ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 29-01-2023ರಿಂದ 04-02-2023ರವರೆಗೆ

ಅಕ್ಷರ ಗಾತ್ರ

ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1)
ಯಾವುದೇ ಉದ್ವೇಗಕ್ಕೆ ಒಳಗಾಗದಿರುವುದು ಒಳ್ಳೆಯದು. ಉದ್ಯೋಗದಲ್ಲಿ ನಿಮ್ಮ ಪ್ರಾಮಾಣಿಕತೆಯನ್ನು ಕಾಯ್ದುಕೊಳ್ಳುವ ಅಗತ್ಯವಿದೆ. ಜೀವನೋಪಾಯಕ್ಕೆ ಸಿಕ್ಕ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಿರಿ. ವಾಹನ ಚಾಲನಾ ವೃತ್ತಿಯನ್ನು ನಡೆಸುವವರಿಗೆ ಹೆಚ್ಚು ಏಳಿಗೆ ಇರುತ್ತದೆ. ಅನಿವಾರ್ಯ ಕಾರಣಗಳಿಂದಾಗಿ ಮಕ್ಕಳಿಗೆ ಹೆಚ್ಚು ಹಣ ಕೊಡುವಿರಿ. ಕೃಷಿಯನ್ನು ಉದ್ಯಮದ ರೀತಿ ನಡೆಸುವವರಿಗೆ ಲಾಭವಿದೆ. ಕೃಷಿಗೆ ಬೇಕಾದ ಪರಿಕರಗಳನ್ನು ತಯಾರಿಸಿ ಮಾರುವವರಿಗೆ ಲಾಭವಿದೆ. ಧನ ಆದಾಯ ಸಾಮಾನ್ಯವಾಗಿರುತ್ತದೆ. ಕಬ್ಬಿಣದ ವಸ್ತುಗಳನ್ನು ಮಾರಾಟ ಮಾಡುವವರಿಗೆ ಲಾಭವಿರುತ್ತದೆ. ವೃತ್ತಿಯಲ್ಲಿ ಹೆಚ್ಚಿನ ಸ್ಥಿರತೆಯನ್ನು ಕಾಣಬಹುದು. ವ್ಯಾಪಾರ ವ್ಯವಹಾರಗಳ ಬಗ್ಗೆ ಹೆಚ್ಚಿನ ಉತ್ಸಾಹ ಕಂಡು ಬರುತ್ತದೆ. ಹಣ ಹೂಡಿಕೆಗೆ ಮುಂಚೆ ಎಚ್ಚರಿಕೆವಹಿಸಿರಿ.

**

ವೃಷಭ ರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ನಿಮ್ಮ ಜೀವನದಲ್ಲಿ ಕೆಲವೊಂದು ಅನಿರೀಕ್ಷಿತ ಬದಲಾವಣೆಗಳು ಆದರೂ ಸಮಸ್ಯೆಗಳಿಗೆ ಸಿಲುಕದಂತೆ ಎಚ್ಚರವಹಿಸುವಿರಿ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ಸರಕು ಸಾಗಣೆ ಮಾಡುವ ಕಂಪನಿಗಳಿಗೆ ಉತ್ತಮ ವ್ಯವಹಾರವಿರುತ್ತದೆ. ಕೃಷಿಕರಿಗೆ ಬಹಳ ಉತ್ತಮವಾದ ವಾರ. ಕೃಷಿಯಿಂದ ಹೆಚ್ಚು ಆದಾಯ ಬರುವ ಸಾಧ್ಯತೆ ಇದೆ. ಕಾರ್ಮಿಕರನ್ನು ಒದಗಿಸುವ ಏಜೆನ್ಸಿಗಳಿಗೆ ಬೇಡಿಕೆ ಬರುತ್ತದೆ. ವಾಹನ ಚಾಲಕರಿಗೆ ಹೆಚ್ಚು ಕೆಲಸವಿರುತ್ತದೆ. ಪುಸ್ತಕ ಪ್ರಕಾಶಕರಿಗೆ ಉತ್ತಮ ಪುಸ್ತಕ ಪ್ರಕಾಶನ ಮಾಡುವ ಯೋಗವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಕಾಲವಾಗಿದ್ದರೂ ಹೆಚ್ಚು ಶ್ರದ್ಧೆವಹಿಸಲೇಬೇಕು. ಸಂಗಾತಿಗೆ ಆಸ್ತಿ ಪಡೆಯುವ ಯೋಗವಿದೆ. ನಿಮ್ಮ ಕೆಲವೊಂದು ವ್ಯವಹಾರಗಳಿಗೆ ಅನಿರೀಕ್ಷಿತವಾಗಿ ಪಾಲುದಾರರು ದೊರೆತು ವ್ಯವಹಾರ ಲಾಭದತ್ತ ಮರುಳುತ್ತದೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಕಂಪನಿಯ ಹಣಕಾಸು ನಿರ್ವಹಣೆಯಲ್ಲಿ ನಿಮ್ಮ ಪಾತ್ರ ಬಹಳ ದೊಡ್ಡದಿರುತ್ತದೆ. ವಿದೇಶಗಳ ಜೊತೆ ಆಮದು ಮತ್ತು ರಫ್ತು ವ್ಯವಹಾರ ಮಾಡುವ ಕಂಪನಿಗಳಿಗೆ ಹೆಚ್ಚಿನ ಲಾಭವಿರುತ್ತದೆ. ಹಿರಿಯರು ನಿಮ್ಮ ಮೇಲೆ ಕೋಪಗೊಳ್ಳಬಹುದು. ಲೋಹಗಳ ಮೇಲೆ ಮಾಡುವ ಕುಸರಿ ಕಲೆಗಳನ್ನು ತಂದೆಯಿಂದ ಕಲಿಯಬಹುದು. ಸ್ವಂತ ಮನೆ ಅಥವಾ ಕಟ್ಟಡದ ದುರಸ್ತಿಗಾಗಿ ಹಣ ಖರ್ಚು ಮಾಡುವಿರಿ. ಕೃಷಿ ಕಾರ್ಯಗಳಿಗಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ಫ್ಯಾಶನ್ ಡಿಸೈನರ್ಸ್‌ಗೆ ಹೆಚ್ಚಿನ ಅವಕಾಶಗಳ ಜೊತೆ ಹೆಚ್ಚು ಸಂಪಾದನೆಯೂ ಆಗುತ್ತದೆ. ಹಣದ ಒಳಹರಿವು ನಿರೀಕ್ಷೆಯನ್ನು ತಲುಪಬಹುದು. ಬಂಧುಗಳ ಕಲಹದ ಮಧ್ಯಸ್ಥಿಕೆ ವಹಿಸಲು ಹೋಗಬೇಡಿ. ವೃತ್ತಿಯಲ್ಲಿ ಇದ್ದ ತೊಂದರೆಗಳು ದೂರವಾಗುತ್ತವೆ. ವಿದೇಶದಲ್ಲಿರುವವರಿಗೆ ಸಂಪಾದನೆ ಹೆಚ್ಚುತ್ತದೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)

ಸರ್ಕಾರಿ ಕೆಲಸಗಳಲ್ಲಿ ಸಾಕಷ್ಟು ಸರಾಗತೆಯನ್ನು ಕಾಣಬಹುದು. ಸಂಗಾತಿಯಿಂದ ಸಾಕಷ್ಟು ಧನಸಹಾಯ ದೊರೆಯುತ್ತದೆ. ಕೆಲಸದ ಆಯ್ಕೆ ಸರಿಯಾಗಿದ್ದು ಅದನ್ನು ನಿರ್ಭಯವಾಗಿ ಮಾಡಿ ಮುಗಿಸಿರಿ. ಯಾವುದೇ ರೀತಿಯ ಹೊಗಳಿಕೆಗೆ ಮರುಳಾಗಬೇಡಿರಿ. ಅದು ನಿಮ್ಮನ್ನು ಮೋಸಗೊಳಿಸುವ ಸಾಧನವಾಗಿರುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಯಾವುದೇ ರೀತಿಯಲ್ಲಿ ತೊಂದರೆ ಇರುವುದಿಲ್ಲ. ನಿಮ್ಮ ಒಡಹುಟ್ಟಿದವರು ನಿಮ್ಮಿಂದ ಸಹಾಯ ಪಡೆಯಲು ಬರುವರು. ಕಷ್ಟಕರ ಸನ್ನಿವೇಶದಲ್ಲಿ ನಿಮ್ಮ ಸಹಾಯಕ್ಕೆ ತಂದೆ ನಿಲ್ಲುವರು. ವಿಮಾ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಲಾಭ ಇರುತ್ತದೆ. ಆಸ್ತಿ ವಿಚಾರದಲ್ಲಿ ಅಷ್ಟು ಏಳಿಗೆ ಇರುವುದಿಲ್ಲ. ವೃತ್ತಿಯಲ್ಲಿ ಒಂದು ರೀತಿಯ ಹೊಸತನ ಇರುತ್ತದೆ. ಕೃಷಿಕರಿಗೆ ಹೆಚ್ಚಿನ ಲಾಭವಿರುತ್ತದೆ. ಕೃಷಿಕರ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ದೊರೆಯುತ್ತದೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಮನೆಗಳ ಒಳಾಂಗಣ ವಿನ್ಯಾಸ ಮಾಡುವವರಿಗೆ ಹೆಚ್ಚಿನ ಕೆಲಸ ದೊರೆಯುತ್ತದೆ. ಯೋಗಾಭ್ಯಾಸವನ್ನು ಹೇಳಿಕೊಡುವವರಿಗೆ ಧನ ಸಂಪಾದನೆ ಆಗುವ ಸಂದರ್ಭವಿದೆ. ಪ್ರೀತಿಸಿದವರ ಜೊತೆಗೆ ವಿವಾಹವಾಗಲು ಹಿರಿಯರ ಒಪ್ಪಿಗೆ ಸಿಗುವ ಸಂದರ್ಭವಿದೆ. ಸ್ನೇಹಿತರೊಂದಿಗೆ ಸಂತೋಷಕೂಟಗಳಲ್ಲಿ ಭಾಗವಹಿಸುವಿರಿ. ಆಕಸ್ಮಿಕ ಧನಲಾಭ ಆಗುವ ಸಂದರ್ಭವಿದೆ. ಆಭರಣ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರ ಇರುತ್ತದೆ. ಉದ್ಯೋಗ ಸ್ಥಳದಲ್ಲಿ ಬಾಕಿ ಉಳಿಸಿಕೊಂಡ ಕೆಲಸಗಳನ್ನು ಬೇಗ ಮಾಡಿ ಮುಗಿಸುವುದು ಬಹಳ ಉತ್ತಮ. ಹಣದ ಒಳಹರಿವು ಉತ್ತಮವಾಗಿ ಇದ್ದರೂ ಖರ್ಚು ಅಷ್ಟೇ ಇರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚು ಸಾಧನೆ ಮಾಡುವ ಯೋಗವಿದೆ. ಕಣ್ಣಿನಲ್ಲಿ ತೊಂದರೆ ಇದ್ದವರು ಎಚ್ಚರವಹಿಸಿರಿ. ಸಂಗಾತಿಯ ಜಿಪುಣತನ ಮುಜುಗರವನ್ನು ಉಂಟು ಮಾಡುತ್ತದೆ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಕೆಲವೊಂದು ಪ್ರಭಾವಿ ವ್ಯಕ್ತಿಗಳ ಸಹಾಯ ದೊರೆಯುತ್ತದೆ. ದಿನಸಿ ವ್ಯಾಪಾರಿಗಳ ವ್ಯಾಪಾರ ವಹಿವಾಟು ಜಾಸ್ತಿಯಾಗುತ್ತದೆ. ಅನವಶ್ಯಕವಾಗಿ ಋಣಾತ್ಮಕ ಚಿಂತನೆಯನ್ನು ಮಾಡುವುದನ್ನು ನಿಲ್ಲಿಸಿರಿ. ತರಕಾರಿ ವ್ಯಾಪಾರಿಗಳಿಗೆ ಹೆಚ್ಚು ವ್ಯವಹಾರವಾಗುತ್ತದೆ. ಕೆಲವು ರಾಜಕೀಯ ಪಟುಗಳಿಗೆ ಸಿಕ್ಕ ಸ್ಥಾನವನ್ನು ಉಳಿಸಿಕೊಳ್ಳಲು ಬಹಳ ಹೆಣಗಬೇಕಾಗುತ್ತದೆ. ಹಣದ ಒಳಹರಿವು ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ಖರ್ಚನ್ನು ಕಡಿಮೆ ಮಾಡಿಕೊಳ್ಳುವುದು ಬಹಳ ಉತ್ತಮ. ಕಮಿಷನ್ ವ್ಯವಹಾರ ಮಾಡುವವರಿಗೆ ಸೂಕ್ತ ಕಮಿಷನ್ ದೊರೆಯುತ್ತದೆ. ಮಕ್ಕಳ ಏಳಿಗೆಯ ಬಗ್ಗೆ ಚಿಂತಿಸುತ್ತಿದ್ದ ನಿಮಗೆ ಈಗ ಸೂಕ್ತ ಪರಿಹಾರ ದೊರೆಯಬಹುದು. ಸಂಗಾತಿಗೆ ಪಿತ್ರಾರ್ಜಿತ ಆಸ್ತಿ ಒದಗುವ ಸಾಧ್ಯತೆ ಇದೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಚರ್ಮದ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಹೆಚ್ಚು ಆದಾಯವಿರುತ್ತದೆ. ನೀವು ಒಪ್ಪಿಕೊಂಡಿರುವ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿ ಮುಗಿಸುವುದು ಉತ್ತಮ. ವಿದೇಶಿ ವ್ಯವಹಾರಗಳನ್ನು ಮಾಡಬೇಕೆನ್ನುವವರಿಗೆ ಈಗ ಅವಕಾಶಗಳು ಒದಗುತ್ತವೆ. ಸಿನಿಮಾ ಕಲಾವಿದರಿಗೆ ಹೆಚ್ಚು ಅವಕಾಶಗಳು ದೊರೆಯುತ್ತವೆ. ಸಂಗಾತಿಯ ಕಠಿಣ ನಿರ್ಧಾರಗಳು ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುತ್ತವೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಬುದ್ಧಿವಂತಿಕೆಯಿಂದ ಕೆಲವು ವ್ಯವಹಾರಗಳನ್ನು ಮಾಡುವಿರಿ. ಉನ್ನತ ಶಿಕ್ಷಣವನ್ನು ಮಾಡುತ್ತಿರುವವರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಕಾಡಬಹುದು. ದೈವಕಾರ್ಯಕ್ಕಾಗಿ ನಿರೀಕ್ಷೆಗಿಂತ ಹೆಚ್ಚಿನ ಹಣ ಖರ್ಚಾಗಬಹುದು. ಸ್ತ್ರೀಯರು ತಮ್ಮ ಮಕ್ಕಳ ಅನುಕೂಲಕ್ಕಾಗಿ ವಿದೇಶಕ್ಕೆ ಹೋಗಿ ಬರುವ ಯೋಗವಿದೆ. ಕೃಷಿ ಚಟುವಟಿಕೆಗಳಲ್ಲಿ ನಿಧಾನಗತಿಯನ್ನು ಕಾಣಬಹುದು.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)

ಸಣ್ಣಪುಟ್ಟ ಅಡಚಣೆಗಳು ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಲಾರವು. ತಮ್ಮ ಕಾರ್ಮಿಕರನ್ನು ಒಲಿಸಿಕೊಳ್ಳುವುದರಿಂದ ಉದ್ದಿಮೆದಾರರು ಹೆಚ್ಚು ಉತ್ಪಾದನೆ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳು ಉತ್ತಮ ಸವಲತ್ತನ್ನು ಪಡೆಯುವುದರ ಜೊತೆಗೆ ಉತ್ತಮ ಸಾಧನೆ ಕೂಡ ಮಾಡಬಹುದು. ಬಂಗಾರದ ಮೇಲೆ ಹೂಡಿಕೆ ಮಾಡಿದ್ದವರಿಗೆ ಈಗ ಹೆಚ್ಚಿನ ಲಾಭ ಬರುತ್ತದೆ. ಬಂಗಾರದ ವ್ಯಾಪಾರಿಗಳಿಗೆ ಹೆಚ್ಚು ವ್ಯವಹಾರ ನಡೆಯುತ್ತದೆ. ಮೂಳೆಯ ನೋವು ಅಥವಾ ಶೀತಬಾಧೆ ಕಾಣಿಸಬಹುದು. ಮಹಿಳೆಯರೊಡನೆ ಮಾಡುವ ಹಣದ ವ್ಯವಹಾರಗಳು ಸ್ವಲ್ಪ ನಷ್ಟಕ್ಕೆ ಕಾರಣವಾಗಬಹುದು. ಬಂಧುಗಳು ನಿಮ್ಮ ಕಷ್ಟಕ್ಕೆ ಸಹಾಯ ಮಾಡುವರು. ಕೃಷಿ ಉತ್ಪನ್ನಗಳ ಮಧ್ಯಸ್ಥಿಕೆ ವ್ಯವಹಾರ ಮಾಡುವವರಿಗೆ ಹೆಚ್ಚು ಲಾಭವಿರುತ್ತದೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)

ನಿಮ್ಮ ವ್ಯವಹಾರದ ಪಾಲುದಾರರು ನಿಮ್ಮ ಮಾತಿನಂತೆಯೇ ನಡೆಯುವರು. ಮಗಳಿಂದ ಶುಭ ಸುದ್ದಿಯೊಂದನ್ನು ಕೇಳುವಿರಿ. ಕ್ರೀಡಾಪಟುಗಳಿಗೆ ಸೂಕ್ತ ಅವಕಾಶ ದೊರೆಯುತ್ತದೆ. ವರದಿಗಾರರು ಸ್ವಲ್ಪ ಎಚ್ಚರಿಕೆಯಿಂದ ವರದಿ ಪ್ರಕಟಿಸಿರಿ. ಬಹಳ ಕಷ್ಟಪಟ್ಟು ಉನ್ನತ ವಿದ್ಯೆಯನ್ನು ಮುಂದುವರಿಸುವಿರಿ. ಸರ್ಕಾರಿ ಸವಲತ್ತುಗಳು ಈಗ ಸರಾಗವಾಗಿ ದೊರೆಯುತ್ತವೆ. ಸಹೋದರಿಯರ ಸಹಕಾರ ನಿಮಗೆ ದೊರೆಯುತ್ತದೆ. ಆಸ್ತಿ ವಿಚಾರದಲ್ಲಿ ಒಂದು ಹೆಜ್ಜೆ ಮುನ್ನಡೆಯುವಿರಿ. ಹರಿತವಾದ ಆಯುಧಗಳೊಡನೆ ಕೆಲಸ ಮಾಡುವವರು ಹೆಚ್ಚು ಎಚ್ಚರದಿಂದ ಕೆಲಸ ಮಾಡಿರಿ. ಒಟ್ಟು ಕುಟುಂಬದ ವ್ಯವಹಾರಗಳಲ್ಲಿ ನಿಮಗೆ ಅನುಕೂಲವಿರುತ್ತದೆ. ತಂದೆಯಿಂದ ಕೆಲವೊಂದು ಸಹಾಯಗಳು ದೊರೆಯುತ್ತವೆ. ವೃತ್ತಿಯಲ್ಲಿ ಸೂಕ್ತ ಸ್ಥಾನಮಾನ ದೊರೆಯುತ್ತದೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಆತ್ಮಭಿಮಾನದ ಜೊತೆಗೆ ಗೌರವವೂ ದೊರೆಯುತ್ತದೆ. ವಿಭಿನ್ನ ರೀತಿಯಲ್ಲಿ ಕ್ಲಿಷ್ಟಕರವಾದ ಸಮಸ್ಯೆಯೊಂದನ್ನು ಬಗೆಹರಿಸಿ ಸಹೋದ್ಯೋಗಿಗಳಿಂದ ಮೆಚ್ಚುಗೆ ಪಡೆಯುವಿರಿ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿ ಇರುತ್ತದೆ. ನಿಮ್ಮ ಉತ್ತಮ ನಡವಳಿಕೆಯಿಂದ ಎಲ್ಲರಿಗೂ ಅಚ್ಚುಮೆಚ್ಚು ಆಗುವಿರಿ. ವಿದೇಶದಲ್ಲಿ ನೆಲೆಸಿರುವವರು ಸ್ಥಿರಾಸ್ತಿಯನ್ನು ಮಾಡಬಹುದು. ಸೈನಿಕರಿಗೆ ಸೂಕ್ತ ಸೌಲಭ್ಯಗಳ ಜೊತೆಗೆ ಹೆಚ್ಚಿನ ಸ್ಥಾನಮಾನ ಸಿಗುತ್ತದೆ. ಸಿವಿಲ್ ಎಂಜಿನಿಯರ್‌ಗಳಿಗೆ ಹೆಚ್ಚು ಬೇಡಿಕೆ ಬರುತ್ತದೆ. ಪಶುಸಂರಕ್ಷಕರಿಗೆ ಹೆಚ್ಚಿನ ಸಹಾಯ ಹರಿದು ಬರುತ್ತದೆ. ಒಟ್ಟಿನ ವ್ಯವಹಾರಗಳಲ್ಲಿ ಕೆಲವರ ತಪ್ಪಿನಿಂದಾಗಿ ಲಾಭದಲ್ಲಿ ಸ್ವಲ್ಪ ಇಳಿಕೆಯಾಗಬಹುದು. ಪ್ರವಾಸಿ ಉದ್ಯಮವನ್ನು ನಡೆಸುವವರಿಗೆ ಹೆಚ್ಚಿನ ಲಾಭವಿರುತ್ತದೆ. ಹಿರಿಯರ ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣಬಹುದು.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಜೀವನಶೈಲಿಯಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದು, ಎಲ್ಲವೂ ನಿಮಗೆ ಅನುಕೂಲವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲಿತಾಂಶ ದೊರೆಯುತ್ತದೆ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಸ್ಥಿರಾಸ್ತಿಯನ್ನು ಹೊಂದುವಲ್ಲಿ ಯಶಸ್ವಿಯಾಗುವಿರಿ. ಮಕ್ಕಳು ನಡೆಸುವ ವ್ಯವಹಾರಗಳು ಲಾಭವನ್ನು ತರುತ್ತವೆ. ಕೆಲವರಿಗೆ ಶೀತಬಾಧೆ ಕಾಡಬಹುದು. ಸಂಗಾತಿಯೊಡನೆ ವಿಹಾರಕ್ಕಾಗಿ ಹೋಗಿ ಬರುವ ಸಾಧ್ಯತೆ ಇದೆ. ಕಚ್ಚಾ ಅದಿರನ್ನು ಪೂರೈಸುವ ಪೂರೈಕೆದಾರರಿಗೆ ಬೇಡಿಕೆ ಹೆಚ್ಚುತ್ತದೆ. ಹಿರಿಯರ ಧರ್ಮ ವಿದ್ಯೆಯನ್ನು ಉಳಿಸಿ ಹೆಸರು ಗಳಿಸುವಿರಿ. ಕೃಷಿ ಮಾಡುವವರಿಗೆ ಹೆಚ್ಚು ಬೇಡಿಕೆ ಬರುತ್ತದೆ ಹಾಗೂ ಅವರು ಬೆಳೆದ ವಸ್ತುಗಳಿಗೆ ಹೆಚ್ಚು ಬೆಲೆ ದೊರೆಯುತ್ತದೆ. ಸಂಗೀತ ಕಲಾವಿದರಿಗೆ ಬೇಡಿಕೆ ಹೆಚ್ಚಾಗುತ್ತದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಮಾನಸಿಕ ಒತ್ತಡಗಳಿಂದ ಹೊರಬರಲು ಹಿರಿಯರ ಬಳಿ ಸಲಹೆ ಸೂಚನೆಗಳನ್ನು ಪಡೆಯುವುದು ಒಳ್ಳೆಯದು. ಸಾಕಷ್ಟು ಆದಾಯವಿದ್ದರೂ ಖರ್ಚು ಹೆಚ್ಚಾಗುವ ಸಂದರ್ಭವಿದೆ. ಒಡಹುಟ್ಟಿದವರಿಗೆ ಕೆಲವೊಂದು ಕಾರಣಗಳಿಗಾಗಿ ನಿಮ್ಮ ಮೇಲೆ ಕೋಪವಿರುತ್ತದೆ. ವಿವಾಹ ವಿಚಾರದಲ್ಲಿ ವಯಸ್ಕರು ಮತ್ತು ಹಿರಿಯರು ಅಂತಿಮ ತೀರ್ಮಾನಕ್ಕೆ ಬರುವುದು ಬಹಳ ಒಳ್ಳೆಯದು. ಹಿರಿಯರು ಅವರ ಮಕ್ಕಳಿಗಾಗಿ ಹೆಚ್ಚು ಹಣ ಖರ್ಚು ಮಾಡುವರು. ಕೆಲವರಿಗೆ ತಲೆನೋವು ಕಾಣಿಸಬಹುದು. ರಕ್ತಸಂಬಂಧಿ ದೋಷ ಇರುವವರು ಚಿಕಿತ್ಸೆ ಪಡೆಯಿರಿ. ಸಾಂಪ್ರದಾಯಿಕ ಪಶುಗಳನ್ನು ಸಂಗೋಪನೆ ಮಾಡುವವರಿಗೆ ಸಹಕಾರ ಮತ್ತು ಸಹಾಯಧನಗಳು ದೊರೆಯುತ್ತವೆ. ಬಂಧುಗಳ ನಡುವೆ ಯಾವುದೇ ರೀತಿಯ ಕಲಹ ಉಂಟಾಗುವ ವಿಚಾರಗಳನ್ನು ಪ್ರಸ್ತಾಪಿಸಬೇಡಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT