ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟಿ.ವಿ. ತಜ್ಞ’ರು ಪ್ರಾಯೋಜಿಸಿದ ಹಿಂಸಾಚಾರ

Last Updated 13 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕಾವೇರಿ ವಿವಾದದ ನೆಪದಲ್ಲಿ ಕಳೆದ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆದ ಘಟನೆಗಳು ಮಾಧ್ಯಮ ಧರ್ಮಕ್ಕೆ ಸಂಬಂಧಿಸಿದ ಹಳೆಯ ಪ್ರಶ್ನೆಯನ್ನೇ ಮತ್ತೆ ಕೇಳುವಂತೆ ಮಾಡುತ್ತಿದೆ. ಮಾಧ್ಯಮಗಳು ಸತ್ಯದ ಪರವಾಗಿರಬೇಕು ಎಂಬ ವಿಷಯದಲ್ಲಿ ಯಾರಿಗೂ ಸಂಶಯವಿಲ್ಲ. ಆದರೆ ಆ ಸತ್ಯ ಯಾವುದು? ಯಾವುದೇ ವಿಚಾರವನ್ನು ತೆಗೆದುಕೊಂಡರೂ ಅದಕ್ಕೆ ಸಂಬಂಧಿಸಿದಂತೆ ಎರಡು ಸತ್ಯಗಳಿರುತ್ತವೆ.

ಮೊದಲನೆಯದ್ದು ‘ಜನಪ್ರಿಯ’ ಸತ್ಯ. ಮತ್ತೊಂದು ತಕ್ಷಣಕ್ಕೆ ಅಪ್ರಿಯ ಎನಿಸುವ ವಾಸ್ತವ. ‘ಜನಪ್ರಿಯ ಸತ್ಯ’ದ ಜೊತೆಗಿನ ಪ್ರಯಾಣ ಮಾಧ್ಯಮಕ್ಕೆ ಸುಲಭ. ಆದರೆ ಇದರ ಪರಿಣಾಮ ಮಾತ್ರ ಜನವಿರೋಧಿಯಾಗಿರುತ್ತದೆ. ‘ಜನಪ್ರಿಯ ಸತ್ಯ’ದ ಜೊತೆಗೆ ಮಾಧ್ಯಮ ಸಾಗಲು ತೊಡಗಿದರೆ ಅದು ಜನರ ಬದುಕನ್ನು ಹೇಗೆ ಕಷ್ಟಕ್ಕೆ ದೂಡುತ್ತದೆ ಎಂಬುದು ಸೋಮವಾರ ಟಿ.ವಿ. ಚಾನೆಲ್‌ಗಳನ್ನು ವೀಕ್ಷಿಸುತ್ತಿದ್ದವರ ಕಣ್ಣೆದುರೇ ಅನಾವರಣಗೊಂಡಿತು.

ಬೆಂಗಳೂರಿನಲ್ಲಿ ಸೋಮವಾರ ನಡೆದ ಹಿಂಸಾಚಾರವನ್ನು ಪ್ರತಿಭಟನೆ ಎಂದು ಕರೆಯುವುದು ‘ಪ್ರಜಾಸತ್ತಾತ್ಮಕ ಪ್ರತಿಭಟನೆ’ ಎಂಬ ಪರಿಕಲ್ಪನೆಗೆ ಮಾಡುವ ಅವಮಾನ.ಇದನ್ನು ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ನೀಡಿದ ಏಕಪಕ್ಷೀಯ ತೀರ್ಪಿನ ವಿರುದ್ಧ ಕನ್ನಡಿಗರು ಪ್ರದರ್ಶಿಸಿದ ಆಕ್ರೋಶ ಎನ್ನಲೂ ಸಾಧ್ಯವಿಲ್ಲ. ಬಸ್ಸುಗಳಿಗೆ ಬೆಂಕಿ ಹಚ್ಚಿದವರು ಕಾವೇರಿ ಕೊಳ್ಳದ ರೈತರೂ ಅಲ್ಲ. ಕನ್ನಡನಾಡನ್ನು ಪ್ರತಿನಿಧಿಸುವವರೂ ಅಲ್ಲ.

ಈ ಹಿಂಸಾಚಾರಕ್ಕೆ ನೀಡಬಹುದಾದ ವಿವರಣೆ ಒಂದೇ. ಹಲವು ದಿನಗಳಿಂದ ಸತತವಾಗಿ ದೃಶ್ಯ ಮಾಧ್ಯಮಗಳ ಮೂಲಕ ನಡೆದ ಪ್ರಚೋದನೆಯ ಫಲಿತಾಂಶ. ದೃಶ್ಯ ಮಾಧ್ಯಮಗಳೇಕೆ ಹೀಗೆ ವರ್ತಿಸಿದವು ಎಂಬುದನ್ನು ತಿಳಿಯುವುದಕ್ಕೆ ಸದ್ಯದ ಮಾಧ್ಯಮ ಪರಿಸರವನ್ನು ಅರ್ಥ ಮಾಡಿಕೊಳ್ಳಬೇಕು. ಇದನ್ನು ಸಾಮಾಜಿಕ ಜಾಲತಾಣಗಳ ಕಾಲದ ಮಾಧ್ಯಮ ಪರಿಸರ ಅಥವಾ ಇಂಟರ್ನೆಟ್ಟೋತ್ತರ ಯುಗದ ಮಾಧ್ಯಮ ಪರಿಸರ ಎಂದು ಗುರುತಿಸಬಹುದು.

ಘಟನೆಯೊಂದು ಸಂಭವಿಸುವ ಕ್ಷಣ ಮತ್ತು ಅದು ಸುದ್ದಿಯಾಗಿ ಪ್ರಕಟ/­ಪ್ರಸಾರವಾಗುವ ನಡುವಣ ಸಮಯದ ಅಂತರವನ್ನು ಈಗ ಬಹುತೇಕ ಶೂನ್ಯ­ವಾಗಿಸುವ ಸಾಧ್ಯತೆಯನ್ನು ತಂತ್ರಜ್ಞಾನ ಒದಗಿಸಿದೆ. ಆದರೆ ಈ ವೇಗಕ್ಕೆ ಅನುಗುಣವಾಗಿರುವ ಪ್ರಬುದ್ಧತೆ ತಂತ್ರಜ್ಞಾನ­ವನ್ನು ಬಳಸುತ್ತಿರುವ ಮಾಧ್ಯಮಕ್ಕೆ ಇಲ್ಲ. ಅಷ್ಟೇ ಆಗಿದ್ದರೆ ಪರಿಸ್ಥಿತಿ ಬಿಗಡಾಯಿಸುತ್ತಿರಲಿಲ್ಲ. ಮಾಧ್ಯಮ ಪ್ರತಿನಿಧಿಗಳಿಗೆ ಅತ್ಯಂತ ಅಗತ್ಯವಾಗಿರುವುದು ತಮ್ಮ ಅರಿವಿನ ಮಿತಿಯ ಕುರಿತ ಜ್ಞಾನ.

ದುರದೃಷ್ಟವಶಾತ್ ಟಿ.ವಿ. ಸ್ಟುಡಿಯೋಗಳಲ್ಲಿ ಕ್ಯಾಮೆರಾದ ನಿರೂಪಕ­ರಾಗಿ ಕುಳಿತವರು ಕಳೆದುಕೊಂಡಿರುವುದು ಈ ಜ್ಞಾನವನ್ನು. ಪರಿಣಾಮವಾಗಿ ಅವರು ಸಕಲ ವಿಷಯಗಳ ತಜ್ಞರೂ, ಹೋರಾಟಗಾರರೂ, ಸಮಾಜ, ಸರ್ಕಾರ, ಸಂಘಟನೆಗಳಿಗೆಲ್ಲಾ ಬೋಧಿಸುವ ಜ್ಞಾನಿಗಳೂ ಆಗಿಬಿಡುತ್ತಾರೆ. ಪರಿಣಾಮದ ಅರಿವೇ ಇಲ್ಲದೆ ಎಲ್ಲಾ ಅಪೂರ್ಣ, ಅರ್ಧ ಸತ್ಯಗಳಿಗೆ ಇವರು ನಿಜದ ಪೋಷಾಕು ತೊಡಿಸುತ್ತಾರೆ. ಸೋಮವಾರ ಟಿ.ವಿ.ಯ ತೆರೆಗಳ ಮೇಲೆ ಅನಾವರಣಗೊಂಡದ್ದು ಇದುವೇ. ಅದರ ಪರಿಣಾಮ ಕಾಣಿಸಿದ್ದು ಮಾತ್ರ ಬೆಂಗಳೂರಿನ ಬೀದಿಗಳಲ್ಲಿ.

ಕನ್ನಡದ ಸಂದರ್ಭದಲ್ಲಿ ಟಿ.ವಿ.ಯ ಮೂಲಕ ಸಂಭವಿಸಿದ್ದು ಅಮೆರಿಕ ಮತ್ತಿತರ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅಂತರ್ಜಾಲ ತಾಣಗಳ ಮೂಲಕ ಸಂಭವಿಸುತ್ತದೆ.ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ‘ಜನಪ್ರಿಯ ಸುದ್ದಿ’ಗಳನ್ನು ಆರಿಸಿ ಪ್ರಕಟಿಸುವ ಅನೇಕ ತಾಣಗಳು ವದಂತಿಗಳನ್ನೂ ಅರ್ಧ ಸತ್ಯಗಳನ್ನೂ ನಿಜವಾಗಿಸುವ ಕೆಲಸವನ್ನು ಮಾಡುತ್ತಿರುತ್ತವೆ. ಇದರ ಕುರಿತು ಕೊಲಂಬಿಯ ವಿಶ್ವವಿದ್ಯಾಲಯದ ‘ಟೋ ಸೆಂಟರ್ ಫಾರ್ ಡಿಜಿಟಲ್ ಜರ್ನಲಿಸಂ’ನ ಫೆಲೋ ಮತ್ತು ಪತ್ರಕರ್ತ ಕ್ರೇಗ್ ಸಿಲ್ವರ್‌ಮನ್ ವಿವರವಾದ ಅಧ್ಯಯನ ನಡೆಸಿದ್ದಾರೆ.

ವದಂತಿಗಳ ಮೇಲೆ ನಿಗಾ ಇರಿಸುವ ಎಮರ್ಜೆಂಟ್ ಎಂಬ ಅಂತರ್ಜಾಲಾಧಾರಿತ ಸೇವೆಯೊಂದನ್ನು ಅವರು ರೂಪಿಸಿದ್ದಾರೆ. ಸಿಲ್ವರ್‌ಮನ್ ತಮ್ಮ ಅಧ್ಯಯನ ಪ್ರಬಂಧಕ್ಕೆ ನೀಡಿರುವ ಶೀರ್ಷಿಕೆ  ‘Lies, Damn Lies, and Viral Content’ ಇದನ್ನು ‘ಸುಳ್ಳು, ಹಸಿ ಸುಳ್ಳು ಮತ್ತು ವೈರಲ್ ಆಗಿರುವ ಮಾಹಿತಿ’ ಎಂದು ಕನ್ನಡಕ್ಕೆ ಅನುವಾದಿಸಬಹುದು. ಈ ಶೀರ್ಷಿಕೆ ನವ ಮಾಧ್ಯಮ ಏನನ್ನು ಮಾಡುತ್ತಿದೆ ಎಂಬುದನ್ನು ಸೂಚಿಸುತ್ತಿದೆ.

ನವ ಮಾಧ್ಯಮದ ವೈಯಾಕರಣಿಗಳೆಲ್ಲಾ ಪ್ರತಿಪಾದಿಸುವುದು ಒಂದು ಅಂಶವನ್ನು. ಅದನ್ನು ಇಂಗ್ಲಿಷ್‌ನಲ್ಲಿ ‘Engaging content’ ಎನ್ನುತ್ತಾರೆ. ಅಂದರೆ ನೋಡುಗ ಅಥವಾ ಬಳಕೆದಾರ ತೊಡಗಿಸಿಕೊಳ್ಳುವಂತೆ ಮಾಡುವ ವಸ್ತು-ವಿಷಯ. ಈ ಪರಿಭಾಷೆಯಲ್ಲಿ ಮಾಹಿತಿ ಅಥವಾ ಸುದ್ದಿ ಎಂಬ ಪದವೇ ಇಲ್ಲ. ನೋಡುಗ ತೊಡಗಿಸಿಕೊಳ್ಳುವಂತೆ ಮಾಡಬೇಕಾದರೆ ಏನನ್ನು ಮಾಡಬೇಕೋ ಅದನ್ನೆಲ್ಲಾ ಮಾಡಲೇಬೇಕಾದ ಒತ್ತಡವೊಂದನ್ನು ಸ್ಪರ್ಧಾತ್ಮಕತೆ ಸೃಷ್ಟಿಸುತ್ತದೆ.

ಸುದ್ದಿಯನ್ನು ನಾಟಕೀಯಗೊಳಿಸುವುದು, ಮಾಹಿತಿಯನ್ನು ರಂಜನೀಯವಾಗಿಸುವುದು, ‘ಬಳಕೆದಾರ’ನೊಳಗೆ ಭಾವನೆಗಳನ್ನು ಉದ್ದೀಪಿಸುವುದೆಲ್ಲವೂ ‘ಎಂಗೇಜಿಂಗ್ ಕಂಟೆಂಟ್’ ಸೃಷ್ಟಿಸುವುದರ ಭಾಗ. ಇದನ್ನೆಲ್ಲಾ ಮಾಡುವುದಕ್ಕೆ ಜನಪ್ರಿಯ ಸತ್ಯದ ಜೊತೆಗೆ ಪಯಣಿಸಬೇಕೇ ಹೊರತು ಅಪ್ರಿಯವಾಗಿರುವ ವಾಸ್ತವದ ಜೊತೆಗಲ್ಲ.

ವಾಸ್ತವವನ್ನು ಹೇಳುವುದಕ್ಕೆ ಓದುಗನನ್ನು ಚಿಂತನೆಗೆ ಹಚ್ಚುವ, ಅವನ ವಿವೇಚನೆಯನ್ನು ಗೌರವಿಸುವ ಅಗತ್ಯವಿದೆ. ಈ ಮಾರ್ಗದಲ್ಲಿ ಜನಪ್ರಿಯತೆ ಕಷ್ಟ.ಇದೇನು ಹೊಸ ಸೂತ್ರವಲ್ಲ. ಜನಪ್ರಿಯ ಸಿನಿಮಾಗಳು ಇದನ್ನು ಬಹುಕಾಲದಿಂದ ಬಳಸುತ್ತಾ ಬಂದಿವೆ. ಅಮೆರಿಕದ ಮುಖ್ಯವಾಹಿನಿಯ ರಾಜಕೀಯ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ಹಾಲಿವುಡ್‌ನ ಖಳನಾಯಕರಿರುತ್ತಾರೆ.

ಭಾರತದ ಜನಪ್ರಿಯ ಸಿನಿಮಾಗಳು ‘ಭಾರತೀಯ ಕೌಟುಂಬಿಕ ಮೌಲ್ಯ’ಗಳ ಪರಿಧಿಯೊಳಗಿನ ಕಥೆಯನ್ನು ಆರಿಸಿಕೊಳ್ಳುವುದೂ ಅದಕ್ಕಾಗಿಯೇ. ತಮಿಳು ಎಂದರೆ ಕನ್ನಡದ ವಿರುದ್ಧ ಪದ, ತಮಿಳರೆಲ್ಲರೂ ಕನ್ನಡ ವಿರೋಧಿಗಳು, ತಮಿಳುನಾಡು ಕನ್ನಡಿಗರಿಂದ ಕಾವೇರಿಯನ್ನು ಕಿತ್ತುಕೊಳ್ಳುತ್ತಿದೆ ಎಂಬ ಸರಳೀಕೃತ ನಿಲುವಿನ ‘ಸ್ಟುಡಿಯೋ ವಿಶ್ಲೇಷಣೆ’ಗಳ ಹಿಂದೆ ಇರುವುದು ‘ಜನಪ್ರಿಯ ಸತ್ಯ’ವನ್ನು ಆಧಾರವಾಗಿಟ್ಟುಕೊಂಡ ಸೂತ್ರ.

ಇದರಿಂದಾಗಿ ಕಾವೇರಿ ನೀರು ಹಂಚಿಕೆ ವಿವಾದ ಕನ್ನಡ ಟಿ.ವಿ. ಚಾನೆಲ್‌ಗಳ ಮಟ್ಟಿಗೆ ‘ಕಾವೇರಿ ಕದನ’ವಾಯಿತು. ತಮಿಳು ಚಾನೆಲ್‌ಗಳೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಆದರೆ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನೀರು ಬಿಡುವಂತೆ ಸೂಚಿಸಿದ್ದರಿಂದ ಜನರ ಭಾವನೆಗಳನ್ನು ಕೆರಳಿಸಲು ಬೇಕಾದ ವಸ್ತು ಅವುಗಳಿಗೆ ದೊರೆತಿರಲಿಲ್ಲ. ಅದನ್ನು ಒದಗಿಸಿದ್ದು ತಥಾಕಥಿತ ಕನ್ನಡ ಚಲನಚಿತ್ರಾಭಿಮಾನಿಗಳು.

ತಮಿಳು ಚಿತ್ರಗಳ ಅಭಿಮಾನಿಯಾಗಿದ್ದ ಹುಂಬ ಯುವಕನೊಬ್ಬ ಫೇಸ್‌ಬುಕ್‌ನಲ್ಲಿ ಹರಿಯಬಿಟ್ಟಿದ್ದ ‘ಮೀಮ್’ಗಳು ಕನ್ನಡದ ಕೆಲವು ನಟರನ್ನು ಹಾಸ್ಯ ಮಾಡಿದ್ದವು. ಸಾಮಾನ್ಯ ಸಂದರ್ಭದಲ್ಲಿ ನೋಡಿ ನಕ್ಕು ನಿರ್ಲಕ್ಷಿಸಬಹುದಾಗಿದ್ದ ಸಂಗತಿ. ಹೆಚ್ಚೆಂದರೆ ಪರ–ವಿರೋಧಿ ‘ಕಮೆಂಟ್‌ ಯುದ್ಧ’ದಲ್ಲಿ ಮುಗಿಯಬಹುದಾಗಿದ್ದ ಘಟನೆಯದು. ‘ಕಾವೇರಿ ಕದನ’ದ ವಿಶಿಷ್ಟ ಸಂದರ್ಭದಲ್ಲಿ ಇದು ಬೇರೆಯೇ ತಿರುವು ಪಡೆಯಿತು. ‘ಕನ್ನಡ ಚಲನಚಿತ್ರಾಭಿಮಾನಿಗಳು’ ಈ ಯುವಕನನ್ನು ಹುಡುಕಿ ಥಳಿಸಿದರು. ಪೊಲೀಸ್ ಠಾಣೆಗೂ ಕರೆದೊಯ್ದರು.

ಥಳಿಸುವುದನ್ನು ಯಾರೋ ವಿಡಿಯೋ ಮಾಡಿದರು. ಅದನ್ನು ಕನ್ನಡ ಚಾನೆಲ್‌ಗಳು ‘ವೀರ ಕನ್ನಡಿಗರ’ ಸಾಧನೆಯಾಗಿ ಪ್ರಸಾರ ಮಾಡಿದವು. ತಮಿಳು ಚಾನೆಲ್‌ಗಳು ಅದನ್ನು ‘ತಮಿಳು ಭಾಷಿಕ’ನ ಮೇಲೆ ‘ಕನ್ನಡಿಗರ ದೌರ್ಜನ್ಯ’ವೆಂದವು. ರಾಷ್ಟ್ರೀಯ ಮಾಧ್ಯಮಗಳು ‘ಕನ್ನಡ ಭಾಷಾಂಧ’ರ ಕ್ರೌರ್ಯವನ್ನು ಕಂಡವು. ನಾಡಿನ ಹಿತವೆಂದರೇನೆಂದು ಎಂದು ತೀರ್ಪು ನೀಡುವ ಸ್ಟುಡಿಯೋ ತಜ್ಞರು ಈ ಘಟನೆಯ ಕ್ಷುಲ್ಲಕ ಸ್ವರೂಪದ ಕುರಿತು ಇಂಥ ತೀರ್ಪಿಗೆ ಮುಂದಾಗಲೇ ಇಲ್ಲ.

1991ರ ಗಲಭೆಗಳ ಕ್ರೌರ್ಯದ ನೆನಪಿರುವ ಯಾರೂ ಕಾವೇರಿ ವಿವಾದವನ್ನು ಕನ್ನಡಿಗರು ಮತ್ತು ತಮಿಳರ ನಡುವಣ ಕದನವನ್ನಾಗಿ ಕಾಣುವ ಅವಿವೇಕವನ್ನು ತೋರಲಾರರು. ಕಳೆದ 25 ವರ್ಷಗಳ ಅವಧಿಯಲ್ಲಿ ಹಲವು ಬಾರಿ ಕಾವೇರಿ ನೀರಿನ ಹಂಚಿಕೆಯ ವಿವಾದಕ್ಕೆ ಹಲವು ಬಾರಿ ಕಾವೇರಿದ್ದರೂ ಅದು ಕನ್ನಡ–ತಮಿಳು
ಭಾವನೆಗಳನ್ನು ಕೆರಳಿಸಿರಲಿಲ್ಲ. ಆದರೆ ಒಂದು ಕ್ಷುಲ್ಲಕ ಘಟನೆ ಮತ್ತು ಅದರ ವಿವೇಚನಾ ರಹಿತ ಪ್ರಸಾರ ಎರಡೂವರೇ ದಶಕಗಳ ಸಂಯಮವನ್ನು ನಾಶ ಮಾಡಿತು.

ಸಾಮಾನ್ಯವಾಗಿ ವೈರಲ್ ಆದ ವಿಡಿಯೋಗಳು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಆದರೆ ಇಲ್ಲಿ ಮಾಧ್ಯಮದಲ್ಲಿ ಕಾಣಿಸಿಕೊಂಡ ವಿಡಿಯೋ ವೈರಲ್ ಆಯಿತು. ತಮಿಳುನಾಡಿನಲ್ಲೂ ಇದಕ್ಕೆ ಪ್ರತಿಕ್ರಿಯೆಯೆಂಬಂತೆ ಕೆಲವು ಘಟನೆಗಳು ನಡೆದವು.

ಮೂರ್ಖರಿಗೆ ದೇಶ, ಭಾಷೆಗಳ ಮಿತಿಯಿದೆಯೇ! ಸಾಮಾನ್ಯ ಸಂದರ್ಭಗಳಲ್ಲಿ ಕ್ಷುಲ್ಲಕ ಎನಿಸಬಹುದಾಗಿದ್ದ ಈ ಘಟನೆಗಳು ಕನ್ನಡಿಗರು ಮತ್ತು ತಮಿಳರ ನಡುವಣ ‘ಕದನ’ದ ಸಂಕೇತಗಳಾದವು. ಟಿ.ವಿ. ಚಾನೆಲ್ ನಿರೂಪಕರ ಭಾಷೆಯಲ್ಲಿ ಹೇಳುವುದಾದರೆ ‘ಕಾವೇರಿ ಕ್ರೋಧಾಗ್ನಿ ಕ್ಷಣದಿಂದ ಕ್ಷಣಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳಲು’ ಆರಂಭಿಸಿತು. ಪೊಲೀಸರು ಪರಿಸ್ಥಿತಿಯ ನಿಯಂತ್ರಣಕ್ಕೆ ನಿಷೇಧಾಜ್ಞೆ ಘೋಷಿಸಿದರೆ ಟಿ.ವಿ. ನಿರೂಪಕರ ಬಾಯಲ್ಲಿ ಅದು ‘ಜನರ ಹೋರಾಟಕ್ಕೆ ಪೊಲೀಸರ ನಿರ್ಬಂಧ’ವಾಯಿತು.

ಬೀದಿಗಿಳಿದು ಅಮಾಯಕರ ಮೇಲೇ ಹಲ್ಲೆ ಮಾಡುವವರು, ವಾಹನಗಳಿಗೆ ಬೆಂಕಿ ಹಚ್ಚುವವರು, ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸುವವರೆಲ್ಲಾ ‘ಹೋರಾಟಗಾರ’ರಾದರು. ಹಲವು ಲಾರಿಗಳು ಬೆಂಕಿಗೆ ಆಹುತಿಯಾಗಿ, ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದವರ ಸರಕೆಲ್ಲಾ ನಾಶವಾಗಿ, ಇಡೀ ಬೆಂಗಳೂರಿನ ಪಾಲಕರು ಮಕ್ಕಳು ಸುರಕ್ಷಿತವಾಗಿ ಮನೆಗೆ ತಲುಪಲಿ ಎಂದು ಇದ್ದ ದೇವರಿಗೆಲ್ಲಾ ಹರಕೆ ಹೊರಲಾರಂಭಿಸಿ, ಗೋಲಿಬಾರಿಗೆ ಜೀವಗಳೂ ಬಲಿಯಾದ ಮೇಲೆ ಟಿ.ವಿ. ಸ್ಟುಡಿಯೋಗಳ ಒಳಕ್ಕೆ ವಿವೇಕ ತಾತ್ಕಾಲಿಕ ಪ್ರವೇಶ ಪಡೆದಂತೆ ಕಾಣಿಸಿತು.ಅಥವಾ ಇದೂ ಜನಪ್ರಿಯ ಸಿನಿಮಾಗಳ ಮಾದರಿಯೇ ಆಗಿತ್ತೇನೋ. ಎಲ್ಲವೂ ಮುಗಿದ ಮೇಲೆ ಸಿನಿಮಾಗಳಲ್ಲಿ ಪೊಲೀಸರು ಬರುತ್ತಾರೆ. ಮಂಗಳವಾರ ಬೆಳಕು ಹರಿಯುವ ಹೊತ್ತಿಗೆ ‘ಕನ್ನಡ ಹೋರಾಟಗಾರ’ರೆಲ್ಲಾ ‘ದುಷ್ಕರ್ಮಿ’ಗಳಾಗಿ ಬದಲಾಗಿದ್ದರು.

‘ಹೋರಾಟಗಾರ’ರು ‘ದುಷ್ಕರ್ಮಿ’ಗಳಾಗಿ ಬದಲಾಗುವ ಹಾದಿಯಲ್ಲಿ ಕಳೆದು ಹೋದ ವಿವೇಕದ ಬಗ್ಗೆ ಈಗ ಸಣ್ಣ ಮಟ್ಟಿಗೆ ಚರ್ಚೆ ಆರಂಭವಾಗಿದೆ. ಬೆಂಗಳೂರಿನಲ್ಲಿ ನಡೆದ ಹಿಂಸಾಚಾರದ ಹಿಂದೆ ಟಿ.ವಿ. ಚಾನೆಲ್‌ಗಳ ವರ್ತನೆ ಇದೆ ಎಂದು ಕರ್ನಾಟಕದ ಗೃಹ ಸಚಿವರು ಬಹಿರಂಗವಾಗಿಯೇ ಹೇಳಿದರು. ಇನ್ನಷ್ಟು ಖಂಡನೆಯ ಮಾತುಗಳು ಮುಂದಿನ ದಿನಗಳಲ್ಲಿ ಕೇಳಿ ಬರಬಹುದು.

ಇದು ಕಾವೇರಿಯ ಸಮಸ್ಯೆಯ ಕುರಿತು ಕರ್ನಾಟಕ, ತಮಿಳುನಾಡು ಮತ್ತು ಕೇಂದ್ರ ಸರ್ಕಾರಗಳ ವರ್ತನೆಯ ಪ್ರತಿಬಿಂಬ. ಕಾವೇರಿಯಲ್ಲಿ ನೀರಿನ ಹರಿವು ಕಡಿಮೆಯಾದಾಗಲಷ್ಟೇ ಇಲ್ಲೊಂದು ನೀರು ಹಂಚಿಕೆ ವಿವಾದವಿದೆ ಎಂದು ಸರ್ಕಾರಗಳಿಗೆ ನೆನಪಾಗುತ್ತದೆ. ಮಾಧ್ಯಮಗಳ ಅವಿವೇಕದಿಂದ ಕೆಟ್ಟದ್ದು ಸಂಭವಿಸಿದಾಗ ಮಾತ್ರ ಅದರ ಕುರಿತ ಚರ್ಚೆ ನಡೆಯುತ್ತದೆ. ಉಳಿದ ಸಮಯದಲ್ಲಿ ಎಲ್ಲರೂ ಸ್ಟುಡಿಯೋ ತಜ್ಞರು ಪ್ರತಿಪಾದಿಸುವ ‘ಜನಪ್ರಿಯ ಸತ್ಯ’ದ ಗ್ರಾಹಕರಾಗಿ ‘ಎಂಗೇಜಿಂಗ್ ಕಂಟೆಂಟ್‌’ನಲ್ಲಿ ಮುಳುಗಿರುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT