ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀ ಚೈತನ್ಯಕ್ಕೆ ಬರೆದ ಹೊಸ ಭಾಷ್ಯ

Last Updated 23 ಮಾರ್ಚ್ 2016, 9:06 IST
ಅಕ್ಷರ ಗಾತ್ರ

ಭಾರತೀಯ ಲೇಖಕಿಯರಲ್ಲೇ ಕಮಲಾದಾಸ್‌ ಅವರಷ್ಟು ವಿವಾದಿತರಾದ, ಜನಪ್ರಿಯರಾದ ಲೇಖಕಿ ಮತ್ತೊಬ್ಬರಿಲ್ಲವೇನೋ. ತನ್ನ ವ್ಯಕ್ತಿತ್ವ ಬದುಕಿನ ಆಸ್ಫೋಟಕ ಗುಣ ಮತ್ತು ಶಕ್ತಿಯಿಂದಾಗಿ ಮಹಿಳೆಯರ ಬರವಣಿಗೆಗೆ ಅಗತ್ಯವಾಗಿ ಬೇಕಾಗಿದ್ದ ಚರ್ಚಾ ಆವರಣವನ್ನು ತನಗೆ ಗೊತ್ತಿಲ್ಲದೆಯೇ ರೂಪಿಸಿದವರು ಕಮಲಾದಾಸ್.

ಇದೊಂದು ವೈಚಿತ್ರ್ಯ ಎಂದರೂ ನಡೆಯುತ್ತದೆ. ಅನೇಕ ಬಾರಿ ಮಹಿಳೆಯರನ್ನು ಕುರಿತು ಚರ್ಚಿಸುವ ತಮ್ಮ ಪರಿಯಲ್ಲಿಯೇ ಆ ಮಹಿಳೆಯರ ಪ್ರತಿಭೆ, ಸಾಮರ್ಥ್ಯ ಎಲ್ಲವನ್ನೂ ನಾಶ ಮಾಡುವುದರಲ್ಲಿ ಪುರುಷರು ಪಡೆಯುವ ಯಶಸ್ಸು ಸಣ್ಣದಲ್ಲ. ಆದರೆ ಕಮಲಾದಾಸ್ ವಿಷಯದಲ್ಲಿ ಮಾತ್ರ ಅದು ತಿರುವುಮುರುವಾಯಿತು. ಚರ್ಚೆಗಳು ವಿಕಾರವಾದಷ್ಟೂ ಲೇಖಕಿ ಕಮಲಾದಾಸ್ ಹೆಚ್ಚು ಹೆಚ್ಚು ಗಟ್ಟಿಯಾಗುತ್ತಾ ಹೋದರು ಮತ್ತು ಲೇಖಕಿಯಾಗಿ ಅವರ ವಿಶ್ವಾಸಾರ್ಹತೆ ಹೆಚ್ಚುತ್ತಲೇ ಹೋಯಿತು. ಅವರ ಆತ್ಮಚರಿತ್ರೆ ‘My Story’ ಕೃತಿಯಂತೂ ಬಿರುಗಾಳಿಯನ್ನೇ ಎಬ್ಬಿಸಿತು. ಹೆಣ್ಣಿನ ಬರಹಗಳಿಗೆ ಮಾತ್ರ ಬಳಸಲಾಗುವ ಪರಿಕಲ್ಪನೆಯೊಂದಿದೆ.

ಅದು Bold ಎನ್ನುವ ಪರಿಕಲ್ಪನೆ. ಬಾಯಿ , ಭಾಷೆ ಯಾವುದೂ ಇರಬಾರದ ಹೆಣ್ಣುಮಕ್ಕಳು ತುಸು ಉತ್ಕಟತೆಯಲ್ಲಿ, ಬಿಡುಬೀಸಾಗಿ ಬರೆದುಬಿಟ್ಟರೆ ಅದು Bold ಎನ್ನುವ (ಸಿನಿಮಾಗಳ ‘ಎ’ ಸರ್ಟಿಫಿಕೇಟಿನ ಹಾಗೆ) ಹಣೆಪಟ್ಟಿಯಲ್ಲಿ ರಾರಾಜಿಸುತ್ತದೆ. ಪ್ರತಿಭಾರ ಆತ್ಮಚರಿತೆ ‘ಅನುದಿನದ ಅಂತರಗಂಗೆ’ ಪ್ರಕಟವಾದಾದ ಲೇಖಕರೊಬ್ಬರು ‘ಏನು ಮೇಡಂ ಬಹಳ ಬೋಲ್ಡ್ ಆಗಿದೆಯಂತೆ, ವ್ಯಕ್ತಿಗಳು ಅವರ ನಿಜ ಸ್ವರೂಪದಲ್ಲೇ ಅದರಲ್ಲಿ ಬಂದಿದ್ದಾರಂತೆ, ಓದುವುದಕ್ಕೇ ಭಯವಾಗುತ್ತೆ’ ಅಂದರು. ‘ಜೀವನದಲ್ಲಿ ಒಮ್ಮೆಯಾದರೂ ಭಯವಾಗಬೇಡವೇನ್ರಿ ನಿಮಗೆ’ ಅಂದರೆ, ‘ಅದೂ ಸರಿ’ ಅಂದರು!. ಬರವಣಿಗೆ ಹೆಣ್ಣಿಗೆ ಬೇರೆ ಗಂಡಿಗೆ ಬೇರೆ ಎನ್ನುವುದಕ್ಕೆ ಇದೂ ಒಂದು ಗಟ್ಟಿ ಪುರಾವೆ.
If i learn to express my experience as a woman in its entirity, in its physicality, in its complexity without self censorship, without employing externally imposed catagories and evaluation , and with the conviction that my experience is valid, coherent and deserves attention, i will be speaking a new language
–Adrienne Rich

ಹೆಣ್ಣಿನ ಭಾಷೆ ಬೇರೆ, ಅದನ್ನು ಓದಬೇಕಾದ ಕ್ರಮವೂ ಬೇರೆ ಎಂದು ಪ್ರತಿಪಾದಿಸುವುದು ಈ ಹಿನ್ನೆಲೆಯಲ್ಲಿ. ದತ್ತ ಭಾಷೆಯನ್ನೇ ಮುರಿದು ಕಟ್ಟುವ ಮಹತ್ವದ ಕೆಲಸ ಇದು ಲೇಖಕಿಯರಿಗೆ. ಇದು ಎಷ್ಟು ಸೂಕ್ಷ್ಮವಾದ ಆದರೆ ಮೂಲಭೂತವಾದ ಸಂಗತಿ ಎನ್ನುವುದಕ್ಕೆ ಒಂದು ವಿಷಯವನ್ನು ಇಲ್ಲಿ ಚರ್ಚಿಸಬಹುದು. ಭಾಷೆಯ ರೂಪಾಂತರ ಮಾಡದೆಯೇ ಅರ್ಥಾಂತರ ಮಾಡುವ ಸವಾಲನ್ನು ಲೇಖಕಿಯರು ನಿರಂತರವಾಗಿ ಎದುರಿಸುತ್ತಾ ಹೋಗಬೇಕಾಗುತ್ತದೆ.

ಅರ್ಥಾಂತರಗಳು, ಅರ್ಥಪರಂಪರೆಗಳು, ಅರ್ಥ ಸೃಷ್ಟಿಯ ಪ್ರಯೋಗಗಳು– ಕಲೆಯ ಮೂಲ ಸವಾಲುಗಳು ಎನ್ನುವುದನ್ನು ಒಪ್ಪಿಯೂ ಮಹಿಳೆ ಎದುರಿಸುವ ಸವಾಲು ಇದಕ್ಕಿಂತ ಆಳವಾದದ್ದೂ, ಸೃಷ್ಟಿಶೀಲತೆಯ ಮೋಹಕತೆಯಷ್ಟೇ ತನ್ನ ಅಸ್ತಿತ್ವ ಮತ್ತು ಅಸ್ಮಿತೆಯ ರಚನೆಯ ರಾಜಕೀಯ ಪ್ರಶ್ನೆಯೂ ಆಗಿರುತ್ತವೆ. ಈ ಅಂಶವನ್ನು ಮುನ್ನೆಲೆಗೆ ತರುವುದೇ ಹೆಣ್ಣಿನ ಬರವಣಿಗೆಯನ್ನು ಕಲೆಯ ಚರ್ಚೆಯ ಆವರಣದೊಳಗಿಡುತ್ತಲೇ ಭಿನ್ನವಾಗಿಸುವ, ಆ ಮೂಲಕ ಕಲಾಮೀಮಾಂಸೆಯ ಸ್ವರೂಪ ಮತ್ತು ಕಾರ್ಯಮಾದರಿಯನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯ ಈ ಪ್ರಯತ್ನದಲ್ಲಿ ಸ್ತ್ರೀವಾದಿ ವಿದ್ವಾಂಸರು ತೊಡಗಿಕೊಂಡಿದ್ದಾರೆ.

ಯಾವ ಬರವಣಿಗೆಯ ಮಾದರಿಯನ್ನು ‘ಬೋಲ್ಡ್’ ಎಂದು ಕರೆಯಲಾಗುತ್ತದೆಯೋ ಅದನ್ನು ಹೆಣ್ಣಿನ ಅಭಿವ್ಯಕ್ತಿಯ ಅನನ್ಯ ಮಾದರಿಯೆಂದು, ಕಲಾಭಿವ್ಯಕ್ತಿಯ ಸಹಜ ವಿನ್ಯಾಸಗಳಲ್ಲಿ ಒಂದು ಎಂದು ಗುರುತಿಸುವುದು ಇಂಥ ಪ್ರಯತ್ನದ ಗುರಿ. ಬರವಣಿಗೆ ಹೆಣ್ಣಿಗೆ ಬೇರೆ ಗಂಡಿಗೆ ಬೇರೆ ಎನ್ನುವುದಕ್ಕೆ ಇದೂ ಒಂದು ಗಟ್ಟಿ ಪುರಾವೆ.

ಹೆಣ್ಣಿನ ಅಭಿವ್ಯಕ್ತಿಗೂ ವಿಧಿಸಲಾದ ನಿರ್ಬಂಧಗಳು ಅವಳ ವ್ಯಕ್ತಿತ್ವಕ್ಕೆ ವಿಧಿಸಲಾದ ನಿರ್ಬಂಧಗಳ ಮುಂದುವರಿಕೆಯೇ ಆಗಿರುತ್ತದೆ. ರೂಪಕಗಳು ಪುರುಷ ಕವಿಗಳ ಪತಾಕೆಗಳಾದರೆ ಹೆಣ್ಣಿಗೆ ಅವು ಅಡಗುತಾಣಗಳಾಗುವುದು ಇದೇ ಕಾರಣಕ್ಕೆ. ಬದುಕಿನ ದುರ್ದಮ್ಯ ಸಂಗತಿಗಳ ಬಗ್ಗೆ ಲೇಖಕರು ಬರೆದಾಗ ಅದು ಪ್ರಾಮಾಣಿಕತೆಯ ಪ್ರತಿರೂಪವಾದರೆ, ಹೆಣ್ಣು ಬರೆದಾಗ ಅದು ಈ ತನಕ ರೂಢಿಯಲ್ಲಿಲ್ಲದ, ಅಪೇಕ್ಷಿತವಲ್ಲದ ಬರವಣಿಗೆಯ ಮಾದರಿ ಎನ್ನುವುದನ್ನು ಸೂಚಿಸಲೆಂದೇ ‘ಬೋಲ್ಡ್’ ಎನ್ನಲಾಗುತ್ತದೆ.

ಹಾಗೆ ಅದನ್ನು ವರ್ಗೀಕರಿಸುವ ಮೂಲಕವೇ ಹೆಣ್ಣಿನಲ್ಲಿ ಒಳಗಿನಿಂದ ಒಂದು ಬಗೆಯ ಅಧೀರತೆಯನ್ನು, ಅನುಮಾನಗಳನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗಿಬಿಡುವುದೂ ಒಂದು ಕಾರ್ಯಮಾದರಿಯೇ ಎನ್ನುವುದನ್ನು ನಾವು ಗಮನಿಸಬೇಕು. ಲೇಖಕಿಯರ ಮಟ್ಟಿಗಂತೂ ಇದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಹುದು. ತಮ್ಮ ಬರವಣಿಗೆಯ ಆರಂಭದ ಘಟ್ಟದಲ್ಲಿ ಗಟ್ಟಿಗಿತ್ತಿಯರಂತೆ ಕಂಡವರು ಉತ್ತರಾರ್ಧದಲ್ಲಿ ಊಹಾತೀತ ರಾಜಿಗಳ ಕಡೆಗೆ ಮುಖ ಮಾಡುವುದನ್ನೂ ನಾವು ನೋಡುತ್ತಲೆ ಇದ್ದೇವೆ. ಇದಕ್ಕೆ ಜಗ್ಗದೇ ಉಳಿದ ಲೇಖಕಿಯರು ನಮ್ಮ ಗೌರವಕ್ಕೂ ಪ್ರೀತಿಗೂ ಸಕಾರಣವಾಗಿ ಪಾತ್ರರಾಗುತ್ತಾರೆ.

ಕಮಲಾದಾಸ್ ನಮ್ಮ ಮುಖ್ಯ ಲೇಖಕಿಯಾಗಿರುವುದು ಆರಂಭದಿಂದ ಕೊನೆಯವರೆಗೂ ಗಟ್ಟಿಗಿತ್ತಿಯಾಗಿ ಉಳಿದುಕೊಂಡ ಕಾರಣಕ್ಕೆ. ಹೆಣ್ಣನ್ನು ಅವಳ ಒಳಲೋಕದ ಸಂಕೀರ್ಣತೆಯಲ್ಲಿ, ನಿಗೂಢ ಆಯಾಮಗಳಲ್ಲಿ, ತವಕ ತಲ್ಲಣಗಳಲ್ಲಿ ಚಿತ್ರಿಸಿದವರು ಕಮಲಾ. ಉದ್ವಿಗ್ನತೆಯ ಅಸ್ಪಷ್ಟತೆಯಿಲ್ಲದೆ, ವ್ಯಗ್ರತೆಯಿಲ್ಲದೆ ಇವುಗಳನ್ನೆಲ್ಲ ಗಾಢವಾಗಿ ಮಂಡಿಸುವುದೇ ಅವರ ವಿಶಿಷ್ಟತೆ. ಎಷ್ಟೋ ಕಾಲದಿಂದ ಅಕ್ಷರಗಳಿಗಾಗಿ ಕಾದು ಕುಳಿತಂತೆ ಅವರ ಕತೆಗಳ ಧಾಟಿಯಿದೆ. ಈ ತನಕ ತುಟಿಕಚ್ಚಿ ತಡೆಹಿಡಿದದ್ದೆಲ್ಲ ಭೋರ್ಗರೆದು ಹರಿದಂತೆ ಇವರ ಕತೆಗಳ ಹೆಣ್ಣುಗಳು ತಮ್ಮ್ಮನ್ನು ತಾವು ನೋಡಿಕೊಳ್ಳುತ್ತಾ, ತೆರೆದುಕೊಳ್ಳುತ್ತಾ ಸ್ವಗತದಲ್ಲೂ ದ್ವಿಪಾತ್ರಾಭಿನಯದಲ್ಲೂ ಮಾತಾಡಿ ಕೊಳ್ಳುತ್ತಾ ಹೋಗುತ್ತಾರೆ.

ತನ್ನ ಈ ಸ್ಥಿತಿ ಅವಸ್ಥೆಗೆ ಕಾರಣಗಳನ್ನು ಹುಡುಕುವುದರಲ್ಲಿ ಇವರು ಆಸಕ್ತರಲ್ಲ ಎನ್ನುವುದು ಇವರ ಕತೆಗಳ ಮೂಲಭೂತವಾದ ವೈಶಿಷ್ಷ್ಟ್ಯತೆ. ಇದರಿಂದ ಹೊರ ಬರುವ ದಾರಿಗಳನ್ನೇ ಅವರು ಸತತವಾಗಿ ಧ್ಯಾನಿಸುತ್ತಾರೆ. ಇವರ ಕತೆಗಳ ಇನ್ನೊಂದು ಲಕ್ಷಣವೆಂದರೆ, ಇರುವುದನ್ನು ಮೀರಿಕೊಳ್ಳುತ್ತಲೇ ವರ್ತಮಾನ ವನ್ನು ದಾಟಿಕೊಳ್ಳುವ ತಮ್ಮ ಪ್ರಯತ್ನದ ಮೂಲಕವೇ ಮುಂದಿನದ ಕ್ಕಾಗಿ ತವಕಿಸುವುದು. ಇವರ ಕತೆಗಳ ಮೂಲಾಶಯವನ್ನು ಮುನ್ನೋಟದ ಗ್ರಹಿಕೆ ಎಂದು ಕರೆಯಬಹುದು.

ಕಮಲಾದಾಸ್‌ ಅವರ ಕತೆಗಳಲ್ಲಿ, ಅವರ ನಾಯಕಿಯರಲ್ಲಿ ಯಾರೋ ಒಬ್ಬರನ್ನು ಆರಿಸಿಕೊಳ್ಳುವುದು ನಿಜಕ್ಕೂ ಕಷ್ಟದ ಆಯ್ಕೆ. ಕಣ್ಣೆದುರಿಗೆ ಹಾಯುವ ಅನೇಕ ಹೆಣ್ಣುಗಳಲ್ಲಿ ‘ಪಾತಿವ್ರತ್ಯ’ ಕತೆಯ ಇಬ್ಬರು ಹೆಣ್ಣುಗಳನ್ನು ಮಾತನಾಡಿಸುವ ಆಸೆಯಾಗುತ್ತಿದೆ.
ವಿದೇಶಕ್ಕೆ ಶಿಕ್ಷಣಕ್ಕೆ ಹೋದ ದಿಲೀಪನಿಗೆ ಅಲ್ಲಿ ಸ್ನೇಹಿತೆಯಾದವಳು ಜಿತ್. ಎಲ್ಲ ಮಹಾನುಭಾವರಂತೆ ಅವನೂ ಅವಳನ್ನು ತತ್ಕಾಲದ ಸಖಿಯ ಹಾಗೇ ನಿಭಾಯಿಸಲು ಪ್ರಯತ್ನಿಸಿ ಸೋತು, ನಿರುಪಾಯನಾಗಿ ಅವಳನ್ನು ತನ್ನ ಜೊತೆ ಭಾರತಕ್ಕೆ ಕರೆತರುತ್ತಾನೆ. ಸ್ಪಷ್ಟವಾಗಿ ಅವಳಿಗೆ ಹೇಳಿಯೂ ಹೇಳುತ್ತಾನೆ, ‘ಅಲ್ಲಿ ನಿನಗೆ ನಾನು ಕೊಡಲು ಸಾಧ್ಯವಾಗುವುದು ಅಪಮಾನ, ಮಾನಹಾನಿಗಳನ್ನು ಮಾತ್ರ’ವೆಂದು.

ಇದು ಯಾವುದಕ್ಕೂ ಹಿಂಜರಿಯದ ಜಿತ್ ಭಾರತಕ್ಕೆ ಬಂದು ತನ್ನ ಬದುಕನ್ನು ಆರಂಭಿಸಿದ ಮೇಲೆ ಅವಳ ಅನುಭವಕ್ಕೆ ಬರುವ ಸತ್ಯವೆಂದರೆ, ತಾನು ‘ಅರ್ಧ ಹೆಣ್ಣು’ ಎನ್ನುವುದು. ಹಿಂದೆ ಹೋಗಲಾರದ, ಮುಂದೆ ಸಾಗಲಾರದ ಇಬ್ಬಂದಿತನದಲ್ಲಿ ಅವಳ ದೇಹ, ಮನಸ್ಸಿನ ಆರೋಗ್ಯವೆಲ್ಲ ಕೆಟ್ಟು, ಅವರಿಬ್ಬರ ನಡುವೆ ದಿನನಿತ್ಯದ ರಸಿಕಸಿ ಆರಂಭವಾಗುತ್ತದೆ. ಪರಸ್ಪರರು ಪರಸ್ಪರರ ಬದುಕನ್ನು ಹಾಳುಮಾಡಿದ ದೋಷಾರೋಪಣೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ದಿಕ್ಕೆಟ್ಟ ಸ್ಥಿತಿಯಲ್ಲಿ, ಕೆಲವು ದಿನ ಇಬ್ಬರೂ ಭೇಟಿ ಮಾಡುವುದೇ ಬೇಡ ಎನ್ನುವ ಅನಿವಾರ್ಯ ತೀರ್ಮಾನಕ್ಕೆ ಬರುತ್ತಾರೆ. ಅವನು ಕೆಲವು ದಿನಗಳ ಮಟ್ಟಿಗೆ ಡಾರ್ಜಿಲಿಂಗ್‌ಗೆ ಹೋಗುತ್ತಾನೆ.

ಇತ್ತ ಅವನ ಹೆಂಡತಿಯದೂ ಇದೇ ಸ್ಥಿತಿ. ಅವಳಿಗೆ ತನ್ನ ಬದುಕನ್ನು ಹಾಳು ಮಾಡಿದ ಈ ವಿದೇಶೀ ಮಹಿಳೆಯನ್ನು ನೋಡುವ, ಅವಳೊಂದಿಗೆ ಜಟಾಪಟಿ ನಡೆಸುವ ಆಸೆ ದಿನದಿಂದ ದಿನಕ್ಕೆ ತೀವ್ರವಾಗುತ್ತಾ ಹೋಗುತ್ತದೆ. ಡ್ರೈವರನಿಗೆ ಮತ್ತೆ ಮತ್ತೆ ಕೇಳಿದರೂ ಆ ಸ್ವಾಮಿಭಕ್ತ, ಯಜಮಾನರಿಗೆ ಹಾಗೆ ಇನ್ನೊಂದು ಮನೆಯಿರುವ ಸಂಗತಿಯೇ ತನಗೆ ಗೊತ್ತಿಲ್ಲವೆಂದು ಹೇಳುತ್ತಲೇ ಇರುತ್ತಾನೆ. ಕೊನೆಗೊಂದು ದಿನ ಆ ಅವಕಾಶ ಅವಳಿಗೆ ಒದಗಿ ಬರುತ್ತದೆ, ಹಲವು ವರ್ಷಗಳು ಕಳೆದ ಮೇಲೆ. ಗಂಡ ಡಾರ್ಜಿಲಿಂಗ್‌ಗೆ ಹೋದ ಸಂದರ್ಭದಲ್ಲಿ ತನ್ನ ಗಂಡನ ಈ ಗೆಳತಿಯನ್ನು ಭೇಟಿ ಮಾಡಲೇಬೇಕೆಂದು ಅವಳು ತೀರ್ಮಾನಿಸುತ್ತಾಳೆ. ತನ್ನಲ್ಲಿರುವ ಒಳ್ಳೆಯ ರೇಷ್ಮೆ ಸೀರೆಯುಟ್ಟು, ಅಜ್ಜಿ ಕೊಟ್ಟ ಭಾರವಾದ ಬಂಗಾರದ ಸರ ತೊಟ್ಟು, ಕೈವಸ್ತ್ರದಲ್ಲಿ ನೂರು ರೂಪಾಯಿಯ ನೋಟು ಸುತ್ತಿಟ್ಟುಕೊಂಡು ಅವಳು ಹೊರಡುತ್ತಾಳೆ. ಒರಿಯಾದ ಜಮೀನ್ದಾರನ ಮಗಳಾದ, ಇಂಗ್ಲಿಷ್ ಅಷ್ಟು ಸರಿಯಾಗಿ ಬಾರದ ತಾನು ಅವಳೊಂದಿಗೆ ಹೇಗೆ, ಏನು ಮಾತನಾಡುವುದು ಎನ್ನುವ ಸಂದಿಗ್ಧದಲ್ಲೇ ಅವಳ ಮನೆ ತಲುಪುತ್ತಾಳೆ.

ಇದೊಂದು ಅಪೂರ್ವ ಭೇಟಿ.
ಅವಳ ಭೇಟಿಯಲ್ಲಿ ತಾನು ಏನು ಮಾಡಬೇಕು ಎನ್ನುವುದರ ಬಗ್ಗೆ ಯಾವುದೇ ಪೂರ್ವನಿರ್ಧಾರಗಳೇ ಇಲ್ಲದೆ ಅವಳು ಜಿತ್‌ಳ ಮನೆಗೆ ಬರುತ್ತಾಳೆ. ಜಿತ್‌ಳ ಆಳು ತನ್ನ ಒಡತಿಗೆ ದಿಲೀಪ್ ಸರ್ಕಾರರ ಹೆಂಡತಿ ಬಂದ ವಿಷಯ ತಿಳಿಯುತ್ತಲೇ ಜಿತ್‌ಳಿಗೆ ಇದೂ ದಿಲೀಪನದೇ ಕುತಂತ್ರವಿರಬಹುದೆಂದು ಅನಿಸಿಬಿಡುತ್ತದೆ.

ಯಾರ ಅನುಮತಿ, ಸ್ವಾಗತದ ಅಗತ್ಯವೂ ಇಲ್ಲವೆಂದು ಭಾವಿಸಿದ ಈ ಹೆಣ್ಣುಮಗಳು ಸೀದಾ ಜಿತ್‌ಳ ಕೋಣೆಗೆ ಹೋದದ್ದೇ ಗಲಿಬಿಲಿಗೆ ಒಳಗಾಗುತ್ತಾಳೆ. ತನ್ನ ಬದುಕನ್ನು ಹಾಳುಗೆಡವಿದ ಧೂರ್ತ ಹೆಂಗಸನ್ನು ಭೇಟಿ ಮಾಡಲು ಅವಳು ಬಂದದ್ದು. ಇಲ್ಲಿರುವುದೋ ಮಂಚದಲ್ಲಿ ಅನಾರೋಗ್ಯದಲ್ಲಿ ಅಸಹಾಯಕತೆಯಲ್ಲಿ ಬಿಳಿಚಿಹೋಗಿರುವ ಹೆಣ್ಣು. ಹೆಣ್ಣಿಗೆ ಅತ್ಯಂತ ಸಹಜವಾದ, ಅವಳ ವ್ಯಕ್ತಿತ್ವದ ಕೇಂದ್ರವೇ ಆಗಿರುವ ‘ಕಾಳಜಿ’ಯಲ್ಲಿ ಇವಳು ಅವಳನ್ನು ಕೇಳುತ್ತಾಳೆ, ‘ಏನಾಗಿದೆ ನಿಮಗೆ?’. ಇವಳು ಕೇಳುತ್ತಿರುವುದು ಬಂಗಾಳಿಯಲ್ಲಿ, ಅವಳಿಗೆ ತಿಳಿಯದ ಬಂಗಾಳಿಯಲ್ಲಿ. ಸ್ವಲ್ಪ ಸಮಯ ಅವರಿಬ್ಬರೂ ಪರಸ್ಪರರನ್ನು ಆತಂಕ ಮತ್ತು ಕೌತುಕದಲ್ಲಿ ದಿಟ್ಟಿಸುತ್ತಾರೆ. ಭೇಟಿಗೆ ಹೋದವಳು ಸ್ಥೂಲದೇಹಿ ವೃದ್ಧೆ, ಎದುರಾಗುತ್ತಿರುವವಳು ಒಬ್ಬ ರೋಗಿ.

ಹೆಂಡತಿ ಹೇಳುತ್ತಾಳೆ, ‘ನೋಡು ನಾನು ನಿನ್ನನ್ನು ಬೈಯಲು ಬಂದದ್ದಲ್ಲ, ಹೆದರಬೇಡಿ, ಒಮ್ಮೆ ನಿಮ್ಮನ್ನು ಭೇಟಿ ಮಾಡಬೇಕೆನಿಸಿತು, ಬಂದೆ... ಅಷ್ಟೆ’. ಹೆಣ್ಣಿಗೆ ಮಾತ್ರ ಅರ್ಥವಾಗುವ ಭಾಷೆಯೊಂದಿದೆ ಎನ್ನುವುದರ ಸಾಕ್ಷಿಯಂತೆ ಈ ಮಾತುಕತೆಯಿದೆ. ಹೆಂಡತಿ ಜಿತ್‌ಳ ಕೈಯನ್ನು ಎತ್ತಿ ತನ್ನ ಮಡಿಲಿನಲ್ಲಿ ಇರಿಸಿಕೊಳ್ಳುತ್ತಾಳೆ. ಈ ಸ್ಪರ್ಶಕ್ಕೆ, ಪ್ರೀತಿ ವಾತ್ಸಲ್ಯಕ್ಕೆ ಕರಗಿದ ಜಿತ್ ಬಿಕ್ಕಿ ಬಿಕ್ಕಿ ಅಳುತ್ತಾಳೆ. ಹೆಂಡತಿ ಯೋಚಿಸುತ್ತಾಳೆ, ‘ನನಗೆ ಇಂಗ್ಲಿಷ್ ಗೊತ್ತಿಲ್ಲ, ಈ ಬಡಪಾಯಿಗೆ ಹೇಗೆ ಹೇಳಿ ಅರ್ಥ ಮಾಡಿಸುವುದು?’.

ಅವಳು ಅರ್ಥ ಮಾಡಿಸಬೇಕಾದ್ದು ಏನು? ಮೆಲುಧ್ವನಿಯಲ್ಲಿ ಅವಳು ಹೇಳುತ್ತಾಳೆ, ‘ಇಲ್ಲಿ ಈ ನಾಯಿ ಮತ್ತು ಗಿಣಿ ಮರಿಗಳೊಂದಿಗೆ ಎಷ್ಟು ಕಾಲ ಬದುಕುವೆ? ನನಗೂ ಉಪಯೋಗವಿಲ್ಲದ ಆ ನಮ್ಮ ಗಂಡನೆಂಬ ಪ್ರಾಣಿ ಇಷ್ಟೊಂದು ದಡ್ಡನಾಗಿದ್ದಾನಲ್ಲ... ನನಗೆ ಇದ್ಯಾವುದೂ ಗೊತ್ತಿರಲಿಲ್ಲ...’.
ಈ ಮಾತಿನೊಂದಿಗೆ ಅವರ ಭೇಟಿ ಮುಕ್ತಾಯವಾಗುತ್ತದೆ. ಡ್ರೈವರ್ ಕೇಳುತ್ತಾನೆ, ‘ಆ ವಿದೇಶಿ ಮಹಿಳೆಗೆ ವಾಪಸ್ ಹೋಗಲು ನೀವು ಹೇಳಬೇಕಿತ್ತು, ಇದಕ್ಕಿಂತ ಒಳ್ಳೆಯ ಅವಕಾಶ ಮತ್ತೆ ತಮಗೆ ಸಿಗಲಾರದು’. ಹೆಂಡತಿ ಹೇಳುತ್ತಾಳೆ, ‘ಮೈಮೇಲೆ ಎಚ್ಚರ ಇಟ್ಟುಕೊಂಡು, ಬಾಯಿಮುಚ್ಚಿಕೊಂಡು ಗಾಡಿ ಓಡಿಸು’.

ಇಬ್ಬರು ಹೆಣ್ಣುಗಳು ತಮ್ಮನ್ನು ತಾವು ಅಪೂರ್ಣ, ಅರ್ಧ ಹೆಣ್ಣು ಅಂದುಕೊಂಡವರು ಒಬ್ಬರನ್ನೊಬ್ಬರು ಭೇಟಿಯಾದದ್ದೇ ತಮ್ಮ ಅಪೂರ್ಣತೆಯೆಲ್ಲ ಹೋಗಿ ತಾವು ಸಂಪೂರ್ಣವಾದಂತೆ ಭಾವಿಸುತ್ತಾರೇನೋ ಎನ್ನುವ ಧ್ವನಿ ಈ ಕತೆಯಲ್ಲಿದೆ. ಸ್ಪರ್ಧಿಗಳು ಎಂದುಕೊಂಡವರು ಸಮಾನದುಃಖಿಗಳು ಎನ್ನುವ ಅರಿವಿನಲ್ಲಿ ಒಂದಾಗುತ್ತಾರೆ. ಆದರೆ ಈ ಅರಿವಿಗೆ ಇನ್ನೊಂದು ಮುಖವೂ ಇದೆ. ಯಾವ ಗಂಡನಿಗಾಗಿ ತಾವಿಬ್ಬರೂ ಬದುಕು, ಪ್ರಾಣವನ್ನೆಲ್ಲ ಮೀಸಲಾಗಿಟ್ಟಿದ್ದೇವೋ ಅವನು ಅದಕ್ಕೆ ಅಪಾತ್ರನೇನೋ ಎನ್ನುವ ಅರಿವೇ ಇವರಿಗೆ ಬಿಡುಗಡೆಯ ಭಾವವನ್ನು ಹುಟ್ಟಿಸಿ, ಮನದ ದುಃಖ, ಭಾರವನ್ನೆಲ್ಲ ಕರಗಿಸಿ ಹಗುರಾಗಿಸುತ್ತದೆ. Women Connect ಎನ್ನುವುದು ನಿಜವಾಗುವುದು ಇಂಥ ಅಮೃತ ಮುಹೂರ್ತಗಳಲ್ಲಿ. ಗಂಡಿನ ಮತ್ತು ವ್ಯವಸ್ಥೆಯ ದೌರ್ಜನ್ಯವನ್ನು ಹೆಣ್ಣು ಮೆಟ್ಟಿ ನಿಲ್ಲುವುದು ತನ್ನ ಆತ್ಮ ಚೈತನ್ಯದಲ್ಲಿ.

ಕೊನೆಯಿಲ್ಲದ ಗೋಳಿನ ಕಥನವಾಗಬಹುದಾದ್ದನ್ನು, ದುರಂತದ ಸರಮಾಲೆಯಾಗಬಹುದಾದದ್ದನ್ನು ಕಮಲಾದಾಸ್ ಸ್ತ್ರೀಚೈತನ್ಯದ ಕಥನವಾಗಿಸುವ ಪರಿ ಅದ್ಭುತವಾಗಿದೆ. ತಮ್ಮ ಭಾವುಕತೆ, ಸಂಬಂಧವನ್ನು ಕುರಿತ ಬದ್ಧತೆಗೆ ಕವಡೆಯ ಕಿಮ್ಮತ್ತೂ ಇಲ್ಲದ, ಅದಕ್ಕೆ ಸ್ವತಃ ತಾವೇ ಜವಾಬ್ದಾರರೂ ಆಗಿರುವ ಆತ್ಮವಿಮರ್ಶೆಯ ಎಚ್ಚರವನ್ನು ಉಳಿಸಿಕೊಂಡ ಈ ಇಬ್ಬರೂ ಮಹಿಳೆಯರು ಬದುಕನ್ನು ಅದರ ವಾಸ್ತವದ ಕಹಿಯಲ್ಲಿ ಆದರೆ ಪಾಪಪ್ರಜ್ಞೆ ಇಲ್ಲದ ಧೀರತೆಯಲ್ಲಿ ಎದುರಿಸುವ ಮತ್ತು ಒಪ್ಪಿಕೊಳ್ಳುವ ತೀರ್ಮಾನಕ್ಕೆ ಬರುವುದು ಹೆಣ್ಣಿನ ವ್ಯಕ್ತಿತ್ವಕ್ಕೆ ಬರೆದ ಹೊಸ ಭಾಷ್ಯದಂತೆ ಕಾಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT