ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿ ಪೋಸ್ಟ್’ ನೀಡುವ ಚೈತನ್ಯಶೀಲ ಸಂದೇಶ

Last Updated 23 ಜನವರಿ 2018, 19:30 IST
ಅಕ್ಷರ ಗಾತ್ರ

‘ಸುದ್ದಿ ಮಾಧ್ಯಮಗಳು ಅಮೆರಿಕದ ಜನರ ಶತ್ರು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಿರುವ ಕಾಲ ಇದು. ಸ್ವತಂತ್ರ ಪತ್ರಿಕೋದ್ಯಮವನ್ನು ದುರ್ಬಲಗೊಳಿಸಲು ಸರ್ವಾಧಿಕಾರದ ಭಾಷೆ ಬಳಕೆಯಾಗುತ್ತಿರುವುದನ್ನೂ ನೋಡುತ್ತಿದ್ದೇವೆ. ಇಂತಹ ಸನ್ನಿವೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಸ್ಟೀವನ್ ಸ್ಪೀಲ್‌ಬರ್ಗ್ ನಿರ್ದೇಶನದ ‘ದಿ ಪೋಸ್ಟ್’  ಸಿನಿಮಾ ಚೈತನ್ಯಶೀಲ ಸಂದೇಶವೊಂದರ ಜೊತೆ ತೆರೆಯ ಮೇಲೆ ಬಂದಿದೆ.‘ಮಾಧ್ಯಮ ಇರುವುದು ಪ್ರಜೆಗಳಿಗೆ ಸೇವೆ ಸಲ್ಲಿಸಲು, ಸರ್ಕಾರಕ್ಕಲ್ಲ’ ಎಂಬಂತಹ ಸಾಂವಿಧಾನಿಕ  ಹಕ್ಕನ್ನು ನೆನಪಿಸಿದೆ. ಜಾಗತಿಕ ನೆಲೆಯಲ್ಲಿ ಸಮಕಾಲೀನ ಮಾಧ್ಯಮ ಜಗತ್ತಿನಲ್ಲಿ ಅನುರಣಿಸಬೇಕಾದಂತಹ ಪ್ರಸ್ತುತ ಸಂದೇಶ ಇದು.

ಕಳೆದ ಶತಮಾನದ 1971ರಲ್ಲಿ ನಡೆಯುವ ಕಥೆಸಿನಿಮಾದಲ್ಲಿದೆ. ನ್ಯೂಸ್ ರೂಂನ ತಲ್ಲಣಗಳು, ನಾಟಕೀಯಅನುಭವಗಳನ್ನೆಲ್ಲಾ ಥ್ರಿಲ್ಲರ್ ರೂಪದಲ್ಲಿ ಕಟ್ಟಿಕೊಡುವ ಕಥೆ ಇದು. ಆದರೆ ಇತಿಹಾಸದಲ್ಲಿ ಆಗಿಹೋದ ನಿಜ ಕಥೆ ಈ ಸಿನಿಮಾಗೆ ಆಧಾರವಾಗಿದೆ ಎಂಬುದು ಇಲ್ಲಿ ಮುಖ್ಯ. ಅಮೆರಿಕದ ಎರಡು ಮುಖ್ಯ ವೃತ್ತಪತ್ರಿಕೆಗಳಾದ ‘ದಿ ನ್ಯೂಯಾರ್ಕ್ ಟೈಮ್ಸ್’ ಹಾಗೂ  ‘ದಿ ವಾಷಿಂಗ್ಟನ್ ಪೋಸ್ಟ್’ಗೆ ಈ ಕಥೆ ಸಂಬಂಧಿಸಿದೆ. ಅಮೆರಿಕದ ರಾಜಕಾರಣ ಹಾಗೂ ‘ಅಮೆರಿಕದ ಯುದ್ಧ’ ಎಂದರೆ ವಿಯೆಟ್ನಾಂ ಯುದ್ಧದ ಬಗ್ಗೆ ಹೊಸ ಅರಿವು ಮೂಡಿಸಲು ಮಾಧ್ಯಮಗಳು ತಮ್ಮ ಹಕ್ಕು ಪ್ರತಿಪಾದಿಸಿದ ಈ ಕಥಾನಕ ಸ್ಫೂರ್ತಿದಾಯಕ.

ಆಗ್ನೇಯ ಏಷ್ಯಾದಲ್ಲಿ ಅಮೆರಿಕದ ತೊಡಗಿಕೊಳ್ಳುವಿಕೆಯ ಇತಿಹಾಸ ವಿವರಿಸುವ ಅತ್ಯಂತ ರಹಸ್ಯದ ರಕ್ಷಣಾ ಇಲಾಖೆ ದಾಖಲೆಗಳ ಪ್ರಕಟಣೆಗೆ ಸಂಬಂಧಿಸಿದಂತೆ ಅಧ್ಯಕ್ಷ ರಿಚರ್ಡ್ ನಿಕ್ಸನ್ ಆಡಳಿತದ ಜೊತೆ ‘ದಿ ನ್ಯೂಯಾರ್ಕ್ ಟೈಮ್ಸ್’ ಮತ್ತು ವಿಶೇಷವಾಗಿ ‘ದಿ ವಾಷಿಂಗ್ಟನ್ ಪೋಸ್ಟ್’  ಪತ್ರಿಕೆಗಳು ನಡೆಸಿದ ಸಂಘರ್ಷವನ್ನು ಈ ಚಿತ್ರ ಚಿತ್ರಿಸುತ್ತದೆ. 1967ರಲ್ಲಿ ಆಗಿನ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಎಸ್ ಮ್ಯಾಕ್‌ನ ಮಾರಾ ಅವರ ನಿರ್ದೇಶನದ ಮೇರೆಗೆ ನಡೆದ ಅಧ್ಯಯನ 7000 ಪುಟಗಳಲ್ಲಿ ದಾಖಲಾಗಿತ್ತು. ಸರ್ಕಾರದ ನೀತಿಗಳು, ಆ ನೀತಿಗಳಲ್ಲಿರುವ ದೋಷಗಳೇನು? ಹಾಗೂ ಅವುಗ
ಳಿಂದ ಕಲಿಯಬಹುದಾದ ಪಾಠ ಏನು ಎಂಬುದು ಈ ಅಧ್ಯಯನದ ಹಿಂದಿದ್ದ ಉದ್ದೇಶ. ಆದರೆ ‘ಪೆಂಟಗನ್ ಪೇಪರ್ಸ್’ ಎಂದು ಹೆಸರಾದ ಈ ರಹಸ್ಯ ದಾಖಲೆಗಳು ಪತ್ರಿಕೆಗಳಿಗೆ ಸೋರಿಕೆಯಾಗುತ್ತವೆ. ವಿಯೆಟ್ನಾಂ ಯುದ್ಧದಲ್ಲಿ  ಅಮೆರಿಕದ ಪಾತ್ರ ಹಾಗೂ ಅಮೆರಿಕದ ಮಿಲಿಟರಿ ಯಶಸ್ಸಿನ ಸಾಧ್ಯತೆಯ ಬಗ್ಗೆ ಅಮೆರಿಕನ್ ಜನರಿಗೆ ತಪ್ಪು ಮಾಹಿತಿ ನೀಡಿ ಸರ್ಕಾರ ದಾರಿ ತಪ್ಪಿಸಿತ್ತು ಎಂಬುದನ್ನು ಈ ದಾಖಲೆಗಳು ಬಯಲುಮಾಡಿದ್ದವು. ಮೊದಲ ಬಾರಿಗೆ ‘ದಿ ನ್ಯೂಯಾರ್ಕ್ ಟೈಮ್ಸ್’ಗೆ ಈ ದಾಖಲೆಯ ಕೆಲವು ಭಾಗಗಳು ಸಿಕ್ಕಿರುತ್ತವೆ. ಆದರೆ ಈ ಸ್ಟೋರಿಗಳು ರಾಷ್ಟ್ರದ ರಕ್ಷಣೆಗೆ ‘ರಿಪೇರಿಯಾಗದಷ್ಟು ಹಾನಿ’ ಮಾಡುತ್ತವೆ ಎಂದು ಹೇಳಿ ಪ್ರಕಟಣೆಗೆ ತಡೆ ಒಡ್ಡಲು ನಿಕ್ಸನ್‌ರ ಆಡಳಿತ ಮುಂದಾಗುತ್ತದೆ. ಫೆಡರಲ್ ಜಡ್ಜ್ ಮೂಲಕ ತಾತ್ಕಾಲಿಕ ತಡೆ ಆದೇಶ ತರಲಾಗುತ್ತದೆ. ನಂತರ ಇದನ್ನು ಪ್ರಕಟಿಸಲು ‘ದಿ ವಾಷಿಂಗ್ಟನ್ ಪೋಸ್ಟ್’ ಮಾಡುವ ಯತ್ನಗಳು ಹಾಗೂ ಇದರಲ್ಲಿ ಯಶಸ್ವಿಯಾಗುವುದು ಈ ಚಿತ್ರದ ಹೂರಣ.

ವಿಯೆಟ್ನಾಂ ಯುದ್ಧವನ್ನು ಅಮೆರಿಕ ಗೆಲ್ಲಲಾಗದು ಎಂಬುದನ್ನು ಈ ರಹಸ್ಯ ದಾಖಲೆ ಸಾಬೀತು ಮಾಡಿತ್ತು. ಇದು ಹ್ಯಾರಿ ಟ್ರೂಮನ್,  ಐಷೆನ್ ಹೋವರ್, ಜಾನ್ ಎಫ್ ಕೆನಡಿ, ಲಿಂಡನ್ ಜಾನ್‌ಸನ್‌ವರೆಗಿನ ಅಮೆರಿಕದ ವಿವಿಧ ಅಧ್ಯಕ್ಷರ ಅವಧಿಗಳಲ್ಲಿ ಗೊತ್ತಿದ್ದ ಸಂಗತಿಯೇ ಆಗಿತ್ತು. ಹೀಗಿದ್ದೂ ಯುದ್ಧದ ವ್ಯಾಪ್ತಿಯನ್ನು ರಹಸ್ಯವಾಗಿ ವಿಸ್ತರಿಸುತ್ತಲೇ ಬರಲಾಯಿತು. ತಂದೆ, ಪುತ್ರ ಅಥವಾ ಸೋದರನನ್ನು ಯುದ್ಧಕ್ಕೆ ಕಳುಹಿಸದ ಕುಟುಂಬವೇ ಇಲ್ಲದಂಥ ಸ್ಥಿತಿ ಅಮೆರಿಕದಲ್ಲಿತ್ತು ಆಗ. ಸಾವಿರಾರು ಮಂದಿ ಯುದ್ಧಭೂಮಿಯಲ್ಲಿ ಸತ್ತಿದ್ದರು, ಗಾಯಗೊಂಡಿದ್ದರು. ಯುದ್ಧ ಮುಂದುವರಿಯುತ್ತಲೇ ಇತ್ತು. ಸಾವಿರಾರು ಜನರ ಬದುಕಿಗೆ ಇದು ಬೆಂಕಿ ಇಡುತ್ತಲೇ ಇತ್ತು.

ಸರ್ಕಾರಿ ಹಣಕಾಸು ನೆರವು ಹೊಂದಿದ ಥಿಂಕ್‌ಟ್ಯಾಂಕ್ ರ‍್ಯಾಂಡ್‌ (Rand) ಕಾರ್ಪೊರೇಷನ್‌ನಲ್ಲಿ  ಮಿಲಿಟರಿ ವಿಶ್ಲೇಷಕರಾಗಿದ್ದ  ಡೇನಿಯಲ್ ಎಲ್ಸ್‌ಬರ್ಗ್ ಈ  ಯುದ್ಧಕ್ಕೆ ಪ್ರತ್ಯಕ್ಷ ಸಾಕ್ಷಿ. ರಾಜಕೀಯ ನಾಯಕರ ದ್ವಿಮುಖ ಧೋರಣೆಗಳಿಂದ ಹತಾಶನಾಗಿದ್ದ ಆತ, ದಾಖಲೆಗಳಿರಿಸಿದ್ದ ಜಾಗಕ್ಕೆ ಹೋಗಲು ತನಗೆ ಇದ್ದ ಅವಕಾಶ ಬಳಸಿಕೊಂಡು ಅಕ್ರಮವಾಗಿ ರಹಸ್ಯ ದಾಖಲೆಗಳ ಜೆರಾಕ್ಸ್ ಪ್ರತಿ ಮಾಡಿಕೊಂಡು ಪತ್ರಿಕಾ ಸಂಸ್ಥೆಗಳಿಗೆ ನೀಡಿದ್ದರು. ಎಲ್ಸ್‌ಬರ್ಗ್ ಅವರಿಗೆ ಈಗ 86 ವರ್ಷ. ಈಗ ಸಹ ಅವರು, ಚೆಲೆಸಾ ಮ್ಯಾನಿಂಗ್, ಎಡ್ವರ್ಡ್ ಸ್ನೊಡೆನ್ ಹಾಗೂ ಜೂಲಿಯನ್ ಅಸಾಂಜ್ ಅವರನ್ನು ಸಮರ್ಥಿಸಿಕೊಂಡು ಹೇಳಿಕೆಗಳನ್ನು ನೀಡಿದ್ದಾರೆ. ಇವರೆಲ್ಲರೂ ಇತ್ತೀಚೆಗೆ ಸರ್ಕಾರಗಳ ರಹಸ್ಯಗಳನ್ನು ಬಹಿರಂಗಗೊಳಿಸಿದವರು ಎಂಬುದನ್ನು ನೆನಪಿಸಿಕೊಳ್ಳಬೇಕು.

ಈ ಚಿತ್ರ, ಮತ್ತೊಂದು ನೆಲೆಯಲ್ಲೂ ಮುಖ್ಯವಾಗುತ್ತದೆ. ಪುರುಷ ಪ್ರಧಾನ ವೃತ್ತಿಯಲ್ಲಿ, ಮಹಿಳೆಯೊಬ್ಬಳು ತನ್ನನ್ನು ಪ್ರತಿಪಾದಿಸಿಕೊಳ್ಳುವ ಕಥಾನಕವೂ ಈ ಚಿತ್ರದ ಪ್ರಧಾನ ಎಳೆಯಾಗಿದೆ. ಪತ್ರಿಕೆಯ ವ್ಯವಹಾರ, ಭವಿಷ್ಯ ಹಾಗೂ ವೈಯಕ್ತಿಕ ಸಂಪತ್ತನ್ನು ಪಣಕ್ಕೆ ಒಡ್ಡಿ ತೀರ್ಮಾನ ಕೈಗೊಳ್ಳಬೇಕಾದ ಒತ್ತಡಗಳನ್ನು ಪತ್ರಿಕೆಯ ಒಡತಿ ಹಾಗೂ ಪ್ರಕಾಶಕಿ ಕ್ಯಾಥರಿನ್ ಗ್ರಾಹಂ(ಮೆರಿಲ್ ಸ್ಟ್ರೀಪ್) ನಿರ್ವಹಿಸಬೇಕಾದ ಚಿತ್ರಣ ಇಲ್ಲಿದೆ. ಏಕೆಂದರೆ ‘ದಿ ವಾಷಿಂಗ್ಟನ್ ಪೋಸ್ಟ್’ ಆಗಷ್ಟೇ ಷೇರುಪೇಟೆ ಪ್ರವೇಶಿಸಿರುತ್ತದೆ. ಇದೆಲ್ಲ ದರ ಜೊತೆಗೆ, ಮಾಜಿ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಮ್ಯಾಕ್‌ನಮಾರಾ (ಬ್ರೂಸ್ ಗ್ರೀನ್‌ವುಡ್) ಸೇರಿದಂತೆ ವಾಷಿಂಗ್ಟನ್‌ನ ಉನ್ನತ ಅಧಿಕಾರ ಮೊಗಸಾಲೆಗಳಲ್ಲಿರುವ ಪ್ರಭಾವಿಗಳ ಜೊತೆಗೆ ತಮಗಿದ್ದ ಸ್ನೇಹಸಂಬಂಧಗಳ ಜೊತೆಗೂ ಕ್ಯಾಥರೀನ್ ಸೆಣಸಬೇಕಿರುತ್ತದೆ. ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಮ್ಯಾಕ್‍‍ನಮಾರಾಗಂತೂ ‘65ರಲ್ಲೇ ನಾವು ಗೆಲ್ಲಲಾಗದು ಎಂಬುದು ಗೊತ್ತಿತ್ತು - ಅದೂ ಆರು
ವರ್ಷಗಳ ಹಿಂದೆಯೇ!’ ಎಂಬುದನ್ನೂ ಈ ವರದಿ ಹೇಳಿರುತ್ತದೆ. ಆದರೆ ಈ ವರದಿಗಳನ್ನು ಪ್ರಕಟಿಸಿ ನಿಕ್ಸನ್ ಕೋಪಕ್ಕೆ ಈಡಾಗಬೇಕಾಗುತ್ತದೆ ಎಂಬುದನ್ನು ಕ್ಯಾಥರೀನ್‌ಗೆ ಮನದಟ್ಟು ಮಾಡಿಸಲು ಕ್ಯಾಥರೀನ್‌ರ ಆಪ್ತ ಸ್ನೇಹಿತರೂ ಆಗಿದ್ದ ಮ್ಯಾಕ್‌ನಮಾರಾ ಯತ್ನಿಸುತ್ತಾರೆ. ಕಂಪನಿಯ ಸರ್ವ ಪುರುಷ ನಿರ್ದೇಶಕರ ಮಂಡಳಿ ಹಾಗೂ ಪತ್ರಿಕೆಯ ಅಟಾರ್ನಿಗಳೂ ಇದೇ ವಾದ ಮುಂದಿಡುತ್ತಾರೆ. ಈ ಪ್ರಕರಣವನ್ನೇನಾದರೂ ಸರ್ಕಾರ ಗೆದ್ದುಕೊಂಡರೆ ಪತ್ರಿಕೆ ಅಸ್ತಿತ್ವದಲ್ಲಿ ಇರುವುದೇ ಇಲ್ಲ ಎಂಬಂಥ ವಾದ ಅದು. ಆದರೆ ಆಗಿನ ‘ದಿ ವಾಷಿಂಗ್ಟನ್ ಪೋಸ್ಟ್’ ಸಂಪಾದಕ ಬೆನ್ ಬ್ರಾಡ್ಲಿ (ಟಾಮ್ ಹ್ಯಾಂಕ್ಸ್) ಇದನ್ನು ಬೇರೆ ಬಗೆಯಲ್ಲಿ ನೋಡುತ್ತಾರೆ: ‘ನಾವು ಪ್ರಕಟಣೆ ಮಾಡದಿದ್ದರೆ ಏನಾಗುತ್ತದೆ? ನಾವು ಕಳೆದುಕೊಳ್ಳುತ್ತೇವೆ, ರಾಷ್ಟ್ರ ಕಳೆದುಕೊಳ್ಳುತ್ತದೆ, ನಿಕ್ಸನ್ ಗೆಲ್ಲುತ್ತಾರೆ’.

ಶ್ರೀಮಂತ ಸಾಮಾಜಿಕ ವಲಯಗಳಲ್ಲಿ ಗುರುತಿಸಿಕೊಂಡು ನಾಲ್ವರು ಮಕ್ಕಳನ್ನು ಬೆಳೆಸುತ್ತಾ ತಮ್ಮ ಮನೆಯಲ್ಲಿ ಕೆನಡಿ ದಂಪತಿಗಳಂತಹ ಖ್ಯಾತನಾಮ ಸ್ನೇಹಿತರಿಗೆ ಔತಣಕೂಟಗಳನ್ನೇರ್ಪಡಿಸುತ್ತಾ ಇದ್ದವರು ಕ್ಯಾಥರಿನ್ ಗ್ರಾಹಂ. ಆದರೆ ಅನಿವಾರ್ಯವಾಗಿ ಹೆಗಲೇರಿದ ವೃತ್ತಿ ಬದುಕಿನಲ್ಲಿ ‘ಪೆಂಟಗನ್ ಪೇಪರ್ಸ್’ ಆಧರಿಸಿದ ವರದಿ ಪ್ರಕಟಿಸುವಂತಹ ನಿರ್ಧಾರ ಕೈಗೊಳ್ಳುವಲ್ಲಿ ದಿಟ್ಟತನ ಪ್ರದರ್ಶಿಸಿದವರು ಅವರು. ಫಾರ್ಚುನ್ 500 ಕಂಪನಿ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಮಹಿಳೆ ಎನಿಸಿದ ಕ್ಯಾಥರಿನ್ ಗ್ರಾಹಂ ಅವರು ಆರಂಭದಲ್ಲಿ ಆತ್ಮವಿಶ್ವಾಸದ ಮಹಿಳೆ ಆಗಿರಲಿಲ್ಲ ಎಂಬುದು ವಾಸ್ತವ. ಏಕೆಂದರೆ, ಅವರು ಆ ಕಾಲದ ಮೌಲ್ಯಗಳನ್ನು ಪ್ರತಿನಿಧಿಸುತ್ತಿದ್ದ ಮಹಿಳೆಯಾಗಿದ್ದವರು. ಗೃಹಕೃತ್ಯ ಹಾಗೂ ಮಕ್ಕಳ ಲಾಲನೆಪಾಲನೆಯಂತಹ ಕೆಲಸಗಳಿಗೇ ಆಗ ಮಹಿಳೆಯರು ಸೀಮಿತರಾಗಿದ್ದುದು ಹೆಚ್ಚು. ಇದಕ್ಕೆ ಅನುಗುಣವಾಗಿಯೇ, ‘ದಿ ವಾಷಿಂಗ್ಟನ್ ಪೋಸ್ಟ್’ ಪ್ರಕಾಶಕ ಹುದ್ದೆಯನ್ನು, ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದ ಅಳಿಯ ಫಿಲಿಪ್ ಗ್ರಾಹಂನಿಗೆ ಕ್ಯಾಥರೀನ್ ತಂದೆ ನೀಡಿದ್ದು ಸಹಜವಾಗಿಯೇ ಇತ್ತು. ಆದರೆ 1963ರಲ್ಲಿ ಫಿಲಿಪ್ ಆತ್ಮಹತ್ಯೆ ಮಾಡಿಕೊಂಡ ನಂತರ ಪ್ರಕಾಶಕಿ ಹೊಣೆ ಹೊತ್ತುಕೊಳ್ಳುವುದು ಕ್ಯಾಥರಿನ್‌ಗೆ ಅನಿವಾರ್ಯವಾಗುತ್ತದೆ.

‘ನಾವು ಪತ್ರಿಕೆ ಮಾರಿಬಿಡುತ್ತೇವೆ ಎಂಬ ವದಂತಿ ವಾಷಿಂಗ್ಟನ್ ಆದ್ಯಂತ ಆಗ ಹಬ್ಬಿತ್ತು’ ಎಂಬುದನ್ನು ಕ್ಯಾಥರಿನ್ ಅವರ ಮಗಳು ಲ್ಯಾಲಿ ವ್ಯಾಯ್ ಮೊತ್ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ. ದುಡಿಯುವ ಮಹಿಳೆಯಾಗಿ ಏನೇನೂ ಅನುಭವ ಇರದಿದ್ದರೂ ಪುರುಷ ಪ್ರಧಾನ ಉದ್ಯಮದ ವಾಣಿಜ್ಯದ ಪಾಠಗಳನ್ನು ಕಲಿತುಕೊಳ್ಳಲು ಕ್ಯಾಥರಿನ್ ಬದ್ಧರಾಗಿದ್ದರು. ಆಗ ಉದ್ಯಮಲೋಕದಲ್ಲಿದ್ದಮಹಿಳೆಯರು ಕೆಲವೇ ಮಂದಿ. ಕಾನೂನು ಕ್ಷೇತ್ರದಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಮಹಿಳೆಯರು. ಸುಪ್ರೀಂ ಕೋರ್ಟ್‍ನಲ್ಲಂತೂ ಯಾರೂ ಇಲ್ಲ. ಆ ಕಾಲದಲ್ಲಿ ಹೊರಪ್ರಪಂಚದಲ್ಲಿ ಮಹಿಳೆ ಅಗೋಚರಳಾಗಿಯೇ ಇದ್ದಳು. ಆದರೆ ಪತ್ರಿಕಾಲಯದ ಅನುಭವಿ ಸಿಬ್ಬಂದಿಯಿಂದ ಕ್ಯಾಥರಿನ್ ಮಾಹಿತಿಗಳನ್ನು ಪಡೆದುಕೊಂಡರು. ವಿಶ್ವದಾದ್ಯಂತ ಅಧಿಕೃತ ಕಾರ್ಯಕ್ರಮಗಳಿಗಾಗಿ ವರದಿಗಾರರ ಜೊತೆ ಪ್ರವಾಸ ಮಾಡಿದರು. ‘ನನ್ನ ಮುಂದಿರುವ ಅಗಾಧತೆ ನನಗೆ ಅರ್ಥ ಮಾಡಿಕೊಳ್ಳಲಾಗುತ್ತಿರಲಿಲ್ಲ. ಎಷ್ಟು ಕಠಿಣ ಆಗಿರುತ್ತದೋ, ಎಷ್ಟೊಂದು ಕಾತರದ ಗಂಟೆಗಳು ಹಾಗೂ ದಿನಗಳನ್ನು ಎಷ್ಟು ದೀರ್ಘ ಕಾಲ ಕಳೆಯಬೇಕಾಗುತ್ತದೋ ಎಂದು ನಾನು ಎಷ್ಟು ಹೆದರಿರುತ್ತಿದ್ದೆ’ ಎಂದು ಅವರು ತಮ್ಮ ಆತ್ಮಕಥೆ ‘ಪರ್ಸನಲ್ ಹಿಸ್ಟರಿ’ಯಲ್ಲಿ ಬರೆದುಕೊಂಡಿದ್ದಾರೆ. 1965ರಲ್ಲಿ ಬೆಂಜಮಿನ್ ಬ್ರಾಡ್ಲಿ ಅವರನ್ನು ‘ದಿ ಪೋಸ್ಟ್’ ಸಂಪಾದಕರಾಗಿ ಕ್ಯಾಥರಿನ್ ನೇಮಕ ಮಾಡಿಕೊಳ್ಳುತ್ತಾರೆ. ‘ನನ್ನ ಬದುಕಿನಲ್ಲಿ ಸದಾ ಸ್ಮರಿಸಿಕೊಳ್ಳುವಂತಹ ಅತ್ಯಂತ ವೃತ್ತಿಪರ ಹಾಗೂ ವೈಯಕ್ತಿಕ ಬಾಂಧವ್ಯ’ ಎಂದೂ ಬ್ರಾಡ್ಲಿ ಜೊತೆಗಿನ ಅನುಬಂಧವನ್ನು ತಮ್ಮ ಆತ್ಮಚರಿತ್ರೆಯಲ್ಲಿ ಸ್ಮರಿಸಿಕೊಂಡಿದ್ದಾರೆ. ಈ ಪುಸ್ತಕಕ್ಕೆ ಪುಲಿಟ್ಜರ್ ಬಹುಮಾನ ಸಿಕ್ಕಿದೆ.

ಆರಂಭದಲ್ಲಿ ಬೋರ್ಡ್ ರೂಂನಲ್ಲಿ ಶಕ್ತಿ ಇಲ್ಲದ ಏಕಾಂಗಿ ಮಹಿಳೆಯಾಗಿಯೇ ಕ್ಯಾಥರಿನ್ ಅವರನ್ನು ಸ್ಪೀಲ್‌ಬರ್ಗ್ ಚಿತ್ರಿಸುತ್ತಾರೆ. ಧ್ವನಿ ಇಲ್ಲದ ಮಹಿಳೆ ಆಗಿರುತ್ತಾರೆ ಆಕೆ. ಆದರೆ ಕಥೆ ಬೆಳೆದಂತೆ, ಕ್ಯಾಥರೀನ್ ತನ್ನದೇ ಧ್ವನಿ ಕಂಡುಕೊಳ್ಳುತ್ತಾರೆ... ಆರಂಭದ ಹಿಂಜರಿಕೆ ಬರಬರುತ್ತಾ ದೃಢದನಿಯಾಗಿ ನೇರವಂತಿಕೆಯದಾಗುತ್ತದೆ. ‘ಆಕೆಯ ತಂದೆ ಪೇಪರ್ ಅನ್ನು ಆಕೆಯ ಪತಿಗೆ ನೀಡಿದ್ದರು’ ಎಂದು ಸಹೋದ್ಯೋಗಿಗಳು ಮಾತಾಡಿಕೊಳ್ಳುತ್ತಾರೆ. ಉದ್ಯೋಗ ಸ್ಥಳದಲ್ಲಿ ಸುತ್ತುವರಿದ ಆಕ್ರಮಣಕಾರಕ ಮನೋಭಾವಗಳ ಪುರುಷರು, ಕ್ಯಾಥರಿನ್ ಕುರಿತು ಹಂಚಿಕೊಳ್ಳುವ ಲಘು ಮಾತುಗಳಾಗಿರುತ್ತವೆ ಅವು. ‘ದುರ್ಬಲ ಕ್ಯಾಥರಿನ್ ಗ್ರಾಹಂ, ಗಟ್ಟಿಯಾದ ‘ಕ್ಯಾಥರಿನ್ ಗ್ರಾಹಂ’ ಆಗಿ ಪರಿವರ್ತನೆ ಆಗುವ ಕಥೆ ದಿ ಪೋಸ್ಟ್’ ಎಂದು  ಬ್ರಾಡ್ಲಿ ಪಾತ್ರ ನಿರ್ವಹಿಸಿರುವ ಟಾಮ್ ಹ್ಯಾಂಕ್ಸ್ ಸರಿಯಾಗಿಯೇ ಬಣ್ಣಿಸಿದ್ದಾರೆ.

‘ಬಿಗ್ ಸ್ಟೋರಿ’ ಬೆನ್ನು ಹತ್ತಿದ ಪತ್ರಿಕಾಲಯದೊಳಗಿನ ಕಾತರ, ಚಡಪಡಿಕೆ, ಸದ್ದುಗದ್ದಲಗಳು ಈ ಚಿತ್ರದಲ್ಲಿ ಚಿತ್ರಿತವಾಗಿರುವ ಬಗೆ ಅನನ್ಯ. ‘ಮೈ ಗಾಡ್... ದಿ ಫನ್’ ಎಂದು ಬ್ರಾಡ್ಲಿ ಹೇಳುತ್ತಾರೆ. ಕಂಪ್ಯೂಟರ್‌ಗಳಿಲ್ಲದ ಆ ಕಾಲದ ಟೈಪ್‌ರೈಟರ್, ಮುದ್ರಣ ವಿಧಾನಗಳು ಹಾಗೂ ಪತ್ರಿಕಾಲಯಗಳ ಕಾರ್ಯವೈಖರಿ ಕಣ್ಣಿಗೆ ಕಟ್ಟುತ್ತದೆ. ಆದರೆ ಆ ಕಾಲದ ಚಿತ್ರಣದ ನಡುವೆಯೂ ಇದು ಸಮಕಾಲೀನ ಕಥೆ!

‘ಪೆಂಟಗನ್  ಪೇಪರ್ಸ್’ ಆಧರಿಸಿದ ವರದಿ ಪ್ರಕಟಣೆಯ ಮೂಲಕ ತನಿಖಾ ಪತ್ರಿಕೋದ್ಯಮ ಹೊಸ ಮಜಲು ತಲುಪಿತು. ನಂತರ, ‘ವಾಟರ್ ಗೇಟ್’ ಹಗರಣದ ವರದಿಗಾರಿಕೆಗೆ ಇದು ದಾರಿಯಾಯಿತು. ನಿಕ್ಸನ್ ಆಡಳಿತದ ಒತ್ತಡದ ನಡುವೆಯೂ ಕಾರ್ಲ್ ಬರ್ನ್‌ಸ್ಟೀನ್  ಹಾಗೂ ಬಾಬ್ ವುಡ್‌ವರ್ಡ್ ಎಂಬ ವರದಿಗಾರರು ಹಾಗೂ ಸಂಪಾದಕ ಬ್ರಾಡ್ಲಿಗೆ ಬೆನ್ನೆಲುಬಾಗಿ ಕ್ಯಾಥರಿನ್ ನಿಲ್ಲುತ್ತಾರೆ 1972ರಲ್ಲಿ. ಕಡೆಗೆ 1974ರಲ್ಲಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ರಾಜೀನಾಮೆ ನೀಡುವುದು ಅನಿವಾರ್ಯವಾಗುತ್ತದೆ.

ರಾಷ್ಟ್ರದ ಮಾನನಷ್ಟ (ಲಿಬೆಲ್) ಕಾನೂನುಗಳನ್ನು ಬದಲಾಯಿಸುವ ಬಗ್ಗೆ ಈಗಿನ ಅಧ್ಯಕ್ಷ ಟ್ರಂಪ್ ಮಾತನಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ‘ದಿ ಪೋಸ್ಟ್’ ಸಿನಿಮಾ, ಮುಕ್ತ ಸಮಾಜದಲ್ಲಿ ಸ್ವತಂತ್ರ ಮಾಧ್ಯಮದ ಮೌಲ್ಯವನ್ನು ನೆನಪಿಸುತ್ತಿದೆ. ಟ್ರಂಪ್ ಆಡಳಿತ ವೈಖರಿಯಿಂದಾಗಿ ಈ ಸಿನಿಮಾ ಮಾಡುವ ಅತ್ಯಂತ ಹೆಚ್ಚಿನ ತುರ್ತು ತಮಗೆ ಇತ್ತು ಎಂದೂ ಸ್ಪೀಲ್‌ಬರ್ಗ್ ಸಂದರ್ಶನದಲ್ಲಿ ಹೇಳಿಕೊಂಡಿರುವುದು ಪ್ರಸ್ತುತ. ಪತ್ರಿಕಾ ಸ್ವಾತಂತ್ರ್ಯಬೆದರಿಕೆಗೊಳಗಾಗಿದ್ದು ಸುಳ್ಳುಗಳು, ಅಪನಿಂದೆಗಳು ಹಾಗೂ ಫೇಕ್ ನ್ಯೂಸ್ ವಿಜೃಂಭಿಸುತ್ತಿರುವ ಕಾಲ ಇದು. ಇಂತಹ ಸಂದರ್ಭದಲ್ಲಿ ವ್ಯವಸ್ಥೆಗೆ ಮಣಿಯದೆ ದಿಟ್ಟವಾಗಿ ಸತ್ಯನಿಷ್ಠೆ ಪ್ರದರ್ಶಿಸಿದ ‘ಪೆಂಟಗನ್ ಪೇಪರ್ಸ್’ ಹಗರಣ, ಪತ್ರಿಕೋದ್ಯಮದ ದಿಟ್ಟತನಕ್ಕೆ ಮಾದರಿ.  ಈ ನಿಟ್ಟಿನಲ್ಲಿ ‘ದಿ ಪೋಸ್ಟ್’ ಸಿನಿಮಾ ನೀಡಬಹುದಾದ ಪ್ರೇರಣೆ ದೊಡ್ಡದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT