ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಬದಲಾವಣೆ ಮತ್ತು ನಮ್ಮ ಪ್ರಧಾನಿ

Last Updated 21 ಜನವರಿ 2018, 19:30 IST
ಅಕ್ಷರ ಗಾತ್ರ

'ನೀವು ಒಬ್ಬ ಕ್ರಾಂತಿಕಾರಿ ನಾಯಕ. ನೀವು ಭಾರತದಲ್ಲಿ ಕ್ರಾಂತಿ ಉಂಟುಮಾಡುತ್ತಿದ್ದೀರಿ. ನೀವು ಈ ಭವ್ಯ ನಾಡನ್ನು ಭವಿಷ್ಯದತ್ತ ಕೊಂಡೊಯ್ಯುತ್ತಿದ್ದೀರಿ' ಎಂದು ಇಸ್ರೇಲ್ ಪ್ರಧಾನಿ ಬೆಂಜಾಮಿನ್ ನೆತನ್ಯಾಹು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಕಳೆದ ವಾರ ಹೇಳಿದರು. ಅವರು ಹೇಳಿದ ಮಾತಿನ ಅರ್ಥ ಏನಿದ್ದಿರಬಹುದು?

ಕ್ರಾಂತಿ ಎಂಬ ಪದಕ್ಕೆ ನನ್ನಲ್ಲಿರುವ ಶಬ್ದಕೋಶವು 'ಸಂಪೂರ್ಣ ಅಥವಾ ಹಠಾತ್ ಬದಲಾವಣೆಯನ್ನು ಒಳಗೊಂಡಿರುವಂಥದ್ದು ಅಥವಾ ಅಂತಹ ಬದಲಾವಣೆಗೆ ಕಾರಣವಾಗುವಂಥದ್ದು' ಎಂಬ ಅರ್ಥವನ್ನು ನೀಡುತ್ತದೆ. ಇಂತಹ ಬದಲಾವಣೆಯನ್ನು ಕ್ರಾಂತಿಕಾರಿಯು ಸಾಮಾನ್ಯವಾಗಿ, ಸ್ಥಾಪಿತ ವ್ಯವಸ್ಥೆಗೆ ಎದುರಾಗಿ, ಅದರಲ್ಲೂ ಮುಖ್ಯವಾಗಿ ಪ್ರಭುತ್ವಕ್ಕೆ ಎದುರಾಗಿ ತರಲು ಬಯಸುತ್ತಾನೆ. ನೆತನ್ಯಾಹು, ಭಾರತವನ್ನು 'ಭವ್ಯ ರಾಷ್ಟ್ರ'ವೆಂದು ಕರೆದಿದ್ದಾರೆ (ಅವರು ಹಾಗೆ ಕರೆದಿದ್ದು ಏಕೆ ಎಂಬುದನ್ನು ತಿಳಿದುಕೊಳ್ಳುವುದು ಆಸಕ್ತಿಕರ ವಿಷಯ). ಹಾಗಾಗಿ, ಸ್ಥಾಪಿತ ವ್ಯವಸ್ಥೆಯೊಂದನ್ನು ಬದಲಾಯಿಸಲು ಮೋದಿ ಯತ್ನಿಸುತ್ತಿದ್ದಾರೆ ಎಂದು ನೆತನ್ಯಾಹು ಹೇಳಿರಲಿಕ್ಕಿಲ್ಲ ಎಂದು ಭಾವಿಸುವುದು ಉತ್ತಮ. ಹಾಗಾದರೆ, ನೆತನ್ಯಾಹು ಹೇಳುತ್ತಿರುವುದು ಏನು? ಅದು ನನಗೆ ನಿಜಕ್ಕೂ ತಿಳಿದಿಲ್ಲ. ಈ ವಿಚಾರದಲ್ಲಿ ಊಹೆಗಳನ್ನು ಬರೆಯಲು ನನಗೆ ಇಷ್ಟವಿಲ್ಲ. ಮುಖಸ್ತುತಿಗೆ ಶರಣಾಗಬಹುದಾದ ಗ್ರಾಹಕನೊಬ್ಬನಿಗೆ ಶಸ್ತ್ರಾಸ್ತ್ರಗಳನ್ನು ಮಾರಲು ನೆತನ್ಯಾಹು ಇಲ್ಲಿಗೆ ಬಂದಿದ್ದಾರೆ ಎಂಬ ಸಂಗತಿಯನ್ನು ಕೆಲವು ಹೊತ್ತಿನವರೆಗೆ ಪಕ್ಕಕ್ಕೆ ಇಡೋಣ.

ಸ್ಥಾಪಿತ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲು ಮೋದಿ ಬಯಸುತ್ತಿದ್ದಾರೆ ಎಂಬುದು ಒಂದು ರೀತಿಯಲ್ಲಿ ಸತ್ಯ. ಆ ಬದಲಾವಣೆ ಏನು? ಅದನ್ನು 'ಸುಧಾರಣೆ' ಎನ್ನಬಹುದು. ಆದರೆ ಈ ಪದ ಸಾಮಾನ್ಯ ಸಂದರ್ಭಗಳಲ್ಲಿ ಧ್ವನಿಸುವ ಅರ್ಥವನ್ನು ಇಲ್ಲಿ ಹೊಂದಿಲ್ಲ. ಇದನ್ನು ಮೋದಿ ಅವರ ಒಂದು ಉಪಕ್ರಮವನ್ನು ಉದಾಹರಿಸಿ ವಿವರಿಸುವೆ. ಸ್ವಚ್ಛ ಭಾರತ ಅಭಿಯಾನ ಚಾಲನೆ ಪಡೆದಿದ್ದು ಹೇಗೆ ಎಂಬುದು ಓದುಗರಿಗೆ ನೆನಪಿದೆ. ಪ್ರಧಾನಿಯವರು ತಾವೇ ಒಂದು ಪೊರಕೆ ಹಿಡಿದು, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಿ, ಹಾಗೆ ಮಾಡುವಂತೆ ಮತ್ತು ಅದರ ಬಗ್ಗೆ ಟ್ವೀಟ್ ಮಾಡುವಂತೆ ಇತರರಿಗೂ ಪ್ರೇರಣೆ ನೀಡುವ ಮೂಲಕ ಇದು ಚಾಲನೆ ಪಡೆಯಿತು. ಸ್ವಚ್ಛ ಭಾರತ ಅಭಿಯಾನದ ಉದ್ದೇಶದ ಬಗ್ಗೆ ಮೋದಿ ಅವರ ವೆಬ್‌ಸೈಟ್‌ನಲ್ಲಿ ವಿವರಣೆ ಇದೆ:

'2019ರಲ್ಲಿ ಮಹಾತ್ಮ ಗಾಂಧೀಜಿ ಜನಿಸಿದ 150ನೇ ವರ್ಷಾಚರಣೆ ಇದೆ. ಭಾರತವನ್ನು ಸ್ವಚ್ಛವಾಗಿ ಇಡುವುದು ಮಹಾತ್ಮನಿಗೆ ನೀಡುವ ಅತ್ಯುತ್ತಮ ಗೌರವ. ಸ್ವಚ್ಛತೆಗಾಗಿನ ಈ ಸಾಮೂಹಿಕ ಅಭಿಯಾನದ ನೇತೃತ್ವ ವಹಿಸಿದ ಪ್ರಧಾನಿ, ಭಾರತವನ್ನು ಸ್ವಚ್ಛವಾಗಿ ಮತ್ತು ಆರೋಗ್ಯವಾಗಿ ಇರಿಸುವ ಮಹಾತ್ಮನ ಕನಸನ್ನು ನನಸು ಮಾಡಲು ಸಾರ್ವಜನಿಕರಿಗೆ ಕರೆ ನೀಡಿದರು. ಮಂದಿರ್ ಮಾರ್ಗ್ ಪೊಲೀಸ್ ಠಾಣೆ ಬಳಿ ಸ್ವಚ್ಛತಾ ಅಭಿಯಾನಕ್ಕೆ ಶ್ರೀ ನರೇಂದ್ರ ಮೋದಿ ಅವರೇ ಚಾಲನೆ ನೀಡಿದರು. ಕಸವನ್ನು ಗುಡಿಸಿಹಾಕಲು ಪೊರಕೆ ಹಿಡಿದ ಅವರು, ಸ್ವಚ್ಛ ಭಾರತ ಅಭಿಯಾನವನ್ನು ದೇಶದ ಎಲ್ಲೆಡೆ ಸಾರ್ವಜನಿಕರ ಅಭಿಯಾನವನ್ನಾಗಿಸಿ, ಜನ ತಾವು ಕಸ ಎಸೆಯಬಾರದು, ಎಸೆಯಲು ಬೇರೆಯವರಿಗೂ ಬಿಡಬಾರದು ಎಂದು ಹೇಳಿದರು. ಹೊಲಸು ಮಾಡುವುದಿಲ್ಲ, ಮಾಡಲು ಬಿಡುವುದೂ ಇಲ್ಲ ಎಂಬ ಮಂತ್ರವನ್ನು ಅವರು ನೀಡಿದರು'.

ಅಭಿಯಾನದ ಬಗ್ಗೆ ಪರಿಚಯಾತ್ಮಕವಾಗಿ ಬರೆದಿರುವ ಟಿಪ್ಪಣಿಯಲ್ಲಿ ಮೋದಿ ಅವರು ಸ್ವಚ್ಛ, ಸ್ವಚ್ಛತೆ, ಕಸ, ಕಸ ಹಾಕುವುದು ಎಂಬ ಪದಗಳನ್ನು 21 ಬಾರಿ ಬಳಸಿದ್ದಾರೆ. 'ಶೌಚಾಲಯ' ಮತ್ತು 'ನೈರ್ಮಲ್ಯ' ಎಂಬ ಪದಗಳನ್ನು ಒಂದು ಬಾರಿ ಬಳಸಲಾಗಿದೆ. 'ಮನೆಗಳಲ್ಲಿ ಸೂಕ್ತವಾದ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ದೇಶದ ಸುಮಾರು ಅರ್ಧದಷ್ಟು ಕುಟುಂಬಗಳು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ಮೋದಿ ಇದೇ ವೇಳೆ ಮಾತನಾಡಿದರು' ಎಂಬ ಸಾಲಿನಲ್ಲಿ ಈ ಎರಡು ಪದಗಳ ಬಳಕೆ ಆಗಿದೆ. ಇವು ಮೊದಲಿನ ಯೋಜನೆಯ ವಿಸ್ತರಣೆಯ ರೂಪದಲ್ಲಿ ಇರುವ ಕಾರಣ, ಮೋದಿ ಅವರಿಗೆ ಇವು ಅಷ್ಟೇನೂ ಆಸಕ್ತಿಯ ವಿಚಾರಗಳಲ್ಲ.

ಕಸ ಎಸೆಯುವುದು ಅಸಭ್ಯ ಕೆಲಸ. ಅದು ಅಬ್ಬಬ್ಬಾ ಅಂದರೆ ಸೌಂದರ್ಯಕ್ಕೆ ಕಿರಿಕಿರಿ ಉಂಟುಮಾಡುವಂಥದ್ದು. ಇದು ನೈರ್ಮಲ್ಯದ ಸಮಸ್ಯೆಯಂತೆ ರಾಷ್ಟ್ರೀಯ ಬಿಕ್ಕಟ್ಟೇನೂ ಅಲ್ಲ (ನಮ್ಮ ಮಕ್ಕಳ ಪೈಕಿ ಶೇಕಡ 38ರಷ್ಟು ಮಕ್ಕಳ ಬೆಳವಣಿಗೆ ಎರಡು ವರ್ಷ ವಯಸ್ಸಿನಲ್ಲೇ ಕುಂಠಿತವಾಗುತ್ತದೆ. ಇದರಿಂದಾಗಿ ಆ ಮಕ್ಕಳು ತಮ್ಮ ಜೀವನವನ್ನು ಪೂರ್ಣ ಪ್ರಮಾಣದಲ್ಲಿ ಅನುಭವಿಸುವ ಅವಕಾಶವೇ ಇಲ್ಲದಂತೆ ಆಗಿಬಿಡುತ್ತದೆ). ಹೀಗಿದ್ದರೂ, ಮೋದಿ ಅವರ ಆದ್ಯತೆ ಮತ್ತು ಅವರು ನೀಡಿದ ಸಂದೇಶ ಕಸ ಎಸೆಯುವುದಕ್ಕೆ ಸಂಬಂಧಿಸಿದ್ದಾಗಿತ್ತು. ಅವರು ಬಯಸಿದ್ದು ವ್ಯಕ್ತಿಗತ ಧೋರಣೆಗಳಲ್ಲಿ ಬದಲಾವಣೆ. ಅವರು ಬಯಸಿದ್ದು ಆಂತರಿಕ ಬದಲಾವಣೆಯನ್ನು. ಇಂತಹ ಬದಲಾವಣೆ ತರುವ ಯತ್ನವನ್ನು ಸಾಮಾನ್ಯವಾಗಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಗುರುಗಳು ಮಾಡುತ್ತಾರೆ. ರಾಜಕೀಯದಲ್ಲಿ ಇರುವ ವ್ಯಕ್ತಿಗಳು ಇಂಥವನ್ನು ಸಾಮಾನ್ಯವಾಗಿ ಮಾಡಲು ಹೋಗುವುದಿಲ್ಲ.

ನೋಟು ರದ್ದತಿಯಂತಹ ವಿಲಕ್ಷಣ ಕ್ರಮದ ಹಿಂದೆ ಇದ್ದ ಪ್ರೇರಣೆ ಕೂಡ ಸಾಮಾಜಿಕ ಸುಧಾರಣೆ ಎಂದು ಸುಲಭದಲ್ಲಿ ಅರ್ಥ ಮಾಡಿಕೊಳ್ಳಬಹುದು. ಕಪ್ಪುಹಣ ಭಾರತದಲ್ಲಿ ಇಲ್ಲದಂತೆ ಮಾಡಬೇಕು, ಇದಕ್ಕೆ ದಾರಿ– ಜನರ ವರ್ತನೆಗಳಲ್ಲಿ ಬದಲಾವಣೆ ತರುವುದು, ಅವರಲ್ಲಿ ಇರುವ ನಗದನ್ನು ಕಿತ್ತುಕೊಳ್ಳುವುದು. ಈ ಕ್ರಮ ಕೊನೆಯಲ್ಲಿ ಪರಿಣಾಮಕಾರಿ ಆಗುತ್ತದೆಯೋ ಇಲ್ಲವೋ, ಲಕ್ಷಾಂತರ ಜನರ ಮೇಲೆ ಇದು ನಕಾರಾತ್ಮಕ ಪರಿಣಾಮ ಉಂಟುಮಾಡುತ್ತದೆಯೋ, ಇಂಥದ್ದೊಂದು ನೀತಿಯಿಂದಾಗಿ ಜನ ನಿಜಕ್ಕೂ ಸಾಯುತ್ತಾರಾ ಎಂಬೆಲ್ಲ ವಿಚಾರಗಳ ಬಗ್ಗೆ ತಜ್ಞರು ಬೇಕಿದ್ದರೆ ಚರ್ಚಿಸಬಹುದು.

ಮೋದಿ ಅವರು ಕೆಲಸ ಮಾಡಬೇಕು. ಹಾಗಾಗಿ ಅವರು ಸರಿಯಾದ ಮಾರ್ಗವನ್ನು ಅನುಸರಿಸುವಂತೆ ಜನರನ್ನು ಒತ್ತಾಯಿಸುತ್ತಾರೆ (ಅಥವಾ ಹಾಗೆ ಮಾಡುವುದು ಅನಿವಾರ್ಯವೆಂಬ ಪರಿಸ್ಥಿತಿ ಸೃಷ್ಟಿಸುತ್ತಾರೆ), ತಾವು ಸರಿ ಎಂದು ತಿಳಿದಿರುವುದನ್ನು ಜನರೂ ಅನುಸರಿಸುವಂತೆ ಮಾಡುತ್ತಾರೆ. ಇವೆಲ್ಲವೂ ಪಿತಾಮಹನಂತಹ ವ್ಯಕ್ತಿತ್ವ ಹೊಂದಿರುವವರು ತರಬೇಕಾದ ಸುಧಾರಣೆಗಳು. ಮೋದಿ ಹೊಂದಿರುವ ಜನಪ್ರಿಯತೆಯನ್ನು ಗಮನಿಸಿದರೆ, ಆ ಜನಪ್ರಿಯತೆಯ ಮೂಲ ಎಲ್ಲಿದೆ ಎಂಬುದನ್ನು ಗಮನಿಸಿದರೆ ಹಲವು ವಿಧಗಳಲ್ಲಿ ಅವರು ಇಂಥದ್ದೊಂದು ವ್ಯಕ್ತಿತ್ವ ಪಡೆದಿದ್ದಾರೆ ಎನ್ನಬಹುದು.

ಇದೇ ವಿಚಾರಗಳ ಬಗ್ಗೆ ಉಲ್ಲೇಖಿಸಿ ಹಿಂದಿ ಸಿನಿಮಾ ನಿರ್ದೇಶಕ ಮಧುರ್ ಭಂಡಾರ್ಕರ್ ಈಚೆಗೆ ಒಂದು ಬರಹ ಬರೆದರು ('ಪ್ರಧಾನಿಯವರು ಸಮಾಜ ಸುಧಾರಕ ಆದಾಗ' ಎಂಬ ಬರಹ). 'ನಮ್ಮ ಸಮಾಜ ಮಹತ್ವದ ಪರಿವರ್ತನೆಯೊಂದನ್ನು ಹೇಗೆ ಕಾಣುತ್ತಿದೆ ಎಂಬುದನ್ನು ಹೇಳಲು ಹಲವು ಉದಾಹರಣೆಗಳಿವೆ.

ಯೋಗವನ್ನು ಜನರ ಸಮೂಹದತ್ತ ಕೊಂಡೊಯ್ಯುವುದು, ವಿಐಪಿ ಸಂಸ್ಕೃತಿ ಕೊನೆಗೊಳಿಸಲು ವಾಹನಗಳಲ್ಲಿ ಕೆಂಪು ದೀಪದ ಬಳಕೆ ನಿರ್ಬಂಧಿಸುವುದು, ಅಂಗವಿಕಲರಿಗಾಗಿ ವಿಶೇಷ ಯೋಜನೆಗಳು ಮತ್ತು ಅವರ ಅಗತ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಅರ್ಜಿ ನಮೂನೆಗಳನ್ನು ಅಥವಾ ಪ್ರಮಾಣಪತ್ರಗಳನ್ನು ಗೆಜೆಟೆಡ್ ಅಧಿಕಾರಿಗಳು ದೃಢೀಕರಿಸಬೇಕು ಎಂಬ ಪದ್ಧತಿಗೆ ತಿಲಾಂಜಲಿ ಇಡುವುದು, ಕಾಂಪೋಸ್ಟ್‌ ಪದ್ಧತಿ ಅನುಸರಿಸಿ ತಮಗೆ ಬೇಕಿರುವ ಗೊಬ್ಬರವನ್ನು ಜನ ತಾವೇ ತಯಾರಿಸಿಕೊಳ್ಳುವಂತೆ ಮಾಡುವುದು- ಇವೆಲ್ಲವೂ ಸಣ್ಣ ಉಪಕ್ರಮಗಳಂತೆ ಕಾಣಿಸಿದರೂ, ಇವುಗಳ ಪರಿಣಾಮ ಬೃಹತ್ ಆಗಿರುತ್ತದೆ' ಎಂದು ಭಂಡಾರ್ಕರ್ ಬರೆದಿದ್ದಾರೆ.

ಭಾರತದ ಪ್ರಧಾನಿಯು ಇಂತಹ ವಿಷಯಗಳ ಬಗ್ಗೆ ಗಮನ ನೀಡಬೇಕೇ ಎಂಬ ಬಗ್ಗೆ ನಾನು ಪರಿಶೀಲಿಸಲು ಹೋಗುವುದಿಲ್ಲ. ಮೋದಿ ಅವರನ್ನು ಸೆಳೆಯುತ್ತಿರುವುದು ಸಾಮಾಜಿಕ ಬದಲಾವಣೆಗಳಿಗೆ ಸಂಬಂಧಿಸಿದ ವಿಚಾರಗಳು. ತಾವು ಒಂದು ವಿಚಾರವನ್ನು ತಪ್ಪಾಗಿ ಅಥವಾ ಅವಸರದಲ್ಲಿ ನಿರ್ವಹಿಸಿರಬಹುದು ಎಂದು ಮೋದಿ ಕೆಲವೊಮ್ಮೆ ಗುರುತಿಸುತ್ತಾರೆ. ಸ್ವಚ್ಛ ಭಾರತ ವೆಬ್‌ಸೈಟ್‌ನಲ್ಲಿ ಇಂದು ಶೌಚಾಲಯ ಹಾಗೂ ನೈರ್ಮಲ್ಯದ ಅಂಕಿ-ಅಂಶಗಳ ಬಗ್ಗೆ ಮೇಲ್ಭಾಗದಲ್ಲಿ ಮಾಹಿತಿ ನೀಡಲಾಗಿದೆ. ಕಸ ಎಸೆಯುವುದರ ಬಗ್ಗೆ ಅದರಲ್ಲಿ ಈಗ ತೀರಾ ಕಡಿಮೆ ಮಾಹಿತಿ ಇದೆ.

ನೆತನ್ಯಾಹು ಅವರ ಪ್ರಶಂಸೆಗೆ ಪ್ರತಿಕ್ರಿಯೆಯಾಗಿ ಮೋದಿ, 'ಫಲಿತಾಂಶ ಸಿಗುವವರೆಗೆ ತಾಳ್ಮೆ ಇರುವುದಿಲ್ಲ ಎಂಬ ಹೆಗ್ಗಳಿಕೆಯೂ ನನಗಿದೆ. ನಿಮ್ಮ ಹೆಸರಿನ ಜೊತೆಯಲ್ಲೂ ಅಂಥದ್ದೊಂದು ಹೆಗ್ಗಳಿಕೆ ಇದೆ' ಎಂದರು. ನಮ್ಮನ್ನು ಸುಧಾರಣೆಗೆ ಒಳಪಡಿಸುವ ಮೋದಿ ಅವರ ಕಾರ್ಯಗಳು ಇನ್ನೂ ಮುಂದುವರಿಯುತ್ತವೆ ಎಂದು ನಿರೀಕ್ಷಿಸಬಹುದು.

–ಲೇಖಕ ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT