ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಯೋಮಿಯವರ ಪುಟಾಣಿ ಮೌಸ್

Last Updated 6 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಒಂದಾನೊಂದು ಕಾಲದಲ್ಲಿ ಗಣಕಗಳಲ್ಲಿ ಮೌಸ್ ಇರಲಿಲ್ಲ. ಗಣಕಕ್ಕೆ ಆದೇಶಗಳನ್ನು ಪಠ್ಯದ ಮೂಲಕವೇ ನೀಡಲಾಗುತ್ತಿತ್ತು. ಖಾಸಾ ಗಣಕ ಮತ್ತು ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಗಳು ಜನಪ್ರಿಯವಾದಂತೆ ಈ ಪಠ್ಯದ ಮೂಲಕ ಆದೇಶ ನೀಡುವ ಬದಲು ಮೌಸ್ ಬಳಕೆ ಪ್ರಾರಂಭವಾಯಿತು.

ಆರಂಭದ ದಿನಗಳಲ್ಲಿ ಈ ಸಾಧನವು ಗಣಕಕ್ಕೆ ಕೇಬಲ್ ಮೂಲಕ ಜೋಡಣೆಯಾಗುತ್ತಿತ್ತು. ಅದರಲ್ಲಿ ಒಂದು ದೊಡ್ಡ ತಿರುಗುವ ಗೋಲ ಇರುತ್ತಿತ್ತು. ಈ ಸಾಧನವನ್ನು ಎಡ–ಬಲ ಹಿಂದೆ–ಮುಂದೆ ಓಡಾಡಿಸಿದ್ದನ್ನು ಗಣಕ ಅರ್ಥ ಮಾಡಿಕೊಂಡು ಪರದೆಯ ಮೇಲೆ ಸೂಚಕವನ್ನು (cursor) ಓಡಾಡಿಸುತ್ತಿತ್ತು.

ಈ ಸಾಧನ ನೋಡಲು ಇಲಿಯಂತೆ, ಅಂದರೆ ಬಹುಮಟ್ಟಿಗೆ ಇಲಿಯ ದೇಹದ ಆಕಾರವಿದ್ದು, ಬಾಲದಂತೆ ಕೇಬಲ್ ಇದ್ದಿದ್ದುದರಿಂದ ಅದಕ್ಕೆ ಮೌಸ್ (ಇಲಿ!) ಎಂಬ ಹೆಸರು ಬಂತು.

ವರ್ಷಗಳು ಕಳೆದಂತೆ ಎಲ್ಲ ವಿದ್ಯುನ್ಮಾನ (ಎಲೆಕ್ಟ್ರಾನಿಕ್) ಸಾಧನಗಳಂತೆ ಈ ಮೌಸ್ ಕೂಡ ಸುಧಾರಣೆಯಾಯಿತು. ಮೊತ್ತಮೊದಲನೆಯದಾಗಿ ತಿರುಗುವ ದೊಡ್ಡ ಗೋಲ ಹೋಯಿತು. ಅದರ ಜಾಗದಲ್ಲಿ ಬೆಳಕು ಬಂತು. ಒಂದು ಕೆಂಪು ಬಣ್ಣದ ಚಿಕ್ಕ ದೀಪವಿದ್ದು ಅದರ ಪಕ್ಕದಲ್ಲೇ ಪ್ರತಿಫಲಿಸಿ ಬಂದ ಬೆಳಕನ್ನು ಸ್ವೀಕರಿಸುವ ಸಂವೇದಕ ಬಂತು.

ಮೌಸ್ ಓಡಾಡಿದಂತೆಲ್ಲ ಅದು ಯಾವ ಕಡೆ ಎಷ್ಟು ಓಡಾಡಿದೆ ಎಂದು ಈ ಬೆಳಕಿನ ಮೂಲಕ ಗಣಕ ಅರ್ಥ ಮಾಡಿಕೊಳ್ಳುವ ವ್ಯವಸ್ಥೆ ಬಂತು. ಇದು ಮತ್ತೆ ಸುಧಾರಣೆಯಾಗಿ ಈ ಕೆಂಪು ಬೆಳಕಿನ ಬದಲಿಗೆ ಕಣ್ಣಿಗೆ ಕಾಣದ ಲೇಸರ್ ಕಿರಣ ಬಂತು. ಈಗಿನ ಬಹುತೇಕ ಮೌಸ್‌ಗಳು ಇದನ್ನೇ ಬಳಸುತ್ತವೆ.

ಮೌಸ್ ಮತ್ತಷ್ಟು ಸುಧಾರಣೆಯಾಗಿ ನಿಸ್ತಂತು (wireless) ಮೌಸ್‌ಗಳು ಬಂದವು. ಈ ಮೌಸ್‌ಗಳಿಗೆ ಎರಡು ಅಂಗಗಳಿವೆ. ಮೊದಲನೆಯದಾಗಿ ಪ್ರಧಾನ ಅಂಗ ಅಂದರೆ ಮೌಸ್. ಈ ಮೌಸ್‌ಗೆ ಗಣಕಕ್ಕೆ ಜೋಡಿಸಲು ಕೇಬಲ್ ಇರುವುದಿಲ್ಲ. ಬದಲಿಗೆ ಗಣಕದ ಯುಎಸ್‌ಬಿ ಕಿಂಡಿಯಲ್ಲಿ ಜೋಡಿಸಲು ಒಂದು ಚಿಕ್ಕ ನಿಸ್ತಂತು ಪ್ರೇಷಕ (transmitter) ಇರುತ್ತದೆ.

ಈ ಪ್ರೇಷಕದ ಕಂಪನಾಂಕಕ್ಕೆ ಮೌಸ್ ಅನ್ನು ಸರಿಹೊಂದಿಸಿಡಲಾಗಿರುತ್ತದೆ. ಎಂದಿನಂತೆ ಮೌಸ್ ಒಳಗಡೆ ಲೇಸರ್ ಕಿರಣ, ಅದನ್ನು ಸ್ವೀಕರಿಸಿ ಅರ್ಥ ಮಾಡಿಕೊಳ್ಳಲು ಸಂವೇದಕ ಎಲ್ಲ ಇರುತ್ತವೆ. ಮೌಸ್ ಓಡಾಡಿದ್ದನ್ನು ಗಣಕ ಅರ್ಥ ಮಾಡಿಕೊಳ್ಳುತ್ತದೆ.

ಈಗ ನೋಡಿ ಎಂತಹ ವಿಪರ್ಯಾಸ ಅಲ್ಲವೇ? ನೋಡಲು ಇಲಿಯಂತೆ ಇದೆ, ಅದಕ್ಕೆ ಜೋಡಿಸಿದ ಕೇಬಲ್ ಅದರ ಬಾಲದಂತಿದೆ ಎಂದು ಅದಕ್ಕೆ ಮೌಸ್ (ಇಲಿ) ಎಂಬ ಹೆಸರು ಬಂತು. ಈಗ ಬಾಲವೇ (ಕೇಬಲ್) ಇಲ್ಲ. ಆದರೂ ನಾವು ಅದನ್ನು ಮೌಸ್ ಎಂದೇ ಕರೆಯುತ್ತೇವೆ!

ಈ ಸಂಚಿಕೆಯಲ್ಲಿ ನಾವು ಅಂತಹ ಒಂದು ಮೌಸ್‌ನ ಕಡೆಗೆ ನಮ್ಮ ವಿಮರ್ಶಾ ನೋಟವನ್ನು ಬೀರೋಣ. ಅದು ಶಿಯೋಮಿಯವರ ಎಕ್ಸ್‌ಎಂಎಸ್‌ಬಿ01ಎಂಡಬ್ಲ್ಯು ನಿಸ್ತಂತು ಮೌಸ್ (Xiaomi XMSB01MW Portable Wireless Mouse).

ಸಾಮಾನ್ಯವಾಗಿ ಬಹುತೇಕ ಮೌಸ್‌ಗಳು ನಮ್ಮ ಮುಷ್ಟಿ ಗಾತ್ರದ್ದಾಗಿದ್ದು ಮಧ್ಯದಲ್ಲಿ ಉಬ್ಬಿರುತ್ತವೆ. ಅಂದರೆ ನಾವು ಕೈಯನ್ನು ಮೌಸ್ ಮೇಲೆ ಇಟ್ಟು ಬಳಸುವಾಗ ಕೈ ಮುಷ್ಟಿ ಹಿಡಿದಂತೆ ಭಾಸವಾಗಿ ಕೈಗೆ ಕೆಲಸ ಸುಲಭವಾಗುತ್ತದೆ. ಆದರೆ ಈ ಮೌಸ್ ಹಾಗಿಲ್ಲ. ಇದು ಲ್ಯಾಪ್‌ಟಾಪ್‌ಗಳ ಜೊತೆ ಬಳಸಲು, ಅಂದರೆ ಅಲ್ಲಿಂದಿಲ್ಲಿಗೆ ತೆಗೆದುಕೊಂಡು ಹೋಗಲು ಸುಲಭವಾಗುವಂತೆ ತಯಾರಿಸಲ್ಪಟ್ಟದ್ದು. ಆದುದರಿಂದ ಇದರ ಗಾತ್ರ ಸ್ವಲ್ಪ ದೀರ್ಘವೃತ್ತಾಕಾರದಲ್ಲಿದ್ದು ಮಧ್ಯೆ ತುಂಬ ಉಬ್ಬಿಲ್ಲ.

ಇದರ ಮೇಲ್ಭಾಗ ಬಹುಮಟ್ಟಿಗೆ ಸಪಾಟಾಗಿಯೇ ಇದೆ. ಆದುದರಿಂದ ಇದನ್ನು ಕೈಯಲ್ಲಿ ಹಿಡಿದು ಬಳಸುವಾಗ ಅಷ್ಟು ಉತ್ತಮ ಅನ್ನಿಸುವುದಿಲ್ಲ. ಆದರೆ ಇದನ್ನು ಪ್ರಯಾಣ ಕಾಲದಲ್ಲಿ ಬಳಸಲು ಹೆಚ್ಚು ಅನುಕೂಲಕರವಾಗಿರಲಿ ಎಂಬಂತೆ ವಿನ್ಯಾಸ ಮಾಡಿದ್ದಾರೆ ಎಂದು ನನಗೆ ಅನ್ನಿಸುತ್ತದೆ. ಹಾಗೆಂದು ತುಂಬ ಹೊತ್ತು ಬಳಸಿದರೆ ಕೈ ಏನೂ ನೋಯುವುದಿಲ್ಲ. ದಿನಗಟ್ಟಲೆ ಇದನ್ನೇ ಬಳಸಿ ಅಭ್ಯಾಸವಾದರೆ ಮತ್ತೆ ಏನೂ ಅನ್ನಿಸುವುದೇ ಇಲ್ಲ.

ಇದರ ಪ್ರೇಷಕವನ್ನು ಯುಎಸ್‌ಬಿ ಕಿಂಡಿಗೆ ಜೋಡಿಸಬಹುದು. ಅದನ್ನು ಗಣಕ ಅಥವಾ ಲ್ಯಾಪ್‌ಟಾಪ್‌ನಿಂದ ಕಳಚಿದಾಗ ಇಟ್ಟುಕೊಳ್ಳಲು ಮೌಸ್‌ನ ಅಡಿಭಾಗದಲ್ಲಿ ಅದಕ್ಕೆ ಪ್ರತ್ಯೇಕ ಜಾಗ ನೀಡಿದ್ದಾರೆ. ಅದು ಬ್ಯಾಟರಿ ಕೊಠಡಿಯ ಒಳಗೆ ಇದೆ. ಇದು ಕೆಲಸ ಮಾಡಲು ಎಎಎ ಗಾತ್ರದ ಎರಡು ಬ್ಯಾಟರಿ ಸೆಲ್‌ಗಳು ಬೇಕು. ಮೌಸ್‌ನ ಕೆಳಭಾಗದಲ್ಲಿ ಆನ್/ಆಫ್‌ ಬಟನ್ ಇದೆ.

ಮೌಸ್ ಬಳಸದಿದ್ದಾಗ ಆಫ್ ಮಾಡಿದರೆ ಬ್ಯಾಟರಿ ಉಳಿತಾಯ ಮಾಡಬಹುದು. ಎಲ್ಲ ಮೌಸ್‌ಗಳಂತೆ ಇದರ ಮೇಲ್ಭಾಗದಲ್ಲಿ ಮಧ್ಯದಲ್ಲಿ ಒಂದು ತಿರುಗುವ ಚಕ್ರವಿದೆ. ಇದಕ್ಕೆ scroll wheel ಎನ್ನುತ್ತಾರೆ. ಈ ಚಕ್ರ ತಿರುಗಿಸಿದರೆ ಪುಟದಲ್ಲಿ ಮೇಲೆ ಕೆಳಗೆ ವಿಹಾರ ಮಾಡಬಹುದು. ಇದರ ಬಳಕೆ ಸಾಮಾನ್ಯವಾಗಿ ಅಂತರಜಾಲ ವೀಕ್ಷಣೆಯಲ್ಲಿ ಆಗುತ್ತದೆ. ಎಲ್ಲ ಮೌಸ್‌ಗಳಂತೆ ಇದರಲ್ಲೂ ಎರಡು ಕ್ಲಿಕ್ ಬಟನ್‌ಗಳಿವೆ.

ಈ ಮೌಸ್‌ ತುಂಬ ನಯವಾಗಿದೆ. ಬಳಸಲೂ ತುಂಬ ನಯವಾಗಿದೆ (smooth). ಎಡ ಬಲ ಕ್ಲಿಕ್ ಬಟನ್‌ಗಳು ಕೂಡ ತುಂಬ ಮೃದುವಾಗಿವೆ. ಮೌಸ್ ಓಡಾಡಿಸುವ, ಚಕ್ರ ತಿರುಗಿಸುವ, ಕ್ಲಿಕ್ ಮಾಡುವ ಅನುಭವ ಎಲ್ಲ ಉತ್ತಮವಾಗಿವೆ. ಒಟ್ಟಿನಲ್ಲಿ ಒಂದು ಮೇಲ್ದರ್ಜೆಯ ಮೌಸ್ ಬಳಸಿದ ಅನುಭವವಾಗುತ್ತದೆ. ಬ್ಯಾಟರಿ ಬಳಕೆ ಚೆನ್ನಾಗಿದೆ. ಹಲವು ತಿಂಗಳುಗಳ ಕಾಲ ಬಾಳಿಕೆ ಬರುತ್ತದೆ.

ಇದರ ಗಾತ್ರ 110.2 x 57.2 x 23.6 ಮಿ.ಮೀ. ತೂಕ 77.5 ಗ್ರಾಂ. ಬ್ಲೂಟೂತ್ ಆವೃತ್ತಿ 4.0. ಇದು 2.4 GHz ಕಂಪನಾಂಕದಲ್ಲಿ ಕೆಲಸ ಮಾಡುತ್ತದೆ. ಈ ಮೌಸ್ ಭಾರತದಲ್ಲಿ ಸುಲಭವಾಗಿ ಲಭ್ಯವಿಲ್ಲ, ಕೆಲವು ಜಾಲಮಳಿಗೆಗಳಲ್ಲಿ ಲಭ್ಯ. ಬೆಲೆ ಸುಮಾರು ₹1,800. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ತೃಪ್ತಿ ನೀಡುವ ಮೌಸ್ ಎನ್ನಬಹುದು.

*
ವಾರದ ಆ್ಯಪ್‌ – ಮೈಂಡ್ ಮ್ಯಾಪಿಂಗ್

ಮಾಹಿತಿಗಳನ್ನು ಮತ್ತು ಚಿಂತನಾ ಧಾಟಿಗಳನ್ನು ಚಿತ್ರಾತ್ಮಕವಾಗಿ ಸೂಚಿಸು ವುದಕ್ಕೆ mind mapping ಎನ್ನುತ್ತಾರೆ. ಇದರಲ್ಲಿ ವಿಷಯಗಳನ್ನು ಒಂದು ಕ್ರಮಾಗತ ಅಥವಾ ಶ್ರೇಣೀಕೃತವಾಗಿ ಬಿಂಬಿಸಲಾಗುತ್ತದೆ. ಇದನ್ನು ಗಣಕದಲ್ಲಿ ಮಾಡಲು ಹಲವು ತಂತ್ರಾಂಶಗಳು ಲಭ್ಯವಿವೆ.

ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ ಫೋನ್‌ನಲ್ಲೂ ಇಂತಹ ನಕ್ಷೆಗಳನ್ನು ತಯಾರಿಸಬೇಕೇ? ಹಾಗಿದ್ದರೆ ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ Mindly (mind mapping)) ಎಂದು ಹುಡುಕಿ ಅಥವಾ –bit.ly/gadgetloka294 ಜಾಲತಾಣಕ್ಕೆ ಭೇಟಿ ನೀಡಿ. ನಿಮ್ಮ ಆಲೋಚನೆಗಳನ್ನು ಒಂದು ಕ್ರಮದಲ್ಲಿ ಬಿಂಬಿಸಲು ಇದು ಸೂಕ್ತ. ತಯಾರಿಸಿದ ನಕ್ಷೆಯನ್ನು ಪಿಡಿಎಫ್ ಫೈಲಾಗಿ ಉಳಿಸಬಹುದು ಮತ್ತು ಹಂಚಬಹುದು. ಸಭೆಗಳಲ್ಲಿ ಚರ್ಚಿಸಿದ ವಿಷಯವನ್ನು ದಾಖಲಿಸಲು, ವಿಚಾರ ಸಂಕಿರಣದಲ್ಲಿ ಭಾಷಣ ನೀಡಲು, ಇತ್ಯಾದಿ ಸಂದರ್ಭಗಳಲ್ಲಿ ಇದನ್ನು ಬಳಸಬಹುದು.

*
ಗ್ಯಾಜೆಟ್‌ ಸುದ್ದಿ– ಮಡಚಬಲ್ಲ ಆಸನ
ಶೀರ್ಷಿಕೆ ನೋಡಿ ಇದರಲ್ಲೇನು ವಿಶೇಷ ಎಂದು ಆಲೋಚಿಸುತ್ತಿದ್ದೀರಾ? ಇದು ಎಲ್ಲ ಮಡಚಬಲ್ಲ ಕುರ್ಚಿಗಳಂತಲ್ಲ. ಯಾವುದಾದರೊಂದು ದೊಡ್ಡ ಸಭಾ ಕಾರ್ಯಕ್ರಮ ಅದೂ ಯಾವುದೋ ದೊಡ್ಡ ಮೈದಾನದಲ್ಲಿ ನಡೆಯುವಂಥದ್ದಕ್ಕೆ ಹೋಗಿದ್ದೀರಾ? ಅಥವಾ ಯಾವುದಾದರೂ ಕ್ರೀಡೆಯನ್ನು ನೋಡಲು ಹೋಗಿದ್ದೀರಾ? ತುಂಬ ಹೊತ್ತು ನಿಂತುಕೊಂಡು ಕೊನೆಗೆ ಸುಸ್ತಾದಾಗ ಪೃಷ್ಠಕ್ಕೆ ಆಧಾರ ನೀಡಿ ಕುಳಿತಂತೆ ಮಾಡಿದರೆ ಒಳ್ಳೆಯದು ಅನ್ನಿಸಿರಬಹುದಲ್ಲವೇ? ಈ ಆಸನ ಅದನ್ನೇ ಮಾಡುತ್ತದೆ. ಇದರ ಹೆಚ್ಚುಗಾರಿಕೆಯೆಂದರೆ ಇದನ್ನು ಟೆಲಿಸ್ಕೋಪಿನಂತೆ ಮಡಚಬಹುದು. ಹಾಗೆ ಮಡಚಿ ಒಂದು ಚಿಕ್ಕ ಫ್ಲಾಸ್ಕಿನಾಕಾರಾದ ಬಾಟಲಿಯೊಳಗೆ ಇಟ್ಟುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT