆಶ್ಚರ್ಯವೇನಾಗಲಿಲ್ಲ. ಏಕೆಂದರೆ ಇಂದು ಚುನಾವಣೆಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು, ಪ್ರಚಾರ, ಬೆಂಬಲ ಯಾಚನೆ, ಮತ ಚಲಾವಣೆ ಹಾಗೂ ಫಲಿತಾಂಶಗಳ ಪ್ರಕಟನೆಯವರೆಗೂ ಜಾತಿಯೇ ಒಂದು ಪ್ರಧಾನ ನಿರ್ಧಾರಕ ಅಂಶವಾಗುತ್ತದೆ.

ಆದರೆ ಯಾವುದೇ ಬಗೆಯ ಸೀಮಿತ ನಿಷ್ಠೆಗಳನ್ನು ಮೆಟ್ಟಿ ನಿಂತು ಸಮಾಜಕ್ಕೆ ಸಮಾನತೆಯ ಸಂದೇಶವನ್ನು ಬೀರಬೇಕಾದ ಶಿಕ್ಷಕ ವರ್ಗಕ್ಕೆ ಸಂಬಂಧಿಸಿದ ಚುನಾವಣೆಗಳಲ್ಲಿಯೂ ಜಾತಿಯ ಚರ್ಚೆ ಕೇಂದ್ರ ಸ್ಥಾನಕ್ಕೆ ಬಂದಾಗ ಏನೆಂದು ಹೇಳೋಣ?

ಯಾವ ಯಾವ ಕ್ಷೇತ್ರದಲ್ಲಿ ಯಾವ ಯಾವ ಜಾತಿಗೆ ಸೇರಿದ ಶಿಕ್ಷಕ ಮತದಾರರು ಎಷ್ಟೆಷ್ಟು ಸಂಖ್ಯೆಯಲ್ಲಿದ್ದಾರೆ, ಯಾವ ಅಭ್ಯರ್ಥಿಗೆ ಸ್ವಜಾತಿ ಬೆಂಬಲಿಗರಿಂದ ಎಷ್ಟು ಮತಗಳು ದೊರೆಯಬಹುದು ಅಥವಾ ದೊರೆಯದೇ ಹೋಗಬಹುದು, ಜಾತಿ ಆಧಾರದ ಮೇಲೆ ಹೇಗೆ ಮತಗಳು ಕ್ರೋಢೀಕೃತವಾಗಬಹುದು ಅಥವಾ ಚದರಿ ಹೋಗಬಹುದು - ಇವೇ ಮುಂತಾದ ಪ್ರಶ್ನೆಗಳ ಚೌಕಟ್ಟಿನಲ್ಲಿ ಲೆಕ್ಕಾಚಾರಗಳು ಆರಂಭವಾದಾಗ ಶಿಕ್ಷಕರ ಕ್ಷೇತ್ರದ ಮಾತಿರಲಿ, ಶಿಕ್ಷಣದ ಮೂಲ ಉದ್ದೇಶವೇನು ಎಂಬುದನ್ನು ಕುರಿತೇ ಗಂಭೀರ ಸ್ವರೂಪದ ಅನುಮಾನಗಳೇಳತೊಡಗಿದವು.

ಈ ಬಾರಿಯ ಶಿಕ್ಷಕರ ಕ್ಷೇತ್ರಗಳ ಚುನಾವಣೆಗಳನ್ನು ಸುತ್ತುವರೆದ ಮತ್ತೊಂದು ವಿವಾದವೆಂದರೆ ಕೆಲವೆಡೆಗಳಲ್ಲಿ ಅಭ್ಯರ್ಥಿಗಳು ಮತದಾರರಿಗೆ ಏರ್ಪಡಿಸಿದ ಭಾರಿ ಭೋಜನ ಕೂಟಗಳನ್ನು ಕುರಿತದ್ದು. ಇದಕ್ಕೆ ಸಂಬಂಧಿಸಿದ ವರದಿಗಳನ್ನು ವಿದ್ಯುನ್ಮಾನ ಮತ್ತು ಪತ್ರಿಕಾ ಮಾಧ್ಯಮಗಳೆರಡೂ ಬಿತ್ತರಿಸಿದವು. ಚುನಾವಣೆಯಲ್ಲಿ ಭಾಗವಹಿಸಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಅಭ್ಯರ್ಥಿಗಳು ಹಾಗೂ ಅಗೋಚರ ಧ್ವನಿಗಳಿಂದಲೂ ದೂರುಗಳು ಅಲ್ಲಲ್ಲಿ ಕೇಳಿ ಬಂದಿದ್ದವು.

ಕಳೆದ ಕೆಲ ವರುಷಗಳಿಂದ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ವಿಲಾಸಿ ಭೋಜನ ಕೂಟಗಳ ಆಮಿಷಗಳನ್ನೊಡ್ಡಿ ಮತದಾರರನ್ನು ಓಲೈಸುವ ತಂತ್ರಗಳನ್ನು ಕೆಲ ಸ್ಪರ್ಧಿಗಳು ಬಳಸುತ್ತಿರುವುದು ತಿಳಿದಿರುವ ವಿಚಾರವೇ. ಆದರೆ ಶಿಕ್ಷಕ ಕ್ಷೇತ್ರಗಳಿಗೆ ನಡೆದ ಚುನಾವಣೆಗಳ ಸಂದರ್ಭದಲ್ಲೂ ಕೇಳಿ ಬಂದ ಊಟೋಪಚಾರಗಳ ಮಾತುಗಳು ಪ್ರಜ್ಞಾವಂತರನ್ನು ಅಲುಗಾಡಿಸಿದ್ದವು.

ಇಂಥಹುದೊಂದು ಭೋಜನಕೂಟದ ಬಗೆ ಪ್ರಸ್ತಾಪ ಮಾಡಿದ ಪತ್ರಿಕೆಯೊಂದು ಸಾವಿರಾರು ಜನರಿಗೆ ಅಭ್ಯರ್ಥಿಯೊಬ್ಬರು ಏರ್ಪಡಿಸಿದ್ದ ಭೂರಿ ಭೋಜನ, ಶಿಕ್ಷಕರ ಸೋಗಿನಲ್ಲಿ ಈ ಕೂಟದಲ್ಲಿ ಪಾಲ್ಗೊಂಡ ನಕಲಿ ಮತದಾರರು, ಅಲ್ಲಿ ಇನಾಮಿನ ರೂಪದಲ್ಲಿ ನೀಡಲಾದ ಮೊಬೈಲ್ ದೂರವಾಣಿ ಸೆಟ್ಟುಗಳ ಬಗ್ಗೆ ವರದಿಯನ್ನು ಪ್ರಕಟಿಸಿತ್ತು.

ಇಂಥ ಆರೋಪಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸಿ, ಇದು ನಿಜವೇ ಆಗಿದ್ದಲ್ಲಿ ಚುನಾವಣಾ ಅಧಿಕಾರಿಗಳಾಗಲಿ, ಜಿಲ್ಲಾ ಆಡಳಿತವಾಗಲಿ ಕ್ರಮವನ್ನು ಕೈಗೊಳ್ಳದಿದ್ದುದ್ದಾಗಲಿ, ಅಥವಾ ನಿಜ ಪರಿಸ್ಥಿತಿಯನ್ನು ಸಾರ್ವಜನಿಕವಾಗಿ ತಿಳಿಸಲಾಗದಿದ್ದುದಾಗಲಿ ಆಶ್ಚರ್ಯಕರವಾದ ವಿಷಯ.

ಈಗಾಗಲೇ ಶಿಕ್ಷಕರ ಕ್ಷೇತ್ರಗಳಿಗೆ ನಡೆದ ಚುನಾವಣೆಗಳು, ಅದರ ಫಲಿತಾಂಶಗಳು ಹಾಗೂ ಅವುಗಳನ್ನು ಸುತ್ತುವರೆದ ಅನೇಕ ಬೆಳವಣಿಗೆಗಳು ನೇಪಥ್ಯಕ್ಕೆ ಸರಿಯುತ್ತಿವೆ. ಮತ್ತ್ಯಾವುದೋ ವಿವಾದಗಳು ಸಾರ್ವಜನಿಕ ಬೆತ್ತವನ್ನು ಆಕ್ರಮಿಸಿವೆ. ಆದರೆ ಈ ಚುನಾವಣೆಗಳು ನಮ್ಮ ಮುಂದೆ ತಂದಿಟ್ಟ ಮೂಲಭೂತ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರಗಳಿವೆಯೇ?

ಮೊದಲನೆಯದಾಗಿ ಶಿಕ್ಷಕರ ಕ್ಷೇತ್ರಗಳನ್ನು ವಿಧಾನ ಪರಿಷತ್ತಿನಲ್ಲಿ ಪ್ರತ್ಯೇಕ ಕ್ಷೇತ್ರಗಳನ್ನಾಗಿ ರೂಪಿಸಿದಾಗ ಗುರುತಿಸಿದ ಆಶೋತ್ತರಗಳು ಎಷ್ಟರ ಮಟ್ಟಿಗೆ ಇಂದು ಸಾಕಾರವಾಗುತ್ತಿವೆ? ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಯಾವ ಯಾವ ವಿಚಾರಗಳು ಈ ಕ್ಷೇತ್ರದ ಪ್ರತಿನಿಧಿಗಳ ಕಾರ್ಯಸೂಚಿಗಳು ಹಾಗೂ ಕಾರ್ಯ ವೈಖರಿಗಳಲ್ಲಿ ಬಿಂಬಿತವಾಗುತ್ತಿವೆ ಎಂಬುದು ಕೂಡ ಅಷ್ಟೇ ಮುಖ್ಯವಾದ ಪ್ರಶ್ನೆ.
 
ಇದುವರೆಗಿನ ಶಿಕ್ಷಕ ಕ್ಷೇತ್ರಗಳ ಸಾಧನೆಗಳ ಹಿನ್ನೆಲೆಯಲ್ಲಿ ಇದನ್ನು ಕುರಿತ ಸಾರ್ವಜನಿಕ ಸಂವಾದ ಅಗತ್ಯ. ಇಂಥ ಸಂವಾದವನ್ನು ಏರ್ಪಡಿಸುವ ಜವಾಬ್ದಾರಿ ಚುನಾಯಿತ ಪ್ರತಿನಿಧಿಗಳಷ್ಟೇ ಅಲ್ಲ. ಇಂತಹುದೊಂದು ಕಾರ್ಯಕ್ರಮ ನಡೆಯಲೇಬೇಕೆಂಬ ಒತ್ತಾಸೆ ಕೂಡ ಶಿಕ್ಷಕ ವಲಯದಿಂದಲೂ ಮೂಡಿ ಬರಬೇಕು.

ಶಿಕ್ಷಕರ ಕ್ಷೇತ್ರಗಳನ್ನು ಪ್ರತಿನಿಧಿಸುವವರು ನಿಜವಾದ ಅರ್ಥದಲ್ಲಿ ಶಿಕ್ಷಣ ವಲಯವನ್ನು ಕಾಡುತ್ತಿರುವ ಅನೇಕ ಸಮಕಾಲೀನ ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸುವುದಕ್ಕೆ ಸನ್ನದ್ಧರಾಗಬೇಕು. ಈ ಕ್ಷೇತ್ರದ ಮುಖ್ಯ ಉದ್ದೇಶವೇ ಶಿಕ್ಷಕರ ರಾಜಕೀಯ ಭಾಗವಹಿಸುವಿಕೆಗೆ ಅವಕಾಶವನ್ನು ಒದಗಿಸುವುದು. ಎಲ್ಲೋ ಒಂದೆಡೆ ಶಿಕ್ಷಕರು ಎಂದಾಕ್ಷಣ ಅವರ ಬೇಡಿಕೆಗಳು ವೇತನ ಪರಿಷ್ಕರಣೆ ಅಥವಾ ವಿವಿಧ ಬಗೆಗಳ ಭತ್ಯೆಗಳ ಹೆಚ್ಚಳಕ್ಕೆ ಪ್ರಧಾನವಾಗಿ ಸೀಮಿತವಾಗಿವೆ ಎಂದು ಅನೇಕರು ತಿಳಿದಿದ್ದಾರೆ. ಆದರೆ ಇದು ತಪ್ಪು ಕಲ್ಪನೆ.

ಶಿಕ್ಷಣ ಕ್ಷೇತ್ರಕ್ಕೆ ಇನ್ನೂ ವಿಶಾಲವಾದ ಗುರಿಯಿದೆ, ಜವಾಬ್ದಾರಿಯಿದೆ. ಸಮಾಜದ ಅಭಿವೃದ್ಧಿಗೆ ಪೂರಕವಾಗುವಂಥ ಪಠ್ಯಕ್ರಮದಿಂದ ಹಿಡಿದು, ಶಿಕ್ಷಣ ಸಂಸ್ಥೆಗಳ ಆಡಳಿತಾತ್ಮಕ ನಿರ್ವಹಣೆ, ನಾಯಕತ್ವ ಹಾಗೂ ಅವುಗಳ ಸಾಮಾಜಿಕ ಜವಾಬ್ದಾರಿಯ ಹಾಗೂ ಇನ್ನೂ ಅನೇಕ ಶೈಕ್ಷಣಿಕ ವಿಚಾರಗಳ ಬಗ್ಗೆ ಶಿಕ್ಷಕರ ಪ್ರತಿನಿಧಿಗಳು ಧ್ವನಿಯನ್ನು ಎತ್ತಬೇಕು. ಅವರೊಡನೆ ಶಿಕ್ಷಕ ಸಮುದಾಯ ಕೂಡ ಜಾಗೃತವಾಗಿ ಪ್ರಶ್ನೆಗಳನ್ನು ಕೇಳಬೇಕು. ಇಂಥ ಕಾಲ ಬರುವವರೆಗೆ ಶಿಕ್ಷಕ ಕ್ಷೇತ್ರಗಳಿಗೂ ಇತರ ಕ್ಷೇತ್ರಗಳಿಗೂ ವಿಶೇಷವಾದ ವ್ಯತ್ಯಾಸಗಳೇನೂ ಕಾಣುವುದಿಲ್ಲ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback.prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT