ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ, ಉದ್ಯಮದಲ್ಲಿ ಮೂಡಿದೆ ಆಶಾಭಾವ

Last Updated 3 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಭಾರತದ್ದು ‘ಐವತ್ತು-ಐವತ್ತು’ ಪ್ರಜಾಪ್ರಭುತ್ವ ವ್ಯವಸ್ಥೆ ಎಂದು 2007ರಲ್ಲಿ ದೇಶದ 60ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಾನು ಹೇಳಿದ್ದೆ. ನಿಖರವಾಗಿ ಭಾರತ ಶೇ 50ರಷ್ಟು ಪ್ರಜಾತಂತ್ರವಾಗಿದೆ ಮತ್ತು ಶೇ 50ರಷ್ಟು ಪ್ರಜಾತಂತ್ರವಾಗಿಲ್ಲ ಎಂಬುದು ನಾನು ಹೇಳಿದ್ದರ ಅರ್ಥ ಆಗಿರಲಿಲ್ಲ. ನಿಯಮಿತವಾಗಿ ಮುಕ್ತ ಚುನಾವಣೆಗಳು ನಡೆಯುತ್ತಿದ್ದರೂ ನಮ್ಮ ಸಾರ್ವಜನಿಕ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಗಂಭೀರ ಲೋಪಗಳಿವೆ ಎಂಬುದು ನನ್ನ ಮಾತಿನ ಅರ್ಥವಾಗಿತ್ತು (‘ಐವತ್ತು-ಐವತ್ತು’ ಪದಗುಚ್ಛ ಪ್ರಸಿದ್ಧ ಹಾಸ್ಯ ನಟ ಜಾನಿ ವಾಕರ್ ಅವರಿಂದ ಪಡೆದದ್ದಾಗಿತ್ತು). ನಮ್ಮ ನ್ಯಾಯಾಲಯಗಳು, ನಾಗರಿಕ ಸೇವೆಗಳು, ಪೊಲೀಸ್ ವ್ಯವಸ್ಥೆ, ಶಾಲೆ ಮತ್ತು ಆಸ್ಪತ್ರೆಗಳು, ಅಷ್ಟೇ ಯಾಕೆ ನಮ್ಮ ಸಂಸತ್ತು ಕೂಡ ಅದಕ್ಷವಾಗಿದೆ ಮತ್ತು ಭ್ರಷ್ಟವಾಗಿದೆ.

ಭಾರತ ರಾಜಕೀಯ ಸ್ವಾತಂತ್ರ್ಯ ಪಡೆದುಕೊಂಡು ಈ ತಿಂಗಳ 15ಕ್ಕೆ 70 ವರ್ಷಗಳಾಗುತ್ತವೆ. ಕಳೆದ ದಶಕಗಳಲ್ಲಿ ದೇಶ ಹೇಗೆ ಪ್ರಗತಿ ಕಂಡಿದೆ? ಹೆಚ್ಚು ಪ್ರಜಾಸತ್ತಾತ್ಮಕವಾಗಿದೆಯೇ ಅಥವಾ ಇಲ್ಲವೇ?

ಭಾರತವು ಒಂದು ವಿಸ್ತಾರವಾದ, ಭಾರಿ ಜನಸಂಖ್ಯೆಯ ಮತ್ತು ಅಚ್ಚರಿ ಮೂಡಿಸುವಷ್ಟು ವೈವಿಧ್ಯಗಳನ್ನು ಒಳಗೊಂಡಿರುವ ದೇಶ. ಮೇಲೆ ಕೇಳಿದ ಪ್ರಶ್ನೆಗಳಿಗೆ ನೇರವಾಗಿ ಮತ್ತು ದ್ವಂದ್ವ ಇಲ್ಲದ ಉತ್ತರಗಳನ್ನು ಹೇಳುವುದು ಕಷ್ಟ. ಹಾಗಾಗಿ ರಾಜಕೀಯ, ಸಮಾಜ ಮತ್ತು ಅರ್ಥಶಾಸ್ತ್ರವನ್ನು ಕೇಂದ್ರೀಕರಿಸಿ ಪ್ರತ್ಯೇಕ ಪ್ರತ್ಯೇಕವಾಗಿ ವಿಶ್ಲೇಷಿಸುವುದು ಈ ಅಂಕಣದ ಉದ್ದೇಶ.

ಕಳೆದ ದಶಕದಲ್ಲಿ ನಮ್ಮ ಪ್ರಜಾತಂತ್ರದ ಆರೋಗ್ಯ ಇನ್ನಷ್ಟು ಹದಗೆಟ್ಟಿದೆ. ಈಗಲೂ ಚುನಾವಣೆಗಳು ಮುಕ್ತವಾಗಿ ಮತ್ತು ನ್ಯಾಯಸಮ್ಮತವಾಗಿಯೇ ನಡೆಯುತ್ತಿವೆ. ಆದರೆ ಚುನಾವಣೆಗೆ ಸ್ಪರ್ಧಿಸುವ ವೆಚ್ಚ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿದೆ. ಅತ್ಯಂತ ಹೆಚ್ಚು ಹಣ ಇರುವ ಅಭ್ಯರ್ಥಿ ಅಥವಾ ಪಕ್ಷ ಗೆಲ್ಲುವ ಸಾಧ್ಯತೆ ಹೆಚ್ಚು. ದೊಡ್ಡ ಸಂಖ್ಯೆಯ ಸಂಸದರು ಮತ್ತು ಶಾಸಕರ ವಿರುದ್ಧ ಅಪರಾಧ ಪ್ರಕರಣಗಳಿವೆ.

2007ರಲ್ಲಿ ಇದ್ದ ಹಾಗೆಯೇ 2017ರಲ್ಲಿಯೂ ನಮ್ಮ ಪೊಲೀಸ್ ವ್ಯವಸ್ಥೆ ಭ್ರಷ್ಟ ಮತ್ತು ಆಗಾಗ ಕ್ರೂರವೂ ಆಗಿ ಉಳಿದಿದೆ. ನಮ್ಮ ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳು ಬಹುವಾಗಿ ನಿಷ್ಕ್ರಿಯವಾಗಿಯೇ ಇವೆ. ರಾಜಕೀಯ ಹಸ್ತಕ್ಷೇಪ ನಮ್ಮ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಮಹತ್ವವನ್ನು ಕುಗ್ಗಿಸಿವೆ. ಇದು ಈಗ ಭಾರತೀಯ ರಿಸರ್ವ್ ಬ್ಯಾಂಕ್‌ವರೆಗೆ ತಲುಪಿದೆ. ನ್ಯಾಯಾಲಯಗಳ ಮೇಲೆ ಅತಿಯಾದ ಹೊರೆ ಇದೆ, ಆದಾಯ ತೆರಿಗೆ ಇಲಾಖೆ ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳು (ಸಿಬಿಐ) ಆಡಳಿತ ಪಕ್ಷದ ಕೈಯಲ್ಲಿನ ಉಪಕರಣಗಳಾಗಿ ಬದಲಾಗಿವೆ.

ರಾಜಕೀಯ ವರ್ಗದಲ್ಲಿ ನಿರಂಕುಶಾಧಿಕಾರದ ಪ್ರವೃತ್ತಿ ಹೆಚ್ಚುತ್ತಿರುವುದು ಭಾರತದ ಪ್ರಜಾತಂತ್ರವನ್ನು ಇನ್ನಷ್ಟು ದುರ್ಬಲಗೊಳಿಸಿದೆ. ಕಾಂಗ್ರೆಸ್ ಪಕ್ಷವು ಸುದೀರ್ಘ ಕಾಲದಿಂದ ಒಂದೇ ಕುಟುಂಬದ ಅಧೀನದಲ್ಲಿದೆ. ಕೆಲವು ಪ್ರಾದೇಶಿಕ ಪಕ್ಷಗಳೂ ಹೀಗೆಯೇ ಇದ್ದರೆ, ಇನ್ನು ಕೆಲವು (ಉದಾಹರಣೆಗೆ, ಬಿಜು ಜನತಾ ದಳ, ತೃಣಮೂಲ ಕಾಂಗ್ರೆಸ್) ಒಬ್ಬ ವ್ಯಕ್ತಿಯ ನಿಯಂತ್ರಣದಲ್ಲಿವೆ. ಭಾರತದ ಅತ್ಯಂತ ಪ್ರಬಲ ಮತ್ತು ಏಕೈಕ ರಾಷ್ಟ್ರೀಯ ಪಕ್ಷದಲ್ಲಿನ ಆಂತರಿಕ ಪ್ರಜಾಪ್ರಭುತ್ವ ಅತ್ಯಂತ ತ್ವರಿತವಾಗಿ ಕುಸಿಯುತ್ತಿದೆ. ಇಬ್ಬರು ವ್ಯಕ್ತಿಗಳು ಬಿಜೆಪಿಯ ಎಲ್ಲ ವ್ಯವಹಾರಗಳನ್ನೂ ನಿಯಂತ್ರಿಸುತ್ತಿದ್ದಾರೆ. 1970ರ ದಶಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇಂದಿರಾ ಗಾಂಧಿ ಮತ್ತು ಸಂಜಯ್‌ ಗಾಂಧಿ ಇದ್ದ ಹಾಗೆ ಈಗ ಬಿಜೆಪಿಗೆ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರಿದ್ದಾರೆ. ಮೋದಿ ಮತ್ತು ಷಾಅವರ ಅಧೀನದಲ್ಲಿರುವ ಬಿಜೆಪಿ ತನ್ನೊಳಗೆ ಹೈಕಮಾಂಡ್ ಸಂಸ್ಕೃತಿಯೊಂದನ್ನು ಸೃಷ್ಟಿಸುತ್ತಿದೆ. ಒಂದು ಕಾಲದಲ್ಲಿ ಇಂದಿರಾ ಮತ್ತು ಸಂಜಯ್ ಅವರು ಮಾಡಿದಂತೆ, ಈ ಇಬ್ಬರು ಕೂಡ ಹಿಂದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದ ಮುಖ್ಯಮಂತ್ರಿಗಳನ್ನು ತಮಗೆ ಬೇಕಾದಂತೆ ಬಾಗಿಸುತ್ತಿದ್ದಾರೆ ಮತ್ತು ಅವರನ್ನು ನಿರ್ಲಕ್ಷಿಸುತ್ತಿದ್ದಾರೆ.

ನಾಯಕರಲ್ಲಿ ನಿರಂಕುಶ ಪ್ರವೃತ್ತಿ ಹೆಚ್ಚುತ್ತಿದ್ದಂತೆಯೇ ಕೇಂದ್ರದಲ್ಲಿ ಮತ್ತು ರಾಜ್ಯ ಮಟ್ಟಗಳಲ್ಲಿ ಮಾಧ್ಯಮದ ಮೇಲಿನ ದಾಳಿಗಳು ಹೆಚ್ಚುತ್ತಿವೆ. ತಮ್ಮ ಸರ್ಕಾರದ ನೀತಿಗಳನ್ನು ಟೀಕಿಸುವ ಪತ್ರಿಕೆ ಅಥವಾ ಸುದ್ದಿ ವಾಹಿನಿಗಳ ಮೇಲೆ ಮೋದಿ ಅಥವಾ ಷಾ ಅವರಷ್ಟೇ ಸೇಡಿನಿಂದ ಮಮತಾ ಬ್ಯಾನರ್ಜಿ ಅವರೂ ವರ್ತಿಸಬಲ್ಲರು. ಸ್ವತಂತ್ರ ಮನೋಭಾವದ ಪತ್ರಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ. ಆಡಳಿತ ಪಕ್ಷ ಅಥವಾ ಅದರ ರಾಜಕಾರಣಿಗಳನ್ನು ಬೆಂಬಲಿಸುವ ವರದಿಗಾರರು ಮತ್ತು ಸುದ್ದಿ ನಿರೂಪಕರಿಗೆ ಉತ್ತೇಜನ ನೀಡಲಾಗುತ್ತಿದೆ. ಕೆಲವರನ್ನು ಶ್ರೇಷ್ಠ ನಾಯಕ ಎಂದು ಬಿಂಬಿಸುವುದಕ್ಕಾಗಿ ತೆರಿಗೆ ಹಣವನ್ನು ಬಳಸಿ ಜಾಹೀರಾತು ಅಭಿಯಾನಗಳನ್ನು ನಡೆಸಲಾಗುತ್ತಿದೆ.

ರಾಜಕಾರಣ ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುವುದಾದರೆ ಭಾರತದ ಪ್ರಜಾತಂತ್ರ ಕಳಪೆಯಾಗಿದೆ. ಪಶ್ಚಿಮ ಯುರೋಪ್ ಅಥವಾ ಉತ್ತರ ಅಮೆರಿಕದ ದೇಶಗಳಿಗೆ ಹೋಲಿಸಿದರೆ ನಮ್ಮ ರಾಜಕೀಯ ಪಕ್ಷಗಳು, ಮಾಧ್ಯಮ, ಶಾಲೆಗಳು, ಆಸ್ಪತ್ರೆಗಳು, ನ್ಯಾಯಾಲಯಗಳು ಮತ್ತು ಕಾನೂನು ಜಾರಿ ಸಂಸ್ಥೆಗಳು ಹಾಗೂ ಸಂಸತ್ತು ಕೂಡ ಕಳಪೆಯಾಗಿಯೇ ಇವೆ. ಹತ್ತಿಪ್ಪತ್ತು ವರ್ಷ ಹಿಂದಿನ ಸ್ಥಿತಿಗೆ ಹೋಲಿಸಿದರೆ ಅಲ್ಲಿನ ಸ್ಥಿತಿಯೂ ಬಹುಶಃ ಕುಗ್ಗಿದೆ ಎಂಬುದು ನಿಜ.

ಫ್ರಾನ್ಸ್‌ನ ಮಾನವಶಾಸ್ತ್ರಜ್ಞ ಲೂಯಿಸ್ ಡ್ಯುಮಂಟ್ ಅವರು ಭಾರತೀಯರನ್ನು (ವಿಶೇಷವಾಗಿ ಹಿಂದೂಗಳನ್ನು) ‘ಶ್ರೇಣೀಕರಣಗೊಂಡ ಜನರು’ ಎಂದು ಕರೆದಿದ್ದಾರೆ. ಈ ಹೋಲಿಕೆ ಅಸಮಂಜಸವೇನಲ್ಲ. ಯಾಕೆಂದರೆ ಜಾತಿ ವ್ಯವಸ್ಥೆ ಎಂಬುದು ಅತ್ಯಂತ ನಾಜೂಕಿನಿಂದ ಮೋಸಗೊಳಿಸುವ ಮತ್ತು ಅತ್ಯಂತ ಕುಟಿಲವಾಗಿ ಸಾಮಾಜಿಕ ವ್ಯವಸ್ಥೆಯಿಂದ ಕೆಲವರನ್ನು ಹೊರಗಿರಿಸಲು ಮತ್ತು ತಾರತಮ್ಯ ಎಸಗಲು ಮನುಷ್ಯ ಕಂಡುಕೊಂಡ ವ್ಯವಸ್ಥೆಯಾಗಿದೆ. ಹಿಂದೂ ಮತ್ತು ಇಸ್ಲಾಂ ಧರ್ಮಗಳೆರಡೂ ಮಹಿಳೆಯರಿಗಿಂತ ಶಾಶ್ವತವಾಗಿ ಪುರುಷರು ಮೇಲು ಎಂಬ ಮನಸ್ಥಿತಿಯನ್ನು ಸೃಷ್ಟಿಸಿವೆ.

ಭಾರತದ ಸಂವಿಧಾನ ಅಸ್ಪೃಶ್ಯತೆಯನ್ನು ನಿಷೇಧಿಸಿದೆ ಮತ್ತು ಪುರುಷರಿಗಿದ್ದಷ್ಟೇ ಹಕ್ಕುಗಳನ್ನು ಮಹಿಳೆಯರಿಗೂ ನೀಡಿದೆ. ಈ ಮೂಲಕ ಸಾಮಾಜಿಕ ತಾರತಮ್ಯಕ್ಕೆ ಕ್ರಾಂತಿಕಾರಕ ಸವಾಲು ಒಡ್ಡಿದೆ. ಸಂವಿಧಾನವನ್ನು ಅಳವಡಿಸಿಕೊಂಡು ಆರೂವರೆ ದಶಕವಾಗಿದ್ದರೂ ಜಾತಿ ಮತ್ತು ಲಿಂಗ ಸಮಾನತೆಯೆಡೆಗಿನ ಪ್ರಯಾಣ ನಿಧಾನವಾಗಿಯೇ ಇದೆ.

ಆದರೆ ಇದರ ಅರ್ಥ ಈ ನಿಟ್ಟಿನಲ್ಲಿ ಪ್ರಗತಿ ಆಗಿಯೇ ಇಲ್ಲಎಂದಲ್ಲ. ದೇಶವು ನಗರೀಕರಣಗೊಳ್ಳುತ್ತಿದ್ದಂತೆಯೇ ಹೆಚ್ಚು ಹೆಚ್ಚು ಜನರು ಶಿಕ್ಷಣ ಅಥವಾ ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಹಾಗಾಗಿ ವೃತ್ತಿ ಮತ್ತು ಜಾತಿಯ ನಡುವಣ ನಂಟು ಕಡಿದು ಹೋಗುತ್ತಿದೆ; ಮದುವೆಗೆ ಕುಟುಂಬದ ಹಿನ್ನೆಲೆ ಮುಖ್ಯವಾಗುತ್ತಿಲ್ಲ. ತಮ್ಮ ತಂದೆ ಅಥವಾ ಅಜ್ಜ ಮಾಡುತ್ತಿದ್ದ ಕೆಲಸ ಬಿಟ್ಟು ಬೇರೆ ಉದ್ಯೋಗ ಹುಡುಕಿಕೊಳ್ಳುವುದು ಯುವಜನರಿಗೆ ಹೆಚ್ಚು ಸುಲಭವಾಗಿದೆ. ಮನೆಯವರು ಹುಡುಕಿದ ಸಂಗಾತಿಯನ್ನು ಅನಿವಾರ್ಯವಾಗಿ ಮದುವೆಯಾಗುವುದರ ಬದಲಿಗೆ ತಮ್ಮ ಪ್ರೀತಿಯ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಹೆಚ್ಚಾಗಿದೆ.

ಮಲ ಹೊರುವಂತಹ ಅಮಾನವೀಯ ಪದ್ಧತಿ ನಮ್ಮ ಪ್ರಜಾಪ್ರಭುತ್ವವನ್ನು ವಿರೂಪಗೊಳಿಸಿದೆ. ಶ್ರೇಣೀಕರಣ ವ್ಯವಸ್ಥೆ ಉಳಿದಿದ್ದರೂ ಅದರ ಸ್ವರೂಪ ಮತ್ತು ಸತ್ವಕ್ಕೆ ಎದುರಾಗಿರುವ ಸವಾಲು ದೊಡ್ಡದಾಗಿಯೇ ಇದೆ. ಬಿ.ಆರ್. ಅಂಬೇಡ್ಕರ್ ಅವರಿಂದ ಸ್ಫೂರ್ತಿ ಪಡೆದ ದಲಿತರು ಶಿಕ್ಷಣ ಪಡೆಯುತ್ತಿದ್ದಾರೆ, ತಮಗೆ ಆಗುತ್ತಿರುವ ಅನ್ಯಾಯದಿಂದ ಕೆರಳಿರುವ ಅವರು ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಸಂಘಟಿತರಾಗುತ್ತಿದ್ದಾರೆ. ಬಿಡಿ ಬಿಡಿಯಾಗಿ ಮತ್ತು ಸಣ್ಣ ಸಂಖ್ಯೆಯಲ್ಲಿಯೇ ಆಗಿದ್ದರೂ ಮಹಿಳೆಯರೂ ಈ ನಿಟ್ಟಿನಲ್ಲಿ ಸಾಗುತ್ತಿದ್ದಾರೆ. ಚಾರಿತ್ರಿಕವಾಗಿ ಶೋಷಣೆಗೆ ಒಳಗಾಗಿರುವ ಈ ಎರಡು ಗುಂಪುಗಳು ಸ್ವಪ್ರಜ್ಞೆಯನ್ನು ರೂಢಿಸಿಕೊಂಡಿರುವುದು ಮತ್ತು ತಮ್ಮ ಹಕ್ಕುಗಳಿಗಾಗಿ ದೃಢವಾದ ಬೇಡಿಕೆ ಮುಂದಿರಿಸಿರುವುದು ಮೇಲ್ವರ್ಗ ಮತ್ತು ಪಿತೃಪ್ರಧಾನ ವ್ಯವಸ್ಥೆಯಲ್ಲಿ ನಡುಕ ಹುಟ್ಟಿಸಿದೆ. ಅದುವೇ ಗ್ರಾಮಗಳಲ್ಲಿ ದಲಿತರ ಮೇಲಿನ ಹಲ್ಲೆಗಳು ಮತ್ತು ಗ್ರಾಮ ಮತ್ತು ಪಟ್ಟಣಗಳಲ್ಲಿ ಮಹಿಳೆಯರ ಮೇಲಿನ ದಾಳಿಗಳಿಗೆ ಕಾರಣವಾಗಿದೆ. ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಶ್ರೇಣೀಕರಣ ನಿಧಾನವಾಗಿ ಹಿನ್ನೆಲೆಗೆ ಸರಿಯುತ್ತಿದೆ ಎಂಬುದನ್ನೇ ಈ ತಿರುಗೇಟುಗಳು ತೋರಿಸುತ್ತಿವೆ. ದಲಿತರು ಮತ್ತು ಮಹಿಳೆಯರು ಈಗಲೂ ಶೋಷಣೆಗೆ ಮತ್ತು ದಮನಕ್ಕೆ ಒಳಗಾಗುತ್ತಿದ್ದಾರೆ. ಆದರೆ ಭಾರತದ ಇತಿಹಾಸವನ್ನು ಗಮನಿಸಿದರೆ ಈ ಶೋಷಣೆ ಮತ್ತು ದಮನದ ಪ್ರಮಾಣ ಈಗ ಅತ್ಯಂತ ಕಡಿಮೆ ಇದೆ. ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ದಲಿತರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯವಾಗಿ ಎದ್ದು ನಿಂತಿದ್ದಾರೆ ಮತ್ತು ಸಾಂಪ್ರದಾಯಿಕವಾಗಿ ಈ ವರ್ಗಗಳನ್ನು ಶೋಷಣೆ ಮಾಡಿದ ಮೇಲು ಜಾತಿಯ ಪುರುಷರಲ್ಲಿ ಇದು ಸಿಟ್ಟು ಮತ್ತು ದ್ವೇಷ ಮೂಡಿಸಿದೆ.

ದಲಿತರು ಮತ್ತು ಮಹಿಳೆಯರು ಇತ್ತೀಚಿನ ವರ್ಷಗಳಲ್ಲಿ ಸಾಧಾರಣ ಮಟ್ಟದ ಪ್ರಗತಿ ಸಾಧಿಸಿದ್ದಾರೆ. ಆದರೆ ಇನ್ನೊಂದೆಡೆ, ಎರಡು ಸಾಮಾಜಿಕ ಗುಂಪುಗಳು ಹತ್ತಿಪ್ಪತ್ತು ವರ್ಷ ಹಿಂದೆ ಇದ್ದುದಕ್ಕಿಂತ ಹೆಚ್ಚು ದುರ್ಬಲವಾಗಿವೆ. ಈ ಗುಂಪುಗಳೇ ಮುಸ್ಲಿಮರು ಮತ್ತು ಆದಿವಾಸಿಗಳು. ಬಿಜೆಪಿ, ಆರ್‍ಎಸ್‍ಎಸ್, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳಗಳಿಂದ ಪ್ರೇರಿತವಾದ ಹಿಂದುತ್ವ ಮತಾಂಧತೆಯಿಂದಾಗಿ ದೇಶದ ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯದಲ್ಲಿನ ಅಸುರಕ್ಷಿತ ಭಾವ ಹೆಚ್ಚಾಗಿದೆ. ಸರ್ಕಾರದ ನೇತೃತ್ವದ ಕೈಗಾರಿಕೀಕರಣದ ಉಚ್ಛ್ರಾಯ ದಿನಗಳಲ್ಲಿ ಸಾರ್ವಜನಿಕ ಕ್ಷೇತ್ರದ ಅಣೆಕಟ್ಟೆಗಳು, ಗಣಿಗಳು ಮತ್ತು ಕಾರ್ಖಾನೆಗಳಿಂದಾಗಿ ಆದಿವಾಸಿಗಳು ತಮ್ಮ ನೆಲ, ಮನೆ, ಅರಣ್ಯ ಮತ್ತು ಜೀವನೋಪಾಯಗಳನ್ನು ಕಳೆದುಕೊಂಡರು. ಈಗ ಖಾಸಗಿ ಸಂಸ್ಥೆಗಳ ಅಣೆಕಟ್ಟೆಗಳು, ಕಾರ್ಖಾನೆಗಳು ಮತ್ತು ಗಣಿಗಳಿಗಾಗಿ ಮತ್ತೆ ಅವುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಒಂದು ಅಂಕಿ ಅಂಶ ಎಲ್ಲವನ್ನೂ ಹೇಳಿಬಿಡುತ್ತದೆ: ದೇಶದಲ್ಲಿ ಇರುವ ಆದಿವಾಸಿಗಳ ಪ್ರಮಾಣ ಶೇ 8ರಷ್ಟು, ಆದರೆ ಭಾರಿ ಯೋಜನೆಗಳಿಂದಾಗಿ ನಿರ್ವಸಿತರಾದವರಲ್ಲಿ ಅವರ ಪ್ರಮಾಣ ಶೇ 40.

ಆರ್ಥಿಕ ಉದಾರೀಕರಣದಿಂದ ಅತಿ ಹೆಚ್ಚು ತೊಂದರೆಗೆ ಒಳಗಾದವರು ಆದಿವಾಸಿಗಳು. ಆದರೆ ಇದು ಆದಿವಾಸಿಗಳಲ್ಲದ ಲಕ್ಷಾಂತರ ಭಾರತೀಯರಿಗೆ ಪ್ರಯೋಜನ ತಂದು ಕೊಟ್ಟಿದೆ- ಅವರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ, ಅವರಿಗೆ ಹೆಚ್ಚು ಸಂಬಳದ ಕೆಲಸಗಳು ಸಿಕ್ಕಿವೆ. ಇಲ್ಲಿ ಉಲ್ಲೇಖಿಸಬಹುದಾದ ಅಂಶವೆಂದರೆ, ಭಾರತದ ಉದ್ಯಮಶೀಲತೆಯ ಸಾಮಾಜಿಕ ನೆಲೆ ವಿಸ್ತಾರವಾಗಿದೆ. ಒಂದು ಕಾಲದಲ್ಲಿ ಈ ಕ್ಷೇತ್ರದಲ್ಲಿ ಜೈನ, ಬನಿಯಾ ಮತ್ತು ಪಾರ್ಸಿ ಕುಟುಂಬಗಳು ಮಾತ್ರ ಇದ್ದವು. ಈಗ ಗೌಂಡರ್ ಮತ್ತು ಮರಾಠರಂತಹ ಕೃಷಿಕ ಸಮುದಾಯಗಳು ಕೂಡ ಯಶಸ್ವಿ ಉದ್ಯಮಿಗಳನ್ನು ಸೃಷ್ಟಿಸಿವೆ. ಉನ್ನತ ಕುಲದ ಬ್ರಾಹ್ಮಣರು ಮತ್ತು ಅಂಚಿನಲ್ಲಿದ್ದ ದಲಿತರು ಉದ್ಯಮಿಗಳಾಗಿದ್ದಾರೆ- ಮೊದಲ ಸಮುದಾಯಕ್ಕೆ ಹಿಂದೆ ವ್ಯಾಪಾರದ ಬಗ್ಗೆ ಅಸಡ್ಡೆ ಇದ್ದರೆ, ಎರಡನೇ ಸಮುದಾಯವನ್ನು ಈ ಕ್ಷೇತ್ರದಿಂದ ಹೊರಗೆ ಇರಿಸಲಾಗಿತ್ತು.

ದಕ್ಷಿಣ ಮತ್ತು ಪಶ್ಚಿಮ ಭಾರತದ ಪುಣೆ, ಬೆಂಗಳೂರು, ಹೈದರಾಬಾದ್‌ನಂತಹ ನಗರಗಳು ಸಣ್ಣ ಮತ್ತು ದೊಡ್ಡ, ವಿನೂತನ ಮತ್ತು ಹೆಚ್ಚು ದಿಟ್ಟತನ ಬೇಕಿರುವ ಹೊಸ ಉದ್ಯಮಗಳಿಂದ ತುಂಬಿ ಹೋಗಿವೆ. ಇವುಗಳನ್ನು ಭಾರತದ ಎಲ್ಲ ವಯೋಮಾನದ ಮತ್ತು ವಿವಿಧ ಸಾಮಾಜಿಕ ಹಿನ್ನೆಲೆಯ ಜನರು ಸ್ಥಾಪಿಸಿದ್ದಾರೆ. ವಲಸಿಗರು ತಮ್ಮ ಹುಟ್ಟೂರಿಗೆ ಕಳುಹಿಸುವ ಹಣದ ಮೂಲಕ ಈ ಉದ್ಯಮಶೀಲತಾ ಚೈತನ್ಯ ಮತ್ತು ಹೊಸ ಚಿಂತನೆಗಳ ಪ್ರಯೋಜನ ದೇಶದ ಎಲ್ಲ ಭಾಗಗಳಿಗೂ ಪಸರಿಸುತ್ತಿವೆ. ಒಟ್ಟಿನಲ್ಲಿ, ಕಳೆದ ದಶಕದ ಆರ್ಥಿಕ ಪ್ರಗತಿ ಲಕ್ಷಾಂತರ ಭಾರತೀಯರನ್ನು ಬಡತನದಿಂದ ರಕ್ಷಿಸಿದೆ, ಅವರಿಗೆ ಹೆಚ್ಚು ಸುರಕ್ಷತೆ ಮತ್ತು ಘನತೆ ಕೊಟ್ಟಿದೆ.

ಭಾರತವು ಹತ್ತು ವರ್ಷಗಳ ಹಿಂದಿಗಿಂತ ಈಗ ಹೆಚ್ಚು ಪ್ರಜಾಸತ್ತಾತ್ಮಕವಾಗಿದೆಯೇ? ಯಾವುದೇ ಒಂದು ಉತ್ತರ ಸರಿ ಎಂದು ಹೇಳಲಾಗದು, ಬಹುಶಃ ಎರಡು ಉತ್ತರಗಳೂ ಸರಿ. ರಾಜಕೀಯ ಪ್ರಜಾಸತ್ತೆಯ ಗುಣಮಟ್ಟ ಕಳೆದ ಒಂದು ದಶಕದಲ್ಲಿ ಕುಸಿದಿದೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಜನತಂತ್ರ ಹೆಚ್ಚು ಗಾಢವಾಗುತ್ತಾ ಸಾಗಿದೆ. ನಾವು 2007ರಲ್ಲಿ ಇದ್ದಲ್ಲಿಯೇ ಈಗಲೂ ಇದ್ದೇವೆ- ಲೋಪ ಮತ್ತು ಅಸಮರ್ಪಕವಾದ, ‘ಐವತ್ತು-ಐವತ್ತು’ ಎಂದು ಹೇಳಬಹುದಾದ ಪ್ರಜಾತಂತ್ರವೇ ಇದೆ. ಯಾವ ಲೆಕ್ಕದಲ್ಲಿ ನೋಡಿದರೂ ಭಾರತ, ‘ಹಿಂದೂ ಪಾಕಿಸ್ತಾನ’ವಾಗಿಲ್ಲ. ಆದರೆ ನಿತ್ಯದ ಜೀವನದಲ್ಲಿ ಕಾಣಿಸುತ್ತಿರುವ ಹಿಂಸೆ ಮತ್ತು ಕುಸಿಯುತ್ತಲೇ ಸಾಗಿರುವ ಸಾರ್ವಜನಿಕ ಸಂಸ್ಥೆಗಳಿಂದಾಗಿ ನಾವು ‘ದಕ್ಷಿಣ ಏಷ್ಯಾದ ಕೆನಡಾ’ ಆಗುವುದರಿಂದ ಬಹಳ ದೂರವೇ ಇದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT