ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಸುದ್ದಿ: ಕುರಿಗಳನ್ನು ಕಾಯಲು ತೋಳ

Last Updated 9 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ಮೂರ್ಖರ ದಿನ’ದ ಮರುದಿನ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಒಂದು ಅಧಿಸೂಚನೆ ಹೊರಡಿಸಿತು. ಅದರ ಪ್ರಕಾರ ‘ಸುಳ್ಳು ಸುದ್ದಿ’ ಪ್ರಕಟಿಸುವ ಪತ್ರಕರ್ತರ ಮಾನ್ಯತೆಯನ್ನು ಕಳೆದುಕೊಳ್ಳಬೇಕಾಗುತ್ತಿತ್ತು. ಅಧಿಸೂಚನೆ ಪ್ರಕಟವಾದ ಇಪ್ಪತ್ತನಾಲ್ಕು ಗಂಟೆಗಳ ಒಳಗೆ ಪ್ರಧಾನ ಮಂತ್ರಿ ಕಾರ್ಯಾಲಯ ಮಧ್ಯಪ್ರವೇಶಿಸಿತು. ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವೆ ಸ್ಮೃತಿ ಇರಾನಿಯ ಅತ್ಯುತ್ಸಾಹವನ್ನು ಖಂಡಿಸಲಾಯಿತು. ‘ಸುಳ್ಳು ಸುದ್ದಿ’ ನಿಯಂತ್ರಣದ ಅಧಿಸೂಚನೆ ಹಿಂದಕ್ಕೆ ಹೋಯಿತು.

ಈ ಪ್ರಹಸನವನ್ನು ಸ್ವಲ್ಪ ಸೂಕ್ಷ್ಮವಾಗಿ ನೋಡುವ ಅಗತ್ಯವಿದೆ. ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಣ್ಣ ಪ್ರಮಾಣದ ಉದ್ಯೋಗಿಗಳನ್ನು ಸರ್ಕಾರ ‘ಮಾನ್ಯತೆ ಪಡೆದ ಪತ್ರಕರ್ತರು’ ಎಂದು ಗುರುತಿಸುತ್ತದೆ. ಸಾಮಾನ್ಯವಾಗಿ ಇವರೆಲ್ಲರೂ ವರದಿಗಾರರು. ಒಂದು ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡುವ ಒಟ್ಟು ಪತ್ರಕರ್ತರಲ್ಲಿ ಶೇಕಡಾ 25ರಷ್ಟು ಮಂದಿಗೆ ಈ ‘ಮಾನ್ಯತೆ’ ಲಭಿಸಿರುತ್ತದೆ. ಇದನ್ನು ಸರ್ಕಾರ ನೀಡುವುದು ಒಂದು ಆಡಳಿತಾತ್ಮಕ ಅನುಕೂಲಕ್ಕಾಗಿ. ಭಾರೀ ಭದ್ರತೆ ಇರುವ ಕಟ್ಟಡಗಳು, ಪ್ರದೇಶಗಳಲ್ಲಿ ನಡೆಯುವ ಕಾರ್ಯಕ್ರಮಗಳು ಮತ್ತು ಅತಿ ಭದ್ರತೆಯುಳ್ಳ ವ್ಯಕ್ತಿಗಳು ಭಾಗವಹಿಸುವ ಸಮಾರಂಭಗಳಿಗೆ ಯಾವ ಪತ್ರಕರ್ತರನ್ನು ಆಹ್ವಾನಿಸಬೇಕು ಎಂಬುದನ್ನು ಸುಲಭಗೊಳಿಸಿಕೊಳ್ಳುವುದಕ್ಕೆ ಸರ್ಕಾರ ಈ ವ್ಯವಸ್ಥೆಯನ್ನು ರೂಪಿಸಿದೆ. ಈ ‘ಮಾನ್ಯತೆ’ಯನ್ನು ರದ್ದುಪಡಿಸುವ ‘ಶಿಕ್ಷೆ’ಯ ಮೂಲಕ ಸುಳ್ಳು ಸುದ್ದಿಯನ್ನು ನಿಯಂತ್ರಿಸಲು ಹೊರಟದ್ದೇ ಒಂದು ತಮಾಷೆ. ಉದ್ಯಮದಲ್ಲಿರುವ ಮುಕ್ಕಾಲು ಪಾಲು ಜನರು ಈ ಮಾನ್ಯತೆಯ ಪರಿಧಿಯೊಳಗೇ ಇಲ್ಲ.

ಇದಕ್ಕಿಂತ ಕುತೂಹಲಕಾರಿಯಾದ ಮತ್ತೊಂದು ಸಂಗತಿ ಇದೆ. ‘ಸುಳ್ಳು ಸುದ್ದಿ’ಗಳನ್ನು ಹರಡುವುದರಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳ ಪಾತ್ರ ಎಷ್ಟಿದೆ ಎಂಬ ಪ್ರಶ್ನೆ ಕೇಳಿಕೊಂಡರೆ ಇದು ಅರ್ಥವಾಗುತ್ತದೆ. ಇಲ್ಲಿಯ ತನಕ ನಡೆದಿರುವ ಎಲ್ಲಾ ಸಂಶೋಧನೆಗಳೂ ಸುಳ್ಳು ಸುದ್ದಿ ಹರಡುವಿಕೆಯಲ್ಲಿ ಬಹುಮುಖ್ಯ ಪಾತ್ರವಹಿಸಿರುವುದು ಸಾಮಾಜಿಕ ಮಾಧ್ಯಮ ಎಂದು ಕರೆಯಲಾಗುವ ಜಾಲತಾಣಗಳು. ಇದರಲ್ಲಿ ಟ್ವಿಟ್ಟರ್, ಫೇಸ್‌ಬುಕ್‌ಗಳದ್ದು ಸಿಂಹಪಾಲು. ಮತ್ತೆ ವಾಟ್ಸ್ ಆಪ್ ಎಂಬ ಸಂದೇಶ ಹಂಚಿಕೊಳ್ಳುವ ಸೇವೆಯದ್ದು.

ಈ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುವ ಸುಳ್ಳು ಸುದ್ದಿಗಳು ಎಲ್ಲಿ ಜನಿಸುತ್ತವೆ? ಈ ಪ್ರಶ್ನೆಗೆ ಉತ್ತರ ಹುಡುಕಿದರೆ ಇನ್ನಷ್ಟು ಕುತೂಹಲಕಾರಿ ಮಾಹಿತಿಗಳು ಹೊರಬೀಳುತ್ತವೆ. ಇವುಗಳಲ್ಲಿ ಹೆಚ್ಚಿನವುಗಳು ‘ಜಾನಪದ’ ಎಂದು ಕರೆಯಬಹುದಾದ ವಿಭಾಗಕ್ಕೆ ಸೇರಿಸಬಹುದಾದವು. ಇವುಗಳನ್ನು ಯಾರೋ ಎಲ್ಲೋ ಸೃಷ್ಟಿಸಿರುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಅವುಗಳ ಮೂಲ ತಿಳಿಯುವುದೇ ಇಲ್ಲ. ಇವನ್ನು ಹೊರತು ಪಡಿಸಿದರೆ ಸುಳ್ಳು ಸುದ್ದಿಗಳನ್ನು ಹರಡುವುದನ್ನೇ ಮುಖ್ಯ ಉದ್ದೇಶವನ್ನಾಗಿ ಇಟ್ಟುಕೊಂಡಿರುವ ಹಲವು ಜಾಲತಾಣಗಳಿವೆ. ಇವುಗಳಲ್ಲಿ ಎರಡು ವಿಧ. ಮೊದಲನೆಯದ್ದು ಕೇವಲ ‘ಕ್ಲಿಕ್’ ಬಯಸುವ ತಾಣಗಳು ಹಲವಿವೆ. ಶೀರ್ಷಿಕೆಯಲ್ಲಿ ಕುತೂಹಲ ಹುಟ್ಟಿಸಿ ಜನರನ್ನು ಸೆಳೆಯುವ ತಾಣಗಳಿವು. ಪ್ರಪಂಚದ ಯಾವುದೋ ಮೂಲೆಯಲ್ಲಿ ನಡೆದ ಘಟನೆಯನ್ನು ನಮ್ಮ ಬೀದಿಯ ಕೊನೆಯಲ್ಲೇ ನಡೆಯಿದು ಎಂಬ ವಿವರ ಪ್ರಕಟಿಸುವ ತಾಣಗಳಿವು. ಎರಡನೆಯದ್ದು ನಿರ್ದಿಷ್ಟ ರಾಜಕೀಯ ಉದ್ದೇಶಕ್ಕಾಗಿಯೇ ರೂಪುಗೊಂಡವು.

ಇತ್ತೀಚೆಗೆ ಬೆಂಗಳೂರು ಪೊಲೀಸರು ಬಂಧಿಸಿದ ದಕ್ಷಿಣ ಕನ್ನಡ ಮೂಲಕ ಮಹೇಶ್ ವಿಕ್ರಂ ಹೆಗ್ಡೆ ಎಂಬಾತನೂ ಇಂಥದ್ದೊಂದು ಸುಳ್ಳು ಸುದ್ದಿಯ ಅಡ್ಡೆಯನ್ನು ನಡೆಸುತ್ತಿದ್ದ. ‘ಪೋಸ್ಟ್ ಕಾರ್ಡ್ ಡಾಟ್ ನ್ಯೂಸ್’ ಎಂಬ ಈ ತಾಣ ಸುಳ್ಳು ಸುದ್ದಿಗಳಿಗೆ, ತಿರುಚಿದ ಸುದ್ದಿಗಳಿಗಾಗಿಯೇ ಕುಖ್ಯಾತಿ ಪಡೆದಿದೆ. ‘ಸುಳ್ಳು ಸುದ್ದಿ’ಗಳನ್ನು ಬಯಲಿಗೆಳೆಯುವ ತಾಣ ‘ಅಲ್ಟ್ ನ್ಯೂಸ್’ ಎಂಬ ತಾಣವನ್ನು ನಡೆಸುತ್ತಿರುವ ಪ್ರತೀಕ್ ಸಿನ್ಹಾ ಅವರ ಪ್ರಕಾರ ಮಹೇಶ್ ವಿಕ್ರಂ ಹೆಗ್ಡೆ ನಡೆಸುತ್ತಿರುವ ‘ಪೋಸ್ಟ್ ಕಾರ್ಡ್’ ಸುಳ್ಳು ಸುದ್ದಿಗಳ ಕಾರ್ಖಾನೆ.

ಇಷ್ಟೆಲ್ಲಾ ಕುಖ್ಯಾತಿ ಇರುವ ಜಾಲತಾಣದ ಸ್ಥಾಪಕನ್ನು ಬಂಧಿಸಿದ ತಕ್ಷಣ ರಂಗಕ್ಕೆ ಇಳಿದದ್ದು ಬಿಜೆಪಿಯ ಹಿರಿ ಮತ್ತು ಕಿರಿಯ ನಾಯಕರು. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಬಂಧನವನ್ನು ಖಂಡಿಸಿ ಟ್ವೀಟ್ ಮಾಡಿದರು. ಮಾಜಿ ಪತ್ರಕರ್ತ ಮತ್ತು ಹಾಲಿ ಸಂಸದ ಪ್ರತಾಪ್ ಸಿಂಹ ಅವರಂತೂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಟೀಕಾಸ್ತ್ರಗಳ ಸುರಿಮಳೆಗೈದರು. ಬಿಜೆಪಿ ಐಟಿ ಘಟಕದ ರಾಷ್ಟ್ರೀಯ ಮುಖ್ಯಸ್ಥ ಅಮಿತ್ ಮಾಳವೀಯ ಕೂಡಾ ದಾಳಿ ಆರಂಭಿಸಿದರು. ಕುತೂಹಲಕಾರಿ ಸಂಗತಿ ಎಂದರೆ ಕಾರ್ಯನಿರತ ಪತ್ರಕರ್ತರ ಸಂಘಟನೆಗಳಿಂದ ತೊಡಗಿ ಸಂಪಾದಕರ ಗಿಲ್ಡ್ ತನಕದ ಪತ್ರಕರ್ತರ ಸಂಘಟನೆಗಳೊಂದೂ ಈ ಬಂಧನದ ಬಗ್ಗೆ ಮಾತನಾಡಲಿಲ್ಲ. ಅಷ್ಟೇ ಅಲ್ಲ ಬಿಜೆಪಿ ಮತ್ತು ಅದರ ಸಹೋದರ ಸಂಘಟನೆಗಳಿಗೆ ಸೇರಿದವರನ್ನು ಹೊರತು ಪಡಿಸಿದರೆ ಮತ್ಯಾರೂ ಈ ಬಂಧನವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸಲಿಲ್ಲ.

‘ಪೋಸ್ಟ್ ಕಾರ್ಡ್’ನ ಸುದ್ದಿ ಮತ್ತು ವಿಶ್ಲೇಷಣೆಯ ಗುಣಮಟ್ಟವೆಂಬುದು ನಿರ್ದಿಷ್ಟ ರಾಜಕೀಯ ಪಕ್ಷ ಮತ್ತು ಸೈದ್ಧಾಂತಿಕತೆಯನ್ನು ಬೆಂಬಲಿಸುವುದಾಗಿತ್ತು. ಆದರೆ ಇಂಥ ಅನೇಕ ಮಾಧ್ಯಮಗಳು ಭಾರತದಲ್ಲಿವೆ. ಬಿಜೆಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ತಮ್ಮದೇ ಆದ ಪತ್ರಿಕೆ ಮತ್ತು ಟಿ.ವಿ. ಚಾನೆಲ್‌ಗಳನ್ನು ಹೊಂದಿವೆ. ನಿರ್ದಿಷ್ಟ ಸಿದ್ಧಾಂತಕ್ಕೆ ಅನುಗುಣವಾಗಿ ಇವು ಸುದ್ದಿಗಳನ್ನು ಬಿತ್ತರಿಸುತ್ತವೆಯಾದರೂ ನಡೆಯದ ಘಟನೆಯನ್ನು ವರದಿ ಮಾಡುವ ಉದ್ಧಟತನವನ್ನು ಅಷ್ಟಾಗಿ ತೋರಿಲ್ಲ. ಆದರೆ ‘ಪೋಸ್ಟ್ ಕಾರ್ಡ್’ ಹಾಗಲ್ಲ. ಇದಕ್ಕೆ ಸುಳ್ಳು ಹೇಳುವುದಕ್ಕೆ ಯಾವ ಭಯವೂ ಇರಲಿಲ್ಲ. ಅದು ಜೈನಮುನಿಯೊಬ್ಬರು ಗಾಯಗೊಂಡಿದ್ದ ಅಪಘಾತ ಪ್ರಕರಣಕ್ಕೆ ಕೋಮು ಬಣ್ಣ ಬಳಿದಿತ್ತು. ಅದು ಪ್ರಕಟಿಸಿದ ವರದಿ ಮತ್ತು ಮಾಡಿದ ಟ್ವೀಟ್‌ನಲ್ಲಿ ಜೈನಮುನಿ ಅಪಘಾತದಲ್ಲಿ ಗಾಯಗೊಂಡಿದ್ದರು ಎಂಬ ಅಂಶವನ್ನು ಹೊರತು ಪಡಿಸಿದರೆ ಉಳಿದೆಲ್ಲವೂ ಸುಳ್ಳು. ಕೋಮುಭಾವನೆಯನ್ನು ಕೆರಳಿಸಬೇಕು ಎಂಬ ಏಕೈಕ ಉದ್ದೇಶದಿಂದ ಸುದ್ದಿಗಳನ್ನು ಬರೆಯುವ ಈ ತಾಣದ ಸ್ಥಾಪಕನ ಬಂಧನವನ್ನು ಖಂಡಿಸಲು ರಾಜಕೀಯ ಪಕ್ಷವೊಂದರ ಅಷ್ಟೊಂದು ನಾಯಕರೇಕೆ ರಂಗಕ್ಕಿಳಿದರು?

ಈ ಪ್ರಶ್ನೆಗೆ ಉತ್ತರ ಹುಡುಕಿದರೆ ಸುಳ್ಳು ಸುದ್ದಿಯ ಬಗ್ಗೆ ಕೇಂದ್ರ ಸರ್ಕಾರ ಏನು ಹೇಳಿದರೂ ಪತ್ರಕರ್ತರೇಕೆ ಅನುಮಾನಿಸುತ್ತಾರೆ ಎಂಬುದು ಅರ್ಥವಾಗುತ್ತದೆ. ಭಾರತದಲ್ಲಿ ಸುಳ್ಳು ಸುದ್ದಿಯ ಮೂಲವಿರುವುದು ಬಿಜೆಪಿಯ ಮೂಲಕ ಆರಂಭಗೊಂಡ ಪರ್ಯಾಯ ರಾಜಕೀಯ ಸಂವಹನ ಮಾದರಿಗಳಲ್ಲಿ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ರೂಪಿಸಲಾದ ಈ ರಾಜಕೀಯ ಸಂವಹನದ ನೆಲಗಟ್ಟಿರುವುದೇ ರಾಜಕೀಯ ಸಂವಹನದ ಮಟ್ಟವನ್ನು ಅಧೋಮುಖಿಯಾಗಿಸುವುದು. ಇದನ್ನು ಆರಂಭಿಸಿದ್ದು ಬಿಜೆಪಿಯಾದರೂ ಈಗ ಹೆಚ್ಚು ಕಡಿಮೆ ಎಲ್ಲಾ ರಾಜಕೀಯ ಪಕ್ಷಗಳೂ ಇದರಲ್ಲಿ ಪಳಗಿವೆ. ಸಾಮಾಜಿಕ ಜಾಲತಾಣದ ಗೂಂಡಾಗಿರಿ ಈಗ ಎಡ, ಬಲ, ನಡುಪಂಥೀಯ ಮಾದರಿಗಳಲ್ಲಿ ವ್ಯಾಪಕಗೊಂಡಿದೆ. ಒಂದು ಬಗೆಯ ಗುಂಪು ನ್ಯಾಯದ ಈ ರಾಜಕೀಯ ಸಂವಹನದ ಮಾದರಿಗೆ ವಾಸ್ತವಿಕ ಅಂಕಿ-ಅಂಶಗಳು ಬೇಕಿಲ್ಲ. ಸಾರ್ವಜನಿಕ ಭಾಷಣದಲ್ಲಿ ಪಾಲಿಸಲೇಬೇಕಾದ ಔಪಚಾರಿಕತೆಗಳ ಅವಶ್ಯಕತೆಯಿಲ್ಲ. ಜನರನ್ನು ಭಾಷೆಯಲ್ಲಿ ಕೆರಳಿಸುವ ತಂತ್ರ ಗೊತ್ತಿದ್ದರೆ ಸಾಕಾಗುತ್ತದೆ. ಮಹೇಶ್ ವಿಕ್ರಮ ಹೆಗ್ಡೆ ತರಹದವರು ಈ ಹೊಸ ಸಾಧ್ಯತೆಯನ್ನು ಬಳಸಿಕೊಂಡರು ಅಷ್ಟೆ.

ಸಾವಿನ ಸುದ್ದಿ ವೇಗವಾಗಿ ಚಲಿಸುತ್ತದೆ ಎಂಬ ಗಾದೆಯೊಂದು ಬಹಳ ಹಳೆಯದು. ಇದನ್ನೇ ಸ್ವಲ್ಪ ಬದಲಾಯಿಸಿ ಸಾಮಾಜಿಕ ಜಾಲತಾಣಕ್ಕೂ ಅನ್ವಯಿಸಬಹುದು. ಇಲ್ಲಿ ಸುಳ್ಳು ಬಹಳ ವೇಗವಾಗಿ ಹರಡುತ್ತದೆ. ಇದನ್ನು ಒಂದು ತಿಂಗಳ ಹಿಂದಷ್ಟೇ ಪ್ರಕಟವಾದ ಮೆಸಾಚುಸೆಟ್ಸ್ ವಿಶ್ವವಿದ್ಯಾಲಯ ಸಂಶೋಧನಾ ವರದಿಯೂ ಇದನ್ನೇ ಹೇಳುತ್ತಿದೆ. ಇಂಥ ಸುದ್ದಿಯನ್ನು ಉತ್ಪಾದಿಸದರೆ ಸಾಕಾಗುತ್ತದೆ. ಮತ್ತೆ ಹರಡುವುದಕ್ಕೆ ಭಾರೀ ಹಿಂಬಾಲಕರಿರುವವರು ಬೇಕಾಗಿಲ್ಲ. ತೀರಾ ಸಾಮಾನ್ಯರಲ್ಲಿ ಸಾಮಾನ್ಯರೇ ಇದನ್ನು ಹರಡಿ ಬಿಡುತ್ತಾರೆ. ನಿಜ ಸುದ್ದಿಗಳಿಗಿಂತ ಹಲವು ಪಟ್ಟು ವೇಗದಲ್ಲಿ ಸುಳ್ಳು ಹರಡುತ್ತದೆ.

ಸುಳ್ಳನ್ನು ಹರಡುವುದೇ ಒಂದು ರಾಜಕೀಯ ಸಂವಹನ ವಿಧಾನವಾಗಿರುವುದು ಈಗ ಪ್ರಜಾಪ್ರಭುತ್ವದ ನೆಲೆಗಟ್ಟಿಗೇ ಒಂದು ಬಾಧೆಯಾಗಿ ಪರಿಣಮಿಸಿದೆ. ಸುಳ್ಳು ಮಾಹಿತಿಗಳನ್ನು ವ್ಯಾಪಕವಾಗಿ ಬಳಸಿದ ಬಿಜೆಪಿಯ ಅಧ್ಯಕ್ಷರೇ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಬರುವುದನ್ನು ನಂಬಬೇಡಿ ಎಂದರು. ಭಸ್ಮಾಸುರ ಈಗ ವರಕೊಟ್ಟ ದೇವನ ತಲೆಯ ಮೇಲೇ ಕೈಯಿಡಲು ಹೊರಟಿದ್ದಾನೆ. ಕೇಂದ್ರ ಸರ್ಕಾರ ಅಂತರ್ಜಾಲ ಸುದ್ದಿ ತಾಣಗಳಲ್ಲಿ ಪ್ರಕಟವಾಗುವ ಸುದ್ದಿಗಳ ಸತ್ಯಾಸತ್ಯತೆಯ ಬಗ್ಗೆ ಯೋಚಿಸಲು ಆರಂಭಿಸಿದೆ. ದುರದೃಷ್ಟವೆಂದರೆ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದರಲ್ಲಿ ಕೇಂದ್ರದ ಸಚಿವರಿದ್ದಾರೆ. ಹಲವು ಪಕ್ಷಗಳ ಸಂಸದರೂ ಇದ್ದಾರೆ. ಇವರು ಸುದ್ದಿಯ ಸತ್ಯಾಸತ್ಯತೆಯನ್ನು ಖಾತರಿ ಪಡಿಸಿಕೊಳ್ಳುವ ನೀತಿ ರೂಪಿಸುವುದೆಂದರೆ ಕುರಿಗಳನ್ನು ಕಾಯುವುದಕ್ಕೆ ತೋಳ ಹೊರಟ ಕಥೆ ನೆನಪಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT