ಮಂಗಳವಾರ, ಏಪ್ರಿಲ್ 20, 2021
29 °C

ಶಿವ: ಸಚ್ಚಿದಾನಂದ ರೂಪ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಹಿಂದೂ ಶಾಸ್ತ್ರಗ್ರಂಥಗಳಿಗೆಲ್ಲಾ ವೇದವೇ ಮೂಲಾಧಾರ. ವೇದದಲ್ಲಿ ಹೇಳಿದೆ ಎಂದರೆ ಅದು ಸತ್ಯಸ್ಯಸತ್ಯ. ಅದನ್ನು ಮರುಪರಿಶೀಲಿಸಿ ನೋಡುವ ಪ್ರಮೇಯವೇ ಇಲ್ಲ. ಏಕೆಂದರೆ, ಚತುರ್ವೇದಗಳು ಚತುರ್ಮುಖಬ್ರಹ್ಮನಿಂದ ಬಂದ ಭಗವತ್‍ವಾಣಿ. ಯಜುರ್ವೇದದ ರುದ್ರಾಧ್ಯಯನದಲ್ಲಿ ಉತ್ತಮ ಕರ್ಮ ಮಾಡಿ, ಅದರ ಫಲಗಳನ್ನು ಈಶ್ವರನಿಗೆ ಅರ್ಪಿಸಿದರೆ ಸಾಲೋಕ್ಯ (ಶಿವಲೋಕವಾಸ) ಸೇರಬಹುದೆಂದಿದ್ದರೆ, ವೇದವ್ಯಾಸರು ಬರೆದಿರುವ ವೇದಸಾರಯುಕ್ತವಾದ ‘ಶಿವಮಹಾಪುರಾಣ’ದಲ್ಲೂ ಈಶ್ವರನ ಸ್ಮರಣೆ ಜಾಗರಣೆಯಿಂದ ಕೈಲಾಸ ಸೇರಬಹುದೆಂದು ಹೇಳಲಾಗಿದೆ.

ಶಿವಮಹಾಪುರಾಣದ ‘ವಿದ್ಯೇಶ್ವರ’ಸಂಹಿತೆಯ ಎರಡನೇ ಅಧ್ಯಾಯದಲ್ಲಿ ಜನರ ದುರ್ನಡತೆ ಬಗ್ಗೆ ವಿವರವಿದ್ದರೆ, ಆರನೇ ಅಧ್ಯಾಯದಲ್ಲಿ ಶಿವನನ್ನು ಲಿಂಗರೂಪದಲ್ಲಿ ಏಕೆ ಪೂಜಿಸಬೇಕೆಂದಿದೆ. ಎಂಟನೇ ಅಧ್ಯಾಯದಲ್ಲಿ ‘ಮಹಾಶಿವರಾತ್ರಿ’ ಆಚರಣೆಗೆ ಕಾರಣವಾದ ಅಂಶಗಳಿವೆ.  ಇಲ್ಲಿರುವ ವಿಶ್ವಸೃಷ್ಟಿ ಬಗೆಗಿನ ವಿವರ ವೈಜ್ಞಾನಿಕವಾಗಿ ನೋಡಬಹುದಾದರೆ, ಇದರಲ್ಲಿರುವ ದುರ್ಜನರ ನಡವಳಿಕೆ ತಿದ್ದುವ ವಿವರವನ್ನ ಸಾಮಾಜಿಕವಾಗಿ ಒರೆಗಚ್ಚಿ ನೋಡಬಹುದು. ಜ್ಞಾನಮಾರ್ಗದಿಂದ ಸೃಷ್ಟಿಯ ರಹಸ್ಯ ಭೇದಿಸುತ್ತಾ, ಧ್ಯಾನಮಾರ್ಗದಲ್ಲಿ ಭಗವಂತನ ಸಾನ್ನಿಧ್ಯ ಸೇರಬಹುದೆಂಬ ‘ಜಗತ್‍ಸತ್ಯ’ವನ್ನ ವೇದ-ಪುರಾಣಗಳು ಬಹಳ ಸರಳವಾಗಿ ಹೇಳಿವೆ.

ಜನರ ನಡವಳಿಕೆಯಲ್ಲಿ ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ಯಾವ ವ್ಯತ್ಯಾಸವೂ ಇಲ್ಲ ಅನ್ನುವುದು ವೇದವ್ಯಾಸರ ಶಿವಮಹಾಪುರಾಣ ಸಾಕ್ಷೀಕರಿಸುತ್ತದೆ. ಏಕೆಂದರೆ ಭಗವಂತನ ಸೃಷ್ಟಿಯ ಸೂತ್ರವೇ ಹಾಗಿದೆ. ಗುಣಗಳಿಂದಲೇ ಜೀವಿಗಳ ರೂಪ ಪಡೆಯವಂತೆ ಮಾಡಲಾಗಿದೆ. ಇದು ಡಾರ್ವಿನ್ ಸಿದ್ಧಾಂತಕ್ಕೆ ಪೂರಕವಾಗಿದೆ. ಸತ್ವ-ರಜಸ್ಸು-ತಮಸ್ಸುಗಳಿಂದ ಕೂಡಿರುವ ಜೀವದೊಳಗೆ ತಮಸ್ಸು (ಕೆಟ್ಟ) ಬಹಳ ಸುಲಭವಾಗಿ ಹುಟ್ಟುತ್ತೆ. ಆದರೆ ರಜೋ(ಒಳ್ಳೆ)ಗುಣಗಳು ಅಷ್ಟು ಸುಲಭವಾಗಿ ಉತ್ಪತ್ತಿ ಆಗುವುದಿಲ್ಲ. ಇದಕ್ಕೆ ಜ್ಞಾನ(ವಿದ್ಯೆ)ಮಾರ್ಗ ಮತ್ತು ಧ್ಯಾನ(ಬುದ್ದಿ)ಮಾರ್ಗ ಅನುಸರಿಸಬೇಕು. ವಿದ್ಯೆಯಿಂದ ಜ್ಞಾನಶಕ್ತಿ ಹೆಚ್ಚಾದರೆ, ಧ್ಯಾನದಿಂದ ಬುದ್ಧಿಶಕ್ತಿ ಹೆಚ್ಚಾಗುತ್ತದೆ. ಮಾನವನ ಸುಲಭ ಆಕರ್ಷಣೆಯಾದ ಕೆಟ್ಟತನಗಳಿಗೆ ಬಲಿಬೀಳದಂತೆ ಎಚ್ಚರಿಸಲು ಜ್ಞಾನ ಬೇಕು. ಇಂಥ ಜ್ಞಾನ ಬೆಳೆಸಲು ವಿದ್ಯೆ ಬೇಕು. ಇಂಥ ಜ್ಞಾನ ಕಾಪಿಟ್ಟುಕೊಂಡು ಹೋಗಲು ಬುದ್ಧಿಶಕ್ತಿ ಬೇಕು. ಬುದ್ಧಿಶಕ್ತಿಯನ್ನು ಬೆಳೆಸಲು ನಮ್ಮೊಳಗೆ ಸುಪ್ತವಾಗಿರುವ ರಜೋಗುಣಗಳನ್ನು ಉದ್ದೀಪಿಸಲು ಭಗವಂತನ ಧ್ಯಾನ ಬೇಕು. ಇಂಥ ಸತ್ಪುರುಷರಿಗೆ ಚತುರ್ವಿಧ ಪುರುಷಾರ್ಥಗಳು ಸಿಗುವುವು.

ಶಿವ ಬ್ರಹ್ಮಸ್ವರೂಪ. ಆಕಾಶದಂತೆ ಎಲ್ಲೆಲ್ಲಿಯೂ ಇರುವಂಥವನು. ಆಕಾಶದಂತೆ ಅವಯವಗಳಿಲ್ಲದ ನಿರಾಕಾರ ಶಿವನನ್ನು ಲಿಂಗರೂಪದಲ್ಲಿ ಪೂಜಿಸಬೇಕು. ಬ್ರಹ್ಮ-ವಿಷ್ಣು ಮೊದಲಾದ ದೇವತೆಗಳು ಜೀವರೂಪವುಳ್ಳವರಾದ್ದರಿಂದ ಮೂರ್ತಿರೂಪದಲ್ಲಿ ಪೂಜಿಸಬೇಕು. ಮಹಾಶಿವರಾತ್ರಿ ಆರಂಭವಾದುದಕ್ಕೊಂದು ಹಿನ್ನೆಲೆಯಿದೆ. ಮಹಾಕಾಲೇಶ್ವರನು ಲೋಕದಲ್ಲಿ ಆವಿರ್ಭವಿಸಿದ ಕಾಲದಲ್ಲಿ ಬ್ರಹ್ಮ ಮತ್ತು ವಿಷ್ಣು ಪರಸ್ಪರ ‘ನಾನು ಮೇಲು ತಾನು ಮೇಲು’ ಎಂದು ಹೊಡೆದಾಡುತ್ತಿದ್ದರು. ಇವರ ಗರ್ವವನ್ನು ಮುರಿಯಲು ಪರಮೇಶ್ವರನು ಅವರ ಮಧ್ಯದಲ್ಲಿ ನಿರಾಕಾರವಾದ ದೊಡ್ಡ ಕಂಬದ ರೂಪದಲ್ಲಿ ನಿಂತ. ಇದೇ ಮಹಾಲಿಂಗ.

ಜಾಣನಾದ ವಿಷ್ಣು ಶಿವನಿಗೆ ಬಹಳಬೇಗ ಶರಣಾದರೂ, ಮಂದಮತಿಯಾದ ಬ್ರಹ್ಮ ಸುಳ್ಳು ಪ್ರದರ್ಶಿಸಿ ತನ್ನ ಐದನೇ ತಲೆಯನ್ನು ಭೈರವನಿಂದ ಕಡಿಸಿಕೊಂಡ. ನಾನು ಎಂಬ ಅಹಂ, ನನ್ನದು ಎಂಬ ಸ್ವಾರ್ಥ, ಕೊಡೆನು ಎಂಬ ಲೋಭವನ್ನು ಅಳಿಸಿ, ಜಗದ್ರಕ್ಷಕನಾದ ಶಿವನೇ ಸರ್ವಶ್ರೇಷ್ಠ ಅಂತ ಬ್ರಹ್ಮ-ವಿಷ್ಣು ಮೊದಲಾದ ದೇವತೆಗಳು ಮಹಾಲಿಂಗವನ್ನು ಪೂಜಿಸಿದ ದಿನವೇ ಮಹಾಶಿವರಾತ್ರಿ.

ದೇವಾನುದೇವತೆಗಳೇ ತಮೋಗುಣದ ಆಕರ್ಷಣೆಗೆ ಒಳಗಾಗುತ್ತಾರೆಂದಮೇಲೆ ಹುಲುಮಾನವರಾದ ನಾವು ಯಾವ ಪರಿ ಹಾದಿ ತಪ್ಪಬಹುದೆಂಬುದನ್ನು ಅರ್ಥಮಾಡಿಕೊಳ್ಳಬಹುದು. ನಮ್ಮೊಳಗಿನ ಕೆಟ್ಟತನವನ್ನು ನಿಗ್ರಹಿಸಿ, ಒಳ್ಳೆತನವನ್ನು ಪೋಷಿಸಲು ಪ್ರತಿ ತಿಂಗಳ ಬಹುಳಚತುರ್ದಶಿಯಂದು ಮಾಸಶಿವರಾತ್ರಿಯಾಗಿ, ವರ್ಷಕ್ಕೊಮ್ಮೆ ಮಹಾಶಿವರಾತ್ರಿಯಾಗಿ ಆಚರಿಸಬೇಕು. ಆಗ ನಿರಾಕಾರಿ ಶಿವನ ‘ಸಚ್ಚಿದಾನಂದ’ರೂಪದ ದರ್ಶನವಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು