ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವ ಔಷಧದ ಅಪಾಯಗಳು...

Last Updated 21 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸುಮಾರು ಶೇ 33 ಸ್ನಾತಕೋತ್ತರ ಪದವಿ ಸೀಟುಗಳು ಸೇವೆಯಲ್ಲಿರುವ ವಿದ್ಯಾರ್ಥಿಗಳಿಗೆ ಮೀಸಲಾಗಿರುತ್ತವೆ. ಅಂದರೆ ಆ ವರ್ಷಗಳಲ್ಲಿ ಸರ್ಕಾರಿ ಸೇವೆಯಲ್ಲಿ ನಿರ್ದಿಷ್ಟ ಅವಧಿವರೆಗೆ ಸೇವೆ ಸಲ್ಲಿಸಿರುವವರಿಗೆ ಈ ಸೀಟುಗಳು ಮೀಸಲು. ಅವರೂ ಪ್ರವೇಶ ಪರೀಕ್ಷೆ ತೆಗೆದುಕೊಂಡು ಅರ್ಹತೆ ಗಿಟ್ಟಿಸಿಕೊಳ್ಳಬೇಕು. ಅವರಿಗಾಗಿ ಪ್ರತ್ಯೇಕ ಆದ್ಯತಾ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಹೀಗೆ ಸೇವೆಯಲ್ಲಿದ್ದ ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲಿ ಡಾ. ದೇವ್‌ ಒಬ್ಬರು.

ಮೊದಲ ಪ್ರವೇಶ ಪರೀಕ್ಷೆಯಲ್ಲಿ ಅವರು ಅರ್ಹತೆ ಗಳಿಸಿರಲಿಲ್ಲ. ಸೀಟು ಪಡೆದಾಗ ಅವರಿಗೆ 45 ವರ್ಷ. ನನಗೆ ನೆನಪಿದೆ, ತುಂಬಾ ಪ್ರಾಮಾಣಿಕರಾಗಿದ್ದ ಅವರು. ಶಿಶುವೈದ್ಯ ವಿಭಾಗದಲ್ಲಿ ಎಂ.ಡಿ. ಪದವಿ ಪಡೆದು, ಸಮುದಾಯ ಸೇವೆಯ ವಾಗ್ದಾನ ಮಾಡಿದ್ದರು. ದೀರ್ಘಕಾಲದಿಂದ ಅವರೊಂದಿಗೆ ಮಾತನಾಡಲು ನನಗೆ ಅವಕಾಶ ಆಗಿರಲಿಲ್ಲ. ಒಂದು ದಿನ ಕರೆ ಮಾಡಿದ ಅವರು– ‘ಮೇಡಂ, ನಾನು ನಿರಂತರ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದೇನೆ’ ಎಂದರು. ನನಗೆ ತಿಳಿದಂತೆ ಅವರು ಯಾವುದೇ ಕಾಯಿಲೆಗೆ ತುತ್ತಾಗದ ಆರೋಗ್ಯವಂತ ವ್ಯಕ್ತಿಯಾಗಿದ್ದರು. ‘ಒಮ್ಮೆ ಜ್ವರಕ್ಕೆಂದು ಒಂದು ಡೋಸ್‌ ಪ್ಯಾರಾಸೆಟಮಾಲ್‌ ತೆಗೆದುಕೊಂಡಿದ್ದಷ್ಟೇ. ಈಗ ಮೂತ್ರಪಿಂಡ ವೈಫಲ್ಯದಿಂದಾಗಿ ವಾರದಲ್ಲಿ ಮೂರುಬಾರಿ ಡಯಾಲಿಸಿಸ್‌ ಮಾಡಿಕೊಳ್ಳುತ್ತಿದ್ದೇನೆ’ ಎಂದು ವಿಷಾದದಿಂದ ಹೇಳಿದರು.

ಹಿಮಾಲಯದ ಚಾರಣಗಿತ್ತಿ 60ರ ಹರೆಯದ ವಸುಮತಿ ಕಡಮಿ, ಬಾತುಕೊಂಡಿದ್ದ ಮತ್ತು ಗಟ್ಟಿಯಾದ ಬಂಡೆಯಂತೆ ಕಾಣುತ್ತಿದ್ದ ತಮ್ಮ ಕಾಲುಗಳನ್ನು ತೋರಿಸಿದರು. ಅದರ ಕುರಿತು ವಿಚಾರಿಸಿದಾಗ, ಕಳೆದ ಹತ್ತು ದಿನಗಳಿಂದ ನಿರಂತರವಾಗಿ ‘ಟ್ಯಾಬ್ಲೆಟ್‌ ಕಾಂಬಿಫ್ಲಾಮ್‌’ ತೆಗೆದುಕೊಳ್ಳುತ್ತಿರುವುದಾಗಿಯೂ, ಅದರಿಂದ ಚಾರಣಕ್ಕೆ ತರಳುವುದು ಸಾಧ್ಯವಾಗುತ್ತಿದೆಯೆಂದೂ ತಿಳಿಸಿದರು. ಈ ಮಾತ್ರೆಗಳನ್ನು ಅವರಿಗೆ ನೀಡಿದವರು ಯಾರು? ಅವರು ಹೇಳಿದ್ದು, “ನಾನು ಅವುಗಳನ್ನು ಮುಕ್ತಮಾರಾಟದಲ್ಲಿ (ಓವರ್‌ ದಿ ಕೌಂಟರ್‌–ಓ.ಟಿ.ಸಿ.) ಕೊಂಡುಕೊಂಡದ್ದು”. ಅವರೀಗ ಮೂತ್ರಪಿಂಡ ಹಾನಿಯ ತಪಾಸಣೆಗೆ ಒಳಗಾಗುತ್ತಿದ್ದಾರೆ.

ರಾಯಚೂರು ಮೂಲದ ಕೃಷ್ಣವೇಣಿ ಸಾಮಾನ್ಯ ಕಾರ್ಮಿಕಳು. ಆಕೆಯ ಮಗು ಕೆಮ್ಮು ಮತ್ತು ಶೀತದಿಂದ ಬಳಲುತ್ತಿತ್ತು. ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ಆಕೆ ರಜೆ ಪಡೆಯುವುದೆಂದರೆ ಒಂದು ದಿನದ ಸಂಬಳವನ್ನು ಕಳೆದುಕೊಳ್ಳುವುದಾಗಿತ್ತು. ಆಸ್ಪತ್ರೆಗೆ ಕರೆದೊಯ್ಯುವ ಬದಲು ಆಕೆ ಮಗುವನ್ನು ಅಜ್ಜಿಯ ಬಳಿ ಬಿಟ್ಟು, ಕೆಮ್ಮು – ಶೀತಕ್ಕೆ ಔಷಧಿ ತಂದುಕೊಡಲು ಹೊರಟರು. ಮನೆಗೆ ಹಿಂದಿರುಗಿ ಔಷಧ ಕುಡಿಸಿದ ಕೂಡಲೇ ಮಗು ನಿತ್ರಾಣಗೊಂಡಿತು.

ಗಾಬರಿಯಾದ ಆಕೆ ಐದು ತಿಂಗಳ ಮಗುವನ್ನು ವಾಣಿವಿಲಾಸ ಆಸ್ಪತ್ರೆಯ ಪಿಐಸಿಯುಗೆ ಕರೆದುತಂದರು. ಮನೆಯ ಬೇರೊಬ್ಬ ಸದಸ್ಯರು ನೇರಮಾರುಕಟ್ಟೆಯಿಂದ ತಂದಿರಿಸಿದ್ದ ಕಣ್ಣಿನ ದ್ರವ ಔಷಧವನ್ನು ಆ ತಾಯಿ, ಮಗುವಿಗೆ ಕುಡಿಸಿದ್ದರು. ಅನಕ್ಷರಸ್ಥೆಯಾಗಿದ್ದ ಕೃಷ್ಣವೇಣಿ ತನ್ನ ಮಗುವನ್ನು ಅತಿ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದವರು. ನನ್ನ ಎಲ್ಲಾ ಸ್ನಾತಕೋತ್ತರ ವಿದ್ಯಾರ್ಥಿಗಳು ಆ ಮಗುವನ್ನು ಉಳಿಸಲು ಶತಪ್ರಯತ್ನ ನಡೆಸಿದರು.

ಮನುಷ್ಯರಾದ ನಾವುಗಳು ಇಲ್ಲಿ ಎಲ್ಲರಿಗಿಂತ ವಿಶೇಷರೇ? ನಾವೇನೂ ನಮ್ಮ ಆರೋಗ್ಯವನ್ನು ಅನುಗ್ರಹದಿಂದ ಪಡೆದಿದ್ದೇವೆಯೇ? ಯಾಕೆ ಈ ಸ್ವಸಂತೃಪ್ತಿ? ಪೋಷಕರ ನಿರ್ಲಕ್ಷ್ಯ ಅಥವಾ ಅನಕ್ಷರತೆಯ ಕಾರಣದಿಂದ ಆರೋಗ್ಯವಂತ ಅಮಾಯಕ ಮಕ್ಕಳು ಸಾವನ್ನಪ್ಪಿದಾಗ ನಾನು ಉದ್ವೇಗಕ್ಕೊಳಗಾಗುತ್ತೇನೆ.

ಡಾ. ದೇವ್‌, ವಸುಮತಿ ಎಲ್ಲರೂ ಉನ್ನತ ಶಿಕ್ಷಣ ಪಡೆದವರು. ಅನಕ್ಷರತೆ ಮಾತ್ರ ಇಂಥ ಘಟನೆಗಳಿಗೆ ಕಾರಣವಲ್ಲ. ನನ್ನ ಚರ್ಮಶಾಸ್ತ್ರ ವಿಭಾಗದ ಸಹೋದ್ಯೋಗಿಯೊಬ್ಬರು ಸಾಮಾನ್ಯ ಜ್ವರದಿಂದ ಬಳಲುತ್ತಿದ್ದ ತಮ್ಮ ಐದು ವರ್ಷದ ಮಗನಿಗೆ ಐಬುಪ್ರೂಫನ್ ಸಿರಪ್ ಕುಡಿಸಿದರು. ಕೂಡಲೇ ಆತ ಬ್ರೊಂಕೊಸ್ಪಾಯಾಮ್‌ಗೆ (ತಕ್ಷಣವೇ ಶ್ವಾಸ ನಳಿಗೆ ಕಟ್ಟಿಕೊಳ್ಳುವಂಥದ್ದು) ಒಳಗಾದ. ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆತ ಬದುಕುಳಿದ. ಇಂದಿಗೂ ತಮ್ಮ ಒಬ್ಬನೇ ಮಗನನ್ನು ಹೆಚ್ಚೂ ಕಡಿಮೆ ಕಳೆದುಕೊಂಡಿದ್ದೆ ಎಂದು ಘಟನೆಯನ್ನು ನೆನೆಸಿಕೊಂಡಾಗ ಅವರ ಮೈ ಕಂಪಿಸುತ್ತದೆ.

ಈಗ ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಅವರ ಮಗನಿಗೆ 25 ವರ್ಷ. ವಿವಿಧ ಕ್ಷೇತ್ರದಲ್ಲಿ ಪರಿಣತರಾಗಿರುವವರು ಮಕ್ಕಳಿಗೆ ಚಿಕಿತ್ಸೆ ನೀಡಲು ಪ್ರಯತ್ನಿಸುತ್ತಾರೆ. ಆದರೆ ಅದು ಸರಿಯಲ್ಲ. ಮಕ್ಕಳು, ಅವರ ಕಾಯಿಲೆ ಮತ್ತು ಅವರಿಗೆ ನೀಡುವ ಔಷಧ ಡೋಸ್‌ಗಳು ಎಲ್ಲವೂ ವಿಭಿನ್ನ, ವಯಸ್ಕರ ಔಷಧೀಯ ಪದ್ಧತಿಯಂತಲ್ಲ.

ಓ.ಟಿ.ಸಿ. ಎಂದರೆ ಏನು?
ನೇರ ಮಾರುಕಟ್ಟೆ ಔಷಧಗಳು ವೈದ್ಯರ ನೇರ ಸಲಹೆಯ ಅಗತ್ಯವಿಲ್ಲದೆಯೇ ಸಾಮಾನ್ಯ ಆರೋಗ್ಯದ ಸಮಸ್ಯೆಗಳ ಸ್ಥಿತಿಯಲ್ಲಿ ಬಳಸಬಹುದಾಗಿರುತ್ತವೆ. ಮತ್ತು ಇವು ನೋಂದಾಯಿತ ವೈದ್ಯಕೀಯ ವೃತ್ತಿ ನಡೆಸುವಾತನ ಲಿಖಿತ ಸೂಚನೆಗಳ ಅಗತ್ಯವಿಲ್ಲದೆಯೂ ಕಾನೂನು ಬದ್ಧವಾಗಿ ಮಾರಾಟ ಮಾಡಲು ಅವಕಾಶ ಪಡೆದ ಅತ್ಯಂತ ಸುರಕ್ಷಿತವಾದ ಔಷಧಗಳು ಎಂದು ದೃಢಪಟ್ಟಿರಬೇಕು. ಭಾರತದಲ್ಲಿ, ಓ.ಟಿ.ಸಿ. ಯಾವುದೇ ಶಾಸನಬದ್ಧ ಮಾನ್ಯತೆ ಹೊಂದಿಲ್ಲ. ‘ಲಿಖಿತ ಸೂಚನೆಯ ಔಷಧಗಳು ಮಾತ್ರ’ ಪಟ್ಟಿಯಲ್ಲಿ ಇರಬೇಕಾದ ಔಷಧಗಳನ್ನೂ ಸೂಚನೆ ರಹಿತ ಔಷಧಗಳಾಗಿ ಪರಿಗಣಿಸಲಾಗಿದೆ.

ಅನೇಕ ಸಂದರ್ಭಗಳಲ್ಲಿ ನಾನು ನನಗೆ ಅಗತ್ಯವಾದ ಔಷಧಗಳನ್ನು ಕೊಳ್ಳಲು ಔಷಧಿ ಅಂಗಡಿಗಳಿಗೆ ತೆರಳಿದಾಗ, ಅಲ್ಲಿ ಅನೇಕರು ‘ತಲೆ ನೋವಿಗೆ ಔಷಧಿ ಕೊಡಿ’ ಎಂದು ಅಂಗಡಿಯವರನ್ನು ಕೇಳುತ್ತಿದ್ದದ್ದನ್ನು ಕಂಡಿದ್ದೇನೆ. ಆ ವ್ಯಕ್ತಿ ಸಾಮಾನ್ಯವಾಗಿ ಅವರಿಗೆ ಆಸ್ಪಿರಿನ್‌ ನೀಡುತ್ತಾರೆ. ‘ನನಗೆ ಅಸಿಡಿಟಿ ಇದೆ’ ಎನ್ನುವವರಿಗೆ ಒಂದು ಜೆಲುಸಿಲ್‌ ಪ್ಯಾಕೆಟ್‌ ನೀಡುತ್ತಾರೆ.

ಕಾಯಿಲೆಯ ಚಿಕಿತ್ಸೆ ಇಷ್ಟು ಸುಲಭವಾದರೆ ಐದೂವರೆ ವರ್ಷ ಎಂಬಿಬಿಎಸ್‌ ಮತ್ತು ಮೂರು ವರ್ಷದ ಸ್ನಾತಕೋತ್ತರ ಪದವಿ ಓದುವ ಅಗತ್ಯವಾದರೂ ಏನು? ಒಬ್ಬ ಪರವಾನಗಿ ಪಡೆದ ಔಷಧಿಕಾರ ಔಷಧ ಅಂಗಡಿಯನ್ನು ತೆರೆಯುವುದಾದರೂ ಏಕೆ?

ಕೆಲವು ವಾರದ ಹಿಂದೆ, ಕರೆ ಮಾಡಿದ ಅಮ್ಮ ಗಾಬರಿಯಿಂದ ತನ್ನ ಸ್ನೇಹಿತರೊಬ್ಬರಿಗೆ ತಡೆಯಲಾಗದ ತೀವ್ರ ಬಿಕ್ಕಳಿಕೆ ಶುರುವಾಗಿದೆ ಎಂದರು. ಆ 60 ವರ್ಷದ ಸಹೃದಯರು ಹತ್ತಿರದ ಔಷಧ ಅಂಗಡಿಗೆ ಹೋಗಿ ಸ್ವ ಔಷಧ ಪ್ರಯೋಗ ಮಾಡಿಕೊಂಡಿದ್ದರು. ಶನಿವಾರ ಸಂಜೆ ವೇಳೆಗೆ ಅವರಿಗೆ ಚಿಕಿತ್ಸೆ ನೀಡಲು ವೈದ್ಯರನ್ನು ಹುಡುಕುವುದೇ ಅಗ್ನಿಪರೀಕ್ಷೆಯಂತಾಗಿತ್ತು. ಕೂಡಲೇ ಕಾರ್ಪೋರೇಟ್‌ ಆಸ್ಪತ್ರೆಯೊಂದಕ್ಕೆ ದೌಡಾಯಿಸಿದೆವು. ಇದು ಗ್ಯಾಸ್ಟ್ರೊಎಂಟೆರೊಲಜಿ (ಜೀರ್ಣ ವ್ಯವಸ್ಥೆ ಮತ್ತು ಅದರ ಕಾಯಿಲೆಗೆ ಸಂಬಂಧಿಸಿದ) ವಿಭಾಗದ ಪ್ರಕರಣ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಗ್ಯಾಸ್ಟ್ರೊಎಂಟೆರೊಲಾಜಿಸ್ಟ್‌ ಆಗಿರುವ ನನ್ನ ಹಳೆಯ ವಿದ್ಯಾರ್ಥಿ

ಡಾ. ರವಿಶಂಕರ್‌, ತಪಾಸಣೆ ನಡೆಸಿ– ‘ಮೇಡಂ, ಇದು ತೀವ್ರ ಹೃದಯಾಘಾತದ ಪರಿಣಾಮವಾಗಿ ಉಂಟಾಗಿರುವ ಬಿಕ್ಕಳಿಕೆ’ ಎಂದರು. ನಾನಂದುಕೊಂಡಂತೆ ಜಠರದ ಉರಿತವಾಗಿರಲಿಲ್ಲ. ಮತ್ತು ಚಿಕಿತ್ಸೆ ನೀಡುವುದಕ್ಕೆ ಒಂದು ವಾರ ವಿಳಂಬವಾಗಿತ್ತು.

ಕೂಡಲೇ ಅವರನ್ನು ತೀವ್ರ ನಿಗಾ ಘಟಕಕ್ಕೆ ಸೇರಿಸಲಾಯಿತು. ಹೃದ್ರೋಗತಜ್ಞರೊಬ್ಬರು ಅವರ ತಪಾಸಣೆ ನಡೆಸಿ ಈಗ ಏನೂ ಮಾಡಲೂ ಸಾಧ್ಯವಿಲ್ಲ ಎಂದರು. ಒಮ್ಮೆ ಹಾಗೆಂದು ಅವರು ದೃಢಪಡಿಸಿದರೆ ಅದರರ್ಥ ರಕ್ತದೊತ್ತಡ, ಉಸಿರಾಟ ಇತ್ಯಾದಿಯೆಲ್ಲವೂ ಸಹಜವಾಗಿದೆ, ಮುಂದಿನದ್ದನ್ನು ಅವರು ನಿರ್ವಹಿಸುತ್ತಾರೆ ಎಂದು. ಒಂದು ವಾರದ ನಂತರ, ಹೃದಯದಿಂದ ರಕ್ತ ಪೂರೈಕೆ ಮಾಡುತ್ತಿದ್ದ ರಕ್ತನಾಳಗಳು ಕಟ್ಟಿಕೊಂಡಿರುವುದು ಪತ್ತೆಯಾಯಿತು. ಈ ಬ್ಲಾಕುಗಳಲ್ಲಿ ಕೆಲವನ್ನು ರಕ್ತನಾಳಗಳು ನಿಶ್ಚೇತನಗೊಳ್ಳುವುದನ್ನು ತಡೆಯುವ ಮೂಲಕ ಮತ್ತು ರಕ್ತಸಂಚಾರಕ್ಕೆ ಅವಕಾಶ ಮಾಡಿಕೊಡುವ ಸ್ಟೆಂಟ್‌ಗಳನ್ನು ಅಳವಡಿಸುವ ಮೂಲಕ ಸರಿಪಡಿಸಲಾಯಿತು. ಮೂರು ವಾರದ ಆಸ್ಪತ್ರೆ ವಾಸ ಮತ್ತು ಲಕ್ಷಕ್ಕೂ ಹೆಚ್ಚು ಮೊತ್ತದ ಶುಲ್ಕದೊಂದಿಗೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ದೈವಾನುಗ್ರಹ ಅವರನ್ನು ಕಾಪಾಡಿತು.

ಇದೆಲ್ಲಾ ಏಕೆ ಹೀಗೆ ಸಂಭವಿಸುತ್ತವೆ? ವೈದ್ಯರನ್ನು ಸಂಪರ್ಕಿಸುವ ಸಂದರ್ಭ ಬಂದಾಗ ಮೊದಲು ನಿಮ್ಮ ಮನಸ್ಸು ಯೋಚಿಸುವುದು– ನಾನು ರಜೆ ತೆಗೆದುಕೊಳ್ಳಬೇಕು, ವೈದ್ಯರ ಸಮಯ ನಿಗದಿಮಾಡಿಕೊಳ್ಳಬೇಕು, ಪಾರ್ಕಿಂಗ್‌ ಸಮಸ್ಯೆಗಳು, ದೀರ್ಘಕಾಲ ಕಾಯುವುದು, ರಕ್ತಪರೀಕ್ಷೆ, ಮತ್ತಿತರೆ ಪರೀಕ್ಷೆಗಳು, ವೈದ್ಯರ ಸಲಹೆ ಸೂಚನೆಗಳು ಮತ್ತು ಔಷಧಗಳ ಕುರಿತು. ಹೀಗಾಗಿ ಉಪಮಾರ್ಗ ಸಲೀಸು– ಹತ್ತಿರದ ಔಷಧಿ ವ್ಯಾಪಾರಿ ಬಳಿ ಹೋಗಿ ಕಾಯಿಲೆ ಲಕ್ಷಣಗಳನ್ನು ತಿಳಿಸುವಿರಿ, ಆತ ಸಂತೋಷದಿಂದ ನಿಮಗೆ ಬೇಕಾದ ಔಷಧವನ್ನು ನೀಡುತ್ತಾರೆ! ತುಂಬಾ ಸುಲಭ ಮತ್ತು ಸರಳ. ಇದುವರೆಗೂ ಎಷ್ಟು ಜನ ಹೀಗೆ ತಣ್ಣನೆ ಕೊನೆಯುಸಿರೆಳೆದಿದ್ದಾರೆ ಮತ್ತು ಇವು ದಾಖಲಾಗದೆ ಹೋಗಿವೆ ಎಂಬುದು ನಮಗೆ ಗೊತ್ತಿಲ್ಲ. ಅದರಲ್ಲೂ ಬಡ ಮತ್ತು ಗ್ರಾಮೀಣ ಜನತೆಗೆ ಔಷಧ ಮಳಿಗೆಗಳೆಂದರೆ ‘ಸಕಲ ರೋಗಗಳನ್ನು ಗುಣಪಡಿಸುವ ಅಂಗಡಿ’. ನಮ್ಮಲ್ಲಿ ಇನ್ನೊಂದು ವರ್ಗದ ಜನರಿದ್ದಾರೆ. ಒಂದು ಕಾಯಿಲೆಗೆ ವೈದ್ಯರ ಬಳಿ ತೆರಳಿ ಅವರಿಂದ ಸಲಹೆ ಪಡೆದವರು ಮುಂದಿನ ಬಾರಿ ಅದೇ ಕಾಯಿಲೆ ಬಂದಾಗ ಅದೇ ಸಲಹೆಯನ್ನೇ ಅನುಸರಿಸಿ ಔಷಧ ಕೊಳ್ಳುತ್ತಾರೆ. ಈ ಗುಂಪಿನ ಜನರನ್ನು ‘ಸೂಚಿತ ಔಷಧದ ದುರುಪಯೋಗದಾರರು’ ಎಂದು ಕರೆಯಲಾಗುತ್ತದೆ.

ಔಷಧಗಳು ಸಮರ್ಪಕವಾಗಿ ಬಳಕೆಯಾದಾಗ ಮಾತ್ರ ಪರಿಣಾಮಕಾರಿಯಾಗಬಲ್ಲವು. ಆದರೆ ಕೆಲವರು ಅದಕ್ಕೆ ವ್ಯಸನಿಗಳಾಗಿಬಿಡುತ್ತಾರೆ ಮತ್ತು ಅದರ ಅತಿ ಬಳಕೆ ಅಪಾಯಕಾರಿ. ಅತಿಯಾಗಿ ದುರ್ಬಳಕೆಯಾಗುತ್ತಿರುವ ಸಾಮಾನ್ಯ ಸೂಚಿತ ಔಷಧಗಳೆಂದರೆ– ನೋವಿನ ನಿವಾರಣೆ, ನಿದ್ರೆ ಸಮಸ್ಯೆ ಮತ್ತು ಜಠರದುರಿತ ಸಮಸ್ಯೆಯ ಔಷಧಗಳು.

ಓ.ಟಿ.ಸಿ. ಔಷಧಗಳು ನಿಮ್ಮ ಕಾಯಿಲೆಯ ದಿಕ್ಕನ್ನು ಬದಲಿಸುವ ಸಾಧ್ಯತೆಯಿರುವುದರಿಂದ ಮತ್ತು ಅಡ್ಡಪರಿಣಾಮಗಳ ಸಾಧ್ಯತೆ ಹೆಚ್ಚಿರುವುದರಿಂದ ಅದರ ಕುರಿತು ವೈದ್ಯರಿಗೆ ಹೇಳುವುದನ್ನು ಮರೆಯಬಾರದು. ಇದರಿಂದ ವೈದ್ಯರು ಡಯಾಗ್ನೊಸಿಸ್‌ ಮಾಡುವ ಶ್ರಮ ತಪ್ಪುತ್ತದೆ. ಸಲಹೆ ಪಡೆದ ಔಷಧಗಳ ಅತ್ಯಂತ ಕೆಟ್ಟ ಬಳಕೆಯೆಂದರೆ ಅಸ್ವಸ್ಥತೆಯಿಂದ ಉಂಟಾಗುವ ಸಾಮಾನ್ಯ ಕಾಯಿಲೆಗಳಿಗೆ ತಾಯಿಗೆ ಆಂಟಿಬಯಾಟಿಕ್‌ ನೀಡುವುದು. ಆಂಟಿಬಯಾಟಿಕ್‌ಗಳು ಔಷಧನಿರೋಧ ಸಮಸ್ಯೆಯ ಅಪಾಯಕ್ಕೆ ಎಡೆಮಾಡಿಕೊಡುತ್ತದೆ.

ಒಂದು ದಿನ ಕಾರ್ಮಿಕರೊಬ್ಬರು ತನ್ನ ಎರಡು ತಿಂಗಳ ಮಗುವನ್ನು ಎನ್‌ಐಸಿಯುಗೆ ಕರೆ ತಂದಿದ್ದರು. ತೀರಾ ಬಳಲಿದಂತೆ ಕಾಣುತ್ತಿದ್ದ ಮಗುವಿನ ದೇಹ ಕೆಂಪಾಗಿತ್ತು. ಅತಿಯಾದ ಬೆವರು ಮತ್ತು ನಿರಂತರವಾಗಿ ಮೂತ್ರವನ್ನು ಹೊರಹಾಕುತ್ತಿತ್ತು. ವಿಚಿತ್ರ ವಾಸನೆ ಅದರ ಮೈಯಿಂದ ಹೊರಬರುತ್ತಿತ್ತು. ನನ್ನ ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬರು ತೀರಾ ಅಪರೂಪದ ಕಾಯಿಲೆ ಮಗುವಿನಲ್ಲಿ ಇರುವುದನ್ನು ಪತ್ತೆಮಾಡಿ, ಕೆಲವು ಸಾವಿರ ವೆಚ್ಚದ ಪರೀಕ್ಷೆಗೆಂದು ರಕ್ತದ ಮಾದರಿಯನ್ನು ಕಳುಹಿಸಿದರು. ಹಣವಿಲ್ಲವೆಂದು ಆ ತಾಯಿ ಗೋಳಾಡಿದರು. ನಾನು ಮಗುವಿನ ಸಮೀಪಕ್ಕೆ ಹೋದಾಗಲೇ ತಿಳಿದದ್ದು ಆ ಮಗುವಿಗೆ ಆಲ್ಕೋಹಾಲ್‌ ಕುಡಿಸಲಾಗಿದೆ ಎಂದು. ತಾಯಿಯನ್ನು ವಿಚಾರಿಸಿದಾಗ– ಕೆಲಸ ಮಾಡಿ ದಣಿದಿದ್ದ ಆಕೆ ರಾತ್ರಿ ಮಲಗಲು ಹೊರಟಾಗ ಮತ್ತು ಒಂದೇ ಸಮನೆ ಅಳಲು ಪ್ರಾರಂಭಿಸಿತು. ಮಗು ಹಸಿದಿರಬೇಕು ಎಂದು ಬಾಟಲಿ ಹಾಲು ಕುಡಿಸಲು ಪಕ್ಕದಲ್ಲಿದ್ದ ಬಾಟಲಿಗೆ ನಿಪ್ಪಲ್‌ ಜೋಡಿಸಿದರು. ಆದರೆ ಅದು ರಮ್‌ ಬಾಟಲಿಯಾಗಿತ್ತು! ಅದೃಷ್ಟವಶಾತ್‌ ಆಲ್ಕೋಹಾಲ್‌ ಸೇವನೆಯನ್ನು ನಾವು ಪತ್ತೆಹಚ್ಚಲು ಸಾಧ್ಯವಾಗಿದ್ದರಿಂದ ಮಗು ಬದುಕುಳಿಯಿತು.

ನನ್ನ ಸಲಹೆ ಇಷ್ಟೇ– ನೇರಮಾರಾಟದಲ್ಲಿ ಔಷಧಗಳನ್ನು ಕೊಳ್ಳಬೇಡಿ. ವೈದ್ಯರ ಸಲಹೆಯ ಔಷಧಗಳನ್ನು ದುರ್ಬಳಕೆ ಮಾಡಿಕೊಳ್ಳಬೇಡಿ. ನಿಮ್ಮ ಬದುಕು ಅತಿ ಅಮೂಲ್ಯ; ಆ ಕ್ಷಣದ ಸಂತೃಪ್ತಿಗಾಗಿ, ವಿಳಂಬ ಧೋರಣೆ ಮತ್ತು ಆಲಸ್ಯದಿಂದ ಅದನ್ನು ಕಳೆದುಕೊಳ್ಳಬೇಡಿ.

ಬೇರೆ ಬೇರೆ ಜನರಿಗೆ, ಬೇರೆ ಬೇರೆ ವಯೋಮಾನಕ್ಕೆ ಮತ್ತು ಬೇರೆ ಬೇರೆ ಲಿಂಗದ ಜನರಲ್ಲಿ ಔಷಧಗಳು ತಮಾಷೆಯಾಗಿ ವರ್ತಿಸುತ್ತವೆ. ಕೇವಲ ಒಂದು ಡೋಸ್‌ ಪ್ಯಾರಾಸೆಟಮಾಲ್‌ ಹೇಗೆ ಡಾ. ದೇವ್‌ ಅವರನ್ನು ಜೀವನಪರ್ಯಂತ ಡಯಾಲಿಸಿಸ್‌ಗೆ ಒಳಗಾಗುವಂತೆ ಮಾಡಿತು ಎಂಬುದನ್ನು ಊಹಿಸಿಕೊಳ್ಳಿ. ಮೂರು ವರ್ಷದ ‘ಕೆ’ ಮತ್ತು ಐದರ ‘ಜೆ’ ಮಕ್ಕಳ ತಂದೆಯ ನೆನಪು ಮರುಕಳಿಸುತ್ತಿದೆ. ವರ್ಷಗಳ ಹಿಂದೆ ಔಷಧದಲ್ಲಾದ ಪ್ರಮಾದದಿಂದ ಪತ್ನಿಯನ್ನು ಕಳೆದುಕೊಂಡ ಆ ತಂದೆ ಅವರನ್ನು ಬೆಳೆಸಲು ಹೇಗೆಲ್ಲಾ ಕಷ್ಟಪಟ್ಟರು... ಆಕೆಯ ಮಗ ಖ್ಯಾತ ಹೃದ್ರೋಗ ತಜ್ಞರಾಗಿ ಬೆಳೆದಿದ್ದಾರೆ. ಅವರು ಯಾವಾಗಲೂ ಹೇಳುವುದು– ‘ಅಮ್ಮ ಆ ಔಷಧವೊಂದನ್ನು ತೆಗೆದುಕೊಳ್ಳದೆ ಇದ್ದಿದ್ದರೆ...’

ಆತ್ಮೀಯ ಓದುಗರೆ, ನೀವೇ ತೆಗೆದುಕೊಳ್ಳುವ ಔಷಧಗಳು ಸುರಕ್ಷಿತವಲ್ಲ. ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ.

ನಾನು ಅಂಕಣ ಬರಹವನ್ನು ಬರೆದು ಮುಗಿಸುತ್ತಿರುವಾಗ, ಒಬ್ಬ ಮಹಿಳೆ ಆಕೆಯ ಗೆಳತಿಗೆ ಭೇದಿ ಸಮಸ್ಯೆಗೆ ‘ಎಲ್ಡೋಪರ್‌ ತೆಗೆದುಕೋ’ ಎಂದು ಸಲಹೆ ನೀಡುತ್ತಿದ್ದರು. ನೇರಮಾರಾಟ ಔಷಧಗಳ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಬಾಯಿಂದ ಬಾಯಿಗೆ ಹರಡುವ ಸಲಹೆಯ ಸಮಸ್ಯೆಯ ಬಗ್ಗೆ ನಾನು ಏನು ಮಾಡುವುದು?

ಅಂದಹಾಗೆ, ಅವಳಿಗಳಲ್ಲಿ ಬದುಕುಳಿದಿರುವ ‘ಡಾ. ಎಂ’ ಅಮೆರಿಕದ ಸಾನ್‌ಡಿಯಾಗೊದ ಆಸ್ಪತ್ರೆಗೆ ದಾಖಲಾಗಿದ್ದಾಳೆ. ತನ್ನ ಹೃದಯ ಕಸಿಗೆ ಆಕೆ ಕಾದಿದ್ದಾಳೆ. ಆಕೆಯ ಕುರಿತ ವಿವರಗಳನ್ನು ನೀವು http://tinycc/heartformaria ವೆಬ್‌ ವಿಳಾಸದಲ್ಲಿ ನೋಡಬಹುದು. ಆಕೆ ತನಗಾಗಿ ನಾವೆಲ್ಲರೂ ಪಾರ್ಥಿಸಬೇಕೆಂದು ಬಯಸಿದ್ದಾಳೆ. ಆಕೆಗಾಗಿ ಪ್ರಾರ್ಥಿಸೋಣ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT