ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಅನುಭವಕ್ಕೆ ಹಳೇ ಉಪಮೆ ಬೇಕಾ?

Last Updated 21 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

‘ಚಡ್ಡಿಬ್ರಾ’ಗೊಂದು ಹೆಸರಿತ್ತು. ಬ್ರಿಟನ್ನಿನಲ್ಲಿ ಡಾಕ್ಟರಾಗಿರುವ ಅವಳಪ್ಪ-ಅಮ್ಮ ಅವಳಿಗೆ ಕವಿತಾ ಎನ್ನುವ ಸುಂದರ ಹೆಸರಿಟ್ಟಿದ್ದರು. ಪೂರ್ತಿ ಹೆಸರು ‘ಕವಿತಾ ಚಂದ್ರ’. ಅವಳಿಗೆ ತಾನೊಂದು ನ್ಯೂಸ್ ಆಗಿರುವ ವಿಷಯ ಗೊತ್ತೇ ಇರಲಿಲ್ಲ. ಹಾಗಾಗಿ ಸ್ನಿಗ್ಧ ನಗುವಿನ ಅನಿವಾಸಿ ಕನ್ನಡದ ಹುಡುಗಿ ಈ ಅಪಾರ್ಟ್ಮೆಂಟ್ ಕಾಂಪ್ಲೆಕ್ಸಿನಲ್ಲಿ ತಾನೊಂದು ದೊಡ್ಡ ಸೆನ್ಸೇಷನ್ ಆಗಿದ್ದೇನೆ ಎನ್ನುವ ವಿಷಯಕ್ಕೆ ನಿರ್ಲಿಪ್ತವಾಗಿದ್ದಂತಿದ್ದಳು.

ಗಾಳಿಯಲ್ಲಿ ತೇಲುವ ಹಾಗೆ, ಅಪ್ಸರೆಯ ಹಾಗೆ, ಸುವಾಸನೆಯ ಹಾಗೆ, ಕಾಗೆ-ಗೂಗೆ ಉಪಮೆಯ ಭಾಷೆಯಲ್ಲಿರುವ ಎಲ್ಲಾ ‘ಗೆ’ಗಳು ಮುಗಿದ ಮೇಲೆ ಅವಳನ್ನು ನೋಡಿದರೆ ನಿಮಗೆ ನಿರಾಸೆಯಾಗುವುದಂತೂ ಗ್ಯಾರಂಟಿ. ಯಾಕೆಂದರೆ ಅವಳು ಅಪ್ಸರೆಯಂತಿರಲಿಲ್ಲ; ಬದಲಾಗಿ ‘ದಪ್ಸರೆ’ಯಂತಿದ್ದಳು.

ಮಧ್ಯವಯಸ್ಸನ್ನು ದಾಟುತ್ತಾ ಬೆಳೆವ ಬೊಜ್ಜಿಗೆ ‘ಸೊಂಟ ಸ್ವಲ್ಪ ಹೆವಿ’ ಅನ್ನುವ ಚಂದದ ಹೊದಿಕೆ ಹೊದ್ದಿಸಿ ವಯಸ್ಸು ತಂದಿಡುವ ನಗ್ನ ಸತ್ಯಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡದೆ ನಿರಾಕರಿಸುತ್ತಾ ‘ಯಂಗ್ ಅಟ್ ಹಾರ್ಟ್’ ಅಂತ ಬದುಕಬಯಸುತ್ತೇವಲ್ಲಾ? ಆ ಸ್ಪಿರಿಟ್ಟಿಗೆ ಸಲಾಂ ಅನ್ನುವುದು ಸರಿಯೇ ಆದರೂ; ವಯಸ್ಸನ್ನು, ಅದರ ಮಿತಿಗಳನ್ನು ಒಪ್ಪಿಕೊಳ್ಳುತ್ತಲೇ ಹೊಸ ಭಾಷ್ಯ ಬರೆಯುವುದರಲ್ಲಿ ತಪ್ಪೇನೂ ಇಲ್ಲ ಎನ್ನುವುದು ಅರ್ಥವಾಗುವುದಿಲ್ಲವೇಕೆ?

ಕವಿತಾ ತನ್ನ ದೇಹದ ಬಗ್ಗೆ ಒಂದು ರೀತಿಯ ಹದವಾದ ಆಸಕ್ತಿಯನ್ನು ಬಹಳ ಮೊದಲೇ ಸಾಧಿಸಿಕೊಂಡಂತಿದ್ದಳು. ಹಾಗಾಗಿ ತಾನು ಹೇಗಿದ್ದೇನೆ? ಹೇಗೆ ಕಾಣುತ್ತಿದ್ದೇನೆ ಎನ್ನುವುದಕ್ಕಿಂತ, ತನ್ನ ತಲೆಯೊಳಗೇನಿದೆ ಎನ್ನುವುದು ಬಹು ಮುಖ್ಯ ಎನ್ನುವ ವಿಷಯ ಅವಳಿಗೆ ಚೆನ್ನಾಗಿ ಅರ್ಥವಾಗಿತ್ತು.

ಹಾಗಾಗಿಯೇ ಅವಳು ತೂಕ ನಿಯಂತ್ರಣದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ತನ್ನ ಕೆಲಸದ ಬಗ್ಗೆ ಫೋಕಸ್ ಮಾಡುತ್ತಿದ್ದಳು. ಕವಿತಾ ಎನ್ನುವ ಹುಡುಗಿ, ‘ಚಿಕ್ ಪುಟ್ಟಿ’ ಅಲ್ಲ ಎನ್ನುವ ಮಾತು ಮೊದಲ ಭೇಟಿಯಲ್ಲೇ ಸರ್ವವಿಧಿತವಾಯಿತು. ತಾನು ಭೇಟಿ ನೀಡುತ್ತಿದ್ದ ಮನೆಯ ಎಲ್ಲ ಹುಡುಗರಿಗಿಂತ ಮೂರ್ನಾಲ್ಕು ವರ್ಷ ದೊಡ್ಡವಳು. ಆ ಮೂರು ಜನ ಹುಡುಗರಲ್ಲಿ ಒಬ್ಬನಿಗೆ ಇವಳ ಬಗ್ಗೆ ಅಗಾಧ ಪ್ರೇಮವಿತ್ತು.

ವಯಸ್ಸು ಮೂವತ್ತು ದಾಟಿದಂತಿತ್ತು. ‘ಇನ್ನೂ ಮದುವೆಯಾಗಿಲ್ವಾ?’ ಎನ್ನುವ ಸಹಜ ಪ್ರಶ್ನೆಯೊಂದು ಚಿತ್ರಾ ಮನಸ್ಸಿನಲ್ಲಿ ಸುಳಿದರೂ ಸದ್ಯ ಕೇಳಲು ಬಾಯಿ ಸಹಕರಿಸಲಿಲ್ಲ. ಅಷ್ಟರ ಮಟ್ಟಿಗೆ ಆ ಪ್ರಬುದ್ಧತೆ ಬಂದಂತಿತ್ತು. ಇನ್ನು ತೂತು ಮಡಕೆ ಎನ್ನಿಸಿಕೊಳ್ಳಬಹುದಿದ್ದ ಸೂಸನ್ ಕೂಡ ಆ ವಿಷಯವಾಗಿ ಮಾತು ಎತ್ತಲಿಲ್ಲ. ವಿಜಿಗಂತೂ ಅವಳು ದ್ರೋಣಾಚಾರ್ಯರ ಥರ ಕಂಡಿದ್ದಳು.

ಕವಿತಾ ಏನನ್ನೂ ಹೇಳಿಕೊಡದಿದ್ದರೂ ಅವಳ ಕಲ್ಪನೆಯೊಂದನ್ನೇ ಮುಂದಿಟ್ಟುಕೊಂಡು ಜೀವನದ ಸಕಲಿಷ್ಟು ಸತ್ಯಗಳನ್ನು ವಿದ್ಯೆಗಳನ್ನು ಕಲಿಯಬೇಕಂತ ವಿಜಿ ತಯಾರಾಗಿದ್ದಳು. ಚಿತ್ರಪಟ ಹರಿದು ಭಾವಕ್ಕೊಂದು ವ್ಯಕ್ತಿ ಮೂಡಿದಂತೆ ಎಲ್ಲರಲ್ಲೂ ಕವಿತಾ ಒಂಥರಾ ನವೀನ ರೀತಿಯ ಸ್ಪಂದನವನ್ನೇ ಹೊರಡಿಸಿದ್ದಳು.

ಹುಡುಗಿಯರ ಮೊದಲ ಭೇಟಿ, ಕವಿತಾಳ ಪರಿಚಯ ಎಲ್ಲ ಹೇಗಾಯಿತು ಎನ್ನುವುದು ಅನವಶ್ಯಕ. ಏಕೆಂದರೆ ಆ ಸಂದರ್ಭದಲ್ಲಿ ನಡೆದ ಸಾವಿರಾರು ಅಪಭ್ರಂಶಗಳಿದ್ದವು. ಮೊದಮೊದಲಿಗೆ ಕವಿತಾ ಇವರನ್ನು ಹತ್ತಿರ ಬಿಟ್ಟುಕೊಳ್ಳಲಿಲ್ಲ. ಆದರೆ ಆಮೇಲೆ ಆ ಹೆಣ್ಣು ಇವರ ಮೇಲೆ ಅವಲಂಬಿಸಬೇಕಾದ ಅನಿವಾರ್ಯ ಸಂದರ್ಭಗಳು ಬಂದವು.

ಪೋಲಿಸರ ಇನ್ವೆಸ್ಟಿಗೇಷನ್ನಿನ ವಿಧಾನಗಳು ದೇಶ ದೇಶಗಳ ನಡುವಿನ ಅಂತರವನ್ನೇ ಅಳಿಸಿ ಶತ್ರುಗಳನ್ನೂ ಮಿತ್ರರನ್ನಾಗಿ ಮಾಡುವ ಕೆಪಾಸಿಟಿ ಹೊಂದಿರುವಾಗ ಅಪರಿಚಿತ ಹೆಣ್ಣುಮಕ್ಕಳು ಫ್ರೆಂಡ್ಸ್ ಆಗೋದು ಯಾವ್ ಲೆಕ್ಕ?
ಬೆಂಗಳೂರಿನಲ್ಲಿ ಒಬ್ಬಳೇ ಬದುಕುತ್ತಿದ್ದ ಕವಿತಾ ತನ್ನ ಜೀವನದ ಪ್ರತಿ ನಿರ್ಧಾರವನ್ನೂ ಬಹಳ ಸ್ವತಂತ್ರವಾಗಿ ತೆಗೆದುಕೊಳ್ಳಬಲ್ಲವಳಾಗಿದ್ದಳು.

ಬ್ರಿಟನ್ನಿನಲ್ಲಿದ್ದ ಅವಳ ಡಾಕ್ಟರ್ ಅಪ್ಪ-ಅಮ್ಮ, ಮಗಳು ಸುಖವಾಗಿ ಎಲ್ಲಾ ಅವಕಾಶಗಳನ್ನೂ ಸೂರೆ ಹೊಡೆದುಕೊಂಡು ಬದುಕಲಿ ಅಂತ ಆಯ್ಕೆ ಮಾಡಿಕೊಂಡ ದೇಶವನ್ನು ತಿರಸ್ಕರಿಸಿ ಅವರು ಬೇಡ ಅಂತ ಬಿಟ್ಟು ಹೋದ ‘ಕೊಂಪೆ’ಗೇ ಅವಳು ಮರಳಿದ್ದನ್ನು ಪ್ರತಿಭಟಿಸಿ ಅವಳ ಹತ್ತಿರ ಸಂಪರ್ಕ ಮೊದಮೊದಲು ಕಡಿಮೆ ಮಾಡಿಕೊಂಡಿದ್ದರು. ಆದರೆ ಇವಳು ಎನ್ ಜಿಓನಲ್ಲಿ ಕೆಲಸ ಮಾಡುವ ತನ್ನ ಧ್ಯೇಯವನ್ನು ಅವರಿಗೆ ಆಗಾಗ ವಿವರಿಸಿ ಅವರ ಅಸಹನೆಯ ಅಗ್ನಿ ಕಡಿಮೆಯಾಗುವಂತೆ ಮಾಡಿದ್ದಳು. ಆದರೂ ಅವರು ಅವಳ ನಿರ್ಧಾರ ಬದಲಿಸಲು ಆಗಾಗ ಪ್ರಯತ್ನಿಸುತ್ತಲೇ ಇದ್ದರೂ ಇವಳು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ.

ಭಾರತಕ್ಕೆ ಬಂದು ಸುಮಾರು ಆರು ವರ್ಷವಾಗಿತ್ತು. ಅವಳ ವ್ಯಕ್ತಿತ್ವದ ಭಿನ್ನತೆಯಿಂದಾಗಿ ಅವಳ ವಯಸ್ಸಿನ ಹೆಣ್ಣುಮಕ್ಕಳೇನೂ ಅವಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಸ್ನೇಹಿತರಾಗಿರಲಿಲ್ಲ. ಅಲ್ಲದೆ, ಮೂವತ್ತು ವಯಸ್ಸಿಗೆ ಬಹುಪಾಲು ಹೆಣ್ಣುಮಕ್ಕಳಾಗಲೇ ಯಾವುದೋ ಡಿಗ್ರಿ ಮಾಡಿ, ಉಪ್ಪಿಟ್ಟಿನ ಕಾರ್ಯಕ್ರಮ ಮುಗಿಸಿ ಧಾವಂತದಲ್ಲಿ ಮದುವೆ-ಮಕ್ಕಳು ಅಂತೆಲ್ಲ ಸಂಸಾರ ನೊಗ ಹೊತ್ತು ಜೀವನದ ಬಗ್ಗೆಯೇ ಜುಗುಪ್ಸೆ ಮೂಡುವ ಕಾಲದಲ್ಲಿ ಇವಳಿನ್ನೂ ಕೆನೆಯುವ ಕುದುರೆಯಂತೆ ಒಂದು ತಿಂಗಳು ತಮಿಳುನಾಡು, ಇನ್ನೊಂದು ತಿಂಗಳು ಮಧ್ಯಪ್ರದೇಶ, ಮತ್ತೊಂದು ವಾರ ಶ್ರೀನಗರ, ಮತ್ತೆಲ್ಲೋ ಗುಜರಾತು ತಿರುಗಿ ಬರುತ್ತಾ ಸುಂದರಬನ ಅಂತ ತನ್ನ ಪರಿಸರ ಅಧ್ಯಯನ ಮತ್ತು ಫೋಟೋಗ್ರಫಿ ಮುಂದುವರೆಸಿಕೊಂಡಿದ್ದರೆ ಯಾರು ಸ್ನೇಹಿತರಾಗುತ್ತಾರೆ?
ಇಂಟರ್ನೆಟ್ಟು ಅಷ್ಟೊಂದು ಪ್ರಚಲಿತವಿಲ್ಲದ ಕಾಲದಲ್ಲಿ ಸ್ನೇಹಕ್ಕೆ ಕಾಲದ ಸಂಕೋಲೆ ಮತ್ತು ಪರಿಚಯದ ಹಂಗು ಬಹಳ ಭಾರವಾಗಿಯೇ ಇತ್ತು.

‘ಮತ್ತೆ ಮೇಲಿನ ಮನೆ ರವೀಂದ್ರ ಹೇಗೆ ಪರಿಚಯವಾದನಂತೆ?’ ಸರಳಾ ಸಹಜವೆಂಬಂತೆ ಈ ಪ್ರಶ್ನೆ ಕೇಳಿದರು. ‘ಹೋಗ್ರೀ, ಅದೆಲ್ಲಾ ಮುಖ್ಯವಲ್ಲ’ ಅಂದಳು ಚಿತ್ರಾ. ರವೀಂದ್ರ, ಅವಿನಾಶ, ಅರ್ಜುನ ಮೂರು ಜನ ಹುಡುಗರು ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದವರು. ದೊಡ್ಡ ಸಂಬಳ. ಅದಕ್ಕೆ ತಕ್ಕ ಸಭ್ಯ ನಡವಳಿಕೆ ಅಂದರೂ ಆದೀತು ಅಥವಾ ಅವರ ‘ಲೆವೆಲ್’ ಬಗ್ಗೆ ಇದ್ದ ಕಾಳಜಿಯೆಂದರೂ ಒಂದೇ. ಅಂಥಿಂಥ ಸ್ನೇಹಕ್ಕೆ ಕೈ ಚಾಚುತ್ತಿರಲಿಲ್ಲ. ಅದರ ಅವಶ್ಯಕತೆಯೂ ಅವರಿಗಿರಲಿಲ್ಲವೆನ್ನಿ.

ರವೀಂದ್ರ ಹೈದರಾಬಾದಿನ ರೆಡ್ಡಿ ಹುಡುಗ. ತಲತಲಾಂತರದಿಂದ ಬಂದ ಆಸ್ತಿ ಇತ್ತು. ಅಪ್ಪನ ಬಿಸಿನೆಸ್ ಸಿಕ್ಕಾಪಟ್ಟೆ ದುಡ್ಡು ದುಡಿಯುತ್ತಿತ್ತು. ಅವರಿಗೆ ಮಗನ ಎಂಜಿನಿಯರಿಂಗ್ ಡಿಗ್ರಿ ಒಂದು ಕಿರೀಟ ಅಷ್ಟೆ. ಆದರೆ ಓದುತ್ತೋದುತ್ತ ರವೀಂದ್ರನಿಗೆ ಐಟಿಯಲ್ಲಿನ ಅವಕಾಶಗಳ ಬಗ್ಗೆ ಒಂದು ದೊಡ್ಡ ರಮಣೀಯ ಕನಸು ಹುಟ್ಟಿಕೊಂಡುಬಿಟ್ಟಿತ್ತು.

ಈ ಬಡ ದೇಶವನ್ನು ಮುಂದಕ್ಕೆ ನಡೆಸುವ ಹೆದ್ದಾರಿ ಇದೇ ಎನ್ನುವ ಸ್ಪಷ್ಟ ಕಲ್ಪನೆ ಅವನ ತಲೆಯಲ್ಲಿ ಹೊಕ್ಕು ಹೇಗಾದರೂ ಮಾಡಿ ತನ್ನದೇ ಒಂದು ಕಂಪೆನಿ ಶುರು ಮಾಡಬೇಕೆನ್ನುವ ಹಟ ಗಟ್ಟಿಯಾಗಿತ್ತು. ಹೆಣ್ಣು ಮಕ್ಕಳಿಗೆ ಉಪ್ಪಿಟ್ಟು-ಕಾಫಿ-ಗಂಡು ಕಾರ್ಯಕ್ರಮ ಇರುವ ಹಾಗೆ ಶ್ರೀಮಂತರ ಮನೆಯ ಗಂಡು ಮಕ್ಕಳಿಗೂ ಈ ಥರದ ಉರುಲುಗಳು ಸಾಕಷ್ಟಿರುತ್ತವೆ.

ಹೆಣ್ಣು ಮಕ್ಕಳಾದರೂ ಕಣ್ಣೀರು ಹಾಕಿ ಮನಸ್ಸನ್ನು ಹಗುರ ಮಾಡಿಕೊಂಡಾರು. ಹುಡುಗರ ಭಾಗ್ಯದಲ್ಲಿ ಅದೂ ಇರುವುದಿಲ್ಲ. ಸುಮ್ಮನೆ ಸಿಡಿಮಿಡಿ ಮಾಡುತ್ತ... ಕೆಲವೊಮ್ಮೆ ಬೇಡವೆಂದರೂ ವರದಕ್ಷಿಣೆ ಬೆಲೆ ಕಟ್ಟಿಸಿಕೊಳ್ಳುತ್ತಾ ಮಾವನ ಋಣದಲ್ಲಿ ಬದುಕುವ ಕರ್ಮಕ್ಕೆ ಕೊರಳೊಡ್ಡಬೇಕಾಗುತ್ತದೆ.

ದುಡ್ಡುಳ್ಳ ತಂದೆ ಒಂಥರ ಶಾಪ ಎನ್ನುವ ಮಾತು ಎಷ್ಟೋ ಸಂದರ್ಭಗಳಲ್ಲಿ ಸತ್ಯವಾಗುತ್ತದೆ. ಆದರೆ ಅದಕ್ಕಿಂತ ದೊಡ್ಡ ತೊಂದರೆ ಎಂದರೆ ದುಡ್ಡುಳ್ಳ ಸ್ಥಿತಿವಂತ ಮಾವ. ಇಬ್ಬರೂ ಶ್ರೀಮಂತರಾದರಂತೂ ಸ್ವಾಭಿಮಾನಿ ಯುವಕನಿಗೆ ಇವು ಕೊರಳಿಗೆ ಕಟ್ಟಿಕೊಂಡ ಅತ್ಯಂತ ದೊಡ್ಡ ಪಾಪಗಳು. ಹರೆಯದ ಐಡಿಯಾಗಳನ್ನು ಹೇಗೋ ಒಂದು ಕಂಪೆನಿ ಅಥವಾ ಬಿಸಿನೆಸ್ ಆಗಿಸುವ ಒಂದು ಮನಃಸ್ಥಿತಿ ಇರುವ ತುಡಿತವನ್ನು ತಮ್ಮ ‘ಅನುಭವಾಮೃತಗಳಿಂದ’ ಹಳ್ಳ ಹಿಡಿಸಿ ಹೊಸಕಿ ಹಾಕಬಲ್ಲ ಜನ ಇವರು.

ರವೀಂದ್ರನಿಗೆ ಯಾವ ಮಾಯದಲ್ಲೋ ದೊಡ್ಡ ಪ್ರಮಾಣದಲ್ಲಿ ದುಡ್ಡು ಇಟ್ಟಿದ್ದ ಅವರಪ್ಪ ಅತ್ಯಂತ ಶ್ರೀಮಂತ ಮನೆತನದ ಹೆಣ್ಣು ಫಿಕ್ಸ್ ಮಾಡಿಬಿಟ್ಟಿದ್ದರು. ಶ್ರೀಮಂತರಲ್ಲಿ, ವ್ಯವಹಾರಸ್ಥರಲ್ಲಿ, ರಾಜಕಾರಣಿಗಳಲ್ಲಿ –ಒಟ್ಟಿನಲ್ಲಿ ದೊಡ್ಡ ಮನುಷ್ಯರು – ಅಂತ ಕರೆಸಿಕೊಳ್ಳುವ ಯಾರಲ್ಲೇ ಆದರೂ ಮದುವೆ ಆಗುವುದು ಕೊಡು-ಕೊಳ್ಳುವಿಕೆ ಮತ್ತು ಭವಿಷ್ಯದಲ್ಲಿನ ಅವಕಾಶಗಳನ್ನು ಗಮನದಲ್ಲಿರಿಸಿಕೊಂಡು ತಾನೇ?

ಅದನ್ನು ತಪ್ಪಿಸಿಕೊಳ್ಳಲು ಮನೆಯಲ್ಲಿ ಜಗಳ ಮಾಡಿಕೊಂಡು ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ. ಮುಂದಿನ ವರ್ಷ, ಅದರ ಮುಂದಿನ ವರ್ಷ ಅಂತ ಮದುವೆ ಮುಂದೂಡುತ್ತಾ ಇರುವಾಗ ಭಾವೀ ಮಾವನಿಗೆ ಇವನ ಆಟ ಸಾಕಾಯಿತೋ ಅಥವಾ ಮಗಳ ಜವಾಬ್ದಾರಿ ಭಾರವಾಯಿತೋ ಅಂತೂ ಇನ್ಯಾರೋ ಇವನಿಗಿಂತಾ ಉತ್ತಮ ‘ಇನ್ವೆಸ್ಟ್ ಮೆಂಟ್’ ಸಿಕ್ಕನೋ ಅಂತೂ ಸಂಬಂಧ ಮುರಿದುಕೊಂಡು ಮಗಳನ್ನು ವರದಕ್ಷಿಣೆಗೆ ಜೋತುಕೊಂಡಿದ್ದ ಇನ್ನೊಬ್ಬನಿಗೆ ಸಾಗಿಸಿದ.

ಮದುವೆ ಮುರಿದ ಮೇಲೆ ರವೀಂದ್ರ ಪಾರ್ಟಿ ಮಾಡಿದ. ಹೈದರಾಬಾದಿಗೆ ಕಾಲಿಡಲೇ ಇಲ್ಲ. ಹೋದರೆ ಮತ್ತೆಲ್ಲಿ ಗಲಾಟೆ ಮಾಡಿ ಮದುವೆ ಮಾಡಿಸಿಬಿಡುತ್ತಾರೋ ಎನ್ನುವ ಭಯದಲ್ಲಿ ಅಜ್ಜ-ಅಜ್ಜಿ-ಅಮ್ಮ-ತಂಗಿ ಯಾರಿಗೆ ಹುಷಾರಿಲ್ಲವೆಂದಾಗಲೂ ನೋಡಲು ಹೋಗಲಿಲ್ಲ. ಬದಲಿಗೆ ಸಂಬಂಧಿಕರ ಹತ್ತಿರ, ಮನೆ ಕೆಲಸದವರ ಹತ್ತಿರ ಮಾತನಾಡಿ ‘ಹುಷಾರಿಲ್ಲ’ ಅಂತ ಸುದ್ದಿಯಾದ ವ್ಯಕ್ತಿ ಆರಾಮಾಗಿ ಇನ್ನೊಬ್ಬರ ಜೀವ ತಿಂದುಕೊಂಡು ಬದುಕುತ್ತಿದ್ದಾರೆ ಎನ್ನುವ ವಿಷಯವನ್ನು ತಿಳಿದುಕೊಂಡು ನಿಶ್ಚಿಂತೆಯಿಂದ ತನ್ನ ಕೆಲಸ ಮಾಡಿಕೊಂಡಿದ್ದ.

ಹೀಗೆ ಕೆಲಸದ ಮೇಲೆ ಆ ಊರು, ಈ ಊರು ಅಂತ ಓಡಾಡುತ್ತಿರುವಾಗ ಫ್ಲೈಟಿನಲ್ಲಿ ಪರಿಚಯವಾದ ಕವಿತಾ ಬಗ್ಗೆ ತೀವ್ರ ಸೆಳೆತ ಉಂಟಾಯಿತು. ತನಗಿಂತ ಸುಮಾರು ವರ್ಷ ದೊಡ್ಡವಳು ಅಂತ ಗೊತ್ತಾದ ಮೇಲೂ ಆ ಆಕರ್ಷಣೆ ಕಡಿಮೆಯಾಗಲಿಲ್ಲ.

ಅವಳ ರೂಪ ಬೇರೆಯವರಿಗೆ ಭಾರೀ ನಿರಾಸೆ ಹುಟ್ಟಿಸುವಂತಿದ್ದರೂ ಕ್ಯಾಮೆರಾ ಹಿಡಿದ ಹುಡುಗಿಯ ವಿವೇಕ, ಜ್ಞಾನ ಮತ್ತು ಬರಿಗಣ್ಣಿನಿಂದ ಚಿತ್ರವೊಂದನ್ನು ಸೃಷ್ಟಿಸಿಕೊಂಡು ಸೆರೆ ಹಿಡಿಯಬಲ್ಲ ಅವಳ ಅನುಭವೀ ದೃಷ್ಟಿ; ಅಸಹಾಯಕತೆಯ ಸೋಂಕೂ ಇಲ್ಲದ ಅವಳ ವ್ಯಕ್ತಿತ್ವ, ಸಾಮಾನ್ಯ ಹೆಂಗಸರಂತೆ ಕಂಡರೂ ಎಳೆಎಳೆಯಾಗಿ ಅಚ್ಚರಿ ಹುಟ್ಟಿಸುತ್ತಿದ್ದ ಗುರುವಿನಂಥ ಅವಳ ಮನಸ್ಸು; ಎಲ್ಲವೂ ಅವನನ್ನು ಗಟ್ಟಿಯಾಗಿ ಹಿಡಿದುಬಿಟ್ಟಿದ್ದವು.

ಇವರಿಬ್ಬರೂ ಕೆಲವು ತಿಂಗಳುಗಳ ಹಿಂದೆ ಹತ್ತಿರವಾಗತೊಡಗಿದಾಗ ಕವಿತಾಗೆ ರವೀಂದ್ರನ ಮೇಲೆ ಪ್ರೀತಿ ಹುಟ್ಟಿದ್ದೇನೋ ನಿಜವೇ. ಆದರೆ ತನ್ನ ಸ್ವತಂತ್ರ ವ್ಯಕ್ತಿತ್ವಕ್ಕೆ ಅಡ್ಡಿ ಬರುವುದಾದರೆ ಈ ಸಂಬಂಧ ಬೇಡ ಅಂತ ಮೊದಲೇ ಹೇಳಿದ್ದಳು. ಆದರೆ ರವೀಂದ್ರ ವಯಸ್ಸಿಗೆ ಮೀರಿದ ಪ್ರಬುದ್ಧತೆ ಹೊಂದಿದ್ದರಿಂದ ಆ ವಿಷಯಕ್ಕೆ ಎಂದೂ ತೊಂದರೆ ಕೊಡುವುದಿಲ್ಲ ಅಂತ ಹೇಳಿದ್ದನಲ್ಲದೆ ಹಾಗೇ ನಡೆದುಕೊಂಡಿದ್ದ ಕೂಡ.

ಹಾಗಾಗಿ ಇವರಿಬ್ಬರ ಪ್ರೇಮ ಒಬ್ಬರಿಗೊಬ್ಬರು ಶಕ್ತಿ ಕೊಡುತ್ತಿತ್ತೇ ವಿನಃ ಕಟ್ಟಿಹಾಕುತ್ತಿರಲಿಲ್ಲ. ಬೆಂಗಳೂರಿನ ಏರ್‌ಪೋರ್ಟ್ ಆಗ ಎಚ್‌ಏಎಲ್ ರಸ್ತೆಯಲ್ಲಿತ್ತು. ಈಗಲೂ ಅದನ್ನು ಹಳೇ ಏರ್ ಪೋರ್ಟ್ ರಸ್ತೆ ಅಂತಲೇ ಕರೆಯುವುದು. ಹೊತ್ತಾಗಿ ಫ್ಲೈಟ್ ಹಿಡಿಯುವಾಗ ಅಥವಾ ಅವೇಳೆಯಲ್ಲಿ ಯಾವುದೋ ಊರಿನಿಂದ ವಿಮಾನದಲ್ಲಿ ಹಿಂದಿರುಗುವ ಪ್ರಮೇಯ ಬಂದಾಗ ಒಂಟಿ ಬಡಕನಂತಿದ್ದ ತನ್ನ ಮನೆಗೆ ಹೋಗುವ ಬದಲು ಕವಿತಾ ರವೀಂದ್ರನ ಮನೆಗೆ ಬರುತ್ತಿದ್ದಳು. ತೀರಾ ಲೇಟ್ ಆಗಿದ್ದರೆ ಅವನೇ ಅವಳನ್ನು ಪಿಕಪ್ ಮಾಡುತ್ತಿದ್ದ.

ಹೀಗೆ ಬಂದು ಮಾರನೇ ದಿನ ಎದ್ದು ಹೋಗುವ ಮುನ್ನ ಸ್ನಾನ ಮಾಡಿ ನೇರ ಯಾವುದೋ ಮೀಟಿಂಗಿಗೋ ಕೆಲಸಕ್ಕೋ ಹೋಗುವ ಕಾರಣವಾಗಿ ಅವಳ ಬಟ್ಟೆಗಳು ಒಳ ಉಡುಪುಗಳ ಸಮೇತ ಒಮ್ಮೊಮ್ಮೆ ರವೀಂದ್ರನ ಮನೆಯಲ್ಲೇ ಉಳಿಯುತ್ತಿದ್ದವು. ಅವರಿಬ್ಬರ ನಡುವೆ ಬೇರೇನೂ ನಡೆಯುತ್ತಿರಲಿಲ್ಲವೆಂದುಕೊಂಡರೆ ನಮ್ಮಷ್ಟು ಮೂರ್ಖರಾರೂ ಇಲ್ಲ.

ಒಬ್ಬರಿಗೊಬ್ಬರು ಅತ್ಯಂತ ಉತ್ಕಂಠಿತ ಪ್ರೀತಿಯಲ್ಲಿ ಮುಳುಗಿರುವಾಗ ದೈಹಿಕ ಆಕರ್ಷಣೆಯಿಂದ ವಯೋ ಸಹಜವಾಗಿ ನಡೆಯಬಲ್ಲ ಎಲ್ಲ ಚಟುವಟಿಕೆಗಳೂ ಸಾಂಗವಾಗಿ ನಡೆಯುವುದಿಲ್ಲವೇನು?

ಆದರೆ ಹದಿವಯಸ್ಸಿನವರು ಸೆಕ್ಸಿಗಾಗಿಯೇ ಬದುಕುತ್ತಾರೆ ಎನ್ನುವ ದಿಗಿಲೊಂದು ಸಮಾಜದಲ್ಲಿ ಸದಾ ಕಾಲ ಜೀವಂತವಾಗಿರುತ್ತದಲ್ಲ? ಆ ಥರದ ಹಸೀ ಹಸೀ ದಿನದ ಇಪ್ಪತ್ತನಾಲ್ಕು ಗಂಟೆ ನಡೆಯುತ್ತೆ ಅಂದುಕೊಳ್ಳುವ ಸೆಕ್ಸು ಅಸಂಗತವಷ್ಟೇ ಅಲ್ಲ ಅಸಾಧ್ಯ ಕೂಡ. ಆದರೆ ಹೆದರಿದವರ ಮೇಲೆ ಇಲಿ ಎಸೆದರು ಎನ್ನುವ ಹಾಗೆ ಮೊದಲೇ ಸೆಕ್ಸಿನ ಬಗ್ಗೆ ಹುಚ್ಚುಚ್ಚಾರ ಕಲ್ಪನೆಗಳನ್ನಿಟ್ಟುಕೊಡು ಬೆದರಿಕೊಂಡು ಬದುಕುವ ಸಮಾಜಕ್ಕೆ ಹರೆಯದ ಮನಸ್ಸುಗಳಿಗೆ ತಾವು ಸಾಧಿಸಬೇಕೆಂದುಕೊಂಡದ್ದರ ಬಗ್ಗೆಯೂ ಹೆಚ್ಚು ಲಕ್ಷ್ಯ ಇರುತ್ತದೆ, ಎಲ್ಲರ ಮನಸ್ಸಿನಲ್ಲೂ ಸೆಕ್ಸು ವಿಕೃತಿಯ ರೂಪ ಪಡೆದಿರುವುದಿಲ್ಲ ಎನ್ನುವುದನ್ನು ಬಿಡಿಸಿ ಹೇಳುವವರು ಯಾರು? ಹೇಳಿದರೂ ಕೈಯಲ್ಲಿ ಮೂಗುದಾರ ದಬ್ಬಣ ಹಿಡಿದು ನಿಂತಿರುವ ಸಮಾಜ ಒಪ್ಪಿ ಅರ್ಥ ಮಾಡಿಕೊಳ್ಳಬೇಕಲ್ಲ?

ಪೊಲೀಸರೂ ಇದಕ್ಕೆ ಹೊರತಾಗಿದ್ದಿಲ್ಲ. ಕಳ್ತನವಾದ ರವೀಂದ್ರನ ಮನೆಯಲ್ಲಿ ಡ್ರಗ್ಸು ಸಿಕ್ಕಿತ್ತೋ ಬಿಟ್ಟಿತ್ತೋ, ಆದರೆ ಚಡ್ಡಿಬ್ರಾ ಸಿಕ್ಕಮೇಲಂತೂ ಇದು ‘ಬುದ್ಧಿ ಕಲಿಸಲೇಬೇಕಾದ’ ಕೇಸು ಅಂತ ತಯಾರಾಗಿಬಿಟ್ಟಿದ್ದರು. ‘ಅದಕ್ಕೇ ಅಂತೀನಿ...ಬರೀ ಕಳ್ತನದ ಕೇಸಿಗೆ ಯಾಕಿಷ್ಟು ಕಷ್ಟ ಪಡ್ತಿದಾರೆ ಪೊಲೀಸ್ನೋರು, ಅಂತ’ ವಿಜಿ ಆಶ್ಚರ್ಯ ಪಟ್ಟಳು.

ಸ್ವಲ್ಪ ಸಮಯದಲ್ಲಿ ಕವಿತಾಗೂ ಹುಡುಗಿಯರಿಗೂ ಸ್ನೇಹವಾಯಿತು. ಅವಳ ಧೈರ್ಯಕ್ಕೆ ಸ್ವತಂತ್ರ ಜೀವನಕ್ಕೆ ಎಲ್ಲರೂ ಮನಸೋತರು. ಕವಿತಾ ತನ್ನ ನೆರೆಯವರಿಗೆ ಹತ್ತಿರವಾಗುವ ಸಮಯದಲ್ಲಿ ರವೀಂದ್ರ ಸ್ವಲ್ಪ ‘ರಿಸರ್ವ್’ ಆಗಿಯೇ ಇದ್ದ. ಅವನ ಆ ನಡವಳಿಕೆಗೆ ಪೊಲೀಸರ ಇರವೂ ಕಾರಣವಾಗಿರಬಹುದು ಅಥವಾ ಜಯಾ ತನ್ನ ಭಾಷೆಯವಳೇ ಎನ್ನುವ ಅಂಶವೂ ಕೆಲಸ ಮಾಡಿರಬಹುದು. ಕಳ್ತನದ ಕೇಸು ಇನ್ನೂ ಜೀವಂತವಿತ್ತು. ಪೊಲೀಸರು ಆಗಾಗ ವಿಚಾರಣೆ ನಡೆಸಿ ಎಲ್ಲರನ್ನೂ ಸ್ಟೇಷನ್ನಿಗೆ ಕರೆಸುತ್ತಿದ್ದರು. ಕಡೆಗೆ ರವೀಂದ್ರ ಕೇಸನ್ನು ವಾಪಸು ತೆಗೆದುಕೊಳ್ಳುವಂತೆ ಸರಳಾ ಪ್ರೇರೇಪಿಸಿದರು.

‘ಏನೇನ್ ಕದ್ಕೊಂಡು ಹೋಗಿದಾರೆ ಅಂತ ಸ್ಪಷ್ಟವಾಗಿ ಹೇಳಪ್ಪಾ...’
‘ಹೆಚ್ಚೇನೂ ಇಲ್ಲ ಆಂಟೀ...ಇಂಪೋರ್ಟೆಡ್ ಸ್ಪೀಕರ್ರು, ಕ್ಯಾಮೆರಾ, ದುಡ್ಡು...ಚಿಕ್ಕ ಪುಟ್ಟ ಸಾಮಾನುಗಳು. ಹಾಗೆ ನೋಡಿದರೆ ಏನೇನು ಕಳೆದು ಹೋಗಿದೆ ಅಂತಲೂ ಗೊತ್ತಿಲ್ಲ’
‘ಸುಮ್ಮನೆ ಕೇಸ್ ಕ್ಲೋಸ್ ಮಾಡಿಸಿಕೋಬಾರದಾ?’
‘ಹಂಗೆ ಹೋಗಿ ಹೇಳಿದ್ರೆ ಕ್ಲೋಸ್ ಮಾಡ್ತಾರಾ?’

ಮೇಲ್ಮಧ್ಯಮ ಮತ್ತು ಮಧ್ಯಮ ವರ್ಗದ ಹುಡುಗ ಹುಡುಗಿಯರ ಅತಿ ದೊಡ್ಡ ನಷ್ಟ ಎಂದರೆ ಜೀವನದ ಎಷ್ಟೆಷ್ಟೋ ವಿಷಯಗಳಿಗೆ ವಿಮುಖರಾಗಿ ಬದುಕುವುದು. ಉದಾಹರಣೆಗೆ ದಾಖಲೆಗಳು ಇದ್ದಾಗಲೂ ಟ್ರಾಫಿಕ್ ಪೊಲೀಸ್ ಹತ್ತಿರ ಮಾತನಾಡಲು ಹೆದರುವುದು; ಅಥವಾ ತೊಂದರೆ ಆಗುತ್ತಿರುವಾಗಲೂ ಪೊಲೀಸರ ಸಹಾಯ ಕೋರದಿರುವುದು, ಇನ್ನೂ ಮುಂದಕ್ಕೆ ಹೇಳಬೇಕೆಂದರೆ ಕಾನೂನಿನ ಜ್ಞಾನ ಇಲ್ಲದಿರುವುದು. ಅದಕ್ಕಾಗೇ ಇಂತಹ ಸಂದರ್ಭಗಳಲ್ಲಿ ಅವರ ಮೈ ಬೆವರುವುದು, ನಾಲಿಗೆ ಒಣಗುವುದು ಇವೆಲ್ಲಾ ಆಗುತ್ತವೆ. ರವೀಂದ್ರ ಸ್ಟೇಷನ್ನಿಗೆ ಹೋದ. ಜೊತೆಗೆ ಸ್ನೇಹಿತರಿದ್ದರು. ಅದೇನೇನು ಪ್ರೊಸೀಜರುಗಳನ್ನು ಮಾಡಬೇಕೋ ಅದೆಲ್ಲವನ್ನೂ ಪೂರೈಸಿ ಆಯಿತು.

‘ಡ್ರಗ್ಸ್ ಸಿಕ್ಕಿದೆ ಅಂತ ರಿಪೋರ್ಟ್ ಹಾಕಿಲ್ಲ. ಇಲ್ಲಾಂದ್ರೆ ಕೋರ್ಟಿಗೆ ಅಲಿಯೋ ಹಂಗೆ ಮಾಡ್ತಿದ್ದೆ’ ಅಂತ ಇನ್ಸ್‌ಪೆಕ್ಟರು ವಿನಾಕಾರಣ ಸಿಟ್ಟಿನಿಂದಲೇ ಹೇಳಿದರು.
‘ಸರ್, ಡ್ರಗ್ಸ್ ನಮ್ಮನೇಲಿ ಇರಲೇ ಇಲ್ಲ. ಅಂಥ ತಪ್ಪು ಏನ್‌ ಮಾಡಿದೀವಿ ಸರ್?’ ಅಂದರು ಹುಡುಗರು.

‘ಹುಡುಗೀರನ್ನ ಮನೇಲಿ ಇಟ್ಕೊಂಡಿರೋದಲ್ದೆ ನಾವೇನ್ ಮಾಡಿದೀವಿ ಅಂತ ಕೇಳ್ತೀಯೇನೋ? ನಾಳೆ ಆ ಹುಡುಗೀನೂ ಕರ್ಕೊಂಬಾ ಅವಳದ್ದೂ ಸ್ಟೇಟ್‌ಮೆಂಟ್ ಬೇಕು’ ಅಂತ ಅಧಿಕಾರದ ದರ್ಪದಿಂದ ಹೇಳಿದರು. ಸುಮ್ಮನೆ ಬಾಯಿ ಮುಚ್ಚಿಕೊಂಡಿದ್ದರೆ ನಡೀತಿತ್ತು. ಈಗ ಕೆಲಸ ಕೆಡುತ್ತೆ ಅಂತ ಚಿಂತೆ ಮಾಡುತ್ತಾ ರವೀಂದ್ರ ಕವಿತಾಗೆ ವಿಷಯ ತಿಳಿಸಿದ. ‘ಓಹ್ ಕೂಲ್ ಮ್ಯಾನ್! ಅದಕ್ಕೇನಂತೆ. ಈವತ್ತೇ ಹೋಗೋಣ!’ ಅಂತ ಅಂದಳು ಧೀರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT