ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ಸನ್ಯಾಸಿನಿ

Last Updated 14 ಜೂನ್ 2011, 19:30 IST
ಅಕ್ಷರ ಗಾತ್ರ

ಹದಿನೆಂಟನೇ ಶತಮಾನದ ಅಂತ್ಯಭಾಗದಲ್ಲಿ ಜಪಾನ ದೇಶದಲ್ಲಿ ಒಬ್ಬ ಬಹಳ ಪ್ರಸಿದ್ಧಳಾದ ಝೆನ್ ಸನ್ಯಾಸಿನಿ ಬದುಕಿದ್ದಳು.ಆಕೆಯ ಹೆಸರು ರೊನೆನ್. ಆಕೆಯ ಅಜ್ಜ ಶಿನ್ ಜೆನ್ ದೇಶದ ಬಹುದೊಡ್ಡ ಸೈನ್ಯಾಧಿಕಾರಿಯಾಗಿದ್ದ.  ರೊನೆನ್ ಅತ್ಯಂತ ಅಪರೂಪದ ಸುಂದರಿ. ಆಕೆಯ ಚೆಲುವು ಇಡೀ ದೇಶದಲ್ಲಿ ಮನೆಮಾತಾಗಿತ್ತು.  ಆಕೆ ಬುದ್ಧಿವಂತೆ ಕೂಡ.  ತುಂಬ ಸುಂದರವಾದ, ಅರ್ಥವತ್ತಾದ ಕವನಗಳನ್ನು ಬರೆಯುತ್ತಿದ್ದಳು.

ಆಕೆಯ ಸೌಂದರ್ಯ, ಬುದ್ಧಿವಂತಿಕೆಗಳನ್ನು ಕೇಳಿದ್ದ ಚಕ್ರವರ್ತಿನಿ ಆಕೆಯನ್ನು  ಅರಮನೆಗೆ ಕರೆಸಿಕೊಂಡು ತನ್ನ ಜೊತೆಗೇ ಇಟ್ಟುಕೊಂಡಿದ್ದಳು. ಆಗ ರೊನೆನ್‌ಗೆ ಕೇವಲ ಹದಿನೇಳು ವರ್ಷ. ಆಕೆಗೆ ಚಕ್ರವರ್ತಿನಿಯ ಬಗ್ಗೆ ಅತೀವ ಪ್ರೀತಿ, ಗೌರವಗಳು ಹುಟ್ಟಿಕೊಂಡವು.  ಅಷ್ಟು ಉನ್ನತ ಸ್ಥಾನದಲ್ಲಿ, ಶ್ರೀಮಂತಿಕೆಯಲ್ಲಿದ್ದ ಚಕ್ರವರ್ತಿನಿಯ ಕರುಣೆ, ಪ್ರೀತಿಗಳು ಅವಳ ಮನ ತಟ್ಟಿದವು. ಎರಡು ವರ್ಷವಾಗುವಷ್ಟರಲ್ಲಿ ಚಕ್ರವರ್ತಿನಿ ತೀರಿಹೋದಳು. ಇದು ರೊನೆನ್‌ಳ ಮನಸ್ಸಿನ ಮೇಲೆ ಅಗಾಧ ಪರಿಣಾಮವನ್ನುಂಟುಮಾಡಿತು.  ಪ್ರತಿಯೊಂದು ವಸ್ತು, ಜೀವ ಒಂದಲ್ಲ ಒಂದು ದಿನ, ಒಂದಲ್ಲ ಒಂದು ರೀತಿಯಿಂದ ಸಾವನ್ನಪ್ಪುವುದು ಖಚಿತವೆಂದು ಮನವರಿಕೆಯಾಯಿತು.
ಹಾಗಾದರೆ ಈ ಅನಿಶ್ಚಿತವಾದ ಜಗತ್ತಿನಲ್ಲಿ ಶಾಶ್ವತವಾದದ್ದೇನೆಂಬುದನ್ನು ಕಂಡುಕೊಳ್ಳಬೇಕೆಂದು ತೀರ್ಮಾನಿಸಿ ಝೆನ್ ಸನ್ಯಾಸಿನಿಯಾಗಲು ಬಯಸಿದಳು.
ಆದರೆ ಮನೆಯವರು ಬಿಡಲಿಲ್ಲ, ಮದುವೆಯಾಗಲೇಬೇಕೆಂದು ಹಟ ತೊಟ್ಟರು. 

ಮದುವೆ, ಮಕ್ಕಳು ಆದ ಮೇಲೆ ಸನ್ಯಾಸದ ವಿಚಾರ ಮರೆತುಹೋದೀತೆಂಬ ನಂಬಿಕೆ ಅವರದು. ರೊನೆನ್ ಮನೆಯವರನ್ನೂ ನಿರಾಸೆಗೊಳಿಸದೇ ತನ್ನನ್ನು ಮದುವೆಯಾಗಬಯಸಿದ ಹುಡುಗನೊಡನೆ ಮಾತನಾಡಿದಳು. ತಾನು ಅವನಿಂದ ಎರಡು ಮಕ್ಕಳಾಗುವವರೆಗೆ ಜೊತೆಗಿದ್ದು ನಂತರ ತಾನು ಸನ್ಯಾಸಿನಿಯಾಗುವುದಾಗಿ ಹೇಳಿ ಒಪ್ಪಿಸಿ ಮಾತು ತೆಗೆದುಕೊಂಡಳು. ತನಗೆ ಇಪ್ಪತ್ತೈದು ವರ್ಷವಾಗುವುದರೊಳಗೆ ತನ್ನ ಮಾತನ್ನು ಪೂರೈಸಿ ಸನ್ಯಾಸಿನಿಯಾಗಲು ಹೊರಟಳು.

ತನ್ನ ತಲೆ ಬೋಳಿಸಿಕೊಂಡಳು, ಸನ್ಯಾಸಿನಿಯ ವೇಷ ಧರಿಸಿದಳು, ಗುರುವನ್ನರಸಿ ನಡೆದಳು. ಮೊದಲು ಇಡೋ ಪಟ್ಟಣಕ್ಕೆ ಬಂದು ಗುರು ತೆತ್ಸುಗೆನ್‌ನ್ನು ಬೆಟ್ಟಿಯಾಗಿ ತನ್ನನ್ನು ಶಿಷ್ಯೆಯಾಗಿ  ತೆಗೆದುಕೊಳ್ಳುವಂತೆ  ಕೇಳಿಕೊಂಡಳು.  ಆಕೆ  ತುಂಬ ಸುಂದರಿಯಾದ್ದರಿಂದ ಉಳಿದವರ ಧ್ಯಾನಕ್ಕೆ, ಸಾಧನೆಗೆ ತೊಂದರೆಯಾಗುತ್ತದೆಂದು ಗುರು ಅವಳನ್ನು ಸ್ವೀಕರಿಸಲಿಲ್ಲ.  ಆಕೆ ಮತ್ತೊಬ್ಬ ಗುರು ಹಕಾವೋನ ಬಳಿಗೆ ಹೋಗಿ ಬೇಡಿಕೊಂಡಳು.  ಆತ ಕೂಡ ಅವಳನ್ನು ಒಪ್ಪಲಿಲ್ಲ.  ಕಾರಣ ಮತ್ತೆ ಅದೇ ಅವಳ ಅಪೂರ್ವವಾದ ಲಾವಣ್ಯ.  ತನ್ನ ಸೌಂದರ್ಯ ತನ್ನನ್ನು ಸನ್ಯಾಸಿನಿಯಾಗಲೂ ಬಿಡುವುದಿಲ್ಲ ಎಂಬ ಅರಿವಾಯಿತು ರೊನೆನ್‌ಳಿಗೆ.

ಅದೊಂದು ದಿನ ಕಬ್ಬಿಣದ ಸರಳೊಂದನ್ನು ಕೆಂಪಗೆ ಕಾಯಿಸಿ ತನ್ನ ಮುಖದ ಮೇಲೆ ಬರೆ ಎಳೆದುಕೊಂಡು ವಿರೂಪಗೊಳಿಸಿಗೊಂಡಳು.  ನಂತರ ಮತ್ತೆ ಗುರು ಹಕಾವೋನ ಕಡೆಗೆ ಹೋದಾಗ ಆತ ಅವಳನ್ನು ಒಪ್ಪಿಕೊಂಡ.  ಅವಳು ಝೆನ್ ಪಥದಲ್ಲಿ ನಡೆದಳು. ಆಕೆಗೆ ಅರವತ್ತಾರು ವರ್ಷವಾದಾಗಲೂ, ಸನ್ಯಾಸಿನಿಯಾಗಿದ್ದರೂ, ಮನಸ್ಸಿನಲ್ಲಿ ಶಾಂತಿ ಇಳಿಯಲಿಲ್ಲ.  ಆಗೊಂದು ಕವನ ಬರೆದಳು.

 ನನ್ನ ಸುಂದರ ಕಣ್ಣುಗಳು
 ಅರವತ್ತಾರು ವಸಂತಗಳನ್ನು ಕಂಡಿವೆ
 ಇನ್ನು ಸಾಕು ...
 ಚಕ್ರವರ್ತಿನಿಯ ಸೇವಿಕೆಯಾಗಿ ದೇಹಕ್ಕೆ
 ಸುಗಂಧ ತಾಗಲೆಂದು ಊದುಬತ್ತಿ ಸುಟ್ಟೆ.
 ಝೆನ್ ಪಥದಲ್ಲಿ ಸನ್ಯಾಸಿನಿಯಾಗಲು
 ಮುಖವನ್ನು ಸುಟ್ಟುಕೊಂಡೆ
 ಆದರೆ ಶಾಂತಿ ಎಲ್ಲಿ?

 ಈ ಕವನವನ್ನು ಓದಿ ಗುರುವೊಬ್ಬ ರೊನೆನ್‌ಳಿಗೆ ಹೇಳಿದ,  ಝೆನ್ ಪಥದಲ್ಲಿ ಶಾಂತಿ ಪಡೆಯಲು ನೀನು ಬಟ್ಟೆ ಬದಲಾಯಿಸಿದೆ,  ಮುಖ ವಿರೂಪಮಾಡಿಕೊಂಡೆ.  ನಿಜವಾದ ಝೆನ್‌ಗೆ ಬಟ್ಟೆಯೂ ಮುಖ್ಯವಲ್ಲ, ಮುಖದ ವಿರೂಪವೂ ಮುಖ್ಯವಲ್ಲ.  ನಿನ್ನ ಮನಸ್ಸನ್ನೇ ಪರೀಕ್ಷಿಸುವ ಕ್ರಿಯೆ ಮುಖ್ಯ.  ನಿನ್ನ ಮುಖ ವಿರೂಪವಾದರೂ ನಿನ್ನ ಮನಸ್ಸಿನಲ್ಲಿ ನಿಂತಿರುವುದು ಹಳೆಯ ಸುಂದರವಾದ ಮುಖವೇ.  ಮನಸ್ಸಿನಿಂದ ಸುಂದರತೆಯ ಅಹಂಕಾರದ ಕೊನೆಯ ಎಳೆ ಕರಗುವವರೆಗೂ ಶಾಂತಿ ದೊರೆಯಲಾರದು.  ರೊನೆನ್‌ಳಿಗೆ ಈಗ ಶಾಂತಿಯ ದಾರಿ ತಿಳಿಯಿತು.  ಆಕೆ ನಂತರ ಶಾಂತಿ ಪಡೆದು ನಿಶ್ಚಿಂತಳಾದಳು.

ಮನಸ್ಸಿನ ಶಾಂತಿಗೆ, ತೃಪ್ತಿಗೆ ಕಾರಣಗಳು ನಮ್ಮ ಹೊರಗಿಲ್ಲ. ನಮ್ಮ ಅಂತಸ್ತು, ಘನತೆ, ಹಣ, ಪದವಿ, ಪುಸ್ತಕದ ಓದು ಯಾವವೂ ಶಾಂತಿಯನ್ನು ನೀಡಲಾರವು. ಇವುಗಳನ್ನು ಕ್ಷಣಕಾಲವಾದರೂ ಮರೆತು ಮನದ ಒಳಗೆ ಇಣುಕಿ ನೋಡಿ ಅದನ್ನು ಹಗುರವಾಗಿಸುತ್ತ ಬಂದರೆ ಶಾಂತಿ ತಾನಾಗಿಯೇ ಇಳಿಯುತ್ತದೆ ಎನ್ನುತ್ತಾರೆ ಜ್ಞಾನಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT