ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ ಭಾಗ-50: ಮಹಿಷನ ಮೇಲೆ ಕುಳಿತಿದೆ ಕಾಲಚಕ್ರ

Last Updated 20 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

ಬ್ರಹ್ಮಾಂಡದಲ್ಲಿ ಪೃಥ್ವಿ ಮತ್ತಿತರ ಮಹಾಭೂತಗಳಿಂದ ಲೋಕಗಳು ನಿರ್ಮಿಸಲ್ಪಟ್ಟಿವೆ ಎಂದು ಸೂತಮುನಿ ತಿಳಿಸುತ್ತಾನೆ.

ಪಾತಾಳದಿಂದ ಸತ್ಯಲೋಕದವರೆಗಿರುವ ಹದಿನಾಲ್ಕು ಲೋಕಗಳು ಬ್ರಹ್ಮಲೋಕಗಳು. ಸತ್ಯಲೋಕದಿಂದ ಮೇಲಿನ ಕ್ಷಮಾಲೋಕದವರೆಗಿನ ಹದಿನಾಲ್ಕು ಲೋಕಗಳು ವಿಷ್ಣುಲೋಕಗಳು. ಈ ಕ್ಷಮಾಲೋಕದಲ್ಲಿ ಕಾರ್ಯ(ಕಲ್ಪಾಂತದಲ್ಲಿ ಪ್ರಳಯವನ್ನು ಹೊಂದುವಂತಹ) ವೈಕುಂಠವೆಂಬ ವರನಗರದವಿದೆ. ಇಲ್ಲಿ ವಿಷ್ಣುವು ಲಕ್ಷ್ಮೀದೇವಿಯೊಡನೆ ಆದಿಶೇಷನನ್ನು ರಕ್ಷಿಸುತ್ತಾ, ಅವನ ಮೇಲೆ ಮಲಗಿದ್ದಾನೆ. ಆ ವೈಕುಂಠಕ್ಕಿಂತಲೂ ಮೇಲೆ ಶುಚಿಲೋಕವಿದೆ. ಇಲ್ಲಿ ಇಪ್ಪತ್ತೆಂಟು ಲೋಕಗಳು ಇವೆ. ಶುಚಿಲೋಕದಲ್ಲಿ ಭೂತನಾಥನಾದ ರುದ್ರನಿದ್ದಾನೆ.

ಕೈಲಾಸಕ್ಕಿಂತಲೂ ಮೇಲೆ ಅಹಿಂಸಾಲೋಕವಿದೆ. ಅಲ್ಲಿ ಐವತ್ತಾರು ಲೋಕಗಳಿವೆ. ಅಹಿಂಸಾಲೋಕದಲ್ಲಿ ಜ್ಞಾನಕೈಲಾಸವೆಂಬ ನಗರದಲ್ಲಿ ಕಾರ್ಯೇಶ್ವರನಿದ್ದಾನೆ. ಇವನು ಎಲ್ಲ ವಸ್ತುವನ್ನೂ ನಾಶಮಾಡುತ್ತಿರುತ್ತಾನೆ. ಲೋಕದ ಕೊನೆಯಲ್ಲಿ ಕಾಲಚಕ್ರವಿದೆ. ಅದರ ಮುಂದೆ ಕಾಲಾತೀತವೆಂಬ ಲೋಕವಿದೆ. ಆ ಲೋಕದಲ್ಲಿ ಶಿವನಿಂದ ನಿಯಮಿಸಲ್ಪಟ್ಟ ಶಿವಸ್ವರೂಪನಾದ ಚಕ್ರೇಶ್ವರನೆಂಬ ಕಾಲನು (ಮಹಿಷರೂಪನಾದ ಈಶ್ವರ) ಇದ್ದಾನೆ. ಆತ ಮಾಹಿಷಧರ್ಮದಂತೆ ಎಲ್ಲರನ್ನೂ ಕಾಲನೊಡನೆ ಸೇರಿಸುತ್ತಿರುತ್ತಾನೆ. ಅಂದರೆ ಸಂಹಾರ ಮಾಡುತ್ತಿರುತ್ತಾನೆ. ಮಹಿಷರೂಪವಾದ ಈಶ್ವರನಿಗೆ ಅಸತ್ಯ, ಅಶುಚಿ, ಹಿಂಸೆ ನಿರ್ಘೃಣಾ (ಕೊರತೆ) ಎಂಬ ನಾಲ್ಕು ಪಾದಗಳು ಇವೆ. ಕಾಲಾತೀತಲೋಕದ ಕೆಳಗಿನ ಲೋಕಗಳಲ್ಲಿ ಕರ್ಮಭೋಗವಿದ್ದರೆ, ಕಾಲಾತೀತಲೋಕದ ಮೇಲಿನ ಲೋಕಗಳಲ್ಲಿ ಜ್ಞಾನಭೋಗವಿದೆ. ಈ ಜ್ಞಾನಭೋಗದಲ್ಲಿ ಮುಕ್ತಿ ಸಿಗುತ್ತದೆ.

ಕಾಲಾತೀತಲೋಕದ ಕೆಳಗಿನ ಲೋಕಗಳಲ್ಲಿ ಕರ್ಮಮಾಯೆ ಮತ್ತು ಅದರ ಮೇಲೆ ಜ್ಞಾನಮಾಯೆ ಇದೆ. ಕರ್ಮಮಾಯೆ ಎಂದರೆ ಹೆಚ್ಚಾಗಿ ಕರ್ಮಾನುಭವವನ್ನುಂಟು ಮಾಡುವುದೆಂದು ಅರ್ಥ. ಜ್ಞಾನಮಾಯೆ ಎಂದರೆ ಜ್ಞಾನಸಂಪತ್ತು ಹೆಚ್ಚಾಗಿರುತ್ತದೆ ಎಂದು ಅರ್ಥ. ಕಾಲಾತೀತಲೋಕಕ್ಕಿಂತ ಮೇಲೆ ನಿತ್ಯವಾದ ಆನಂದವಿದ್ದರೆ, ಕೆಳಗಿನ ಲೋಕಗಳಲ್ಲಿ ಅನಿತ್ಯವಾದುವುಗಳಿವೆ. ಆದರೆ ಕಾಲಾತೀತಲೋಕಕ್ಕಿಂತ ಮೇಲೆ ಇರುವ ನಿತ್ಯಾನಂದ ನಾಶವಾಗುವುದಿಲ್ಲ. ಕಾಲಾತೀತ ಲೋಕಕ್ಕಿಂತ ಕೆಳಗಿನ ಲೋಕಗಳಲ್ಲಿ ಸಂಸಾರಪಾಶ ಮತ್ತು ಯಮಪಾಶ ಬಂಧನವಿರುತ್ತದೆ; ನಿತ್ಯಾನಂದಲೋಕದಲ್ಲಿ ಆ ಬಂಧನಗಳಿರುವುದಿಲ್ಲ. ಕಾಮ್ಯಕರ್ಮಗಳನ್ನು ಮಾಡಿದವರು ಕೆಳಗಿನ ಲೋಕಗಳಲ್ಲಿ ಕರ್ಮಫಲಭೋಗಕ್ಕಾಗಿ ಸಂಚರಿಸುತ್ತಾರೆ. ಮೇಲಿನ ಲೋಕದಲ್ಲಿರುವವರು ಪುನರಾವೃತ್ತಿ ಇಲ್ಲದಂತಹ ಮುಕ್ತಿ ಪಡೆಯುತ್ತಾರೆ.

ಕೆಳಗಿನ ಲೋಕಗಳಲ್ಲಿ ಬಿಂದು(ಲಿಂಗ)ಪೂಜೆಯನ್ನು ಮಾಡುವವರು ಇದ್ದರೆ, ಫಲೇಚ್ಛೆ ಇಲ್ಲದೆ ಶಿವಲಿಂಗವನ್ನು ಪೂಜಿಸಿದವರು ಮೇಲಿನ ಲೋಕದಲ್ಲಿರುತ್ತಾರೆ. ಕಾಲಾತೀತಲೋಕಕ್ಕಿಂತ ಕೆಳಗಿನ ಲೋಕಗಳಲ್ಲಿರುವವರೆಲ್ಲರೂ ಜೀವರು. ಮೇಲಿನ ಲೋಕದಲ್ಲಿರುವವರು ದೇವರು. ಅಲ್ಲಿ ಪರಮೇಶ್ವರನಿರುವುದರಿಂದ ದೈವತ್ವ ಹೊಂದಿರುತ್ತಾರೆ. ಕೆಳಗಿನ ಲೋಕಗಳಲ್ಲಿರುವವರು ಸಂಸಾರಿಕರಾದರೆ, ಮೇಲಿನ ಲೋಕದಲ್ಲಿ ಸಂಸಾರಬಂಧನಗಳಿಂದ ಮುಕ್ತರಾದವರು. ಇವರು ನಿತ್ಯಪ್ರಕೃತಿಮಯವಾದ ಅನಿತ್ಯ ದ್ರವ್ಯಗಳಿಂದ ಶಿವನನ್ನು ಪೂಜಿಸುತ್ತಾರೆ.

ಕೆಳಗಿನ ಲೋಕಗಳಲ್ಲಿ ಶಕ್ತಿಲಿಂಗ ಇದ್ದರೆ, ಮೇಲಿನ ಲೋಕಗಳಲ್ಲಿ ಶಿವಲಿಂಗವಿದೆ. ಕೆಳಗಿನ ಲೋಕಗಳಲ್ಲಿ ಲಿಂಗದ ಸ್ವರೂಪವು ಮುಚ್ಚಲ್ಪಟ್ಟಿದ್ದರೆ, ಮೇಲಿನ ಲೋಕದಲ್ಲಿ ಮುಚ್ಚಿರುವುದಿಲ್ಲ; ಸ್ವಯಂಪ್ರಕಾಶಮಾನವಾಗಿ ಬೆಳಗುತ್ತಿರುತ್ತದೆ. ಮನುಷ್ಯರಿಂದ ನಿರ್ಮತವಾದ ಲಿಂಗವು ಕೆಳಗಿನ ಲೋಕಗಳಲ್ಲಿದ್ದರೆ, ಮೇಲಿನ ಲೋಕದಲ್ಲಿ ಮನುಷ್ಯ ಕಲ್ಪಿತವಲ್ಲದ ಬ್ರಹ್ಮಲಿಂಗ ಇರುತ್ತದೆ. ಕೆಳಗಿನ ಲೋಕಗಳಲ್ಲಿ ಬಹಿರಂಗಲಿಂಗಗಳಿದ್ದರೆ, ಮೇಲಿನ ಲೋಕದಲ್ಲಿ ಚರ್ಮಚಕ್ಷುಸ್ಸುಗಳಿಗೆ ಮಾತ್ರ ಕಾಣಿಸುವ ಅಂತರಂಗ ಲಿಂಗ’ವಿದೆ. ಒಟ್ಟಾರೆ, ನೂರ ಹನ್ನೆರಡು ಶಕ್ತಿಲೋಕಗಳು ಆ ಕಾಲಾತೀತಲೋಕದ ಕೆಳಗಿವೆ.

ಕೆಳಗಿನ ಲೋಕಗಳಲ್ಲಿ ಬಿಂದುಲಿಂಗವು ಇದ್ದರೆ, ನಾದಲಿಂಗವು ಮೇಲಿನ ಲೋಕದಲ್ಲಿದೆ. ಕೆಳಗಿನ ಲೋಕಗಳು ಕರ್ಮಲೋಕಗಳು. ಇಲ್ಲಿ ಕರ್ಮವನ್ನನುಭವಿಸಲೇಬೇಕು. ಮೇಲಿನ ಲೋಕದಲ್ಲಿ ಜ್ಞಾನಲೋಕ ಇದೆ. ಇದಕ್ಕು ಮೇಲೆ ಅಹಂಕಾರಗಳನ್ನು ನಾಶಗೊಳಿಸುವ ನಮಸ್ಕಾರಲೋಕವಿದೆ. ಪಂಚಮಹಾಭೂತಗಳನ್ನು ಪೂಜಿಸುವವರು, ಆ ಕೆಳಗಿನ ಲೋಕಗಳಲ್ಲಿಯೇ ಪರಿವರ್ತನೆಯನ್ನು ಮಾಡುವರು. ಚೈತನ್ಯಸ್ವರೂಪವನ್ನು ಪೂಜಿಸುವವರು ಮೇಲಿನ ಲೋಕವನ್ನು ಪಡೆಯುವರು. ಮೇಲಿನ ಲೋಕದಲ್ಲಿ ಆತ್ಮಲಿಂಗದಲ್ಲಿ ವೇದಿಭಾಗವು ಇರುತ್ತದೆ. ಆ ವೇದಿಯ ಕೊನೆಯಲ್ಲಿ ಪ್ರಕೃತಿ ಮೊದಲಾದ ಎಂಟು ಬಂಧಗಳು ಪ್ರತಿಷ್ಠಾಪಿಸಲ್ಪಟ್ಟಿವೆ.

ವೈದಿಕ ಮತ್ತು ಲೌಕಿಕ ಕರ್ಮವನ್ನೆಲ್ಲಾ ಸಂಪೂರ್ಣವಾಗಿ ತಿಳಿದವರು ಮತ್ತು ಧರ್ಮನಿರತರಾಗಿ ಶಿವಪೂಜೆಯನ್ನು ಮಾಡುವವರು ಅಧರ್ಮವೆಂಬ ಮಹಿಷವನ್ನೇರಿರುವ ಕಾಲಚಕ್ರವನ್ನು ದಾಟಿ ಮುಕ್ತಿ ಪಡೆಯುತ್ತಾರೆ ಎಂದು ಸೂತಮುನಿ ತಿಳಿಸುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT