ಗುರುವಾರ , ಆಗಸ್ಟ್ 18, 2022
24 °C

ಸಚ್ಚಿದಾನಂದ ಸತ್ಯಸಂದೇಶ| ರೋಗನಿರೋಧಕ ಯೋಗ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಧರ್ಮಗಳ ತವರೂರು ಭಾರತ. ಇಲ್ಲಿ ದೇವರು, ಧರ್ಮದಾಚೆ ನೋಡುವ ಅಧ್ಯಾತ್ಮಲೋಕ ಅಗಾದವಾಗಿ ಬೆಳೆದಿದೆ. ನಮ್ಮನ್ನು ಸೃಷ್ಟಿಸಿದ ದೇವರಿದ್ದಾನೆಯೇ? ಆ ದೇವನ ಸೃಷ್ಟಿಕರ್ತ ಯಾರು? ಬ್ರಹ್ಮಾಂಡದಲ್ಲಿ ಅಸಂಖ್ಯಾತ ನಕ್ಷತ್ರ ಆಕಾಶ ಕಾಯಗಳನ್ನೆಲ್ಲಾ ದೇವರು ಏಕೆ ಸೃಷ್ಟಿಸಿದ? ಅವನ ಉದ್ದೇಶವೇನು? ಪ್ರತಿ ಜೀವಿಯೊಳಗೂ ಆತ್ಮವಿದೆಯೇ? ಇದ್ದರೆ ಜೀವಿ ಗತಿಸಿದ ಮೇಲೆ ಜೀವಾತ್ಮ ಎಲ್ಲಿ ಹೋಗುತ್ತದೆ? - ಮುಂತಾದ ವಿಚಾರಗಳಿಗೆ ಉತ್ತರ ಹುಡುಕುವ ಭಾರತೀಯ ಅಧ್ಯಾತ್ಮ ಚಿಂತನೆ, ನಿಜಾರ್ಥದಲ್ಲಿ ವೈಜ್ಞಾನಿಕ ಸಂಶೋಧನಾ ರೂಪವಾಗಿದೆ.

ಇಡೀ ಮಾನವಜಗತ್ತು ಅಜ್ಞಾನದ ಕತ್ತಲೆಯಲ್ಲಿದ್ದಾಗ ಭಾರತದ ನೆಲದಲ್ಲಿ ಅಧ್ಯಾತ್ಮದಂಥ ವಿಚಾರಜ್ಞಾನ ಬೆಳಗುತ್ತಿತ್ತು. ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯ ಋಷಿಗಳು-ಚಿಂತಕರು ಬ್ರಹ್ಮಾಂಡದ ಅವಲೋಕನಕ್ಕಿಳಿದಿದ್ದರು. ದೇವರು ಇದ್ದಾನೆಯೇ? ಇದ್ದರೆ ಹೇಗಿರುತ್ತಾನೆ? ಆತ ಮನುಷ್ಯರಂತಿದ್ದಾನಾ? ಆತನಿಗೆ ರೂಪವೇ ಇಲ್ಲವಾ? – ಇಂಥ ಆಸ್ತಿಕವಿಚಾರದ ಜೊತೆಯಲ್ಲೇ, ದೇವರು ಎಂಬುದು ಕಲ್ಪನೆಯೇ? ದೇವರು ಇದ್ದರೆ ಪ್ರತ್ಯಕ್ಷನಾಗುತ್ತಿರಲಿಲ್ಲವೇ? – ಎಂಬಂಥ ನಾಸ್ತಿಕವಾದ ಸಹ ಬೆಳೆಯಿತು. ಭಾರತದಲ್ಲಿ ಆಸ್ತಿಕ-ನಾಸ್ತಿಕ ವಿಚಾರಧಾರೆಗಳು ಬೆಳೆದಂತೆ ಹುಟ್ಟು ಮತ್ತು ಸಾವಿನಾಚೆಗಿನ ಆಧ್ಯಾತ್ಮಿಕ ವಿಚಾರ ಪ್ರಚಲಿತಕ್ಕೆ ಬಂತು. ಅಧ್ಯಾತ್ಮದ ಅಧ್ಯಯನಕ್ಕಿಳಿದ ಭಾರತೀಯ ಋಷಿಗಳು ಧ್ಯಾನ ಮತ್ತು ಯೋಗಕ್ಕೆ ಆದ್ಯತೆ ಕೊಟ್ಟರು. ಏಕೆಂದರೆ, ಬ್ರಹ್ಮಾಂಡ ರಹಸ್ಯ ಭೇದಿಸುವುದು ಅಷ್ಟು ಸುಲಭವಲ್ಲ. ಅದಕ್ಕೆ ಅಗಾದವಾದ ಜ್ಞಾನದ ಪ್ರಭೆ ಬೇಕು. ಆ ಪ್ರಭೆಯನ್ನು ತಡೆದುಕೊಳ್ಳುವ ದೈಹಿಕ ಮತ್ತು ಮಾನಸಿಕ ಚೈತನ್ಯವೂ ಬೇಕು. ಪತಂಜಲಿಯಂಥ ಮಹರ್ಷಿ ಧ್ಯಾನದ ಜೊತೆಗೆ ದೇಹ ಮತ್ತು ಮನಸ್ಸನ್ನು ನಿಯಂತ್ರಿಸುವ ಯೋಗದ ಮೊರೆಹೋದರು.

ಯೋಗಾಸನದಿಂದ ಶರೀರ ಚೈತನ್ಯಪೂರ್ಣವಾಗುವುದರಿಂದ ಯೋಗಾಸನ ಕೇವಲ ಕಾಡಿನಲ್ಲಿ ತಪಸ್ಸು ಮಾಡುವ ಯೋಗಿಗಳಿಗಲ್ಲದೆ, ನಾಡಿನಲ್ಲಿರುವ ಭೋಗಿಗಳಿಗೂ ಅಗತ್ಯವಾಗಿ ಬೇಕು. ಋಷಿಗಳಂತೆ ನಾಡಿನ ಜನ ಕಾಡಿನಲ್ಲಿ ತಪಸ್ಸು ಮಾಡದೆ ಇರಬಹುದು. ಆದರೆ ಕಾಡಿನಂಥ ಮನಸ್ಸನ್ನು ಹೊಂದಿರುವ ನಾಡಿನ ಜನ ಮಾನಸಿಕವಾಗಿ ಪ್ರಬಲಗೊಳ್ಳಲು ಯೋಗವಿದ್ಯೆಯನ್ನು ಕಲಿಯಲೇ ಬೇಕು. ನಿತ್ಯ ಕಾಡುವ ರೋಗಗಳು, ಮನಸ್ಸನ್ನು ಬಾಡಿಸುವ ವಿಚಾರಗಳಿಂದ ಸದಾ ತಳಮಳದಲ್ಲೇ ಬದುಕುವ ಆಧುನಿಕ ಮನುಷ್ಯ ಸದೃಢನಾಗಿ ಬೆಳೆಯಲು ಧ್ಯಾನ–ಯೋಗ ಅತ್ಯವಶ್ಯಕ.

ದೇಹಕ್ಕೆ ಆಹಾರ ಹೇಗೆ ನಿತ್ಯ ಅಗತ್ಯವೋ, ಹಾಗೇ ಯೋಗ-ಧ್ಯಾನ ಸಹ ಅಗತ್ಯವಾಗಿ ಬೇಕು. ದಿನಕ್ಕೊಂದೊಂದು ರೀತಿ ದಾಳಿ ಮಾಡುವ ರೋಗಾಣುಗಳನ್ನು ಹಿಮ್ಮೆಟ್ಟಿಸಲು ಆಧುನಿಕ ಮನುಷ್ಯ ವಿವಿಧ ಔಷಧಗಳನ್ನು ಆಶ್ರಯಿಸಿದ್ದಾನೆ. ಇದೆಲ್ಲಾ ತಾತ್ಕಾಲಿಕ ಮದ್ದು. ಮಧುಮೋಹದಿಂದ ಬರುವ ಮಧುಮೇಹ ಮತ್ತು ಬದುಕಿನ ಜಂಜಡಗಳಿಂದ ಬರುವ ರಕ್ತದೊತ್ತಡಗಳನ್ನು ನಿವಾರಿಸಲು ಯೋಗವೇ ಸರಿಯಾದ ಮದ್ದು. ಅದಕ್ಕಾಗಿ ಭೋಗಜೀವನದಿಂದ ಯೋಗಜೀವನಕ್ಕೆ ಮರಳುವುದೇ ಮಾನವರ ಉಳಿವಿಗಿರುವ ಏಕೈಕ ಮಾರ್ಗ. ಹೀಗಾಗಿ ದೇಹದ ಶಕ್ತಿಗೆ ಪೌಷ್ಟಿಕ ಆಹಾರ ಸೇವಿಸಿದಂತೆ, ಮಾನಸಿಕಶಕ್ತಿ ಹೆಚ್ಚಿಸಲು ಯೋಗ-ಧ್ಯಾನವನ್ನು ಮಾಡಲೇಬೇಕು.

ದಿನ ಕಳೆದಂತೆ ಮಾನವರ ಬದುಕು ಬಹಳ ಸಂಕೀರ್ಣವಾಗುತ್ತಿದೆ. ಪ್ರಕೃತಿಗೆ ವಿರುದ್ಧವಾಗಿ ನಡೆಸುತ್ತಿರುವ ವಿಲಾಸಿಜೀವನ ಮಾನವರ ಬದುಕನ್ನೇ ಆಪೋಷಣ ತೆಗೆದುಕೊಳ್ಳುತ್ತಿದೆ. ನಮಗೇ ಅರಿವಿಲ್ಲದೆ ನಾವೇ ಸೃಷ್ಟಿಸಿಕೊಂಡಿರುವ ಆಧುನಿಕ ವಿಷವರ್ತುಲಗಳಿಂದ ಕೊರೊನಾದಂಥ ಕ್ರಿಮಿಗಳು ಬಾಧಿಸುತ್ತಿವೆ. ಇಂಥ ವಿಷಜಂತುಗಳಿಂದ ಪಾರಾಗಲು ಯೋಗಾಸನ ಸಹಾಯಕ. ಭೋಗವನ್ನು ಬಯಸಿ ರೋಗ ಬರಿಸಿಕೊಳ್ಳುವ ಐಷಾರಾಮಿ ಜೀವನವನ್ನು ಬಿಟ್ಟು, ಯೋಗದಿಂದ ಶ್ರಮಜೀವನವನ್ನು ಕಟ್ಟಿಕೊಳ್ಳುವ ಸಿದ್ಧಿಪಥದಿಂದ ‘ಸಚ್ಚಿದಾನಂದ’ದ ನೆಮ್ಮದಿಯ ಬದುಕು ಸಾಕಾರವಾಗುತ್ತದೆ.

.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು