ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ತವರ ಹೊತ್ತಿಗೆ

Last Updated 25 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಮರಣಾನಂತರದ ಬದುಕಿಗೆ ನೆರವಾಗಲೆಂದು ಹೊತ್ತಿಗೆಗಳನ್ನು ಬರೆಸಿ ಸಮಾಧಿಯಲ್ಲಿ ಇರಿಸಿಕೊಳ್ಳುವ ಅಭ್ಯಾಸ, ಕ್ರಿಪೂ 2400ರಿಂದ ಕ್ರಿಪೂ 1ನೆಯ ಶತಮಾನದವರೆಗೆ ಈಜಿಪ್ಟಿನಲ್ಲಿತ್ತು. ಸತ್ತವರಿಗೆ ದಾರಿ ತೋರುವ ಬರವಣಿಗೆ ಈ `ಸತ್ತವರ ಹೊತ್ತಿಗೆ~ಗಳು.
ಮರಣಾನಂತರದ ಬದುಕಿಗೆ ನಡೆಸುವ ಯಾನ ಸುಗಮಗೊಳಿಸುವ ಮಂತ್ರೋಕ್ತಿ, ಬದುಕಿನ ನಂತರದ ದಾರಿಯನ್ನು ತೋರುವ, ಸತ್ತಮೇಲಿನ ಘಟನೆಗಳನ್ನು ಬಣ್ಣದಲ್ಲಿ ಚಿತ್ರಿಸಿದ, ಪುಟಪುಟದಲ್ಲೂ ಬರೆದ ಸತ್ತವರ ಹೆಸರು ಇರುವ ಪುಸ್ತಕಗಳು ಅವು. ಭಾಷೆಯಲ್ಲಿ ಕಟ್ಟಿಕೊಂಡ ಸ್ವರ್ಗ, ನರಕಗಳ ಕಲ್ಪನೆಯಿಂದ ಸತ್ತಮೇಲೂ ಬಿಡುಗಡೆಯಿಲ್ಲವೇ!

ಬದುಕು ಎಷ್ಟೇ ದುರ್ಭರವಾಗಿರಲಿ, ಅದು ಮುಂದುವರೆಯಬೇಕು ಅನ್ನುವ ಆಸೆ; ಮುಂದುವರೆಯುವುದಷ್ಟೇ ಅಲ್ಲ ಇದೇ ದೇಹ, ಇದೇ ಮನಸ್ಸು ಶಾಶ್ವತವಾಗಿರಬೇಕು ಅನ್ನುವ ಆಸೆ ಇದು. ಸತ್ತಮೇಲೆ ಮತ್ತೆ ಮುಂದುವರೆಯುವ ಬದುಕಿಗೆ ಎಚ್ಚರಗೊಂಡಾಗ ಈ ದೇಹ ಕೆಡದೆ ಉಳಿದಿರಲಿ ಎಂದು ಕಾಪಾಡಿಕೊಳ್ಳುವ ವಿಜ್ಞಾನವೂ ಅದಕ್ಕೆಂದೇ ಬೆಳೆಯಿತು. ಮಮ್ಮಿಗೊಳಿಸಿದ ದೇಹವನ್ನು ಕಾಪಾಡುವುದಕ್ಕೆಂದು ಪಿರಮಿಡ್ಡುಗಳು ಹುಟ್ಟಿಕೊಂಡವು. ಆ ಪಿರಮಿಡ್ ಗೋಡೆಗಳ ಮೇಲೆ, ಕಲ್ಲಿನ ಶವಪೆಟ್ಟಿಗೆ (ಸಾಕ್ರೊಫಾಗಸ್-ಮಾಂಸವನ್ನು ತಿನ್ನುವ ಕಲ್ಲು)ಗಳ ಮೇಲೆ ಮಂತ್ರೋಕ್ತಿಗಳ ಬರವಣಿಗೆ ನಡೆಯಿತು.

1881ರಲ್ಲಿ ಇವನ್ನು ಮೊದಲು ಪತ್ತೆ ಮಾಡಿದವನು ಗ್ಯಾಸ್ಟನ್ ಮಾಸ್ಪೆರೋ ಎಂಬಾತ. ಇಂಥ 759 ಮಂತ್ರೋಕ್ತಿಗಳು ಸಿಕ್ಕಿವೆ. ಫಾರೋಗಳು, ಅಂದರೆ ಈಜಿಪ್ಟಿನ ಅರಸರು, ಅಟ್ಟಣಿಗೆ ಏರಿ, ಅಥವ ದೋಣಿ ಹತ್ತಿ, ಇಲ್ಲವೆ ದೇವಪಕ್ಷಿಯ ರೆಕ್ಕೆಯ ಮೇಲೆ ಕೂತು ಮರಣಾನಂತರದ ಬದುಕಿಗೆ ಸುಗಮವಾಗಿ ಸಾಗಲು ನೆರವು ನೀಡಿರೆಂದು ದೇವತೆಗಳನ್ನು ಕೋರುವ, ಒತ್ತಾಯಿಸುವ ಮಾತುಗಳು ಕವಿತೆಯಂತೆಯೂ ಇವೆ.
 
ತೆತಿ ಎಂಬ ಅರಸನ ಪಿರಮಿಡ್‌ನಲ್ಲಿ ಸಿಕ್ಕ ಮಂತ್ರೋಕ್ತಿ 373ರ ಒಂದು ಭಾಗ ಹೀಗಿದೆ:
`ಓಹೋ! ಓಹೋ! ಎದ್ದೇಳು ತೆತಿ! ತಲೆ ಎತ್ತು, ಎಲುಬುಗಳ ಒಗ್ಗೂಡಿಸಿಕೊ; ಅಂಗಾಂಗ ನೇರ್ಪು ಮಾಡಿಕೊ, ಮೈಗೆ ಮತ್ತಿದ ಮಣ್ಣು ಕೊಡವಿಕೊ; ಹಳಸದ ರೊಟ್ಟಿ ಕಟ್ಟಿಕೊ, ಹುಳಿಯಾಗದ ಮದ್ಯ ಎತ್ತಿಕೊ; ಸಾಮಾನ್ಯರಿಗೆ ಪ್ರವೇಶವಿರದ ದ್ವಾರದ ಬಳಿ ನಿಂತುಕೋ.

ದ್ವಾರಪಾಲಕ ನಿನ್ನತ್ತ ಬರುತಾನೆ, ನಿನ್ನ ಕೈ ಹಿಡಿಯುತಾನೆ, ಸ್ವರ್ಗಕ್ಕೆ ಕರಕೊಂಡು ಹೋಗುತಾನೆ. ನೀನು ಬಂದೆಯೆಂದು ಅಪ್ಪ ಗೆಬ್ (ಭೂಮಿಯ ದೇವರು) ಖುಷಿಪಡುತಾನೆ, ಮುತ್ತಿಡುತಾನೆ, ಅಪ್ಪಿ ಮುದ್ದಾಡುತಾನೆ. ಆತ್ಮಗಳ ಮುಂದೆ ನಿನ್ನ ನಿಲ್ಲಿಸುತಾನೆ, ಅವಿನಾಶಿ ನಕ್ಷತ್ರಗಳು... ಕಣ್ಮರೆಯಾದವರು ನಿನ್ನ ಆರಾಧಿಸುವರು, ಹಿರಿಯರು ನಿನ್ನ ಸುತ್ತ ನೆರೆವರು, ಸೇವಕರು ಕಾದು ನಿಲುವರು, ನಿನಗಾಗಿ ಬಾರ್ಲಿ ಕಾಳು ಒಕ್ಕುವರು, ನಿನಗಾಗಿ ಗೋಧಿ ಕೊಯ್ಲು ಮಾಡುವರು. ನಿನ್ನ ಮಾಸಿಕ ಹಬ್ಬಗಳೂಟ ಅದರಿಂದಲೇ. ನಿನ್ನ ಪಾಕ್ಷಿಕ ಹಬ್ಬಗಳೂಟ ಅದರಿಂದಲೇ. ನಿನ್ನ ಪಿತ ಗೆಬ್‌ನ ಆಜ್ಞೆ, ಎದ್ದು ನಿಲ್ಲು ಓ ತೆತಿ, ನೀನು ಸಾಯುವುದಿಲ್ಲ~. 

ಸಾಯುವ ಭಯ, ಬದುಕಿನ ಮುಂದುವರಿಕೆಯ ಆಸೆ ರಾಜರಿಗೆ ಮಾತ್ರವೇನು? ಕ್ರಮೇಣ ಸಾಮಂತರಿಗೂ ಹಿರಿಯ ಅಧಿಕಾರಿಗಳಿಗೂ ಹೀಗೆ ಬರೆಸಿಕೊಳ್ಳುವ ಅವಕಾಶ ದೊರೆಯಿತು. ಆಮೇಲೆ ಸಾಮಾನ್ಯ ಜನ, ಅಂದರೆ ಉಳ್ಳವರು, ಪ್ಯಾಪರೆಸ್ ಕಾಗದ ಸುರುಳಿಗಳಲ್ಲಿ ಇಂಥ ಬರವಣಿಗೆಯ ಹೊತ್ತಿಗೆಗಳನ್ನು ಮಾಡಿಸಿಕೊಳ್ಳಲು ಶುರುಮಾಡಿದರು. ಕಾಗದದ ಸುರಳಿಗಳು ಪಿರಮಿಡ್ಡುಗಳಷ್ಟು ಖರ್ಚಿನ ಬಾಬತ್ತಲ್ಲವಾದರೂ ಬರವಣಿಗೆ ದುಬಾರಿಯದು.
 
ಒಂದು ಮರಣದ ಹೊತ್ತಿಗೆ ಸಿದ್ಧ ಮಾಡಿಸುವುದಕ್ಕೆ ಒಬ್ಬ ಆಳಿನ ಅರ್ಧ ವರ್ಷದ ಕೂಲಿಯಷ್ಟು ಖರ್ಚಾಗುತಿತ್ತಂತೆ. ಕ್ರಿಪೂ 1700ರಿಂದ ಕ್ರಿಪೂ 1ನೆಯ ಶತಮಾನದವರೆಗೆ ರಚನೆಗೊಂಡ ಇಂಥ ನೂರಾರು ಹೊತ್ತಿಗೆಗಳು, ನಲವತ್ತು ಮೀಟರ್‌ನಿಂದ ಹಿಡಿದು ಒಂದೇ ಮೀಟರ್ ಉದ್ದವಿರುವಂಥವು ಸಿಕ್ಕಿವೆ.

ಒಂದೊಂದರಲ್ಲೂ ಹದಿನಾಲ್ಕರಿಂದ ನಲವತ್ತೈದು ಸೆಂಟಿಮೀಟರ್ ಉದ್ದದ ಬಿಡಿ ಹಾಳೆಗಳ ಜೋಡಣೆ ಇದೆ. ಪಠ್ಯಭಾಗಕ್ಕೆ ಕಪ್ಪು, ಮಂತ್ರೋಕ್ತಿಗಳ ಆರಂಭಕ್ಕೆ, ಅಪಾಯ ಒಡ್ಡುವ ದೇವತೆಗಳ ಹೆಸರಿಗೆ ಕೆಂಪು ಮಸಿ ಬಳಸಿ ಬರೆದಿದ್ದಾರೆ. ವರ್ಣಚಿತ್ರಗಳಿವೆ. ಕೆಲವು ಹೊತ್ತಿಗೆಗಳು ಚಿನ್ನದ ಹಾಳೆಯ ಮೇಲೆ ಬರೆದಿರುವಂಥವು. ಇನ್ನು ಕೆಲವು ಒಂದು ಬದಿಯಲ್ಲಿ ಬೇರೆ ಏನೋ ಇರುವ ಬಳಸಿದ ಹಾಳೆಗಳು.

ಅಂದಹಾಗೆ ಸತ್ತವರ ಹೊತ್ತಿಗೆಗಳು ಗಂಡಸರಿಗೆ ಸಂಬಂಧಪಟ್ಟವೇ ಹೆಚ್ಚು, ಹೆಂಗಸರದ್ದು ಇಲ್ಲವೆಂದಲ್ಲ, ಕಡಮೆ. ಇವನ್ನು ಸತ್ತವರ ಹೊತ್ತಿಗೆ ಎಂದು ಕರೆದರೂ ಈಜಿಪ್ಟ್ ಭಾಷೆಯಲ್ಲಿ ಇಂಥ ಪುಸ್ತಕಗಳ ಶೀರ್ಷಿಕೆಯನ್ನು ಅಕ್ಷರಶಃ ಅನುವಾದಿಸಿದರೆ `ಹಗಲಿನಲ್ಲಿ ಮತ್ತೆ ಬರುವುದು~ ಎಂದಾಗುತ್ತದೆ.

ಈ ಹೊತ್ತಿಗೆಗಳಲ್ಲಿ ಏನಿದೆ? ಸಾಮಾನ್ಯವಾಗಿ ನಾಲ್ಕು ಭಾಗಗಳಿರುತ್ತವೆ. ಸತ್ತವರು ಹೇಗೆ ಸಮಾಧಿಯನ್ನು ಹೊಗುತ್ತಾರೆ, ಅಲ್ಲಿಂದ ಅಧೋಲೋಕಕ್ಕೆ ಹೇಗೆ ಕಾಲಿಡುತ್ತಾರೆ, ದೇಹಕ್ಕೆ ಚಲನೆ ಮತ್ತು ಮಾತು ಮತ್ತೆ ಹೇಗೆ ದೊರೆಯುತ್ತದೆ ಅನ್ನುವುದು ಮೊದಲ ಭಾಗ.

ದೇವತೆಗಳ, ಸ್ಥಳಗಳ ಸೃಷ್ಟಿಯ ಪುರಾಣ, ಸತ್ತವರಿಗೆ ಮತ್ತೆ ದೊರೆವ ಬದುಕು, ಉದಯ ಸೂರ್ಯನೊಡನೆ ಎಚ್ಚರಗೊಂಡು ಮರು ಹುಟ್ಟು ಪಡೆಯಲೆಂಬ ಪ್ರಾರ್ಥನೆ, ಸತ್ತವನು ಸೂರ್ಯದೋಣಿಯಲ್ಲಿ ಕೂತು ಆಕಾಶ ಯಾನ ಮಾಡುವ, ಸಂಜೆ ಅಧೋಲೋಕಕಿಳಿದು ಅಸಿರಿಸ್‌ನ ಎದುರು ಹಾಜರಾಗುವ ವರ್ಣನೆ ಮೂರನೆಯ ಭಾಗದಲ್ಲಿ. ಸತ್ತವನ ಸಮರ್ಥನೆ, ಆನಂತರ ಆತ ದೇವರುಗಳಲ್ಲೊಬ್ಬನಾಗಿ ಇಡೀ ಲೋಕದ ಮೇಲೆ ಅಧಿಕಾರ ಚಲಾಯಿಸುವನೆಂಬ ವಿವರ ಕೊನೆಯಲ್ಲಿ.

ಸಾವಿನ ನಂತರವೂ ಬದುಕು ಮುಂದುವರೆಯಬೇಕೆ ಎಂದು ನಿರ್ಧರಿಸಲು ಅಧೋಲೋಕದ ದೇವರು ಒಸಿರಿಸ್‌ನ ಸಮಕ್ಷಮದಲ್ಲಿ ಸತ್ತವನ ಹೃದಯವನ್ನು ತೂಗಿ ನೋಡುವ ಕೆಲಸ ನಡೆಯುತಿತ್ತು. ಹೃದಯವೇ ಎಲ್ಲ ವಿವೇಕ, ಬುದ್ಧಿವಂತಿಕೆಯ ಸ್ಥಾನ ಎಂದು ತಿಳಿದಿದ್ದರಿಂದ ಅಕಸ್ಮಾತ್ ಹೃದಯವೇನಾದರೂ ಮುರಿದರೆ ಅನ್ನುವ ಆತಂಕವಿದ್ದುದರಿಂದ ಇನ್ನೊಂದು ಹೆಚ್ಚುವರಿ ಹೃದಯವನ್ನು ಮಾಡಿಸಿ, ಅದು ದುಂಬಿಯಾಕಾರದ ಹಸಿರು ಕಲ್ಲಿನ ತಾಯತ, ಅದಕ್ಕೆ ಶಕ್ತ್ಯಾನುಸಾರ ಚಿನ್ನ, ರತ್ನಗಳನ್ನು ಅಳವಡಿಸಿ ಅದನ್ನೂ ಸಮಾಧಿಮಾಡುತಿದ್ದರಂತೆ. ಈಜಿಪ್ಟಿನ ಒಬ್ಬ ಲಿಪಿಕಾರ ಹ್ಯುನಿಫರ್ (ಕ್ರಿಪೂ 1275) ನ ಸಾವಿನ ಹೊತ್ತಿಗೆಯ ಇಂಥ ಚಿತ್ರ ಹೇಳುವ ಕಥೆಯನ್ನು ನೋಡೋಣ.

ಚಿತ್ರದ ಬಲ ತುದಿಯಲ್ಲಿರುವಾತ ಓಸಿರಿಸ್. ಅವನೆದುರು ಒಂದು ದೊಡ್ಡ ತಕ್ಕಡಿ. ತಕ್ಕಡಿಯಲ್ಲಿ ಇರುವ ತೂಕದ ಕಲ್ಲು ಹಕ್ಕಿಯ ಗರಿ (ಸತ್ಯ ಹಕ್ಕಿಗರಿಯಷ್ಟು ಹಗುರ! `ಲಘುವಾಗೆಲೆ ಮನ~ ಎಂದು ಕವಿ ಕಾತರಿಸಿದ್ದು ಸತ್ಯದ ಹಂಬಲದಿಂದಲೇ ಇರಬೇಕು). ಆ ಹಕ್ಕಿಯ ಗರಿ ಮ~ಅತ್ ಎಂಬ ದೇವತೆಯ ರೂಪ. ಅವಳು ಸತ್ಯ ಮತ್ತು ನ್ಯಾಯಗಳ ದೇವತೆ. ಅಲ್ಲೆ ಪಕ್ಕದಲ್ಲಿ ಇರುವ ಮನುಷ್ಯ ಶರೀರ ಮತ್ತು ನರಿ ತಲೆಯ ದೇವರು ಅನುಬಿಸ್.

ಆತ ಮಮ್ಮಿಗೊಳಿಸುವ (ಅವನ ಕೈಯಲ್ಲಿ ಎಣ್ಣೆಯ ಶೀಶೆ ಇದೆ), ಸತ್ತವರನ್ನು ಮುಂದಿನ ಬದುಕಿಗೆಂದು ಒಸಿರಿಸ್ ಸಾನ್ನಿಧ್ಯಕ್ಕೆ ಕರೆದೊಯ್ಯುವ ದೇವರು. ಸತ್ತವನ ಹೃದಯದ ತೂಕ ನೋಡುತಿದ್ದಾನೆ. ಹೃದಯದ ತೂಕ ಸತ್ಯದ ಗರಿಯ ತೂಕ ಸಮವಾದರೆ ಸತ್ತವನ ಬದುಕು ಒಳ್ಳೆಯದಿತ್ತೆಂದು ಅರ್ಥ. ಆತ `ಮಅಖೆರು~ ಅಥವ `ಸಮರ್ಥಿತ~, `ಸತ್ಯಧ್ವನಿಯುಳ್ಳವ~ ಆಗುತಿದ್ದ. ಪಾಪದ ಭಾರವಿದ್ದರೆ ಅಯೋಗ್ಯನೆಂದು ಅವನನ್ನು ತಿಂದು ಹಾಕಲು ಮೊಸಳೆ, ಸಿಂಹ, ಹಿಪೊಪಾಟಮಸ್ ಸಂಯೋಜನೆಯಂತಿರುವ ದೇವ ಅಮ್ಮಿಟ್ ಕಾದಿದ್ದಾನೆ.
 
ಸತ್ತಿರುವಾತ ಲಿಪಿಕಾರ, ಬರವಣಿಗೆಗೆ ಬಳಸುತಿದ್ದದ್ದು ಹಕ್ಕಿಗರಿ; ಈ ಚಿತ್ರವೇ ಸತ್ಯ, ಸಮರ್ಥನೆ, ನಡೆ-ನುಡಿಗಳ ರೂಪಕದಂತೆ ಇದೆಯಲ್ಲವೇ.ನಲವತ್ತೆರಡು ಪಾಪಗಳ ಒಂದು ಪಟ್ಟಿ ಇರುತಿತ್ತು. ಸತ್ತ ಮನುಷ್ಯ ಅವು ಒಂದೊಂದನ್ನೂ ಹೆಸರಿಸುತ್ತ ತಾನು ಈ ಪಾಪ ಮಾಡಿಲ್ಲ ಎಂದು ನಲವತ್ತೆರಡು ನ್ಯಾಯಾಧೀಶ ದೇವತೆಗಳ ಸಮ್ಮುಖದಲ್ಲಿ ಪ್ರಮಾಣ ಮಾಡಬೇಕು. ಚಿತ್ರದ ಮೇಲುಭಾಗದಲ್ಲಿದ್ದಾರೆ ಅವರು. ಅಂಥ ಹೊತ್ತಿನಲ್ಲಿ ಸತ್ತವನ ಹೃದಯ ಅವನ ಮಾತಿಗೆ ವಿರುದ್ಧವಾಗಿ ಸಾಕ್ಷಿ ನುಡಿದುಬಿಟ್ಟರೆ? ಹೃದಯ ವಿರುದ್ಧ ನಿಲುವು ತಳೆದು ತೊಂದರೆ ಮಾಡದಿರಲೆಂದು ಒಂದು ಮಂತ್ರವಿತ್ತು.

ಅದರ ಒಂದು ಭಾಗ:
 ಓ ತಾಯೀ, ಎದೆಯಮ್ಮೋ, ನನ್ನಮ್ಮೋ, ನನ್ನ ಬೇರೆ ಬೇರೆ ರೂಪಗಳ ತಾಯೀ, ನನ್ನ ವಿರುದ್ಧ ಸಾಕ್ಷಿ ಹೇಳಬೇಡ. ತಕ್ಕಡಿ ಹಿಡಿದ ದೇವರ ಎದುರು ನನ್ನ ವೈರಿಯಾಗಬೇಡ, ನೀನು ನನ್ನ ದೇಹದಲ್ಲಿದ್ದ `ಕ~ (ಜೀವಚೈತನ್ಯ), ನಾವೆಲ್ಲಿಂದ ಧಾವಿಸಿ ಬಂದೆವೋ ಅಲ್ಲಿಗೆ ಸಂತೋಷದಿಂದ ತೆರಳು, ನನ್ನ ಹೆಸರು ಮನುಷ್ಯರಾಗಲು ಕಾದಿರುವ ಸೇವಕರ ಸಂದಣಿಯಲ್ಲಿ ಮುಳುಗುವಂತೆ ಮಾಡಬೇಡ.

ದೇವರೆದುರು ನನ್ನ ಬಗ್ಗೆ ಸುಳ್ಳು ಹೇಳಬೇಡ, ದಯವಿಟ್ಟು ಇದನ್ನು ಮರೆಯಬೇಡ ಅಮ್ಮೋ. (ಮಂತ್ರೋಕ್ತಿ 30 ಬಿ).ಇದನ್ನು ಓದಿ ಆಶ್ಚರ್ಯ, ವಿಷಾದ, ಮರುಕ ಎಲ್ಲವೂ ಮನಸ್ಸಿನಲ್ಲಿ ಮೂಡುತ್ತವೆ. ಮನುಷ್ಯನೆಂದಮೇಲೆ ತಪ್ಪು ಮಾಡದೆ ಇರುತ್ತಾನೆಯೇ? ಒಡಲುಗೊಂಡವ ಹಸಿವ, ಒಡಲುಗೊಂಡವ ಹುಸಿವ, ಅಲ್ಲವೇ. ಮಾಡಿದ್ದು ತಪ್ಪು ಎಂದು ಗೊತ್ತಿದ್ದರೂ ಸಮರ್ಥಿಸಿಕೊಳ್ಳುವುದು ಇದೆಯಲ್ಲವೇ.
 
ನಾವು ಭಾಷೆಯನ್ನು ಹೆಚ್ಚಾಗಿ ಬಳಸುವುದೇ ಸ್ವಸಮರ್ಥನೆಗೆ. ಆತ್ಮಸಾಕ್ಷಿ ಅನ್ನುತ್ತೇವಲ್ಲ ಅದನ್ನು ಸುಮ್ಮನಿರಿಸುವ ಹಂಬಲವೂ ಈ ಮಾತಿನಲ್ಲಿ ಕೇಳುತ್ತದೆಯಲ್ಲವೇ? ಸಾಕ್ಷಿಯನ್ನು ಇಲ್ಲವಾಗಿಸಿಕೊಳ್ಳುವ ಪ್ರಯತ್ನ ಕೂಡ ಮನುಷ್ಯನಷ್ಟೇ ಹಳೆಯದೇನೋ. ಅದಕ್ಕೆಂದೇ ಆತ್ಮಸಾಕ್ಷಿಯನ್ನು ದಮನಿಸುವ ವ್ಯರ್ಥಪ್ರಯತ್ನ, (ಈ ಮಂತ್ರವೇ ಹೃದಯ ನಿಜ ಹೇಳುತ್ತದೆಂಬ ಅರಿವಿನಿಂದ ಮೂಡಿದ್ದಲ್ಲವೇ!) ವಿಷಾದವನ್ನೂ ಹುಟ್ಟಿಸುತ್ತದೆ.

ಸತ್ತವರ ಹೊತ್ತಿಗೆಯ ಪಠ್ಯ ಮತ್ತು ಚಿತ್ರಗಳು ಮಾಟವೂ ಹೌದು, ಧಾರ್ಮಿಕವೂ ಹೌದು. ದೇವರನ್ನು ಒಲಿಸುವದಕ್ಕೆ ಪ್ರಾರ್ಥನೆ, ನಿಯಂತ್ರಿಸುವುದಕ್ಕೆ ಮಾಟ. ಮಾತು-ಮಾಟ ಬೇರೆಯಲ್ಲ. ಮಾತಿನ ಮಂತ್ರಶಕ್ತಿ ಬರವಣಿಗೆಗೂ ವ್ಯಾಪಿಸಿತ್ತು. ಹೈರೊಗ್ಲಿಫ್ ಕಂಡುಹಿಡಿದವ ಥೋತ್ ದೇವರು; ಆ ಲಿಪಿಯಲ್ಲಿ ಬರೆದದ್ದಕ್ಕೂ ಮಾತಿಗೆ ಆಡಿದ ಮಂತ್ರದಷ್ಟೆ ಶಕ್ತಿ ಎಂದು ತಿಳಿದಿದ್ದರು.

ಸತ್ತವರು ಮತ್ತೆ ಬದುಕುವುದು ಅದು ನಿಜ ಜಗತ್ತಿಗೆ ಸಮಾನವಾದ, ಜೀವಂತ ಈಜಿಪ್ಟರ ಸಮದ್ಧಿಯೆಲ್ಲ ತುಂಬಿರುವ ಹಸಿರು ನಾಡಿನಲ್ಲಿ. ಅಲ್ಲಿ ಒಡೆಯ ಮಾಡಬೇಕಾದ ದೇಹ ಶ್ರಮವನ್ನು ಅವನ ಬದಲಾಗಿ ಮಾಡುವುದಕ್ಕಾಗಿ ಶವದೊಡನೆ ಅನೇಕ ಪುಟ್ಟ ಶ್ರಮಜೀವಿಗಳ ವಿಗ್ರಹ  `ಉಶ್‌ಬೆತಿ~ಗಳನ್ನು ಸಮಾಧಿಯೊಳಗೆ ಇಡುವುದಿತ್ತು. ಕ್ರಿಪೂ 1900ರ ಇಂಥ ಬೊಂಬೆಗಳನ್ನು ಕಂಡರೆ ಉಳ್ಳವರ ಇಲ್ಲದವರ ಅಸಮಾನತೆಯ ಪ್ರಾಚೀನ ರೂಪ ಕಂಡಂತಾಗುತ್ತದೆ.

ಇದೇ ಥರ ಗರುಡಪುರಾಣದಲ್ಲಿ ಬರುವ ಇಪ್ಪತ್ತೆಂಟು ಬಗೆಯ ಅಪರಾಧಗಳ, ಅವಕ್ಕೆ ನರಕದಲ್ಲಿ ದೊರೆಯುವ ಶಿಕ್ಷೆಯ ವಿವರಗಳನ್ನು ನೆನಪಿಗೆ ತಂದುಕೊಳ್ಳಬಹುದು. ಸಾವು ಸಮೀಪಿಸಿದಾಗ, ಸಾಯುವಾಗ, ಸತ್ತ ನಂತರ ನಡೆಯುವ ಪ್ರಜ್ಞೆಯ ಪರಿವರ್ತನೆಗಳನ್ನು ವಿವರಿಸುವ ಟಿಬೆಟನ್ ಬೌದ್ಧರ ಸತ್ತವರ ಹೊತ್ತಿಗೆಗಳನ್ನೂ ನೆನೆಯಬಹುದು. ವಿವಿಧ ಧರ್ಮಗಳ ಜನ್ಮಾಂತರದ ಕಲ್ಪನೆಗಳನ್ನು ನೆನೆಯಬಹುದು.
 
ಇಹದಂತೆಯೇ ಪರವನ್ನೂ ಭಾಷೆಯ ಮೂಲಕ ಕಲ್ಪಿಸಿಕೊಂಡು ಹಾಗೆ ಕಲ್ಪಿಸಿಕೊಂಡದ್ದೇ ಬದುಕನ್ನು ಆಳುತಿದ್ದ, ಆಳುತಿರುವ ಸಂಗತಿಯನ್ನು ಕಂಡು ಅಚ್ಚರಿಪಡಬಹುದು. ಕಲ್ಪನೆಯಲ್ಲಿ ಮುಳುಗಲು ಪುರುಸೊತ್ತಿಲ್ಲದ ದುಡಿಯುವ ಜನ ಕಟ್ಟಿಕೊಂಡ ಪಠ್ಯಗಳಲ್ಲಿ ಸ್ವರ್ಗ ನರಕ ಎರಡೂ ಗೈರುಹಾಜರಾಗಿರುವುದು ಯಾಕೆ ಎಂದೂ ಯೋಚಿಸಿ ನಿಮ್ಮದೇ ತೀರ್ಮಾನಗಳಿಗೆ ತಲುಪಬಹುದು. ಬದುಕಿರುವಾಗಲೂ ಸತ್ತಮೇಲೂ ಭಾಷೆಯಿಂದ ಬಿಡುಗಡೆಯಿಲ್ಲ.

olnswamy@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT