ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಿವನ ಮಹಿಮೆ ಬಣ್ಣಿಸಿದ ನಾರದ

ಅಕ್ಷರ ಗಾತ್ರ

ಹಿಮವಂತ ಕನ್ಯಾದಾನಮಾಡಲು ಸಿದ್ಧನಾದ. ಪುರೋಹಿತರನ್ನುದ್ದೇಶಿಸಿ, ‘ಕನ್ಯಾದಾನ ಕಾಲದಲ್ಲಿ ಆಗಬೇಕಾದ ಗೋತ್ರಪ್ರವರವಾಚನ, ಮಹಾಸಂಕಲ್ಪ, ಮಂಗಳಾಷ್ಟಕ ಮೊದಲಾದವನ್ನು ಸಂಕಲ್ಪಪೂರ್ವಕವಾಗಿ ಮಾಡಿಸಿರಿ’ ಎಂದು ಪ್ರಾರ್ಥಿಸಿದ. ಸಂಕಲ್ಪಪೂಜೆ ನಂತರ ಹಿಮವಂತ, ‘ಶಂಕರ, ನಿನ್ನ ಗೋತ್ರವನ್ನೂ ಪ್ರವರವನ್ನೂ ಕುಲವನ್ನೂ ಮತ್ತು ಹೆಸರು, ವೇದ, ಶಾಖೆ ಎಲ್ಲವನ್ನೂ ಹೇಳು’ ಎಂದು ಪ್ರಾರ್ಥಿಸಿದ. ಹಿಮವಂತನ ಮಾತನ್ನು ಕೇಳಿ ಶಿವ, ಸುಮ್ಮನೆ ನಿಂತ. ನಿರುತ್ತರನಾದ ಶಿವನನ್ನು ಅಲ್ಲಿದ್ದ ದೇವತೆಗಳು, ಮುನಿಗಳು, ಗಂಧರ್ವರು, ಯಕ್ಷರು, ಸಿದ್ಧರು ನೋಡುತ್ತಿರುವಾಗ ನಾರದ ಒಂದು ಚಮತ್ಕಾರವನ್ನು ಮಾಡಿದ.

ಶಿವನು ಮನಸ್ಸಿನಲ್ಲಿಯೇ ನಾರದನಿಗೆ ಸೂಚಿಸಿದ್ದರಿಂದ ಆತ ತನ್ನ ವೀಣೆಯನ್ನು ನುಡಿಸತೊಡಗಿದ. ಹಿಮವಂತ, ವಿಷ್ಣು, ಬ್ರಹ್ಮ, ದೇವತೆಗಳು, ಮುನಿಗಳು ಮತ್ತಿತರರೆಲ್ಲರು ವೀಣೆಯನ್ನು ನುಡಿಸಬೇಡವೆಂದು ತಡೆದರೂ, ವೀಣೆ ಬಾರಿಸುವುದನ್ನು ನಾರದ ನಿಲ್ಲಿಸಲೇ ಇಲ್ಲ. ಆಗ ಹಿಮವಂತ ಕೋಪಗೊಂಡು ಬಲಾತ್ಕಾರವಾಗಿ ತಡೆಯಲು ಮುಂದಾದ. ಆಗ ನಾರದ ಹೇಳಿದ, ‘ಎಲೈ ಹಿಮವಂತ, ನಿನಗೆ ತಿಳಿವಳಿಕೆಯೇ ಇಲ್ಲವಲ್ಲಾ. ಮಹೇಶ್ವರನ ವಿಷಯದಲ್ಲಿ ನೀನು ತುಂಬಾ ಉದಾಸೀನನಾಗಿ ವರ್ತಿಸುತ್ತಿರುವೆ. ಗೋತ್ರವನ್ನು ಹೇಳುವಂತೆ ನೀನು ಸಾಕ್ಷಾತ್ ಶಿವನನ್ನೇ ಪ್ರಶ್ನಿಸುತ್ತಿರುವೆ. ಸಮಯೋಚಿತವಲ್ಲದ ನಿನ್ನ ಮಾತು ಈ ಕಲ್ಯಾಣಸಮಯದಲ್ಲಿ ತುಂಬಾ ಅವಮಾನವನ್ನು ಮಾಡುವಂತಹುದು. ಶಿವನ ಗೋತ್ರ, ಕುಲ, ನಾಮಗಳನ್ನು, ಹರಿ-ಬ್ರಹ್ಮರೇ ತಿಳಿಯಲಾರರು ಎಂದ ಮೇಲೆ, ಉಳಿದವರು ಹೇಗೆ ತಿಳಿಯಲು ಸಾಧ್ಯ? ಶಿವ ಹೇಳಿದರೂ, ಅದನ್ನು ಅರ್ಥೈಸುವ ಶಕ್ತಿ ನಮಗ್ಯಾರಿಗೂ ಇಲ್ಲ. ಶಿವನ ದಿನವೊಂದರ ಕಾಲಮಾನದಲ್ಲಿ ಕೋಟಿಬ್ರಹ್ಮರು ಲಯವನ್ನು ಹೊಂದುತ್ತಾರೆ. ಅಂತಹ ಶಿವನ ಕುಲಗೋತ್ರ ನಾಮ ತಿಳಿಯ ಬಯಸಿದ್ದೀಯಲ್ಲ ನಿನಗೆ ಬುದ್ಧಿ ಇದೆಯೇ? ಪಾರ್ವತಿಯ ತಪ್ಪಸಿನ ಮಹಿಮೆಯಿಂದ ಮದುಮಗನಂತೆ ಪ್ರತ್ಯಕ್ಷವಾಗಿರುವ ಪರಮಾತ್ಮನನ್ನು ಅಳಿಯನಾಗಿ ಪಡೆಯುತ್ತಿರುವುದು ನಿನ್ನ ನೂರಾರು ಜನ್ಮದ ಪುಣ್ಯದ ಫಲ. ಇಂಥ ಫಲ ಸಿಕ್ಕಿದ್ದಕ್ಕೆ ಸಂತೋಷಪಡುವ ಬದಲು, ಅವನ ಕುಲಗೋತ್ರ ನೋಡುತ್ತಿರುವುದು ಸರಿಯೇ? ಇವನು ರೂಪವಿಲ್ಲದ ಪರಬ್ರಹ್ಮ ವಸ್ತು. ನಿರ್ಗುಣ ವ್ಯಕ್ತಿ. ಪ್ರಕೃತಿ ಸಂಬಂಧವು ಇವನಿಗಿಲ್ಲ. ಶಿವನಿಗೆ ಆಕಾರವೂ ವಿಕಾರಗಳೂ ಇಲ್ಲ. ಮಾಯೆಯನ್ನು ತನ್ನ ಅಧೀನದಲ್ಲಿಟ್ಟುಕೊಂಡಿರುವ ಸರ್ವೋತ್ಕೃಷ್ಟ. ಹೀಗಾಗಿ ಶಿವನಿಗೆ ಕುಲಗೋತ್ರ, ಹೆಸರು ಯಾವುದೂ ಇಲ್ಲ. ಆತ ಸರ್ವಸ್ವತಂತ್ರನಾದ ಭಕ್ತವತ್ಸಲ. ತನ್ನಿಚ್ಛೆಯಿಂದಲೇ ಶಿವನು ಸಗುಣನಾಗಿ, ಸುಂದರ ಶರೀರವುಳ್ಳವನೂ ಆಗುವನು. ಅನೇಕ ಹೆಸರುಗಳನ್ನು ಪಡೆಯುವನು. ವಸ್ತುತಃ ಗೋತ್ರಗಳಿಲ್ಲದವನಾದರೂ ಶಿವನು ತನ್ನಿಚ್ಛೆಯಿಂದ ಒಳ್ಳೆಯ ಗೋತ್ರದಲ್ಲಿ ಜನಿಸುವನು. ಒಳ್ಳೆಯ ಕುಲದಲ್ಲಿ ಹುಟ್ಟುವನು. ಇಂತಹ ಪರವಸ್ತುವಾದ ಶಿವನು ಪಾರ್ವತಿಯ ತಪಸ್ಸಿನ ಮಹಿಮೆಯಿಂದ ನಿನ್ನ ಅಳಿಯನಾಗಲು ಬಂದಿರುವನು. ಲೀಲಾಮಯನಾದ ಶಿವನು ಜಗತ್ತೆಲ್ಲವನ್ನೂ ಮೋಹಗೊಳಿಸಬಲ್ಲವನು. ಇಂತಹ ಶಿವನ ಸ್ವರೂಪವನ್ನು ವಿಷ್ಣು-ಬ್ರಹ್ಮರೂ ಅರಿಯಲಾರರು. ಹಿಂದೆ ಮಹಾಲಿಂಗರೂಪನಾಗಿ ಜಗತ್ತಿಗೆ ಆವಿರ್ಭವಿಸಿದ ಸಂದರ್ಭದಲ್ಲಿ ಶಿವನ ಶಿರಸ್ಸನ್ನು ಬ್ರಹ್ಮ ಸಹ ನೋಡಲಾಗಲಿಲ್ಲ. ಹರಿ ಪಾತಾಳದವರೆಗೆ ಹೋದರೂ ಶಿವನ ಪಾದವನ್ನು ಕಂಡುಹಿಡಿಯಲಾಗಲಿಲ್ಲ. ಹೀಗಿರುವಾಗ ಶಿವನ ಕುಲಮೂಲ ಹುಡುಕುವೆಯಾ’ ಎಂದು ನಾರದ ಹಿಮವಂತನನ್ನು ಪ್ರಶ್ನಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT