ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಾರನ ದಿವ್ಯದರ್ಶನ

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಹಾರಾಷ್ಟ್ರದ ಪಂಡರಪುರದ ಕೇಂದ್ರ ಬಿಂದು ಪಾಂಡುರಂಗ ವಿಠ್ಠಲನ ಮಂದಿರ. ಅದೊಂದು ಭಕ್ತಿ, ಶ್ರದ್ಧೆಗಳ ಮಹಾನ್ ಕೇಂದ್ರ. ಅಲ್ಲಿ ಸದಾ ನಡೆಯುವ ಭಜನೆ, ಕೀರ್ತನೆಗಳ ನಿನಾದ ಕೇಳುಗರನ್ನು ಮೈಮರೆಯುವಂತೆ ಮಾಡುತ್ತವೆ. ಪಾಂಡುರಂಗನ ವಿಗ್ರಹ ಬಹಳ ಪುರಾತನವಾದದ್ದು. ಸಹಸ್ರವರ್ಷದ ಇತಿಹಾಸವಿದೆ ಎಂದು ಹೇಳುತ್ತಾರೆ.

ನೂರು ವರ್ಷಗಳ ಹಿಂದೆ ಒಂದು ಘಟನೆ ಪಂಡರಪುರದಲ್ಲಿ ನಡೆಯಿತು. ಯಾರೋ ಶ್ರೀಮಂತ ಭಕ್ತರು ಹರಕೆಯನ್ನು ಹೊತ್ತು ಅದನ್ನು ತೀರಿಸಲೆಂದು ಪಾಂಡುರಂಗನ ವಿಗ್ರಹಕ್ಕೆ ಒಂದು ಚಿನ್ನದ ಕಿರೀಟವನ್ನು ಮಾಡಿಸಬೇಕೆಂದು ತೀರ್ಮಾನಿಸಿ ಹಣವನ್ನು ದಾನವಾಗಿ ನೀಡಿದ್ದರು. ಚಿನ್ನವನ್ನೂ ತಂದಾಯಿತು. ಕಿರೀಟವನ್ನು ಯಾರಿಂದ ಮಾಡಿಸುವುದು ಎಂದು ಧರ್ಮಾಧಿಕಾರಿಗಳು ಯೋಚಿಸಿದರು.

ಆಗ ಪಂಡರಪುರದ ಸುತ್ತಮುತ್ತ ಪ್ರಸಿದ್ಧನಾದವನು ಶಂಕರ ಸೋನಾರ. ಅವನಷ್ಟು ಕುಶಲಕರ್ಮಿ, ಕಲಾವಿದ ಮತ್ತಾರೂ ಇರಲಿಲ್ಲ. ಆದರೆ ಪಾಂಡುರಂಗನಿಗೆ ಅವನಿಂದ ಕಿರೀಟ ಮಾಡಿಸುವುದು ಕಷ್ಟವಿತ್ತು. ಯಾಕೆಂದರೆ ಶಂಕರ ಕಟ್ಟಾ ಶಿವಭಕ್ತ. ಶಿವನಿಗಲ್ಲದೇ ಬೇರೆ ಯಾವ ವಿಗ್ರಹಕ್ಕೂ ಅವನು ಆಭರಣಗಳನ್ನು ಮಾಡಲಾರ, ಯಾವ ವಿಗ್ರಹಗಳನ್ನೂ ಮುಟ್ಟಲಾರ. ಅದರಲ್ಲೂ ಪಾಂಡುರಂಗ, ವಿಷ್ಣುವಿನ ಅವತಾರವೆಂದು ಪ್ರಚಲಿತವಿದ್ದುದರಿಂದ ಅವನು ದೇವಸ್ಥಾನಕ್ಕೆ ಬರುವುದೇ ಅಸಂಭವವಾಗಿತ್ತು.

ಆದರೂ ಧರ್ಮದರ್ಶಿಗಳು ಪಟ್ಟು ಬಿಡದೇ ಶಂಕರ ಸೋನಾರನ ಬೆನ್ನುಬಿದ್ದರು. ಬಹಳಷ್ಟು ಕೇಳಿಕೊಂಡ ಮೇಲೆ ಆತ ಹೇಳಿದ, `ನಾನು ದೇವಸ್ಥಾನಕ್ಕೆ ಬಂದು ವಿಷ್ಣುವಿನ ವಿಗ್ರಹವನ್ನು ಮುಟ್ಟಲಾರೆ. ನಿಮಗೆ ಗೊತ್ತಿದೆ, ನಾನು ಶಿವ ದೇವಸ್ಥಾನಕ್ಕೆ ಮಾತ್ರ ಹೋಗುವವನು.

ಆದರೆ ನೀವು ಇಷ್ಟು ಒತ್ತಾಯ ಮಾಡಿದ ಮೇಲೆ ಕಿರೀಟ ಮಾಡಿಕೊಡುತ್ತೇನೆ. ಅಳತೆ ತೆಗೆದುಕೊಳ್ಳಲು ನಾನು ಬರುವುದಿಲ್ಲವಾದ್ದರಿಂದ ನೀವೇ ಯಾರಾದರೂ ಸರಿಯಾಗಿ ವಿಗ್ರಹದ ತಲೆಯ ಅಳತೆಯನ್ನು ಕೊಟ್ಟರೆ ಕಿರೀಟಮಾಡಿಕೊಡುತ್ತೇನೆ.~ ಇವರಿಗೆ ತುಂಬ ಸಂತೋಷವಾಯಿತು. ಶಂಕರ ತನ್ನ ಚತುರತೆಯನ್ನು ಬಳಸಿ ಅತ್ಯಂತ ಸುಂದರವಾದ ಮಾದರಿಯನ್ನು ಸಿದ್ಧಪಡಿಸಿದ.

ಧರ್ಮದರ್ಶಿಗಳಲ್ಲಿ ಒಬ್ಬರು ದೇವಸ್ಥಾನಕ್ಕೆ ಹೋಗಿ ಪಾಂಡುರಂಗನ ವಿಗ್ರಹದ ಸರಿಯಾದ ಅಳತೆಯನ್ನು ಮಾಡಿಕೊಂಡು ಬಂದು ಶಂಕರನಿಗೆ ಕೊಟ್ಟರು. ಅದರಂತೆ ಆತ ಕಿರೀಟವನ್ನು ಸಿದ್ಧಪಡಿಸಿ ಕೊಟ್ಟ. ಆದರೆ ಅದನ್ನು ವಿಠ್ಠಲನ ವಿಗ್ರಹಕ್ಕೆ ತೊಡಿಸಿದಾಗ ಅದು ತುಂಬ ಸಡಿಲವಾಗಿ ಸರಿದು ಹಣೆಯ ಮೇಲೆ ಬಂತು.

ಅಳತೆ ತಪ್ಪಾಗಿರಬೇಕೆಂದು ಮತ್ತೊಮ್ಮೆ ಸರಿಯಾಗಿ ಅಳೆದು ಶಂಕರನಿಗೆ ನೀಡಿದರು. ಅದರ ಪ್ರಕಾರ ಮತ್ತೊಂದು ಸುಂದರವಾದ ಕಿರೀಟ ಸಿದ್ಧವಾಯಿತು. ಈ ಬಾರಿ ಅದನ್ನು ತೊಡಿಸುವುದಕ್ಕೆ ಹೋದಾಗ ಅದು ತುಂಬ ಚಿಕ್ಕದಾಗಿ ತಲೆಯ ಮೇಲೆ ಕೂಡ್ರಲೇ ಇಲ್ಲ. ಎಲ್ಲರಿಗೂ ಬಹಳ ಬೇಜಾರಾಯಿತು. 

 `ನೀನೇ ಒಂದು ಸಲ ಬಂದು ಸರಿಯಾದ ಅಳತೆ ತೆಗೆದುಕೋ~ ಎಂದು ಶಂಕರನನ್ನು ಕೇಳಿಕೊಂಡರು. ಬಹಳ ಕಾಡಿದ ಮೇಲೆ ಶಂಕರ ಒಪ್ಪಿಕೊಂಡ. ಅವನದೊಂದು ಶರತ್ತು. ಆತ ವಿಷ್ಣುವಿನ ಮೂರ್ತಿಯನ್ನು ನೋಡಲಾರನಾದ್ದರಿಂದ ಅವನು ಕಣ್ಣುಕಟ್ಟಿಕೊಂಡು ದೇವಸ್ಥಾನದ ಗರ್ಭಗುಡಿ ಸೇರುತ್ತಾನೆ, ಅಲ್ಲಿಯೇ ದಾರದಿಂದಲೋ, ಬೇರೆ ವಿಧಾನದಿಂದಲೋ ಸರಿಯಾದ ಅಳತೆ ತೆಗೆದುಕೊಳ್ಳುತ್ತಾನೆ.

ಅಂತೆಯೇ ಶಂಕರ ಕಣ್ಣುಕಟ್ಟಿಕೊಂಡು ವಿಗ್ರಹದ ಮುಂದೆ ನಿಂತ. ವಿಗ್ರಹದ ತಲೆಯ ಮೇಲೆ ಕೈಯಾಡಿಸಿದ. ಅವನಿಗೆ ಮಿಂಚು ಹೊಡೆದಂತಾಯಿತು. ಅವನ ಕೈ ಶಿವಲಿಂಗದ ಮೇಲೆ ಸರಿದಾಡಿದಂತೆ ಭಾಸವಾಯಿತು. ತಾನು ಮುಟ್ಟಿದ್ದು ಸಾಕ್ಷಾತ್ ಶಿವಲಿಂಗವೇ ಎಂಬುದು ಖಚಿತವಾಯಿತು.

ತಕ್ಷಣ ಕಣ್ಣಿನ ಪಟ್ಟಿ ಬಿಚ್ಚಿ ನೋಡಿದರೆ ಅದು ಪಾಂಡುರಂಗನ ವಿಗ್ರಹವೇ. ಮತ್ತೆ ಕಣ್ಣುಕಟ್ಟಿಕೊಂಡು ಮುಟ್ಟಿದರೆ ಅದು ಶಿವಲಿಂಗವೇ. ಆಗ ಅವನಿಗೆ ಹೊಳೆಯಿತು, ಶಿವ ಬೇರೆ ಅಲ್ಲ, ವಿಷ್ಣು ಬೇರೆ ಅಲ್ಲ. ಕಣ್ಣು ಬಿಟ್ಟು, ಅಳತೆ ತೆಗೆದುಕೊಂಡು ಪ್ರೀತಿಯಿಂದ ಕಿರೀಟ ಮಾಡಿಕೊಟ್ಟ. ಅದು ಅತ್ಯಂತ ಸರಿಯಾಗಿ ಕುಳಿತುಕೊಂಡಿತು.

ಈಗ ನಮ್ಮ ಸಮಾಜದಲ್ಲಿ ಹಾಗೆಯೇ ಆಗಿದೆ. ನಾವೂ ಜಾತಿ, ಲಿಂಗ, ಭಾಷೆ, ದೇಶಗಳು ಎಂಬ ಕಣ್ಣಿನ ಪಟ್ಟಿ ಕಟ್ಟಿಕೊಂಡು ಒದ್ದಾಡುತ್ತಿದ್ದೇವೆ. ನಮ್ಮದೇ ಶ್ರೇಷ್ಠ ಎಂದು ಹೆಮ್ಮೆ ಪಡುವುದರ ಜೊತೆಗೆ ಉಳಿದವರು ಕನಿಷ್ಠ ಎಂದು ಭಾವಿಸುತ್ತೇವೆ, ಜಗತ್ತನ್ನು ಒಡೆದು ತುಂಡು ತುಂಡು ಮಾಡಿದ್ದೇವೆ.

ನಮಗೂ ಆ ಶಂಕರ ಸೋನಾರನಿಗೆ ಆದಂತಹ ದಿವ್ಯದರ್ಶನವಾಗಿ ನಾವೆಲ್ಲರೂ ಒಂದೇ ಎಂಬ ಭಾವನೆ ಬಂದರೆ ನಮ್ಮ ಪ್ರಪಂಚ ಎಷ್ಟು ಸುಂದರವಾಗಿ, ಸಹ್ಯವಾಗಿ ಇರುತ್ತದಲ್ಲವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT