ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಣಾ ಕ್ರಮ ಜಾರಿ ನಿಟ್ಟಿನಲ್ಲಿ ದೃಢ ಹೆಜ್ಜೆ...

Last Updated 25 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಅಂದು ಸಂಜೆ ಟೆಲಿವಿಷನ್ ಪರದೆ ಮೇಲೆ ಹಾದು ಹೋಗುತ್ತಿದ್ದ ಸುದ್ದಿ ಸಾಲುಗಳನ್ನು ಕಂಡಾಗ ಆ ಕ್ಷಣಕ್ಕೆ ನನಗೆ ಆ ತಾಜಾ ಸುದ್ದಿ ನಂಬಲಿಕ್ಕೇ ಸಾಧ್ಯವಾಗಲಿಲ್ಲ. ಚಿಲ್ಲರೆ ವಹಿವಾಟಿನಲ್ಲಿ ಶೇ 51ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಮಾಡಿಕೊಟ್ಟ ಕೇಂದ್ರ ಸರ್ಕಾರದ ನಿರ್ಧಾರವನ್ನು ಅರಗಿಸಿಕೊಳ್ಳಲಿಕ್ಕೂ ನನಗೆ ತಕ್ಷಣ ಸಾಧ್ಯವಾಗಲಿಲ್ಲ. ನನ್ನಲ್ಲಿ ಮೂಡಿದ್ದ ಅನುಮಾನ ನಿವಾರಿಸಿಕೊಳ್ಳಲು ಇತರ ಚಾನೆಲ್‌ಗಳನ್ನು ತಿರುಗಿಸಿ ನೋಡಿದ ನಂತರವೇ ನನಗೆ ಸುದ್ದಿ ಖಚಿತವಾಯಿತು.
 
ನನ್ನ ಮನದಲ್ಲಿ ಮೂಡಿದ ಗೊಂದಲಗಳೆಲ್ಲ ತಿಳಿಯಾದವು. ಕೇಂದ್ರ ಸರ್ಕಾರ ಕೈಗೊಂಡ ದಿಟ್ಟ ಕ್ರಮದಲ್ಲಿ ಯಾವುದೇ ನಾಟಕೀಯತೆ ಏನೂ ನನಗೆ ಕಂಡು ಬರಲಿಲ್ಲ.  ಕೇಂದ್ರ ಸಚಿವ ಸಂಪುಟ ಅಂದು ತೆಗೆದುಕೊಂಡ ಇತರ ನಿರ್ಧಾರಗಳು ಮಾತ್ರ, `ಎಫ್‌ಡಿಐ~ಗೆ ಹೋಲಿಸಿದರೆ ಹೆಚ್ಚು ವಿವಾದಾತ್ಮಕವಾಗಿರಲಿಲ್ಲ.

ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡುವ ನಿರ್ಧಾರದ ಮೂಲಕ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು  ದಿಟ್ಟ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ತಾನು ಬದ್ಧವಾಗಿರುವುದರ ಸ್ಪಷ್ಟ ಸಂದೇಶ ನೀಡಿತ್ತು. ಈ ನಿರ್ಣಯಕ್ಕೆ ಷೇರುಪೇಟೆ, ಕರೆನ್ಸಿ ಮುಂತಾದವು ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದವು.

ಸುದ್ದಿ ಹರಡುತ್ತಿದ್ದಂತೆ ದೇಶದಾದ್ಯಂತ ಈ ತೀರ್ಮಾನಕ್ಕೆ ತೀವ್ರ ಸ್ವರೂಪದ ಪ್ರತಿಭಟನೆ ಕಂಡು ಬರಲಿದೆ ಎನ್ನುವ ನಿರೀಕ್ಷೆ ನಾನೂ ಸೇರಿದಂತೆ ಬಹುಸಂಖ್ಯಾತರಿಗೆ ಇದ್ದಿರಲಿಲ್ಲ.  ಟೆಲಿವಿಷನ್ ಚಾನೆಲ್‌ಗಳೂ ಇಂತಹ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರಲಿಲ್ಲ. ಮೂರೂವರೆ ವರ್ಷದಲ್ಲಿ ಇದೇ ಮೊದಲ ಬಾರಿಗೆ ರಾಜಕೀಯ ವಿರೋಧ ಮತ್ತು ಸರ್ಕಾರದ ಅಸ್ತಿತ್ವಕ್ಕೆ ಎದುರಾಗಲಿದ್ದ ಸಂಭವನೀಯ ಅಪಾಯವನ್ನೂ ಲೆಕ್ಕಿಸದೇ ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ ಮತ್ತವರ ತಂಡದ ಸದಸ್ಯರನ್ನು ನಾನು ಅಭಿನಂದಿಸಲು ಇಚ್ಛಿಸುತ್ತೇನೆ.
 
ಇಂತಹ ನಿರ್ಧಾರದ ಪರಿಣಾಮವಾಗಿ ಕೊನೆಗೂ ದೇಶದ ಅರ್ಥ ವ್ಯವಸ್ಥೆ ಪುನಶ್ಚೇತನದ ಹಾದಿಯಲ್ಲಿ ಸಾಗುವ ಸ್ಪಷ್ಟ ಸೂಚನೆಗಳಂತೂ ಸದ್ಯಕ್ಕೆ ಕಂಡು ಬರುತ್ತಿವೆ.
ಚಿಲ್ಲರೆ ವಹಿವಾಟು ರಂಗದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡುವುದು ಬಹಳ ವರ್ಷಗಳಿಂದ  ವಿವಾದಾತ್ಮಕ ವಿಷಯವಾಗಿತ್ತು. ಈ ನಿಟ್ಟಿನಲ್ಲಿ ಅನೇಕ ಆಯ್ಕೆಗಳೂ ಸರ್ಕಾರದ ಮುಂದಿದ್ದವು. ಕೆಲ ಆಯ್ಕೆಗಳು ಪರವಾಗಿದ್ದರೆ, ಇನ್ನೂ ಕೆಲವು ವಿರೋಧವಾಗಿದ್ದವು. ಹಲವಾರು ಸಂದರ್ಭಗಳಲ್ಲಿ   ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ಈ ವಿವಾದವು ಹಲವಾರು ಭಾವನಾತ್ಮಕ ಮತ್ತು ವಸ್ತುನಿಷ್ಠ  ವಿಶ್ಲೇಷಣೆಗೆ ಕಾರಣವಾಗಿದ್ದರೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ.

ನೀತಿ ನಿರೂಪಣೆಗೆ ಸಂಬಂಧಿಸಿದಂತೆ ಸ್ಪಷ್ಟ ನೀತಿ ಇಲ್ಲದ ಕಾರಣಕ್ಕೆ ದೇಶಿ ಅರ್ಥವ್ಯವಸ್ಥೆಯು ಎರಡು ವರ್ಷಗಳಿಂದ  ನಿಂತ್ಲ್ಲಲೇ  ನಿಂತ ನೀರಿನಂತಾಗಿತ್ತು. ಆರ್ಥಿಕತೆಯ ಎಲ್ಲ ಮಾನದಂಡಗಳೂ ನಕಾರಾತ್ಮಕ ಸ್ಥಿತಿಯಲ್ಲಿದ್ದವು. ಎಲ್ಲೆಡೆ ಅಹಿತಕರ ಪರಿಸ್ಥಿತಿಯೇ ಮನೆ ಮಾಡಿತ್ತು. ಆರ್ಥಿಕ ವೃದ್ಧಿ ದರ, ಕರೆನ್ಸಿ ವಿನಿಮಯ ದರ, ರಫ್ತು, ಷೇರುಪೇಟೆ, ಹಣದುಬ್ಬರ, ಹಣ ಪಾವತಿ ಸಮತೋಲನ, ಬಡ್ಡಿ ದರಗಳು, ಬ್ಯಾಂಕ್‌ಗಳ ವಸೂಲಾಗದ ಸಾಲ (ಎನ್‌ಪಿಎ), ವಿದೇಶಿ ನೇರ ಬಂಡವಾಳ (ಎಫ್‌ಡಿಎ), ವಿದೇಶಿ ಸಾಂಸ್ಥಿಕ ಹೂಡಿಕೆ (ಎಫ್‌ಐಐ), ವಿತ್ತೀಯ ಕೊರತೆ ಮುಂತಾದ ವಿಷಯಗಳಲ್ಲಿ ನಿರಾಶೆಯೇ ಮನೆ ಮಾಡಿತ್ತು. ಯಾವುದೇ ಅಳತೆಗೋಲು ಲೆಕ್ಕಕ್ಕೆ ತೆಗೆದುಕೊಂಡರೂ ಬರೀ ನಿರಾಶೆಯ ಮಾತೇ ಕೇಳಿ ಬರುತ್ತಿತ್ತು.

ಇದಕ್ಕೆ ಪೂರಕ ಎಂಬಂತೆ, ಹಲವಾರು ಹಗರಣಗಳು, ಭ್ರಷ್ಟಾಚಾರ ಪ್ರಕರಣಗಳಿಂದಾಗಿ ಅರ್ಥ ವ್ಯವಸ್ಥೆಯಲ್ಲಿ ಸಂಪೂರ್ಣ ನಿರಾಶೆಯೇ ಮನೆ ಮಾಡಿತ್ತು. ಮಹಾಲೇಖಪಾಲರ (ಸಿಎಜಿ) ವರದಿ ಮತ್ತು ಸುಪ್ರೀಂಕೋರ್ಟ್‌ನ ಛೀಮಾರಿಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವು. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಆರ್ಥಿಕ ಸುಧಾರಣೆಯ ದಿಟ್ಟ ನಿರ್ಧಾರ ಕೈಗೊಳ್ಳದೇ ಸರ್ಕಾರಕ್ಕೆ ಬೇರೆ ದಾರಿಯೇ ಇದ್ದಿರಲಿಲ್ಲ.

ಹದಿನೈದು ತಿಂಗಳಲ್ಲಿ ನಾನು ಈ ಅಂಕಣದಲ್ಲಿ `ಎಫ್‌ಡಿಐ~ ಮತ್ತು ಬಹುರಾಷ್ಟ್ರೀಯ ದೈತ್ಯ ಸಂಸ್ಥೆ `ವಾಲ್‌ಮಾರ್ಟ್~ಗೆ ಸಂಬಂಧಿಸಿದಂತೆ ಎರಡು ಬಾರಿ ಬರೆದಿರುವೆ. ಗಮನಾರ್ಹವಾಗಿ ಕುಸಿಯುತ್ತಿದ್ದ ಅರ್ಥ ವ್ಯವಸ್ಥೆಗೆ ಚೇತರಿಕೆ ನೀಡಲು ಸರ್ಕಾರವು ತುರ್ತಾಗಿ ಕಾರ್ಯಪ್ರವೃತ್ತವಾಗಬೇಕಾದ ಅನಿವಾರ್ಯ ಪರಿಸ್ಥಿತಿ ಉದ್ಭವಿಸಿತ್ತು.

ಸರ್ಕಾರ ಕೈಗೊಳ್ಳುವ ಯಾವುದೇ ಆರ್ಥಿಕ ಸುಧಾರಣಾ ಕ್ರಮದಿಂದ ದೇಶಕ್ಕೆ  ಮತ್ತು ಜನರಿಗೆ ಒಳಿತಾಗಲಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಆಧರಿಸಿಯೇ ಸುಧಾರಣಾ ಕ್ರಮಗಳ ಸಾಧಕ - ಬಾಧಕಗಳನ್ನು ಅಳೆಯಲಾಗುತ್ತದೆ.

ಚಿಲ್ಲರೆ ವಹಿವಾಟಿನ ಜತೆ ಪ್ರತಿಯೊಬ್ಬರೂ ಒಂದಲ್ಲ ಒಂದು ಬಗೆಯಲ್ಲಿ ಸಂಬಂಧ ಹೊಂದಿದವರಾಗಿತ್ತಾರೆ. ಹೀಗಾಗಿ  ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡುವುದರಿಂದ ಪ್ರತಿಯೊಬ್ಬರ ಹಿತಾಸಕ್ತಿ ಮೇಲೆ ಆಗುವ ಪರಿಣಾಮಗಳನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ನಮ್ಮಲ್ಲಿ, ರೈತರು ಬೆಳೆದ ಫಸಲು ಗ್ರಾಹಕರ ಕೈಗೆ ತಲುಪುವ ಹಂತದಲ್ಲಿ ದೊಡ್ಡ ಪ್ರಮಾಣದ ಬೆಲೆ ವ್ಯತ್ಯಾಸ ಇರುವುದು ಎಲ್ಲರ ಪಾಲಿಗೂ ಅನುಭವಕ್ಕೆ ಬಂದಿರುವ ಮಾತು. ಹಣಕಾಸು ಸಚಿವಾಲಯದ ಮಾಜಿ ಸಲಹೆಗಾರ ಕೌಶಿಕ್ ಬಸು ಅವರ ಪ್ರಕಾರ, ಗ್ರಾಹಕರು ಪಾವತಿಸುವ ಬೆಲೆಯ  ಶೇ 35ರಷ್ಟು ಮಾತ್ರ ರೈತರ ಕೈಸೇರುತ್ತದೆ. ಇದಕ್ಕೆ ಬಹು ಹಂತದ ವಿತರಣಾ ವ್ಯವಸ್ಥೆ, ಮಧ್ಯವರ್ತಿಗಳ ಹಾವಳಿ, ಪೂರೈಕೆ ಸರಣಿಯಲ್ಲಿನ ದೋಷ ಮತ್ತು ಮಾರ್ಗ ಮಧ್ಯೆ ಕೊಳೆಯುವ ಉತ್ಪನ್ನ ಮುಂತಾದವು ಮುಖ್ಯ ಕಾರಣಗಳಾಗಿವೆ. ದಶಕಗಳು ಕಳೆದರೂ ಈ ಪರಿಸ್ಥಿತಿಯಲ್ಲಿ ಕಿಂಚಿತ್ತೂ ಬದಲಾವಣೆ ಆಗಿಲ್ಲ.

ರೈತರಿಗೆ ನ್ಯಾಯಯುತ ಬೆಲೆ ದೊರೆಯದಿರುವುದೂ ಕೂಡ, ಕೃಷಿ ರಂಗದಲ್ಲಿ ಸಾಕಷ್ಟು ಬಂಡವಾಳ ಹೂಡಿಕೆಯಾಗದಿರಲು ಕಾರಣವಾಗಿದೆ. ಇದರಿಂದ ದೇಶಿ ಕೃಷಿ ರಂಗದ ಬೆಳವಣಿಗೆ ದರವು ವರ್ಷಗಳಿಂದ ಕಡಿಮೆ ಮಟ್ಟದಲ್ಲಿಯೇ ಇದೆ.

ಕೃಷಿ ವಲಯದ ಉತ್ಪಾದನೆ ಹೆಚ್ಚಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಸಾಕಷ್ಟು ರಿಯಾಯ್ತಿ, ಉತ್ತೇಜನ ನೀಡುತ್ತಿವೆ. ಕರ್ನಾಟಕ ಸರ್ಕಾರವು ಪ್ರತ್ಯೇಕ ಕೃಷಿ ಬಜೆಟ್ ಕೂಡ ಮಂಡಿಸುತ್ತಿದೆ. ಕೃಷಿ ರಂಗದ ಪುನಶ್ಚೇತನಕ್ಕೆ ಕೈಗೊಳ್ಳಲಾಗುತ್ತಿರುವ ಉತ್ತೇಜನಾ ಕ್ರಮಗಳು ಮತ್ತು ಭಾರಿ ಪ್ರಮಾಣದ ಹಣದ ನೆರವು ಉದ್ದೇಶಿತ ಫಲಿತಾಂಶ ನೀಡುತ್ತಿಲ್ಲ.
 
ಆರ್ಥಿಕ ಮುನ್ನಡೆಯ ಹಾದಿಯಲ್ಲಿ ಕೃಷಿ ವಲಯವು ಮಂದಗತಿಯಲ್ಲಿಯೇ ಸಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಇತರ `ಆರ್ಥಿಕ ಮಾದರಿ~ಗಳ ಮೂಲಕ ಕೃಷಿ ವಲಯದ ಪುನಶ್ಚೇತನಕ್ಕೆ ಸರ್ಕಾರ ಮುಂದಾಗಿರುವುದು ವಿವೇಕಯುತ ನಿರ್ಧಾರ ಎಂದು  ಅನಿಸುವುದಿಲ್ಲವೇ. ಚಿಲ್ಲರೆ ವಹಿವಾಟಿನಲ್ಲಿ `ಎಫ್‌ಡಿಐ~ಗೆ ಅವಕಾಶ ಮಾಡಿಕೊಡುವುದರಿಂದ ಅಪೇಕ್ಷಿತ ಬದಲಾವಣೆ ಕಾಣಲು ಸಾಧ್ಯವಿದೆ. ಕ್ರಮೇಣ `ಬೆಲೆ ಅಂತರ~ವೂ ಕಡಿಮೆಯಾಗಲಿದೆ. ಬೆಳೆಗಾರರು ಮತ್ತು ಗ್ರಾಹಕರೂ ಇದರ ಪ್ರಯೋಜನ ಪಡೆಯಲಿದ್ದಾರೆ.
 
ದೇಶದ ಜನಸಂಖ್ಯೆಯ ಶೇ 56ರಷ್ಟು ಜನರು ಕೃಷಿಯಲ್ಲಿ ತೊಡಗಿಕೊಂಡಿರುವಾಗ ಇದರಿಂದ ಗರಿಷ್ಠ ಪ್ರಯೋಜನ ದೊರೆಯಲಿದೆ ಎಂದೇ ನನಗೆ ಭಾಸವಾಗುತ್ತಿದೆ.
ಈ ಬದಲಾವಣೆಯ ಗಾಳಿಯು ಚಿಲ್ಲರೆ ವಹಿವಾಟಿನ ಸ್ವರೂಪದಲ್ಲಿಯೂ ತ್ವರಿತ ಪರಿವರ್ತನೆಗೆ ಕಾರಣವಾಗಲಿದೆ. ಸದ್ಯಕ್ಕೆ ಇಂತಹ ವಹಿವಾಟಿನಲ್ಲಿ ತೊಡಗಿರುವವರು ತಕ್ಷಣಕ್ಕೆ ಗಾಬರಿಪಡಬೇಕಾಗಿಲ್ಲ. ಬಹುರಾಷ್ಟ್ರೀಯ ಸಂಸ್ಥೆಗಳು ತಮ್ಮ ವಹಿವಾಟು ವಿಸ್ತರಿಸಲು ಸಾಕಷ್ಟು ಸಮಯ ಹಿಡಿಯಲಿದೆ.

ಚಿಲ್ಲರೆ ವಹಿವಾಟಿನಲ್ಲಿನ `ಎಫ್‌ಡಿಐ~ ಬರೀ, ಕೃಷಿ ಉತ್ಪನ್ನಗಳಿಗೆ ಮಾತ್ರ ಸಂಬಂಧಿಸಿಲ್ಲ. ಅದರಾಚೆಗೂ ಅದರ ಪರಿಣಾಮಗಳು ಇರುವುದೂ ಸುಳ್ಳಲ್ಲ. ಭಾರತದ ಸಂದರ್ಭದಲ್ಲಿ `ಎಫ್‌ಡಿಐ~ಗೆ ಸಾಕಷ್ಟು ಮಹತ್ವ ಇದೆ. ಅದರ ಸುತ್ತಲೂ ತಳಕು ಹಾಕಿಕೊಂಡಿರುವ ಅನೇಕ ವಿಷಯಗಳನ್ನು ಚರ್ಚಿಸುವುದೇ ಈ ಲೇಖನದ ಮುಖ್ಯ ಆಶಯವಾಗಿದೆ. ಆಧುನಿಕ ರಿಟೇಲ್ ವಹಿವಾಟಿನಲ್ಲಿನ ಒಟ್ಟಾರೆ ಸರಕುಗಳಲ್ಲಿ ಕೃಷಿ ಉತ್ಪನ್ನಗಳ ಪಾಲು ಕೇವಲ ಶೇ 20ರಷ್ಟು ಮಾತ್ರ ಇರುತ್ತದೆ. ಉಳಿದ ಶೇ 80ರಷ್ಟು ಉತ್ಪನ್ನಗಳ ಬಗ್ಗೆ ಇನ್ನೊಂದು ದಿನ ಈ ಅಂಕಣದಲ್ಲಿ ಚರ್ಚಿಸುವೆ.

`ಎಫ್‌ಡಿಎ~ ಬಗ್ಗೆ ಇನ್ನೊಂದು ಎಚ್ಚರಿಕೆ ನಿಬಂಧನೆ ಇರುವುದನ್ನೂ ಪ್ರತಿಯೊಬ್ಬರೂ ಗಣನೆಗೆ ತೆಗೆದುಕೊಳ್ಳಲು ಮರೆಯಬಾರದು. `ಎಫ್‌ಡಿಐ~ಗೆ ಅವಕಾಶ ಮಾಡಿಕೊಡುವ ವಿವೇಚನೆ ರಾಜ್ಯ ಸರ್ಕಾರಗಳಿಗೆ ಬಿಡಲಾಗಿದೆ. ಇದೊಂದು ಉತ್ತಮ ನಿರ್ಧಾರವಾಗಿದೆ. `ಎಫ್‌ಡಿಐ~ ಬಗ್ಗೆ ಅನುಮಾನ ಹೊಂದಿರುವ ರಾಜ್ಯಗಳು  ಹಿಂದೆ ಸರಿಯಲು ಮತ್ತು ಒಲವು ಹೊಂದಿರುವ ಇತರ ರಾಜ್ಯಗಳು ಮುಂದುವರೆಯಲೂ ಅವಕಾಶ ಇದೆ.  ಚಿಲ್ಲರೆ ವಹಿವಾಟಿನ ಎಲ್ಲ ಭಾಗಿದಾರರು ಸಾಧಕ - ಬಾಧಕಗಳನ್ನೆಲ್ಲ ವಿವರವಾಗಿ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲು ಇದರಿಂದ ಸಾಕಷ್ಟು ಸಮಯಾವಕಾಶವೂ ದೊರೆಯಲಿದೆ.

ಭಾರತದ ಅರ್ಥವ್ಯವಸ್ಥೆಯನ್ನು `ಆನೆ~ಗೆ ಹೋಲಿಸಲಾಗುತ್ತಿದೆ. ಈಗ `ಆನೆ~ ಮತ್ತೆ ಸಂಭ್ರಮದಿಂದ ಹೆಜ್ಜೆ ಹಾಕಲು ಆರಂಭಿಸಲಿದೆ. ಅರ್ಥ ವ್ಯವಸ್ಥೆಯು ತನ್ನೆಲ್ಲ ಸಂಕಷ್ಟಗಳನ್ನು ಹಿಂದಿಕ್ಕಿ ಹೊಸ ಸುಧಾರಣಾ ಕ್ರಮಗಳ ಜಾರಿ ದಿಕ್ಕಿನಲ್ಲಿ ನಿಧಾನವಾಗಿ ಮತ್ತು ದೃಢವಾಗಿ ಹೆಜ್ಜೆ ಹಾಕಲಿದೆ ಎಂದೂ ಈ ಕ್ಷಣಕ್ಕೆ ಭಾಸವಾಗುತ್ತಿದೆ.
 ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT