ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಂಟಿ’ ಎಂಬ ಮಾತೃಛಾಯೆಯ ಅನುಭೂತಿ...

Last Updated 20 ಜುಲೈ 2016, 19:30 IST
ಅಕ್ಷರ ಗಾತ್ರ

ಓನರಮ್ಮ ಮಾತಿಗೆ ಸಿಕ್ಕಲಿಲ್ಲ ಅಂದರೆ ಸಿಕ್ಕಲೇ ಇಲ್ಲ. ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಕಾದರೂ ಏನೂ ಉಪಯೋಗ ಆಗಲಿಲ್ಲ. ಎರಡು ದಿನ ಕಳೆದ ಮೇಲೆ ಇನ್ನಿಬ್ಬರು ಹುಡುಗಿಯರು ತಾವು ಮನೆ ಖಾಲಿ ಮಾಡುತ್ತೇವೆ ಅಂತ ಹೇಳಿದರು.

ಯಾಕೆ ಅಂತ ಕೇಳಿದ್ದಕ್ಕೆ ‘ನೀವು ಖಾಲಿ ಮಾಡಲಿಲ್ಲಾಂದ್ರೆ ಕರೆಂಟಷ್ಟೇ ಅಲ್ಲ, ಇನ್ನು ಮುಂದೆ ನೀರೂ ಬರೋಲ್ಲವಂತೆ. ಇನ್ನೆರಡು ದಿನ ನೋಡಿ ಆ ಕೆಲಸನೂ ಮಾಡ್ತೀನಿ ಅಂತ ಹೇಳಿದಳು ಓನರ್ ಮಗಳು’ ಅಂದರು. ಸರಳಾಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಹಲ್ಲು ಕಚ್ಚಿ ಸಹಿಸಿಕೊಂಡು ಓನರ್ ಮಗಳ ಹತ್ತಿರ ಮಾತಾಡಲು ಹೋದರು.

ಬಾಗಿಲು ತೆರೆದು ಒಳಗೆ ಕರೆದಳು ಆ ಹರೆಯದ ಹೆಣ್ಣು. ಸರಳಾ ಒಳಗೆ ಹೋಗಿ ಕೂತಾಗ ಮನೆಯಲ್ಲಿ ಕಾಫಿಯ ಸುವಾಸನೆ ದಟ್ಟವಾಗಿತ್ತು. ಸಿರಿ ಅಯ್ಯಮ್ಮ ಎನ್ನುವ ಆ ಚಂದದ ಹುಡುಗಿ ಸರಳಾಗೆ ಲೋಟದ ತುಂಬ ಹಬೆಯಾಡುತ್ತಿದ್ದ ನೊರೆ ಕಾಫಿ ತಂದುಕೊಟ್ಟಳು. ಜೊತೆಗೆ ಬಿಸ್ಕತ್ತೂ ಇತ್ತು.

‘ಸರ್ಲಾ ಆಂಟೀ, ಕಾಫಿ ಮೊದಲು... ಮಾತು ಆಮೇಲೆ...’ ಎಂದು ಹೇಳಿ ಸರಳಾರ ಮನಸನ್ನು ಒಂದೇ ಕ್ಷಣದಲ್ಲಿ ಗೆದ್ದು ಬಿಟ್ಟಳು. ಸರಳಾ ವಿಚಾರದಲ್ಲಿ ಒಂದು ವಿಷಯವಂತೂ ಸರ್ವವಿಧಿತವಾಗಿತ್ತು. ಹಬೆಯಾಡುವ ಕಾಫಿ ಮುಂದೆ ಎಂಥಾ ಶತ್ರುವೇ ನಿಂತಿದ್ದರೂ, ಮೊದಲ ಆದ್ಯತೆ ಕಾಫಿಗೇ.

ಕಾಫಿ ಎನ್ನುವ ಸ್ವರ್ಗ ಲೋಕದ ದಿವ್ಯ ಪೇಯವನ್ನು ಬಿಸಿಬಿಸಿಯಾಗಿಯೇ ಕುಡಿಯದೆ ಹೋದರೆ ಅದು ಸೃಷ್ಟಿಕರ್ತನಿಗೆ ಮಾಡುವ ದೊಡ್ಡ ಅವಮಾನ ಅಂತ ಅವರ ದೃಢವಾದ ನಂಬಿಕೆಯಾಗಿತ್ತು. ಟೀಅನ್ನು ಅಷ್ಟೇನೂ ಆಸ್ವಾದಿಸದೇ ಹೋದರೂ ಅನಿವಾರ್ಯವಾಗಿ ಒಪ್ಪಿಕೊಂಡಿದ್ದರು.

ದಿನದ ವ್ಯಾಪಾರಕ್ಕೆ ಟೀ ಕುಡಿಯುತ್ತಿದ್ದರು. ಆದರೆ ಕಾಫಿ ಎಂದ ಕೂಡಲೇ ರೋಮಾಂಚಿತರಾಗುತ್ತಿದ್ದರು. ಅದರಲ್ಲೂ ಕೂತ ತಕ್ಷಣ ಯಾರಾದರೂ ಹದವಾಗಿ ಬೆರೆಸಿದ ಕೊಂಚವೇ ಒಗರಾಗಿ ಇನ್ನು ಕೊಂಚ ಸಿಹಿಯಾಗಿ ಇರುವ ಕಾಫಿ ಕೈಗಿಟ್ಟರಂತೂ ‘ಬಾರಾ ಖೂನ್ ಮಾಫ್’! ಅವರ ಕಾಫಿ ಮತ್ತು ಟೀ ಸಂಬಂಧ ಒಂಥರಾ ಲವ್ ಮ್ಯಾರೇಜು ವರ್ಸಸ್ ಅರೇಂಜ್ಡ್ ಮ್ಯಾರೇಜು ಥರ. ‘ಕಾಫಿ ಎಂದರೆ ಪ್ರೇಮಿ. ಟೀ ಎಂದರೆ ಮನೆಯವ’ ಅಂತ ಅವರ ನಂಬಿಕೆ.

ಯುದ್ಧ ಸನ್ನದ್ಧರಾಗಿ ಬಂದ ಸರಳಾಗೆ ಮೊದಲಿಗೆ ಹಬೆಯಾಡುವ ಕಾಫಿ ಕೊಟ್ಟು ಬ್ರಹ್ಮಾಸ್ತ್ರವನ್ನು ಸದ್ಯಕ್ಕೆ ಬತ್ತಳಿಕೆಯಿಂದ ತೆಗೆಯದಂತೆ ಮಾಡಿಬಿಟ್ಟಳು ಸಿರಿ ಎಂಬ ಪುಟ್ಟ ಸುಂದರಿ. ಇದನ್ನೂ ಮಿಕ್ಕಿ ಸರಳಾಗೆ ‘ಸರ್ಲಾ ಆಂಟೀ’ ಅಂತ ಪ್ರೀತಿಯಿಂದ ಕರೆಸಿಕೊಂಡ ತಕ್ಷಣ ‘ಆಂಟಿ’ ಎಂಬ ಹೆಸರಿನಲ್ಲಿರುವ ಅಪರಿಮಿತ ಮಾತೃಛಾಯೆಯ ಕೋರಿಕೆ ಕಂಡಂತಾಗಿ ಸೋತು ಶರಣಾಗಿ ಅಪ್ಪಟ ತಾಯಿಯೇ ಆಗಿಬಿಟ್ಟರು.

ತನಗೂ ಒಬ್ಬ ಮಗಳಿದ್ದಿದ್ದರೆ ತನ್ನ ಜೀವನವನ್ನೆಲ್ಲಾ ಅವಳ ಒಂದೊಂದು ಆಸೆಯನ್ನು ಪೂರೈಸುವುದಕ್ಕೆಂದೇ ಬದುಕಬಹುದಿತ್ತು ಅಂತ ಸರಳಾಗೆ ಎಷ್ಟೋ ಸಲ ಅನ್ನಿಸಿತ್ತು. ಆದರೆ ಒಂಟಿ ಹೆಂಗಸರಿಗೆ ಕಾನೂನುಬದ್ಧವಾಗಿ ಮಕ್ಕಳನ್ನು ದತ್ತು ಕೊಡುವುದು ಬಹಳ ಅಪರೂಪವಾಗಿದ್ದ ಕಾಲ.

ಅಂತಹ ನಿದರ್ಶನಗಳು ಇರಲೇ ಇಲ್ಲ ಅಂತಲೂ ಹೇಳಬಹುದು. ಅದಕ್ಕಾಗೇ ಪುಟ್ಟ ಹುಡುಗಿಯರು ‘ಆಂಟೀ’ ಅಂದರೆ ಸಾಕು ಸರಳಾ ಕರಗಿ ಹೋಗುತ್ತಿದ್ದರು. ಅವರಿಗೆ ಏನು ಸಹಾಯ ಬೇಕಾದರೂ ಮಾಡುತ್ತಿದ್ದರು.

ಆಂಟೀ ಅಂತ ಕರೆದರೆ ಅಮ್ಮಾ ಅಂತ ಕರೆದ ಹಾಗಾಗುತ್ತಿತ್ತೋ ಏನೋ ಯಾರಿಗೆ ಗೊತ್ತು! ಇಂದಿನ ಹುಡುಗರು ಉಪಯೋಗಿಸುವ ‘ಆಂಟಿ’ ಎನ್ನುವ ಪದಕ್ಕೂ ಅಂದಿನ ಹೊತ್ತಲ್ಲಿ ಬಳಕೆಯಾಗುತ್ತಿದ್ದ ‘ಆಂಟಿ’ ಎನ್ನುವ ಪದ ಹುಟ್ಟಿಸುತ್ತಿದ್ದ ಭಾವಾರ್ಥಕ್ಕೂ ವ್ಯತ್ಯಾಸ ಅಗಾಧವಾದದ್ದು.

ಅಂದಿಗೂ ಇಂದಿಗೂ ಆ ಪದ ಬಳಕೆಗೆ ಇರುವ ಅತಿ ದೊಡ್ಡ ಕಂದರ–ಮಿಡಿಯುತ್ತಿರುವ ಎದೆಯೊಳಗೆ ಕಲ್ಮಶ ಕಳೆದುಕೊಳ್ಳುತ್ತಾ ಜೀವಶಕ್ತಿಯನ್ನು ತುಂಬಿಕೊಳ್ಳುತ್ತಿರುವ ರಕ್ತದ ಪರಿಶುದ್ಧತೆಯ ಮಟ್ಟ.

ತನ್ನೊಳಗಿರುವ ಆತ್ಮವನ್ನು ಪೋಷಿಸಿ, ಎದೆ ಉಬ್ಬಿಸಿ, ತಲೆ ಎತ್ತಿ ಓಡಾಡುವವನ ವಿಶ್ವಾಸವೇ ಬೇರೆ; ಸದಾ ದೇಹದ ಅಂಗವೊಂದು ಹೇರುವ ಒತ್ತಾಯಗಳಿಂದ ದಿಗ್ಭ್ರಾಂತಿಗೊಳಗಾಗುತ್ತಾ ವಿಕೃತಿಗಳ ದಾಸನಾಗಿ ಬದುಕುವವನ ಆತ್ಮಶೂನ್ಯತೆಯೇ ಬೇರೆ.

ಹಾಗಂತ ಬ್ರಹ್ಮಚರ್ಯವೇ ಜೀವನವೇನು ಅಂತ ನೀವು ಕೇಳಿದರೆ ಅದಕ್ಕೆ ಉತ್ತರ ನೇರವಾಗಿ ಸಿಕ್ಕದು. ಯಾರ ಆಯ್ಕೆ ಬ್ರಹ್ಮಚರ್ಯೆಯೋ, ಅದು ಅವರ ದಾರಿ. ಯಾರಿಗೆ ಸಾಂಗತ್ಯ ಬೇಕೋ, ಅದೂ ಅವರದ್ದೇ ದಾರಿ. ಆಯ್ಕೆ ಏನೇ ಅಗಿರಲಿ, ಅದು ವಿಕಾರವಾಗದಿದ್ದರೆ ಮನಸ್ಸಿನ ಕತ್ತಲು ಮೂಲೆಗಳಲ್ಲಿ ಕಣ್ಣುಗಳು ಹುಟ್ಟುವುದಿಲ್ಲ.

ಇನ್ನೊಬ್ಬ ವ್ಯಕ್ತಿಯು ಹೆಣ್ಣೆಂಬ ಕಾರಣವೊಂದೇ ಮುಖ್ಯವಾಗಿ ಆ ವ್ಯಕ್ತಿ ನಿಂತರೆ, ಕೂತರೆ, ಮಲಗಿದರೆ, ಎದ್ದು ಓಡಾಡಿದರೂ ಸಾಕು; ಇಂದು ಕಣ್ಣುಗಳು ಹಿಂಬಾಲಿಸುತ್ತವೆ. ದೇಹವನ್ನು ಮುದುಡಿ ಮರೆಮಾಡುತ್ತಾ ಬದುಕಲು ಹೇಗೆ ಸಾಧ್ಯ? ಆ ಸಂದರ್ಭ ಸೃಷ್ಟಿಯಾಗುವುದಾದರೂ ಎಂತಹ ಮನಃಸ್ಥಿತಿಯಿಂದ?

ಯಾವುದು ಪ್ರಕೃತಿಗೆ ಸಹಜವೋ ಅದು ಸಹಬಾಳ್ವೆಯ ಫಿಲ್ಟರ್ ಅನ್ನು ಹಾದು ಹೋಗಬೇಕಲ್ಲ? ಹೊಟ್ಟೆ ಹಸಿದ ತಕ್ಷಣ ಕಸ ಲದ್ದಿ ಕಂಡರೆ ತಿನ್ನಬಾರದು, ಅನ್ನವನ್ನೇ ತಿನ್ನಬೇಕು ಎನ್ನುವ ವಿವೇಚನೆ ಹೇಗೆ ಕೆಲಸ ಮಾಡುತ್ತದೋ;

ಹಾಗೇ ಹಾರ್ಮೋನುಗಳು ಕುಣಿಯಲು ತೊಡಗಿದ ತಕ್ಷಣ ಸಿಕ್ಕಸಿಕ್ಕದ್ದಕ್ಕೆ ಕೈ ಹಾಕುವ, ಭೋಗಿಸುವ ಹಕ್ಕುದಾರಿಕೆಯ ಅಹಂಕಾರವನ್ನು ಬೆಳೆಸಿಕೊಳ್ಳಬಾರದು ಎಂದು ಅರ್ಥವಾಗುವುದು ಅಷ್ಟೊಂದು ಕ್ಲಿಷ್ಟವೇನು?

ಅಂತೂ ಇಂದು ಹೊಲಸಾಗಿರುವ ‘ಆಂಟಿ’ಯ ಚರ್ಯೆ ಅಂದು ಸರಳಾರ ಹೃದಯದಲ್ಲಿ ‘ಅಮ್ಮತ್ವ’ವನ್ನು ಹುಟ್ಟಿಸಿ ಹುಡುಗಿಯೊಂದರ ತಾಯಿಯ ಸ್ಥಾನವನ್ನು ತುಂಬುವಂತೆ ಮಾಡಿಬಿಟ್ಟಿತ್ತು.

ಸಿರಿಯೇ ಮಾತಾಡಿದಳು. ‘ಸರ್ಲಾ ಆಂಟೀ, ಪೀಜಿ ಮುಚ್ಚಬೇಕು ಅಂತ ಅಪ್ಪ ತುಂಬಾ ಗಲಾಟೆ ಮಾಡಿದಾರೆ. ಅಮ್ಮ ಅದಕ್ಕೇ ಊರಿಗೆ ಹೋದರು. ನೀವೆಲ್ಲ ಇರೋದರಿಂದ ತೊಂದರೆ ಆಗ್ತಿದೆಯಂತೆ...’
‘ನಾವೇನು ಮಾಡಿದಿವಿ ಸಿರಿ? ಅಮ್ಮನಿಗೆ ಆಗೋ ಪ್ರಾಬ್ಲಮ್ ಅನ್ನು ಸಾಲ್ವ್ ಮಾಡಲಿಲ್ಲವೇನು?’

‘ಇಲ್ಲ ಆಂಟೀ... ಅಪ್ಪನಿಗೆ ಅದು ಹಾಗೆ ಕಾಣಿಸ್ತಾ ಇಲ್ಲ. ಅವರಿಗೆ ಅಮ್ಮನ ಕಷ್ಟ ಗೊತ್ತಾಗ್ತಾನೇ ಇಲ್ಲ. ನೀವು ಶಹೀನ ಟ್ರೀಟ್‌ಮೆಂಟಿಗೆ ದುಡ್ಡು ಖರ್ಚು ಮಾಡಿದ್ದನ್ನು ಅಮ್ಮ ಅಪ್ಪನಿಗೆ ಹೇಳಿ ಈ ತಿಂಗಳು ಅವರು ಬಾಡಿಗೆ ಕೊಡೋದು ಬೇಡ ಅಂದರೆ ಅಪ್ಪ ಗಲಾಟೆ ಮಾಡಿಬಿಟ್ರು. ಹೀಗೇ ನಡೆಸೋದಾದ್ರೆ ಪೀಜಿ ಮುಚ್ಚು ಅಂತ ಕೂತಿದಾರೆ...’
‘ಹಾಗಾದ್ರೆ ಏನು ಮಾಡಬೇಕಂತೆ?’

‘ನಿಮ್ಮನ್ನೆಲ್ಲಾ ಕಳಿಸಿ ಹೆಚ್ಚು ಬಾಡಿಗೆ ಕೊಡೋ ಹುಡುಗೀರನ್ನು ಸೇರಿಸಿಕೊಳ್ಳಬೇಕಂತೆ. ನಾನು ಈ ವರ್ಷ ಸೆಕೆಂಡ್ ಪೀಯು ಸರ್ಲಾ ಆಂಟೀ. ನನಗೆ ಬಿ.ಇ ಕಂಪ್ಯೂಟರ್ ಸೈನ್ಸ್ ಸೇರಬೇಕಂತ ಆಸೆ ಇದೆ. ಅದಕ್ಕೆ ದುಡ್ಡು ಹೊಂದುತ್ತೆ ಅಂತ ಅಮ್ಮ ಶುರು ಮಾಡಿದ ಪೀಜಿ ಇದು. ಶಹೀನ ಇನ್ಸಿಡೆಂಟ್ ವಾಸ್ ನಾಟ್ ಎಕ್ಸ್‌ಪೆಕ್ಟೆಡ್. ಅಮ್ಮನಿಗೂ ಹೊಸ ಅನುಭವ. ಆದರೆ ಅಪ್ಪ ತುಂಬಾ ತೊಂದರೆ ಕೊಡ್ತಿದಾರೆ’ ಎನ್ನುತ್ತಾ ಸಿರಿ ಅಳಲು ಶುರು ಮಾಡಿದಳು.

‘ಸರಿ ಈಗ ಏನು ಮಾಡಬೇಕಂತೆ?’
‘ಆಗಿದ್ದು ಆಗಲಿ, ಅಮ್ಮ ಈ ಪೀಜಿ ಮೂಲಕವೇ ನನ್ನ ಫೀಸಿಗೆ ದುಡ್ಡು ಹೊಂದಿಸಬೇಕು. ನಿಮಗೆ ಬಾಡಿಗೆ ಕಮ್ಮಿ ಮಾಡಿದರೆ ಆ ನಷ್ಟವನ್ನು ಯಾರೂ ತುಂಬಿ ಕೊಡಲ್ಲ. ಅಮ್ಮನಿಗೆ ಕಷ್ಟ ಆಗುತ್ತೆ...’

‘ನಾವು ಬಿಟ್ಟು ಹೋದ್ರೆ? ಜಾಸ್ತಿ ಬಾಡಿಗೆ ಕೊಡೋರು ಬರ್ತಾರಾ?’
‘ಆಂಟೀ...ತಪ್ಪು ತಿಳೀಬೇಡಿ. ನಿಮಗಿಂತಾ ಆಲ್ ಮೋಸ್ಟ್ ಡಬಲ್ ಬಾಡಿಗೆ ಕೊಡೋಕೆ ಮೂರು ಜನ ಹುಡುಗಿಯರು ರೆಡಿ ಇದಾರೆ. ಆದರೆ ಅಮ್ಮ ನಿಮಗೆ ಇದನ್ನೆಲ್ಲಾ ತಿಳಿಸಿ ಹೇಳೋಕೆ ಹೇಳಿದರು...’

‘ನಾವು ಬಿಡಲ್ಲ ಅಂದ್ರೆ?’
‘ಬಿಡಲ್ಲ ಅಂದ್ರೆ ಏನ್ ಮಾಡೋಕಾಗತ್ತೆ? ನಾನು ಎಲ್ಲಾದ್ರೂ ಚಿಕ್ಕ ಕೆಲಸ ಹಿಡಿದು ನಷ್ಟ ತುಂಬಿಸಿಕೊಳ್ಳಬೇಕಾಗುತ್ತೆ. ಓದೋಕೆ ಕಡಿಮೆ ಟೈಮ್ ಸಿಗುತ್ತೆ. ಅಷ್ಟು ಕಡಿಮೆ ಟೈಮಲ್ಲಿ ಎಂಜಿನಿಯರಿಂಗ್ ಸೀಟು ಸಿಗೋ ಹಾಗೆ ಓದೋದು ಕಷ್ಟವೇ...’

‘ಅಪ್ಪ ಹೆಲ್ಪ್ ಮಾಡಲ್ವಾ?’
‘ಅಪ್ಪನ್ನ ನೀವೇ ನೋಡಿದೀರಲ್ಲ? ಈಗ ನೀವೆಲ್ಲಾ ಇಲ್ಲೇ ಇದ್ರೆ ಪೀಜಿ ಕ್ಲೋಸ್ ಮಾಡ್ತೀನಿ ಅಂತ ಹೆದರಿಸ್ತಾರೆ. ನನ್ನ ಅಜ್ಜಿ ತಾತನ್ನ ಇಲ್ಲಿಗೇ ಕರ್ಕೊಂಡು ಬರ್ತಾರಂತೆ. ಅವರು ಬಂದರೂ ಪರವಾಗಿಲ್ಲ, ಆದರೆ ಈ ಪೀಜಿಯಿಂದ ಬರೋ ದುಡ್ಡು ನಮಗೆ ಬೇಕು...’
‘ಸರಿ ಬಿಡು...ಅಮ್ಮನಿಗೆ ರಾತ್ರಿ ಬಸ್ಸಿಗೆ ವಾಪಸ್‌  ಬರೋಕೆ ಹೇಳು. ಕರೆಂಟು ಆನ್ ಮಾಡು. ಏನೂ ಯೋಚಿಸಬೇಡ. ಆರಾಮಾಗಿರು...’

‘ಅಂದ್ರೆ?’
‘ಈ ವಾರದಲ್ಲಿ ಪೀಜಿ ಖಾಲಿ ಮಾಡ್ತೀವಿ. ಮೂರೂ ಜನ. ಡೋಂಟ್ ವರಿ...’
ಸಿರಿಯ ಕಣ್ಣಲ್ಲಿ ನೀರು ತುಂಬಿಕೊಂಡವು. ದೃಷ್ಟಿ ಮಂಜುಮಂಜಾಯಿತು...
‘ಸಾರಿ ಆಂಟೀ...’
‘ಇರಲಿ ಬಿಡು ಪುಟ್ಟಾ. ಇದೇ ಏರಿಯಾದಲ್ಲಿ ಇರ್ತೀವಿ. ಆಗಾಗ ಬಂದು ಹೋಗ್ತೀವಿ..’

ಸರಳಾ ಕೈ ಹಿಡಿದು ಗಟ್ಟಿಯಾಗಿ ಅದುಮಿ ಹಣೆಗೆ ಹಚ್ಚಿಕೊಂಡು ಜೋರಾಗಿ ಅತ್ತಳು. ‘ಸಾರಿ... ಸಾರಿ’ ಅಂತ ಸಾವಿರ ಸಲ ಹೇಳಿದಳು. ಸರಳಾ ಸಂಜೆಗೆ ಮಿಕ್ಕ ಹುಡುಗಿಯರು ಬರುವುದನ್ನೇ ಕಾದು ಕೂತು ತಾವು ಈ ವಾರಾಂತ್ಯದಲ್ಲಿ ಪೀಜಿ ಖಾಲಿ ಮಾಡಬೇಕಿರುವುದರ ಅನಿವಾರ್ಯವನ್ನು ವಿವರಿಸಿದರು.
‘ಸರಳಕ್ಕಾ ಯಾಕ್ ಹಿಂಗೆ ಮಾಡಿದ್ರಿ? ನೀವ್ ಬೇಕಾದ್ರೆ ಶಿಫ್ಟ್ ಮಾಡ್ಕೊಳಿ.

ನಾವೆಲ್ಲಿಂದ ಬೇರೆ ಪೀಜಿ ನೋಡೋಕಾಗುತ್ತೆ? ಅದೂ ಈ ವಾರದ ಕೊನೆಗೆ ಅಂತ ಹೇಳಿದೀರಿ. ಈವತ್ತು ಮಂಗಳವಾರ. ಇನ್ನು ನಾಲ್ಕು ದಿನದಲ್ಲಿ ಇದೇ ಏರಿಯಾದಲ್ಲಿ, ಇದೇ ಬಾಡಿಗೆಗೆ ಇಷ್ಟು ಜಾಗ, ಊಟ ತಿಂಡಿ ಎಲ್ಲಾ ಸೌಕರ್ಯ ಇರೋ ಪೀಜಿ ಸಿಗುತ್ತೇನ್ರೀ?’ ವಿಜಿ ರೇಗಾಡಿದಳು. ಅವಳ ಕಷ್ಟ ಹೊಸ ಜಾಗದಲ್ಲಿ ಇನ್ನು ನೂರಿನ್ನೂರು ರೂಪಾಯಿ ಬಾಡಿಗೆ ಹೆಚ್ಚಿಗೆ ಆದರೂ ಸುಧಾರಿಸಿಕೊಳ್ಳಲು ಸಾಧ್ಯವಿರಲಿಲ್ಲ.

ಹಾಗಾಗಿ ನಿಂತ ಕಾಲಲ್ಲಿ ಪೀಜಿ ಹುಡುಕಬೇಕು ಅಂದ್ರೆ ಬೀದಿಗೆ ಬರಬೇಕಾಗುತ್ತೆ. ಆಫೀಸಿಗೆ ಹೋಗೋದು ಯಾವಾಗ? ಪೀಜಿ ಹುಡುಕೋದು ಯಾವಾಗ? ಆಗೆಲ್ಲ ಬಾಡಿಗೆ ಮನೆಗಳ ಬಗ್ಗೆ, ಪೀಜಿಯ ಬಗ್ಗೆ ಮಾಹಿತಿ ಇಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಬ್ರೋಕರುಗಳು ಪೀಜಿ ಬಗ್ಗೆ ಅಷ್ಟು ಆಸಕ್ತಿ ವಹಿಸುತ್ತಿರಲಿಲ್ಲ.

ಹೀಗಿರುವಾಗ ಇಲ್ಲಿ ಬ್ಯಾಗು ಕಟ್ಟಿಬಿಟ್ಟರೆ ಹೋಗೋದು ಎಲ್ಲಿಗೆ?
‘ಆ ಹುಡುಗಿ ಆಂಟೀ, ಆಂಟೀ ಅಂತ ಅಷ್ಟು ಆಲವತ್ತುಕೊಂಡ್ಲು. ಪಾಪ ಅವರದ್ದೂ ಕಷ್ಟ ಅಲ್ವಾ?’ ಸರ್ಲಾ ಆಂಟಿ ಸಂಪೂರ್ಣವಾಗಿ ಮೈವೆತ್ತಿಕೊಂಡಿದ್ದಳು. ಸರಳಾ ‘ಆಂಟಿ’ ಕ್ಯಾರೆಕ್ಟರಿನಲ್ಲಿ ಪೂರ್ತಿ ಇಳಿದುಹೋಗಿ ‘ಎಕ್ಸ್ಟಾ ಲಾರ್ಜ್’ ತಾಯ್ತನ ಅನುಭವಿಸಲು ಶುರು ಮಾಡಿದ್ದರು.

ಕೈಯಲ್ಲಿ ದುಡ್ಡು ಇದ್ದಿದ್ದರೆ ಸಿರಿಗೆ ಕೊಟ್ಟೇ ಬಿಡುತ್ತಿದ್ದರೇನೋ. ಕೆಲವು ದಿನಗಳ ಹಿಂದೆ ಅನಿವಾರ್ಯವಾಗಿ ತೋರಿಸಲೇಬೇಕಾದ ಒಳ್ಳೆಯತನ ಅವರನ್ನು ಪಾಪರ್ ಮಾಡಿ, ಕೇರಾಫ್ ಫುಟ್‌ಪಾತ್ ಕೂಡ ಆಗುವ ಲಕ್ಷಣಗಳು ಕಾಣುತ್ತಿದ್ದವು.

ಪೀಜಿ ಬದಲಾಯಿಸುತ್ತೇವೆಂದರೆ ಮಾಡಬೇಕಾದ ಮೊದಲ ಕೆಲಸ ಮನೆಯವರಿಗೆ ವಿಷಯ ತಿಳಿಸುವುದು. ಮನೆಯಿಂದ ಪೀಜಿ ನಂಬರಿಗೆ ಫೋನ್ ಮಾಡಿದಾಗ ಮಗಳು ಅಲ್ಲಿಲ್ಲ, ಇನ್ನೆಲ್ಲಿಗೋ ಶಿಫ್ಟ್ ಆಗಿದ್ದಾಳೆ ಅಂತ ಗೊತ್ತಾದರೆ ಮನೆಯವರು ಎದೆ ಒಡೆದುಕೊಂಡು ಬಿಡುತ್ತಿದ್ದರು. ಸೂಸನ್‌ಗೆ ಕೂಡ ಈ ವಿಷಯ ಕೇಳಿ ಸಿಕ್ಕಾಪಟ್ಟೆ ತಾಮಸ ಗುಣಗಳು ವಿಜೃಂಭಿಸಿದವು. ಆದರೇನು ಮಾಡುವುದು? ಖಾಲಿ ಮಾಡದಿದ್ದರೆ ಅಮಾನವೀಯ ಅಂತಾಗುತ್ತದೆ. ಅಲ್ಲದೆ ಓನರಮ್ಮನ ಕಷ್ಟ ಅರ್ಥವಾಗುವಂತಿತ್ತು.

‘ಆ ಹುಡುಗಿ ಕಣ್ಣೀರಿಟ್ಟು ಕೇಳಿಕೊಂಡಳು ಕಣ್ರೇಮಾ... ಜೋರು ಮಾಡಿದ್ರೆ ನಾನೇನು ಒಪ್ತಿರಲಿಲ್ಲ...’ ಸರಳಾ ತಪ್ಪಿತಸ್ಥ ಶ್ವಾನದಂತೆ ಕರುಣಾಜನಕ ಕಣ್ಣುಗಳಿಂದ ನೋಡುತ್ತಾ ದೈನ್ಯದ ದನಿಯಲ್ಲಿ ಉಸುರಿದರು.

‘ಆಯ್ತು ಬಿಡ್ರೀ. ಮಾಡೋದು ಮಾಡಿ ಬಂದಿದೀರ. ಈಗ ಅದಕ್ಕೆ ಕಾರಣ ಹೇಳಿದ್ರೆ ಏನು ಪ್ರಯೋಜ್ನ? ನಡೀರಿ ಮನೆಗೆ ಫೋನ್ ಮಾಡಿ ಮೊದಲು ಹೇಳಿಬಿಡನ. ಹೊಸ ಜಾಗ ನೋಡಿದೀವಿ, ಇದಕ್ಕಿಂತಾ ಚೆನ್ನಾಗಿದೆ ಅಂತೆಲ್ಲ ಪುಂಗಿ ಊದಿ ಸೆಟ್ ಮಾಡ್ಬೇಕು’ ಅಂತ ವಿಜಿ ಹೇಳಿದಳು.

ಇವಳಿಗ್ಯಾಕಪ್ಪ ಇಷ್ಟೊಂದು ಸಿಟ್ಟು ಅಂತ ಸೂಸನ್ ಅಚ್ಚರಿಪಟ್ಟಳು. ‘ಅವಳಿಗೆ ಅಲ್ಲಿ ದುಡ್ಡು ಜಾಸ್ತಿಯಾದ್ರೆ ಕಷ್ಟ ಆಗುತ್ತಂತೆ ಕಣೇ...’ ಅಂತ ಚಿತ್ರಾ ಗುಟ್ಟಾಗಿ ಸಮಜಾಯಿಶಿ ಹೇಳಿದಳು. ಹತ್ತಿರದ ಟೆಲಿಫೋನ್ ಬೂತ್ ಒಂದಕ್ಕೆ ಹೋಗಿ ಒಬ್ಬೊಬ್ಬರಾಗಿ ಎಸ್‌ಟಿಡಿ ಕಾಲ್ ಮಾಡಿದರು. ಎಲ್ಲರದ್ದೂ ಒಂದೇ ರಾಗ. ‘ಜಾಗ ಚೆನ್ನಾಗಿದೆ. ಫೋನ್ ನಂಬರ್ ಗೊತ್ತಿಲ್ಲ, ಕೇಳಿಕೊಂಡು ಹೇಳ್ತೀವಿ’.

ಅರ್ಧ ಗಾಜು, ಇನ್ನರ್ಧ ತಗಡಿನಿಂದ ಕೂಡಿದ, ಒಬ್ಬರು ಮಾತ್ರ ಅತ್ತಿತ್ತ ಅಲುಗಾಡದಂತೆ ನಿಲ್ಲಬಲ್ಲ ಟೆಲಿಫೋನ್ ಬೂತ್ ಎಂಬ ಸಣ್ಣ ಜಗತ್ತು ಅದೆಷ್ಟು ನೋವು–ನಲಿವುಗಳನ್ನು, ನಿಟ್ಟುಸಿರು, ಮುತ್ತುಗಳನ್ನು ಕಂಡಿತ್ತೋ! ಭಾವನೆಗಳ ಅನಾವರಣ ಅದರಲ್ಲಿ ಆಗುತ್ತಿದ್ದುದು ದಿನಕ್ಕೆ ಅದೆಷ್ಟು ಸಲವೋ, ಅದೆಷ್ಟು ಜನವೋ!

ಈವತ್ತಿನ ಮೊಬೈಲಿಗಿಂತಾ ಹೆಚ್ಚು ಘನತೆ ಆ ಬೂತ್ ಎಂಬ ಪುಟ್ಟ ಪ್ರಪಂಚಕ್ಕೆ ಇತ್ತು ಎಂದರೆ ಅದಕ್ಕಿಂತ ದೊಡ್ಡ ಸತ್ಯ ಇರಲು ಸಾಧ್ಯವೇ? ಕಿರುಚಿ ಮಾತಾಡಿದರೂ, ಕಣ್ಣೀರು ಹಾಕಿದರೂ ಏನೋ ಒಂದು ವೈಯಕ್ತಿಕತೆ ಇರುತ್ತಿತ್ತು. ಈವತ್ತು ಮೊಬೈಲು ಕೈಲಿ ಹಿಡಿದು ಪಿಸುಗುಟ್ಟಿ ಮಾತಾಡಿದರೂ ಒಂಥರಾ ನಡು ರಸ್ತೆಯಲ್ಲಿ ಬೆತ್ತಲಾಗುತ್ತಿದ್ದೇವೆನ್ನುವ ಭಾವನೆ ಮೂಡುವುದು ಸುಳ್ಳಲ್ಲ.

ದುಡ್ಡು ಕೊಡಲು ನಿಂತರು. ಟೆಲಿಫೋನ್ ಬೂತ್ ಓನರ್ ಮೂವತ್ತರ ಆಸುಪಾಸಿನಲ್ಲಿದ್ದ ಹೆಂಗಸು. ತೆಳ್ಳನೆ ಫ್ರೇಮಿನ ಕನ್ನಡಕ ಹಾಕಿಕೊಂಡು ತನ್ನ ಉದ್ದ ಜಡೆಯನ್ನು ಸಂಭಾಳಿಸುತ್ತಾ ಕಾಲ್ಕ್ಯುಲೇಟರಿನಲ್ಲಿ ಬಿಲ್ ಎಲ್ಲ ಸೇರಿಸಿ ಎಷ್ಟಾಯಿತು ಅಂತ ಲೆಕ್ಕ ಹಾಕುತ್ತಿದ್ದಳು. ‘ಎಲ್ಲಾರದ್ದೂ ಸೇರಿಸಿ ತಗೊಳ್ಳಲಾ?’ ಅಂತ ಢಾಳಾಗಿ ತೆಲುಗು ವಾಸನೆ ಹೊಡೆಯುತ್ತಿದ್ದ ಇಂಗ್ಲೀಷಿನಲ್ಲಿ ನಗುತ್ತಾ ಕೇಳಿದಳು.

‘ಇಲ್ಲ, ಸಪರೇಟ್ ತಗೊಳಿ’ ಅಂದರು ಸರಳಾ. ನೋಟುಗಳು ಹಸ್ತ ಬದಲಾಯಿಸಿ ಚಿಲ್ಲರೆಗಳ ವಿನಿಮಯ ಆಗಿ ಹೊರಡುವ ಮುನ್ನ ಸೂಸನ್‌ಗೆ ಒಂದು ಐಡಿಯಾ ಹೊಳೆಯಿತು.

‘ಇಲ್ಲಿ ಯಾವ್ದಾದ್ರೂ ಪೀಜಿ ಇದೆಯಾ ಅಂತ ಈ ಬೂತ್‌ನವರನ್ನೇ ಕೇಳೋಣ್ವಾ?’
‘ಪ್ಲೀಸ್ ಸುಮ್ನೆ ಬಾ. ನನಗೆ ಹೊಟ್ಟೆ ಹಸೀತಾ ಇದೆ. ಈಗ ತಿನ್ನಕ್ಕೂ ಇರುತ್ತೋ ಇಲ್ವೋ’ ಅಂತ ಸರಳಾ ಕಡೆ ನೋಡುತ್ತಾ ವಿಜಿ ವ್ಯಂಗ್ಯವಾಗಿ ಹೇಳಿದಳು.
‘ಏ! ಅಂಗಡಿಯೋರಿಗೆ, ತರಕಾರಿಯೋರಿಗೆ ಏರಿಯಾ ಬಗ್ಗೆ ಸಿಕ್ಕಾಪಟ್ಟೆ ಮಾಹಿತಿ ಇರುತ್ತೆ. ಕೇಳನ ಇರು.

ಒಂದೇ ನಿಮಿಷ’ ಎನ್ನುತ್ತಾ ಸೂಸನ್ ಮತ್ತೆ ಟೆಲಿಫೋನ್ ಬೂತಿನೊಳಕ್ಕೆ ಹೋದಳು. ಐದು ನಿಮಿಷ ಕಳೆಯಿತು. ಹತ್ತು ನಿಮಿಷ ಕಳೆಯಿತು. ಇಣುಕಿ ನೋಡಿದರೆ ಬೂತ್ ಹೆಂಗಸು, ಇವಳೂ ಸಿಕ್ಕಾಪಟ್ಟೆ ಕೈ ಕಾಲು ಆಡಿಸುತ್ತಾ ಮಾತನಾಡುತ್ತಿದ್ದಾರೆ.

‘ಯಾವ್ದೋ ಜಾಗದ ಬಗ್ಗೆ ಗೊತ್ತಾಗಿರೋ ಹಂಗಿದೆ’ ಎಂದು ಊಹಿಸಿದಳು ಚಿತ್ರಾ. ಯಾರೋ ಹಿಂದಿನಿಂದ ಹೆಗಲ ಮೇಲೆ ಕೈ ಇಟ್ಟರು. ತಿರುಗಿ ನೋಡಿದರೆ ಹಾಲಿ ಪೀಜಿಯ ಓನರ್ ನಿಂತಿದ್ದರು. ‘ಐ ಯಾಮ್ ಸಾರಿ...’ ಎಂದವರೇ ಬಿಕ್ಕಿಬಿಕ್ಕಿ ಅಳಲು ಶುರು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT