ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವವೇ ವಿದ್ಯಾಲಯ

Last Updated 11 ಜುಲೈ 2018, 13:55 IST
ಅಕ್ಷರ ಗಾತ್ರ

ಅವಧೂತರು ಜ್ಞಾನಿಗಳು. ನಮ್ಮ ದೇಶದಲ್ಲಿ ಅವಧೂತರ ದೊಡ್ಡ ಪರಂಪರೆಯೇ ಇದೆ.

ಜ್ಞಾನಿಗಳು ಎಂದರೆ ಜ್ಞಾನವನ್ನು ಉಳ್ಳವರು ಎಂದು ಅರ್ಥ. ಅದು ಸರಿ; ಆದರೆ ಜ್ಞಾನ ಎಂದರೇನು? ಇಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಏಕೆಂದರೆ ಜ್ಞಾನವನ್ನು ‘ಇದೇ’ ಎಂದು ಸುಲಭವಾಗಿ ಹೇಳಲು ಆಗದು. ‘knowledge’ ಎಂದರೆ ನಾವು ಹೆಚ್ಚಿನ ಸಂದರ್ಭದಲ್ಲಿ ‘ಜ್ಞಾನ’ ಎಂಬುದಾಗಿ ಗ್ರಹಿಸುತ್ತೇವೆ. ಜ್ಞಾನ ಮತ್ತು knowledge – ಎರಡೂ ಒಂದೇ ಆಗುತ್ತದೆಯೆ? ತತ್ತ್ವಶಾಸ್ತ್ರದ ಅಧ್ಯಯನದಲ್ಲಿ ಇದೊಂದು ದೊಡ್ಡ ಪ್ರಶ್ನೆ. ‘ಎರಡೂ ಒಂದೇ ಅಲ್ಲ’. ಇದು ಹೇಗೆ ಎಂದು ಶಾಸ್ತ್ರೀಯವಾಗಿ ಹೇಳತೊಡಗಿದರೆ ದೀರ್ಘವಾಗುತ್ತದೆ. ನಾವು ಇಲ್ಲಿ ಸರಳವಾಗಿ, ‘knowledge’ ಎಂದರೆ ಮಾಹಿತಿಪ್ರಧಾನವಾದ ತಿಳಿವಳಿಕೆ ಎಂದೂ, ‘ಜ್ಞಾನ’ ಎಂದರೆ ಅನುಭವನಿಷ್ಠವಾದ ತಿಳಿವಳಿಕೆ ಎಂದೂ ಹೇಳಬಹುದೇನೋ! ಆದರೆ ಇಲ್ಲೂ ತೊಡಕಿಲ್ಲದೆ ಇಲ್ಲ – ‘ಮಾಹಿತಿ ಎಂದರೇನು?’ ‘ಅನುಭವ ಎಂದರೇನು?’ – ಇಂಥ ಪ್ರಶ್ನೆಗಳೂ ಏಳುತ್ತವೆ. ಸದ್ಯಕ್ಕೆ ಅವುಗಳ ಚರ್ಚೆಗೆ ಹೋಗುವುದು ಬೇಡ; ವಾಚ್ಯಾರ್ಥವನ್ನು ಮಾತ್ರವೇ ನೋಡೋಣ.

ಹಿಮಾಲಯವನ್ನು ನೋಡದೆಯೇ ನಾವು ಅದರ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿಯಲು ಸಾಧ್ಯ. ಆಗ ಒದಗುವ ತಿಳಿವಳಿಕೆಯು ‘knowledge’ ಎಂದಾಗುತ್ತದೆ. ನಾವೇ ನೇರವಾಗಿ ಹಿಮಾಲಯವನ್ನು ನೋಡಿ, ಅದರ ಬಗ್ಗೆ ಪಡೆಯುವ ತಿಳಿವಳಕೆಯು ‘ಜ್ಞಾನ’ ಎಂದಾಗುತ್ತದೆ.

ಹಿಮಾಲಯವನ್ನು ನೇರ ನೋಡಿದ ಮೇಲೂ ನಮಗೆ ಅದರ ಸಮಗ್ರ ವಿಚಾರ ತಿಳಿಯುವ ಸಾಧ್ಯತೆಯಿದೆಯೆ? ‘ಇಲ್ಲ’ ಎಂದೇ ಹೇಳಬೇಕಾಗುತ್ತದೆ. ಹಾಗಾದರೆ ಸಮಗ್ರ ತಿಳಿವಳಿಕೆಯನ್ನು ಪಡೆಯುವ ವಿಧಾನ ಹೇಗೆ? ಇದು ಪ್ರಶ್ನೆ. ಈ ಪ್ರಶ್ನೆಗೂ ಉತ್ತರ ಸುಲಭವಲ್ಲವೆನ್ನಿ! ಸಮಗ್ರವಾದ ತಿಳಿವಳಿಕೆಯನ್ನು ಪಡೆದವರೇ ‘ಜ್ಞಾನಿ’ಗಳು.

ಜ್ಞಾನ ಎಂದರೆ ಏನು – ಎಂದು ಹೇಗೆ ಸುಲಭವಾಗಿ ಹೇಳಲು ಸಾಧ್ಯವಿಲ್ಲವೋ, ಹಾಗೆಯೇ ಅದನ್ನು ಪಡೆದವರು – ಎಂದರೆ ಜ್ಞಾನಿಗಳು – ಹೇಗಿರುತ್ತಾರೆ ಎಂದು ಹೇಳಲೂ ಆಗದು. ನಮ್ಮ ಎಲ್ಲ ಕಲ್ಪನೆಗಳನ್ನು ಮೀರಿದ ರೀತಿಯಲ್ಲಿ ಜ್ಞಾನಿಗಳು ಇರುತ್ತಾರೆ ಎನ್ನುವುದರ ಸೂಚನೆಯೇ ‘ಅವಧೂತತತ್ತ್ವ’.

ಅವಧೂತ ಹೇಗಿರುತ್ತಾನೆ? ಅವನ ಜೀವನವಿಧಾನ ಏನು? ಗುಣಲಕ್ಷಣಗಳೇನು? – ಇಂಥ ಹಲವು ವಿವರಗಳನ್ನು ನೀಡುವ ಕೃತಿಯೇ ‘ಅವಧೂತಗೀತಾ’. ಜ್ಞಾನವನ್ನು ಸಂಪಾದಿಸಬೇಕೆಂದು ಹಂಬಲಿಸುವವರಿಗೆ ಇದೊಂದು ಕೈಪಿಡಿಯಂತಿದೆ. ಜ್ಞಾನದ ಮೂಲಗಳು ಯಾವುವು? ನಾವು ಅರಿವನ್ನು ಪಡೆಯಬಹುದಾದ ನೆಲೆಗಳು ಯಾವುವು? ಇಂಥ ಪ್ರಶ್ನೆಗೆ ಅದು ಕೊಡುವ ಉತ್ತರ ಸೊಗಸಾಗಿದೆ:

ಬಾಲಸ್ಯ ವಾ ವಿಷಯಭೋಗರತಸ್ಯ ವಾsಪಿ

ಮೂರ್ಖಸ್ಯ ಸೇವಕಜನಸ್ಯ ಗೃಹಸ್ಥಿತಸ್ಯ |

ಏತದ್ಗುರೋಃ ಕಿಮಪಿ ನೈವ ನ ಚಿಂತನೀಯಂ

ರತ್ನಂ ಕಥಂ ತ್ಯಜತಿ ಕೋsಪ್ಯಶುಚೌ ಪ್ರವಿಷ್ಟಮ್‌ ||

ಇದರ ತಾತ್ಪರ್ಯ ಹೀಗಿದೆ:

‘ಜ್ಞಾನವನ್ನು ಬಾಲಗುರು ಉಪದೇಶಿಸಲಿ, ವಿಷಯಭೋಗದಲ್ಲಿ ನಿರತನಾಗಿರುವವನಾಗಲೀ, ಮೂರ್ಖನಾಗಲೀ, ಸೇವಕನಾಗಲೀ, ಗೃಹಸ್ಥನಾಗಲೀ – ಯಾರೇ ಅದನ್ನು ಬೋಧಿಸಲಿ; ಅಂಥ ಗುರುವಿನಿಂದ ಬರುವ ಜ್ಞಾನವನ್ನು ತಾತ್ಸಾರವಾಗಿ ಕಾಣಬಾರದು. ಕಸದಲ್ಲಿ ರತ್ನ ಬಿದ್ದಿದೆ ಎಂದು ಯಾರಾದರೂ ಅದನ್ನು ನಿರ್ಲಕ್ಷಿಸುವರೇ?’

ಇಲ್ಲಿ ಹೇಳುತ್ತಿರುವ ಜ್ಞಾನ, ಅದು ಸಮಗ್ರಜ್ಞಾನ, ಅದ್ವೈತಜ್ಞಾನ – ಎನ್ನುವುದು ದಿಟ; ಆದರೆ ಇಲ್ಲಿ ಹೇಳಿರುವ ಸಿದ್ಧತೆಯನ್ನು ಎಲ್ಲ ವಿಧದ ತಿಳಿವಳಿಕೆಯನ್ನು ಪಡೆಯುವುದಕ್ಕೆ ಬೇಕಾದುದು ಎಂದು ಸ್ವೀಕರಿಸುವುದರಲ್ಲಿ ತೊಂದರೆಯೇನಿಲ್ಲ.

ಇಂದಿನ ಶಿಕ್ಷಣಕ್ರಮಕ್ಕೂ ಅವಧೂತಗೀತೆಯ ಮಾತುಗಳನ್ನು ಅನ್ವಯಿಸಬಹುದು. ಇಂದು ನಾವು ಶಿಕ್ಷಣದ ಮೂಲವನ್ನು ಕೇವಲ ಪುಸ್ತಕಗಳಿಗೆ ಮಾತ್ರವೇ ಸೀಮಿತಮಾಡಿದ್ದೇವೆ. ನಮ್ಮ ವ್ಯವಸ್ಥೆಯು ಅಕ್ಷರಜ್ಞಾನವನ್ನೇ ಅತ್ಯಂತ ಶ್ರೇಷ್ಠ ಎಂದು ನಂಬಿಕೊಂಡಿದೆ. ಹೀಗಾಗಿ ನಾವು ಕತ್ತೆತ್ತಿ ನಮ್ಮ ಸುತ್ತಲಿನ ಜಗತ್ತನ್ನು ನೋಡಲೂ ತಯಾರಾಗುತ್ತಿಲ್ಲ. ಅವಧೂತಗೀತಾ ಹೇಳುತ್ತಿರುವುದು ಅದನ್ನೇ: ನಮ್ಮ ವಿಶ್ವವೇ ನಮಗೆ ವಿಶ್ವವಿದ್ಯಾಲಯ; ಅದನ್ನು ಚೆನ್ನಾಗಿ ನೋಡಬೇಕು. ಆದರೆ ನಾವು ಇಂಥದೊಂದು ನೋಟವನ್ನು ಕಳೆದುಕೊಳ್ಳುತ್ತಿದ್ದೇವೆ. ಮಗು ಅದರ ಪರಿಸರವನ್ನೂ ಸಮಾಜವನ್ನೂ ನೋಡುವುದನ್ನು ಮೊದಲು ಕಲಿಯಬೇಕು; ಆದರೆ ಅದನ್ನು ಈ ತಂತುಗಳಿಂದ ಕತ್ತರಿಸಿ, ನಾಲ್ಕು ಗೋಡೆಗಳ ನಡುವೆ ಕೂಡಿ ಹಾಕಿ, ಅದರ ಮೇಲೆ ಪುಸ್ತಕಗಳ ಭಾರವನ್ನು ಹೊರಿಸಿ, ಅತ್ತಿತ್ತ ಕತ್ತನ್ನು ಕೂಡ ಅಲ್ಲಾಡಿಸಲಾಗದಂತೆ ಬಂಧಿಸಿದ್ದೇವೆ! ಅರಿವನ್ನು ಪಡೆಯಲು ನಾವು ಜಗತ್ತಿನ ಜೊತೆ ಬೆರೆಯಬೇಕು; ಜಾತಿ, ಮತ, ಭಾಷೆ, ದೇಶ, ಲಿಂಗ, ವಯಸ್ಸು, ಅಂತಸ್ತು – ಇವು ಯಾವುವೂ ನಮ್ಮ ತಿಳಿವಳಿಕೆಗೆ ಅಡ್ಡಿಯಾಗಬಾರದು, ಆಗದು – ಎನ್ನುವುದೇ ಅವಧೂತಗುರುವಿನ ಉಪದೇಶ.

– ಹಾರಿತಾನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT