ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸೆ ಮತ್ತು ಅಹಿಂಸೆಗಳ ಬಹುರೂಪಗಳು

Last Updated 29 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಹಲ ಬಗೆಯ ಹಿಂಸೆಗಳಿಂದ ನರಳುತ್ತಿರುವ ಜಗತ್ತಿಗೆ ಅಹಿಂಸಾ ಮಾರ್ಗ ಬಿಟ್ಟರೆ ಬೇರೆ ಹಾದಿಯೆಲ್ಲಿದೆ?

ಎಂಟು ವರ್ಷಗಳ ಕೆಳಗೆ ವಿಶ್ವಸಂಸ್ಥೆ ಅಕ್ಟೋಬರ್ 2ರ ಗಾಂಧಿ ಜಯಂತಿಯ ದಿನವನ್ನು ‘ವಿಶ್ವ ಅಹಿಂಸಾ ದಿನ’ ಎಂದು ಘೋಷಿಸಿತು. ವಿಶ್ವಸಂಸ್ಥೆಯ ಈ ಘೋಷಣೆ ನಾಮಕಾವಸ್ತೆ ಎಂಬಂತೆ  ಕಂಡರೂ ಆ ಮೂಲಕವಾದರೂ ಇಡೀ ಜಗತ್ತು ಗಾಂಧೀಜಿಯವರ ಅಹಿಂಸೆಯ ತತ್ವದತ್ತ ಗಂಭೀರವಾಗಿ  ನೋಡುವ ಅವಕಾಶ ವರ್ಷಕ್ಕೊಮ್ಮೆಯಾದರೂ ಎದುರಾಗುತ್ತಿರುತ್ತದೆ ಎಂಬುದನ್ನು ಮರೆಯಲಾಗದು.

ಅಹಿಂಸೆಯ ತತ್ವವನ್ನು ಹೋರಾಟದ ಮಾರ್ಗವನ್ನಾಗಿ ಬಳಸಲೆತ್ನಿಸಿದ ಗಾಂಧೀಜಿ ಮುಂದೆ ಅಹಿಂಸೆಯ ಶ್ರೇಷ್ಠ ತತ್ವಜ್ಞಾನಿಯಾಗಿ ಬೆಳೆದ ಹಾದಿ ಕುತೂಹಲಕರವಾಗಿದೆ. ಜೈನ, ಕ್ರೈಸ್ತ, ಬೌದ್ಧ ಧರ್ಮಗಳಿಂದ ಅಹಿಂಸೆಯ ಮೊದಲ ಪ್ರೇರಣೆಗಳನ್ನು ಪಡೆದ ಗಾಂಧೀಜಿ ‘ನಾನು ಇಂಗ್ಲೆಂಡಿಗೆ ಓದಲು ಹೋಗುವ ಕಾಲದಲ್ಲಿ ಹಿಂಸೆಯ ಪರವಾಗಿದ್ದೆ; ಆಗ ಅಹಿಂಸೆಯಲ್ಲಿ ನನಗೆ ನಂಬಿಕೆಯಿರಲಿಲ್ಲ’ ಎಂದು  ಬರೆಯುತ್ತಾರೆ. 

ದಕ್ಷಿಣ ಆಫ್ರಿಕಾದಲ್ಲಿ ಟ್ರೈನಿನಿಂದ ಹೊರ ದಬ್ಬಿದ ಘಟನೆ ಹಾಗೂ ಅವರು ದಕ್ಷಿಣ ಆಫ್ರಿಕಾದ ಭಾರತೀಯರನ್ನು ಎತ್ತಿ ಕಟ್ಟುತ್ತಿದ್ದಾರೆಂದು ಆರೋಪಿಸಿ ಅವರ ಮೇಲೆ ನಡೆದ ಹಲ್ಲೆಯ ಪ್ರಯತ್ನಗಳು ಅವರನ್ನು ಹಿಂಸಾ ಮಾರ್ಗವೋ ಅಹಿಂಸಾ ಮಾರ್ಗವೋ ಎಂಬ ಗೊಂದಲದಲ್ಲಿ ಕೆಡವಿದ್ದವು; ‘ತಮ್ಮ ಮೇಲೆ ಹಿಂಸೆ ನಡೆಸಿದ್ದವರ ವಿರುದ್ಧ ಪ್ರತಿಹಿಂಸೆಯೋ, ಕ್ಷಮೆಯೋ ಎಂದು ಗಾಂಧೀಜಿ ಯೋಚಿಸುತ್ತಿದ್ದಾಗ, ಟಾಲ್ ಸ್ಟಾಯ್ ಚಿಂತನೆ ಅವರನ್ನು ಅಹಿಂಸೆಯ ಪರವಾಗಿ ವಾಲುವಂತೆ ಮಾಡಿತು’ ಎಂದು ರಾಜಮೋಹನ್ ಗಾಂಧಿ ಬರೆಯುತ್ತಾರೆ.

ಆ ಘಟ್ಟದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ನೇತೃತ್ವದಲ್ಲಿ ನಡೆದ ಒಂದು ಚಳವಳಿ ಅವರ ಅಸ್ಪಷ್ಟ ಅಹಿಂಸಾ ಚಿಂತನೆಯನ್ನು ಹೋರಾಟದ ಸ್ಪಷ್ಟ ಮಾರ್ಗವನ್ನಾಗಿ ರೂಪಿಸಿದಂತಿದೆ. ದಕ್ಷಿಣ ಆಫ್ರಿಕಾದ ಟ್ರಾನ್‌ಸ್ವಾಲ್ ಪ್ರದೇಶದ ಸರ್ಕಾರ ಇಂಡಿಯಾದಿಂದ ವಲಸೆ ಬಂದವರಿಗೆ ಮತದಾನದ ಹಕ್ಕೂ ಸೇರಿದಂತೆ ಹಲವು ಹಕ್ಕುಗಳನ್ನು ಮೊಟಕು ಮಾಡಿತು. ಈ ‘ಬ್ಲ್ಯಾಕ್ ಆ್ಯಕ್ಟ್’ ವಿರೋಧಿಸಲು ಭಾರತೀಯರು ತೀರ್ಮಾನಿಸಿದರು. ಆಗ ಗಾಂಧೀಜಿ ‘ಇಡೀ ಪ್ರತಿಭಟನೆ ಶಾಂತಿಯುತವಾಗಿರಬೇಕು; ನನ್ನ  ಪ್ರಕಾರ ಅಹಿಂಸೆಯೆನ್ನುವುದು ಆಲೋಚನೆ, ನಡೆ, ನುಡಿಗಳಲ್ಲಿಯೂ ಇರಬೇಕು; ಅಹಿಂಸೆಯೆಂದರೆ ಇನ್ನೊಬ್ಬರಿಗೆ ನೋವುಂಟು ಮಾಡುವ ಬಯಕೆಯೇ ಇರಬಾರದು ಎಂದರ್ಥ’ ಎಂಬ ಸ್ಪಷ್ಟ ಸಂದೇಶದೊಂದಿಗೆ ಚಳವಳಿ ಶುರು ಮಾಡಿದರು.

ಅವರ ಅಹಿಂಸಾ ಹೋರಾಟದ ಮೊದಲ ಘಟ್ಟ ಸುಗಮವಾಗಿಯೇನೂ ಇರಲಿಲ್ಲ;  ವಸಾಹತು ಸರ್ಕಾರದ ಜನರಲ್  ಸ್ಮಟ್ಸ್  ಸಮಸ್ಯೆ ಬಗೆಹರಿಸುವ ಭರವಸೆ ನೀಡುತ್ತಾ ಕಾಲ ತಳ್ಳುತ್ತಿದ್ದ. ಗಾಂಧೀಜಿ ತಾಳ್ಮೆ ಕಳೆದುಕೊಳ್ಳದೆ ತಮ್ಮ ಸಂಗಾತಿಗಳ ಜೊತೆ ಪಾದಯಾತ್ರೆ ಮಾಡುತ್ತಾ, ಕಾನೂನು ಭಂಗ ಚಳವಳಿ ನಡೆಸುತ್ತಲೇ ಇದ್ದರು. ಜೊತೆಗೆ ಜೋಹಾನ್ಸ್‌ಬರ್ಗಿನ ಗಣಿ ಕಾರ್ಮಿಕರ ಮುಷ್ಕರವನ್ನೂ ಬೆಂಬಲಿಸುತ್ತಿದ್ದರು. ಒಂದೇ ಒಂದು ಹಿಂಸೆಯ ಘಟನೆಯೂ ನಡೆಯಲಿಲ್ಲ; ಆದರೆ ಬೇಡಿಕೆಗಳೂ ಈಡೇರಲಿಲ್ಲ. ಆಗ ನಡೆದ ಒಂದು ಘಟನೆ ಗಾಂಧಿ ಅವರ ಅಹಿಂಸಾ ಮಾರ್ಗದ ಸಂಕೀರ್ಣ ಸ್ವರೂಪವನ್ನು ಹೇಳುತ್ತದೆ: ಚಳವಳಿಯ ಒಂದು ಘಟ್ಟದಲ್ಲಿ ಜನರಲ್ ಸ್ಮಟ್ಸ್ ಮಣಿಯಬೇಕಾದ ಸಂದರ್ಭ ಬಂತು. ಆಗ ದಕ್ಷಿಣ ಆಫ್ರಿಕದುದ್ದಕ್ಕೂ ರೈಲ್ವೆ ಮುಷ್ಕರ ನಡೆಯುತ್ತಿತ್ತು.

ಆ ಘಟ್ಟದಲ್ಲಿ ಗಾಂಧೀಜಿ ಕೂಡ ದಕ್ಷಿಣ ಆಫ್ರಿಕಾದ ಭಾರತೀಯರ ಪ್ರತಿಭಟನಾ ಮೆರವಣಿಗೆಯೊಂದನ್ನು ಏರ್ಪಡಿಸಬೇಕಾಗಿತ್ತು. ಆದರೆ ಅಹಿಂಸೆಯ ಪಾಲನೆಯಲ್ಲಿ ಇದ್ದ ಕೆಲವು ನೈತಿಕ ನಿಯಮಗಳಲ್ಲಿ ಎದುರಾಳಿ ಕಷ್ಟದಲ್ಲಿದ್ದಾಗ ಅವನ ದುರ್ಬಲ ಸ್ಥಿತಿಯ ಬಳಕೆ ಮಾಡಿಕೊಳ್ಳಬಾರದು ಎನ್ನುವುದೂ ಸೇರಿತ್ತು. ಗಾಂಧೀಜಿ ಆ ನೈತಿಕ ನಿಯಮವನ್ನು ಅನುಸರಿಸಿದರು. ಸ್ಮಟ್ಸ್‌ಗೆ ಗಾಂಧಿಯ ಅಹಿಂಸಾ ತತ್ವದ ಮಹತ್ವ ಅರಿವಾಗತೊಡಗಿತು.

ಇದೆಲ್ಲ ನಡೆದ 30 ವರ್ಷಗಳ ನಂತರ  ಸ್ಮಟ್ಸ್  ‘ಅವರು ನನ್ನನ್ನು ವಿರೋಧಿಸುವ ಗುಂಪಿಗೆ ಸೇರಿದ್ದಾಗಲೂ ಅವರ ಬಗ್ಗೆ ನನಗೆ ಅತ್ಯಂತ ಗೌರವವಿತ್ತು. ಅವರು ಒಂದು ಸನ್ನಿವೇಶದ ಮಾನವೀಯ ಹಿನ್ನೆಲೆಯನ್ನು ಎಂದೂ ಮರೆತವರಲ್ಲ’ ಎಂದು ಕೃತಜ್ಞತೆಯಿಂದ ನೆನೆಸಿಕೊಳ್ಳುತ್ತಾನೆ. ಈ ನಡುವೆ ದಕ್ಷಿಣ ಆಫ್ರಿಕಾದ ಜೈಲಿನಲ್ಲಿ ಆಗಾಗ್ಗೆ ಬಂಧಿಯಾಗುತ್ತಿದ್ದ ಗಾಂಧೀಜಿ ಅಲ್ಲಿ  ಬೂಟು ಮಾಡುವುದನ್ನೂ ಕಲಿತಿದ್ದರು.

ಇಪ್ಪತ್ತು ವರ್ಷಗಳ ನಂತರ ದಕ್ಷಿಣ ಆಫ್ರಿಕಾ ಬಿಡುವ ಮುನ್ನ ಜನರಲ್ ಸ್ಮಟ್ಸ್‌ನನ್ನು ಕಂಡ ಗಾಂಧೀಜಿ ತಾವು ಜೈಲಿನಲ್ಲಿದ್ದಾಗ ಹೊಲೆದಿದ್ದ ಶೂಗಳನ್ನು ಅವನಿಗೆ ಉಡುಗೊರೆಯಾಗಿ ಕೊಟ್ಟರು. ಹಲವು ವರ್ಷಗಳ ನಂತರ  ಸ್ಮಟ್ಸ್ ಹೇಳಿದ ಮಾತು: ‘ಈ ಶೂಗಳನ್ನು ಹಲವು ಬೇಸಿಗೆಗಳಲ್ಲಿ ಬಳಸಿದ್ದೇನೆ; ಆದರೆ ಅಂಥ ದೊಡ್ಡ ಮನುಷ್ಯ ಮಾಡಿದ ಶೂಗಳಲ್ಲಿ ಕಾಲಿಟ್ಟು ನಿಲ್ಲುವ ಯೋಗ್ಯತೆ ನನಗಿಲ್ಲವೆಂಬುದು ನನಗೆ ಗೊತ್ತು’. ಗಾಂಧೀಜಿ ತೀರಿಕೊಂಡ ಮೇಲೆ ಸ್ಮಟ್ಸ್ ಆ ಶೂಗಳನ್ನು ದೆಹಲಿಯ ಗಾಂಧಿ ಮ್ಯೂಸಿಯಂಗೆ ಕಳಿಸಿದ. ಇದು ಗಾಂಧಿ ಅವರ ಅಹಿಂಸಾ ತತ್ವ ಎದುರಾಳಿಯ ಮನಸ್ಸಿನಲ್ಲಿದ್ದ ಹಿಂಸೆಯನ್ನು ಮಣಿಸಿದ ಒಂದು ಉದಾಹರಣೆ ಮಾತ್ರ.

‘ಏಸು ಕ್ರಿಸ್ತ ಪ್ರೀತಿ ಮತ್ತು ಅಹಿಂಸೆಯ ಶ್ರೇಷ್ಠ ಗುರು ಇರಬಹುದು. ಆದರೆ 40 ವರ್ಷಗಳಿಗೂ ಹೆಚ್ಚು ಕಾಲ ಪ್ರೀತಿ ಮತ್ತು ಅಹಿಂಸೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಗಾಂಧೀಜಿ ಆ ಗುಣಗಳಿಗೆ ಪ್ರತಿನಿಧಿಯಾಗಿದ್ದರು’ ಎಂದು ಲೋಹಿಯಾ ಬರೆಯುತ್ತಾರೆ. ಹಿಂಸಾಮಯ ಬ್ರಿಟಿಷ್ ಸರ್ಕಾರದ ವಿರುದ್ಧ ಅಹಿಂಸೆಯನ್ನು ಪ್ರಬಲ ಅಸ್ತ್ರವಾಗಿ ಬಳಸುತ್ತಲೇ ಗಾಂಧೀಜಿ ಹಿಂಸೆ, ಅಹಿಂಸೆಗಳ ಅರ್ಥಗಳನ್ನು ಅತಿಸೂಕ್ಷ್ಮವಾಗಿ, ಹಲವು ನೆಲೆಗಳಲ್ಲಿ ವಿಸ್ತರಿಸಿದರು. ಅವರು ‘ಬಡತನವನ್ನು ಹಿಂಸೆಯ ಅತ್ಯಂತ ಕೆಟ್ಟ ರೂಪ’ ಎಂದದ್ದನ್ನು ಹಾಗೂ ಅಸ್ಪೃಶ್ಯತೆಯ ಹಿಂಸೆಯ ವಿರುದ್ಧ ಅವರು ಸಾರಿದ ಯುದ್ಧವನ್ನು ಅವರು ಹಿಂಸೆಯ ವಿರುದ್ಧ ನಡೆಸಿದ ಹೋರಾಟದ ಭಾಗವನ್ನಾಗಿಯೇ ನೋಡಬೇಕು.

ಗಾಂಧೀಜಿ ಅಹಿಂಸಾತತ್ವವನ್ನು ಜನಸಾಮಾನ್ಯರಿಗೆ ಮಾತ್ರವಲ್ಲ; ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವವರಿಗೆ, ಬ್ರಿಟಿಷರಿಗೆ, ಭೂಮಾಲೀಕರಿಗೆ ಹಾಗೂ ಶೋಷಕರಿಗೂ ಬೋಧಿಸುತ್ತಿದ್ದರು. ಹಿಂಸೆಯನ್ನು ಪ್ರಯೋಗಿಸುವ ವ್ಯಕ್ತಿ ಮೂಲತಃ ಹೇಡಿಯಾಗಿರುತ್ತಾನೆ; ಆದ್ದರಿಂದಲೇ ತಾನು ಶೂರನೆಂದು ಒತ್ತಿ ಹೇಳಲು ಪ್ರಯತ್ನಿಸುತ್ತಿರುತ್ತಾನೆ ಎಂಬ ಸತ್ಯ ಕೂಡ ಗಾಂಧೀತತ್ವದ ಬೆಳಕಿನಲ್ಲಿ ನಮಗೆ ಕಾಣತೊಡಗುತ್ತದೆ. ‘ತೀರ ಮೆಲುವಾದ ರೀತಿಯಲ್ಲಿಯೇ ನೀವು ಜಗತ್ತನ್ನು ಅಲುಗಾಡಿಸಬಹುದು’ ಎಂದು ನಂಬಿದ್ದ ಗಾಂಧೀಜಿ ‘ಕಣ್ಣಿಗೆ ಕಣ್ಣು ಎಂಬ ನಿಯಮವನ್ನು ನೀವು ಅನುಸರಿಸಿದರೆ ಇಡೀ ಜಗತ್ತೇ ಕುರುಡರಿಂದ ತುಂಬಿ ಹೋಗುತ್ತದೆ’ ಎಂದು ಎಚ್ಚರಿಸಿದ್ದರು.

ಅಹಿಂಸೆಯೊಂದು ವಿಶಿಷ್ಟ ಆಧ್ಯಾತ್ಮಿಕ ತತ್ವವೆಂಬಂತೆ ಗಾಂಧೀಜಿ ವಿವರಿಸುತ್ತಿದ್ದರೂ ಅದು ಜಗತ್ತಿನ ಎಲ್ಲ ಜನಸಾಮಾನ್ಯರು ಅನುಸರಿಸುತ್ತಿರುವ ಸಹಜಮಾರ್ಗ ಎಂದು ಕೂಡ ನಂಬಿದ್ದರು. ಅದು  ಮಾತುಕತೆಯಿಂದ ಜಗಳಗಳನ್ನು ಬಗೆಹರಿಸಿಕೊಳ್ಳುವ ಸರಳ ಮಾರ್ಗ ಎಂಬುದನ್ನೂ ತೋರಿಸಿದ್ದರು. ‘ಜನಸಮೂಹಕ್ಕೆ ಅಹಿಂಸೆಯನ್ನು ಪಾಲಿಸುವುದು ಕಷ್ಟ’ ಎಂದ ಗೆಳೆಯನಿಗೆ ಗಾಂಧೀಜಿ ಹೇಳಿದ್ದರು: ‘ಜನಸಮೂಹ ತನ್ನ ನಿತ್ಯದ ಚಟುವಟಿಕೆಗಳನ್ನು ತೀರ ಸಹಜವಾಗಿ, ಶಾಂತಿಯುತವಾಗಿ ನಡೆಸಿಕೊಂಡು ಹೋಗುತ್ತಿರುತ್ತದೆ; ಜನರು ಮೂಲತಃ ಹಿಂಸಾಪ್ರವೃತ್ತಿಯವರಾಗಿದ್ದರೆ, ಇಷ್ಟು ಹೊತ್ತಿಗೆ ಈ ಜಗತ್ತೇ ಇರುತ್ತಿರಲಿಲ್ಲ.’ ಆದ್ದರಿಂದಲೇ ‘ಹಿಟ್ಲರ್ ಈ ಜಗತ್ತಿನಲ್ಲಿ ಹರಿಸಿದ ರಕ್ತವೆಲ್ಲ ಸೇರಿದರೂ ಈ ಜಗತ್ತಿನ ನೈತಿಕ ಘನತೆಯನ್ನು ಒಂದು ಸೂಜಿಮೊನೆಯಷ್ಟನ್ನಾದರೂ ಏರಿಸಲು ಸಾಧ್ಯವಾಗಿಲ್ಲ’ ಎಂದು ಗಾಂಧೀಜಿ ಹೇಳಿದ್ದರು.

ಪ್ರಜಾಪ್ರಭುತ್ವ ಮತ್ತು ಹಿಂಸೆ ಎಂದೂ ಒಟ್ಟಿಗೇ ಹೋಗಲಾರವು ಎಂದು ಗಾಂಧೀಜಿ ಅವತ್ತು ಎಚ್ಚರಿಸಿದ್ದು ಈಗ ಎಲ್ಲರಿಗೂ ಅರಿವಾಗತೊಡಗಿದೆ. ಸದಾ ಯುದ್ಧ ಹಾಗೂ ಹಿಂಸೆಯ ಮಾತನ್ನಾಡುತ್ತಿದ್ದ ರಾಷ್ಟ್ರಗಳೇ ಕ್ರಮೇಣ ಶಾಂತಿ ಸಂಧಾನ, ಅಲಿಪ್ತ ನೀತಿ ಇತ್ಯಾದಿಗಳ ಕಡೆಗೆ ಹೊರಳತೊಡಗಿವೆ. ಅಂದರೆ, ಹಿಂಸೆಯ ಮಾರ್ಗವನ್ನು ಮುಂದುವರಿಸಲಾಗದು ಎಂಬ ಖಚಿತ ತಿಳಿವಳಿಕೆಯತ್ತಲೂ ಜಗತ್ತು ಸಾಗತೊಡಗಿದೆ. ಬುದ್ಧನಿಂದ ಪ್ರಭಾವಿತರಾಗಿದ್ದ ಅಂಬೇಡ್ಕರ್ ಅವರು ದಲಿತ ಚಳವಳಿ ಎಂದೂ ಹಿಂಸೆಗೆ ಇಳಿಯದಂತೆ ಎಚ್ಚರಿಸುತ್ತಿದ್ದರು.

ಚೌದಾರ್ ಕೆರೆಯ ನೀರನ್ನು ಮುಟ್ಟಿದ ಮಹಾಡ್ ಸತ್ಯಾಗ್ರಹದ ಸಂದರ್ಭದಲ್ಲಿ ದಲಿತರ ಮೇಲೆ ಹಲ್ಲೆಯಾದಾಗ ಅಂಬೇಡ್ಕರ್ ಮರಳಿ ಕೈ ಎತ್ತದಂತೆ ದಲಿತರನ್ನು ಕೇಳಿಕೊಂಡದ್ದೇಕೆ ಎಂಬುದನ್ನು ಕುರಿತು ನಾವು ಆಳವಾಗಿ ಯೋಚಿಸಬೇಕು. ಗಾಂಧೀಜಿ ನಂತರ, ಅಮೆರಿಕದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ದಲೈ ಲಾಮಾ, ನೆಲ್ಸನ್ ಮಂಡೇಲ, ಆಂಗ್ ಸಾನ್ ಸೂಕಿ, ಇಬ್ರಾಹಿಂ ರುಗೋವ ಥರದವರು ಗಾಂಧಿ ಮಾರ್ಗದಲ್ಲಿ ನಡೆಸಿದ ಜನರ ಚಳವಳಿಗಳು ಹಾಗೂ ಜಗತ್ತಿನಲ್ಲಿ ವಿವಿಧ ಬಗೆಯ ಹಕ್ಕುಗಳ ಹಾಗೂ ಪರಿಸರ ಚಳವಳಿಗಳು ಅಹಿಂಸೆಯ ಮಾರ್ಗದಲ್ಲಿ ನಡೆಯುತ್ತಿರುವುದನ್ನು ಚರಿತ್ರಕಾರರು  ದಾಖಲಿಸಿದ್ದಾರೆ.

ಇದಕ್ಕೆ ವಿರುದ್ಧವಾಗಿ, ಧರ್ಮವನ್ನು ಕ್ರೂರ ಆಯುಧಗಳನ್ನಾಗಿ ಬಳಸುತ್ತಿರುವವರ ಹಿಂಸೆಯೂ ಅಪಾಯಕಾರಿಯಾಗಿ ಬೆಳೆಯತೊಡಗಿದೆ. ಇಸ್ಲಾಮಿಕ್ ರಾಷ್ಟ್ರ ಅಥವಾ ಹಿಂದೂ ರಾಷ್ಟ್ರ ಕಟ್ಟುತ್ತೇವೆ ಎನ್ನುತ್ತಿರುವವರು ಜನರ ಮನಸ್ಸನ್ನು ಧರ್ಮದ ಮೂಲ ಆಶಯಗಳ ಕಡೆಗೆ ಹೊರಳಿಸದೆ, ಹಿಂಸೆಯನ್ನು ಪ್ರಚೋದಿಸುತ್ತಿರುವುದು ಜಗತ್ತಿನ ನರಕವನ್ನು ಹೆಚ್ಚಿಸುತ್ತಿದೆ. ಅದರ ಜೊತೆಗೇ ಹಿಂಸಾನಂದ ಪ್ರವೃತ್ತಿಯೂ ಜನರಲ್ಲಿ ಕಾಯಿಲೆಯಂತೆ ಹಬ್ಬುತ್ತಿದೆ. ಇತರರಿಗೆ ಕಿರುಕುಳ ಕೊಟ್ಟು ಹಿಂಸಾನಂದ ಪಡೆಯುತ್ತಿರುವವರು ಒಂದು ಬಗೆಯ ಮನೋರೋಗಿಗಳೂ ಆಗಿರುತ್ತಾರೆ. ಅನೇಕರಿಗೆ ತಮ್ಮ ಅನಗತ್ಯ ಹಿಂಸಾಮಯ ವರ್ತನೆಗೆ ದೇಹದ ಅತಿಯಾದ ಬ್ಲಡ್ ಪ್ರೆಷರ್ ಕೂಡ ಕಾರಣವಿರಬಹುದೆಂಬ ಸಾಮಾನ್ಯ ಜ್ಞಾನ ಕೂಡ ಇರುವುದಿಲ್ಲ.

‘ನಾನೇಕೆ ಪರಪೀಡಕನಾಗಿದ್ದೇನೆ’ ಎಂದು ಚಣ ನಿಂತು ಆತ್ಮಪರೀಕ್ಷೆ ಮಾಡಿಕೊಳ್ಳುವ ಸೂಕ್ಷ್ಮತೆಯಿಲ್ಲದ ಜನ ಭೀಕರ ಹಿಂಸಾಪಟುಗಳಾಗತೊಡಗುತ್ತಾರೆ. ಹೀಗೆ ವ್ಯಕ್ತಿಗಳಲ್ಲಿ ಆದದ್ದು ಅವರು ಕಟ್ಟುತ್ತಿರುವ ವ್ಯವಸ್ಥೆಗಳಲ್ಲೂ ಆಗತೊಡಗಿದೆ. ‘ಓಹ್!  ರಾಕ್ಷಸನ ಶಕ್ತಿ ಪಡೆಯುವುದೇನೋ ಅದ್ಭುತವೇ; ಆದರೆ ಅದನ್ನು ರಾಕ್ಷಸನಂತೆ ಬಳಸುವುದು ಭಯಾನಕ’  ಎಂದು ಶೇಕ್‌ಸ್ಪಿಯರ್‌ ಪಾತ್ರವೊಂದು ಉದ್ಗರಿಸಿದ್ದು ನೆನಪಾಗುತ್ತಿದೆ.

ಹಿಂಸೆಯ ಈ ಬಗೆಯ ತಾತ್ವಿಕ ಗ್ರಹಿಕೆಗಳ ನಡುವೆ, ನಮ್ಮ ನಿತ್ಯದ ವರ್ತನೆಗಳ ಮೂಲಕವೂ ಸೃಷ್ಟಿಯಾಗುವ ಹಿಂಸೆಗಳನ್ನೂ ಗಮನಿಸುತ್ತಿರಬೇಕಾಗುತ್ತದೆ: ದೇವರ ‘ಪ್ರೀತಿಗಾಗಿ’ ದಿನ ರಾತ್ರಿ ಮೈಕು ಹಾಕಿ ಕಿರುಚುವವರು ಸೂಕ್ಷ್ಮಜೀವಿಗಳಿಗೆ, ಓದುವ ಮಕ್ಕಳಿಗೆ ಹಿಂಸೆ ಕೊಡುತ್ತಿರುತ್ತಾರೆ; ಹಾಗೆಯೇ ಅನಗತ್ಯವಾಗಿ ದೇವರುಗಳ ನಿಂದನೆ ಮಾಡಿ ಮುಗ್ಧರ ಮನಸ್ಸಿಗೆ ನೋವುಂಟು ಮಾಡುವವರು ಕೂಡ ಮತ್ತೊಂದು ಬಗೆಯ ಹಿಂಸೆಯನ್ನು ಚೆಲ್ಲುತ್ತಿರುತ್ತಾರೆ. ಜಾತಿಯ ಹೆಸರು ಹಿಡಿದು ನಿಂದಿಸುವುದು, ಮಹಿಳೆಯರು ಹಾಗೂ ಮಕ್ಕಳನ್ನು ಕೀಳಾಗಿ ಕಾಣುವುದು; ತಂತಮ್ಮ ಜಾತಿಗಳ ಹಿರಿಮೆಯ ಬಗ್ಗೆ ಕೊಚ್ಚಿಕೊಳ್ಳುವುದು…ಇವೆಲ್ಲವೂ ಹಿಂಸೆಯ ವಿವಿಧ ರೂಪಗಳೇ.

ತಮ್ಮ ಮನೆಗಳ ಮುಂದೆ ‘ವೆಜ್ ಓನ್ಲಿ’ ಅಥವಾ ‘ತಮ್ಮ ಜಾತಿಯವರಿಗೆ ಮಾತ್ರ’ ಎಂಬ ಅನಾಗರಿಕ ಬೋರ್ಡುಗಳನ್ನು ತೂಗು ಬಿಡುವುದು ಇತರರಲ್ಲಿ ಅಸಹ್ಯವನ್ನುಂಟು ಮಾಡುತ್ತದೆ ಎಂಬುದು ಕೂಡ ಅನೇಕರಿಗೆ ಗೊತ್ತಿರುವುದಿಲ್ಲ. ಇಂಡಿಯಾದಲ್ಲಿ ಜಾತಿ ಶ್ರೇಣೀಕರಣ ಜನರ ತಲೆಯಲ್ಲಿ ಎಷ್ಟು ಭೀಕರವಾಗಿ ತಳವೂರಿದೆಯೆಂದರೆ ತಮ್ಮ ಕಚೇರಿಗಳ ಅಟೆಂಡರುಗಳನ್ನು ಕನಿಷ್ಠ ಗೌರವದಿಂದ ಕೂಡ ಮೇಲಿನವರು ನಡೆಸಿಕೊಳ್ಳುವುದಿಲ್ಲ. ನಾವು ನಮಗರಿವಿಲ್ಲದೆಯೇ ಚೆಲ್ಲುವ ಹಿಂಸೆಯ ಇಂಥ ನೂರಾರು ಮುಖಗಳ ಬಗ್ಗೆ ಯೋಚಿಸಲು ವಿಶ್ವಸಂಸ್ಥೆ ಘೋಷಿಸಿರುವ ‘ಅಹಿಂಸಾ ದಿನ’ ಒಂದು ಪ್ರೇರಣೆಯಾಗಲಿ.

ಕೊನೆ ಟಿಪ್ಪಣಿ: ಮನುಷ್ಯನ ಬಾಯಿ ಮತ್ತು ಕೇಡು ಪಾಲೋ ಕೊಲ್ಹೋನ ಪ್ರಖ್ಯಾತ ಕಾದಂಬರಿ ‘ದ ಆಲ್ಕೆಮಿಸ್ಟ್’ನ ಒಂದು ಸನ್ನಿವೇಶ. ಕಾದಂಬರಿಯ ಕೇಂದ್ರ ಪಾತ್ರವಾದ ಆಲ್ಕೆಮಿಸ್ಟ್ ಬಾಟಲಿನ ಮುಚ್ಚಳ ತೆಗೆದು ಹುಡುಗನೊಬ್ಬನ ಗ್ಲಾಸಿಗೆ ವೈನ್ ಸುರಿಯುತ್ತಾನೆ. ಹುಡುಗ ಕೇಳುತ್ತಾನೆ: ‘ಇಲ್ಲಿ ವೈನ್ ಕುಡಿಯೋದು ನಿಷಿದ್ಧ ಅಲ್ಲವೆ?’ ಅದಕ್ಕೆ ಆಲ್ಕೆಮಿಸ್ಟ್ ಕೊಡುವ ಉತ್ತರ: ‘ಮನುಷ್ಯರ ಬಾಯಿಯ ಒಳಗಡೆ ಇಳಿಯೋದು ಕೇಡಲ್ಲ; ಅವರ ಬಾಯಿಂದ ಹೊರಗೆ ಬರುತ್ತಲ್ಲ, ಅದು ಕೇಡು.’ ಈಚೆಗೆ ಮನುಷ್ಯರು ಉಣ್ಣುವ ಆಹಾರದ ಚರ್ಚೆಯಲ್ಲಿ ಸಸ್ಯಾಹಾರ, ಮಾಂಸಾಹಾರಗಳ ನವ ಜಾತಿಪದ್ಧತಿಯನ್ನು ಸೃಷ್ಟಿಸುತ್ತಿರುವವರು ‘ದ ಆಲ್ಕೆಮಿಸ್ಟ್’ ಕಾದಂಬರಿಯ ಈ ಪಿಸುಮಾತನ್ನು ಕೇಳಿಸಿಕೊಂಡು ಒಂದಿಷ್ಟಾದರೂ ಸ್ವ-ಪರೀಕ್ಷೆ ಮಾಡಿಕೊಳ್ಳುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT