ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಜನರ, ದುರ್ಜನರ ಕೈಯಲ್ಲಿ ಸ್ಟೆಂಟ್

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ವಜ್ರಗಳ ರಾಜಧಾನಿ ಎನಿಸಿದ ಸೂರತ್ ನಗರದ ಒಂದು ಫ್ಯಾಕ್ಟರಿಯ ಹಿಂಬಾಗಿಲ ದೃಶ್ಯ: ವಜ್ರದ ಬೆಂಡೋಲೆಯನ್ನು ಇಡಬಹುದಾದ ಪುಟ್ಟ ಪುಟ್ಟ  ಡಬ್ಬಗಳ ಪ್ಯಾಕಿಂಗ್ ಕೆಲಸ ನಡೆಯುತ್ತಿರುತ್ತದೆ. ಇಬ್ಬರು ಗನ್‌ಮೆನ್ ಮತ್ತು ವಿಮಾ ಕಂಪನಿಯ ಇಬ್ಬರು ಅಧಿಕಾರಿಗಳ ಕಣ್ಗಾವಲಿನಲ್ಲಿ ಒಂದೊಂದೇ ಡಬ್ಬದ ತಪಶೀಲು ನಡೆಯುತ್ತದೆ. ಎಲ್ಲವೂ ಐರೋಪ್ಯ ಮಾನದಂಡದ ಪ್ರಕಾರ ಶ್ರೇಷ್ಠ ಗುಣಮಟ್ಟದ್ದೇ ಆಗಿರಬೇಕು.

ತಪಾಸಣೆ ಮುಗಿದ ಮೇಲೆ ಚಿಕ್ಕ ಬ್ರೀಫ್‌ಕೇಸ್‌ನಲ್ಲಿ 12-12 ಡಬ್ಬಗಳನ್ನು ಜೋಡಿಸಲಾಗುತ್ತದೆ. ಬ್ರೀಫ್‌ಕೇಸ್ ಹಿಡಿದು ಸಾದಾ ಡ್ರೆಸ್‌ನ ಅಧಿಕಾರಿ ಆ ಕಚೇರಿಯ ಹೊರಗೆ ನಿಂತ ಸಾದಾ ಕಾರಿನಲ್ಲಿ  ವಿಮಾನ ನಿಲ್ದಾಣಕ್ಕೆ ಹೊರಡುತ್ತಾನೆ. ಗನ್ ಹಿಡಿದ ಭದ್ರತಾ ಅಧಿಕಾರಿಗಳು ಹಿಂಬಾಲಿಸುತ್ತಾರೆ. 

ಡಬ್ಬಗಳಲ್ಲಿ ಏನಿವೆ, ವಜ್ರಗಳೆ? ಅಲ್ಲ, ಅವು ಸ್ಟೆಂಟ್ (Stent) ಎಂಬ ವೈದ್ಯಕೀಯ ಸಾಧನಗಳು. ಅವು ನಮ್ಮ ಬಾಲ್ ಪಾಯಿಂಟ್ ಪೆನ್ ಒಳಗಿನ ರೀಫಿಲ್ ಕೊಳವೆಗೆ ಸಿಕ್ಕಿಸುವಂಥ ಸ್ಪ್ರಿಂಗನ್ನು ಹೋಲುತ್ತವೆ. ಆದರೆ ಅದಕ್ಕಿಂತ ಚಿಕ್ಕದು, ಅದಕ್ಕಿಂತ ಮಿದು. ಒಂದು ಬೆಂಕಿಕಡ್ಡಿಯನ್ನು ನಾಲ್ಕಾಗಿ ಸೀಳಿದರೆ ಕಾಣುವಷ್ಟು ಸಪೂರ. ಆದರೆ ಸ್ಪ್ರಿಂಗ್ ಅಲ್ಲ, ಜಗ್ಗಿದರೆ ಹಿಗ್ಗಬಲ್ಲ ಜಾಳಿಗೆ. ಅದರೊಳಗೆ ಇಡೀ ಬೆಂಕಿಕಡ್ಡಿಯನ್ನು ತೂರಿಸಬಹುದು.

ಒಂದು ಜಾಳಿಗೆಯ ಬೆಲೆ ಒಂದೂವರೆ ಲಕ್ಷ ರೂಪಾಯಿ. ಒಂದು ಬ್ರೀಫ್‌ಕೇಸಿನಲ್ಲಿ ಐದು ಕೋಟಿ ರೂಪಾಯಿ ಮೌಲ್ಯದ ಸ್ಟೆಂಟ್‌ಗಳನ್ನು ಸಾಗಿಸಬಹುದು. ವೈದ್ಯಕೀಯ ತಂತ್ರಜ್ಞಾನದ ಪವಾಡವೇ ಇದರಲ್ಲಿದೆ. ಜೇಡನ ಬಲೆಯ ಸಪೂರ ಎಳೆಯ ಗಾತ್ರದ ಉಕ್ಕು, ನಿಕ್ಕೆಲ್, ಟೈಟಾನಿಯಂ ಮಿಶ್ರಲೋಹದ ತಂತಿಯ ತುಂಡುಗಳನ್ನು ನೂರಾರು ಕುಣಿಕೆಗಳ ಮೂಲಕ ಜಾಳಿಗೆಯಂತೆ ಹೆಣೆದಿರುತ್ತಾರೆ.

ಒಮ್ಮೆ ಹಿಗ್ಗಿಸಿದರೆ ಅದು ಸುಲಭಕ್ಕೆ ಕುಗ್ಗುವುದಿಲ್ಲ. ಮತ್ತೆ ಅದರಲ್ಲೂ ವೈವಿಧ್ಯಗಳಿವೆ: ಪಾಲಿಯೆಸ್ಟರ್ ಸ್ಟೆಂಟ್, ಔಷಧವನ್ನು ಜಿನುಗಿಸಬಲ್ಲ ಸ್ಟೆಂಟ್, ಸ್ಮರಣಶಕ್ತಿಯುಳ್ಳ ಸ್ಟೆಂಟ್ ಇವೆ. ರಕ್ತದಲ್ಲಿ ತಾನಾಗಿ ಕ್ರಮೇಣ ಕರಗಿ ಕಣ್ಮರೆಯಾಗಬಲ್ಲ ಜೈವಿಕ ಸ್ಟೆಂಟ್ ಇದೆ.

ನಿಮ್ಮ ರಕ್ತದಲ್ಲಿ ಕೊಲೆಸ್ಟೆರಾಲ್ ಜಾಸ್ತಿ ಇದ್ದರೆ, ಹೃದಯದ ಸ್ನಾಯುಗಳ ಮಧ್ಯೆ ಸಾಗುವ ಆರ್ಟರಿ (ಅಪಧಮನಿ) ಎಂಬ ಶುದ್ಧ ರಕ್ತನಾಳದಲ್ಲಿ ಅದು ಗರಣೆಗಟ್ಟಿ ಕೂರಬಹುದು. ರಕ್ತ ಸಲೀಸಾಗಿ ಹೃದಯಕ್ಕೆ ಹೋಗಲಾರದು. ಹೃದಯ ಬಡಿತ ಆಗಾಗ ತಾಳ ತಪ್ಪುತ್ತಿರಬಹುದು. ಸುಸ್ತು, ಕಣ್ಣುಮಂಜು, ಎದೆನೋವು ಬರುತ್ತಿರಬಹುದು. ನಾಳ ಪೂರ್ತಿ ಕಟ್ಟಿಕೊಂಡಾಗ ಹಠಾತ್ ಹಾರ್ಟ್‌ಫೇಲ್ ಆಗಬಹುದು, ಇಲ್ಲವೆ ಲಕ್ವ ಹೊಡೆಯಬಹುದು.

ಕೊಲೆಪಾತಕ ಕೊಲೆಸ್ಟೆರಾಲನ್ನು ಕರಗಿಸಬಲ್ಲ ಔಷಧಗಳೂ ಕೆಲಸ ಮಾಡದಿದ್ದರೆ ಡಾಕ್ಟರರು ಆಂಜಿಯೊಪ್ಲಾಸ್ಟಿ ಮಾಡುತ್ತಾರೆ. ಅಂದರೆ, ಕಾಲಿನ ಅಥವಾ ತೋಳಿನ ರಕ್ತನಾಳದೊಳಕ್ಕೆ ಸಪೂರ ಕೊಳವೆಯನ್ನು ತೂರಿಸಿ ತಳ್ಳುತ್ತಾರೆ. ಅದು ಹೃದಯದ ಬಳಿಯ ಆರ್ಟರಿಯಲ್ಲಿ ಕಿಲುಬುಗಟ್ಟಿದ ಜಾಗಕ್ಕೆ ಬಂದಾಗ, ಕೊಳವೆಯ ತುದಿಯನ್ನು ಬಲೂನಿನಂತೆ ಉಬ್ಬಿಸಬಹುದು.

ಆರ್ಟರಿಯಲ್ಲಿ ಗಂಟಾಗಿ ನಿಂತಿದ್ದ ಜಿಡ್ಡು ಅತ್ತಿತ್ತ ಚದುರುತ್ತದೆ. ರಕ್ತಸಂಚಾರ ಸುಗಮವಾಗುತ್ತದೆ. ಆದರೆ ಕೆಲವು ದಿನಗಳ ಬಳಿಕ ಮತ್ತೆ ಅಲ್ಲಿ ಜಿಡ್ಡುಗಟ್ಟಬಹುದು. ಕೊಳವೆಯ ತುದಿಯಲ್ಲಿ ಸ್ಟೆಂಟ್ ಜಾಳಿಗೆಯನ್ನು ಸಿಕ್ಕಿಸಿದ್ದರೆ ಅದರ ಕತೆಯೇ ಬೇರೆ. ಬಲೂನಿನಂತೆ ಕೊಳವೆತುದಿ ಉಬ್ಬಿದಾಗ ಸ್ಟೆಂಟ್ ಅರಳುತ್ತದೆ. ಅಲ್ಲೇ ಆರ್ಟರಿಯ ಭಿತ್ತಿಯನ್ನು ಅಗಲಿಸಿ ಹಿಡಿದು ಹಾಗೇ ನಿಂತಿರುತ್ತದೆ. ರಕ್ತಸಂಚಾರ ಸಲೀಸು. ಇಡೀ ಚಿಕಿತ್ಸೆಯೂ ಸಲೀಸು. ಸರ್ಜರಿ ಬೇಡ, ರಕ್ತದಾನಿಗಳ ಮರ್ಜಿ ಬೇಡ, ಆಸ್ಪತ್ರೆಯಲ್ಲಿ ದೀರ್ಘಾವಧಿ ವಾಸ ಬೇಡ.

ಆದರೆ ಸ್ಟೆಂಟ್ ತುಂಬಾ ದುಬಾರಿಯಾಗಿತ್ತು. ಆರೇಳು ಸಾವಿರ ಮೌಲ್ಯದ ಸ್ಟೆಂಟ್ ಒಂದೂವರೆ ಎರಡು ಲಕ್ಷ ರೂಪಾಯಿವರೆಗೆ ಬೆಲೆ ಹಿಗ್ಗಿಸಿಕೊಂಡೇ ರೋಗಿಯ ಆರ್ಟರಿಯೊಳಕ್ಕೆ ಹಿಗ್ಗಿ ಕೂರುತ್ತಿತ್ತು. ಬೆಲೆಯನ್ನು ನಿಯಂತ್ರಣದಲ್ಲಿ ಇಡಬೇಕಿದ್ದ ‘ಜೀವ ಉಳಿಸುವ ಔಷಧಗಳ ರಾಷ್ಟ್ರೀಯ ಪಟ್ಟಿ’ಯಲ್ಲಿ ಇದುವರೆಗೆ ಔಷಧಗಳ ಹೆಸರುಗಳು ಮಾತ್ರ ಇದ್ದವು. ಸ್ಟೆಂಟ್ ಎಂಬುದು ಔಷಧ ಅಲ್ಲವಲ್ಲ? ಕಳೆದ ಫೆಬ್ರುವರಿ 14ರಂದು ಸರ್ಕಾರ ಸ್ಟೆಂಟ್‌ಗಳ ಬೆಲೆಯ ಮೇಲೆ ಲಗಾಮು ಹಾಕುವುದಾಗಿ ಘೋಷಿಸಿತು.

ಮರುದಿನವೇ ಪ್ರಧಾನಿ ಮೋದಿಯವರು ಉತ್ತರ ಪ್ರದೇಶದ ಚುನಾವಣಾ ರ‍್ಯಾಲಿಯೊಂದರಲ್ಲಿ ಎತ್ತರದ ದನಿಯಲ್ಲಿ ‘ಈ ಸ್ಟೆಂಟ್ ಏನಿದೆ, ಅದನ್ನು ಸರ್ಕಾರದ ಔಷಧ ನಿಯಂತ್ರಣ ಇಲಾಖೆಯೊಳಗೆ ತೂರಿಸಿಬಿಟ್ಟೆವು. ಅದರ ಬೆಲೆ 45 ಸಾವಿರ ರೂಪಾಯಿ ಇದ್ದುದು ಇನ್ನು ಮೇಲೆ ಅದನ್ನು ಕೇವಲ ಎಂಟು ಸಾವಿರ ರೂಪಾಯಿಗೆ ಮಾರಾಟ ಮಾಡಬೇಕಾಗುತ್ತದೆ. ಕಡುಬಡವರಿಗೂ ಅದು ನೆರವಿಗೆ ಬರುತ್ತದೆ’ ಎಂದು ಹೇಳಿದರು. ಮೊದಲೇ ಲೆಕ್ಕ ಹಾಕಿಟ್ಟಂತೆ ‘ಪ್ರೇಮಿಗಳ ದಿನ’ದಂದೇ ಬೆಲೆ ಬಿಗಿತವನ್ನು ಘೋಷಿಸಿ, ಅತ್ತ ಔಷಧ ಸಚಿವ ಅನಂತಕುಮಾರ್ ಕೂಡ ‘ಇದೊಂದು ಹೃದಯ ತುಂಬಿದ ನಿರ್ಣಯ’ ಎಂದರು.

ಸಹಜವಾಗಿ ಲಾಭಕೋರ ಖಾಸಗಿ ಆಸ್ಪತ್ರೆಗಳಿಗೆ ಗಂಟಲು ಕಟ್ಟಿದಂತಾಯಿತು. ಕೋರ್ಟಿನಿಂದ ತಡೆಯಾಜ್ಞೆ ತರುವ ಹಾಗೂ ಇಲ್ಲ. ಔಷಧಗಳಾಗಿದ್ದರೆ ಕತೆ ಬೇರೆ ಇರುತ್ತಿತ್ತು. ಕಳೆದ ವರ್ಷ 344 ಬಗೆಯ ಅಕ್ರಮ ಕಾಂಬಿನೇಶನ್ ಔಷಧಗಳಿಗೆ ಸರ್ಕಾರ ನಿಷೇಧ ಹಾಕಿದಾಗ ಎಲ್ಲ ಕಂಪನಿಗಳೂ ಒಂದಾಗಿ ತಡೆಯಾಜ್ಞೆ ತಂದು ಕೂತಿವೆ. ಇಲ್ಲಿ ಹಾಗಲ್ಲ. ಸರ್ಕಾರ ನಿಷೇಧ ಹಾಕಲಿಲ್ಲ. ಮೂಲ ಬೆಲೆಯ ಮೇಲಿನ ಲಾಭಕ್ಕೆ ಖೋತಾ ಇಲ್ಲ.

ಹಾಗಾಗಿ ಸ್ಟೆಂಟ್ ಉತ್ಪಾದಿಸುವ ಕಂಪನಿಗಳು ಉಸಿರೆತ್ತುವಂತಿಲ್ಲ. ಆದರೆ ರೋಗಿಯ ಮಂಚದ ಬಳಿ ಸ್ಟೆಂಟ್  ಬೆಲೆ ಹಿಗ್ಗಾಮುಗ್ಗಾ ಏರುತ್ತಿತ್ತು. ಈಗ ಸ್ಟೆಂಟ್ ಬೆಲೆ ಹಠಾತ್ ಇಳಿದಾಗ ಡಾಕ್ಟರ್‌ಗಳ, ಆಡಳಿತವರ್ಗದ ಹೃದಯ ಬಡಿತ ಜೋರಾಗಿದೆ. ಸದ್ಯಕ್ಕೇನೋ ‘ಸ್ಟಾಕ್ ಇಲ್ಲ’ ಎಂದು ರೋಗಿಗಳನ್ನು ವಾರ್ಡ್‌ಗಳಲ್ಲಿ ಕೂರಿಸಿದ್ದಾರೆ. ವಾರ್ಡ್‌ಶುಲ್ಕದಲ್ಲೇ ಗಳಿಕೆ ಹೆಚ್ಚಿಸಬೇಕೆ ವಿನಾ ಬೇರೆ ಏನೂ ಸ್ಟಂಟ್ ಮಾಡುವ ಹಾಗಿಲ್ಲ.

ಸ್ಟೆಂಟ್ ಬೆಲೆ ಏರುತ್ತಿರುವುದರ ವಿರುದ್ಧ  2012ರಲ್ಲೇ ದಿಲ್ಲಿಯ ವೀರೇಂದ್ರ ಸಾಂಗ್ವಾನ್ ಎಂಬ ವಕೀಲ ಹೈಕೋರ್ಟ್‌ನಲ್ಲಿ ಜನಹಿತ ಮೊಕದ್ದಮೆ ದಾಖಲಿಸಿದ್ದರು. ಮೂಲ ಬೆಲೆಗಿಂತ ಶೇ 654ರಷ್ಟು ಹೆಚ್ಚಾಗಿರುವುದು, ಆಮದು ಮಾಡಿಕೊಂಡ ಐದು ಸಾವಿರ ರೂಪಾಯಿಗಳ ಸ್ಟೆಂಟ್ ಇಲ್ಲಿನ ಆಸ್ಪತ್ರೆಗಳಲ್ಲಿ 1.95 ಲಕ್ಷ ರೂಪಾಯಿಗಳಿಗೆ ಏರಿ ಕೂತಿರುವುದು ಇವೆಲ್ಲ ಗೊತ್ತಿದ್ದೂ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ಏನೂ ಮಾಡುತ್ತಿಲ್ಲವೇಕೆ ಎಂದು ಅವರು ಕೇಳಿದ್ದರು.

ಇದಕ್ಕೂ ತುಂಬ ಹಿಂದೆ, 1990ರಲ್ಲಿ ಸ್ಟೆಂಟ್‌ಗಳ ಬಳಕೆ ಆರಂಭವಾದಾಗಲೇ ರಕ್ಷಣಾ ಸಂಶೋಧನ ಇಲಾಖೆಯ ನಿರ್ದೇಶಕರಾಗಿದ್ದ ಎಪಿಜೆ ಅಬ್ದುಲ್ ಕಲಾಂ ಮತ್ತು ಹೈದರಾಬಾದಿನ ನಿಝಾಂ ಆಸ್ಪತ್ರೆಯ ಮುಖ್ಯಸ್ಥ ಡಾ. ಸೋಮರಾಜು ಸೇರಿ ಕಡಿಮೆ ಬೆಲೆಯ ಸ್ಟೆಂಟ್‌ಗಳ ಉತ್ಪಾದನೆ ಆರಂಭಿಸಿದ್ದರು. ‘ಕೆ.ಆರ್ (ಕಲಾಂ-ರಾಜು) ಸ್ಟೆಂಟ್’ ಹೆಸರಿನ ಏಳು ಸಾವಿರ ರೂಪಾಯಿಗಳ ಜಾಳಿಗೆಗಳಿಂದ ಡಾಕ್ಟರ್‌ಗಳಿಗೆ ಏನೂ ಗಿಟ್ಟುತ್ತಿರಲಿಲ್ಲ. ಅದೇ ವೇಳೆಗೆ ಇನ್ನೂ ಸುಧಾರಿತ, ಔಷಧ ಕಕ್ಕಬಲ್ಲ ಹೊಸ ಸ್ಟೆಂಟ್‌ಗಳೂ ಬಂದಿದ್ದರಿಂದ ಸರ್ಕಾರಿ ಆಸ್ಪತ್ರೆಗಳಲ್ಲೂ ಕೆ.ಆರ್. ಸ್ಟೆಂಟ್ ಮೂಲೆ ಸೇರಿದವು.

2015ರಲ್ಲಿ ಕಲಾಂ ನಿಧನಕ್ಕೆ ಮಾತಿನಲ್ಲೇ ಕಣ್ಣೀರು ಹರಿಸುವ ಬದಲು ಸುಧಾರಿತ ಸ್ಟೆಂಟ್‌ಗಳ ಉತ್ಪಾದನೆಗೆ ಸರ್ಕಾರ ಆದ್ಯತೆ ಕೊಡಲಿ ಎಂಬ ಒತ್ತಾಯ ಬಂದಿತ್ತು. ಆಗ ನಿಜಕ್ಕೂ ಲಕ್ಷ್ಯ ವಹಿಸಿದ್ದಿದ್ದರೆ ಈಗ ಬೆಲೆ ಕುಸಿತದಿಂದ ಸ್ಟೆಂಟ್‌ಗಳ ಅಭಾವ ತಲೆದೋರುತ್ತಿರಲಿಲ್ಲ.

ಸ್ಟೆಂಟ್ ಸುತ್ತ ನೇಯ್ದುಕೊಂಡ ಲಾಭಕೋರ ಜಾಳಿಗೆ ಇಡೀ ಜಗತ್ತಿಗೆ ವ್ಯಾಪಿಸಿದೆ. ಅಮೆರಿಕದ ಮೇರಿಲ್ಯಾಂಡ್‌ನ ಆಸ್ಪತ್ರೆಯ ಮುಖ್ಯಸ್ಥ  ಡಾ. ಮಾರ್ಕ್ ಮೇಯ್ಡಿ ಎಂಬಾತ 585 ಹೃದ್ರೋಗಿಗಳಿಗೆ ಅನಗತ್ಯವಾಗಿ ಸ್ಟೆಂಟ್ ತೂರಿಸಿ ಕಂಪನಿಯೊಂದರಿಂದ ಶಾಭಾಸ್ ಮತ್ತು ಭಕ್ಷೀಸು ಪಡೆದಿದ್ದು ದಾಖಲಾಗಿದೆ. ಅಲ್ಲೇನು ಬಿಡಿ, ವೈದ್ಯಕೀಯ ವೆಚ್ಚವೆಲ್ಲ ವಿಮಾ ಕಂಪನಿಗಳ, ಸರ್ಕಾರಿ ಇಲಾಖೆಯ ತಲೆಗೆ ಸುತ್ತಿಕೊಳ್ಳುತ್ತದೆ. ಆದರೂ ಅಲ್ಲಿ 56 ವಯಸ್ಸಿನ ರೋಗಿಯೊಬ್ಬ ಪದೇ ಪದೇ ಡಾಕ್ಟರ್ ಬಳಿಗೆ ಹೋಗಿ ತನ್ನ ಹೃದಯದ ಆರ್ಟರಿಗಳಿಗೆ ದಾಖಲೆಯ 67 ಸ್ಟೆಂಟ್‌ಗಳನ್ನು ಹಾಕಿಸಿಕೊಂಡಿದ್ದಾನೆ.

ಅವರಿಬ್ಬರ ಹೃದಯ ವೈಶಾಲ್ಯ ಮೆಚ್ಚಿಕೊಳ್ಳುವಂಥದ್ದೇ ಹೌದಾದರೂ ‘ಸರ್ಕಾರಿ ವೆಚ್ಚ ಎಂದಮೇಲೆ ಹೇಳೋರು ಕೇಳೋರು ಯಾರೂ ಇಲ್ಲವೆ?’ ಎಂದು ಆ ಡಾಕ್ಟರ್‌ಗೆ ಸಾರ್ವಜನಿಕ ಛೀಮಾರಿ ಬಿದ್ದಿದೆ. ಇತ್ತ ಪಾಕಿಸ್ತಾನದಲ್ಲಿ ಕಳೆದ ತಿಂಗಳು ಇದೇ ದಿನಗಳಲ್ಲಿ ಸ್ಟೆಂಟ್ ಕುರಿತ ಹಗರಣವೊಂದು ಬಯಲಿಗೆ ಬಂದಿದೆ. ಅಲ್ಲಿನ ಪಂಜಾಬ್ ಪ್ರಾಂತದಲ್ಲಿ ಡಾಕ್ಟರ್ ಮತ್ತು ದಲ್ಲಾಳಿಗಳು ಸೇರಿ ಅಮೆರಿಕದ ವಂಚಕರಿಗಿಂತ ಎರಡು ಹೆಜ್ಜೆ ಮುಂದೆ ಹೋಗಿ, ರೋಗಿಗಳಿಗೆ ಅನಗತ್ಯ ನಕಲಿ ಸ್ಟೆಂಟ್‌ಗಳನ್ನು ನುಗ್ಗಿಸುತ್ತಾರೆ, ಸ್ಟೆಂಟ್ ಹಾಕದೇ ಎರಡು ಲಕ್ಷ ರೂಪಾಯಿ ಪೀಕಿಸಿದ್ದೂ ಗಲಾಟೆಯಾಗಿದೆ.

ಜರ್ಮನಿ, ಅಮೆರಿಕ, ಜಪಾನ್ ದೇಶಗಳಿಂದ ಸ್ಟೆಂಟ್‌ಗಳನ್ನು ಆಮದು ಮಾಡಿಕೊಳ್ಳುವ 55 ದಲ್ಲಾಳಿ ಕಂಪನಿಗಳ ನೋಂದಣಿ ಆಗಿದೆಯಾದರೂ ಯಾವ ಆಸ್ಪತ್ರೆಗೂ ಅಲ್ಲಿಂದ ಸ್ಟೆಂಟ್ ಪೂರೈಕೆ ಆಗುತ್ತಿಲ್ಲ ಎಂಬುದು ಪತ್ತೆಯಾಗಿದೆ. ಹಾಗಿದ್ದರೆ ಯಾವ ಫಾರಿನ್ ಕಂಪನಿಗಳಿಂದ ಸ್ಟೆಂಟ್‌ಗಳು ಬರುತ್ತಿವೆ?

ಸೂರತ್ ನಗರದ ಸ್ಟೆಂಟ್ ಉತ್ಪಾದನಾ ಘಟಕದ ಬಗ್ಗೆ ಆರಂಭದಲ್ಲಿ ಹೇಳಿದ್ದು ಪೂರ್ತಿ ಕಟ್ಟುಕತೆಯೇನಲ್ಲ. ವಜ್ರದ ಕೆತ್ತನೆಗೆ ಬಳಸುವ ಲೇಸರ್ ತಂತ್ರಜ್ಞಾನ ಅಲ್ಲಿ ಸ್ಟೆಂಟ್‌ಗಳ ಉತ್ಪಾದನೆಗೂ ಬಳಕೆಯಾಗುತ್ತಿದೆ. ಭಾರತದಲ್ಲಿ ಸ್ಟೆಂಟ್ ಉತ್ಪಾದನೆ ಮಾಡುವ ಹನ್ನೊಂದು ಕಂಪನಿಗಳ ಪೈಕಿ ಒಂಬತ್ತು ಕಂಪನಿಗಳು ಸೂರತ್ ಮತ್ತು ಸಮೀಪದ ವಾಪಿಯಲ್ಲಿವೆ. ಒಟ್ಟಿಗೆ ಅವು ವರ್ಷಕ್ಕೆ ₹ 2500 ಕೋಟಿ ಮೌಲ್ಯದ ಸ್ಟೆಂಟ್‌ಗಳನ್ನು ಉತ್ಪಾದಿಸುತ್ತಿವೆ.

ಕೆಲವುಗಳ ಗುಣಮಟ್ಟವೂ ಚೆನ್ನಾಗಿದೆ. ‘ನಾನಂತೂ ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ ಮಾನ್ಯತೆ ಪಡೆದ ಸ್ಥಳೀಯ ಸ್ಟೆಂಟ್‌ಗಳನ್ನೇ ಬಳಸುತ್ತೇನೆ’ ಎನ್ನುತ್ತಾರೆ, ದಾಖಲೆ ಸಂಖ್ಯೆಯಲ್ಲಿ ಹೃದಯ ಚಿಕಿತ್ಸೆ ನಡೆಸಿ ಭಾರತದ ಸರ್ವೋಚ್ಚ ವೈದ್ಯಪ್ರಶಸ್ತಿ ಮತ್ತು ಪದ್ಮಶ್ರೀ ಪಡೆದ ಅಹ್ಮದಾಬಾದ್‌ನ ಹೃದ್ರೋಗ ತಜ್ಞ ಡಾ. ತೇಜಸ್ ಪಟೇಲ್.

ಈಗೀಗ ರಕ್ತನಾಳವನ್ನಷ್ಟೇ ಅಲ್ಲ, ಅನ್ನನಾಳ, ದೊಡ್ಡಕರುಳು, ಪಿತ್ತಜನಕಾಂಗ, ಶ್ವಾಸನಾಳಗಳನ್ನು ಹಿಗ್ಗಿಸಲಿಕ್ಕೂ ವಿವಿಧ ಗಾತ್ರದ ಸ್ಟೆಂಟ್‌ಗಳ ಬಳಕೆಯಾಗುತ್ತಿದೆ. ಹೃದಯದ ಕವಾಟದಿಂದ ಹಿಡಿದು ಮಂಡಿಚಿಪ್ಪು, ಒಸಡು, ಯಕೃತ್ತು, ಧ್ವನಿಪೆಟ್ಟಿಗೆ, ಹೀಗೆ ಜೀವಂತ ವ್ಯಕ್ತಿಯ ಅಂಗಾಂಗಗಳಲ್ಲಿ ಕೃತಕ ಬಿಡಿಭಾಗಗಳು ದಾಂಗುಡಿ ಇಡುತ್ತ ಹೋದಂತೆ ವೈದ್ಯಲೋಕದ ಗಲ್ಲಾಪೆಟ್ಟಿಗೆಯ ಗಾತ್ರವೂ ಹೆಚ್ಚುತ್ತ ಹೋಗುತ್ತಿದೆ.

ಇತ್ತ ನಮ್ಮ ದೇಶದಲ್ಲಿ ಆಗಲೇ ನಾಲ್ಕೂವರೆ ಕೋಟಿ ಹೃದ್ರೋಗಿಗಳಿದ್ದಾರೆಂದು ಅಂದಾಜು ಮಾಡಲಾಗಿದ್ದು ಹೊಸ ರೋಗಿಗಳ ಸಂಖ್ಯೆ ನಮ್ಮ ಜಿಡಿಪಿಗಿಂತ ನಾಲ್ಕು ಪಟ್ಟು ಹೆಚ್ಚಿನ ವೇಗದಲ್ಲಿ ಏರುತ್ತಿದೆ. ಪ್ರತಿ 33  ಸೆಕೆಂಡಿಗೆ ಒಂದೊಂದು ಸಾವು ಸಂಭವಿಸುತ್ತಿದೆ. ಇನ್ನೂ ಆತಂಕದ ಸಂಗತಿ ಏನೆಂದರೆ ಎಳೆ ವಯಸ್ಸಿನವರೂ ಹೃದ್ರೋಗಕ್ಕೆ ಬಲಿಯಾಗುತ್ತಿದ್ದಾರೆ.

ಸಕ್ಕರೆ, ಗಿಣ್ಣಬೆಣ್ಣೆ, ಮೊಟ್ಟೆ, ಉಪ್ಪು ಮತ್ತು ಮೈದಾ ಈ ‘ಐದು ಬಿಳಿವಿಷ’ಗಳ ಉತ್ಪಾದನೆಯಲ್ಲಿ ಕ್ರಾಂತಿಯಾಗುತ್ತಿದೆ. ಅವನ್ನೆಲ್ಲ ಹೇರಳ ಬಳಸುವ ಬೇಕರಿಗಳ ಸಂಖ್ಯೆ ಬೀದಿಬೀದಿಯಲ್ಲಿ ಹೆಚ್ಚುತ್ತಿದೆ. ಸ್ಟೆಂಟ್‌ಗಳ ಬೆಲೆ ಏರದಂತೆ ಅದೆಷ್ಟೇ ಬಿಗಿಬಂಧನ ಹಾಕಿದ್ದರೂ ಆಹಾರದ  ಗುಣಮಟ್ಟ ನಿಯಂತ್ರಣವೂ ಸಡಿಲ, ನಾಲಗೆಯ ಚಪಲವೂ ಸಡಿಲವಿದ್ದರೆ ಎದೆಯ ಕದತಟ್ಟಿ ಕಾಯಿಲೆ ನುಗ್ಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT