ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಭಾಷೆ ಹೇಗಿರಬೇಕು?

Last Updated 15 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ಸಿನಿಮಾಕ್ಕೆ ಭಾಷೆ ಬೇಕೇ? ಎನ್ನುವ ಪ್ರಶ್ನೆಗೆ, ಚರ್ಚೆಗೆ ಇದು ಸಕಾಲ ಎಂದು ಉತ್ತರಿಸಬಹುದು.
 
ಫ್ರಾನ್ಸ್ ದೇಶದ ಮೂಕಿ ಚಿತ್ರ `ದಿ ಆರ್ಟಿಸ್ಟ್~ ಪ್ರತಿಷ್ಠಿತ ಆಸ್ಕರ್‌ನ ಐದು ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಮೂಲಕ ಮಾತುಗಳನ್ನೇ ಬಂಡವಾಳವನ್ನಾಗಿಟ್ಟುಕೊಂಡು ತಲೆ ಚಿಟ್ಟು ಹಿಡಿಸುವ ಸಿನಿಮಾಗಳನ್ನು ಹೊಸೆದು ಹೊಸೆದು ಪ್ರೇಕ್ಷಕರ ಮುಂದೆ ಬಿಸಾಡುತ್ತಿರುವ ಹಾಲಿವುಡ್, ಬಾಲಿವುಡ್, ಟ್ಯಾಲಿವುಡ್, ಕೋಳಿವುಡ್, ಸ್ಯಾಂಡಲ್‌ವುಡ್ ಮೊದಲಾದ ಉಡ್ಡುಗಳ ಟೊಳ್ಳುತನವನ್ನು ಬಯಲಿಗೆಳೆದಿದೆ.
 
`ಸಿನಿಮಾ ಒಂದು ಕಲೆ, ಭಾಷೆ ಮುಖ್ಯವೇ ಅಲ್ಲ~ ಎಂಬುದನ್ನು ಆರ್ಟಿಸ್ಟ್‌ನಂತಹ ಕಲಾತ್ಮಕ ನೇಯ್ಗೆಯನ್ನು ಪುರಸ್ಕರಿಸುವ ಮೂಲಕ ಆಸ್ಕರ್ ಅಕಾಡೆಮಿ ಕೂಡ ಎತ್ತಿ ಹಿಡಿದಿದೆ.

ಫ್ರಾನ್ಸ್ ದೇಶದಲ್ಲಿ ಮೂಕಿ ಚಿತ್ರಗಳ ಯುಗ ಮುಗಿದು, ಮಾತಿನ ಚಿತ್ರಗಳ ಅರಂಭದ ಪರಿವರ್ತನಾ ದಿನಗಳಲ್ಲಿನ ಕಲಾವಿದನೊಬ್ಬನ ಮನಃಸ್ಥಿತಿ `ಆರ್ಟಿಸ್ಟ್~ ಚಿತ್ರ ಕಥೆ.  ಈ ಕಾಲಘಟ್ಟ ಆ ದೇಶದ್ದೇ ಆಗಿರಬೇಕೆಂದೇನೂ ಅಲ್ಲ.

ಆ ಸ್ಥಿತಿ ಆಗ ಜಾಗತಿಕವಾಗಿತ್ತು. 1929ರಲ್ಲಿ ಅತ್ಯಂತ ಜನಪ್ರಿಯವಾಗಿದ್ದು, ಜನಸಾಗರದ ಪ್ರೀತಿ, ಅಭಿಮಾನದಲ್ಲಿ ಮಿಂದೇಳುತ್ತಿದ್ದ ನಟನೊಬ್ಬ ಒಂದೇ ವರ್ಷದಲ್ಲಿ ವಾಕ್ಚಿತ್ರಗಳ ಆರಂಭದಿಂದಾಗಿ ನಿರುದ್ಯೋಗಿಯಾಗಿ ಬಿಡುತ್ತಾನೆ.

ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಆತನ ಜನಪ್ರಿಯತೆ, ಅವನು ನಂಬಿಕೊಂಡಿದ್ದ ಸೂತ್ರಗಳು ಮುಳುಗುತ್ತವೆ. ಬದಲಾದ ಯುವಜನತೆಯ ಅಭಿಲಾಷೆ ಅವನಿಗೆ ಅರಿವಾಗುವುದಿಲ್ಲ.

ಬದಲಾವಣೆಗೆ ಅವನು ಹೊಂದಿಕೊಳ್ಳುವುದೂ ಕಷ್ಟವಾಗಲಾರಂಭಿಸುತ್ತದೆ. ಈ ಮನೋವೇದನೆಯ ಸ್ವರೂಪವನ್ನು 1929ರ ಕಾಲಘಟ್ಟಕ್ಕೇ ಹೋಗಿ ಚಿತ್ರೀಕರಿಸಿರುವುದರಲ್ಲೇ ನಿರ್ದೇಶಕನ (ಮೈಕೆಲ್ ಹಝಾನಾವಿಸಿಯಸ್) ಜಾಣ್ಮೆ ಅಡಗಿದೆ. ಇಡೀ ಚಿತ್ರ ಮಾತೇ ಇಲ್ಲದೆ ಏನನ್ನು ಹೇಳಬೇಕೋ ಅದನ್ನು ಹೇಳಿದೆ.

ಯಾವ ಸಂದೇಶವನ್ನು ರವಾನಿಸಬೇಕೋ ಅದನ್ನು ಸಮರ್ಪಕವಾಗಿ ತಲುಪಿಸಿದೆ. ಜಗತ್ತಿನ ಯಾವ ಮೂಲೆಯಲ್ಲಿ ಕುಳಿತು `ಆರ್ಟಿಸ್ಟ್~ ಚಿತ್ರವನ್ನು ವೀಕ್ಷಿಸಿದರೂ ನಿಮಗೆ ಸಬ್‌ಟೈಟಲ್‌ಗಳ ನೆರವೂ ಬೇಡ, ಭಾಷೆಯ ನೆರವೂ ಬೇಡ, ಚಿತ್ರದೊಳಗೆ ನೀವು ಒಂದಾಗಿ ಬಿಡುತ್ತೀರಿ. ಚಿತ್ರದ ನಾಯಕನ (ಜೀನ್ ಡುಜಾರ್ಡೀನ್) ತಳಮಳದ ಭಾಗವಾಗಿ ಬಿಡುತ್ತೀರಿ.

ಚಲನಚಿತ್ರದ ಆವಿಷ್ಕಾರ(1895)ವಾದಾಗ, ಮನರಂಜನೆ ಎನ್ನುವುದು ನಾಟಕಗಳೇ ಅಲ್ಲವೇ? ಜನಪದ ಆಟಗಳು, ಹರಿಕಥೆ ಮೊದಲಾದವು ಜನರ ಮನರಂಜನೆಯ ಭಾಗವಾಗಿತ್ತು. ನಾಟಕಗಳೇ ಯಥಾವತ್ತಾಗಿ ಚಿತ್ರೀಕರಣಗೊಳ್ಳುವ ಮೂಲಕ ಹೊಸ ಆವಿಷ್ಕಾರವನ್ನು ಅದಕ್ಕೆ, ಪೂರಕವಾಗಿ ಬಳಸಿಕೊಳ್ಳುವ ಆರಂಭಿಕ ಯತ್ನ ನಡೆಯಿತು.
 
1912 ರಿಂದ 1934ರವರೆಗೆ ಭಾರತದಲ್ಲಿ ಮೂಕಿ ಚಿತ್ರಗಳದೇ ಸಾಮ್ರಾಜ್ಯ. ಮೂಕಿ ಚಿತ್ರಗಳು ಆರಂಭವಾದಾಗ ಕಂಪೆನಿ ನಾಟಕಗಳಿಂದ ಎಲ್ಲ ಜನಪ್ರಿಯ ನಟ - ನಟಿಯರು ಮೂಕಿ ಚಿತ್ರ ತಯಾರಿಕಾ ಕಂಪೆನಿಗಳಿಗೆ ಗುಳೆ ಹೋದರು. ರಂಗಭೂಮಿ ಇದರಿಂದ ಕೃಶವಾಯಿತು ಎಂಬ ಕೂಗು ಆಗ ಕೇಳಿ ಬಂತು.

ಮೂಕಿ ಚಿತ್ರಗಳ ತಯಾರಿಕೆ ಕಾಲದಲ್ಲಿ ಭಾರತದಲ್ಲಿ ತಯಾರಾದ ಚಿತ್ರ, ಮುಂಬೈ ಕಂಪೆನಿಗಳ ತಯಾರಿಕೆ, ಕರ್ನಾಟಕದಲ್ಲಿ ತಯಾರಾದ ಚಿತ್ರ ಎಂದು ಹೇಳಲಾಗುತ್ತಿತ್ತು. ಇಂತಹ ಚಿತ್ರಗಳು ಜನರನ್ನು ಮೆಚ್ಚಿಸುವ ಸಲುವಾಗಿ ಸ್ಟಂಟ್‌ಗಳನ್ನೇ ಹೆಚ್ಚಾಗಿ ಅವಲಂಭಿಸುತ್ತಿತ್ತು.

ಹೀಗಾಗಿ ಭಾಷೆಯ ಹಂಗಿಲ್ಲದೆ ಮೂಕಿ ಚಿತ್ರಗಳು ಎಲ್ಲ ಕಡೆ ಪ್ರದರ್ಶನಗೊಳ್ಳುತ್ತಿದ್ದವು. ಚಾರ್ಲಿ ಚಾಪ್ಲಿನ್ ಚಿತ್ರಗಳು ಇಂದಿಗೂ ಅರ್ಥವಂತಿಕೆಯಿಂದ ಕೂಡಿರುವುದು ಚಲನಚಿತ್ರವನ್ನು ಕಲೆ ಎಂದೇ ಭಾವಿಸಿದ್ದರ ಫಲವಾಗಿಯೇ. ಮೂಕಿ ಚಿತ್ರಗಳದು ಜಾಗತಿಕ ಭಾಷೆ.

ಆವಿಷ್ಕಾರದ ಸಮಯದಲ್ಲಿ ಭಾಷೆಯ ಬಂಧವೇ ಇಲ್ಲದೆ, ಕಲೆಯನ್ನಷ್ಟೇ ಪ್ರತಿಪಾದಿಸುತ್ತಿದ್ದ ಸಿನಿಮಾ, ವಾಕ್ಚಿತ್ರ ಆರಂಭದ ನಂತರ ತನ್ನ ವ್ಯಾಪ್ತಿಯನ್ನು ಕುಗ್ಗಿಸಿಕೊಂಡು ಪ್ರದೇಶ, ಪ್ರಾಂತ್ಯಗಳಿಗೆ ಸೀಮಿತವಾಯಿತು.
 
ವಾಣಿಜ್ಯಾತ್ಮಕ ಆಯಾಮಗಳಿಗೆ ತನ್ನನ್ನು ಒಡ್ಡಿಕೊಂಡು ತನ್ನ ಉದ್ದೇಶವನ್ನು ತಿಳಿಗೊಳಿಸಿಕೊಂಡಿತು.

1929ರ ಕಾಲಘಟ್ಟದ ಕತೆಯನ್ನು ಹೇಳುವ `ಆರ್ಟಿಸ್ಟ್~ ಫ್ರಾನ್ಸ್‌ನ ಸಿನಿಮಾರಂಗದ ಕತೆಯೇ ಆಗಿರಬೇಕೆಂದೇನಿಲ್ಲ. ಅದು ಭಾರತದ್ದೂ ಆಗಿರಬಹುದು. 1931ರಲ್ಲಿ ಭಾರತದ ಮೊದಲ ವಾಕ್ಚಿತ್ರ `ಆಲಂ ಆರಾ~ ಬಿಡುಗಡೆ ಆಗುವುದರೊಂದಿಗೆ, ಮೂಕಿ ಚಿತ್ರವನ್ನೇ ನಂಬಿಕೊಂಡಿದ್ದ ನೂರಾರು ಕಲಾವಿದರು ರಾತ್ರೋ ರಾತ್ರಿ ನಿರುದ್ಯೋಗಿಗಳಾದರು.

ಮೂಕಿ ಚಿತ್ರ ತಯಾರಿಕಾ ಕಂಪೆನಿಗಳೆಲ್ಲಾ ವಾಕಿಗೆ ಬದಲಾದವು. ಹಾಡುವುದು, ಸಂಭಾಷಣೆಯನ್ನು ಒಪ್ಪಿಸುವುದು ಇವೆಲ್ಲಾ ಬಹಳ ಮುಖ್ಯವಾದ್ದರಿಂದ ಮೂಕಿ ತಾರೆಗಳಾಗಿದ್ದ ಆಂಗ್ಲೋ ಇಂಡಿಯನ್ ಕಲಾವಿದರ ಬದುಕು ಅತಂತ್ರವೇ ಆಯಿತು.
 
ಸ್ಟಂಟ್, ಡ್ಯಾನ್ಸ್‌ಗಳಲ್ಲಿ ಅಂದಿನ ಕಾಲದಲ್ಲಿ ಆಂಗ್ಲೋ ಇಂಡಿಯನ್ನರೇ ಮುಂದು, ಅವರಿಗೆ ಹಿಂದಿಯೂ ಬರುತ್ತಿರಲಿಲ್ಲ. ಉರ್ದುವೂ ಗೊತ್ತಿರಲಿಲ್ಲ. ಹೀಗಾಗಿ ವಾಕ್ಚಿತ್ರದ ಬಿರುಗಾಳಿಗೆ ಬಲಿಯಾದವರಲ್ಲಿ ಅವರೇ ಮೊದಲಿಗರು.
 
ಮೂಕಿ ಚಿತ್ರದಲ್ಲಿ ಮೆರೆಯುತ್ತಿದ್ದ ಸುಲೋಚನ (ರೂಬಿ ಮೇಯರ್ಸ್‌), ಗೋಹರ್, ಜೇಬುನ್ನೀಸಾ, ರಾಂಪ್ಯಾರಿ, ಜುಬೇದಾ, ರಾಜಾಸ್ಯಾಂಡೋ, ಜೈರಾಜ್ ಮೊದಲಾದವರೆಲ್ಲಾ ಒಂದೇ ವರ್ಷದ ಅವಧಿಯಲ್ಲಿ ಸಾರಸಗಟಾಗಿ ನೇಪಥ್ಯಕ್ಕೆ ಸರಿದರು.

1934ರಲ್ಲಿ ಕರ್ನಾಟಕದಲ್ಲೂ ಇದೇ ಪರಿಸ್ಥಿತಿ ತಲೆದೋರಿತ್ತಲ್ಲವೇ? ಮೊದಲ ವಾಕ್ಚಿತ್ರ `ಸತಿ ಸುಲೋಚನಾ~ ಬಿಡುಗಡೆ ಆಗುವುದರೊಂದಿಗೆ ಮೂಕಿ ಚಿತ್ರಗಳಲ್ಲಿ ಸ್ಟಾರ್‌ಗಳಾಗಿದ್ದವರೆಲ್ಲಾ ತರಗೆಲೆಗಳಂತೆ ಉದುರಿ ಹೋದರು.

ಆಗ ಕರ್ನಾಟಕದಲ್ಲಿ ಪ್ರಖ್ಯಾತವಾಗಿದ್ದ, ಬೆಂಗಳೂರಿನಲ್ಲೇ ಸ್ಟುಡಿಯೋ ಹೊಂದಿದ್ದ ಸೂರ್ಯ ಫಿಲಂ ಕಂಪೆನಿ 40 ಮೂಕಿ ಚಿತ್ರ ತಯಾರಿಸಿತ್ತು. ಲಕ್ಷ್ಮೀಬಾಯಿ ಸ್ಟಾರ್ ನಟಿ. ಅಪಘಾನಿಸ್ತಾನದಲ್ಲಿ ಹುಟ್ಟಿ ಬೆಳೆದ ಅಬ್ದುಲ್ ರಹಮಾನ್ ಬಾಚು ಎನ್ನುವ ನಟ ಗಜಾನನ ಗಣಪತ್ ಬಾಕ್ರೆ ಎನ್ನುವ ಹೆಸರಿನಲ್ಲಿ ಜನಪ್ರಿಯ ನಟರೆನಿಸಿದ್ದರು.

ಸ್ಟಂಟ್ ಪಾತ್ರಗಳಿಗೆ ಹೆಸರಾಗಿದ್ದರು. ವಾಕ್ಚಿತ್ರ ಆರಂಭವಾದದ್ದೇ ತಡ ಇಬ್ಬರೂ ಹೇಳಹೆಸರಿಲ್ಲದಂತಾದರು. ಟೀಕೆ, ಅಂತ್ಲೆ ಸೆರಿಯ, ಕಮಲಾಬಾಯಿ, ಎಲ್ಲಾ ದಿಗ್ವಿ, ಜೆನಾಬಾಯಿ ಪವಾರ್, ಶಾರದಾ, ಜಮೂಭಾಯ್ ರಾಮಭಾಯ್ ಪಟೇಲ್, ಬಾಬುರಾವ್ ಗಡೆ, ದ್ರುಪದ್‌ರಾಯ್, ಝಂ ಝಾಲಾಮ್ ಗಣಪತ್‌ರಾವ್ ಪವಾರ್, ವಾಮನರಾವ್ ಕುಲಕರ್ಣಿ ಮೊದಲಾದವರೆಲ್ಲಾ ಚಲನಚಿತ್ರದ ಬದಲಾದ ಚೌಕಟ್ಟಿಗೆ ಹೊಂದಿಕೊಳ್ಳಲಾಗದೆ ತೆರೆಮರೆಗೆ ಬಲವಂತವಾಗಿ ನೂಕಲ್ಪಟ್ಟರು.

ನಾಟಕ ಕಂಪೆನಿಗಳಿಂದಲೇ ಕಲಾಜೀವನ ರೂಪಿಸಿಕೊಂಡ ಮೊದಲ ವಾಕ್ಚಿತ್ರದ ನಾಯಕ ಎಂ.ವಿ. ಸುಬ್ಬಯ್ಯನಾಯ್ಡು ಹಾಗೂ ಆರ್. ನಾಗೇಂದ್ರರಾವ್ ಅವರುಗಳೇ ಮೊದಲ ವಾಕ್ಚಿತ್ರದ ಅಭಿನಯದ ನಂತರವೂ ನಿರುದ್ಯೋಗಿಗಳಾದರು.
 
ಮೊದಲ ವಾಕ್ಚಿತ್ರ ಯಶಸ್ವಿಯಾದರೂ ಮತ್ತೆ ಅವರಿಗೆ ಚಿತ್ರಗಳಲ್ಲಿ ಅಭಿನಯಿಸಲು ಕರೆ ಬರಲಿಲ್ಲ ಎನ್ನುವುದು ಇತಿಹಾಸ. ಜನ ನಾಟಕಗಳಿಂದ ವಿಭಿನ್ನವಾದ, ಅತಿವೇಗದ ತಂತ್ರಜ್ಞಾನಕ್ಕೆ ಹಾತೊರೆಯುತ್ತಿದ್ದರು ಎನ್ನುವುದು ಇದರಿಂದ ವ್ಯಕ್ತವಾಗುತ್ತದೆ.

ಈ ಪರಿವರ್ತನ ಕಾಲಘಟ್ಟದ ತಳಮಳವನ್ನು `ಆರ್ಟಿಸ್ಟ್~ ಕಲಾತ್ಮಕ ಮಟ್ಟದಲ್ಲಿ ಚಿತ್ರಿಸುತ್ತದೆ. ಹೀಗಾಗಿ ಈ ಚಿತ್ರ ಇತಿಹಾಸದ ಪುನರಾವರ್ತನೆ. ಅಂದಿನ ದಿನಗಳ ಚಿತ್ರ ಚರಿತ್ರೆ ದಾಖಲಿಸುವ ಒಂದು ಸಾಕ್ಷ್ಯಚಿತ್ರವಾಗಿಯೂ ಗೋಚರಿಸಲಾರಂಭಿಸುತ್ತದೆ. ಭಾರತದಲ್ಲಿ, ಕರ್ನಾಟಕದಲ್ಲಿ ನಡೆದ ಕತೆಯಂತೆಯೂ ಕಾಣುತ್ತದೆ.

ಮೂಕಿ ಚಿತ್ರಗಳಿಗೆ ಭಾಷೆ ಮುಖ್ಯವೆನಿಸುವುದಿಲ್ಲ. ಚಿತ್ರದ ಹೆಸರಿನಿಂದ ಇದು ಆಂಗ್ಲ ಚಿತ್ರ, ಫ್ರೆಂಚ್ ಸಿನಿಮಾ ಎನ್ನಬಹುದು. `ಆರ್ಟಿಸ್ಟ್~ ಫ್ರಾನ್ಸ್‌ನಲ್ಲಿ ತಯಾರಾದ ಚಿತ್ರವಾಗಿರಬಹುದು, ಆದರೆ ವಸ್ತು ಜಾಗತಿಕವಾದುದು. ಬೆಂಗಳೂರಿನಲ್ಲಿ ತಯಾರಿಕೆ ಆರಂಭಿಸಿದ್ದ ಸೂರ್ಯ ಫಿಲಂ ಕಂಪೆನಿಯ ಮೊದಲ ಚಿತ್ರ `ರಾಜ ಹೃದಯ~.

ಕರ್ನಾಟಕದಲ್ಲಿ `ರಾಜ ಹೃದಯ~, ದೇಶದ ಇತರ ಭಾಗಗಳಲ್ಲಿ ಈ ಚಿತ್ರದ ಹೆಸರು `ಹಾರ್ಟ್ ಆಫ್ ದಿ ಕಿಂಗ್~! ಶಿವರಾಮ ಕಾರಂತರು 1931ರಲ್ಲಿ `ಭೂತರಾಜ~ ಎಂಬ ಚಿತ್ರ ತಯಾರಿಸಿ ದೇಶದ ಇತರೆಡೆಯಲ್ಲಿ ಅದನ್ನು `ದಿ ಡೆವಿಲ್ಸ್ ಲ್ಯಾಂಡ್~ ಎನ್ನುವ ಹೆಸರಿನಲ್ಲಿ ಪ್ರದರ್ಶಿಸಿದರು.

ಇನ್ನೊಂದು ಆಶ್ಚರ್ಯವೆಂದರೆ ಕರ್ನಾಟಕ ಪಿಕ್ಚರ್ಸ್ ಕಾರ್ಪೊರೇಷನ್ (ಗುಬ್ಬಿ ವೀರಣ್ಣನವರ ಕಂಪೆನಿ) `ಹಿಸ್ ಲವ್ ಅಪೇರ್ಸ್‌~ ಎನ್ನುವ ಹೆಸರಿನ ಮೂಕಿ ಚಿತ್ರ ತಯಾರಿಸಿದ್ದು. ದೇವುಡು ನರಸಿಂಹ ಶಾಸ್ತ್ರಿಗಳ `ಕಳ್ಳರ ಕೂಟ~ ಕಾದಂಬರಿಯನ್ನಾಧರಿಸಿದ ಈ ಚಿತ್ರ ಕನ್ನಡದ ಕಾದಂಬರಿಯನ್ನು ಆಧರಿಸಿದ ಮೊದಲ ಚಿತ್ರ.
 
ಜಾಗತಿಕ ಮಾರುಕಟ್ಟೆಗಾಗಿ ಚಿತ್ರದ ಹೆಸರನ್ನು ಇಂಗ್ಲೀಷಿನಲ್ಲಿಟ್ಟಿದ್ದು ಒಂದು ವೈಚಿತ್ರ್ಯವೇ ಸರಿ. ಮುಂದೆಯೂ ಗುಬ್ಬಿ ಕಂಪೆನಿಯ ಮತ್ತೊಂದು `ಕನ್ನಡ~ ತಯಾರಿಕೆಗೆ `ಸಾಂಗ್ ಆಫ್ ಲೈಫ್~ ಎಂದು ಹೆಸರಿಡಲಾಯಿತು.

ವಾಕ್ಚಿತ್ರ ಯುಗದ ನಾಂದಿಯ ಜೊತೆಗೇ ಭಾಷಾ ಕಲಹವೂ ಆರಂಭವಾಯಿ ತೆನಿಸುತ್ತದೆ. ಮೊದಲ ವಾಕ್ಚಿತ್ರದ ಆಲಂಆರಾ ಹಿಂದೂಸ್ತಾನಿಯದು. ಹಿಂದಿ ಮತ್ತು ಉರ್ದುಗಳ ಸಮ್ಮಿಶ್ರಣದ ಭಾಷೆ.

1930ರ ಕಾಲದಲ್ಲಿ ದೇಶದ ಉದ್ದಗಲಕ್ಕೂ (ಅಂದರೆ ಉತ್ತರ ಭಾರತ) ಅರ್ಥವಾಗುವ ಭಾಷೆ ಎಂದೇ ಅರ್ಥೈಸಲಾಗುತ್ತಿತ್ತು. ಮೊದಲ ಚಿತ್ರದ ನಾಯಕ ಮಾಸ್ಟರ್ ವಿಠ್ಠಲ್‌ಗೆ ಉರ್ದು ಬರುವುದಿಲ್ಲ ಎನ್ನುವ ಕಾರಣಕ್ಕೆ ಅವರನ್ನು ನಾಯಕ ಪಟ್ಟದಿಂದ ಕೈಬಿಡುವ ನಿರ್ಧಾರ ಮಾಡಿದಾಗ, ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ವಿಠ್ಠಲ್ ಗೆದ್ದರು.
 
ಹೀಗೆ ಚಿತ್ರ ನಟರಿಗೆ ಸ್ಥಳೀಯ ಭಾಷೆ ಕಡ್ಡಾಯ ಎನ್ನುವುದು ಅಲ್ಲಿಂದಲೇ ಅಲಿಖಿತವಾಗಿ ಜಾರಿಯಾಯಿತು. (ಅಲಂ ಆರಾದಲ್ಲಿ ಸಂಭಾಷಣೆ, ಧ್ವನಿ, ತಾಂತ್ರಿಕ ಗುಣಮಟ್ಟವೆಲ್ಲಾ ಪರಿಪಕ್ವವಾಗಿತ್ತು ಎಂದು ಹೇಳಲು ಸಾಧ್ಯವಿಲ್ಲ) ಆದರೆ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಭಾರತದ ಉದ್ದಗಲಕ್ಕೆ ಸಂದೇಶ ರವಾನೆಯ ಭಾಷೆಯೊಂದರ ಅಗತ್ಯ ಇತ್ತು. 22 ಪ್ರಮುಖ ಭಾಷೆ, ಹಲವಾರು ಉಪಭಾಷೆಗಳಿರುವ ದೇಶಕ್ಕೆ ಹಿಂದೂಸ್ತಾನಿ (ಉರ್ದು ಮಿಶ್ರಿತ ಹಿಂದಿ) ಸರಿಯಾದ ಬಳಕೆ ಎಂದು ಹಿಂದೀ ಸಿನಿಮಾ ರಂಗವೇ ನಿರ್ಧರಿಸಿತು.

ಹೀಗಾಗಿ ಮೊದಲ ವಾಕ್ಚಿತ್ರದ ಭಾಷೆಯನ್ನು ರಾಷ್ಟ್ರೀಯ ಉದ್ದೇಶಕ್ಕೆ ಬಳಸಿಕೊಳ್ಳಲಾಯಿತು. ನಂತರದ ದಿನಗಳಲ್ಲಿ ಪ್ರಾಂತೀಯ ಭಾಷಾ ಚಿತ್ರರಂಗ ಬೆಳೆದು ಸಿನಿಮಾವನ್ನು ಭಾಷೆಯ ಗೂಡಿನಲ್ಲಿ ಬಂಧಿಸಿಡಲಾಯಿತು. ಆರಂಭದ ದಿನಗಳಲ್ಲಿ ಈ ಭಾವನೆ ಬೆಳೆದಿರಲಿಲ್ಲ, ತಮಿಳು ಭಾಷೆಯ ಮೊದಲ ಚಿತ್ರ `ಕಾಳಿದಾಸ~ (1931) ಚಿತ್ರದಲ್ಲಿ ಸಂಭಾಷಣೆ ತಮಿಳಿನಲ್ಲಿದ್ದವು. ಹಾಡುಗಳೆಲ್ಲಾ ತೆಲುಗು ಭಾಷೆಯದಾಗಿದ್ದವು! ಕಾಳಿದಾಸನ ಸಂಸ್ಕೃತ ಶ್ಲೋಕಗಳನ್ನು ತಮಿಳಿನಲ್ಲಿ ಹಾಡಲಾಗದು.

ತೆಲುಗು ಭಾಷೆಯಲ್ಲಿ ಸಂಸ್ಕೃತ ಹೆಚ್ಚಾಗಿರುವುದರಿಂದ ತೆಲುಗು ಹಾಡುಗಳು ಸೂಕ್ತ ಎಂದು ನಿರ್ದೇಶಕರು ಆಲೋಚಿಸಿದ್ದರ ಫಲ ಇದು. ನಿರ್ದೇಶಕರಿಗೆ ವಸ್ತುಸ್ಥಿತಿ, ವಾಸ್ತವಿಕತೆ ತರುವುದು ಮುಖ್ಯವಾಯಿತೇ ಹೊರತು ಭಾಷೆಯ ಬಗ್ಗೆ ಅವರು ಆಲೋಚಿಸಲೇ ಇಲ್ಲ. ಕರ್ನಾಟಕ ಬಿಟ್ಟು ಭಾರತದ ಬಹುತೇಕ ರಾಜ್ಯಗಳಲ್ಲಿ ಆಂಗ್ಲ ಚಿತ್ರಗಳು ಆಯಾ ಭಾಷೆಯಲ್ಲಿ ಬಿಡುಗಡೆಯಾಗುತ್ತಿವೆ.

ಆಂಗ್ಲ ನಟ ನಟಿಯರು ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ಮಾತನಾಡುವುದನ್ನು ತೆರೆಯ ಮೇಲೂ, ಕಿರುತೆರೆಯಲ್ಲೂ ಕಂಡಿದ್ದೇವೆ. ಇಂತಹ ಡಬ್ ಚಿತ್ರಗಳಲ್ಲಿ ಆಂಗ್ಲರು ನಮ್ಮ ಭಾಷೆಯಲ್ಲಿ ಮಾತನಾಡುವುದನ್ನು ಕೇಳಲು ಸ್ವಲ್ಪ ಕಿರಿಕಿರಿಯಾಗುತ್ತದೆ.

ಕಂಠದಾನ ನಮ್ಮವರದೇ ಆದರೂ, ಚಿತ್ರದ ಚೌಕಟ್ಟಿನಲ್ಲಿರುವ ಸನ್ನಿವೇಶಕ್ಕೆ ಅದು ಹೊಂದಾಣಿಕೆ ಆಗುವುದಿಲ್ಲ. ಆದರೆ ನಮ್ಮ ಪ್ರೇಕ್ಷಕರಿಗೆ ಕಥೆಯೇ ಮುಖ್ಯವಾಗಿರುವುದರಿಂದ ನಮಗರ್ಥವಾಗುವ ಭಾಷೆಯನ್ನು ಒಂದೆಡೆ ಗ್ರಹಿಸಿಕೊಂಡು, ಸಿನಿಮಾದೊಳಗಿನ ಪಾತ್ರಗಳನ್ನು ತಮ್ಮ ಪರಿಸರದ ವ್ಯಕ್ತಿಗಳನ್ನಾಗಿ ನೋಡುತ್ತಾ ಒಂದು ರೀತಿಯ ಹೊಂದಾಣಿಕೆಯ ಮೂಲಕ ಆಂಗ್ಲ ಚಿತ್ರಗಳ `ರಸಿಕ~ರಾಗಿ ಪರಿವರ್ತನೆ ಆಗಿದ್ದಾರೆ. ಸಲ್ಮಾನ್, ಹೃತಿಕ್, ಶಾರುಖ್ ಖಾನ್ ಮೊದಲಾದವರು ತಮಿಳು, ತೆಲುಗು ಭಾಷಿಕರಿಗೆ ಆಯಾ ಭಾಷೆಯಲ್ಲೇ ಕಾಣಿಸಿಕೊಳ್ಳುತ್ತಾರೆ.

ತಾಳೆಯಾಗದ ಗುಣಗಳೆಲ್ಲಾ ಈಗ ನಮ್ಮ ಮುಂದೆ ಬಂದು ನಿಲ್ಲುತ್ತಿವೆ. ಮೂಕ ಚಿತ್ರಗಳಾದರೆ ಭಾಷೆಯ ಬೇಲಿ ದೂರವಾಗುತ್ತದೆ. 1987ರ `ಪುಷ್ಪಕ ವಿಮಾನ~ ನೆನಪಿಸಿಕೊಳ್ಳಿ. ಇದು ದೇಶದ ಉದ್ದಗಲಕ್ಕೂ ಸಂದ ಸಿನಿಮಾ ಆಯಿತು.

ವಾಕ್ಚಿತ್ರದ ಬೆಳವಣಿಗೆಯ ನಂತರ ಮಾತು ಚಿತ್ರರಂಗದ ಬಂಡವಾಳವಾದದ್ದು ಒಂದು ದುರಂತವೇ ಸರಿ. ಕಡಿಮೆ ಮಾತಿನಲ್ಲಿ ಕತೆ ಹೇಳುವ ನಿರೂಪಣಾ ವಿಧಾನವೇ ನಮಗೆ ಮರೆತು ಹೋಯಿತು. ಕಲಾತ್ಮಕ ಎನ್ನುವುದು ದೂರವಾಗಿ ಮಾತಿನ ಈಟಿಯ ಮೂಲಕ ತಿವಿಯಲು ಸಿನಿಮಾ ನಿರ್ದೇಶಕರು ಆರಂಭಿಸಿದರು.
 
ಹೀಗಾಗಿ ಭಾರತೀಯ ಪ್ರೇಕ್ಷಕ ಶಬ್ದ ಮಾಲಿನ್ಯದಲ್ಲಿ ನರಳಾಡಲಾರಂಭಿಸಿದ. `ಆರ್ಟಿಸ್ಟ್~ ಚಿತ್ರದ ಒಂದು ದೃಶ್ಯ ಹೀಗಿದೆ: ನಾಯಕನಿಗೆ ಒಂದು ಕನಸು. ಭಯಂಕರ ಶಬ್ದ. ಪ್ರತಿಯೊಂದು ಕಡೆಯಿಂದಲೂ ಕರ್ಕಶ ಶಬ್ದ. ಆಕಾಶದಿಂದ ಹಕ್ಕಿಯ ಸಣ್ಣಗರಿ ನೆಲಕ್ಕೆ ಬೀಳುವ ರೀತಿಯಲ್ಲೂ ಶಬ್ದ.

ಅದು ನೆಲಕ್ಕೆ ಬಿದ್ದಾಗ ದೊಡ್ಡ ಬಾಂಬೊಂದು ಸ್ಫೋಟಿಸಿದಂತಹ ಸದ್ದು. ಮೂಕಿ ಚಿತ್ರ, ಹೋಗಿ ವಾಕ್ಚಿತ್ರವಾಗಿ ಪರಿವರ್ತನೆಯಾದಾಗ ಇಂತಹ ಆಸ್ಫೋಟವಾದಂತೆ ನಿರುದ್ಯೋಗಿ ನಾಯಕನಿಗೆ ಅನುಭವವಾಗುತ್ತದೆ.

ವಾಕ್ಚಿತ್ರ ಆರಂಭವಾಗಿ 81 ವರ್ಷಗಳ ನಂತರವೂ ನಾವು ಚಿತ್ರ ಮಂದಿರದಲ್ಲಿ ಗಢಚಿಕ್ಕುವ ಶಬ್ದ, ಅಬ್ಬರದ ಸಂಭಾಷಣೆ, ಭೀಕರ ಸಂಗೀತಗಳ ನೆತ್ತರಲ್ಲಿ ತೊಯ್ದು ಹೋಗುತ್ತಿದ್ದೇವೆ. ಒಮ್ಮೆ `ಆರ್ಟಿಸ್ಟ್~ ನೋಡಿ. ಮೌನ ಅಪ್ಪಟ ಬಂಗಾರ ಎನ್ನುವುದು ಅನುಭವಕ್ಕೆ ಬರದಿದ್ದರೆ ಕೇಳಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT