ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಪರಮೇಶ್ವರಿಯೇ ಸತಿ-ಪಾರ್ವತಿ

ಭಾಗ 109
ಅಕ್ಷರ ಗಾತ್ರ

ಸೃಷ್ಟಿವರ್ಣನ – ಈ ಅಧ್ಯಾಯದಲ್ಲಿ ಬ್ರಹ್ಮನು ನಾರದನಿಗೆ ‘ಪ್ರಾಣಿಗಳ ಕರ್ಮಾನುಗುಣವಾಗಿ, ಶಿವನ ಆಜ್ಞೆಯಂತೆ ಲೆಕ್ಕವಿಲ್ಲದಷ್ಟು ಜನ ಹುಟ್ಟಿದರು’ ಎಂದು ಜಗತ್ತು ಸೃಷ್ಟಿಯಾದ ವಿವರ ತಿಳಿಸುತ್ತಾನೆ.

ದಕ್ಷನಿಗೆ ಕಲ್ಪಬೇಧದಿಂದ ಅರವತ್ತು ಹೆಣ್ಣುಮಕ್ಕಳು ಹುಟ್ಟಿದರು. ಅವರಲ್ಲಿ ಹತ್ತು ಮಂದಿಯನ್ನು ಧರ್ಮನಿಗೂ, ಇಪ್ಪತ್ತೇಳು ಮಂದಿಯನ್ನು ಚಂದ್ರನಿಗೆ, ಹದಿಮೂರು ಹೆಣ್ಣುಮಕ್ಕಳನ್ನೂ ಕಶ್ಯಪನಿಗೆ, ನಾಲ್ಕು ಕನ್ಯೆಯರನ್ನು ಅತಿಶಯ ರೂಪಶಾಲಿಯಾದ ಗರುಡನಿಗೆ ಮದುವೆಮಾಡಿಕೊಡುತ್ತಾನೆ. ಉಳಿದ ಆರು ಹೆಣ್ಣುಮಕ್ಕಳನ್ನು ಭೃಗು, ಅಂಗಿರಸ್ಸು, ಕೃಶಾಶ್ವ ಎಂಬುವರಿಗೆ ತಲಾ ಇಬ್ಬರಂತೆ ಮದುವೆಮಾಡಿಕೊಟ್ಟ. ಈ ನವದಂಪತಿಗಳಿಂದ ಚರಾಚರಾತ್ಮಕವಾದ ಸೃಷ್ಟಿಯು ನಡೆಯಿತು. ಅದರಲ್ಲು ಕಶ್ಯಪ ಪ್ರಜಾಪತಿ ಮತ್ತು ಆತನ ಹದಿಮೂರು ಪತ್ನಿಯರ ಸಂತತಿಯೇ ಮೂರುಲೋಕವನ್ನೂ ವ್ಯಾಪಿಸಿಬಿಟ್ಟಿತು.

ಇಹದಲ್ಲಿರುವ ಚರಾಚರಾತ್ಮಕನಾದ ಯಾವುದೊಂದು ವಸ್ತುವೂ ಇವರದಲ್ಲದೆ ಬೇರೆಯಲ್ಲ. ದೇವತೆಗಳೂ ಋಷಿಗಳೂ ದೈತ್ಯರೂ, ಮರಗಿಡಗಳೂ ಪಕ್ಷಿಗಳೂ ಬೆಟ್ಟಗುಡ್ಡಗಳೂ ಬಳ್ಳಿಗಳೆಲ್ಲವೂ ಕಶ್ಯಪ ಮುನಿ ಕೈ ಹಿಡಿದ ಆ ದಕ್ಷಪುತ್ರಿಯರಲ್ಲಿ ಹುಟ್ಟಿದರು. ಈ ರೀತಿ, ಪಾತಾಳದಿಂದ ಬ್ರಹ್ಮನಿವಾಸವಾದ ಸತ್ಯಲೋಕದವರೆಗೂ ಸಕಲ ಬ್ರಹ್ಮಾಂಡವೂ, ದಕ್ಷಕನ್ಯೆಯರ ಮಕ್ಕಳಿಂದ ತುಂಬಿಹೋಯಿತು. ಅಂದಿನಿಂದ ಇಂದಿನವರೆಗೂ ದಕ್ಷನ ಸಂತತಿಯವರಿಂದ ಚರಾಚರಾತ್ಮಕವಾದ ಈ ಪ್ರಪಂಚವು ಶೂನ್ಯವಾಗಿರುವುದನ್ನು ಕಂಡಿಲ್ಲ ಎನ್ನುತ್ತಾನೆ ಬ್ರಹ್ಮ.

ಶ್ರೀಹರಿಯು ಎಡಭಾಗದಲ್ಲು, ಬ್ರಹ್ಮ ಬಲಭಾಗದಲ್ಲು, ರುದ್ರನು ಹೃದಯದಲ್ಲಿರುವ ಆ ಪರಮಶಿವ ಮೂರು ಬಗೆಯಾಗಿ ಕಾಣಿಸುತ್ತಾನೆ. ಅವರೇ ಬ್ರಹ್ಮ, ವಿಷ್ಣು ಮತ್ತು ರುದ್ರ. ಈ ಮೂವರೂ ಗುಣಾತ್ಮಕರಾದರೆ, ಪರಬ್ರಹ್ಮಸ್ವರೂಪ ಮತ್ತು ನಾಶರಹಿತನಾದ ಪರಮಶಿವ ಯಾವಾಗಲೂ ನಿರ್ಗುಣ. ಗುಣಾತ್ಮಕರಾದ ವಿಷ್ಣುವು ಸತ್ವಗುಣವಾದರೆ, ಬ್ರಹ್ಮ ರಜೋಗುಣ. ರುದ್ರ ತಮೋಗುಣ. ಲೋಕವ್ಯವಹಾರದಿಂದ ಅವರಿಗೆ ಇಂಥ ಗುಣಗಳಿವೆ. ಆದರೆ ವಸ್ತುಸ್ಥಿತಿ ಬೇರೆ ಇದೆ. ವಿಷ್ಣು ಒಳಗೆ ತಮೋಮಯನಾಗಿ ಕಂಡರೂ, ಹೊರಗೆ ಸತ್ವಮಯನಾಗಿ ಕಾಣಿಸುತ್ತಾನೆ. ಬ್ರಹ್ಮ ಒಳಗೂ ಹೊರಗೂ ಕೇವಲ ರಜೋಮಯನೇ ಆಗಿರುತ್ತಾನೆ. ಅದರಂತೆಯೇ, ಸರಸ್ವತಿಯಲ್ಲಿ ರಜೋಗುಣ, ಸತೀದೇವಿಯಲ್ಲಿ ಸತ್ವಮಯ, ಲಕ್ಷ್ಮಿಯಲ್ಲಿ ತಮೋಗುಣವಿದೆ. ಈ ತ್ರಿದೇವಿಗಳ ಮೂಲಳಾದ ಪರಮೇಶ್ವರಿಯಾದ ಶಿವೆಯು ಪರಶಿವನಂತೆ ನಿರ್ಗುಣಳು.

ಶಿವನ ಶಾಸನದಂತೆ ಬ್ರಹ್ಮ ಸೃಷ್ಟಿಕಾರ್ಯವನ್ನು ನಿರ್ವಹಿಸುತ್ತಿರುವಾಗ, ಪರಶಿವನ ಮತ್ತೊಂದು ರೂಪವಾದ ರುದ್ರ ತನ್ನ ತ್ರಿಶೂಲಾಗ್ರದಲ್ಲಿಟ್ಟು ರಕ್ಷಿಸುತ್ತಿದ್ದ ಸತಿದೇವಿಯನ್ನು ದಕ್ಷನ ಮಗಳಾಗಿ ಜನಿಸುವಂತೆ ಮಾಡಿದ. ಶಿವೆಯೇ ಸತಿಯೆನಿಸಿ, ಶಂಕರನ ಅರ್ಧಾಂಗಿಯಾದಳು. ತಂದೆಯಾದ ದಕ್ಷನ ಯಜ್ಞದಲ್ಲಿ ಆಹುತಿಯಾದ ಸತಿ, ಮತ್ತೆ ಆ ದೇಹವನ್ನು ಸ್ವೀಕರಿಸದೆ ತನ್ನ ಮೂಲಸ್ಥಾನಕ್ಕೆ ತೆರಳಿದಳು. ದೇವತೆಗಳ ಪ್ರಾರ್ಥನೆಯ ಮೇರೆಗೆ ಆ ಶಿವೆಯೇ ಪರ್ವತರಾಜನ ಪುತ್ರಿಯಾಗಿ ಮತ್ತೆ ಅವತರಿಸಿ, ಶಿವನನ್ನೇ ಪತಿಯನ್ನಾಗಿ ಹೊಂದಿದಳು.

ಅವಳಿಗೆ ಕಾಳಿಕಾ, ಚಂಡಿಕಾ, ಭದ್ರಾ, ಚಾಮುಂಡಾ, ವಿಜಯಾ, ಜಯಾ, ಜಯಂತೀ, ಭದ್ರ ಕಾಳೀ, ದುರ್ಗಾ, ಭಗವತೀ, ಕಾಮಾಖ್ಯಾ, ಕಾಮದಾ, ಅಂಬಾ, ಮೃಡಾಣೀ, ಸರ್ವಮಂಗಳಾ ಮುಂತಾದ ಹಲವು ಹೆಸರುಗಳಿವೆ. ಭುಕ್ತಿಯನ್ನೂ ಮುಕ್ತಿಯನ್ನೂ ನೀಡುವ ಅವಳ ಹೆಸರುಗಳಲ್ಲಿ ಪಾರ್ವತೀ ಎಂಬ ಹೆಸರೇ ಹೆಚ್ಚು ಬಳಕೆ. ಸತ್ವ-ರಜಸ್-ತಮೋ ಗುಣಮಯರಾದ ಲಕ್ಷ್ಮಿ-ಸರಸ್ವತಿ-ಪಾರ್ವತಿ ಎಂಬ ಮೂವರು ದೇವಿಯರೂ, ಬ್ರಹ್ಮ ವಿಷ್ಣು ಮಹೇಶ್ವರರೊಂದಿಗೆ ಸೇರಿ ಸೃಷ್ಟಿಕಾರ್ಯವನ್ನು ಚೆನ್ನಾಗಿ ನಡೆಸಿದರು.

ಶಿವನೊಬ್ಬನೇ ಪರಬ್ರಹ್ಮ. ನಾವು ಮೂವರು ಪರಶಿವನ ರೂಪಗಳು. ಗುಣಭೇದದಿಂದ ಬ್ರಹ್ಮ, ವಿಷ್ಣು, ಮಹೇಶ್ವರ ಎನಿಸಿದ್ದೇವೆ. ಸ್ವತಂತ್ರನೂ ಪರಮಪುರುಷನೂ ಗುಣಾತೀತನೂ ಆದ ಪರಮಶಿವನು ಶಿವೆಯೊಡನೆ ಶಿವಲೋಕದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವ. ಸಗುಣನಾಗಿದ್ದರೂ ರುದ್ರನು ಶಿವನ ಪೂರ್ಣಾವತಾರವಾದುದರಿಂದ ಆತನನ್ನು ಸಾಕ್ಷಾತ್ ಶಿವನೆಂದೇ ಭಾವಿಸಬೇಕು. ಐದು ಮುಖಗಳುಳ್ಳ ಮಹೇಶ್ವರ ಕೈಲಾಸದಲ್ಲಿ ವಾಸಿಸುತ್ತಾನೆ. ಬ್ರಹ್ಮಾಂಡವೆಲ್ಲವೂ ನಾಶವಾದರೂ ಕೈಲಾಸಕ್ಕೆ ನಾಶವೆಂಬುದೇ ಇಲ್ಲ - ಎಂದು ಬ್ರಹ್ಮ ಹೇಳುತ್ತಾನೆ. ಇಲ್ಲಿಗೆ ರುದ್ರಸಂಹಿತೆಯ ಮೊದಲ ಸೃಷ್ಟಿಖಂಡದಲ್ಲಿ ಸೃಷ್ಟಿವರ್ಣನ ಎಂಬ ಹದಿನಾರನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT