ಬುಧವಾರ, ಅಕ್ಟೋಬರ್ 16, 2019
28 °C

ಕಾರಾಗೃಹದಲ್ಲಿ ಸಮುದಾಯ ರೇಡಿಯೊ: ಕೈದಿಗಳಿಂದ ನಡೆಯುತ್ತಿದೆ ತಾಲೀಮು

Published:
Updated:

ಬೆಂಗಳೂರು: ಕರ್ನಾಟಕ ರಾಜ್ಯ ಬಂದಿಖಾನೆ ಇಲಾಖೆಯು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ‘ಸಮುದಾಯ ರೇಡಿಯೊ’ ಆರಂಭಿಸಲು ಸಿದ್ಧತೆ ನಡೆಸಿದೆ.

ಶಿಕ್ಷೆಗೊಳಗಾದ ಕೈದಿಗಳ ಪ್ರತಿಭಾ ಪ್ರದರ್ಶನಕ್ಕೆ ಹಾಗೂ ಅವರು ತಮ್ಮ ನೋವು–ನಲಿವುಗಳನ್ನು  ಹಂಚಿಕೊಳ್ಳುವುದಕ್ಕೆ ಮತ್ತು ಹೊರಜಗತ್ತಿನ ಸಮಕಾಲೀನ ಬೆಳವಣಿಗೆಗಳ ಬಗ್ಗೆ ಅವರು ಮಾಹಿತಿ ಪಡೆಯುವುದಕ್ಕೆ ಇದು ನೆರವಾಗಲಿದೆ.

ಆಂಧ್ರಪ್ರದೇಶ, ಮಹಾರಾಷ್ಟ್ರ, ಬಿಹಾರ ಸೇರಿದಂತೆ ದೇಶದ ಕೆಲವು ರಾಜ್ಯಗಳ ಕೇಂದ್ರ ಕಾರಾಗೃಹಗಳಲ್ಲಿ ಈಗಾಗಲೇ ಸಮುದಾಯ ರೇಡಿಯೊಗಳಿವೆ. ಆದರೆ, ಕರ್ನಾಟಕದಲ್ಲಿ ಇಂತಹ ಪ್ರಯತ್ನ ಇದೇ ಮೊದಲು. ಇದಕ್ಕೆ ಸಿಗುವ ಸ್ಪಂದನೆ ನೋಡಿಕೊಂಡು ರಾಜ್ಯದ ಇತರ ಕಾರಾಗೃಹಗಳಲ್ಲೂ ಇದೇ ಮಾದರಿಯಲ್ಲಿ ಸಮುದಾಯ ರೇಡಿಯೊ ಆರಂಭಿಸುವ ಚಿಂತನೆಯನ್ನು ಇಲಾಖೆಯ ಅಧಿಕಾರಿಗಳು ಹೊಂದಿದ್ದಾರೆ.

‘ಸಮುದಾಯ ರೇಡಿಯೊದ ತರಂಗಾಂತರವು ನಮ್ಮ ಕಾರಾಗೃಹದ ಆಸುಪಾಸಿನಲ್ಲಿ ಮಾತ್ರ ಸಿಗುವುದರಿಂದ ಇದು ಇಲ್ಲಿಗೆ ಸೀಮಿತ. ಶಿಕ್ಷೆಗೊಳಗಾದ ಕೈದಿಗಳು ಹಾಗೂ ನಮ್ಮ ಕೆಲವು ಸಿಬ್ಬಂದಿ ಸೇರಿ ವಿವಿಧ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ಬಹುತೇಕ ಕೈದಿಗಳು ಬೇರೆಬೇರೆ ವೃತ್ತಿಪರ ಹಿನ್ನೆಲೆಯವರಾಗಿದ್ದು, ವಿಭಿನ್ನ ಪ್ರತಿಭೆಗಳನ್ನು ಹೊಂದಿದ್ದಾರೆ. ಅವರ ಪ್ರತಿಭೆಗಳನ್ನು ಬೆಳಕಿಗೆ ತರುವುದು ನಮ್ಮ ಉದ್ದೇಶ. ಅದಕ್ಕಾಗಿ ನಾವು ಈ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡಿದ್ದೇವೆ’ ಎಂದು ಪರಪ್ಪನ ಅಗ್ರಹಾರ ಕಾರಾಗೃಹದ ಮುಖ್ಯ ಅಧೀಕ್ಷಕ ವಿ.ಶೇಷಮೂರ್ತಿ ತಿಳಿಸಿದರು.

ಆಯ್ದ ಕೆಲವು ಕೈದಿಗಳಿಗೆ ಹಾಗೂ ಸಿಬ್ಬಂದಿಗೆ 91.1 ಎಫ್‌ಎಂ ರೇಡಿಯೊ ಜಾಕಿಗಳು 15 ದಿನಗಳ ತರಬೇತಿ ನೀಡಲಿದ್ದಾರೆ. ಜೈಲಿನಲ್ಲಿರುವ ಎಲ್ಲರೂ ಕಾರ್ಯಕ್ರಮ ಆಲಿಸಲು ಸುಲಭವಾಗಲಿ ಎಂಬ ಉದ್ದೇಶದಿಂದ ಕಾರಾಗೃಹದ ಎಲ್ಲ ಬ್ಯಾರಕ್‌ಗಳಲ್ಲಿ ಸ್ಪೀಕರ್‌ಗಳನ್ನು ಅಳವಡಿಸಲಾಗುತ್ತಿದೆ. ಸದ್ಯ ಆರು ಮಹಿಳಾ ಸಿಬ್ಬಂದಿಯೂ ಸೇರಿದಂತೆ ಒಟ್ಟು 20 ಮಂದಿಯನ್ನು ತರಬೇತಿಗಾಗಿ ಆಯ್ಕೆಮಾಡಲಾಗಿದೆ. ಅಧಿಕಾರಿಗಳು ಬಯಸಿದರೆ ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

‘ಜೈಲಿನಲ್ಲಿರುವವರಿಗೆ ಹಾಗೂ ಅವರ ಬಂಧುಗಳಿಗೆ ಹುಟ್ಟುಹಬ್ಬದ ಶುಭಾಶಯ ಕೋರುವುದಕ್ಕೂ ಅವಕಾಶ ಇರಲಿದೆ. ವಿಶೇಷ ದಿನಗಳಲ್ಲಿ ಗಣ್ಯರ ಸಂದೇಶಗಳು, ಯಶೋಗಾಥೆಗಳು, ಗಣ್ಯರ ಹುಟ್ಟುಹಬ್ಬದ ಆಚರಣೆ ಮುಂತಾದ ಕಾರ್ಯಕ್ರಮಗಳಿಗೂ ಆದ್ಯತೆ ನೀಡುತ್ತೇವೆ. ಉತ್ತಮ ನಡತೆ ಮತ್ತು ವರ್ತನೆ ಬಗ್ಗೆ ಭಾಷಣ ಮಾಡುವವರನ್ನು ಅತಿಥಿಗಳನ್ನಾಗಿ ಕರೆಸಿ ಅವರಿಂದ ಕಾರ್ಯಕ್ರಮ ನಡೆಸುವ ಚಿಂತನೆಯೂ ಇದೆ’ ಎಂದು ಶೇಷಮೂರ್ತಿ ತಿಳಿಸಿದರು.

ವಿಭಿನ್ನ ಕಾರ್ಯಕ್ರಮ ಪ್ರಸಾರ
ಸಮುದಾಯ ರೇಡಿಯೊದಲ್ಲಿ ಬೆಳಿಗ್ಗೆ 6ರಿಂದ ಸಂಜೆ 6ಗಂಟೆವರೆಗೆ ಸತತ 12 ಗಂಟೆ ವಿಭಿನ್ನ ಕಾರ್ಯಕ್ರಮಗಳು ಪ್ರಸಾರವಾಗಲಿವೆ. ಆರಂಭದ ಎರಡು ಮೂರು ಗಂಟೆ ಭಜನೆಗಳು, ಭಕ್ತಿಗೀತೆಗಳು, ವಾರ್ತೆಗಳು ಹಾಗೂ ನಿರ್ದಿಷ್ಟ ವಿಷಯದ ಮೇಲೆ ಅಥವಾ ಸಮಕಾಲೀನ ವಿಷಯಗಳ ಬಗ್ಗೆ ಚರ್ಚೆಗಳು ಪ್ರಸಾರವಾಗಲಿವೆ.

Post Comments (+)