ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸನ ಯಶೋಗಾಥೆ

Last Updated 7 ಜನವರಿ 2012, 19:30 IST
ಅಕ್ಷರ ಗಾತ್ರ

ನಾನು ಮಲ್ಲೇಶ್ವರದಲ್ಲಿ ವಾಸವಿದ್ದಾಗ ಅಲ್ಲಿ ಲಕ್ಷ್ಮಮ್ಮ ಎಂಬ ಪೌರ ಕಾರ್ಮಿಕರೊಬ್ಬರು ಇದ್ದರು. ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತೆ ನಿಸ್ಪೃಹತೆಯಿಂದ ಇದ್ದಂಥ ಜೀವ ಅದು. ನಾನು ಚಿಕ್ಕ ವಯಸ್ಸಿನಿಂದ ಅವರನ್ನು ನೋಡಿದ್ದೆ. ಆಗ ಬೆಂಗಳೂರು ಅಷ್ಟಾಗಿ ಬೆಳೆದಿರಲಿಲ್ಲ. ಮನೆಯ ಶೌಚಾಲಯಗಳನ್ನು ಕೂಡ ಪೌರ ಕಾರ್ಮಿಕರೇ ಶುಚಿಗೊಳಿಸಿ ಹೋಗುತ್ತಿದ್ದರು. ನಾನು ಕಾಲೇಜು ಮೆಟ್ಟಿಲು ಹತ್ತಿದ್ದೆ. ಆಗೊಂದು ದಿನ ಲಕ್ಷ್ಮಮ್ಮ ನೀರು ಹಾಕುತ್ತಿದ್ದರೆ, ಪೊರಕೆಯಿಂದ ನನ್ನ ತಾಯಿಯೇ ಶೌಚಾಲಯವನ್ನು ಶುಚಿ ಮಾಡುತ್ತಿದ್ದರು.

ಅವರಲ್ಲವೇ ಕ್ಲೀನ್ ಮಾಡಬೇಕಾದದ್ದು ಎಂದು ನಾನು ಥಟ್ಟನೆ ಅಂದುಬಿಟ್ಟೆ. ನನ್ನ ತಾಯಿ, `ದರ್ಪ ಮಾಡಬೇಡ. ಇದು ನಮ್ಮ ಕಕ್ಕಸ್ಸು. ನಾವೇ ಕ್ಲೀನ್ ಮಾಡಿಕೊಳ್ಳಬೇಕು. ಆಕೆ ನೀರು ಹಾಕುತ್ತಿಲ್ಲವೇ? ಮಹಾತ್ಮ ಗಾಂಧೀಜಿ ಹೇಳಿದ್ದಾರೆ- ನಮ್ಮ ಕಕ್ಕಸ್ಸನ್ನು ನಾವೇ ಕ್ಲೀನ್ ಮಾಡಿಕೊಳ್ಳಬೇಕು~ ಎಂದು ತುಸು ರೇಗುವ ಧಾಟಿಯಲ್ಲೇ ನನಗೆ ಹೇಳಿದರು.

ಬಾಲ್ಯದಿಂದಲೂ ತಾಯಿಯ ಇಂಥ ನಿಲುವುಗಳನ್ನು ಕಂಡು ಬೆಳೆದವನು ನಾನು. ಅವರಿಗೆ ಜಾತೀಯತೆ ಎಂದರೆ ಆಗುತ್ತಿರಲಿಲ್ಲ. ಮನೆಯಲ್ಲಿ ಹಬ್ಬಕ್ಕೆಂದು ಉಂಡೆ, ಚಕ್ಕುಲಿ, ಸಿಹಿ ಮಾಡಿದರೆ ಒಂದಿಷ್ಟನ್ನು ಲಕ್ಷ್ಮಮ್ಮನಿಗೆಂದೇ ಇರಿಸುತ್ತಿದ್ದರು. ಅವರು ಬಂದಾಗ, ಮನೆಯೊಳಗೆ ಕರೆದು ಉಡಿಗೆ ಹಾಕುತ್ತಿದ್ದರು.

ನಮ್ಮ ಮನೆಯಲ್ಲೊಂದು ಕುಡಿಯುವ ನೀರಿನ ಬಾವಿ ಇತ್ತು. ಅಕ್ಕಪಕ್ಕದವರೂ ಅದರಲ್ಲಿ ನೀರು ಸೇದಿಕೊಳ್ಳುತ್ತಿದ್ದರು. ಅಲ್ಲಿದ್ದ ಕೆಲವು ಮಡಿವಂತ ಜನರು ಲಕ್ಷ್ಮಮ್ಮ ಆ ಬಾವಿಯಲ್ಲಿ ನೀರು ಸೇದಕೂಡದು ಎಂದು ಒತ್ತಡ ಹಾಕುತ್ತಿದ್ದರು. ನನ್ನ ತಾಯಿ ಹತ್ತಿರ ಬಂದು, `ಅವರಿಂದ ನೀರು ಸೇದಿಸಿದರೆ ಮೈಲಿಗೆಯಾಗುತ್ತದೆ~ ಎಂದು ದೂರುತ್ತಿದ್ದರು. ನನ್ನ ತಾಯಿ ಅವರ ಒತ್ತಡಕ್ಕೆ ಮಣಿಯಲಿಲ್ಲ. ಲಕ್ಷ್ಮಮ್ಮ ನೀರು ಸೇದಿದರೆ ಏನೂ ಗಂಟುಹೋಗುವುದಿಲ್ಲ ಎಂಬುದು ನನ್ನ ತಾಯಿಯ ವಾದ. ಲಕ್ಷ್ಮಮ್ಮ ಹಗ್ಗ ಮುಟ್ಟಿದ ನಂತರ ಆ ಮಡಿವಂತರು ಹಗ್ಗಕ್ಕೆ ಹೆಚ್ಚು ನೀರು ಸುರಿದು, ಆಮೇಲೆ ನೀರು ಸೇದುತ್ತಿದ್ದರು. ನನ್ನ ತಾಯಿ `ಹಗ್ಗ ನೆನೆಸಬೇಡಿ~ ಎಂದು ಬೇಕೆಂದೇ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಇನ್ನು ಕೆಲವರು ತಾವೇ ಪ್ರತ್ಯೇಕ ಹಗ್ಗ ಖರೀದಿಸಿ ತಂದು, ಲಕ್ಷ್ಮಮ್ಮ ಮುಟ್ಟಿದ ಹಗ್ಗವನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದೆಂಬ ಸಂಕಲ್ಪ ಮಾಡಿದ್ದರು. ಅಂಥವರನ್ನು ನನ್ನ ತಾಯಿ ವಿರೋಧಿಸುತ್ತಿದ್ದರು.

ನಗರ ಸಮಾಜದಲ್ಲಿ ಹೊಗೆಯಾಡುತ್ತಿದ್ದ ಅಸ್ಪೃಶ್ಯತೆಯ ನಡುವೆಯೂ ಲಕ್ಷ್ಮಮ್ಮ ನಮ್ಮ ಬೀದಿಯ ಕಾಯಂ ಸದಸ್ಯರೇ ಆಗಿದ್ದರು. ನಾನು ಸಬ್ ಇನ್ಸ್‌ಪೆಕ್ಟರ್ ಆದಾಗ ಖುಷಿ ಪಟ್ಟವರಲ್ಲಿ ಅವರೂ ಒಬ್ಬರು. ನನ್ನ ತಾಯಿ ಸಣ್ಣ ಪುಟ್ಟ ಘಟನೆಗಳಲ್ಲಿ ತಮ್ಮ ವರ್ತನೆಯಿಂದಲೇ ನಮಗೆ ಅಸ್ಪೃಶ್ಯತೆ ಸರಿಯಲ್ಲ ಎಂಬ ನೀತಿಪಾಠ ಹೇಳುತ್ತಿದ್ದರು. ಆರನೇ ತರಗತಿಯನ್ನಷ್ಟೇ ಓದಿದ್ದ ನನ್ನ ತಾಯಿಗೆ ಬದುಕಿನ ಕುರಿತು ಇದ್ದ ಆ ದೃಷ್ಟಿಕೋನ ಬೆರಗುಗೊಳಿಸುವಂಥದ್ದು. ನನ್ನ ತಂದೆಯಂತೂ ನಿರಕ್ಷರಕುಕ್ಷಿ. ಮಾನವೀಯತೆಯೇ ದೊಡ್ಡದು ಎಂಬುದನ್ನು ನನ್ನ ತಂದೆ-ತಾಯಿ ಇಬ್ಬರೂ ನನ್ನ ತಲೆಗೆ ತುಂಬಿದ್ದರು. ಹಾಗಾಗಿ ನನಗೂ ಯಾರೂ ಅಸ್ಪೃಶ್ಯರಲ್ಲ ಎಂಬ ಭಾವನೆ ಬೆಳೆಯಿತು.

ನಾನು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ಲಕ್ಷ್ಮಮ್ಮನವರ ತಮ್ಮ ಶ್ರೀನಿವಾಸ ಎಂಬುವನು ನನ್ನ ಬಳಿ ಬಂದ. ಸಣ್ಣಪುಟ್ಟ ಕೆಲಸಗಳಿಗೆಂದು ಅವನು ಆಗಾಗ ನನ್ನ ಬಳಿಗೆ ಬರುತ್ತಿದ್ದ. ಆಗ ಕಾರ್ಪೊರೇಷನ್‌ನವರು ಜಾಡಮಾಲಿ ಹುದ್ದೆಗೆ ಆಗ ಅರ್ಜಿ ಕರೆದಿದ್ದರು. ಈಗ ಪೌರ ಕಾರ್ಮಿಕರೆನ್ನುತ್ತೇವಲ್ಲ, ಅವರನ್ನು ಆಗ ಜಾಡಮಾಲಿಗಳೆಂದೇ ಕರೆಯುತ್ತಿದ್ದದ್ದು. ನಾನು ಅಲ್ಲಿನ ಅಧಿಕಾರಿಗಳಲ್ಲಿ ಯಾರಿಗಾದರೂ ಶಿಫಾರಸು ಮಾಡಿಸಿ ತನಗೊಂದು ಕೆಲಸ ಕೊಡಿಸಲಿ ಎಂಬುದು ಶ್ರೀನಿವಾಸನ ಬೇಡಿಕೆಯಾಗಿತ್ತು. ನನಗೆ ಅವನು ಜಾಡಮಾಲಿಯಾಗುವುದು ಇಷ್ಟವಿರಲಿಲ್ಲ. ನೀನು ಬೇರೆ ಏನಾದರೂ ಸಾಧಿಸಬೇಕು ಎಂದೆ. ಅದಕ್ಕವನು ನಗುತ್ತಾ, `ನಮಗೆ ಬೇರೆ ಏನು ಕೆಲಸ ಸಿಗುತ್ತೆ, ಅಣ್ಣ, ಹೆಂಗಾದ್ರೂ ಮಾಡಿ ಆ ಕೆಲಸ ಕೊಡಿಸಿ~ ಎಂದು ದುಂಬಾಲುಬಿದ್ದ.

ಆಗ ಶಾಂತಿನಗರದಲ್ಲಿ ಸಿ.ಕಣ್ಣನ್ ಶಾಸಕರಾಗಿದ್ದರು. ಕಾರ್ಮಿಕ ನಾಯಕರಾಗಿದ್ದ ಅವರು ಚಳವಳಿಯ ಹಿನ್ನೆಲೆಯಿದ್ದವರು. ಜೊತೆಗೆ ಜಾತಿ-ಧರ್ಮ ಮೀರಿ ಬೆಳೆದವರು. ಅವರು ಶ್ರೀನಿವಾಸನಿಗೆ ಏನಾದರೂ ಸಹಾಯ ಮಾಡುವ ಸಾಧ್ಯತೆ ಇದೆ ಎಂದು ನನಗೆ ಹೊಳೆಯಿತು.

ಆಗ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ (ಎಸ್.ಸಿ/ಎಸ್.ಟಿ) ಕಾರ್ಪೊರೇಷನ್‌ನಲ್ಲಿ ಆ ಜನಾಂಗದವರಿಗೆ ಟ್ಯಾಕ್ಸಿ ಕೊಳ್ಳಲು ಸಾಲ ಕೊಡುವ ವ್ಯವಸ್ಥೆ ಶುರುವಾಗಿತ್ತು. ಶ್ರೀನಿವಾಸನಿಗೆ ಆ ವಿಷಯ ಹೇಳಿ, ಅಲ್ಲಿಗೆ ಅರ್ಜಿ ಹಾಕುವಂತೆ ಸೂಚಿಸಿದೆ.

ಅವನಿಗೆ ಅರ್ಜಿ ಕೊಡಲು ಅಲ್ಲಿನ ಲಂಚಕೋರರು ಸುತ್ತಿಸಲಾರಂಭಿಸಿದರು. ಅದರಿಂದ ಸಹಜವಾಗಿಯೇ ಬೇಸರಗೊಂಡ ಶ್ರೀನಿವಾಸ ಅದರ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ಬಂದ. ನಾನು ಸಮಾಧಾನ ಹೇಳಿ ಕಣ್ಣನ್ ಬಳಿಗೆ ಹೋದೆ.

ಕಣ್ಣನ್ ಬಳಿಗೆ ಹೋದಾಗ, ನನ್ನದೇ ಯಾವುದೋ ಕೆಲಸಕ್ಕೆ ಹೋಗಿದ್ದೇನೆ ಎಂದುಕೊಂಡರು. ಶ್ರೀನಿವಾಸನಿಗೆ ಸಹಾಯ ಮಾಡುವ ನನ್ನ ಕೋರಿಕೆ ಕೇಳಿ ಅವರಿಗೂ ಇಷ್ಟವಾಯಿತು.

ಯಾರೋ ಒಬ್ಬನಿಗೆ ಸಹಾಯ ಮಾಡಲು ನಾನು ಅಷ್ಟು ದೂರ ಹೋಗಿದ್ದು ಅವರಿಗೆ ಅಚ್ಚರಿಯಾಯಿತು.

ಅಶ್ವತ್ಥ್ ನಾರಾಯಣ್ ಎಂಬುವರು ಆ ಎಸ್.ಸಿ, ಎಸ್.ಟಿ ಕಾರ್ಪೊರೇಷನ್‌ನ ಅಧ್ಯಕ್ಷರಾಗಿದ್ದರು. ಈಗ ಅವರು ಬಿಜೆಪಿ ಉಪಾಧ್ಯಕ್ಷರು. ಅವರಿಗೆ ಹೇಳಿ ಕಣ್ಣನ್ ಸಹಾಯ ಮಾಡಿದರು. ಶ್ರೀನಿವಾಸನಿಗೆ ಅಂಬಾಸಿಡರ್ ಟ್ಯಾಕ್ಸಿ ಕೊಳ್ಳಲು ಸಾಲ ಮಂಜೂರು ಮಾಡಲು ಸಂಬಂಧಪಟ್ಟವರು ಒಪ್ಪಿದರು. ಆದರೆ, ಆ ಸಾಲಕ್ಕೆ ಖಾತರಿಯಾಗಿ ಎನ್‌ಎಸ್‌ಸಿ ಸರ್ಟಿಫಿಕೇಟ್ ಕೊಡಬೇಕಿತ್ತು. 20 ಸಾವಿರ ರೂಪಾಯಿ ಮೌಲ್ಯದ ಸರ್ಟಿಫಿಕೇಟ್ ಕೊಳ್ಳಲು ಶ್ರೀನಿವಾಸನಲ್ಲಿ ಹಣವಿರಲಿಲ್ಲ. ಆಗ ಜಿ.ಬಿ.ನಟರಾಜ್, ಜಗನ್ನಾಥ್, ಕೃಷ್ಣರಾಜು (ವಾಣಿ) ಎಂಬ ಸ್ನೇಹಿತರು ಹಾಗೂ ನಾನು ತಲಾ ಐದೈದು ಸಾವಿರ ಹಾಕಿ ಎನ್.ಎಸ್.ಸಿ ಸರ್ಟಿಫಿಕೇಟ್ ಕೊಡಿಸಿದೆವು. ಶ್ರೀನಿವಾಸನ ಕೈಗೆ ಕೊನೆಗೂ ಅಂಬಾಸಿಡರ್ ಕಾರು ಬಂತು.

ಟ್ಯಾಕ್ಸಿ ಕೊಂಡ ಮೇಲೆ ಅವನು ಬಹಳ ಶ್ರದ್ಧೆಯಿಂದ ಜೀವನ ಸಾಗಿಸಿದ. ಐದು ವರ್ಷ ಕಷ್ಟಪಟ್ಟು ಸತತವಾಗಿ ದುಡಿದು ಸಾಲ ತೀರಿಸಿಬಿಟ್ಟ. ಸಾಲ ತೀರಿದ ಮೇಲೆ `ಎನ್.ಎಸ್.ಸಿ ಸರ್ಟಿಫಿಕೇಟ್ ಪಡೆಯಲು ನೀವೇ ಸಹಿ ಹಾಕಬೇಕಂತೆ, ಬನ್ನಿ~ ಎಂದು ಅವನು ಕರೆದ. ಅವನು ಪ್ರಾಮಾಣಿಕವಾಗಿ ಸಾಲ ಕಟ್ಟಿದ್ದ. ಅದನ್ನು ಅಧಿಕಾರಿಗಳೇ ಹೇಳಿದರು. ಅವನಿಗೆ ಮತ್ತೆ ಸಾಲ ಕೊಡಲು ಕೂಡ ಅವರು ಸಿದ್ಧರಿದ್ದರು. ಜಾಡಮಾಲಿಯಾಗಲು ಹೊರಟಿದ್ದ ಶ್ರೀನಿವಾಸ ಕಾರಿನ ಒಡೆಯನಾಗಿದ್ದ. ಆಮೇಲೆ ತನ್ನದೇ ಸ್ವಂತ ಮನೆ ಕಟ್ಟಿಕೊಂಡ.

`ಏನೋ ಮನೆ ಕಟ್ಟಿದ್ದೀಯಂತೆ. ಗೃಹಪ್ರವೇಶಕ್ಕೇ ಹೇಳಲಿಲ್ಲ~ ಎಂದು ನಾನು ಕೇಳಿದೆ. `ನಮ್ಮನೆಗೆ ಯಾರು ಬರ‌್ತಾರಣ್ಣ, ನಾವು ತೋಟಿಗಳು~ ಎಂದು ಅವನು ಸಂಕೋಚ, ಬೇಸರ ಬೆರೆತ ದನಿಯಲ್ಲಿ ಹೇಳಿದ. ನನಗೆ ತುಂಬಾ ನೋವಾಯಿತು. ನಾನು ಅವನ ಮನೆಯಲ್ಲಿ ಊಟ ಮಾಡಲೇಬೇಕೆಂದು ತೀರ್ಮಾನ ಮಾಡಿದೆ. ಕ್ರಾಂತಿಕಾರಿಗಳಂತೆ ಮಾತನಾಡುತ್ತಿದ್ದ ನನ್ನ ಕೆಲವು ಸ್ನೇಹಿತರು ಕೂಡ ಶ್ರೀನಿವಾಸನ ಮನೆಗೆ ಹೋಗಿ ಊಟ ಮಾಡಿದರೆ ಅವನ ಮರ್ಯಾದೆ ಹೆಚ್ಚಾಗುತ್ತದೆ ಎಂದು ದನಿಗೂಡಿಸಿದರು. ಒಂದು ಭಾನುವಾರ ಅವನ ಮನೆಗೆ ಹೋಗಲು ವೇಳೆ ಗೊತ್ತುಮಾಡಿದರು. ಶ್ರೀನಿವಾಸ ನಮ್ಮಿಷ್ಟದ ಹೋಟೆಲ್‌ನಿಂದ ಊಟ ತರಿಸುವುದಾಗಿ ಹೇಳಿದ. ಅದಕ್ಕೆ ನಾನು ಒಪ್ಪದೆ, ಮನೆಯಲ್ಲೇ ಅಡುಗೆ ಮಾಡಿಸುವಂತೆ ಹೇಳಿದೆ.

ಆ ದಿನ ಬಂತು. ಮಧ್ಯಾಹ್ನ ಎರಡು ಗಂಟೆಯಾಯಿತು. ನಾನಾಗ ಚಿಕ್ಕಪೇಟೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದೆ. ಊಟದ ಹೊತ್ತಿಗೆ ಬಿಡುವು ಮಾಡಿಕೊಂಡು ಶ್ರೀನಿವಾಸನ ಮನೆಗೆ ಹೋಗಬೇಕು ಎಂದುಕೊಂಡಿದ್ದೆ. ಕ್ರಾಂತಿಕಾರಿಗಳಂತೆ ಮಾತನಾಡುತ್ತಿದ್ದ ಗೆಳೆಯರೆಲ್ಲಾ ವೇಳೆಯಾದರೂ ಪತ್ತೆಯಿಲ್ಲ. ಕೆಲವರು ಮೊಬೈಲ್ ಸ್ವಿಚಾಫ್ ಮಾಡಿಕೊಂಡಿದ್ದರು. ಇನ್ನು ಕೆಲವರು ಕುಂಟುನೆಪ ಹೇಳಿದರು. ಅಷ್ಟರಲ್ಲಿ ಶ್ರೀನಿವಾಸ ಕಾರು ತಂದು, ನಮಗಾಗಿ ಕಾಯುತ್ತಾ ನಿಂತ. ನಾನು ಗೆಳೆಯರು ಕೈಕೊಟ್ಟ ವಿಷಯವನ್ನು ಮುಜುಗರದಿಂದಲೇ ಹೇಳಿದಾಗ, `ನಾನು ಹೇಳಲಿಲ್ವಾ ಸರ್, ಯಾರೂ ನಮ್ಮನೆಗೆ ಬರುವುದಿಲ್ಲ~ ಎಂದು ಮತ್ತೆ ಬೇಸರ ಪಟ್ಟುಕೊಂಡ. ಅವನನ್ನು ಸಮಾಧಾನಪಡಿಸಿ ನಾನು ಊಟಕ್ಕೆ ಹೋದೆ.

ಅವನ ಕುಟುಂಬದವರು ಮನೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದರು. ಶ್ರದ್ಧೆ, ಪ್ರೀತಿಯಿಂದ ಮಾಡಿದ್ದ ಅಡುಗೆಯನ್ನು ಬಡಿಸುವವರು ಕಣ್ಣಲ್ಲಿ ನೀರುಹಾಕಿದರು. ಅದು ಆನಂದಬಾಷ್ವವೋ, ನನ್ನ ಸ್ನೇಹಿತರು ಬರಲಿಲ್ಲವಲ್ಲಾ ಎಂಬ ಬೇಸರವೋ ನನಗೆ ಗೊತ್ತಾಗಲಿಲ್ಲ. ಹೊಟ್ಟೆ ತುಂಬಾ ಉಂಡ ಮೇಲೆ ಮನೆಯನ್ನು ಒಂದು ಸುತ್ತುಹಾಕಿದೆ. ಜೀಸಸ್ ಕ್ರೈಸ್ಟ್, ಮಾತೆ ಮೇರಿಯ ಫೋಟೋಗಳು ಎದ್ದುಕಂಡವು. ಒಳಗೆ ವೆಂಕಟೇಶ್ವರನ ಸಣ್ಣ ಫೋಟೋ ಇಟ್ಟು, ಯಾರಿಗೂ ಗೊತ್ತಾಗದಂತೆ ಪೂಜೆ ಮಾಡುತ್ತಿದ್ದರು. ಅದನ್ನು ಕುತೂಹಲದಿಂದ ನೋಡುತ್ತಿದ್ದ ನನ್ನ ಬಳಿಗೆ ಬಂದ ಶ್ರೀನಿವಾಸ, `ಇಲ್ಲಿನ ಜನ ನನ್ನನ್ನು ಕ್ರಿಶ್ಚಿಯನ್ ಎಂದುಕೊಂಡು ಗೌರವ ಕೊಡುತ್ತಿದ್ದಾರೆ. ಅದಕ್ಕೇ ಈ ಫೋಟೋಗಳು~ ಎಂದು ಹೇಳಿದಾಗ ಅಚ್ಚರಿಯಾಯಿತು.

ಮತಾಂತರಕ್ಕೆ ಕುಮ್ಮಕ್ಕು ಕೊಡುವ ಪ್ರಸಂಗಗಳನ್ನು ಹೇಗೆ ನಮ್ಮ ಸಮಾಜವೇ ಸೃಷ್ಟಿಸುತ್ತದೆ ಎಂದುಕೊಂಡು ಒಂದಿಷ್ಟು ಪ್ರಶ್ನೆಗಳನ್ನು ಮೂಡಿಸಿಕೊಂಡ ನಾನು ಮನೆಗೆ ಹೊರಟೆ. ಶ್ರೀನಿವಾಸನ ಮನೆಯವರಿಗೆ ಖುಷಿಯಾಗಿತ್ತು.

ಜಾಡಮಾಲಿಯಾಗಲು ಬಂದಿದ್ದ ಶ್ರೀನಿವಾಸ ನೆಮ್ಮದಿಯ ಬದುಕು ನಡೆಸುತ್ತಿದ್ದಾನಲ್ಲ ಎಂಬ ಕಾರಣಕ್ಕೆ ನನಗೆ ಸಂತೋಷವಾಯಿತು.

ಮುಂದಿನ ವಾರ: ಕೋಮುವಾದಿಗಳು ಹಳ್ಳಿ ಒಡೆಯುವ ಪರಿ. ಶಿವರಾಂ ಅವರ ಮೊಬೈಲ್ ಸಂಖ್ಯೆ
94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT