ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾ.ಮಾ.ನಾಯಕ ಮತ್ತು ರಾಜ್ಯೋತ್ಸವ ಪ್ರಶಸ್ತಿ

Last Updated 9 ನವೆಂಬರ್ 2017, 19:30 IST
ಅಕ್ಷರ ಗಾತ್ರ

ವರ್ತಮಾನದಲ್ಲಿ ನಿಂತು ಇತಿಹಾಸವನ್ನು ನೋಡುವುದು ಅರ್ಥಪೂರ್ಣ. ಇತಿಹಾಸ ಮತ್ತು ವರ್ತಮಾನದ ನಡುವಿನ ಪಯಣ ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿರುತ್ತದೆ.

ಎಂಬತ್ತರ ದಶಕದ ಆರಂಭದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಹಾ.ಮಾ.ನಾಯಕ ಅವರು ಬಿತ್ತಿದ ಬೀಜ ಹೆಮ್ಮರವಾಗಿ ವರ್ತಮಾನದಲ್ಲಿ ಫಲ ಕೊಡುತ್ತಿದೆ.

ಆ ದಿನಗಳಲ್ಲಿ ಹೈದರಾಬಾದ್‌ ಕರ್ನಾಟಕ ಪ್ರದೇಶದ ಸ್ಥಿತಿಯನ್ನು ಬಲ್ಲವರು ಈಗಲೂ ಗಾಬರಿಯಿಂದ ಮಾತನಾಡುತ್ತಾರೆ. ಹಿಂದುಳಿಯುವಿಕೆಗೆ ಮತ್ತೊಂದು ಹೆಸರು ಇದಾಗಿತ್ತು.

ಪ್ರಾದೇಶಿಕ ಅಸಮಾನತೆ ಎದ್ದು ಕಾಣಿಸುತ್ತಿತ್ತು. ಐತಿಹಾಸಿಕ ಮತ್ತು ಭೌಗೋಳಿಕ ಕಾರಣಗಳಿಗಾಗಿ ಕನ್ನಡ ಭಾಷೆ ಕನ್ನಡದ ನೆಲದಲ್ಲೇ ಸೊರಗಿತ್ತು. ಅಂದರೆ, ನಿಜಾಮರ ಆಳ್ವಿಕೆಯಲ್ಲಿ ಉರ್ದು ಭಾಷೆ ಕನ್ನಡದ ಮೇಲೆ ಸವಾರಿ ಮಾಡಿತ್ತು. ಬೀದರ್‌, ಕಲಬುರ್ಗಿ, ರಾಯಚೂರು ಜಿಲ್ಲೆಗಳು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳೊಂದಿಗೆ ಗಡಿಯನ್ನು ಹಂಚಿಕೊಂಡಿರುವುದರಿಂದ ಮರಾಠಿ, ತೆಲುಗು ಭಾಷೆಗಳ ಪ್ರಭಾವ ದಟ್ಟವಾಗಿತ್ತು.

ಅರವತ್ತು ವರ್ಷಗಳ ಹಿಂದೆ ಪದವಿ ತರಗತಿಗಳಲ್ಲಿ ವಿದ್ಯಾರ್ಥಿಗಳು ಐಚ್ಚಿಕ ಕನ್ನಡದ ಬದಲು ಉರ್ದು, ಮರಾಠಿ, ಹಿಂದಿ ಭಾಷೆಗಳನ್ನು ತೆಗೆದುಕೊಳ್ಳುತ್ತಿದ್ದರು.

ಬಹುತೇಕ ಜನ ಉರ್ದು, ಹಿಂದಿ, ಮರಾಠಿ ಮಾತನಾಡುತ್ತಿದ್ದರು. ವ್ಯವಹಾರದಲ್ಲೂ ಕನ್ನಡದ ಬಳಕೆ ಇರಲಿಲ್ಲ. ಅಂಥ ಸಂದರ್ಭದಲ್ಲಿ ಕನ್ನಡದ ಕವಿಗಳು, ಕಥೆಗಾರರು, ಚಿಂತಕರು, ಸಂಶೋಧಕರು ಪ್ರೋತ್ಸಾಹ ಸಿಗದೇ ‘ಅಜ್ಞಾತ’ರಾಗಿದ್ದರು. ಏಕೆಂದರೆ, ಈ ಭಾಗದಲ್ಲಿ ಪ್ರಕಾಶಕರೇ ಇರಲಿಲ್ಲ. ಇಲ್ಲಿಯ ಸಾಹಿತಿಗಳು ಬೆಂಗಳೂರಿನತ್ತ ನೋಡಬೇಕಿತ್ತು. ಆದರೆ, ಅಲ್ಲಿಯ ಪ್ರಕಾಶಕರು, ವಿಮರ್ಶಾಲೋಕ ಇಲ್ಲಿಯವರನ್ನು ಸಾಹಿತಿಗಳು ಎಂದು ಪರಿಗಣಿಸುತ್ತಲೇ ಇರಲಿಲ್ಲ! ಇಲ್ಲಿಯ ಮಂದಿಗೆ ಬೆಂಗಳೂರು ಭೌತಿಕ ಮತ್ತು ಮಾನಸಿಕವಾಗಿ ದೂರವೇ ಇತ್ತು.

‘ಆ ದಿನಗಳಲ್ಲೂ ಉತ್ತರ ಕರ್ನಾಟಕದಲ್ಲಿ ಚೆನ್ನಾಗಿ ಬರೆಯುವವರು ಇದ್ದರು. ಆದರೆ, ನಮ್ಮವರ ಕೃತಿಗಳು ಕೃಷ್ಣಾ ನದಿ ದಾಟಿ ಮುಂದೆ ಹೋಗುತ್ತಲೇ ಇರಲಿಲ್ಲ. ಹೀಗಾಗಿ ರಾಜ್ಯಮಟ್ಟದಲ್ಲಿ ಇಲ್ಲಿನ ಸಾಹಿತಿಗಳ ಕೃತಿಗಳು ವಿಮರ್ಶೆಗೆ ಒಳಪಡುತ್ತಲೂ ಇರಲಿಲ್ಲ’ ಎಂದು ವಿದ್ವಾಂಸರಾದ ಪ್ರೊ.ಮ.ಗು.ಬಿರಾದಾರ ಬೇಸರದಿಂದ ಹೇಳುತ್ತಾರೆ.

ಇವೆಲ್ಲ ಸಮಸ್ಯೆಗಳಿಗೆ ಪರಿಹಾರ ವಿಶ್ವವಿದ್ಯಾಲಯದಲ್ಲಿ ಪ್ರಸಾರಾಂಗವನ್ನು ಆರಂಭಿಸುವುದೇ ಆಗಿದೆ ಎನ್ನುವುದು ಮ.ಗು.ಬಿರಾದಾರ ಅವರಿಗೆ ಬಲವಾಗಿ ಅನಿಸಿತ್ತು. ಇವರು ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. ಅಂದಿನ ಕುಲಪತಿ ನಾಗರಾಜ ಅವರನ್ನು ಕಂಡು ಪ್ರಸಾರಾಂಗದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ಪ್ರಸಾರಾಂಗ ಶುರುವಾಯಿತು. ಅದರ ಮೊದಲ ನಿರ್ದೇಶಕ ಕೂಡ ಇವರೇ ಆದರು.

1984 ರಲ್ಲಿ ಹಾ.ಮಾ.ನಾಯಕ ಅವರು ಕುಲಪತಿಯಾದರು. ಸಾಹಿತಿಯಾಗಿ ಕನ್ನಡನಾಡನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ ಅವರು ಆಡಳಿತಗಾರರಾಗಿ ಕನಸು ಹಾಗೂ ದೂರದರ್ಶಿತ್ವವನ್ನು ಹೊಂದಿದ್ದರು. ಆದ್ದರಿಂದಲೇ ಅವರಿಗೆ ಹೈದರಾಬಾದ್‌ ಕರ್ನಾಟಕವು ಅಸಮಾನತೆಯಿಂದ ಹಿಂದುಳಿದಿರುವುದು, ಇಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವಲಯ ತಳಮಟ್ಟದ ಉತ್ತೇಜನದ ಕೊರತೆಯಿಂದ ನಲುಗಿರುವುದು ಅರಿವಿಗೆ ಬಂದಿತ್ತು. ಇವುಗಳಿಂದ ಹೊರತಂದು ಮೇಲೆತ್ತುವ ಸಲುವಾಗಿ ಪ್ರಸಾರಾಂಗದ ಮೂಲಕ ‘ರಾಜ್ಯೋತ್ಸವ ಪ್ರಶಸ್ತಿ’ ಕೊಡುವುದನ್ನು ಶುರು ಮಾಡಿದರು.

ಕಲಬುರ್ಗಿ ವಿಭಾಗದ ಉರ್ದು, ಮರಾಠಿ, ಹಿಂದಿ, ಇಂಗ್ಲಿಷ್‌ ಭಾಷಾ ಲೇಖಕರು, ಚಿತ್ರಕಲಾವಿದರು, ಪ್ರಕಾಶಕರು, ಜಾನಪದ ಕಲಾವಿದರು ಹಾಗೂ ಗಡಿನಾಡ ಕನ್ನಡಿಗರನ್ನು ಗುರುತಿಸಿ ಪ್ರತಿ ವರ್ಷ ಪ್ರಶಸ್ತಿಗಳನ್ನು ಕೊಡುವುದು ರೂಢಿ ಆಯಿತು.

ನಂತರದಲ್ಲಿ ‘ರಾಜ್ಯೋತ್ಸವ ಪ್ರಶಸ್ತಿ ’ಜೊತೆಗೆ ‘ದಿವಂಗತ ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ರಾಜ್ಯಮಟ್ಟದ ಕನ್ನಡ ಕಥಾಸ್ಪರ್ಧೆ’ ಸೇರ್ಪಡೆ ಆಯಿತು. ಸಾಹಿತಿಯೂ ಆಗಿದ್ದ ಜಯತೀರ್ಥ ರಾಜಪುರೋಹಿತ ಅವರು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದರು. ಅವರ ನೆನಪಿಗಾಗಿ ಬಂಧುವೊಬ್ಬರು ಈ ಪ್ರಶಸ್ತಿಯನ್ನು ಆರಂಭಿಸಿದರು. ಮೊದಲ ವರ್ಷ ಅಮರೇಶ ನುಗಡೋಣಿ ಪ್ರಶಸ್ತಿ ಗೆದ್ದುಕೊಂಡರು. ನಂತರದಲ್ಲಿ ಎಚ್‌.ಟಿ.ಪೋತೆ, ಕೆ.ನೀಲಾ, ರಾಜಶೇಖರ ಹತಗುಂದಿ, ಮಹಾಂತೇಶ ನವಲಕಲ್‌...

ಇಲ್ಲಿಯವರೆಗೆ ನೂರಾರು ಮಂದಿ ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದರಿಂದ ಉತ್ತೇಜಿತರಾದ ಕಿರಿಯರು ಹಿರಿಯರ ಹಾದಿಯಲ್ಲಿ ನಡೆದಿದ್ದಾರೆ. ರಾಜ್ಯಮಟ್ಟದಲ್ಲಿಯೂ ಗುರುತಿಸಿಕೊಂಡಿದ್ದಾರೆ.

ಹಾ.ಮಾ.ನಾಯಕರು ಸಂವೇದನಾಶೀಲರಾಗಿದ್ದರು. ತಾವು ಕೆಲಸ ಮಾಡುತ್ತಿದ್ದ ಪ್ರದೇಶದ ಹಿತವನ್ನು ಚಿಂತಿಸಿದ್ದು ಅವರ ವ್ಯಕ್ತಿತ್ವಕ್ಕೆ ಅನುರೂಪವೇ ಆಗಿತ್ತು. ಅವರಿಂದಾಗಿ ರಾಜ್ಯದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮಾತ್ರ ‘ರಾಜ್ಯೋತ್ಸವ ಪ್ರಶಸ್ತಿ’ ಕೊಡುವ ಪರಂಪರೆಯನ್ನು ಹೊಂದಿದೆ.

ಪ್ರಸಾರಾಂಗವು ಪ್ರಶಸ್ತಿ ಪಡೆದ ಕಥೆಗಳನ್ನು ಸೇರಿಸಿ ‘ಚಿನ್ನದ ಕಥೆಗಳು’ ಸಂಪುಟವನ್ನು ಹೊರತಂದಿದೆ. ಈಗ ಎರಡನೆ ಸಂಪುಟ ಸಿದ್ಧವಾಗಿದೆ. ಇಲ್ಲಿಯ ಬಹುತೇಕ ಕಥೆಗಳು ಹೈದರಾಬಾದ್‌ ಕರ್ನಾಟಕ ನೆಲದ ಸೊಗಡನ್ನು ಅಂತರ್ಗತ ಮಾಡಿಕೊಂಡಿವೆ.

‘ಅಕ್ಷರ ಹೊಸ ಕಾವ್ಯ’ವು ಪಿ.ಲಂಕೇಶ್‌ ಅವರು ಸಂಪಾದಿಸಿದ ಕನ್ನಡದ ಪ್ರಾತಿನಿಧಿಕ ಕವಿತೆಗಳ ಸಂಕಲನ. ಅದರಲ್ಲಿ ಹೈದರಾಬಾದ್‌ ಕರ್ನಾಟಕ ಪ್ರದೇಶದ ಯಾವೊಬ್ಬ ಕವಿಯ ಕವಿತೆಯೂ ಇರಲಿಲ್ಲ. ಇದಕ್ಕೆ ಸಿಟ್ಟಾದ ಸಾಹಿತಿ ಶಾಂತರಸ ಅವರು ಹಟಕ್ಕೆ ಬಿದ್ದು ‘ಬೆನ್ನ ಹಿಂದಣ ಬೆಳಕು’ ಸಂಕಲನವನ್ನು ಹೊರತಂದರು. ಇದು ಈ ಭಾಗದ ಸಾಹಿತ್ಯ ವಲಯದಲ್ಲಿ ನೆನಪಿನಲ್ಲಿ ಉಳಿಯುವ ಸಂಗತಿ.

‘ಪುಸ್ತಕ ಬಹುಮಾನಕ್ಕಾಗಿ ಪ್ರತಿವರ್ಷ ಐವತ್ತಕ್ಕೂ ಹೆಚ್ಚು ಕೃತಿಗಳು ಬರುತ್ತವೆ. ಅಲ್ಲದೇ ಇಲ್ಲಿನ ಕವಿಗಳ ಕವಿತೆಗಳನ್ನು, ಕಥೆಗಾರರ ಕಥೆಗಳನ್ನು ಪಠ್ಯವಾಗಿಸಿ, ರಾಜ್ಯಮಟ್ಟದವರೊಂದಿಗೆ ಸಮಾನವಾಗಿ ಇಟ್ಟು ನೋಡಲಾಗುತ್ತದೆ. ಇದರಿಂದ ಉತ್ತೇಜನ ಪಡೆದವರು ಹೆಚ್ಚಾಗಿ ಬರೆಯುತ್ತಿದ್ದಾರೆ’ ಎಂದು ಪ್ರಸಾರಾಂಗದ ನಿರ್ದೇಶಕ ಡಾ.ಎಚ್‌.ಟಿ.ಪೋತೆ ಹೆಮ್ಮೆಯಿಂದ ಹೇಳುತ್ತಾರೆ.

ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದ ‘ರಾಜ್ಯೋತ್ಸವ ಪ್ರಶಸ್ತಿ’ಯು ಈ ಪ್ರದೇಶದಲ್ಲಿ ಸಾಹಿತ್ಯಿಕವಾಗಿ ಮಹತ್ವ ಪಡೆದಿದೆ.

‘ಇತ್ತೀಚಿನ ವರ್ಷಗಳಲ್ಲಿ ಈ ಪ್ರಶಸ್ತಿಯ ಅಗತ್ಯವೇ ಕಾಣಿಸುತ್ತಿಲ್ಲ. ಏಕೆಂದರೆ ನಮ್ಮ ಭಾಗದ ಸಾಹಿತಿಗಳು, ಕಲಾವಿದರು, ಪ್ರಕಾಶಕರು ರಾಜ್ಯಮಟ್ಟದಲ್ಲೇ ಸ್ಪರ್ಧೆ ಮಾಡಿ ಗೆಲ್ಲುತ್ತಿದ್ದಾರೆ. ಅಲ್ಲದೇ ಕೆಲವರಿಗೆ ಒಂದಕ್ಕಿಂತ ಹೆಚ್ಚು ಬಾರಿ ಪ್ರಶಸ್ತಿ ಬಂದಿದೆ. ಇದರಿಂದ ಪ್ರಶಸ್ತಿಯ ಮೌಲ್ಯ ಕಡಿಮೆ ಆಗುತ್ತದೆ. ಆದ್ದರಿಂದ ಈ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಲು ಒಬ್ಬರಿಗೆ ಒಂದೇ ಸಲ ಪ್ರಶಸ್ತಿ ಕೊಡಬೇಕು. ಯುವಕ, ಯುವತಿಯರು ಬರೆದ ಮೊದಲ ಕೃತಿಗೂ ಪ್ರಶಸ್ತಿ ಕೊಡಬೇಕು. ಪ್ರಶಸ್ತಿಯ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಬೇಕು. ಆಗ ಮಾತ್ರ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಥ ಬರುತ್ತದೆ’ ಎಂದು ಕಥೆಗಾರ ಅಮರೇಶ ನುಗಡೋಣಿ ಹೇಳುತ್ತಾರೆ.

ಈ ಪ್ರಶಸ್ತಿ ಆರಂಭವಾದ ಕಾಲಘಟ್ಟ, ಈಗಿನ ಕಾಲಘಟ್ಟ ಭಿನ್ನ. ಆದ್ದರಿಂದ ಹಳೆಯ ನಿಯಮಗಳನ್ನು ಪುನರ್‌ ಪರಿಶೀಲಿಸಿ, ಹೊಸ ಕಾಲ, ಹೊಸ ಅಗತ್ಯಕ್ಕೆ ತಕ್ಕಂತೆ ರೂಪಿಸುವುದು ಅವಶ್ಯ. ಪ್ರಶಸ್ತಿಗಳ ಸಂಖ್ಯೆಗಿಂತ ಮೌಲ್ಯ, ಸಂಪ್ರದಾಯಕ್ಕಿಂತ ಪರಂಪರೆ ಮುಖ್ಯವಾಗಬೇಕು. ಏಕೆಂದರೆ ಸಮಾಜದಲ್ಲಿ ಪ್ರಶಸ್ತಿಗಳು ಗೌರವವನ್ನು ಹೆಚ್ಚು ಮಾಡುತ್ತವೆ. ಆದ್ದರಿಂದಲೇ ಪ್ರಶಸ್ತಿಗಳಿಗಾಗಿ ಅತಿಯಾಗಿ ತವಕಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ಪ್ರಶಸ್ತಿ ಕೊಡುವ ಸಂಸ್ಥೆಗಳು ದೀರ್ಘಕಾಲ ಮೌಲ್ಯವನ್ನು ಉಳಿಸಿಕೊಳ್ಳುವುದು ಸವಾಲೇ ಸರಿ.

ಯಾವುದೇ ಒಂದು ಪ್ರದೇಶವನ್ನು ಇತಿಹಾಸ ಘಾಸಿಗೊಳಿಸಿದ್ದರೆ, ಆಳುವವರು ನಿರ್ಲಕ್ಷಿಸಿದ್ದರೆ, ಕೀಳರಿಮೆಯನ್ನು ಬಿತ್ತಿ ಬೆಳೆದಿದ್ದರೆ, ಅಸಮಾನತೆಯನ್ನು ಪೊರೆದಿದ್ದರೆ, ಪ್ರತಿಭೆಗಳು ಸೊರಗಿದ್ದರೆ, ಅಂಥ ಭಾಗಕ್ಕೆ ಉದಾರತೆ, ಉತ್ತೇಜನ, ಬೆಂಬಲ ನೀಡಬೇಕಾದದ್ದು ಸಹಜ ಅನಿಸಬೇಕು. ಏಕೆಂದರೆ ಒಂದೇ ರಾಜ್ಯದಲ್ಲಿ ವಾಸಿಸುವ ಎಲ್ಲರೂ ಸಮಾನರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT