ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರು ವಹಿವಾಟು ಸಂಸ್ಕೃತಿ ಬಿತ್ತಿದ ‘ಬಿಜಿಎಸ್‌ಇ’

Last Updated 24 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು ಷೇರು ವಿನಿಮಯ ಕೇಂದ್ರವು (ಬಿಜಿಎಸ್‌ಇ) ಶೀಘ್ರ ದಲ್ಲಿಯೇ ತನ್ನ ಷೇರು ವಹಿವಾಟನ್ನು ನಿಲ್ಲಿಸು ವುದಾಗಿ ಪ್ರಕಟಿಸಿರುವುದು ನಾನೂ ಸೇರಿದಂತೆ ನಗರದ ಅನೇಕರಲ್ಲಿ ಸಮ್ಮಿಶ್ರ ಭಾವನೆ ಸ್ಫುರಿಸಲು ಕಾರಣವಾಗಿದೆ. ಈ ಷೇರು ವಿನಿಮಯ ಕೇಂದ್ರವು ಉಚ್ಛ್ರಾಯ ಸ್ಥಿತಿಯಲ್ಲಿದ್ದ ದಿನಗಳು, ವಹಿ ವಾಟಿನ ವೈಭವದ ದಿನಗಳು ನಗರದ ಹಲವಾರು ಉದ್ದಿಮೆ ಸಂಸ್ಥೆಗಳು ಮತ್ತು ಹೂಡಿಕೆದಾರರ ಪಾಲಿಗೆ ಇನ್ನು ಮುಂದೆ ಬರೀ ನೆನಪಾಗಿ ಉಳಿಯಲಿವೆ. ಹಿಂದೊಮ್ಮೆ ಭಾರೀ ಚಟುವಟಿಕೆಗಳಿಂದ  ಹೂಡಿಕೆದಾರರ ಪಾಲಿನ ಅಚ್ಚುಮೆಚ್ಚಿನ ಷೇರು ವಹಿವಾಟು ತಾಣವಾಗಿದ್ದ ‘ಬಿಜಿಎಸ್‌ಇ’, ಮಾರುಕಟ್ಟೆಯಲ್ಲಿನ ಅನೇಕ ಬದಲಾವಣೆಗಳ ಫಲವಾಗಿ ಬಾಗಿಲು ಮುಚ್ಚುವ ಹಂತಕ್ಕೆ ತಲುಪಿದೆ.

  ಯಾವುದೇ ಒಂದು ಮಹಾನಗರಕ್ಕೆ ಷೇರು ವಿನಿಮಯ ಕೇಂದ್ರವು ಒಂದು ಮಹತ್ವದ ಹೆಗ್ಗುರುತು ಆಗಿರುತ್ತದೆ. ಬಂಡವಾಳಶಾಹಿ ಅರ್ಥ ವ್ಯವಸ್ಥೆಯ ಹಣಕಾಸು ವಹಿವಾಟಿನ ಜೀವಂತಿಕೆಯ ಚಟುವಟಿಕೆಗಳಿಗೆ ಇದೊಂದು ಸಾಚಾ ತನದ ಸಂಕೇತವೂ ಆಗಿರುತ್ತದೆ. ಯಾವುದೇ ಒಂದು ದೇಶದ ಹಣಕಾಸಿನ ಆರೋಗ್ಯವು ಷೇರುಪೇಟೆಯ ವಹಿವಾಟಿನಲ್ಲಿ ತಕ್ಷಣಕ್ಕೆ ಪ್ರತಿಫಲನಗೊಳ್ಳುತ್ತದೆ. ಷೇರು ಸೂಚ್ಯಂಕದಲ್ಲಿನ ವಹಿವಾಟಿನ ಸಂಖ್ಯೆ ಮತ್ತು ಪ್ರಮಾಣವು ಆರ್ಥಿಕ ಚಟುವಟಿಕೆಗಳ ಮಾನದಂಡವಾಗಿಯೂ ಪರಿಗಣನೆಗೆ ಬರುತ್ತದೆ.

‘ಬಿಜಿಎಸ್‌ಇ’ಯೂ ಇದಕ್ಕೆ ಹೊರತಾಗಿ ರಲಿಲ್ಲ. ಇಷ್ಟು ವರ್ಷಗಳ ಅವಧಿಯಲ್ಲಿ ಇದು ತನ್ನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯೂ ಆಗಿತ್ತು. ಇದೆಲ್ಲವೂ 1963ರಲ್ಲಿಯೇ ಆರಂಭ ಗೊಂಡಿತ್ತು. ವಿವಿಧ ವಲಯಗಳ ಉದ್ಯಮಶೀಲ ಕೈಗಾರಿಕೋದ್ಯಮಿಗಳು ಒಟ್ಟುಗೂಡಿ, ಬೆಂಗಳೂರು ಷೇರು ವಿನಿಮಯ ಕೇಂದ್ರ ಸ್ಥಾಪನೆಗೆ ಮನಸ್ಸು ಮಾಡಿದ್ದರು. ಬೆಂಗಳೂರು ನಗರದ ವಾಸಿಗಳು ಮತ್ತು ಇತರರಲ್ಲಿ ಷೇರು ಮತ್ತು ಸಾಲಪತ್ರಗಳ ವಹಿವಾಟಿನ ಸಂಸ್ಕೃತಿ ಜನಪ್ರಿಯಗೊಳಿಸುವ ಉದ್ದೇಶದಿಂದ ಷೇರು ವಿನಿಮಯ ಕೇಂದ್ರ ಆರಂಭಿಸಲು ಮುಂದಾಗಿದ್ದರು.   ದಿ. ಲೋಕೂರ್ ಎಸ್. ವೆಂಕಾಜಿ ರಾವ್, ಎಂ. ಎಲ್. ಗೋಪಾಲ್ ಶೆಟ್ಟಿ, ಎಂ. ನಂಜಪ್ಪಯ್ಯ ಜಾಗೀರದಾರ್ ಮತ್ತಿತರ ದಿಗ್ಗಜರೆಲ್ಲ ಸೇರಿ ಕೊಂಡು ಕೆಂಪೇಗೌಡ ರಸ್ತೆಯ ಸಣ್ಣ ಆವರಣ ದಲ್ಲಿ ಷೇರು ವಿನಿಮಯ ಕೇಂದ್ರವನ್ನು ಅಸ್ತಿತ್ವಕ್ಕೆ ತಂದಿದ್ದರು.

ವಹಿವಾಟು ಮತ್ತು ಚಟುವಟಿಕೆಗಳು ಹೆಚ್ಚಿದಂತೆ ಕೇಂದ್ರವನ್ನು ಅದೇ ರಸ್ತೆಯ ಇನ್ನೊಂದು ವಿಶಾಲವಾದ ಆವರಣಕ್ಕೆ ಸ್ಥಳಾಂತರಿ ಸಲಾಗಿತ್ತು. ಷೇರು ವಹಿವಾಟಿನ ಬಗ್ಗೆ ಜನರಲ್ಲಿ, ಉದ್ಯಮಿಗಳಲ್ಲಿ ಹೆಚ್ಚಿನ ತಿಳಿವಳಿಕೆ ಇಲ್ಲದಿರು ವುದು ಮತ್ತು ಷೇರು ವಹಿವಾಟಿನಲ್ಲಿ  ಹಣ ಕಳೆದುಕೊಳ್ಳುವ ಭೀತಿ ಗರಿಷ್ಠಮಟ್ಟದಲ್ಲಿ ಇದ್ದ ಕಾರಣಕ್ಕೆ ಆರಂಭದ ವರ್ಷಗಳಲ್ಲಿ ಷೇರು ವಹಿವಾಟಿನ ಮೊತ್ತ ತುಂಬ ಕಡಿಮೆ ಇತ್ತು.

ಚೀನಾ ಅತಿಕ್ರಮಣ ಮತ್ತು ಅದರ ಬೆನ್ನ ಹಿಂದೆಯೇ 1965ರಲ್ಲಿ ನಡೆದ ಭಾರತ - ಚೀನಾ ಯುದ್ಧದ ಫಲವಾಗಿ ಷೇರು ಬೆಲೆಗಳು ಗಮನಾರ್ಹವಾಗಿ ಕುಸಿತ ಕಂಡವು. ಈ ಎಲ್ಲ ಅನಿರೀಕ್ಷಿತ  ಮತ್ತು ಅನಪೇಕ್ಷಿತ ಬೆಳವಣಿಗೆಗಳು, ಮುಂಬೈನಲ್ಲಿ ತೀವ್ರ ಏರಿಳಿತ ಕಂಡ ಷೇರು ಬೆಲೆಗಳು, ಗರಿಷ್ಠ ಮಟ್ಟದ ಸಟ್ಟಾ ವ್ಯಾಪಾರವು ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು. ಷೇರುಪೇಟೆಯ ಹೂಡಿಕೆದಾರರ ಆತ್ಮವಿಶ್ವಾಸಕ್ಕೂ ತೀವ್ರ ಧಕ್ಕೆ ಉಂಟಾಗಿತ್ತು. ಈ ಎಲ್ಲ ಏರಿಳಿತಗಳ ಮಧ್ಯೆ ‘ಬಿಜಿಎಸ್‌ಇ’ ಆರಂಭಿಕ ಅಡಚಣೆಗಳನ್ನು ನಿವಾರಿಸಿಕೊಳ್ಳುವಲ್ಲಿ ಸಫಲವಾಗಿತ್ತು. ಅಸ್ತಿತ್ವಕ್ಕೆ ಬಂದ 20 ವರ್ಷಗಳ ನಂತರ ಕೇಂದ್ರ ಸರ್ಕಾರವು ‘ಬಿಜಿಎಸ್‌ಇ’ಗೆ ಶಾಶ್ವತವಾಗಿ ಮಾನ್ಯತೆ ನೀಡಿತ್ತು.

ಆರಂಭದ ವರ್ಷಗಳಲ್ಲಿ ‘ಬಿಜಿಎಸ್‌ಇ’ ನೂರಾರು ಉದ್ದಿಮೆ ಸಂಸ್ಥೆಗಳ ಬಂಡವಾಳ ಅಗತ್ಯ ಒದಗಿಸಲು ನೆರವಾಗಿತ್ತು. ಷೇರು ಮತ್ತು ಸಾಲಪತ್ರಗಳ ಮೂಲಕ ಉದ್ದಿಮೆಗಳಿಗೆ ಅಗತ್ಯವಾದ ಸಂಪನ್ಮೂಲ ಸಂಗ್ರಹಿಸಲು ಸಹಾಯ ಹಸ್ತ ನೀಡಿತ್ತು. ಇದರಿಂದಾಗಿ ಸ್ಥಳೀಯ ಉದ್ಯಮ ವಹಿವಾಟು ತ್ವರಿತವಾಗಿ ಬೆಳವಣಿಗೆ ದಾಖಲಿಸಿತ್ತು. ಅವುಗಳ ಪೈಕಿ ಆಗಿನ ‘ಮೈಕೊ’ದ (ಈಗಿನ ಬಾಷ್) ಯಶೋಗಾಥೆ ಗಮನ ಸೆಳೆಯುತ್ತದೆ.

  1974- 75ರಲ್ಲಿ ‘ಮೈಕೊ’, ತಲಾ `100 ಮುಖಬೆಲೆಯ ಷೇರುಗಳನ್ನು `185ಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡಲು ಮುಂದಾಗಿತ್ತು. ಷೇರು ವಹಿವಾಟಿನ ಬಗ್ಗೆ ಜನರಲ್ಲಿ ಹೆಚ್ಚಿನ ತಿಳಿವಳಿಕೆ ಇಲ್ಲದ ಕಾರಣಕ್ಕೆ ಸಂಸ್ಥೆಯ ಕಾರ್ಮಿಕ ಸಂಘಟನೆ ಸದಸ್ಯರೂ ಈ ಪ್ರಕ್ರಿಯೆಯನ್ನು ತಪ್ಪಾಗಿ ಭಾವಿಸಿ ಷೇರು ಮಾರಾಟದ ಬಗ್ಗೆ ಅಪಪ್ರಚಾರ ಮಾಡಿದರು. ಸಂಸ್ಥೆಯು ತನ್ನ ಷೇರುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರಿಂದ ಅನೇಕರಿಗೆ ಷೇರುಗಳನ್ನು ಖರೀದಿಸಲು ಮನಸ್ಸಿದ್ದರೂ ಹಿಂದೇಟು ಹಾಕಿದರು.

ಯಾವುದೇ ಅರ್ಥವ್ಯವಸ್ಥೆಯಲ್ಲಿ ನಡೆಯುವಂತೆ, ತಮ್ಮ ವಹಿವಾಟು ಸ್ಥಾಪನೆ ಮತ್ತು ವಿಸ್ತರಣೆಗೆ ಷೇರುಪೇಟೆ ಮೂಲಕ ಬಂಡವಾಳ ಸಂಗ್ರಹಿಸುವ ಉದ್ದಿಮೆ ಸಂಸ್ಥೆಗಳಲ್ಲಿ ಕೆಲವು ಯಶಸ್ವಿಯಾದರೆ, ಇನ್ನೂ ಕೆಲವು ವಿಫಲಗೊಳ್ಳುವಂತೆ, ‘ಬಿಜಿಎಸ್‌ಇ’ ಮೂಲಕ ನೆರವು ಪಡೆದ ಅನೇಕ ಸಂಸ್ಥೆಗಳೂ ಏರಿಳಿತ ದಾಖಲಿಸಿದವು. ವಹಿವಾಟು ಹೆಚ್ಚಿಸಿಕೊಂಡ ಉದ್ದಿಮೆಗಳ ಪೈಕಿ ‘ಬಾಷ್’ ಕೂಡ ಒಂದಾಗಿದೆ.
ಕಾಲಾನುಕ್ರಮೇಣ ಅರ್ಥ ವ್ಯವಸ್ಥೆಯಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸುತ್ತಿದ್ದಂತೆ  ಷೇರುಪೇಟೆಯಲ್ಲಿಯೂ ಅದರ ಪ್ರಭಾವ ಪ್ರತಿಫಲನಗೊಳ್ಳತೊಡಗಿತು. ಬಂಡವಾಳ ಮಾರುಕಟ್ಟೆಯ ಮಹತ್ವ  ಮತ್ತು ಬಂಡವಾಳ ಸಂಗ್ರಹಕ್ಕೆ ಅಗತ್ಯವಾದ ಸೌಲಭ್ಯ ಕಲ್ಪಿಸಿಕೊಡುವ ಅಗತ್ಯವು ಕೇಂದ್ರ ಸರ್ಕಾರಕ್ಕೂ ಮನವರಿಕೆ ಯಾಗತೊಡಗಿತು. ಇದರ ಫಲವಾಗಿ ಬಂಡವಾಳ ಮಾರುಕಟ್ಟೆಯಲ್ಲಿ ಸುಧಾರಣೆ ಗಳನ್ನು ಜಾರಿಗೆ ತರಲು ಸರ್ಕಾರವು ಜಿ. ಎಸ್. ಪಟೇಲ್ ಸಮಿತಿ ರಚಿಸಿತು.

ಪಟೇಲ್ ಸಮಿತಿಯ ಶಿಫಾರಸುಗಳ ಅನ್ವಯ, ವಿವಿಧ ಕ್ಷೇತ್ರಗಳ ಪ್ರತಿಭಾನ್ವಿತ ವೃತ್ತಿ ನಿರತರಿಗೆ ಸದಸ್ಯತ್ವ ನೀಡುವ ಮೂಲಕ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಳ್ಳಲು ಕೇಂದ್ರ ಸರ್ಕಾರವು ‘ಬಿಜಿಎಸ್‌ಇ’ಗೆ ನಿರ್ದೇಶನ ನೀಡಿತು. ಸರ್ಕಾರದ ನಿರ್ದೇಶನವನ್ನು ಚಾಚೂತಪ್ಪದೇ ಪಾಲಿಸಿದ ಕೇಂದ್ರದ ನಿಲುವಿನಿಂದಾಗಿ ಹೊಸ ವಿಚಾರಧಾರೆಯ ಸದಸ್ಯರು ಸೇರ್ಪಡೆ ಗೊಂಡರು. ಅವರ ಆಸಕ್ತಿ ಫಲವಾಗಿ ವಹಿವಾಟಿ ನಲ್ಲಿ ಹೆಚ್ಚಿನ ವೈವಿಧ್ಯ  ಮತ್ತು ಚಟುವಟಿಕೆಗಳಲ್ಲಿ ಇನ್ನಷ್ಟು ಹುರುಪು ಕಂಡು ಬಂದಿತು.

ಪಟೇಲ್ ಸಮಿತಿಯ ಇತರ ಶಿಫಾರಸುಗಳ ಅನ್ವಯ ಭಾರತೀಯ ಷೇರು ನಿಯಂತ್ರಣ ಮಂಡಳಿ (ಸೆಬಿ) ಕೂಡ ಅಸ್ತಿತ್ವಕ್ಕೆ ಬಂದಿತು.
ಅಪಾರದರ್ಶಕ ವಹಿವಾಟು ನಿಲ್ಲಿಸಿ ಮುಕ್ತ ಮತ್ತು ಪಾರದರ್ಶಕ ವಹಿವಾಟು ನಡೆಸಲು ಮುಂಬೈ ಷೇರುಪೇಟೆ (ಬಿಎಸ್‌ಇ) ಹಿಂದೇಟು ಹಾಕಿದ್ದರಿಂದ ಕೇಂದ್ರ ಸರ್ಕಾರವು ಅದಕ್ಕೆ ಪ್ರತಿಸ್ಪರ್ಧಿಯಾಗಿ ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಅಸ್ತಿತ್ವಕ್ಕೆ ತಂದಿತು. ‘ಎನ್‌ಎಸ್‌ಇ’ಯು ಪೂರ್ಣ ಪ್ರಮಾಣದ ಸ್ವಯಂಚಾಲಿತ ಷೇರುಪೇಟೆಯಾಗಿ ಕಾರ್ಯಾರಂಭ ಮಾಡಿತು. ತನ್ನೆಲ್ಲ  ವಹಿವಾಟು ಮತ್ತು ಕಾರ್ಯಾಚರಣೆಯಲ್ಲಿ ಅತ್ಯಾಧುನಿಕ ತಂತ್ರ ಜ್ಞಾನ ಅಳವಡಿಸಿಕೊಂಡಿತು. ‘ಎನ್‌ಎಸ್‌ಇ’ಯ ಕಾರ್ಯವೈಖರಿಯನ್ನು ಬಂಡವಾಳ ಮಾರುಕಟ್ಟೆ ಯೂ ತುಂಬು ಹೃದಯದಿಂದ ಸ್ವಾಗತಿಸಿತು.

1990ರ ದಶಕದಲ್ಲಿ ‘ಎನ್‌ಎಸ್‌ಇ’ ಯಿಂದ ತನ್ನ ವಹಿವಾಟಿಗೆ ತೀವ್ರ ಸ್ಪರ್ಧೆ ಎದುರಾಗು ತ್ತಿರುವುದನ್ನು ‘ಬಿಜಿಎಸ್‌ಇ’ ಮನಗಂಡಿತು. ವೃತ್ತಿನಿರತ ಪರಿಣತ ಸದಸ್ಯರು ಕೇಂದ್ರದ ವಹಿವಾಟಿನಲ್ಲಿ ತುರ್ತಾಗಿ ಬದಲಾವಣೆ ತರಲು ಮುಂದಾದರು. 1993ರಲ್ಲಿ ಈ ಪರಿಣತರು ‘ಬಿಜಿಎಸ್‌ಇ’ಯ ಕಾರ್ಯವೈಖರಿಯಲ್ಲಿ ಆಮೂಲಾಗ್ರ ಬದಲಾವಣೆ ತಂದರು. 

‘ಸೆಬಿ’ ಮೊದಲ ಅಧ್ಯಕ್ಷ ಜಿ.ವಿ. ರಾಮಕೃಷ್ಣ ಅವರ ಬೆಂಬಲದಿಂದ ಅಗತ್ಯವಾದ ಸುಧಾರಣೆಗಳನ್ನು ಅಳವಡಿಸಿಕೊಂಡಿತು. ಹೊಸ ಸದಸ್ಯರ ಪ್ರವೇಶದಿಂದ ಹೆಚ್ಚುವರಿ ನಿಧಿಯೂ ಸಂಗ್ರಹಗೊಂಡಿತು. 1995ರಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.  1996ರಲ್ಲಿ ಪರದೆ ಆಧಾರಿತ (ಸ್ಕ್ರೀನ್ ಬೇಸ್ಡ್ ಟ್ರೇಡಿಂಗ್) ವಹಿವಾಟು ಆರಂಭಿಸುವ ಮೂಲಕ ಪ್ರಾದೇಶಿಕ ಷೇರು ವಿನಿಮಯ ಕೇಂದ್ರಗಳ ಪೈಕಿ ಇಂತಹ ಸೌಲಭ್ಯ ಅಳವಡಿಸಿಕೊಂಡ ಮೊದಲ ಕೇಂದ್ರ ಎನ್ನುವ ಹೆಗ್ಗಳಿಕೆಗೂ ಪಾತ್ರವಾಯಿತು.

ನಂತರದ ವರ್ಷಗಳಲ್ಲಿ ‘ಬಿಜಿಎಸ್‌ಇ’ಯ ಅವನತಿಯ ದಿನಗಳು ಆರಂಭಗೊಂಡವು. ಇತ್ತೀಚಿನ 15 ವರ್ಷಗಳಲ್ಲಿ ಈ ಪ್ರಕ್ರಿಯೆ ಇನ್ನಷ್ಟು ತೀವ್ರಗೊಂಡಿತು. ಇಲ್ಲಿ ತಂತ್ರಜ್ಞಾನವೂ ಪ್ರಮುಖ ಪಾತ್ರ ನಿರ್ವಹಿಸಿತು.

‘ಎನ್‌ಎಸ್‌ಇ’ ವಹಿವಾಟು ಹೆಚ್ಚುತ್ತಿದ್ದಂತೆ ಇತರ ಪ್ರಾದೇಶಿಕ ಷೇರು ವಿನಿಮಯ ಕೇಂದ್ರಗಳ ಮಹತ್ವ ಕ್ಷೀಣಿಸತೊಡಗಿತು. ಸ್ಥಳೀಯ ಉದ್ದಿಮೆ ಸಂಸ್ಥೆಗಳು ಪ್ರಾದೇಶಿಕ ಷೇರು ವಿನಿಮಯ ಕೇಂದ್ರಗಳಲ್ಲಿ ಕಡ್ಡಾಯವಾಗಿ ವಹಿವಾಟು ನಡೆಸುವ ನಿಯಮ ರದ್ದುಪಡಿಸಿದ ನಂತರ ‘ಬಿಜಿಸ್‌ಇ’ಯ ವಹಿವಾಟಿಗೆ ತೀವ್ರ ಪೆಟ್ಟು ಬಿದ್ದಿತು. ಈ ಎಲ್ಲ ಬದಲಾವಣೆಗಳು ‘ಬಿಜಿಎಸ್‌ಇ’ಯ ಹಣಕಾಸು ಪರಿಸ್ಥಿತಿ ಮೇಲೆ ಪ್ರತಿಕೂಲ ಪರಿಣಾಮ ಬೀರಿದವು.

ಬದಲಾವಣೆಯ ಪರಿಣಾಮವು ಅದೆಷ್ಟು ತೀವ್ರವಾಗಿತ್ತು ಎಂದರೆ, ಷೇರು ವಿನಿಮಯ ಕೇಂದ್ರವಾಗಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸುವ ನಿರ್ಧಾರ ಅನಿವಾರ್ಯ ವಾಯಿತು. ‘ಬಿಜಿಎಸ್‌ಇ’ಯ ಸದಸ್ಯನಾಗಿ ರುವ ನನಗೆ ವಾಸ್ತವ ಸಂಗತಿ ಅರಗಿಸಿಕೊಳ್ಳಲು ನಿಜವಾಗಿಯೂ ನೋವಾಗುತ್ತಿದೆ.

ಈ ಕಾಲಘಟ್ಟದಲ್ಲಿ ಹಿಂತಿರುಗಿ ನೋಡಿದಾಗ, ‘ಬಿಜಿಎಸ್‌ಇ’ ಇಷ್ಟು ವರ್ಷಗಳ ವರೆಗೆ ತನ್ನ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದೆ ಎನ್ನು ವುದರಲ್ಲಿ ಎರಡು ಮಾತಿಲ್ಲ. ನಗರವಾಸಿ ಗಳ ಮನಸ್ಸಿನಲ್ಲಿ ಷೇರು ವಹಿವಾಟಿನ ಸಂಸ್ಕೃತಿ ನೆಲೆ ಗೊಳಿಸಲು ಮತ್ತು ಬಂಡವಾಳ ಸಂಗ್ರಹಿಸಿ ವಹಿ ವಾಟು ವಿಸ್ತರಿಸಲು  ಸ್ಥಳೀಯ ಉದ್ಯಮಿಗಳಿಗೆ ನೆರವು ನೀಡಿರುವ ಬಗ್ಗೆ,  ರಾಜ್ಯದಲ್ಲಿ ಉದ್ಯಮ ಶೀಲತೆ ಬೆಳೆಸಿರುವುದರ  ಬಗ್ಗೆ ‘ಬಿಜಿಎಸ್‌ಇ’ಗೆ ಸಹಜವಾಗಿಯೇ ಹೆಮ್ಮೆ ಇದ್ದೇ ಇದೆ.
 -ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT