ಬುಧವಾರ, ಜೂನ್ 16, 2021
28 °C

ಸಂಸ್ಕೃತಿ ಸಂಭ್ರಮ | ಪವಿತ್ರ ಕ್ಷೇತ್ರಗಳ ಮಾಹಿತಿಕೋಶ

ಎಸ್‌. ಎಲ್‌. ಶ್ರೀನಿವಾಸ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ದಕ್ಷಿಣ ಭಾರತದಲ್ಲಿ ಅದರಲ್ಲಿಯೂ ವಿಶೇಷವಾಗಿ ತಮಿಳುನಾಡಿನಲ್ಲಿ ಶೈವಾರಾಧನೆಯು ಬಲವಾಗಿ ಬೇರೂರುವುದರಲ್ಲಿ ನಾಯನ್ಮಾರರುಗಳ ಪಾತ್ರ ಹಿರಿದಾದದ್ದು. ಸುಂದರರ್, ನಂದನಾರ್, ತಿರುನಾವುಕ್ಕರಸರ್, ತಿರುಜ್ಞಾನ ಸಂಬಂಧರ್ ಮೊದಲಾದ ನಾಯನ್ಮಾರರು ನಾಡಿನ ಮೂಲೆಮೂಲೆಗಳಲ್ಲಿರುವ ಶೈವಕ್ಷೇತ್ರಗಳನ್ನು ದರ್ಶಿಸಿ ‘ತೇವಾರ’(ದೇವಾರ = ದೇವರ ಹಾರ)ಗಳ ಮೂಲಕ ಅವುಗಳನ್ನು ಸ್ತುತಿಸಿದ್ದಾರೆ. ಪ್ರಸಿದ್ಧವಾದ ಈ ಕ್ಷೇತ್ರಗಳಿಗೆ ಭೇಟಿ ನೀಡಲು ಇಚ್ಛಿಸುವ, ಇವುಗಳ ವಿಶೇಷತೆಯನ್ನು ಅರಿಯಬಯಸುವ ಆಸಕ್ತರೆಲ್ಲರೂ ಗಮನಿಸಬೇಕಾದ ಕೃತಿಯೊಂದಿದೆ. ಅದೇ ಪಿ.ಎಂ. ಜಯಸೆಂದಿಲ್ ನಾಥನ್ ಅವರು ತಮಿಳಿನಲ್ಲಿ ರಚಿಸಿದ ‘ತಿರುಮುರೈ ತಲಂಗಳ್’ನ ಕನ್ನಡ ಅವತರಣಿಕೆಯಾದ ‘ಪವಿತ್ರ ಕ್ಷೇತ್ರಗಳು’. 1989ರಲ್ಲಿ ಪ್ರಕಟವಾಗಿರುವ ಈ ಅಪರೂಪದ ಹೊತ್ತಿಗೆಯು ಅನೇಕ ಕಾರಣಗಳಿಗಾಗಿ ವಿಶಿಷ್ಟವಾಗಿದೆ.

ನಾಯನ್ಮಾರರು ಸ್ತುತಿಸಿದ 275ಶೈವಕ್ಷೇತ್ರಗಳನ್ನು ಖುದ್ದಾಗಿ ಸಂದರ್ಶಿಸಿ (ಇವುಗಳಲ್ಲಿ ಕರ್ನಾಟಕದ ಗೋಕರ್ಣ, ಆಂಧ್ರದ ಶ್ರೀಶೈಲ ಮತ್ತು ಶ್ರೀಲಂಕದ ತಿರುಕ್ಕೋಣ ಮಲೈ ಹಾಗೂ ತರಿಕ್ಕೇದೀಚ್ಚರಂಗಳನ್ನು ಬಿಟ್ಟು ಉಳಿದವೆಲ್ಲವೂ ತಮಿಳುನಾಡಿನಲ್ಲಿವೆ), ಅವುಗಳ ಸಮಗ್ರ ಮಾಹಿತಿಯನ್ನು ಒಳಗೊಂಡ ಕೃತಿಯೊಂದನ್ನು ರಚಿಸುವಂತೆ ಕಂಚಿ ಕಾಮಕೋಟಿ ಪೀಠದ ಜಗದ್ಗುರುಗಳು ನೀಡಿದ ಆದೇಶದಂತೆ ಲೇಖಕರು ಈ ಗ್ರಂಥವನ್ನು ರಚಿಸಿದ್ದಾರೆ.
ಪುಸ್ತಕವನ್ನು ಲೋಕಾರ್ಪಣೆ ಮಾಡಿದ ಕರ್ನಾಟಕದ ಆಗಿನ ರಾಜ್ಯಪಾಲರಾಗಿದ್ದ ಪಿ.ವೆಂಕಟಸುಬ್ಬಯ್ಯನವರಿಗೆ ಈ ಕೃತಿ ಕನ್ನಡ ಮತ್ತು ತೆಲುಗು ಭಾಷೆಗಳಿಗೂ ಅನುವಾದವಾದರೆ ಚೆನ್ನು ಎನಿಸಿತು. ಅವರೇ ಖುದ್ದಾಗಿ ಆಸಕ್ತಿವಹಿಸಿ ಕರ್ನಾಟಕ ಸರ್ಕಾರದ ಮೂಲಕ ಧನಸಹಾಯ ಸಿಗುವಂತೆ ಮಾಡಿದರಲ್ಲದೆ ಕನ್ನಡಾನುವಾದ ಮತ್ತು ಮಾರಾಟದ ಜವಾಬ್ದಾರಿಯನ್ನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ವಹಿಸಿದರು. ಮದ್ರಾಸ್, ಮಧುರೈ ಮುಂತಾದ ವಿಶ್ವವಿದ್ಯಾಲಯಗಳ ಕನ್ನಡ-ತಮಿಳು ವಿದ್ವಾಂಸರುಗಳಾದ ಡಾ. ಕೆ. ಕುಶಾಲಪ್ಪ ಗೌಡ, ಡಾ. ಪಾ.ಶಾ. ಶ್ರೀನಿವಾಸ, ಡಾ. ಪಿ.ವಿ. ಕುಲಕರ್ಣಿ, ಡಾ. ಸಿ. ರಾಮಸ್ವಾಮಿ ಮತ್ತು ಡಾ. ಟಿ.ಬಿ. ಸಿದ್ಧಲಿಂಗಯ್ಯನವರನ್ನು ಈ ಕೆಲಸಕ್ಕೆ ನಿಯೋಜಿಸಲಾಯಿತು. ಈ ಭಾಷಾಂತರ ಸಮಿತಿಯು ಮೂಲಕೃತಿಯ ದೇಸೀಸೊಗಡನ್ನು ತದ್ವತ್ತಾಗಿ ಕನ್ನಡಕ್ಕೆ ತರುವುದರಲ್ಲಿ ಯಶಸ್ವಿಯಾಗಿದೆ.

ಪ್ರತಿಯೊಂದು ಕ್ಷೇತ್ರದ ಸಾಂಸ್ಕೃತಿಕ ಮಹತ್ವ, ಜಾನಪದ ಹಿನ್ನೆಲೆ, ಸ್ಥಳಪುರಾಣ ಮತ್ತು ಈಗ ಅವುಗಳನ್ನು ಸಂದರ್ಶಿಸಲು ಇರುವ ಮಾರ್ಗಗಳ ವಿವರಗಳನ್ನು ಇಲ್ಲಿ ಕಾಣಬಹುದು. ಹಳೆಯ ದೇವಾಲಯಗಳಿಗೆ ಈಗ ಇರುವ ಹೊಸ ಹೆಸರು, ಈ ಕ್ಷೇತ್ರಗಳನ್ನು ಕುರಿತು ಸಂತರು ಹಾಡಿದ ಗೀತೆಗಳು, ಅವುಗಳ ಕನ್ನಡಾನುವಾದ ಅಥವಾ ಸಾರಾಂಶ, ದೇವಾಲಯಗಳ ಅರ್ಚಾಮೂರ್ತಿಗಳು, ಶಾಸನಸಾಹಿತ್ಯ ಮುಂತಾದ ಇತರ ಮಹತ್ವದ ವಿವರಗಳೂ ಇಲ್ಲಿವೆ.

ನೂರಾರು ದೇವಾಲಯಗಳ ಛಾಯಾಚಿತ್ರಗಳು, ಕ್ಷೇತ್ರಗಳ ಅಂಚೆವಿಳಾಸ ಮೊದಲಾದ ಉಪಯುಕ್ತ ಸಂಗತಿಗಳನ್ನು ಒಳಗೊಂಡ 1200 ಪುಟಗಳಷ್ಟು ಬೃಹತ್ ಗ್ರಂಥವನ್ನು ಕೇವಲ 50 ರೂ.ಗಳಿಗೆ ಓದುಗರ ಕೈಗೆ ತಲುಪಿಸುವ ಮೂಲಕ ಬೆಂಗಳೂರಿನ ‘ತಿರುಮುರೈ ತಲಂಗಳ್ ಪ್ರಕಟಣ ಸಮಿತಿ’ ಶ್ಲಾಘ್ಯವಾದ ಕಾರ್ಯವನ್ನು ಮಾಡಿದೆ. ಮೂರು ದಶಕಗಳ ಹಿಂದೆ ಪ್ರಕಟಗೊಂಡಿರುವ ಈ ಅಪರೂಪದ ಗ್ರಂಥವನ್ನು ಪರಿಷ್ಕರಿಸಿ ಮರುಮುದ್ರಿಸುವ ಅಗತ್ಯವಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.