ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ತೇ ಹೋದ ಮೇಲೆ ಮುಗಿಯಿತಲ್ಲ? ಇನ್ನೆಲ್ಲಿಯ ನ್ಯಾಯ?

Last Updated 6 ಜುಲೈ 2013, 19:59 IST
ಅಕ್ಷರ ಗಾತ್ರ

ಮನಸ್ಸು ತಲ್ಲಣಗೊಂಡಿದೆ. ರಾತ್ರಿ ಹಗಲು ಅದೇ ಚಿತ್ರಗಳು ಕಾಡುತ್ತಿವೆ. ಎಲ್ಲ ಕ್ಷಣಾರ್ಧದಲ್ಲಿ ನಡೆದುಹೋಯಿತು. ಮೂವತ್ತು ಸೆಕೆಂಡು. ಅಷ್ಟೂ ಇರಲಾರದು. ಕಣ್ಣ ಮುಂದೆಯೇ ಸಾವು ಬಂದು ಅವರನ್ನು ಎಳೆದುಕೊಂಡು ಹೋಯಿತು. ಒಂದೇ ಕುಟುಂಬದ ಐವರು. ತಂದೆ, ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು. ಅಥವಾ ತಂದೆ, ಇಬ್ಬರು ಗಂಡು ಮಕ್ಕಳು ಮತ್ತು ಅವರ ಹೆಂಡಂದಿರು. ಅಥವಾ ತಂದೆ, ಇಬ್ಬರು ಹೆಣ್ಣು ಮಕ್ಕಳು ಮತ್ತು ಅವರ ಗಂಡಂದಿರು. ಸಾವಿನ ಮುಂದೆ ಸಂಬಂಧಕ್ಕೆ ಯಾವ ಲೆಕ್ಕ?

ಗೆಳತಿ ಆಶಾ ಕೃಷ್ಣಸ್ವಾಮಿ ಕಳಿಸಿದ ಒಂದು ವಿಡಿಯೊ ತುಣುಕು ಇದು. ಅವರೆಲ್ಲ ದೇವಭೂಮಿ ಎಂದೇ ಹೆಸರಾದ ಉತ್ತರಾಖಂಡಕ್ಕೆ ಹೋಗಿದ್ದರು. ಎಲ್ಲಿಯವರೋ ಏನೋ? ದೇವರ ದರ್ಶನ ಮುಗಿಸಿಕೊಂಡು ನದಿಯ ಆಚೆ ದಡಕ್ಕೆ ಹೋದರು. ಅಲ್ಲಿ ನೋಡುವಂಥದು ಏನಿತ್ತೋ ಗೊತ್ತಿಲ್ಲ. ಏನೂ ಇರಲಿಲ್ಲ ಎನಿಸುತ್ತದೆ. ಆಚೆ ಮತ್ತು ಈಚೆ ದಡದ ನಡುವೆ ನದಿಪಾತ್ರ ಅಷ್ಟು ದೊಡ್ಡದೇನೂ ಆಗಿರಲಿಲ್ಲ. ಆಚೆ ಕಡೆ ಹೋದವರು ಈಚೆ ಕಡೆ ಬರಬೇಕಿತ್ತು. ಹೋಗುವಾಗ ನದಿಯಲ್ಲಿ ಜಾಸ್ತಿ ನೀರೂ ಹರಿಯುತ್ತಿರಲಿಲ್ಲ. ಇದ್ದಕ್ಕಿದ್ದಂತೆ ನೀರಿನ ಹರಿವು ಜಾಸ್ತಿ ಆಗುತ್ತಿದೆ ಎನಿಸತೊಡಗಿತು. ಮುಂದೆ ಇದ್ದವರು ಓಡಿ ಈಚೆ ದಡ ಸೇರಿದರು. ಬೇಗ ಬೇಗ ಬನ್ನಿ ಎಂದು ಹಿಂದೆ ಇದ್ದವರಿಗೆ ಹೇಳತೊಡಗಿದರು. ಅವರು ಐವರು ನದಿಯ ನಡುಭಾಗದಲ್ಲಿ ಇದ್ದರು.

ಮೂವರು ಕೊಂಚ ಮುಂದೆ ಬಂದರು. ಒಬ್ಬ ಹುಡುಗಿ ಕೊಂಚ ಹಿಂದೆ ಬಿದ್ದಳು. ಆಕೆಯನ್ನು ಕರೆದುಕೊಂಡು ಬರಲು ಹಿರಿಯ ವ್ಯಕ್ತಿ ಎರಡು ಹೆಜ್ಜೆ ಹಿಂದೆ ಹೋದರು. ಅವರನ್ನು ಜತೆಗೂಡಬೇಕು ಎಂದು ಉಳಿದ ಮೂವರೂ ನಿಂತರು. ನೀರು ಪಾದದ ಬಳಿಗೆ ನುಗ್ಗಿಕೊಂಡು ಬಂದೇ ಬಿಟ್ಟಿತು. ಕೊಂಚ ಎತ್ತರದ ಕಲ್ಲಿನ ಮೇಲೆ ಮೂವರೂ ನಿಂತುಕೊಂಡರು. ನಿಂತುಕೊಂಡರೇ? ಹಾಗೆ ಅನಿಸುತ್ತಿರಲಿಲ್ಲ. ಕ್ಷಣ ಕ್ಷಣಕ್ಕೂ ನುಗ್ಗಿ ಬರುವ ನೀರಿಗೆ ಕರುಣೆ ಇರಲಿಲ್ಲ. ತೆರೆಗಳ ಎತ್ತರ ಹೆಚ್ಚುತ್ತಲೇ ಹೋಯಿತು. ಗೋಟುಕಲ್ಲಿನ ಮೇಲೆ ನಿಂತವರಿಗೆ ಕೆಳಗಿನ ನೆಲ ಕುಸಿಯುತ್ತಿದೆ ಎಂದು ಅನಿಸತೊಡಗಿತು. ಆಯ ತಪ್ಪುತ್ತಿದೆ ಎಂದು ಭಾಸವಾಗತೊಡಗಿತು. ಒಬ್ಬ ಯುವಕ ನೀರು ನುಗ್ಗಿ ಬರುವ ದಿಕ್ಕಿನ ಕಡೆಗೆ ನೋಡಿದ. ಸಾವಿನಂತೆ ನೀರಿನ ರಭಸ ಹೆಚ್ಚುತ್ತಲೇ ಇತ್ತು. ಎಲ್ಲ ಐದು ಜನ ಕೈ ಹಿಡಿದುಕೊಂಡರು, ಪರಸ್ಪರರಿಗೆ ಆಸರೆಯಾಗಲಿ ಎಂದೇ? ಅವರಿಗೆ ಗೊತ್ತಿತ್ತೇ, ಬದುಕಿದರೆ ಎಲ್ಲರೂ ಬದುಕಬಹುದು; ಇಲ್ಲವಾದರೆ ಎಲ್ಲರೂ ಕೊಚ್ಚಿಕೊಂಡು ಹೋಗಬಹುದು ಎಂದು. ಒಂದು ಕ್ಷಣ ಹಿಂದೆ ನೋಡಿದರು. ದೊಡ್ಡ ಪ್ರಪಾತ ಬಾಯಿ ತೆರೆದುಕೊಂಡು ನಿಂತಂತೆ ಇತ್ತು. ಎದುರು ಧುಮ್ಮಿಕ್ಕಿ ಬರುತ್ತಿದ್ದ ನೀರು. ಹಿಂದೆ ಆಳವಾದ ಕಂದರ. ನೀರಿನ ವೇಗಕ್ಕೆ ಹಿರಿಯನ ಕಾಲು ಜಾರಿತು. ಕೈ ಹಿಡಿದುಕೊಂಡಿದ್ದ ಎಲ್ಲ ಒಂದೇ ಸಾರಿ ಕೆಳಗೆ ಬಿದ್ದರು. `ಅಯ್ಯೋ' `ಅಯ್ಯಯ್ಯೋ' ಆಕ್ರಂದನ. ಹೆಣ್ಣು ಮಗಳದು. ಕಣ್ಣು ರೆಪ್ಪೆ ಮಿಟುಕಿಸುವುದರ ಒಳಗೆ ಎಲ್ಲ ಪ್ರಪಾತ ಸೇರಿಯಾಗಿತ್ತು. ಸಾವಿನ ಸನ್ನಿಧಿಯಲ್ಲಿ ಅವರು ಏನು ಅಂದುಕೊಂಡಿರಬಹುದು? ಅವರ ಇಡೀ ಬದುಕು ಅವರ ಮುಂದೆ ಬಂದು ನಿಂತಂತೆ ಅನಿಸಿತೇ? ಇನ್ನು ಎಲ್ಲ ಮುಗಿಯಿತು ಎಂದು ಅನಿಸಿತೇ? ಅಷ್ಟೆಲ್ಲ ಅಂದುಕೊಳ್ಳಲು ಸಾವು ಸಮಯವನ್ನಾದರೂ ಕೊಟ್ಟಿತ್ತೇ?

ಅವರ ದೇಹಗಳು ಸಿಕ್ಕವೇ? ಅವರು ಯಾರು? ಕಣ್ಣ ಮುಂದಿನ ಸಾವನ್ನು ನೋಡಿ, ಈಚೆ ದಡಕ್ಕೆ ಓಡಿ ಬಂದು ನಿಂತ ಸಂಬಂಧಿಕರಿಗೆ ಏನು ಅನಿಸಿರಬಹುದು? ಅವರ ಇಡೀ ಕುಟುಂಬ ನಿರ್ಗತಿಕ ಆಗಿರಬಹುದು. ದುಡಿಯುವ ಎಲ್ಲರೂ ಕೊಚ್ಚಿಕೊಂಡು ಹೋಗಿರಬಹುದು. ಹಿರಿಯನ ಹೆಂಡತಿ ಮಾತ್ರ ಈಚೆ ಉಳಿದಿರಬಹುದು. ಅವಳು ನಿಜವಾಗಿಯೂ ಬದುಕಿದಳೇ ? ಎಲ್ಲರನ್ನೂ ಕಳೆದುಕೊಂಡು ಬದುಕಿಯೂ ಸತ್ತಳೇ? ನೀರಿನಲ್ಲಿ ಕೊಚ್ಚಿಕೊಂಡು ಹೋದವರು ನನ್ನ ಸಂಬಂಧಿಕರೂ ಆಗಿರಬಹುದಿತ್ತೇ? ಅಥವಾ ನಾನೇ ನೀರಿನ ನಡುವೆ ನಿಂತಿರಬಹುದಿತ್ತೇ? ಕಣ್ಣ ಮುಂದೆಯೇ ಹೀಗೆ ಸಾವು ನಮ್ಮನ್ನೆಲ್ಲ ಕಬಳಿಸಿಕೊಂಡು ಹೋಗುವುದನ್ನು ನೋಡುತ್ತ ನಿಂತಿದ್ದ ನನ್ನ ಸಂಬಂಧಿಕರಿಗೆ ಏನು ಅನಿಸಬಹುದಿತ್ತು? ಸಾವು ಅಂದರೆ ಏನು? ದೇವರ ಸನ್ನಿಧಾನಕ್ಕೆ ಹೋದವರನ್ನೂ ಅದು ಏಕೆ ಬಿಡುವುದಿಲ್ಲ? ಪುಣ್ಯಭೂಮಿಯಲ್ಲಿ ಸಾವು ಬಂತು ಎಂದು ಸಮಾಧಾನ ಪಡಬಹುದೇ? ಸಾವು ಬರಲಿ ಎಂದು ಅಂದುಕೊಂಡು ಯಾರಾದರೂ ಪುಣ್ಯಕ್ಷೇತ್ರಕ್ಕೆ ಹೋಗುತ್ತಾರೆಯೇ? ನೀರಿನಲ್ಲಿ ಕೊಚ್ಚಿಕೊಂಡು ಹೋದವರಲ್ಲಿ ಹದಿ ಹರಯದವರು, ಯುವ ವಯಸ್ಸಿನವರು ಇದ್ದರು. ಅವರು ಬದುಕಿನ ಬಗ್ಗೆ ಏನೆಲ್ಲ ಕನಸು ಕಂಡಿದ್ದರೋ? ಅವರಿಗೆ ಪುಟ್ಟ ಪುಟ್ಟದಾದ ಮುದ್ದು ಮಕ್ಕಳು ಇದ್ದಿರಬಹುದೇ?

ಅವರು ದುಡುಕಿದರೇ? ಅಥವಾ ನಿಧಾನ ಮಾಡಿದರೇ? ಈಚೆ ಕಡೆ ಬೇಗ ಓಡಿ ಬಂದು ದಡ ಸೇರಿದವರ ಹಾಗೆ ಅವರೂ ಓಡಿ ಬರಬೇಕಿತ್ತೇ? ಅಥವಾ ಆಚೆ ಕಡೆಗೆ ಹೋಗಲೇಬಾರದಿತ್ತೇ? ಅಲ್ಲಿ ನೋಡುವಂಥದು ಏನೂ ಇರಲಿಲ್ಲವಲ್ಲ? ಕಾಡು ಬಿಟ್ಟು ಮತ್ತೆ ಅಲ್ಲಿ ಏನು ಇತ್ತು? ಅಥವಾ ಸಾವು ಅಲ್ಲಿಯವರೆಗೆ ಅವರನ್ನು ಕರೆದುಕೊಂಡು ಹೋಯಿತೇ? ಬೇಗ ಈಚೆ ಬಂದು ದಡಕ್ಕೆ ಸೇರದಂತೆ ತಡೆಯಿತೇ? ಸಾವು ನಮ್ಮನ್ನು ಎಲ್ಲಿಯವರೆಗೆ ಕರೆದುಕೊಂಡು ಹೋಗುತ್ತದೆ? ಅವರು ಈಚೆ ದಡದಲ್ಲಿಯೇ ಇದ್ದರೂ ಇನ್ನೊಂದು ಏನೋ ಅವಘಡ ಆಗಿ ಯಮರಾಯ ಅವರನ್ನು ತನ್ನ ಪಾದದ ಬಳಿ ಕರೆದುಕೊಂಡು ಬಿಡುತ್ತಿದ್ದನೆ? ಒಂದು ದಿನ ಎಲ್ಲರೂ ಸಾಯಬೇಕು? ಆದರೆ ಹೇಗೆ ಸಾಯಬೇಕು? ಹೀಗೂ ಸಾಯಬಹುದೇ? ಇಡೀ ಕುಟುಂಬವೇ ಸರ್ವನಾಶ ಆಗಿಬಿಡಬಹುದೇ? ದೇವರ ಕರುಣೆ ಎಂದರೆ ಏನು? ಅದು ಇರುತ್ತದೆಯೇ? ಎಲ್ಲ ಸಾವಿಗೂ ಒಂದು ಕಾರಣ ಇರುತ್ತದೆ. ದೇವರು ತನ್ನ ಮೈಮೇಲೆ ಹಾಕಿಕೊಳ್ಳುವುದಿಲ್ಲ. ಹಾಗಾದರೆ ಎಲ್ಲವೂ ವಿಧಿಲಿಖಿತವೇ? ಅದನ್ನು ತಪ್ಪಿಸಲು ಸಾಧ್ಯವಿಲ್ಲವೇ? ಅದನ್ನು ಯಾರು ಬರೆಯುತ್ತಾರೆ? ಮನುಷ್ಯ ಎಷ್ಟು ಅಸಹಾಯಕ!

ಒಂದು ದಿನ ಸಾವು ಖಚಿತ ಎಂದ ಮೇಲೆ ಬದುಕಿಗೆ ಅರ್ಥ ಇದೆಯೇ? ಸಾವು ಹೇಗಾದರೂ ಬಂದು ಬಿಡಬಹುದಲ್ಲ? ಹಾಗೆಂದು ಮನೆಯಲ್ಲಿ ಕುಳಿತುಕೊಳ್ಳಲು ಆಗುತ್ತದೆಯೇ? ಕಾಡಿಗೆ ಹೊರಟು ಬಿಡಲು ಆಗುತ್ತದೆಯೇ? ಇವರು ದೇವರ ಬಳಿಯೇ ಬಂದಿದ್ದರಲ್ಲ? ಏನು ಕೇಳಿಕೊಳ್ಳಲು ಬಂದಿದ್ದರೋ? ಆರೋಗ್ಯ ಕೇಳಲು ಬಂದಿದ್ದರೇ? ಸಂಪತ್ತು ಕೇಳಲು ಬಂದಿದ್ದರೇ? ಮಕ್ಕಳ ಮದುವೆ ಮಾಡಬೇಕು ಎಂದು ಹರಕೆ ಹೊತ್ತುಕೊಂಡಿದ್ದರೇ? ಎಷ್ಟೆಲ್ಲ ಕನಸುಗಳು. ದೇವರ ಬಳಿ ಹೋದ ಇವರು ಅಮಾಯಕರು ಅಲ್ಲವೇ? ಪ್ರತಿ ವರ್ಷ ಲಕ್ಷ ಲಕ್ಷ ಜನ ಅಲ್ಲಿಗೆ ಹೋಗುತ್ತಾರಂತಲ್ಲ. ಗುಡ್ಡ ಹತ್ತಿ ಇಳಿದು, ಹಳ್ಳ ಕೊಳ್ಳ ನಡೆದು, ಚಳಿಯಲ್ಲಿ ನಡುಗಿ, ಮಳೆಯಲ್ಲಿ ನೆಂದು, ಬಿಸಿಲಲ್ಲಿ ಬಳಲಿ ದೇವರ ಬಳಿ ಜನರು ಏಕೆ ಹೋಗುತ್ತಾರೆ? ದೇವರು ಅಂದರೆ ಏನು? ಅಲ್ಲಿ ಹೋಗಿ ಹರಕೆ ಹೊತ್ತರೆ ಒಳ್ಳೆಯದು ಆಗುತ್ತದೆಯೇ? ಆಗುತ್ತದೆ ಎಂದು ನಾವು ನಂಬಿಕೊಂಡು ಬಂದಿದ್ದೇವೆ; ಬದುಕಿದ್ದೇವೆ. ಬರುವಾಗ ಸಾವು ಎದುರಾದರೇ? ದೇವಸ್ಥಾನಕ್ಕೆ, ಪುಣ್ಯ ಕ್ಷೇತ್ರಕ್ಕೆ ಹೋಗಿ ಬರುವಾಗ ಎಷ್ಟು ಜನ ಸತ್ತಿಲ್ಲ? ಅದು ಅವರ ಕರ್ಮ ಎಂದು ಅಂದುಬಿಡಬಹುದೇ? ಕಳ್ಳ ಕಾಕರು, ಪುಂಡು ಪೋಕರಿಗಳೂ ದೇವರ ಬಳಿ ಹೋಗುತ್ತಾರೆ. ಅವರಿಗೆ ಏನಾದರೂ ಆಗಬೇಕಿತ್ತೇ? ಅವರಿಗೆ ಏನಾದರೂ ಆಗಬೇಕು ಎಂದು ಬಯಸುವುದು ಸರಿಯೇ? ಹಾಗಾದರೆ ಪಾಪಿ ಚಿರಾಯು ಎಂದು ಏಕೆ ಅನ್ನುತ್ತಾರೆ? ದೇವರಿಗೆ ಒಳ್ಳೆಯವರ ಮೇಲೆ ಪ್ರೀತಿ ಹೆಚ್ಚು ಎಂದೂ ಅನ್ನುತ್ತಾರಲ್ಲ? ಏಕೆ? ಇವರು ಮನೆ ಬಿಡುವಾಗಲೇ ಅಪಶಕುನ ಆಗಿತ್ತೇ? ಎಡಗಣ್ಣು ಹಾರಿತ್ತೇ? ಈ ಸಾರಿ ಯಾತ್ರೆಗೆ ಹೋಗುವುದು ಬೇಡ ಎಂದು ಮನೆಯಲ್ಲಿಯೇ ಇದ್ದು ಬಿಟ್ಟಿದ್ದರೆ ಅವರು ಬದುಕಿ ಉಳಿಯಬಹುದಿತ್ತೇ?

ಸಾಯಬೇಕು ಎಂದು ಯಾರು ಬಯಸುತ್ತಾರೆ? ಎಲ್ಲರಿಗೂ ಬದುಕಬೇಕು ಎಂದೇ ಆಸೆ ಇರುತ್ತದೆ. ಬದುಕಬೇಕು ಎಂಬುದು ಒಂದು ಆದಿಮ ಬಯಕೆ. ಅದಕ್ಕಾಗಿಯೇ ಇಡೀ ಜೀವನ ಹೋರಾಟ. ತಾಯಿಯ ಹೊಟ್ಟೆಯಲ್ಲಿ ಹುಟ್ಟಿ ನೆಲಕ್ಕೆ ಬಿದ್ದ ದಿನದಾಗಿನಿಂದ. ಆದರೆ ಒಂದು ದಿನ ಸಾಯಲೇಬೇಕಲ್ಲ. ತಾಯಿಯ ಗರ್ಭದಿಂದ ನೆಲಕ್ಕೆ ಬಿದ್ದ ಮಗುವಿನ ಹೊಕ್ಕಳ ಬಳ್ಳಿಯಿಂದ ರಕ್ತ ಹರಿದು ಹೋಗಿ ಮೊದಲ ದಿನವೇ ಸತ್ತ ಮಕ್ಕಳು ಇಲ್ಲವೇ? ಹಾಗಾದರೆ ಆ ಮಗು ಏಕೆ ಹುಟ್ಟಿತು? ತಾಯಿಯ ಗರ್ಭದಲ್ಲಿ ಒಂಬತ್ತು ತಿಂಗಳು ಏಕೆ ಕುಳಿತಿತ್ತು. ನೆಲಕ್ಕೆ ಬಂದ ದಿನವೇ ಸತ್ತು ಹೋಗಬೇಕು ಎಂದು ಅದರ ಹಣೆಯಲ್ಲಿ ಬರೆದಿತ್ತೇ? ಅಥವಾ ವೈದ್ಯರು ಇನ್ನಷ್ಟು ಕಾಳಜಿ ವಹಿಸಬೇಕಿತ್ತೇ? ಒಂಬತ್ತು ತಿಂಗಳು ಹೊತ್ತ ತಾಯಿಯೇ ಹಸುಗೂಸನ್ನು ತೊಟ್ಟಿಯ ಬಳಿ ಇಟ್ಟು ಹೋಗಿಲ್ಲವೇ? ಹಾಗಾದರೆ ತಾಯಿಯೇ ಸಾವು ಆಗಬಹುದೇ? ಮತ್ತೆ ಅದೇ ಪ್ರಶ್ನೆ. ಸಾವು ಎಂದರೆ ಏನು? ವಿಧಿಲಿಖಿತ ಎಂದರೆ ಏನು? ಎರಡರ ನಡುವೆ ದ್ವಂದ್ವ ಇದೆಯೇ? ಎಲ್ಲ ಧರ್ಮಗಳು, ಸಂತರು ಹುಡುಕಲು ಹೊರಟ ಪ್ರಶ್ನೆಯೇ ಇದು? ಅವರಿಗೆ ಉತ್ತರ ಸಿಕ್ಕಿದೆಯೇ? ಮನಸ್ಸಿಗೆ ಏನೋ ತಲ್ಲಣ. ಆ ಐದು ಜನ ಸಾಯಬಾರದಿತ್ತು ಎಂದು ಮತ್ತೆ ಮತ್ತೆ ಅನಿಸುತ್ತಿದೆ. ಆದರೆ, ಅಲ್ಲಿ ಅವರಷ್ಟೇ ಸಾಯಲಿಲ್ಲ. ಎಷ್ಟು ಜನ ಸತ್ತರೋ? ಲೆಕ್ಕವೇ ಇಲ್ಲ. ಅವರೆಲ್ಲರ ಸಾವಿಗೆ ಅವರೇ ಕಾರಣರಾಗಿದ್ದರೇ? ಅಥವಾ ನಿಸರ್ಗ ಅವರ ಮೇಲೆ ಸೇಡು ತೀರಿಸಿಕೊಂಡಿತೇ? ಯಾರದೋ ತಪ್ಪಿಗೆ ಯಾರದೋ ಮೇಲೆ ಸೇಡು ತೀರಿಸಿಕೊಳ್ಳಬಹುದೇ? ಮತ್ತೆ ನಿಸರ್ಗ ನ್ಯಾಯ ಎಂಬುದು ಒಂದು ಇರುತ್ತದೆ ಎಂದು ಹೇಳುತ್ತಾರಲ್ಲ? ಸತ್ತೇ ಹೋದ ಮೇಲೆ ಮುಗಿಯಿತಲ್ಲ? ಇನ್ನೆಲ್ಲಿಯ ನ್ಯಾಯ? ಯಾರ ಬಳಿ ಕೇಳೋಣ? ಎಂದೂ ಉತ್ತರ ಕೊಡದ ದೇವರ ಬಳಿಯೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT