ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಗದಂತೆ ಬಾಳಿ ಸರಿದು ಹೋದರು...

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅದು ರಾಷ್ಟ್ರಪತಿಗಳ ಕಚೇರಿಯ ಕರೆ. `ನಿಮಗೆ ಪದ್ಮಶ್ರೀ  ಪ್ರಶಸ್ತಿ ಬಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭದ ತಾಲೀಮಿನಲ್ಲಿ ಭಾಗವಹಿಸಲು ನೀವು ದೆಹಲಿಗೆ ಬರಬೇಕು~. `ಇಲ್ಲ ನನಗೆ ಬರಲು ಆಗುವುದಿಲ್ಲ. ಅಂಥ ತಾಲೀಮು, ಗಿಲೀಮು ಮಾಡಲು ನನಗೆ ಆಗದು~ ಎಂದು ಈ ಕಡೆಯವರು ಫೋನ್ ಇಟ್ಟರು. ಆ ಕಡೆಯವರಿಗೆ ಸೋಜಿಗ: `ಏನು ಜನ ಇವರು; ಪ್ರಶಸ್ತಿಗಾಗಿ ದುಂಬಾಲು ಬೀಳುವವರು, ಲಾಬಿ ಮಾಡುವವರು ಇರುವಾಗ, ನಾವೇ ಪ್ರಶಸ್ತಿ ಕೊಡುತ್ತೇವೆ ಎಂದರೂ ಈ ಮನುಷ್ಯ ಹೀಗೆ ಮಾತನಾಡುತ್ತಾನಲ್ಲ?~ ಕೇಂದ್ರ ಸರ್ಕಾರದ ಅಧಿಕಾರಿಗಳು ರಾಧಾಕೃಷ್ಣ ಮನೆಗೇ ಬಂದು ಪ್ರಶಸ್ತಿ ಪ್ರದಾನ ಮಾಡಿದ್ದು ಈಗ ಇತಿಹಾಸ.

-ಕಳೆದ ಭಾನುವಾರ ತೀರಿಕೊಂಡ ಡಾ.ಬಿ.ಪಿ. ರಾಧಾಕೃಷ್ಣ ಬದುಕಿದ್ದೇ ಹೀಗೆ.  ಅವರು ತಮ್ಮ ನಂಬಿಕೆಗಳನ್ನು, ಆದರ್ಶಗಳನ್ನು ಎಂದೂ ಬಿಟ್ಟುಕೊಡಲಿಲ್ಲ. ಆನೆ ನಡೆದದ್ದೇ ದಾರಿ ಎನ್ನುವಂತೆ ಸಂಪೂರ್ಣ 94 ವರ್ಷಗಳ ಕಾಲ ಬಾಳಿದರು.

ಬಿಪಿಆರ್ ಎಂದೇ ಹೆಸರಾಗಿದ್ದ ಬೆಂಗಳೂರು ಪುಟ್ಟಯ್ಯ ರಾಧಾಕೃಷ್ಣ (1918 ಏಪ್ರಿಲ್ 30) ಹುಟ್ಟಿದ್ದು ಬೆಂಗಳೂರಿನಲ್ಲಿಯೇ. ಅವರ ತಂದೆ ಪುಟ್ಟಯ್ಯ ಒಕ್ಕಲಿಗರ ಸಂಘ, ಬೆಂಗಳೂರು ಪ್ರೆಸ್ ಕಟ್ಟಿದವರಲ್ಲಿ ಪ್ರಮುಖರು. ಅವರಿಗೆ ಆರು ಜನ ಮಕ್ಕಳು. ರಾಧಾಕೃಷ್ಣ ಅವರ ಹಾಗೆಯೇ ಎಲ್ಲ ಮಕ್ಕಳೂ ಉನ್ನತ ಶಿಕ್ಷಣ ಪಡೆದು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹೆಸರು ಮಾಡಿದರು.

ರಾಧಾಕೃಷ್ಣ ಸೆಂಟ್ರಲ್ ಕಾಲೇಜಿನಿಂದ ಬಿ.ಎಸ್‌ಸಿ ಆನರ್ಸ್ ಪದವಿ ಪಡೆದು ಭೂ ವಿಜ್ಞಾನ ಇಲಾಖೆಯಲ್ಲಿ ಕ್ಷೇತ್ರ ಸಹಾಯಕರಾಗಿ ಸೇವೆ (1937) ಆರಂಭಿಸಿದರು. ಆಗ ಇಲಾಖೆಯಲ್ಲಿ ನಾಲ್ಕಾರು ಜನ ಇದ್ದರು. ಅವರು ಇಲಾಖೆಯ ನಿರ್ದೇಶಕರಾಗಿ ನಿವೃತ್ತರಾಗುವಾಗ ಅದು ಹೆಮ್ಮರವಾಗಿ ಬೆಳೆದಿತ್ತು. ಬರೀ ಸಿಬ್ಬಂದಿ ಸಂಖ್ಯೆಯಲ್ಲಿ ಮಾತ್ರವಲ್ಲ ತನ್ನ ಸೇವೆಯ ವಿಸ್ತಾರದಲ್ಲಿಯೂ ಅದು ದೊಡ್ಡ ಆಲದ ಮರವೇ ಆಗಿತ್ತು.

ಕ್ಲೋಸ್‌ಪೇಟ್ ಎಂದು ಮೊದಲು ಹೆಸರಾಗಿದ್ದ ಈಗಿನ ರಾಮನಗರದ ಕಲ್ಲು ಬಂಡೆಗಳ ಕುರಿತಂತೆ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪಡೆದ (1954) ರಾಧಾಕೃಷ್ಣ ನಂತರ ಬರೆದ ಪುಸ್ತಕಗಳು, ಮಾಡಿದ ಅಧ್ಯಯನಗಳು ಅಂತರರಾಷ್ಟ್ರೀಯ ಮನ್ನಣೆ ಪಡೆದುವು. ವಿಶೇಷ ಎಂದರೆ ವಿಜ್ಞಾನಿಗಳನ್ನು ಕುರಿತು ಅವರು ಕನ್ನಡದಲ್ಲಿ ಬರೆದ ಪುಸ್ತಕಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂತು.

ಹಳ್ಳಿಗಳಿಗೆ ಕೊಳವೆ ಬಾವಿಯ ಶುದ್ಧ ನೀರು ಕೊಟ್ಟವರು ಎಂಬ ಖ್ಯಾತಿ ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ ಅಬ್ದುಲ್ ನಜೀರ್ ಸಾಬ್ ಅವರ ಹೆಸರಿನಲ್ಲಿಯೇ ಇದೆ. ನಜೀರ್ ಸಾಬರು ಮಂತ್ರಿಯಾಗಿದ್ದುದು ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ 80ರ ದಶಕದಲ್ಲಿ.
 
ಆದರೆ, ಕರ್ನಾಟಕದ ಹಳ್ಳಿ ಹಳ್ಳಿಗಳ, ತಾಲ್ಲೂಕುಗಳ ಅಂತರ್ಜಲ ಸಂಪತ್ತಿನ ನಕಾಶೆಯನ್ನು ಸಿದ್ಧ ಮಾಡಿ ತಮ್ಮ ಇಲಾಖೆಯ ಸಿಬ್ಬಂದಿಗೆ ಈ ಜಲ ಸಂಪತ್ತನ್ನು ಗ್ರಾಮೀಣ ಜನರಿಗೆ ಒದಗಿಸಿ ಕೊಡುವಂತೆ ಹೇಳಿದವರು ರಾಧಾಕೃಷ್ಣ. ಅವರು, ತಮ್ಮ ಇಲಾಖೆಯ ಡ್ರಿಲ್ಲಿಂಗ್ ಯಂತ್ರಗಳನ್ನು ಹಳ್ಳಿಗಳಿಗೆ ಕಳುಹಿಸಿ ನಾಮ್ ಕಾ ವಾಸ್ತೆ ದರಕ್ಕೆ ಕೊಳವೆ ಬಾವಿಗಳನ್ನು ಕೊರೆಸಿ ಕೊಟ್ಟಿದ್ದರು. ಅವರು ಆ ಕೆಲಸ ಮಾಡಿದ್ದು 70ರ ದಶಕದಲ್ಲಿಯೇ!

ಆದರೆ, ಅಂತರ್ಜಲವನ್ನು ಬೇಕಾಬಿಟ್ಟಿಯಾಗಿ ಬಳಸಲು ಬಿಟ್ಟರೆ ಆಗುವ ಅಪಾಯವೇನು ಎಂದೂ ಅವರಿಗೆ ಗೊತ್ತಿತ್ತು. `ಅಂತರ್ಜಲ ಬರಿದಾಗುವುದೇ?~ ಎಂಬ ಕಿರು ಪುಸ್ತಕವೊಂದನ್ನು ಈ ಎಚ್ಚರಿಕೆ ಕೊಡುವುದಕ್ಕಾಗಿಯೇ ಅವರು ಬರೆದರು.

70ರ ದಶಕದಲ್ಲಿ ಎಂದು ಕಾಣುತ್ತದೆ. ಒಂದು ದಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವರ ಸಭೆ ನಡೆದಿತ್ತು. ಕೃಷಿ ಮತ್ತು ಹಣಕಾಸು ಖಾತೆಯ ಸಚಿವರು, ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಆ ವೇಳೆಗಾಗಲೇ ಕರ್ನಾಟಕದ ಅಂತರ್ಜಲ ಬಳಕೆಗೆ ವಿಶ್ವ ಬ್ಯಾಂಕ್ ನೆರವು ನೀಡಲು ಮುಂದೆ ಬಂದಿತ್ತು.

ಆದರೆ, ಪ್ರತಿ ಎರಡು ಕೊಳವೆ ಬಾವಿಗಳ ನಡುವೆ 850 ಅಡಿ ಅಂತರ ಇರಲೇಬೇಕು ಎಂಬ ನಿರ್ಬಂಧ ಹಾಕಿತ್ತು. ಆಗಿನ ಕೃಷಿ ಸಚಿವರು ವಿಶ್ವ ಬ್ಯಾಂಕ್ ನೆರವು ಪಡೆಯುವ ನೆಪದಲ್ಲಿ ವಿದೇಶಕ್ಕೂ ಹೋಗಿ ಬಂದಿದ್ದರು. ಸಮ್ಮೇಳನ ಸಭಾಂಗಣದಲ್ಲಿ ಕೃಷಿ ಸಚಿವರು ಮಾತನಾಡುತ್ತ ಈ 850 ಅಡಿಯ ನಿರ್ಬಂಧ ತೆಗೆದು ಹಾಕಬೇಕು ಎಂದು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ರಾಧಾಕೃಷ್ಣರಿಗೆ ತಾಕೀತು ಮಾಡಿದರು.

ರಾಧಾಕೃಷ್ಣ ಖಡಕ್ ಅಧಿಕಾರಿ, `ನಾನು ಕೃಷಿ ಪರಿಣತನಲ್ಲ. ನೀವು ಭೂ ವಿಜ್ಞಾನ ಪರಿಣತರಲ್ಲ. ವಿಶ್ವ ಬ್ಯಾಂಕ್ ನೆರವು ಪಡೆಯಲು ಹೋಗುವಾಗ ನೀವು ನನ್ನನ್ನು ಕರೆದುಕೊಂಡೂ ಹೋಗಿರಲಿಲ್ಲ. ಈಗ 850 ಅಡಿ ನಿರ್ಬಂಧ ತೆಗೆದು ಹಾಕಿ ಎಂದು ಹೇಳಿದರೆ ನಾನು ಕೇಳುವವನಲ್ಲ. ನೀವು ವಿಶ್ವ ಬ್ಯಾಂಕಿಗೇ ಕೇಳಿರಿ~ ಎಂದು ಹೇಳಿ ಕಡತ ತೆಗೆದುಕೊಂಡು ಹೊರಟೇ ಹೋಗಿಬಿಟ್ಟರು. ಕೃಷಿ ಸಚಿವರು ಬಡ ಆಸಾಮಿಯೇನೂ ಆಗಿರಲಿಲ್ಲ.
 
ಆಗಿನ ಸಂಪುಟದಲ್ಲಿ ಪ್ರಬಲ ಭಿನ್ನಮತೀಯರೇ ಆಗಿದ್ದರು. ಅವರ ಪಕ್ಕದಲ್ಲಿ ಕುಳಿತ ಹಣಕಾಸು ಸಚಿವರೂ ಪ್ರಬಲರೇ ಆಗಿದ್ದರು. ಆದರೂ ರಾಧಾಕೃಷ್ಣ ನಿಯಮ ಮುರಿಯಲು ಸಿದ್ಧರಿರಲಿಲ್ಲ. ಮರುದಿನ ಸರ್ಕಾರದ ಅಭಿವೃದ್ಧಿ ಆಯುಕ್ತ ಜಿ.ವಿ.ಕೆ ರಾವ್ ಅವರು ರಾಧಾಕೃಷ್ಣ ಅವರನ್ನು ಕರೆಸಿ, `ಏನು ನೀವು ಹೀಗೆ ಹೇಳುವುದೇ?~ ಎಂದು ಅಸಮಾಧಾನದಿಂದಲೇ ಕೇಳಿದರು. `ಇಲ್ಲ ಸರ್, ನಾನು ನಿಯಮ ಮುರಿಯುವುದಿಲ್ಲ. ಅಂತರ್ಜಲ ರಕ್ಷಣೆಗೆ ಈ ನಿಯಮ ಬಹಳ ಮುಖ್ಯ~ ಎಂದು ರಾಧಾಕೃಷ್ಣ ತಮ್ಮನ್ನು ಸಮರ್ಥಿಸಿಕೊಂಡರು.

ಬರೀ ಸಚಿವರು ಮಾತ್ರವಲ್ಲ ಒಂದು ಸಾರಿ ಮುಖ್ಯಮಂತ್ರಿಗೂ ರಾಧಾಕೃಷ್ಣ ಇದೇ ರೀತಿ ಉತ್ತರ ಕೊಟ್ಟಿದ್ದರು. ಚಿತ್ರದುರ್ಗ ಜಿಲ್ಲೆಯಲ್ಲಿ ಯಾರೋ ಒಬ್ಬರು ಮೈಲುತುತ್ತೆ ಬಳಸಿ ತಾಮ್ರ ಉತ್ಪಾದನೆ ಮಾಡುತ್ತೇನೆ ಎಂದು ಹೊರಟಿದ್ದರು. ಅವರಿಗೆ ಸಹಾಯ ಮಾಡಲು ಆಗಿನ ಮುಖ್ಯಮಂತ್ರಿಗೆ ಆಸೆಯೂ ಇತ್ತು. `ನೋಡಿ ರಾಧಾಕೃಷ್ಣ, ಅವರಿಗೆ ಅನುಮತಿ ಕೊಡಿ~ ಎಂದರು. `ಅವನಂಥ ಅಡ್ಡಕಸಬಿಗಳು ತಾಮ್ರ ಉತ್ಪಾದನೆ ಮಾಡುವುದಾದರೆ ನಾವು ಇಲಾಖೆಯಲ್ಲಿ ಇರಬೇಕಿಲ್ಲ ಸರ್~ ಎಂದು ರಾಧಾಕೃಷ್ಣ ಥಟ್ಟನೆ ಉತ್ತರ ಕೊಟ್ಟರು.
 
ಆ ಮುಖ್ಯಮಂತ್ರಿ ಮುಖ ಹುಳ್ಳಗೆ ಮಾಡಿಕೊಂಡರು. ಆದರೆ, ಒತ್ತಾಯ ಮಾಡಲಿಲ್ಲ. ಬರೀ ತಾಮ್ರ ಮಾತ್ರವಲ್ಲ ಎಲ್ಲ ಖನಿಜ ಸಂಪತ್ತಿನ ನಿರ್ವಹಣೆಯ ಬಗೆಗೂ ರಾಧಾಕೃಷ್ಣ ಅವರಿಗೆ ಅದೇ ಬಗೆಯ ತಾದಾತ್ಮ್ಯವಿತ್ತು. ಅದಕ್ಕೆ ಸಾಕ್ಷಿಯಾಗಿ ಅವರು, `ಕರ್ನಾಟಕದ ಅಂತರ್ಜಲ (ಕನ್ನಡ-ಇಂಗ್ಲಿಷ್-ಹಿಂದಿ ಆವೃತ್ತಿ)~,  `ಕರ್ನಾಟಕದ ಖನಿಜ ಸಂಪತ್ತು (ಕನ್ನಡ ಮತ್ತು ಇಂಗ್ಲಿಷ್), `ಗೋಲ್ಡ್ ಇನ್ ಇಂಡಿಯಾ~, `ಹಟ್ಟಿ ಗೋಲ್ಡ್ ಮೈನ್ಸ್~, `ಜಿಯಾಲಜಿ ಆಫ್ ಕರ್ನಾಟಕ~, `ಗದಗ ಗೋಲ್ಡ್~,  `ಅಂತರ್ಜಲ~ (ಎಸ್.ಜಿತೇಂದ್ರಕುಮಾರ್ ಜತೆಯಾಗಿ) ಎಂಬಿತ್ಯಾದಿ ಪುಸ್ತಕ ಬರೆದರು. ಕರ್ನಾಟಕ ಮಾತ್ರವಲ್ಲ ಇಡೀ  ಭಾರತದ ಭೂ ವಿಜ್ಞಾನ ಕುರಿತ ಅವರ ಅಪಾರ ತಿಳಿವಳಿಕೆಯನ್ನು ಹಂಚಿಕೊಳ್ಳಬೇಕು ಎಂದೇ ದೇಶ-ವಿದೇಶಗಳ ಭೂ ವಿಜ್ಞಾನಿಗಳು ಇವರನ್ನು ಭೇಟಿ ಮಾಡಿ ಚರ್ಚಿಸುತ್ತಿದ್ದರು. ಭಾರತಕ್ಕೆ ಬಂದರೆ ಅವರು ಕರ್ನಾಟಕಕ್ಕೆ ಬಂದೇ ಹೋಗುತ್ತಿದ್ದರು. ಅವರ ಭೇಟಿಯ ಸಂಗಾತಿ ರಾಧಾಕೃಷ್ಣ ಅವರೇ ಆಗಿರುತ್ತಿದ್ದರು.

ಭೂ ವಿಜ್ಞಾನದ ಬಗೆಗಿನ ಪ್ರೀತಿಯ ಫಲವಾಗಿಯೇ ಬೆಂಗಳೂರಿನಲ್ಲಿ ಜಿಯಾಲಜಿಕಲ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯನ್ನು ರಾಧಾಕೃಷ್ಣ ಹುಟ್ಟಿ ಹಾಕಿದರು. 1958ರಿಂದ 74ರ ವರೆಗೆ ಅವರೇ ಸ್ಥಾಪಕ ಕಾರ್ಯದರ್ಶಿಯಾಗಿದ್ದರು. ನಂತರ `ಜರ್ನಲ್ ಆಫ್ ಜಿಯಾಲಜಿಕಲ್ ಸೊಸೈಟಿ ಆಫ್ ಇಂಡಿಯಾ~ದ ಸಂಪಾದಕರಾಗಿ 1992ರ ವರೆಗೆ ಕೆಲಸ ಮಾಡಿದರು.
 
92ರಿಂದ 2007ರ ವರೆಗೆ ಅವರೇ ಸೊಸೈಟಿಯ ಅಧ್ಯಕ್ಷರೂ ಆಗಿದ್ದರು. ಕಳೆದ 53 ವರ್ಷಗಳಿಂದ ಈ ಜರ್ನಲ್ ತನ್ನ ನಿಯತಕಾಲಿಕತನವನ್ನು ಕಳೆದುಕೊಂಡಿಲ್ಲ. ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ತಿಂಗಳ ಪತ್ರಿಕೆಯಾಗಿರುವ ಈ ಜರ್ನಲ್ ಅಚ್ಚುಕಟ್ಟಾಗಿ, ವಿಷಯ ಸಮೃದ್ಧವಾಗಿ  ಪ್ರತಿ ತಿಂಗಳು 1ನೇ ತಾರೀಖು ಚಂದಾದಾರರ ಮನೆಯಲ್ಲಿ ಇರುತ್ತದೆ.
 
ಸುಮಾರು ಐದು ದಶಕಗಳಿಂದ ರಾಧಾಕೃಷ್ಣ ಅವರ ಒಡನಾಡಿಯಾಗಿದ್ದ, ಭೂ ವಿಜ್ಞಾನ ಇಲಾಖೆಯಲ್ಲಿ ಮುಖ್ಯ ಡ್ರಿಲ್ಲರ್ ಆಗಿ ನಿವೃತ್ತರಾದ ಎಸ್. ಜಿತೇಂದ್ರಕುಮಾರ್ ಅವರ ಮನೆಗೆ ನಾನು ರಾಧಾಕೃಷ್ಣ ಅವರ ಕುರಿತು ಮಾತನಾಡಲು ಹೋದಾಗ ಫೆಬ್ರುವರಿ  ತಿಂಗಳ ಸಂಚಿಕೆ ಅವರ ಮೇಜಿನ ಮೇಲೆ ಇತ್ತು!
 
ರಾಧಾಕೃಷ್ಣ ಅವರು ಜರ್ನಲ್‌ನ ಸಂಪಾದಕರಾಗಿದ್ದಾಗ, ಬರೀ ಭೂ ವಿಜ್ಞಾನ ಮಾತ್ರವಲ್ಲ ಬದುಕಿಗೆ ಸಂಬಂಧಿಸಿದ ಅನೇಕ ವಿಷಯಗಳ ಬಗೆಗೆ ಸಂಪಾದಕೀಯ ಬರೆದಿದ್ದರು. ಆ ಸಂಪಾದಕೀಯಗಳನ್ನು ಒಳಗೊಂಡ `ರ‌್ಯಾಂಡಮ್ ಹಾರ್ವೆಸ್ಟ್~ ಹೆಸರಿನ ಎರಡು ಸಂಪುಟಗಳು ಬಿಡುಗಡೆಯಾಗಿವೆ, ಮೂರನೇ  ಸಂಪುಟ ಬಿಡುಗಡೆಗೆ ಅಣಿಯಾಗಿದೆ. 

ಸಹ್ಯಾದ್ರಿ ಬೆಟ್ಟ ಸಾಲುಗಳ ಬಗ್ಗೆ ಸಂಪೂರ್ಣ ಮಾಹಿತಿಯುಳ್ಳ  `ಸಹ್ಯಾದ್ರಿ-1~ ಮತ್ತು `ಸಹ್ಯಾದ್ರಿ 2~ ಹಾಗೂ ವೇದದಲ್ಲಿ ಪ್ರಸ್ತಾಪವುಳ್ಳ ಸರಸ್ವತಿ ನದಿಮೂಲವನ್ನು ಹುಡುಕುವ `ವೇದಿಕ್ ಸರಸ್ವತಿ~ ಅವರ ಮೇರುಕೃತಿಗಳು. ರಾಧಾಕೃಷ್ಣ ಅವರು ತಮ್ಮ ತಂದೆ ಪುಟ್ಟಯ್ಯ ಅವರನ್ನು ಕುರಿತು ಬರೆದ `ನನ್ನ ತಂದೆ~  ಪುಸ್ತಕದಲ್ಲಿ ಬೆಂಗಳೂರಿನ ಇತಿಹಾಸವೇ ಸಿಗುತ್ತದೆ.

ಪ್ರಖ್ಯಾತ ವಿಜ್ಞಾನಿ ಸಿ.ವಿ.ರಾಮನ್ ಅವರ ನಿಕಟ ಒಡನಾಡಿಯಾಗಿದ್ದ ರಾಧಾಕೃಷ್ಣ, ಸ್ವತಃ `ರಾಮನ್~ ಮಾತ್ರವಲ್ಲದೇ `ಶ್ರೀನಿವಾಸ್ ರಾಮಾನುಜಂ~, `ಮೇಡಂ ಕ್ಯೂರಿ~, `ಡಾರ್ವಿನ್~ `ಐನ್‌ಸ್ಟೀನ್~ ಮತ್ತು `ಬಿ.ಜಿ.ಎಲ್ ಸ್ವಾಮಿ~ ಅವರ ಜೀವನ ಚರಿತ್ರೆಯ ಪುಸ್ತಕಗಳನ್ನು ಕನ್ನಡದಲ್ಲಿ ಬರೆದರು. `ರಾಮನ್~, `ಡಾರ್ವಿನ್~ ಮತ್ತು `ಮೇಡಂ ಕ್ಯೂರಿ~ ಜೀವನ ಚರಿತ್ರೆಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನವೂ ರಾಧಾಕೃಷ್ಣ ಅವರಿಗೆ ಸಂದಿತು. ಒಬ್ಬ ಭೂ ವಿಜ್ಞಾನಿಗೆ ಅದು ದೊಡ್ಡ ಗೌರವದಂತೆ ಕಾಣಿಸಿತ್ತು.

ತಮಿಳುನಾಡಿನ ಚಿದಂಬರಂನಲ್ಲಿ ನಡೆದ 94ನೇ ಭಾರತ ವಿಜ್ಞಾನ ಕಾಂಗ್ರೆಸ್ ಅಧಿವೇಶನದಲ್ಲಿ ಜವಾಹರಲಾಲ್ ನೆಹರೂ ಜನ್ಮ ಶತಮಾನೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ರಾಧಾಕೃಷ್ಣ ಅವರದು ತುಂಬು ಕುಟುಂಬ. ಅವರಿಗೆ ಇಬ್ಬರು ಪುತ್ರರು, ನಾಲ್ವರು ಪುತ್ರಿಯರು. ಪತ್ನಿ ಮೊದಲೇ ನಿಧನರಾಗಿದ್ದರು.

ಒಂಬತ್ತು ದಶಕಗಳಿಗೂ ಮೀರಿ ಬಾಳಿದ ರಾಧಾಕೃಷ್ಣ ಅವರದು `ಬಳಪವಿಟ್ಟಳುಪದೊಂದಗ್ಗಳಿಕೆ~ಯಂಥ ಬರವಣಿಗೆ. ಅವರು ಬರೆದುದನ್ನು ತಿದ್ದುತ್ತಲೇ ಇರಲಿಲ್ಲ. ಅಂಥ ಪರಿಶುದ್ಧತೆಯನ್ನು ಅವರು ಬರವಣಿಗೆಯಲ್ಲಿ ಮಾತ್ರವಲ್ಲ ಬದುಕಿನಲ್ಲಿಯೂ ಅಳವಡಿಸಿಕೊಂಡಿದ್ದರು. ಅವರು ತಮ್ಮ ಹಿಂದೆ ಅಳಿಸಲಾಗದ ಹೆಜ್ಜೆಗಳನ್ನು ಬಿಟ್ಟು ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT