ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯ ಮತ್ತು ಆಗ್ರಹದ ಅನ್ವೇಷಣೆಯಲ್ಲಿ...

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕಳೆದ ತಿಂಗಳು ಘಟಿಸಿದ ಕೆಲ ಸಂಗತಿಗಳು 1940ರ ದಶಕದ ಆರಂಭದಲ್ಲಿದ್ದ ರಾಷ್ಟ್ರೀಯತೆಯ ಸ್ಫೂರ್ತಿಯನ್ನು ನೆನಪಿಗೆ ತರುವಂತಿದ್ದವು. ಅವುಗಳಲ್ಲಿ ಒಂದು ಸ್ವಾತಂತ್ರ್ಯ ದಿನಾಚರಣೆಯಾದರೆ ಮತ್ತೊಂದು ಅಣ್ಣಾ ಹಜಾರೆ ಅವರ ಮುಂದಾಳತ್ವದಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಶಾಂತಿಯುತ ಪ್ರತಿಭಟನೆಗೆ ದೇಶದಾದ್ಯಂತ ಕಂಡುಬಂದ ಉತ್ತೇಜನ. ರಾಷ್ಟ್ರೀಯತೆಯ ಸ್ಫೂರ್ತಿಯೊಂದಿಗೆ ಇಡೀ ದೇಶವನ್ನು ಹಿಡಿದಿಡಲು ಅಣ್ಣಾ ಬಳಸಿದ ವಿಧಾನವನ್ನು ಕೆಲವರು ಒಪ್ಪದಿರಬಹುದು. ಆದರೆ ಭ್ರಷ್ಟಾಚಾರ ವಿರೋಧಿ ಹೋರಾಟ ಎಂಬುದು ಇಂದು ಭ್ರಷ್ಟಾಚಾರ ಎಂಬ ಪದದಷ್ಟೇ ಮನೆಮಾತಾಗಿದೆ ಎಂಬುದನ್ನು ಮಾತ್ರ ಯಾರೂ ಅಲ್ಲಗಳೆಯಲಾಗದು.

ನಿಜವಾದ ಅರ್ಥದಲ್ಲಿ ಭ್ರಷ್ಟಾಚಾರ ಎಂದರೇನು? ನಮ್ಮಂತಹ ಜನಸಾಮಾನ್ಯರ ಬದುಕಿನ ಮೇಲೆ ಅದು ಯಾವ ರೀತಿ ದುಷ್ಪರಿಣಾಮ ಬೀರುತ್ತಿದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಾಗಿದೆ. ಭ್ರಷ್ಟಾಚಾರಕ್ಕೆ ಬಹಳ ಹಿಂದಿನಿಂದ ಇರುವ ವ್ಯಾಖ್ಯಾನವೆಂದರೆ- ಸಾರ್ವಜನಿಕ ಶಕ್ತಿಯನ್ನು ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುವ ಮಾರ್ಗ ಎಂದೇ ಆಗಿದೆ. ಸರ್ಕಾರಿ ಅಧಿಕಾರಿಗಳಿಂದ ಸೇವೆಯ ದುರುಪಯೋಗ, ಪಕ್ಷಪಾತ, ಸರ್ಕಾರ ಮತ್ತು ಖಾಸಗಿ ಕ್ಷೇತ್ರದಲ್ಲಿನ ಲಂಚ, ಸುಲಿಗೆ, ಪ್ರಭಾವ ಬೀರುವಿಕೆ ಇವೆಲ್ಲದರಿಂದ ಅದು ಸುತ್ತುವರಿದಿದೆ. ಭ್ರಷ್ಟಾಚಾರ ಬಡವರಲ್ಲಿ ಅಸಮಾನತೆ ತಂದೊಡ್ಡುತ್ತದೆ, ಸಾಮಾಜಿಕ ಸೇವೆಗೆ ಇರುವ ಮಾರ್ಗಗಳನ್ನು ಕಡಿತಗೊಳಿಸಿ ಅಭಿವೃದ್ಧಿಗೆ ತೊಡರುಗಾಲಾಗುತ್ತದೆ. ಮೂಲ ಸೌಕರ್ಯ, ಸಂಸ್ಥೆಗಳು ಮತ್ತು ಸಾಮಾಜಿಕ ಸೇವೆಗೆ ನಿಗದಿಯಾಗಿದ್ದ ಬಂಡವಾಳ ಅನ್ಯಕಾರ್ಯಕ್ಕೆ ಬಳಕೆಯಾಗುವಂತೆ ಮಾಡುತ್ತದೆ. ಈ ಪರಿಸ್ಥಿತಿ ಸಣ್ಣ ಅಥವಾ ದೊಡ್ಡ ಪ್ರಮಾಣದಲ್ಲಿ, ಸಂಘಟಿತ ಅಥವಾ ಅಸಂಘಟಿತವಾಗಿ ರಾಜಕೀಯ, ಅಧಿಕಾರಶಾಹಿ ಎರಡರಲ್ಲೂ ಇದೆ. ರಾಜಕೀಯ ಕ್ಷೇತ್ರದಲ್ಲಿ ಅದು ವಿಧ್ಯುಕ್ತ ಪ್ರಕ್ರಿಯೆಯನ್ನು ಬುಡಮೇಲು ಮಾಡುವ ಮೂಲಕ ಪ್ರಜಾಪ್ರಭುತ್ವ ಹಾಗೂ ಉತ್ತಮ ಆಡಳಿತವನ್ನು ಹಾಳುಗೆಡವುತ್ತದೆ.

ಚುನಾವಣೆಗಳು ಮತ್ತು ಶಾಸಕಾಂಗದಲ್ಲಿ ನಡೆಯುವ ಭ್ರಷ್ಟಾಚಾರವು ನೀತಿ ನಿರೂಪಣೆಯ ಹೊಣೆಗಾರಿಕೆಯನ್ನು ಕುಂಠಿತಗೊಳಿಸುತ್ತದೆ. ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಕಾನೂನನ್ನು ಗಾಳಿಗೆ ತೂರುತ್ತದೆ. ಸಾರ್ವಜನಿಕ ಆಡಳಿತದಲ್ಲಿನ ಭ್ರಷ್ಟಾಚಾರವಂತೂ ಸೇವಾ ಹುದ್ದೆಗಳ ಅಸಮಾನ ಹಂಚಿಕೆಗೆ ಕಾರಣವಾಗುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಸರ್ಕಾರದ ಸಾಂಸ್ಥಿಕ ಸಾಮರ್ಥ್ಯವನ್ನೇ ನಾಶ ಮಾಡುವುದರಿಂದ ಅದರ ಕಾರ್ಯವಿಧಾನ ಉಪೇಕ್ಷೆಗೆ ಒಳಗಾಗುತ್ತದೆ, ಸಂಪನ್ಮೂಲಗಳು ದುರ್ಬಳಕೆಯಾಗುತ್ತವೆ, ಅಧಿಕಾರಿಗಳು `ಕೈವಶ~ ಆಗುತ್ತಾರೆ ಇಲ್ಲವೇ ಬಡ್ತಿಗೆ ಅವರ ಸಾಧನೆ ಊರುಗೋಲಾಗುವುದೇ ಇಲ್ಲ. ಸರ್ಕಾರದ ಬದ್ಧತೆ, ನಂಬಿಕೆ, ಸಹಿಷ್ಣುತೆಯಂತಹ ಪ್ರಜಾಪ್ರಭುತ್ವದ ನ್ಯಾಯಸಮ್ಮತವಾದ ಮೌಲ್ಯಗಳು ದಿಕ್ಕೆಟ್ಟು ಹೋಗುತ್ತವೆ. ಖಾಸಗಿ ವಲಯದಲ್ಲಿ ಅಕ್ರಮ ಬಟವಾಡೆಯ ಕಾರಣದಿಂದ ಉದ್ದಿಮೆಯ ವೆಚ್ಚ ಮಿತಿ ಮೀರುತ್ತದೆ. ಇದರಿಂದ ಅಧಿಕಾರಿಗಳ ಜೊತೆಗೆ ಮಾಡಿಕೊಳ್ಳಬೇಕಾದ ಅನಿವಾರ್ಯ ಒಡಂಬಡಿಕೆ ನಿರ್ವಹಣಾ ವೆಚ್ಚವನ್ನು ಏರಿಸಿ ಒಪ್ಪಂದಗಳ ಉಲ್ಲಂಘನೆಗೆ ದಾರಿ ಮಾಡಿಕೊಡುತ್ತದೆ. ಅಂತಹ ಸಂಸ್ಥೆಗಳಲ್ಲಿ ಸ್ಪರ್ಧಾತ್ಮಕತೆಗೆ ಅವಕಾಶವೇ ಇಲ್ಲದೆ ಅವು ಅಸಮರ್ಥ ಸಂಸ್ಥೆಗಳ ಸಾಲಿಗೆ ಸೇರಿಹೋಗುತ್ತವೆ. ಶಿಕ್ಷಣ, ಆರೋಗ್ಯದಂತಹ ಸಾಮಾಜಿಕ ಕ್ಷೇತ್ರಕ್ಕೆ ತೊಡಗಿಸಬೇಕಾದ ಸರ್ಕಾರದ ಬಂಡವಾಳ, ಲಂಚಕ್ಕೆ ಎಲ್ಲಿ ವಿಪುಲ ಅವಕಾಶ ಇರುವುದೋ ಅಂತಹ ಪ್ರಮುಖ ಯೋಜನೆಗಳಿಗೆ ಹರಿದುಹೋಗುತ್ತದೆ. ನಿರ್ಮಾಣ, ಪರಿಸರದಂತಹ ಕಟ್ಟುಪಾಡುಗಳನ್ನು ದುರ್ಬಲಗೊಳಿಸಿ ಸೇವೆ, ಮೂಲಸೌಕರ್ಯದ ಗುಣಮಟ್ಟವನ್ನು ಕಡಿತಗೊಳಿಸುವುದರಿಂದ ಸರ್ಕಾರದ ಆಯವ್ಯಯದ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ.

ಹೀಗಾಗಿ ಭ್ರಷ್ಟಾಚಾರ ವಿರೋಧಿ ಹೋರಾಟ ಎಂಬುದು ಬರೀ ಕಲ್ಪನೆಯಲ್ಲ. ಅಭಿವೃದ್ಧಿ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಭರವಸೆ ನೀಡಲು ಅತ್ಯಗತ್ಯವಾದ ಒಂದು ಸಾಧನವೇ ಆಗಿದೆ. ಭ್ರಷ್ಟಾಚಾರವೆಂಬ ಪಿಡುಗಿನ ವಿರುದ್ಧ ಹೋರಾಡುವ ಯತ್ನದಲ್ಲಿ ಹತಾಶರಾಗಿರುವ ನಮ್ಮಂತಹವರು `ಮತ್ತೊಬ್ಬ ಜಗದೋದ್ಧಾರಕ ಬಂದು ನಮ್ಮ ಹೋರಾಟಕ್ಕೆ ನೆರವಾಗಲಿ~ ಎಂದಷ್ಟೇ ಎದುರು ನೋಡುತ್ತಿಲ್ಲ, ನಮ್ಮ ಹೋರಾಟಕ್ಕೆ ಸಾಧನ ಆಗಬಲ್ಲ ಬಲಿಷ್ಠ ಮಸೂದೆಗಾಗಿಯೂ ಕಾಯುತ್ತಿದ್ದೇವೆ. ಹೀಗೆ ಅಣ್ಣಾ ಹಜಾರೆ ನಿಸ್ಸಹಾಯಕ, ಆಶಾರಹಿತ ಮತ್ತು ದುರ್ಬಲ ಸಮಾಜವನ್ನು ಉತ್ತೇಜಿಸುವ ಸದುದ್ದೇಶದೊಂದಿಗೆ ಸಕಾಲದಲ್ಲಿ ಬಂದಿದ್ದಾರೆ.

ಪ್ರಬಲ ಲೋಕಪಾಲ ಮಸೂದೆಗಾಗಿನ ಹೋರಾಟದ ಆರಂಭದಲ್ಲೇ `ಇದು ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ನೆರವಾಗುವುದೇ~ ಎಂದು ಹಲವರು ಕೇಳಲಾರಂಭಿಸ್ದ್ದಿದಾರೆ. ಜನ ಎಚ್ಚೆತ್ತು ಪ್ರಕರಣಗಳನ್ನು ದಾಖಲಿಸಲು ಮುಂದಾದಾಗ ಮಾತ್ರವೇ ಈ ಕಾನೂನು ಕಾರ್ಯಾಚರಣೆಗೆ ಇಳಿಯುತ್ತದೆ ಮತ್ತು ಆ ಮಾರ್ಗದಲ್ಲಿರುವ ಅಡೆತಡೆಗಳನ್ನು ನಿವಾರಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ಇದಕ್ಕೆ ಹಾಂಕಾಂಗ್‌ನಂತಹ ಸ್ಥಳಗಳೇ ಉದಾಹರಣೆ. ಇಲ್ಲೆಲ್ಲ ಕಾನೂನು ನಿರ್ಭಯ ಮತ್ತು ನಿಷ್ಪಕ್ಷಪಾತವಾಗಿ ಕೆಲಸ ಮಾಡಲಾರಂಭಿಸಿದ್ದರಿಂದಲೇ ಭ್ರಷ್ಟಾಚಾರವನ್ನು ಮಹತ್ವದ ಪ್ರಮಾಣದಲ್ಲಿ ಹತ್ತಿಕ್ಕಲು ಸಾಧ್ಯವಾಗಿದೆ. ನಮ್ಮ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಸ್ವತಃ ಕಾನೂನಿನಲ್ಲೇ ಸೀಮಿತ ಅವಕಾಶ ಇರುವ ಸಂದರ್ಭದಲ್ಲಿ ಅಣ್ಣಾ ಚಳವಳಿಯಿಂದ ನಮಗಾದ ಲಾಭವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಕಳೆದ ಹಲವು ದಶಕಗಳಲ್ಲೇ ಮೊದಲ ಬಾರಿಗೆ ಸಾಮಾಜಿಕ ಕಾರಣಕ್ಕಾಗಿ ರಾಷ್ಟ್ರ ಒಂದೇ ವೇದಿಕೆಯಡಿ ಸೇರಿದ್ದನ್ನು ನಾವು ಕಂಡಿದ್ದೇವೆ. ಭಿನ್ನಮತದ ನಡುವೆಯೂ ನಮ್ಮಂತಹ ಸಾಮಾನ್ಯ ನಾಗರಿಕರು ನಮ್ಮ ಧ್ವನಿಯನ್ನು ಕಂಡುಕೊಂಡದ್ದು ಮಾತ್ರವಲ್ಲ, ಅದನ್ನು ಸ್ವತಂತ್ರವಾಗಿ ವ್ಯಕ್ತಪಡಿಸಿಯೂ ಇದ್ದೇವೆ. ಅದು ಬರೀ ಅಣ್ಣಾ ಅವರೊಬ್ಬರ ಹೋರಾಟವಲ್ಲ, ತಮ್ಮನ್ನು ತಾವು ಶಾಂತಿಯುತವಾಗಿ ಅಭಿವ್ಯಕ್ತಗೊಳಿಸಿಕೊಳ್ಳಲು ವೇದಿಕೆಯೊಂದನ್ನು ಕಂಡುಕೊಂಡ ಎಲ್ಲ ವಯೋಮಾನ ಮತ್ತು ಹಿನ್ನೆಲೆಯ ಲಕ್ಷಾಂತರ ಪುರುಷರು ಹಾಗೂ ಮಹಿಳೆಯರ ಹೋರಾಟ. ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ, ತಮ್ಮ ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಮತ್ತು ಪ್ರಭಾವ ಬೀರುವ ಸರ್ಕಾರದ ವ್ಯವಹಾರಗಳಲ್ಲಿ ಸಹಭಾಗಿಯಾಗುವುದನ್ನು ಉತ್ತೇಜಿಸುವ ಈ ಎಚ್ಚೆತ್ತ ಸ್ಥಿತಿಯ ನವ ಭಾರತದ ಅಗತ್ಯವನ್ನು ನಾವೀಗ ಮನಗಾಣಬೇಕಾಗಿದೆ.

ಅಣ್ಣಾ ಹೋರಾಟದಲ್ಲಿ ನಿಜವಾಗಲೂ ಗೆದ್ದವರು ಯಾರು ಎಂಬ ಪ್ರಶ್ನೆಗೆ `ಇಡೀ ದೇಶ~ ಎಂದೇ ಉತ್ತರಿಸಬೇಕಾಗುತ್ತದೆ. ಒಂದೆಡೆ ಪ್ರಾಮಾಣಿಕ ಮತ್ತು ವರ್ಚಸ್ವಿ ವ್ಯಕ್ತಿ ದೃಢ ಮನೋಬಲದಿಂದ ಹೇಗೆ ಗುರಿ ಸಾಧಿಸಬಹುದು ಎಂಬುದನ್ನು, ರಾಷ್ಟ್ರದ ಪುನರುಜ್ಜೀವನಕ್ಕಾಗಿ ಎಚ್ಚೆತ್ತ ಲಕ್ಷಾಂತರ ಜನರ ಶಕ್ತಿ ಮತ್ತು ಸಾಮರ್ಥ್ಯವನ್ನು ನಾವು ಕಂಡಿದ್ದೇವೆ. ಇನ್ನೊಂದೆಡೆ ಸಂಸತ್ತಿನ ಘನತೆ ಮತ್ತು ಪರಮಾಧಿಕಾರದ ಅನುಭವವೂ ನಮಗಾಗಿದೆ. ಮಸೂದೆಯೊಂದರ ಬಗ್ಗೆ ಹಲವು ವರ್ಷಗಳ ಬಳಿಕ 7 ಗಂಟೆಗೂ ಹೆಚ್ಚು ಕಾಲ ಸಂಸತ್ತಿನಲ್ಲಿ ಚರ್ಚೆ ನಡೆದಿದೆ. ಭಾರತದ ಸಾಮೂಹಿಕ ಪ್ರಜ್ಞೆ ಎಚ್ಚೆತ್ತಿದೆ, ಇದ್ದಕ್ಕಿದ್ದಂತೆಯೇ ರಾಷ್ಟ್ರೀಯ ಉದ್ದೇಶವೊಂದರ ಮನವರಿಕೆ ನಮಗಾಗಿದೆ.

ಪ್ರಜಾಪ್ರಭುತ್ವದಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯ ಮಟ್ಟ ನೋಡಿ ಭವಿಷ್ಯದ ಬಗ್ಗೆ ಸಕಾರಾತ್ಮಕ ಧೋರಣೆ ತಳೆಯುವಂತೆ ಆಗಿದೆ. ನಾಗರಿಕ ಸಮಾಜದ ಸಹಭಾಗಿತ್ವ, ರಾಜಕೀಯ ಕ್ಷೇತ್ರ ಮತ್ತು ನಮ್ಮ ಸಂಸದರು ತೋರಿದ ಸ್ಫೂರ್ತಿ ಕೇವಲ ತಾತ್ಕಾಲಿಕವಲ್ಲ ಎಂಬ ಭರವಸೆ, ಗೆಲುವಿಗಾಗಿ ಗೆಲ್ಲುವ ಈ ಮನೋಭಾವವನ್ನು ಮುಂದುವರಿಸಿಕೊಂಡು ಹೋಗಬಲ್ಲ ಪ್ರಬುದ್ಧತೆ, ಜಾಣತನ ನಮಗೀಗ ಬೇಕಾಗಿದೆ. ಈ ಚಳವಳಿ ಇಡೀ ದೇಶಕ್ಕೆ ಸಮ್ಮತವಾಗಬಲ್ಲ ತಾರ್ಕಿಕ ಅಂತ್ಯ ಕಾಣುವಂತೆ ನೋಡಿಕೊಳ್ಳಬೇಕಾದ ಜರೂರತ್ತೂ ಇದೆ.

ಇದೆಲ್ಲದರ ಜೊತೆಗೆ, ನಮ್ಮ ಮುಂದಿರುವ ಸುದೀರ್ಘ ಮತ್ತು ಅಂಕುಡೊಂಕಾದ ದಾರಿಯನ್ನೂ ನಾವು ಮರೆಯುವಂತಿಲ್ಲ. ದೇಶಕ್ಕಾಗಿನ ನಮ್ಮ ಕನಸು ಬರೀ ಭ್ರಷ್ಟಾಚಾರ ವಿರೋಧಿ ಮಸೂದೆ ತರುವುದಕ್ಕಷ್ಟೇ ಸೀಮಿತವಲ್ಲ, ಅದನ್ನೂ ಮೀರಿದ್ದು ಎಂಬುದು ಸಹ ನಮ್ಮ ಗಮನದಲ್ಲಿರಬೇಕಾಗುತ್ತದೆ. ಕೆಲವೇ ಭಾರತೀಯರ ಲೋಭ ಮತ್ತು ಅವಮಾನಕರ ನಡವಳಿಕೆಗಳನ್ನು ಮಾತ್ರ ನಾವೀಗ ನೋಡುತ್ತಿಲ್ಲ. ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಇಂತಹ ಮನೋಭಾವದವರು ಸಾಕಷ್ಟು ಮಂದಿ ಇದ್ದಾರೆ. ಆದ್ದರಿಂದ ನಮ್ಮ ನಂಬಿಕೆಗಳು, ಮೌಲ್ಯಗಳು ಮತ್ತು ಆಚರಣೆಗಳು ಕಾನೂನಿನ ಬೇಡಿಕೆಯನ್ನೂ ಮೀರಿ, ಗಾಂಧೀಜಿಯವರ ನಿಜವಾದ ಚೈತನ್ಯ ಮತ್ತು ಸಂದೇಶವನ್ನು ಪ್ರತಿಫಲಿಸಬೇಕಾಗಿದೆ.

ಮಹಾತ್ಮನ ಸತ್ಯಾಗ್ರಹಕ್ಕೆ ಆಧಾರವಾದ ಆಧ್ಯಾತ್ಮಿಕ ಮೌಲ್ಯಗಳಿಲ್ಲದೆ ಬರೀ ಉದ್ವೇಗದಿಂದಷ್ಟೇ ಒಡಮೂಡುವ ಯಾವುದೇ ಚಳವಳಿ ಸುಲಭವಾಗಿ ಹಾದಿ ತಪ್ಪುತ್ತದೆ. ಸತ್ಯಾಗ್ರಹ ಎಂತಹ ಹೊಣೆಗಾರಿಕೆಯುಳ್ಳ ಆಗ್ರಹವೆಂದರೆ, ಬರೀ ಘೋಷಣೆಗಳನ್ನು ಕೂಗುವುದು ಮತ್ತು ರಾಷ್ಟ್ರ ಧ್ವಜವನ್ನು ಬೀಸುವಷ್ಟಕ್ಕೇ ಅದು ಮುಗಿದುಹೋಗುವುದಿಲ್ಲ. ಅದರಲ್ಲಿ ಪಾಲ್ಗೊಳ್ಳುವ ವ್ಯಕ್ತಿಯ ನೈತಿಕ ಪರಿವರ್ತನೆ ಮತ್ತು ಸ್ವಯಂ ಶುದ್ಧಿಯನ್ನು ಅದು ಬೇಡುತ್ತದೆ. ಒಬ್ಬ ನಿಜವಾದ ಸತ್ಯಾಗ್ರಹಿ ತನ್ನೊಳಗಿನ ಮೌಲ್ಯಗಳಿಗಾಗಿ ಬದುಕುತ್ತಾನೆ ಹೊರತು ಯಾವುದೇ ವ್ಯಕ್ತಿ ಅಥವಾ ವ್ಯವಸ್ಥೆಯ ಬಗೆಗಿನ ಹಗೆತನದ ಪ್ರದರ್ಶನಕ್ಕಾಗಿ ಅಲ್ಲ. ಸತ್ಯದ ಬಗ್ಗೆ ಆಳವಾದ ಪ್ರೀತಿ ಹೊಂದಿರುವ ಆತ ಕೇವಲ ಶಾಂತಿಯುತ ಮಾರ್ಗಗಳಿಂದಷ್ಟೇ ಅಲ್ಲದೆ, ತನ್ನ ವಿಧಾನಗಳು ಮತ್ತು ಕ್ರಿಯೆಗಳ ಸತತ ಸ್ವಯಂ ವಿಶ್ಲೇಷಣೆಯ ಮೂಲಕ ಉದ್ದೇಶಿತ ಗುರಿ ಸಾಧನೆ ಆಗುವವರೆಗೂ ತನ್ನ ಅಭಿಪ್ರಾಯಗಳನ್ನು ಮಂಡಿಸುತ್ತಲೇ ಇರುತ್ತಾನೆ.

ಅಹಿಂಸೆಯನ್ನು ಒಳಗೊಂಡ ಗಾಂಧಿವಾದದಲ್ಲಿ ಸ್ವಯಂ ಉನ್ನತಿಗೆ, ಕಳೆದ ವಾರ ನಾವು ಕಂಡಂತಹ ನಾಟಕೀಯ ಬೆಳವಣಿಗೆಗಳಿಗೆ ಅಥವಾ ಸರ್ಕಾರ ಪ್ರದರ್ಶಿಸಿದಂತಹ ದ್ವೇಷ ಸಾಧನೆಗೆ ಸ್ಥಾನವಿಲ್ಲ. ಗಾಂಧೀಜಿ ಸತ್ಯಾಗ್ರಹದ ಅರ್ಥದಲ್ಲಿ ಮಾತ್ರವಲ್ಲ, ಅದು ಹುಟ್ಟುಹಾಕುವ ಚೈತನ್ಯದ ಬಗ್ಗೆಯೂ ಸ್ಪಷ್ಟ ನಿಲುವು ಹೊಂದಿದ್ದರು. ಅಲ್ಲದೆ `ಸತ್ಯ~ ಮತ್ತು `ಆಗ್ರಹ~ ಜೊತೆಜೊತೆಗೇ ಸಾಗುತ್ತವೆ ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು.

ಪ್ರಜಾಪ್ರಭುತ್ವ ಹಾಗೂ ಶಾಸಕಾಂಗದ ಪ್ರಕ್ರಿಯೆಯಲ್ಲಿ ನಮ್ಮ ಪಾಲ್ಗೊಳ್ಳುವಿಕೆ ಉನ್ನತ ಸ್ಥಾನ ಪಡೆದುಕೊಳ್ಳುವುದು ನಾವು ವೈಯಕ್ತಿಕವಾಗಿ ಮತ್ತು ನಿಕಟವಾಗಿ ಅದನ್ನು ಅಳವಡಿಸಿಕೊಂಡಾಗ ಮಾತ್ರ. ಪ್ರೀತಿ, ಶಾಂತಿ, ಅಹಿಂಸೆ ಮತ್ತು ಸತ್ಯದ ಬಗ್ಗೆ ವೈಯಕ್ತಿಕ ಮಟ್ಟದಲ್ಲಿ ನಮಗೆ ಎಷ್ಟರಮಟ್ಟಿಗೆ ಬದ್ಧತೆ ಇರಬೇಕಾಗುತ್ತದೆ ಎಂದರೆ, ಪ್ರತಿ ದಿನವೂ ಸಣ್ಣ ಸಣ್ಣ ಕ್ರಿಯೆಗಳಲ್ಲೂ ಅವನ್ನು ಅತ್ಯಂತ ಜಾಗೃತಿಯಿಂದ ನಾವು ಅಳವಡಿಸಿಕೊಳ್ಳಬೇಕಾಗುತ್ತದೆ. ಅದು ಸರದಿಯಲ್ಲಿ ನಿಂತಾಗ ನಮ್ಮ ಅವಕಾಶ ಬರುವವರೆಗೆ ಕಾಯುವುದೇ ಇರಬಹುದು, ಕೆಂಪು ಸಿಗ್ನಲ್ ದೀಪ ಬಂದಾಗ ನಿಲ್ಲುವುದು, ನೆರವಿನ ಅಗತ್ಯ ಇರುವ ಅಪರಿಚಿತರಿಗೆ ಸಹಾಯಹಸ್ತ ಚಾಚುವಂತಹ ಕಾರ್ಯವೇ ಆಗಿರಬಹುದು. ಇದು ಅತ್ಯಂತ ಜರೂರಾಗಿ ನಾವು ಕಾರ್ಯರೂಪಕ್ಕೆ ತರಬೇಕಾಗಿರುವ ನಿಜವಾದ ಸತ್ಯಾಗ್ರಹ. ಆಗ ಮಾತ್ರ ನಮ್ಮ ಕನಸಿನ ಭಾರತ ಉದಯಿಸಲು ಸಾಧ್ಯ. ಇಲ್ಲದಿದ್ದರೆ ನಮಗೆ ಸಿಗುವುದು ನೈತಿಕ ಸಮಾಜ ಅಲ್ಲ. ಬರೀ ಕಾನೂನನ್ನು ಮಾತ್ರ ಒಳಗೊಂಡ, ಯಾವುದೇ ಗಾಂಧಿವಾದಿ ಹೆಮ್ಮೆಪಟ್ಟುಕೊಳ್ಳಲು ಸಾಧ್ಯವಾಗದ ಭ್ರಷ್ಟ ಸಮಾಜ ಮಾತ್ರ.
 (ನಿಮ್ಮ ಅನಿಸಿಕೆಗಳನ್ನು ಇಲ್ಲಿಗೆ ಕಳುಹಿಸಿ: itpagefeedback@prajavani.co.i)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT