ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಇರುವುದು ಕರ್ತವ್ಯಗಳ ಆವರಣದಲ್ಲಿ

Last Updated 7 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ರಾಷ್ಟ್ರ ರಾಜಧಾನಿಯಲ್ಲಿರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಒಂದು ವರ್ಷದ ಹಿಂದೆ ಉಂಟಾದ ಬಿಕ್ಕಟ್ಟಿನ ಕಾರಣಗಳು ಮತ್ತೆ ಮುನ್ನೆಲೆಗೆ ಬಂದಿವೆ. ಅದಕ್ಕೆ ಕಾರಣ, ದೇಶಭಕ್ತಿ ಮತ್ತು ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತ ತೀವ್ರ ಚರ್ಚೆಗಳು ಹಾಗೂ ದೆಹಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಗುಂಪುಗಳ ನಡುವೆ ಈಚೆಗೆ ನಡೆದ ಸಂಘರ್ಷ.

ಜೆಎನ್‌ಯು, ಜಾಧವಪುರ ವಿಶ್ವವಿದ್ಯಾಲಯ ಸೇರಿದಂತೆ ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಕಳೆದ ವರ್ಷ ನಡೆದ ತಲೆತಗ್ಗಿಸುವ ಘಟನೆಗಳನ್ನು ಗಮನಿಸಿದ ದೇಶವಾಸಿಗಳು ಸ್ತಂಭೀಭೂತರಾಗಿದ್ದರು. ಈ ವಿಶ್ವವಿದ್ಯಾಲಯಗಳ ಆವರಣದಲ್ಲಿ ಕೆಲವು ವಿದ್ಯಾರ್ಥಿಗಳು ರಾಷ್ಟ್ರವಿರೋಧಿ ಘೋಷಣೆ ಕೂಗಿದ್ದರು, ದೇಶದ ಏಕತೆ ಮತ್ತು ಸಾರ್ವಭೌಮತ್ವಕ್ಕೆ ಸವಾಲು ಹಾಕಿದರು, ಭಯೋತ್ಪಾದಕರನ್ನು ಹೊಗಳುವ ಭಿತ್ತಿಪತ್ರ ಅಂಟಿಸಿದರು, ದೇಶ ಒಡೆಯುವ ಮಾತುಗಳು ಕೇಳಿಬಂದವು.

ಕಳೆದ ವರ್ಷ ಜೆಎನ್‌ಯು ಆವರಣದಲ್ಲಿ ಉಂಟಾದ ಸಮಸ್ಯೆಗೆ ದೊಡ್ಡ ಕಾರಣ ‘ಪ್ರತಿಭಟನೆಯ ಸಾಂಸ್ಕೃತಿಕ ಸಂಜೆ’ ಎಂಬ ಕಾರ್ಯಕ್ರಮ. ಈ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡುವ ಭಿತ್ತಿಪತ್ರಗಳಲ್ಲಿ, ‘ನ್ಯಾಯಾಂಗದಿಂದಲೇ ನಡೆದ ಅಫ್ಜಲ್ ಗುರು ಮತ್ತು ಮಕ್ಬೂಲ್ ಭಟ್ ಅವರ ಕೊಲೆ ವಿರುದ್ಧ ಹಾಗೂ ಕಾಶ್ಮೀರದ ಜನ ನಡೆಸುತ್ತಿರುವ ಸ್ವಯಂ ನಿರ್ಣಯದ ಸಾಂವಿಧಾನಿಕ ಹಕ್ಕುಗಳಿಗಾಗಿನ ಹೋರಾಟಕ್ಕೆ ಬೆಂಬಲವಾಗಿ’ ಈ ಪ್ರತಿಭಟನೆ ಎಂದು ಹೇಳಲಾಗಿತ್ತು. ‘ಆಕ್ರಮಣಕ್ಕೆ ಒಳಗಾದ ಕಾಶ್ಮೀರದ ಇತಿಹಾಸ ಮತ್ತು ಅದರ ವಿರುದ್ಧ ಅಲ್ಲಿನ ಜನ ನಡೆಸುತ್ತಿರುವ ಹೋರಾಟ’ವನ್ನು ಬಿಂಬಿಸುವ ಚಿತ್ರಕಲೆ ಹಾಗೂ ಛಾಯಾಚಿತ್ರ ಪ್ರದರ್ಶನ ಇರಲಿದೆ ಎಂದೂ ಹೇಳಲಾಗಿತ್ತು. ಆ ಭಿತ್ತಿಪತ್ರಗಳು, ‘ಕಾಶ್ಮೀರದ ಮೇಲಿನ ಆಕ್ರಮಣದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಬೇಕು, ಕಾಶ್ಮೀರದ ಕೆಚ್ಚೆದೆಯ ಜನರಿಗೆ ಬೆಂಬಲವಾಗಿ ನಿಲ್ಲಬೇಕು’ ಎಂದು ಕರೆ ನೀಡಿದ್ದವು.

‘ಸಾಂಸ್ಕೃತಿಕ ಸಂಜೆ’ ಎಂದು ಹೇಳಲಾದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೂಗಿದ ಘೋಷಣೆಗಳನ್ನು ದೆಹಲಿ ಹೈಕೋರ್ಟ್‌ ಉಲ್ಲೇಖಿಸಿದೆ:
ಅಫ್ಜಲ್ ಗುರು, ಮಕ್ಬೂಲ್ ಭಟ್ ಜಿಂದಾಬಾದ್; ಭಾರತ್ ಕಿ ಬರ್ಬಾದಿ ತಕ್ ಜಂಗ್ ರಹೇಗಿ, ಜಂಗ್ ರಹೇಗಿ; ಗೋ ಇಂಡಿಯಾ, ಗೋ ಬ್ಯಾಕ್; ಇಂಡಿಯನ್ ಆರ್ಮಿ ಮುರ್ದಾಬಾದ್; ಭಾರತ್ ತೇರೆ ಟುಕಡೆ ಹೋಂಗೆ, ಇನ್ಶ ಅಲ್ಲಾ, ಇನ್ಶ ಅಲ್ಲಾ; ಅಫ್ಜಲ್ ಕಿ ಹತ್ಯಾ ನಹಿ ಸಹೇಂಗೆ, ನಹಿ ಸಹೇಂಗೆ ಮತ್ತು ಕೊನೆಯದಾಗಿ ಬಂದೂಕ್‌ ಕಿ ದಮ್ ಪರ್ ಲೇಂಗೆ ಆಜಾದಿ.

ದೆಹಲಿ ವಿಶ್ವವಿದ್ಯಾಲಯದಲ್ಲಿ ಕಳೆದ ವಾರ ಸೃಷ್ಟಿಯಾದ ಸಮಸ್ಯೆಯು 2016ರ ಫೆಬ್ರುವರಿಯಲ್ಲಿ ಜೆಎನ್‌ಯುನಲ್ಲಿ ನಡೆದ ಘಟನೆ ಜೊತೆ ನಂಟು ಹೊಂದಿದೆ. ದೆಹಲಿ ವಿಶ್ವವಿದ್ಯಾಲಯದ ಒಂದು ಕಾಲೇಜು ‘ಪ್ರತಿಭಟನೆಯ ಸಂಸ್ಕೃತಿ’ ಎಂಬ ಕಾರ್ಯಕ್ರಮ ಆಯೋಜಿಸಿ ಜೆಎನ್‌ಯು ವಿಶ್ವವಿದ್ಯಾಲಯದ ಆವರಣದಲ್ಲಿ ಕಾರ್ಯಕರ್ತರಂತೆ ಕೆಲಸ ಮಾಡಿದ ಇಬ್ಬರು ವಿದ್ಯಾರ್ಥಿಗಳನ್ನು ಅದಕ್ಕೆ ಆಹ್ವಾನಿಸಿತು. ರಾಷ್ಟ್ರ ವಿರೋಧಿ ಎಂಬ ಬಣ್ಣ ಪಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಆರೋಪವು ಆಹ್ವಾನಿತ ಇಬ್ಬರು ವಿದ್ಯಾರ್ಥಿಗಳ ಪೈಕಿ ಒಬ್ಬ ವಿದ್ಯಾರ್ಥಿಯ ಮೇಲಿದೆ.

ದೆಹಲಿ ವಿಶ್ವವಿದ್ಯಾಲಯದ ಕಾರ್ಯಕ್ರಮದ ಆಯೋಜಕರ ಪ್ರಕಾರ, ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಸದಸ್ಯರು ಹಿಂಸೆಗೆ ಇಳಿದರು, ಕಾರ್ಯಕ್ರಮ ರದ್ದಾಗುವಂತೆ ಮಾಡಿದರು. ಅದಾದ ನಂತರ ದೆಹಲಿ ವಿಶ್ವವಿದ್ಯಾಲಯವು ಎಬಿವಿಪಿ ಹಾಗೂ ಎಡಪಂಥೀಯ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ (ಎಐಎಸ್‌ಎ) ಸದಸ್ಯರು ನಡೆಸಿದ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ತನಗೆ ಎಬಿವಿಪಿ ವಿದ್ಯಾರ್ಥಿಗಳಿಂದ ಲೈಂಗಿಕ ಅತ್ಯಾಚಾರದ ಬೆದರಿಕೆಗಳು ಬಂದಿವೆ ಎಂದು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದಾರೆ.

ಎಡಪಂಥೀಯ ವಿದ್ಯಾರ್ಥಿ ಸಂಘಟನೆ ನಡೆಸಿದ ಪ್ರತಿಭಟನೆಯೊಂದರಲ್ಲಿ, ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ವರ್ಷದ ಹಿಂದೆ ಆದಂತೆ, ಪ್ರತಿಭಟನಾಕಾರರು ಕಾಶ್ಮೀರಕ್ಕೆ ‘ಆಜಾದಿ’ ಬೇಕು ಎಂಬ ಘೋಷಣೆ ಕೂಗಿದರು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಇಂಥ ಘೋಷಣೆ ಕೂಗುವುದನ್ನು ಖಂಡಿಸುವ ಪತ್ರಿಕಾ ಹೇಳಿಕೆಯನ್ನು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರು ನೀಡಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಘಟನೆಯಿಂದ ಏನೋ ಸಂದೇಶ ಪಡೆದಂತೆ, ಜೆಎನ್‌ಯು ಆವರಣದಲ್ಲಿ ಕಳೆದ ವರ್ಷ ಪ್ರತಿಭಟನೆ ಆಯೋಜಿಸಿದ್ದ ವಿದ್ಯಾರ್ಥಿ ಸಂಘಟನೆ ಮತ್ತೆ ಕ್ರಿಯಾಶೀಲವಾಗಿದೆ. ‘ಕಾಶ್ಮೀರಕ್ಕೆ ಸ್ವಾತಂತ್ರ್ಯ’ ಬೇಕು ಎಂಬ ಭಿತ್ತಿಪತ್ರಗಳನ್ನು ಮತ್ತೆ ಅಂಟಿಸಿದೆ. ಪೂರ್ವಾಪರಗಳನ್ನು ಅವಲೋಕಿಸಿ ಈ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳಬೇಕು.

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದೆಹಲಿ ಮತ್ತು ಇತರ ಕೆಲವು ಪ್ರದೇಶಗಳ ವಿಶ್ವವಿದ್ಯಾಲಯಗಳ ಆವರಣದಲ್ಲಿ ಅಧಿಕಾರಕ್ಕಾಗಿ ದೊಡ್ಡ ಹೋರಾಟ ನಡೆದಿದೆ. ಸ್ವಾತಂತ್ರ್ಯ ಬಂದ ನಂತರ 67 ವರ್ಷಗಳವರೆಗೆ ದೇಶ ಆಳಿದ ನೆಹರೂ ಚಿಂತನೆಗೆ (ನೆಹರೂ– ಗಾಂಧಿಗಳು ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಈ ಚಿಂತನೆ ಆಳ್ವಿಕೆ ನಡೆಸಿದೆ) ಸ್ಥಾನ ಕಳೆದುಕೊಂಡಂತೆ ಭಾಸವಾಗುತ್ತಿದೆ. ಇಷ್ಟು ವರ್ಷಗಳ ಕಾಲ ನೆಹರೂ ಚಿಂತನೆಯ ಹೆಗಲ ಮೇಲೆ ಸವಾರಿ ನಡೆಸಿದ ಮಾರ್ಕ್ಸ್‌ವಾದಿಗಳಿಗೆ, ಜನ ಬಿಜೆಪಿಯ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿಶ್ವವಿದ್ಯಾಲಯಗಳ ಆವರಣದಲ್ಲಿ ನಡೆಯುತ್ತಿರುವ ಘರ್ಷಣೆಗಳಿಗೆ ದೊಡ್ಡ ಕಾರಣ, ದೇಶದ ಜನ 2014ರಲ್ಲಿ ನೀಡಿದ ತೀರ್ಪಿಗೆ ಈ ಎರಡು ಚಿಂತನೆಗಳಿಗೆ ಸೇರಿದ ಜನರಿಗೆ ಹೊಂದಿಕೊಳ್ಳಲು ಸಾಧ್ಯವಾಗದಿರುವುದರಲ್ಲಿ ಅಡಗಿದೆ.

ದುರದೃಷ್ಟದ ಸಂಗತಿಯೆಂದರೆ, ಮಾರ್ಕ್ಸ್‌ವಾದಿಗಳು ತಮ್ಮ ಹತಾಶೆಯನ್ನು ಅತಿರೇಕಕ್ಕೆ ಕೊಂಡೊಯ್ದಿದ್ದಾರೆ, ಅತೃಪ್ತ ಗುಂಪುಗಳ ಭಾವನೆಗಳನ್ನು ಪ್ರಚೋದಿಸುತ್ತಿದ್ದಾರೆ, ಭಾರತದ ಏಕತೆಗೆ ಧಕ್ಕೆ ತರಬಲ್ಲ ವಿಚಾರಗಳಿಗೆ ದನಿ ಕೊಡುತ್ತಿದ್ದಾರೆ. ಸಂಸತ್ ಭವನದ ಮೇಲಿನ ಭಯೋತ್ಪಾದಕರ ದಾಳಿಯ ಸೂತ್ರಧಾರನನ್ನು ಪ್ರಶಂಸಿಸುವ, ತಮ್ಮ ಉದ್ದೇಶಗಳ ಈಡೇರಿಕೆಗೆ ಬಂದೂಕು ಕೈಗೆತ್ತಿಕೊಂಡವರನ್ನು ಹೊಗಳುವ ಹಂತಕ್ಕೆ ಎಡಪಂಥೀಯ ಗುಂಪುಗಳು ತಲುಪಿವೆ. ಅವರ ಈ ಕ್ರಿಯೆಗಳು ನಮ್ಮ ಪ್ರಜಾತಂತ್ರದ ಮೂಲ ಆಧಾರಗಳ ಮೇಲೆ ಹಲ್ಲೆ ನಡೆಸುವುದಕ್ಕೆ ಸಮ.
ನಿರಂತರವಾಗಿ ಸಿಗುತ್ತಿರುವ ಬೆಂಬಲದ ಕಾರಣ ವಿದ್ಯಾರ್ಥಿಗಳು ದೇಶದ ಏಕತೆಗೆ ಧಕ್ಕೆ ತರುವ ಘೋಷಣೆ ಕೂಗುವುದನ್ನು ನಾವು ಮತ್ತೆ ಮತ್ತೆ ಕಾಣುತ್ತಿದ್ದೇವೆ. ಜೆಎನ್‌ಯು ಮತ್ತು ದೆಹಲಿ ವಿಶ್ವವಿದ್ಯಾಲಯದಲ್ಲಿ ‘ಕಾಶ್ಮೀರಕ್ಕೆ ಸ್ವಾತಂತ್ರ್ಯ ಬೇಕು’ ಎಂಬ ಘೋಷಣೆ ಕೂಗಿದರೆ, ಈಶಾನ್ಯ ಭಾರತದ ಹಲವು ರಾಜ್ಯಗಳಿಗೆ ಸ್ವಾತಂತ್ರ್ಯ ಬೇಕು ಎಂಬ ಭಿತ್ತಿಪತ್ರಗಳನ್ನು ಜಾಧವಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಳೆದ ವರ್ಷ ಅಂಟಿಸಿದ್ದರು. ‘ನಮಗೇನು ಬೇಕು– ಸ್ವಾತಂತ್ರ್ಯ: ಕಾಶ್ಮೀರಕ್ಕೆ ಸ್ವಾತಂತ್ರ್ಯ, ನಾಗಾಲ್ಯಾಂಡ್‌ಗೆ ಸ್ವಾತಂತ್ರ್ಯ; ಮಣಿಪುರಕ್ಕೆ ಸ್ವಾತಂತ್ರ್ಯ’ ಎಂಬ ಮಾತುಗಳು ಈ ಭಿತ್ತಿಪತ್ರಗಳಲ್ಲಿ ಇದ್ದಿದ್ದು ಆಘಾತಕಾರಿ. ಈ ಆಟ ಆಡುತ್ತಿರುವವರು ಬೆಂಕಿಯ ಜೊತೆ ಸರಸ ಆಡುತ್ತಿದ್ದಾರೆ.

ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಹಿಂಸೆ ಮತ್ತು ವಿದ್ಯಾರ್ಥಿನಿಯೊಬ್ಬಳು ಎದುರಿಸಿದ ಬೆದರಿಕೆಯನ್ನು ಅತ್ಯಂತ ಕಟು ಪದಗಳಲ್ಲಿ ಖಂಡಿಸಬೇಕು ಎಂಬುದು ಸತ್ಯ. ಆದರೆ, ಅಭಿವ್ಯಕ್ತಿಗೆ ಸಂವಿಧಾನ ನೀಡಿರುವ ಸ್ವಾತಂತ್ರ್ಯದ ಅಡಿ ಭಾರತದ ಏಕತೆಯನ್ನೂ ಪ್ರಶ್ನಿಸಬಹುದೇ ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಇದೆ. ಹಾಗಾಗಿ, ವ್ಯಕ್ತಿಯೊಬ್ಬ ರಾಷ್ಟ್ರೀಯವಾದಿಯೋ, ರಾಷ್ಟ್ರ ವಿರೋಧಿಯೋ ಎಂಬುದಕ್ಕಿಂತ, ದೇಶದ ಏಕತೆಯನ್ನು ಕಾಪಾಡಬೇಕು ಎಂದು ಸಂವಿಧಾನ ಹೇಳಿರುವ ಮಾತನ್ನು ಆತ ಗೌರವಿಸುತ್ತಾನೋ, ಇಲ್ಲವೋ ಎಂಬುದು ಈಗ ನಮ್ಮೆದುರು ಇರುವ ಪ್ರಶ್ನೆ.
ಉಳಿದ ವಿಚಾರಗಳು ಏನೇ ಇರಲಿ, ಸಂವಿಧಾನದ 51(ಎ) ವಿಧಿಯು ದೇಶದ ನಾಗರಿಕರು ಪಾಲಿಸಬೇಕಾದ ಮೂಲಭೂತ ಕರ್ತವ್ಯಗಳನ್ನು ಹೇಳುತ್ತದೆ: ‘ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳುವುದು, ಸಂವಿಧಾನ ಪ್ರತಿಪಾದಿಸುವ ಆದರ್ಶಗಳನ್ನು, ಅದು ಸ್ಥಾಪಿಸಿದ ಸಂಸ್ಥೆಗಳನ್ನು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು ದೇಶದ ಪ್ರತಿ ಪ್ರಜೆಯ ಕರ್ತವ್ಯ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ನೀಡಿದ ಮಹೋನ್ನತ ಆದರ್ಶಗಳನ್ನು ಪೋಷಿಸುವುದು, ಪಾಲಿಸುವುದು ಪ್ರಜೆಯ ಕರ್ತವ್ಯ. ದೇಶದ ಸಾರ್ವಭೌಮತ್ವ ಹಾಗೂ ಏಕತೆಯನ್ನು ಕಾಪಾಡುವುದು ಪ್ರಜೆಯ ಕರ್ತವ್ಯ...’

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೇಳುವವರು, ಆ ಸ್ವಾತಂತ್ರ್ಯವು ಮೂಲಭೂತ ಕರ್ತವ್ಯಗಳ ಆವರಣವನ್ನು ದಾಟುವಂತಿಲ್ಲ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು.


ಒಂದನ್ನು ಮಾತ್ರ ಪಡೆದು, ಇನ್ನೊಂದನ್ನು ಬದಿಗೆ ಎಸೆಯಲು ಅವಕಾಶವಿಲ್ಲ.

(ಲೇಖಕ ಪ್ರಸಾರ ಭಾರತಿ ಮಂಡಳಿ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT