ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪದ್ಮಾವತಿ’ ಉನ್ಮಾದಕ್ಕೆ ಹೊಣೆ ಯಾರು?

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಸಿನಿಮಾ ವಿಚಾರದಲ್ಲಿ ಈಗ ಕಾಣುತ್ತಿರುವ ಸಾಮೂಹಿಕ ಉನ್ಮಾದಕ್ಕೆ ತಾರ್ಕಿಕ ಕಾರಣಗಳು ಮೇಲ್ನೋಟಕ್ಕೆ ಕಾಣಿಸುವುದಿಲ್ಲ. ಪ್ರತಿಭಟನಾಕಾರರೇ ಹೇಳಿಕೊಂಡಿರುವಂತೆ ಅವರಲ್ಲಿ ಒಬ್ಬರೂ ಈ ಸಿನಿಮಾ ವೀಕ್ಷಿಸಿಲ್ಲ. ಆದರೂ, ರಜಪೂತ ಸಮುದಾಯಕ್ಕೆ ಸೇರಿದವರು ಹಾಗೂ ಹಿಂದೂ ಸಮುದಾಯದ ಇತರ ಜಾತಿಗಳಿಗೆ ಸೇರಿದ ಲಕ್ಷಾಂತರ ಜನ ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ರಸ್ತೆಗಿಳಿದಿದ್ದಾರೆ, ಈ ಸಿನಿಮಾ ನಿಷೇಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ತಮ್ಮ ಕಳಕಳಿ ಏನು ಎಂಬುದನ್ನು ಕೆಲವು ಪ್ರತಿಭಟನಾಕಾರರು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ, ಹಲವರು ಹೇಳಿಕೊಂಡಿಲ್ಲ. ಪದ್ಮಿನಿ ಅಲಿಯಾಸ್ ಪದ್ಮಾವತಿಯು ಅಲ್ಲಾವುದ್ದೀನ್‌ ಖಿಲ್ಜಿಯ ಪ್ರಚೋದನೆಗಳಿಗೆ ಪ್ರತಿಕ್ರಿಯೆ ನೀಡುವಂತೆ ಮಾಡಿ, ತೆರೆಯ ಮೇಲೆ ಕೆಲವು ರೊಮ್ಯಾಂಟಿಕ್ ದೃಶ್ಯಗಳನ್ನು ಬನ್ಸಾಲಿ ಅವರು ತೋರಿಸಿರಬಹುದು ಎನ್ನುವ ಆತಂಕ ಪ್ರತಿಭಟನಾಕಾರರಲ್ಲಿ ಇರುವಂತಿದೆ. ಪದ್ಮಿನಿಯನ್ನು ಹೀಗೆ ತೋರಿಸುವುದು ಅಸಹ್ಯ ಮತ್ತು ನಿಂದನೆಗೆ ಸಮನಾದದ್ದು ಎಂದು ಹಿಂದೂಗಳು ಪರಿಗಣಿಸುತ್ತಾರೆ.

‘ಪದ್ಮಾವತಿ’ ಚಿತ್ರದ ವಿಶೇಷ ಪ್ರದರ್ಶನಕ್ಕೆ ಹೋಗಿದ್ದ ಕೆಲವು ಮಾಧ್ಯಮ ಪ್ರತಿನಿಧಿಗಳು, ‘ಈ ಊಹಾಪೋಹಗಳಿಗೆ ಆಧಾರವಿಲ್ಲ. ಸಿನಿಮಾದಲ್ಲಿನ ಎರಡು ಪಾತ್ರಗಳು– ಪದ್ಮಾವತಿ ಮತ್ತು ಖಿಲ್ಜಿ – ಪರಸ್ಪರ ಸಂಧಿಸುವುದೇ ಇಲ್ಲ’ ಎಂದು ಹೇಳುವ ಮೂಲಕ ಜ್ವಾಲೆಯನ್ನು ಆರಿಸಲು ಯತ್ನಿಸಿದ್ದಾರೆ. ಹೀಗಿದ್ದರೂ ಪ್ರತಿಭಟನೆಗಳು ಮುಂದುವರಿದಿವೆ. ಎರಡು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೂ ‘ಪದ್ಮಾವತಿ’ ಸಿನಿಮಾಕ್ಕೂ ಸಂಬಂಧವಿದೆ ಎಂದೂ ಕೆಲವರು ಹೇಳುತ್ತಿದ್ದಾರೆ.

ಇದು ಪ್ರತಿಭಟನೆಗಳಿಗೆ ಕಾರಣವಾಗಿರುವ ಸಾಧ್ಯತೆ ಕಡಿಮೆ. ಆದರೆ, ರಜಪೂತ ಸಮುದಾಯವನ್ನು ಹಾಗೂ ಇತರ ಹಿಂದೂ ಜಾತಿಗಳನ್ನು ಪ್ರತಿನಿಧಿಸುವವರಲ್ಲಿ ಕಂಡುಬರುತ್ತಿರುವ ಉನ್ಮಾದ ಹಾಗೂ ಅವರ ತರ್ಕಹೀನ ಪ್ರತಿಕ್ರಿಯೆಗಳಿಗೆ ಕಾರಣವನ್ನು ಪೊಳ್ಳು–ಜಾತ್ಯತೀತವಾದಿ, ನೆಹರೂವಾದಿ ಮತ್ತು ಮಾರ್ಕ್ಸ್‌ವಾದಿ ಇತಿಹಾಸಕಾರರು ಬರೆದಿರುವ ಭಾರತದ ‘ಇತಿಹಾಸ’ದ, ಅದರಲ್ಲೂ ಪ‍್ರಮುಖವಾಗಿ ದೇಶದ ಮಧ್ಯಯುಗದ ಇತಿಹಾಸದ ಬಗ್ಗೆ ಬಹುಸಂಖ್ಯಾತ ಹಿಂದೂಗಳಲ್ಲಿ ಇರುವ ಆಳವಾದ ಅಪನಂಬಿಕೆಯಲ್ಲಿ ಕಾಣಬಹುದು.

ನಿರಂಕುಶ ಆಡಳಿತಗಾರ, ಅತ್ಯಂತ ಪವಿತ್ರವಾದ ಹಿಂದೂ ದೇವಸ್ಥಾನಗಳನ್ನು ಲೂಟಿ ಮಾಡಿದ, ಹಿಂದೂಗಳ ಮೇಲೆ ಅಸಂಖ್ಯ ದೌರ್ಜನ್ಯ ನಡೆಸಿದ ಔರಂಗಜೇಬನಂತಹ ರಾಜರಲ್ಲಿ ‘ಸೆಕ್ಯುಲರ್‌’ ಮೌಲ್ಯಗಳನ್ನು ಕಾಣುವಂತಹ ತಿರುಚುವಿಕೆಗಳಿಗೆ ವರ್ಷಗಳ ಕಾಲ ಸವಾಲೇ ಎದುರಾಗಿರಲಿಲ್ಲ. ಮೌಖಿಕವಾಗಿ ಇತಿಹಾಸ ಹೇಳುವ ಪದ್ಧತಿಯ ಕಾರಣದಿಂದಾಗಿ ಸತ್ಯ ಏನೆಂಬುದು ಗೊತ್ತಿದ್ದರೂ ಈ ಬೌದ್ಧಿಕ ಅಪ್ರಾಮಾಣಿಕತೆಯನ್ನು ಒಪ್ಪಿಕೊಳ್ಳುವ ಜಡತ್ವ ಸ್ವಾತಂತ್ರ್ಯ ದೊರೆತ ದಶಕಗಳ ಕಾಲ ಜನರಲ್ಲಿತ್ತು. ನೆಹರೂವಾದಿಗಳು ಮತ್ತು ಮಾರ್ಕ್ಸ್‌ವಾದಿಗಳ ಮಿಶ್ರಣವೇ ಸರಿಸುಮಾರು 2014ರವರೆಗೆ ನವದೆಹಲಿಯಲ್ಲಿ ‘ಪ್ರಭುತ್ವ’ವೂ ಆಗಿದ್ದ ಕಾರಣ, ಅವರ ಮಾರಕ ಪ್ರಭಾವವು ಸಾಹಿತ್ಯ ಮತ್ತು ಸಿನಿಮಾದವರೆಗೂ ಹಬ್ಬಿಕೊಂಡಿದೆ. ಇದು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಿಂದೂ ನಿಂದನೆಯ ಅತಾರ್ಕಿಕ ಮಟ್ಟಕ್ಕೆ ಒಯ್ಯಲು ಸಿನಿಮಾ ನಿರ್ಮಾಣ ಮತ್ತು ಚಿತ್ರಕಲೆಯ (ಎಂ.ಎಫ್‌. ಹುಸೇನ್) ಕ್ಷೇತ್ರದಲ್ಲಿದ್ದ ಹಲವರಲ್ಲಿ ಧೈರ್ಯ ಮೂಡಿಸಿತು.

ಆದರೆ, ಸಾಮೂಹಿಕ ಜಾಗೃತಿಯೊಂದು ಈಗ ಆಗುತ್ತಿದೆ. ಇದಕ್ಕೆ ಎರಡು ಕಾರಣಗಳನ್ನು ಗುರುತಿಸಬಹುದು. ತಿರುಚುವಿಕೆಗಳನ್ನು ಜನಪ್ರಿಯ ಕಲಾ ಮಾಧ್ಯಮಗಳಾದ ಸಿನಿಮಾ ಮೂಲಕವೂ ಹರಡಲು ಆರಂಭಿಸಿರುವ ಕಾರಣದಿಂದಾಗಿ ಜನ ಇಂತಹ ತಪ್ಪುಗಳನ್ನು ಪ್ರಶ್ನಿಸಲು ಆರಂಭಿಸಿದ್ದಾರೆ. ಲಾಭ ಪಡೆಯುವುದರಲ್ಲಿ ಜಾಣರಾಗಿರುವ, ಅಕಾಡೆಮಿಕ್ ವಲಯದಲ್ಲಿನ ಎಡಪಂಥೀಯ ಪಿತೂರಿಗಾರರ ಅಪ್ರಾಮಾಣಿಕ ಕೆಲಸಗಳ ನಡುವೆಯೂ ಇತಿಹಾಸವನ್ನು ಸತ್ಯದ ಹತ್ತಿರಕ್ಕೆ ತಂದು, ರಮ್ಯ ಕಥೆಗಳನ್ನು ಸುಳ್ಳೆಂದು ಸಾಬೀತು ಮಾಡಲು ಯತ್ನಿಸುವ ಇತಿಹಾಸಕಾರರ ದಂಡು ನಮ್ಮಲ್ಲಿ ಇದೆ. ಆರ್‌.ಸಿ. ಮಜುಮ್ದಾರ್, ಪ್ರೊ.ಕೆ.ಎಸ್. ಲಾಲ್, ಡಾ.ಎಸ್.ಪಿ. ಗುಪ್ತಾ, ಪ್ರೊ. ಮಕ್ಕನ್ ಲಾಲ್ ಮತ್ತು ಪ್ರೊ.ಬಿ.ಬಿ. ಲಾಲ್‌ ಅವರಂತಹ ಇತಿಹಾಸಕಾರರು ಪುರಾತನ ಇತಿಹಾಸ ಹಾಗೂ ಮಧ್ಯಯುಗದ ಇತಿಹಾಸಕ್ಕೆ ಸಂಬಂಧಿಸಿದ ವಿವರಣೆಗಳನ್ನು ಪ್ರಶ್ನಿಸಿದ್ದಾರೆ. ತಪ್ಪುಗಳನ್ನು ಸರಿಪಡಿಸಿಕೊಳ್ಳುವ ನಡೆಯು ನಮ್ಮ ರಾಷ್ಟ್ರ ಜೀವನದ ಈಗಿನ ಹಂತದಲ್ಲಿ ಚಾಲ್ತಿಯಲ್ಲಿದೆ. ‘ಪದ್ಮಾವತಿ’ ಸಿನಿಮಾ ಕುರಿತ ಉತ್ಪ್ರೇಕ್ಷಿತ ಭೀತಿಯು ತಪ್ಪು ಸರಿಪಡಿಸಿಕೊಳ್ಳುವ ಪ್ರಕ್ರಿಯೆಯ ಒಂದು ಭಾಗ.

ಅಲ್ಲಾವುದ್ದೀನ್‌ ಖಿಲ್ಜಿಯು 1303ರ ಜನವರಿ 8ರಂದು ದೆಹಲಿಯಿಂದ ಚಿತ್ತೋರ್‌ ಕಡೆ ಹೊರಟ ಎನ್ನಲಾಗಿದೆ. ಹಲವು ಸಾಮ್ರಾಜ್ಯಗಳನ್ನು ಗೆದ್ದು, ವಿಶ್ವವನ್ನೇ ಜಯಿಸುವ ಉದ್ದೇಶ ಅವನದಾಗಿತ್ತು ಎಂದು ಪ್ರಧಾನವಾದ ಒಂದು ವಾದ ಹೇಳುತ್ತದೆ. ಖಿಲ್ಜಿಯು ರಾಣಿ ಪದ್ಮಾವತಿಯ ಸೌಂದರ್ಯಕ್ಕೆ ಮನಸೋತಿದ್ದ, ಯಾವುದೇ ಬೆಲೆ ತೆತ್ತಾದರೂ ಆಕೆಯನ್ನು ಪಡೆದುಕೊಳ್ಳಲು ಬಯಸಿದ್ದ ಎಂದು ಇನ್ನೊಂದು ವಾದವಿದೆ. ಆಕೆಗಾಗಿ ಖಿಲ್ಜಿ ಸಾವಿರಾರು ಜನರ ಪ್ರಾಣಹರಣಕ್ಕೆ ಕಾರಣವಾಗುವ ರಕ್ತಸಿಕ್ತ ಯುದ್ಧಕ್ಕೂ ಸಿದ್ಧನಾಗಿದ್ದ ಎಂದೂ ಹೇಳಲಾಗುತ್ತದೆ. ಆ ವರ್ಷದ ಕೊನೆಯಲ್ಲಿ ಖಿಲ್ಜಿ ಚಿತ್ತೋರಗಡ ಕೋಟೆಗೆ ಮುತ್ತಿಗೆ ಹಾಕಿದ. ರಜಪೂತ ಇತಿಹಾಸ ಮತ್ತು ಸಂಸ್ಕೃತಿಯನ್ನು ದಾಖಲಿಸಿರುವ ಇತಿಹಾಸಕಾರ ದಶರಥ ಶರ್ಮ ಅವರ ಪ್ರಕಾರ, ಬೆರಾಚ್ ಮತ್ತು ಗಂಭೀರಿ ನದಿಗಳ ನಡುವೆ ಖಿಲ್ಜಿ ಬೀಡುಬಿಟ್ಟ. ರಾಜಾ ರತ್ನ ಸಿಂಗ್‌ ಆಗಸ್ಟ್‌ 26ರಂದು ಶರಣಾಗಲು ಸಿದ್ಧನಾದ. ಆದರೆ ಆತನ ಪ್ರಜೆಗಳು ಕೆಲವು ಕಾಲ ಕದನ ಮುಂದುವರಿಸಲು ತೀರ್ಮಾನಿಸಿದರು. ‘ಇದರ ಪರಿಣಾಮವಾಗಿ, ಕೋಟೆಯನ್ನು ಖಿಲ್ಜಿ ಗೆದ್ದುಕೊಂಡ ನಂತರ ಒಂದೇ ದಿನದಲ್ಲಿ 30 ಸಾವಿರ ಹಿಂದೂಗಳನ್ನು ಹತ್ಯೆ ಮಾಡಲಾಯಿತು’ ಹಾಗೂ ಸುಂದರಿ ಪದ್ಮಿನಿ ಅಲಿಯಾಸ್ ಪದ್ಮಾವತಿ ಮತ್ತು ಆಕೆಯ ಜೊತೆಗಾರ್ತಿಯರು ‘ಉರಿಯುವ ಬೆಂಕಿಗೆ ಹಾರಿದರು’ (ಆತ್ಮಾರ್ಪಣೆ ಮಾಡಿಕೊಂಡರು). ‘ತಾನು ಪಡೆದುಕೊಳ್ಳಲು ಬಯಸಿದ್ದ ಹೆಣ್ಣಿನ ದೇಹದ ಎರಡು ಬೊಗಸೆ ಬೂದಿಯಷ್ಟೇ ಅಲ್ಲಾವುದ್ದೀನ್‌ಗೆ ಸಿಕ್ಕಿತು’ ಎಂದು ರೂಪಕದಂತೆ ಇರುವ ‘ಪದ್ಮಾವತ್’ ಎಂಬ ಪದ್ಯವನ್ನು 1540ರಲ್ಲಿ ಬರೆದ ಮಲಿಕ್ ಮೊಹಮ್ಮದ್ ಜಾಯಸಿ ಹೇಳಿರುವುದಾಗಿ ಶರ್ಮ ಉಲ್ಲೇಖಿಸುತ್ತಾರೆ.

ಹಲವು ಇತಿಹಾಸಕಾರರು ತಮ್ಮ ತೀರ್ಮಾನಕ್ಕೆ ಮಲಿಕ್ ಬರೆದ ಪದ್ಯವನ್ನು ಆಧಾರವಾಗಿ ಇಟ್ಟುಕೊಂಡಿದ್ದಾರೆ. ಕವಿಗಳು ಹಾಗೂ ಲೇಖಕರ ಗಮನವನ್ನು ಪದ್ಮಿನಿಗಿಂತ ಹೆಚ್ಚು ಸೆಳೆದ ರಾಜಸ್ಥಾನದ ನಾಯಕಿ ಬಹುಶಃ ಯಾರೂ ಇಲ್ಲ ಎಂದು ಶರ್ಮ ಹೇಳುತ್ತಾರೆ. ರಾಣಿ ಪದ್ಮಿನಿಯ ಬಗ್ಗೆ ಜನರ ಬಾಯಲ್ಲಿರುವ ಮಾತುಗಳನ್ನು ಕ್ರೋಡೀಕರಿಸುವ ಶರ್ಮ, ಪದ್ಮಿನಿ ಕುರಿತ ಚಿತ್ರಣ ಬೇರೆ ಬೇರೆ ರೂಪಗಳನ್ನು ಪಡೆದಿದೆ ಎನ್ನುತ್ತಾರೆ. ಆದರೆ, ಎಲ್ಲ ಚಿತ್ರಣಗಳಲ್ಲಿ ಇರುವ ಕೇಂದ್ರಬಿಂದು ಒಂದೇ. ಅದು: ‘ಪದ್ಮಿನಿ ಧೈರ್ಯವಂತೆ, ಸುಂದರಿ, ಸೋಲೊ‍ಪ್ಪಿಕೊಳ್ಳದ ಹೆಣ್ಣು. ಕಾಮಾಸಕ್ತನಾಗಿದ್ದ ಕ್ರೂರಿಯೊಬ್ಬನನ್ನು ಮೋಸಗೊಳಿಸಬಲ್ಲವಳಾಗಿದ್ದಳು. ಗೌರವ ಉಳಿಸಿಕೊಳ್ಳುವ ಸಂದರ್ಭ ಎದುರಾದಾಗ ತನ್ನನ್ನು ಅಳುಕಿಲ್ಲದೆ – ಸಂತೋಷದಿಂದ ಎಂದೂ ಕೆಲವರು ಹೇಳಬಹುದು– ಅಗ್ನಿಗೆ ಅರ್ಪಿಸಿಕೊಂಡವಳು’. ಪದ್ಮಾವತಿ ಕುರಿತ ಈ ಕಥೆಯನ್ನು ತಲೆಮಾರಿನಿಂದ ತಲೆಮಾರಿಗೆ ಮತ್ತೆ ಮತ್ತೆ ಹೇಳಲಾಗಿದೆ, ದೇಶದಾದ್ಯಂತ ಶಾಲಾ ಪಠ್ಯ ಹಾಗೂ ಅಲ್ಲಿ ಹೇಳುವ ಕಥೆಗಳ ಒಂದು ಭಾಗವಾಗಿ ಇದು ಬೆಳೆದು ನಿಂತಿದೆ. ಖಿಲ್ಜಿಯ ಕೈಗೆ ಸಿಗುವ ಬದಲು ಬೆಂಕಿಗೆ ಹಾರಿ ಆತ್ಮಾರ್ಪಣೆ ಮಾಡಿಕೊಳ್ಳುವ ಪದ್ಮಾವತಿಯ ತೀರ್ಮಾನವನ್ನು ರಜಪೂತರು ಮತ್ತು ಹಿಂದೂ ಸಮಾಜದ ಇತರ ಜಾತಿಗಳ ಜನ, ಭಾರತದ ಎಲ್ಲ ಮಹಿಳೆಯರ ಗೌರವ ಹಾಗೂ ಘನತೆಯನ್ನು ಎತ್ತಿಹಿಡಿಯುವ ಅಪ್ರತಿಮ ಧೈರ್ಯದ ಪ್ರತೀಕವೆಂಬಂತೆ ಕಾಣುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಪದ್ಮಾವತಿಯು ಜನರ ಮನಸ್ಸಿನಲ್ಲಿ ‘ದೇವಿ’ಯ ಸ್ಥಾನ ಪಡೆದಿದ್ದಾಳೆ.

ರಜಪೂತರಲ್ಲಿ ವ್ಯಕ್ತವಾಗುತ್ತಿರುವ ಉತ್ಪ್ರೇಕ್ಷಿತ ಆತಂಕಕ್ಕೆ ಕಾರಣವನ್ನು, ರಾಣಿ ಪದ್ಮಿನಿ ಸೌಂದರ್ಯವತಿ ಮತ್ತು ಧೈರ್ಯವಂತೆ ಎಂದು ಇರುವ ಚಿತ್ರಣವನ್ನು ಬಾಲಿವುಡ್‌ನ ಜನ ತಿರುಚಲು ಹೊರಟಿದ್ದಾರೆ ಎಂಬ ಭೀತಿಯಲ್ಲಿ ಕಂಡುಕೊಳ್ಳಬಹುದು. ಪದ್ಮಾವತಿ ಹಿಂದೆ ಬದುಕಿದ್ದಳು, ಆಕೆ ಭಾರತೀಯ ನಾರಿಯ ಹೃದಯಕ್ಕೆ ಹತ್ತಿರವಾದ ಮೌಲ್ಯಗಳನ್ನು ಎತ್ತಿಹಿಡಿದಿದ್ದಳು ಎಂದು ನಂಬಿರುವ ಬಹುದೊಡ್ಡ ವರ್ಗವೊಂದು ಇದೆ. ಹೀಗಿದ್ದರೂ ವಿವಾದದ ನಡುವೆಯೇ ಕೆಲವು ಎಡಪಂಥೀಯ ಮಹಾನ್‌ ‘ವಿಚಾರವಾದಿಗಳು’ ಈ ನಂಬಿಕೆಗಳನ್ನು ಪ್ರಶ್ನೆ ಮಾಡುವುದೂ ಅಲ್ಲದೆ, ಕಾಲ್ಪನಿಕ ಹೆಣ್ಣೊಬ್ಬಳನ್ನು ಹಿಂದೂಗಳು ಆರಾಧಿಸುತ್ತಿದ್ದಾರೆ ಎಂದು ಅಪಹಾಸ್ಯ ಮಾಡುತ್ತಿದ್ದಾರೆ. ಹಿಂದೂ ನಂಬಿಕೆಗಳು ಹಾಗೂ ಅಭಿಪ್ರಾಯಗಳನ್ನು ಮತ್ತೆ ಮತ್ತೆ ಪ್ರಶ್ನಿಸುವ ಇಂತಹ ಹುಚ್ಚು ಸಾಹಸದ, ಬೌದ್ಧಿಕ ಸಮಸ್ಯೆ ತಂದೊಡ್ಡುವವರಿಂದ ಬಾಲಿವುಡ್‌ ತನ್ನನ್ನು ರಕ್ಷಿಸಿಕೊಳ್ಳಬೇಕು.

ಸಮಸ್ಯೆಯ ಮೂಲವನ್ನು ಗುರುತಿಸಿದ ನಂತರ ಜ್ವಾಲೆಯನ್ನು ಆರಿಸುವುದು ಬನ್ಸಾಲಿ ಅವರ ತಂಡಕ್ಕೆ ಸುಲಭದ ಕೆಲಸವಾಗಬೇಕು. ಆದರೆ, ಶಂಕಿತ ‘ತಿರುಚುವಿಕೆ’ಯು ತಮ್ಮ ಸಿನಿಮಾದಲ್ಲಿ ಇಲ್ಲವೆಂದಾಗಿದ್ದರೆ, ಸಂಜಯ್ ಲೀಲಾ ಬನ್ಸಾಲಿ ಅವರು ಈ ವಿವಾದವನ್ನು ಆರಂಭದಲ್ಲೇ ಆರಿಸಲು ಏಕೆ ಯತ್ನಿಸಲಿಲ್ಲ? ನೆಹರೂವಾದಿ ಮತ್ತು ಎಡಪಂಥೀಯ ಇತಿಹಾಸಕಾರರು ಬರೆದಿರುವ ನಕಲಿ ಇತಿಹಾಸವು ಈ ಕಿಡಿಗೇಡಿತನಗಳಿಗೆ ಮೂಲ ಕಾರಣ ಎಂಬುದನ್ನು ಬಾಲಿವುಡ್ ಗುರುತಿಸಿದಾಗ, ಅವರು ಮಾಡಿರುವ ಕಿಡಿಗೇಡಿತನದ ತಿರುಚುವಿಕೆಗಳಿಂದ ಮೈಲು ದೂರ ಉಳಿದಾಗ, ಜನರ ನಿರ್ದಿಷ್ಟ ಗುಂಪಿನ ಜೊತೆ ಸಂಘರ್ಷ ಉಂಟಾಗುವುದನ್ನು ತಪ್ಪಿಸಲು ಅದಕ್ಕೆ ಸಾಧ್ಯವಾಗುತ್ತದೆ.

ಇವೆಲ್ಲ ಏನೇ ಇರಲಿ. ವಿವಾದಗಳು ಏನೇ ಇದ್ದರೂ, ಬನ್ಸಾಲಿ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವುದು ದೇಶದ ಪ್ರಭುತ್ವದ ಕರ್ತವ್ಯ. ಸಿನಿಮಾದ ನಿರ್ದೇಶಕರಿಗೆ ಮತ್ತು ಕಲಾವಿದರಿಗೆ ಕೊಲೆ ಬೆದರಿಕೆ ಒಡ್ಡುತ್ತಿರುವವರ ಮೇಲೆ ಕಾನೂನಿಗೆ ಅನುಗುಣವಾಗಿ ಕಠಿಣ ಕ್ರಮ ಜರುಗಿಸುವುದೂ ಪ್ರಭುತ್ವದ ಕರ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT