ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹವಾ’ದಲ್ಲಿ ಅಡಗಿರುವ ಸತ್ಯಗಳು

Last Updated 7 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಸಂವಾದಗಳು ಪ್ರಾರಂಭವಾಗುವ ಹೊಸ ನಮೂನೆಯೊಂದು ಸೃಷ್ಟಿಯಾಗಿದೆ. ಅದರಲ್ಲೂ ವಾಣಿಜ್ಯೋದ್ಯಮಿಗಳ ಗುಂಪು ಇರುವ ಕಡೆಯಂತೂ ಈ ನಮೂನೆ ಎದ್ದುಕಾಣುತ್ತದೆ. ಅತಿ ಖಾಸಗಿಯಾಗಿಯೇ ಮಾತು ಪ್ರಾರಂಭಿಸುವ ರೀತಿ ಅದು. ಅಂಥ ಸಂವಾದ ಪ್ರಾರಂಭವಾಗುವುದು ಹೀಗೆ:

‘ನಿಮ್ಮನ್ನು ಒಂದು ಪ್ರಶ್ನೆ ಕೇಳಲೇ... ಆಫ್ ದಿ ರೆಕಾರ್ಡ್’?

‘ನಾನೊಬ್ಬ ಪತ್ರಕರ್ತ. ಎಂದಿಗೂ ಆಫ್ ದಿ ರೆಕಾರ್ಡ್ ಮಾತನಾಡಲಾರೆ... ಸರ್. ಏನು ಬೇಕಾದರೂ ಆನ್ ರೆಕಾರ್ಡ್ ಕೇಳಿ, ಹೇಳುವೆ’.

‘ಹಾಗಲ್ಲ. ಅದು ಅತಿ ಸೂಕ್ಷ್ಮವಾದ ಪ್ರಶ್ನೆ. ಅದಕ್ಕೇ ಆಫ್ ದಿ ರೆಕಾರ್ಡ್ ಪ್ಲೀಸ್’ ಪ್ರಶ್ನೆ ಕೇಳಿದವರು ವಿನಮ್ರ ಧಾಟಿಯಲ್ಲೇ ಎಳೆದರು.

‘ಸರ್, ನನಗೆ ಆಫ್ ದಿ ರೆಕಾರ್ಡ್ ಹೇಳುವುದು ಏನೂ ಇಲ್ಲ. ಜನ ಕೆಲವೊಮ್ಮೆ ಪತ್ರಕರ್ತರ ಬಳಿ ಆಫ್ ದಿ ರೆಕಾರ್ಡ್ ಮಾತನಾಡುತ್ತಾರೆ. ಆದರೆ, ಪತ್ರಕರ್ತರಿಗೆ ಹಾಗೆ ಹೇಳುವ ಅವಶ್ಯಕತೆ ಇರುವುದಿಲ್ಲ’.

ಆಮೇಲೆ ಬಿಕ್ಕಟ್ಟು ಪರಿಹರಿಸುವವರಂತೆ, ಆಫ್ ದಿ ರೆಕಾರ್ಡ್ ಹೇಳಬೇಕಿರುವುದು ತಾವೇ ಎಂಬುದನ್ನು ಮೆಲುದನಿಯಲ್ಲೇ ಅರುಹಿದರು. ಆ ಪ್ರಶ್ನೆಯನ್ನು ಕೇಳಿದ್ದು ತಾವು ಎಂದು ಎಲ್ಲೂ ಹೇಳಕೂಡದೆಂದು ನನ್ನಿಂದ ಮಾತು ತೆಗೆದುಕೊಂಡರು. ಪ್ರಶ್ನಾವಳಿ ಮುಂದುವರಿಸಿದರು:
‘ಆಪ್ ಕ್ಯಾ ಸೋಚ್ತೇ ಹೈ, ಕುಛ್‌ ಹವಾ ಬದಲ್ ರಹೀ ಹೈ?’ (ನಿಮಗೇನನ್ನಿಸುತ್ತದೆ ಈಗ ‘ಹವಾ’ ಏನಾದರೂ ಬದಲಾಗುತ್ತಿದೆಯೇ?)

ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಯನ್ನು ಕುರಿತು ಅವರು ಆ ಪ್ರಶ್ನೆಯನ್ನು ಕೇಳಿದ್ದು. ನಾನು ತುಂಬಾ ಪ್ರಾಮಾಣಿಕತೆಯಿಂದ ಉತ್ತರ ಕೊಟ್ಟೆ. ಅದಕ್ಕೇ ಅದನ್ನು ಇಲ್ಲಿ ಬರೆಯುತ್ತಿದ್ದೇನೆ; ‘ಆನ್ ರೆಕಾರ್ಡ್’: ‘ಹವಾ ಬದಲಾಗುತ್ತಿದೆ ಎಂದು ನನಗೇನೂ ಅನಿಸುತ್ತಿಲ್ಲ’. ಈಗ ನೀವು ಕೇಳುತ್ತಿರುವುದು ಮಧ್ಯಾವಧಿಯ ಸದ್ದು ಅಷ್ಟೇ. ಈ ಸರ್ಕಾರ ಮಧ್ಯಾವಧಿಯ ಹಂತವನ್ನು ದಾಟಿದ್ದು, ಕೊನೆಗೂ ಸ್ವಲ್ಪ ಸದ್ದಂತೂ ಕೇಳುತ್ತಿದೆ.

ಈ ವಾರಾಂತ್ಯದಲ್ಲೂ ಅಂಥದ್ದೇ ಸಂವಾದ ನನಗೆ ಎದುರಾದರೆ, ನನ್ನ ಪ್ರತಿಕ್ರಿಯೆ ಇನ್ನೂ ಸ್ಪಷ್ಟವಾಗಿರುತ್ತದೆ. ಹವಾ ಇನ್ನೂ ಬದಲಾಗುತ್ತಿಲ್ಲ ಎಂದು ಹೇಳಬಲ್ಲೆನಾದರೂ, ಹವಾದಲ್ಲೂ ಏನೋ ವಿಷಯವಂತೂ ಅಡಗಿದೆ ಎನ್ನುವುದು ನಿಜ. ಯುಪಿಎ-2 ತನ್ನ ಹತಾಶೆ ಹಾಗೂ ಅನುಮಾನಗಳಿಂದಾಗಿ ಮತದಾರರಲ್ಲಿ ವಿರೇಚನೆಯ ಭಾವ ಸೃಷ್ಟಿಸಿದಾಗಿನಿಂದ ಇಂಥ ಹವೆಯನ್ನು ನಾವು ಆಘ್ರಾಣಿಸಿರಲಿಲ್ಲ.

ಆರ್ಥಿಕ ಕ್ಷೇತ್ರದಲ್ಲಿ ಅನಿಶ್ಚಿತತೆ ಉಲ್ಬಣಿಸುತ್ತಿರುವುದರಿಂದ ಹೊಸ ಅನುಮಾನಗಳು ಹಾಗೂ ಕೆಲವು ಹತಾಶೆಗಳು ಹೊಮ್ಮುತ್ತಿವೆ. ಈ ಸ್ಥಿತಿಯು ಯುಪಿಎ ಸರ್ಕಾರದ ಎರಡು ವರ್ಷಗಳ ಅವಧಿಯಲ್ಲಿ ಶುರುವಾದದ್ದು. ಈಗ ಅದು ದೀರ್ಘಕಾಲಿಕವಾಗಿ ಬೆಳೆದಿದೆ. ಆರು ತ್ರೈಮಾಸಿಕಗಳಲ್ಲಿ ಜಿಡಿಪಿಯಲ್ಲಿ ಇಳಿಕೆ, 1,100 ವೋಲ್ಟ್ಸ್‌ನ ಎರಡು ಆಘಾತಗಳು (ನೋಟು ಅಮಾನ್ಯತೆ ಹಾಗೂ ಜಿಎಸ್‌ಟಿ), ಉದ್ಯೋಗದಲ್ಲಿ ಕಡಿತ, ಏರಿಕೆಯಾಗದ ವೇತನ (ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಉಪಯೋಗವಾದದ್ದನ್ನು ಬಿಟ್ಟು)... ಇವೆಲ್ಲ ಗಾಸಿಗೊಳಿಸಲಾರಂಭಿಸಿವೆ.

ಬಹುತೇಕ ಜನರು ಭಾರತೀಯ ರಿಸರ್ವ್ ಬ್ಯಾಂಕ್‌ನ ಸೂಕ್ಷ್ಮ ವರದಿಗಳು, ಹಣಕಾಸು ನೀತಿ, ಜಿಡಿಪಿ, ಚಾಲ್ತಿ ಖಾತೆಯ ಕೊರತೆ, ವ್ಯಾಪಾರ ಸಮತೋಲನ, ನಿಜವಾದ ಬಡ್ಡಿ ದರಗಳು ಮತ್ತಿತರ ವಿಲಕ್ಷಣ ಪದಪುಂಜಗಳ ಬಗೆಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ, ಕುಟುಂಬದ ಒಬ್ಬಳು ಕೆಲಸ ಕಳೆದುಕೊಂಡಾಗ ಆಗುವ ನೋವು ಅಥವಾ ಕೆಲಸ ಸಿಗದೇ ಇರುವುದರಿಂದ ಆಗುವ ಬೇಸರ, ಹತಾಶೆ ಅಥವಾ ಮಿಠಾಯಿ ಅಂಗಡಿಯಲ್ಲಿ ಅನಿವಾರ್ಯವಾಗಿ ಕಾರ್ಮಿಕರ ಸಂಖ್ಯೆ ಕಡಿತಗೊಳಿಸಬೇಕಾದ ಪರಿಸ್ಥಿತಿ ಗಾಸಿಗೊಳಿಸುತ್ತವೆ. ಬಳೆ ತಯಾರಿಕೆಯ ಸಣ್ಣ ಉದ್ಯಮದಲ್ಲಿ ನೋಟು ಅಮಾನ್ಯದ ನಡೆಯಿಂದ ಆರು ತಿಂಗಳು ಹೊಡೆತ ಬಿದ್ದರೂ ಸಂಕಟವಾಗುತ್ತದೆ. ಜಿಎಸ್‌ಟಿ ಗೋಜಲುಗಳ ವಿರುದ್ಧ ಹೋರಾಡುವ ಪರಿಸ್ಥಿತಿಯೂ ಉದ್ಭವಿಸಿರು

ವುದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಪ್ರಧಾನಿ ಜನಪ್ರಿಯತೆ ಈಗಲೂ ಅಬಾಧಿತ. ಈಗ ಚುನಾವಣೆ ನಡೆದರೂ ಫಲಿತಾಂಶ 2014ರ ಚುನಾವಣೆಗಿಂತ ಭಿನ್ನವಾಗಿಯೇನೂ ಇರಲಾರದು. ‘ಇಂಟಿಯಾ ಟುಡೇ’ ಮಾಡಿದ ‘ಮೂಡ್‌ ಆಫ್‌ ದಿ ನೇಷನ್ ಪೋಲ್’ (ಆಗಸ್ಟ್‌ 2017ರ ಸಂಚಿಕೆ, ಎನ್‌ಡಿಎಗೆ 349 ಲೋಕಸಭಾ ಸ್ಥಾನಗಳು) ಹೇಳಿರುವುದಕ್ಕಿಂತ ಚುನಾವಣಾ ಫಲಿತಾಂಶ ಭಿನ್ನವೇನೂ ಆಗಲಾರದು. ಆದರೆ, ಮೂರು ಸಂಗತಿಗಳನ್ನು ಖಚಿತವಾಗಿ ಹೇಳಬಹುದು. ದೀರ್ಘ ಕಾಲದಿಂದ ನಂಬಿಕೆ ಇತ್ತಲ್ಲ, ಈಗ ಅನುಮಾನದ ಗುಂಗಿಹುಳ ಮಿದುಳುಗಳನ್ನು ಕೊರೆಯತೊಡಗಿದೆ. ತಮ್ಮ ಆಜ್ಞೆಗಳನ್ನು ಪಾಲನೆ ಮಾಡುವವರಿಗೆ ಅಧಿಕಾರಾವಧಿಯ ಮೂರನೇ ಎರಡರಷ್ಟು ಕಾಲ ಇರುವ ಸೂಚನೆ ಈಗಾಗಲೇ ಸಿಕ್ಕಿದೆ. ಹೀಗಾಗಿ ಪ್ರಧಾನಿ ವರ್ಚಸ್ಸಿಗೇನೂ ಧಕ್ಕೆ ಇಲ್ಲ. ಆದರೆ, ಅವರ ಏರುಗತಿಯ ಚಲನೆ ಈಗ ನಿಂತುಹೋಗಿದೆ. ಮುಂದಿನ ಚುನಾವಣೆಗೆ ಎರಡು ವರ್ಷಗಳಷ್ಟೇ ಉಳಿದಿರುವಾಗ ರಾಜಕಾರಣಿಗಳು ಜಡ್ಡುಗಟ್ಟಿದವರಂತೆ ಇರಲಾರರು.

ಕಂಪೆನಿ ಕಾರ್ಯದರ್ಶಿಗಳನ್ನು ಉದ್ದೇಶಿಸಿ ಪ್ರಧಾನಿ ಕಳೆದ ವಾರ ಮಾಡಿದ ಒಂದು ತಾಸಿನ, ಉತ್ಸಾಹಭರಿತ ಭಾಷಣದಲ್ಲಿ ಕಳಕಳಿ ಎದ್ದುಕಂಡಿತು. ಈ ವರ್ಷದ ಅಂದಾಜು ಅಭಿವೃದ್ಧಿ ಪ್ರಮಾಣವು ಇಳಿಕೆಯಾಗಲಿದ್ದು, ದರ ಕಡಿತದ ಸ್ಟಿರಾಯಿಡ್‌ನಿಂದ ಇನ್ನಷ್ಟು ಕಾಲ ಉಸಿರಾಡಲಾಗದು ಎಂದು ಸರ್ಕಾರಕ್ಕೆ ಆರ್‌ಬಿಐ ತಿಳಿಸಿದ ಕೆಲವೇ ಗಂಟೆಗಳ ನಂತರ ಪ್ರಧಾನಿ ಮಾಡಿದ ಭಾಷಣ ಅದು; ‘ವಿಂಟೇಜ್ ಮೋದಿ’ಯ ಭಾಷಣವೆನ್ನುವುದು ಸೂಕ್ತ. ಆ ಭಾಷಣದಲ್ಲಿ ಕಿಡಿ, ಕೋಪಾವೇಶ, ಆತ್ಮವಿಶ್ವಾಸಗಳಿದ್ದವು. 2013ರ ನಂತರ ಮೊದಲ ಬಾರಿಗೆ ಅವರು ಮತ್ತೆ ಹೋರಾಡಲು ಆರಂಭಿಸಿದ್ದಾರೆ ಎನ್ನುವುದೂ ವ್ಯಕ್ತವಾಯಿತು. ಆ ಭಾಷಣದಲ್ಲಿ ರಕ್ಷಣಾತ್ಮಕ ಧೋರಣೆ ಇತ್ತು. ತಮ್ಮ ಅಧಿಕಾರಾವಧಿಯ ಮೊದಲ ಮೂರು ವರ್ಷಗಳನ್ನು ಅವರು ಕಾಂಗ್ರೆಸ್ ಸರ್ಕಾರದ ಕೊನೆಯ ಮೂರು ವರ್ಷಗಳ ಜೊತೆಗೆ ಪದೇ ಪದೇ ತುಲನೆ ಮಾಡಿದರು. ಕಾಂಗ್ರೆಸ್ ಸರ್ಕಾರದ ಕೊನೆಯ ಮೂರು ವರ್ಷಗಳು ತೀರಾ ಕೆಟ್ಟದಾಗಿದ್ದವು. ಲೋಕಸಭೆಯಲ್ಲಿ ಸಂಖ್ಯಾಬಲ 44ಕ್ಕೆ ಇಳಿದಿತ್ತು. ಈ ಭಾಷಣ ಕೇಳಿದ ಬಳಿಕ ಮೋದಿ ಅವರ ಅನುಯಾಯಿಗಳು ಮತ್ತೆ ಕಿಚ್ಚಿನಿಂದ ಮನೆಗೆ ಹೋಗಿರುತ್ತಾರೆ ಎಂದು ನಿಸ್ಸಂಶಯವಾಗಿ ಹೇಳಬಲ್ಲೆ. ಪದಗಳ ಬಳಕೆಯಲ್ಲಿ ಅಂಥ ಮೋಡಿಗಾರ ಮೋದಿ. ಅಧಿಕಾರಯುತವಾಗಿ ಜನಾಭಿಪ್ರಾಯ ರೂಪಿಸುವುದರಲ್ಲೂ ನಿಸ್ಸೀಮರು. ಆದರೂ ಅವರ ಮುಖದಲ್ಲಿ ಆತಂಕವಿತ್ತು.

ಅವರ ಇತ್ತೀಚಿನ ಕ್ರಿಯೆಗಳಲ್ಲೂ ಅದು ಎದ್ದುಕಂಡಿದೆ. ‘ನಿರಾಶಾವಾದ ಹರಡುವವರ’ ಮೇಲೆ ಅವರು ಮಾಡಿದ ವಾಗ್ದಾಳಿ ಚುಚ್ಚುವಂತಿತ್ತು. ಇಂದಿರಾ ಗಾಂಧಿ ‘ಸಿನಿಕತೆಯ ಸೃಷ್ಟಿ’ ಎಂದು ಸಂದಿಗ್ಧ ಪರಿಸ್ಥಿತಿಯಲ್ಲಿ ವಾಗ್ದಾಳಿ ನಡೆಸಿದ್ದೂ ಹಾಗೆಯೇ ಇತ್ತು. ಅಮೆರಿಕದ ಮಾಜಿ ಉಪಾಧ್ಯಕ್ಷ ಸ್ಪೈರೊ ಆ್ಯಗ್‌ನ್ಯೂ ‘ಅರ್ಥವಿಲ್ಲದ ನಕಾರಾತ್ಮಕತೆ ಪಸರಿಸುವ ಸಿರಿವಂತರು’ ಎಂದು ತರಾಟೆಗೆ ತೆಗೆದುಕೊಂಡಿದ್ದ ರೀತಿಯೂ ಹೀಗೇ ಇತ್ತು.

ಅವರೇ ತೆಗೆದುಹಾಕಿದ್ದ ಆರ್ಥಿಕ ಸಲಹಾ ಸಮಿತಿಯ ಮರು ಕಾರ್ಯಾರಂಭ ಒಂದು ಯೋಚನೆಯ ಹಿನ್ನಡೆಗೆ ಉದಾಹರಣೆ. ಹಾರ್ವರ್ಡ್‌ನಲ್ಲಿ ಕಲಿತ ಅರ್ಥತಜ್ಞರನ್ನು ಹೀಗಳೆದ ಕೆಲವೇ ತಿಂಗಳ ನಂತರ ಪ್ರಿನ್ಸ್‌ಟನ್‌ನ ಒಬ್ಬರನ್ನು (ಸುರ್ಜಿತ್ ಭಲ್ಲಾ) ಸಮಿತಿಗೆ ಸೇರಿಸಿಕೊಂಡಿದ್ದನ್ನೂ ಗಮನಿಸಬೇಕು. ಪೆಟ್ರೋಲ್ ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕ ಇಳಿಕೆ ಅವರ ಇನ್ನೊಂದು ಹಿನ್ನಡೆ. ಮೋಟಾರ್ ವಾಹನಗಳನ್ನು ಇಟ್ಟುಕೊಂಡ ಮಧ್ಯಮವರ್ಗದ ಜನ ತೆರಿಗೆ ಕುರಿತು ಗೊಣಗಲು ಬಿಡಕೂಡದು ಎಂದು ಪ್ರವಾಸೋದ್ಯಮ ಸಚಿವ ಧಾರ್ಷ್ಟ್ಯದಿಂದ ಹೇಳಿದ್ದನ್ನು ನಾನು ಮೆಚ್ಚುತ್ತೇನೆ (ಇದು ವ್ಯಂಗ್ಯವಲ್ಲ). ಬಡವರ ಪರವಾಗಿ ಪ್ರಧಾನಿ ಬದಲಿಸಿದ ನಿಲುವಿಗೆ ಬಿಜೆಪಿ ನಾಯಕರು ಧನ್ಯವಾದಗಳನ್ನು ಟ್ವೀಟ್‌ ಮಾಡುತ್ತಿದ್ದಾರೆ. ‘ವ್ಯಾಟ್’ ಅನ್ನು ಕಡಿತಗೊಳಿಸುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆಯುವುದಾಗಿ ಹಣಕಾಸು ಸಚಿವರು ಕೂಡ ಹೇಳಿದ್ದಾರೆ. ಈ ಎರಡೂ ಬೆಳವಣಿಗೆಗಳ ನಡುವೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗ್ವತ್ ದಸರಾ ಸಂದರ್ಭದಲ್ಲಿ ಆಡಿದ ಮಾತು ಗಮನ ಸೆಳೆಯಿತು. ಉದ್ಯೋಗಾವಕಾಶ, ವ್ಯಾಪಾರಿಗಳು, ಆರ್ಥಿಕ ಸಂಕಟಕ್ಕೊಳಗಾದ ಎಲ್ಲರ ಕುರಿತು ಅವರ ಮಾತಿನಲ್ಲಿ ಕಾಳಜಿ ಇತ್ತು. ಬಿಜೆಪಿ ಅಧಿಕಾರದಲ್ಲಿರುವಾಗ ಆರ್‌ಎಸ್‌ಎಸ್‌ನಿಂದ ಇಂಥ ಮಾತು ಕೇಳಿಬರುವುದು ಅಪರೂಪವೇ ಹೌದು.

ವಿರೋಧ ಪಕ್ಷಗಳಲ್ಲಿ ತಮ್ಮ ವರ್ಚಸ್ಸಿಗೆ ಸಾಟಿಯಾಗಬಲ್ಲ ನಾಯಕ ಇಲ್ಲದಿರುವುದರಿಂದ ಮೋದಿ ಸುರಕ್ಷತೆಯಿಂದಿದ್ದಾರೆ. ಆದರೂ ನಾವು ಕಂಡಿರುವಂತೆ ಅತಿ ಹೆಚ್ಚು ಜನಪ್ರಿಯನಾದ ನಾಯಕನೂ ಜನರಿಗೆ ಕೋಪ ಬಂದರೆ ಕೆಳಗಿಳಿಯಲೇಬೇಕು. ವಿರೋಧಿ ಯಾರಾಗಿದ್ದರೂ ಅಷ್ಟೇ. ಮೋದಿ ಅವರಿಗಿಂತ ಹೆಚ್ಚು ಅಂತರದ ಮತಗಳಿಂದ ಗೆದ್ದಿದ್ದ ರಾಜೀವ್ ಗಾಂಧಿ ಸೋತಿದ್ದು ಹಾಗೆಯೇ.

ಆ ಪರಿಸ್ಥಿತಿ ಸದ್ಯಕ್ಕಂತೂ ಬಾರದು. ಆದರೆ, ಹವೆಯಲ್ಲಿ ಕೆಲವು ಆಸಕ್ತಿಕರ ವಿಷಯಗಳಿವೆ. ಜನಪ್ರಿಯ ನಾಯಕನ ಕುರಿತು ಹಾಸ್ಯ ಚಟಾಕಿಗಳು, ಮೀಮ್‌ಗಳು ಬರತೊಡಗುವುದು ಸಮಸ್ಯೆಯ ಮೊದಲ ಸೂಚನೆ. ಮೋದಿ ಸರ್ಕಾರದ ಬಗೆಗೆ ಆರು ತಿಂಗಳ ಹಿಂದೆ ಇಂಥ ಚಟಾಕಿಗಳು ಆರಂಭವಾಗಿದ್ದು, ಬರಬರುತ್ತಾ ವ್ಯಾಪಕವಾಗುತ್ತಿವೆ. ವಿರೋಧ ಪಕ್ಷ ಎಷ್ಟೇ ದುರ್ಬಲವಾಗಿರಬಹುದು. ಅದೀಗ ಸಾಮಾಜಿಕ ಜಾಲತಾಣಗಳ ಸಮರದ ಹಿಂದಿನ ವಿಜ್ಞಾನವನ್ನು ಅರ್ಥ ಮಾಡಿಕೊಂಡಿದೆ. ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳನ್ನು ಚಿಂದಿ ಮಾಡಲು ಹಿಂದೆ ಬಿಜೆಪಿ ಸಾಮಾಜಿಕ ಜಾಲತಾಣಗಳನ್ನು ಬಳಸಿತ್ತು. ಈಗ ಆ ನಡೆ ಏಕಪಕ್ಷೀಯವಾಗಿ ಉಳಿದಿಲ್ಲ.

ಈ ‘ವಿದ್ಯುನ್ಮಾನ ಸಮರ’ದಲ್ಲಿ ಸಮತೋಲನದ ಭಯ ಆಗೀಗ ಬದಲಾಗುತ್ತಲೇ ಇದೆ. ಆಮ್ ಆದ್ಮಿ ಪಾರ್ಟಿ ಯಾವತ್ತೂ ಇದರಲ್ಲಿ ಉತ್ತಮವಾಗಿದೆ. ಕಾಂಗ್ರೆಸ್ ಕಲಿತುಕೊಂಡಿದೆ. ಈ ವಾರ ‘ದಿ ಎಕಾನಮಿಸ್ಟ್’ ವರ್ಣಿಸಿರುವಂತೆ ಭಾರತದ ‘ತ್ರಾಣವಿಲ್ಲದಂತೆ ಇದ್ದ ಎಡಪಂಥೀಯ ಉದಾರವಾದಿ ವರ್ಗ’ ಕೂಡ ಸಾಮಾಜಿಕ ಜಾಲತಾಣವನ್ನು ಹೇಗೆ ಬಳಸಿಕೊಳ್ಳಬೇಕೆಂಬುದನ್ನು ಅರಿತಿದೆ. ಹೀಗಾಗಿ ಬಿಜೆಪಿಗೆ ಸ್ಪರ್ಧೆ ಎದುರಾಗಬಹುದು. ಸಂದೇಶವನ್ನು ನಿಯಂತ್ರಿಸುವ ಶಕ್ತಿ ಇರುವುದರಿಂದ ಬಿಜೆಪಿಗೆ ಈಗ ಮೇಲುಗೈ ಇರುವುದೇನೋ ನಿಜ. ಆ ನಿಯಂತ್ರಣವೀಗ ಸಡಿಲಗೊಳ್ಳುತ್ತಿದೆ.

ತಮ್ಮ ಮಾತುಗಾರಿಕೆಯ ದಿಟ್ಟ ನಡೆಯನ್ನು ಪ್ರಧಾನಿ ಕಳೆದ ವಾರ ತೋರಿದರು. ಅವರಿಗೆ ಅಲ್ಲಿ ಯಾವ ಸ್ಪರ್ಧೆಯೂ ಇರಲಿಲ್ಲ. ಬಾಗಿಸಲು ಅನೇಕರು ತಯಾರಾಗಿರುವ ಹೊತ್ತಿನಲ್ಲಿ ಇಷ್ಟೇ ಸಾಕಾಗದು. ಪಕ್ಷವನ್ನು ಚುನಾವಣೆ ಗೆಲ್ಲುವ ಯಂತ್ರವನ್ನಾಗಿ ರೂಪಿಸಲು ಮೂರು ವರ್ಷಗಳಲ್ಲಿ ಅತಿ ಹೆಚ್ಚು ಶಕ್ತಿಯನ್ನು ವ್ಯಯಿಸಲಾಗಿದೆ. ಆಡಳಿತವು ಹೆಚ್ಚು ಸಾವಧಾನ ಬೇಡುತ್ತದೆ; ವ್ಯಂಗ್ಯವೆಂಬಂತೆ ಪ್ರಮುಖ ರಾಜ್ಯಗಳ ಚುನಾವಣೆ ಹತ್ತಿರವಾದ ಈ ಹೊತ್ತಿನಲ್ಲಿ. ಎಚ್ಚರಿಕೆಯ ಸ್ಥಿತಿಯನ್ನು ಮನಗಾಣದೇ ಹೋದರೆ ಕುಸಿತ ಖಚಿತ. ಸಂದೇಶ ಬದಲಿಸಿದರಷ್ಟೇ ಸಾಲದು. ಆರ್ಥಿಕವಾಗಿ ಸತ್ಪರಿಣಾಮಕಾರಿಯಾದ ಅಂಕಿಅಂಶವನ್ನು ಮೋದಿ ಸರ್ಕಾರ ಕೊಡಬೇಕಿದೆ. ಅದು ಯುಪಿಎ ಸರ್ಕಾರದ ಹಳೆಯ ಹಾದಿಯಲ್ಲಿ ಅಲ್ಲ; ತನ್ನದೇ ದಾರಿಗಳ ಮೂಲಕ.

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT