ಬುಧವಾರ, ನವೆಂಬರ್ 13, 2019
19 °C
‘ಬದಲಿ ಅರಣ್ಯ ನಿಧಿ’ಯಲ್ಲಿದೆ ಹಸಿರುಕವಚ ವಿಸ್ತರಿಸುವ ಸುವರ್ಣಾವಕಾಶ

‘ಕಾಂಪಾ’ ನಿಧಿ ಕಾಡಾಗಿ ಬದಲಾಗುವುದೇ?

Published:
Updated:

ಇತ್ತೀಚಿನ ಭಾರಿ ವರ್ಷಧಾರೆ, ಆನಂತರದ ನೆರೆ ಹಾಗೂ ಭೂಕುಸಿತ- ಇವೆಲ್ಲವೂ ನಾಡಿನ ಜನಜೀವನವನ್ನೇ ಅಲ್ಲಾಡಿಸಿಬಿಟ್ಟಿವೆ. ನೆಲ-ಜಲವನ್ನು ಕಾಪಾಡುವ ಕಾಡಿನ ನಾಶವೇ ಈ ಮಾನವನಿರ್ಮಿತ ಪ್ರಕೃತಿ ವಿಕೋಪಗಳಿಗೆ ಕಾರಣವೆಂಬುದು ಎಲ್ಲರಿಗೂ ಗೊತ್ತು. ಅರಣ್ಯ ಪೋಷಣೆ ಮಾತ್ರವೇ ಭವಿಷ್ಯವನ್ನು ಕಾಯಬಲ್ಲದೆಂದು ವನವಾಸಿಗಳು ಹಾಗೂ ರೈತರಂತೂ ನಂಬಿದ್ದಾರೆ. ಸರ್ಕಾರವೇನೂ ಇದರ ಮಹತ್ವ ಅರಿತಿಲ್ಲವೆಂದಲ್ಲ. ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಮರುಭೂಮೀಕರಣ ನಿಯಂತ್ರಣೆಗಾಗಿನ ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಒಪ್ಪಂದದ ಸಮಿತಿಯ (UNCCD) ಹದಿನಾಲ್ಕನೇ ಜಾಗತಿಕ ಸಮ್ಮೇಳನದಲ್ಲಿ, ಕನಿಷ್ಠ ಶೇ 33ರಷ್ಟಾದರೂ ಅರಣ್ಯದ ಹೊದಿಕೆ ತಲುಪುವ 1988ರ ಅರಣ್ಯ ನೀತಿಯ ಗುರಿಯನ್ನು, ಕೇಂದ್ರ ಅರಣ್ಯ ಸಚಿವರು ಪುನರುಚ್ಚರಿಸಿದ್ದಾರೆ. ಆ ಮೂಲಕ, 2030ರ ವೇಳೆಗೆ ಜಾಗತಿಕವಾಗಿ 35 ಕೋಟಿ ಹೆಕ್ಟೇರ್ ಅರಣ್ಯ ಬೆಳೆಸುವ ಉದ್ದೇಶದೊಂದಿಗೆ ಜರ್ಮನಿಯ ಬಾನ್ ನಗರದಲ್ಲಿ ಆರಂಭವಾದ ‘ಬಾನ್ ಸವಾಲಿಗೆ’ ಭಾರತವೂ ಸೇರ್ಪಡೆಯಾಗುತ್ತಿದೆ. ಈ ಶುಭ ಚಿಂತನೆಯೇನೋ ಸ್ವಾಗತಾರ್ಹ.

ಅಂಥ ಕನಸು ನನಸಾಗಬಲ್ಲದೇ? ದೇಶದ ಪ್ರಸಕ್ತ ಅರಣ್ಯ ಪರಿಸ್ಥಿತಿಯನ್ನು ಗಮನಿಸಿದರೆ ಅದು ಕಷ್ಟ ಎನ್ನಿಸುತ್ತಿದೆ. ಅರಣ್ಯದ ಆರೋಗ್ಯ ಚೆನ್ನಾಗಿಲ್ಲ ಎಂದು, ಪ್ರತಿ ಎರಡು ವರ್ಷಕ್ಕೊಮ್ಮೆ ಕೇಂದ್ರ ಸರ್ಕಾರ ಪ್ರಕಟಿಸುವ ‘ಭಾರತ ಅರಣ್ಯ ಪರಿಸ್ಥಿತಿ’ ವರದಿಗಳು ಸಾರುತ್ತಲೇ ಇವೆ. ಕರ್ನಾಟಕದಲ್ಲಿ ಸುಮಾರು ಶೇ 21ರಷ್ಟು ಅರಣ್ಯಭೂಮಿ ಇದೆಯೆಂದು ಹೇಳಲಾಗುವುದಾದರೂ, ಅವೆಲ್ಲವೂ ಮರಗಿಡ ತುಂಬಿದ ಹಸಿರು ಕವಚವೇನೂ ಅಲ್ಲ. ಕಾಡೆಂದರೆ ದಾಖಲೆಯಲ್ಲಿನ ಅರಣ್ಯಭೂಮಿಯೋ ಅಥವಾ ನೆಡುತೋಪುಗಳೋ ಅಲ್ಲವಲ್ಲ! ಅಸಂಖ್ಯ ಪ್ರಾಣಿ, ಪಕ್ಷಿ, ಸಸ್ಯಸಂಕುಲಗಳ ಜೀವವೈವಿಧ್ಯದ ಆಸರೆಗಳವು. ವಾತಾವರಣವನ್ನು ತಂಪುಮಾಡಿ ಮಳೆ ಬರಿಸಲು, ಮೇಲ್ಮಣ್ಣನ್ನು ರಕ್ಷಿಸಲು, ಬಿದ್ದ ಮಳೆ ನೀರನ್ನು ಅಂತರ್ಜಲಕ್ಕಿಳಿಸಿ ಹೊಳೆ- ಕೆರೆಗಳನ್ನು ಪೋಷಿಸಲು ಅವು ಶಕ್ತವಾಗಬೇಕು. ನಿಸರ್ಗವನ್ನಾಧರಿಸಿದ ಅರಣ್ಯವಾಸಿ
ಗಳು ಮತ್ತು ರೈತರಿಗೆ ಉರುವಲು, ತರಗೆಲೆ, ಬಿದಿರು, ಜೇನು ತರಹದ ಸಾವಯವ ಉತ್ಪನ್ನಗಳನ್ನು ಒದಗಿಸಿ ಪೋಷಿಸಬೇಕು. ಆನೆ–ಹುಲಿಗಳೂ ಬದುಕುವಷ್ಟು ವಿಸ್ತಾರ ವಿರಬೇಕು. ಈ ಪಾರಿಸರಿಕ ಸೇವೆಗಳನ್ನೆಲ್ಲ ಕ್ಷಮತೆಯಿಂದ ನಿರ್ವಹಿಸುವ ಸಮೃದ್ಧ ಅರಣ್ಯವು ರಾಜ್ಯದಲ್ಲಿ ಇಂದು ಶೇ 10ಕ್ಕಿಂತಲೂ ಕಡಿಮೆಯಿದೆ! ಈಗಿನ ಸ್ಥಿತಿಯಿಂದ ಶೇ 33ರಷ್ಟು ವಿಸ್ತಾರಕ್ಕೆ ಜಿಗಿಯುವುದು ಸಣ್ಣ ಸವಾಲೇ?

ಅಳಿದುಳಿದಿರುವ ಅರಣ್ಯವನ್ನಾದರೂ ಉಳಿಸಿಕೊಳ್ಳುವುದು ಮೊದಲ ಜವಾಬ್ದಾರಿ. ಅತಿಕ್ರಮಣ, ಬೆಂಕಿ, ಅಭಿವೃದ್ಧಿ ಯೋಜನೆಗಳು, ನಗರೀಕರಣ, ಗಣಿಗಾರಿಕೆ ಇತ್ಯಾದಿಗಳಿಂದ ಅವನ್ನು ರಕ್ಷಿಸಿದ್ದಾದರೆ, ಅರಣ್ಯ ಇಲಾಖೆಯು ಅರ್ಧ ಯುದ್ಧ ಗೆದ್ದಂತೆ. ಸೂಕ್ತ ಕಾರ್ಯಯೋಜನೆ ರೂಪಿಸಿ, ಸ್ಥಳೀಯ ಸಮುದಾಯಗಳ ಪಾಲ್ಗೊಳ್ಳುವಿಕೆಯಲ್ಲಿ ಕ್ಷಮತೆಯಿಂದ ಅನುಷ್ಠಾನಗೊಳಿಸಿದರೆ ಮಾತ್ರ ಸರ್ಕಾರ ಇದನ್ನು ಸಾಧಿಸಬಹು ದೇನೋ. ಮಲೆನಾಡು, ಕರಾವಳಿಯಂಥ ಪ್ರದೇಶಗಳ ಲ್ಲಂತೂ ಗಿಡ ನೆಟ್ಟೇ ಕಾಡು ಬೆಳೆಸಬೇಕೆಂದೂ ಇಲ್ಲ. ಬೆಂಕಿ, ಅತಿಕ್ರಮಣ, ಮರಕಡಿತದಂತಹ ಮಾನವ ಒತ್ತಡಗಳಿಂದ ಪಾರಾದರೆ, ಕೆಲವೇ ವರ್ಷಗಳಲ್ಲಿ ನೈಸರ್ಗಿಕ ಕಾಡು ಮರಳುತ್ತದೆ. ಈ ಪಾರಂಪರಿಕ ಜ್ಞಾನ ವನ್ನು ವೈಜ್ಞಾನಿಕ ಅಧ್ಯಯನಗಳೂ ಪುಷ್ಟೀಕರಿಸಿವೆ. ಜೀವನಾನುಭವ ಸೃಜಿಸುವ ಒಳ ನೋಟಗಳಿಂದಲೇ ಕಾಡನ್ನು ಕಾಪಿಡಬಲ್ಲ ಸ್ಥಳೀಯ ಸಮುದಾಯಗಳೊಂದಿಗೆ ಸಾವಯವ ಸಂಬಂಧ ಬೆಸೆದುಕೊಳ್ಳಬೇಕಾದ್ದೇ, ಸರ್ಕಾರಿ ಯಂತ್ರವು ಈಗ ತೋರಬೇಕಾದ ವಿವೇಕವಾಗಿದೆ.

ಮೂರ್ನಾಲ್ಕು ದಶಕಗಳಿಂದ ರಾಜ್ಯದಲ್ಲಿ ಜಾರಿಯಾದ ಅರಣ್ಯೀಕರಣ ಯೋಜನೆಗಳನ್ನು ಗಮನಿಸಿದರೆ, ಜನಸಹ
ಭಾಗಿತ್ವದ ಕಾಡು ಬೆಳೆಸುವ ಆಶಯ ಕೈಗೂಡಲಿಲ್ಲವೆಂದೇ ಹೇಳಬೇಕು. ಎಂಬತ್ತು ಹಾಗೂ ತೊಂಬತ್ತರ ದಶಕಗಳಲ್ಲಿ ವಿಶ್ವಬ್ಯಾಂಕ್ ಮತ್ತು ಬ್ರಿಟನ್‌ ಸರ್ಕಾರದ ಅನುದಾನಗಳೊಂದಿಗೆ ಜಾರಿಯಾದ ಜಂಟಿ ಅರಣ್ಯ ನಿರ್ವಹಣೆ ಯೋಜನೆಗಳಲ್ಲಿ ಸಮುದಾಯಗಳನ್ನು ಒಳಗೊಳ್ಳುವ ಆಶಯವಿತ್ತು. ಅಂತೆಯೇ, ಕರ್ನಾಟಕ ಅರಣ್ಯ ಕಾನೂನಿಗೆ (1963) ತಿದ್ದುಪಡಿ ತಂದು, ಗ್ರಾಮ ಅರಣ್ಯ ಸಮಿತಿಗಳ ಸ್ಥಾಪನೆಗೆ ಚಾಲನೆಯನ್ನೂ ನೀಡಲಾಯಿತು. ತೊಂಬತ್ತರ ದಶಕದಲ್ಲಿ ಪುನಃ ಬ್ರಿಟನ್ ಸರ್ಕಾರದ ಅನುದಾನದಡಿ ಜಾರಿಯಾದ ಪಶ್ಚಿಮಘಟ್ಟ ಅಭಿವೃದ್ಧಿ ಯೋಜನೆಯಲ್ಲೂ ಗ್ರಾಮ ಅರಣ್ಯ ಸಮಿತಿ ಹಾಗೂ ಪರಿಸರ ಅಭಿವೃದ್ಧಿ ಸಮಿತಿ ರಚಿಸುವ ಅಂಶಗಳಿದ್ದವು. ಆದರೆ, ಇವೆಲ್ಲವೂ ದಾಖಲೆಗಳಿಗೋ ಅಥವಾ ಕೆಲವೇ ಪ್ರಯೋಗಗಳಿಗೋ ಸೀಮಿತವಾದವು. ಈ ನಡುವೆ ಜಾರಿಯಾದ ಸಾಮಾಜಿಕ ಅರಣ್ಯ ಯೋಜನೆಯೂ ನೀಲಗಿರಿ, ಅಕೇಶಿಯಾ ನೆಡುತೋಪು ನಿರ್ಮಾಣದ ಹೊರಗುತ್ತಿಗೆಯಂತಾಯಿತು. ಶಾಲಾ ವನ, ಕೃಷಿ ಅರಣ್ಯ, ಖಾಲಿ ಜಾಗ ಹಸಿರೀ ಕರಣದಂಥ ಹಲವು ಯೋಜನೆಗಳೂ ಸ್ಪಷ್ಟ ಗೊತ್ತು ಗುರಿಯಿಲ್ಲದ, ಅನುದಾನ ಖರ್ಚು ಮಾಡುವ ವಿಧಾನಗಳಂತಾದವು. ಕಳೆದ ದಶಕದಲ್ಲಿ ಜಪಾನ್ ನೆರವಿನೊಂದಿಗೆ ಬಯಲುನಾಡಿನಲ್ಲಿ ಮಾಡಿದ ಅರಣ್ಯೀಕರಣವೂ ಭಿನ್ನವಾಗಲಿಲ್ಲ. ಈಗ ಅನುಷ್ಠಾನಗೊಳ್ಳುತ್ತಿರುವ ‘ಗ್ರೀನ್ ಇಂಡಿಯಾ ಮಿಶನ್’, ‘ಬಿದಿರು ಯೋಜನೆ’ಗಳೂ ನಿರ್ದಿಷ್ಟ ಗುರಿ, ಸೂಕ್ತ ಕಾರ್ಯಕ್ರಮಗಳಿಲ್ಲದೆ ಸೊರಗಿವೆ. ಜೀವ ವೈವಿಧ್ಯಭರಿತ ಕಾಡೂ ವಿಸ್ತಾರವಾಗಲಿಲ್ಲ; ಹಳ್ಳಿಗರನ್ನು ಒಳಗೊಳ್ಳುವ ನೈಜ ಜನಸಹಭಾಗಿತ್ವವೂ ಸಾಧ್ಯವಾಗಲಿಲ್ಲ! ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ಸ್ವಂತ ನೆಲದೊಂದಿಗೆ ಬೆಸೆಯಲು ಸಾಧ್ಯವಾಗದ ಸರ್ಕಾರಿ ಯಂತ್ರದ ಮನಃಸ್ಥಿತಿಯ ಪ್ರತಿಫಲನವಿದು.

ಈ ವಿಫಲತೆಯೇನೂ ಗುಟ್ಟಿನದ್ದಲ್ಲ. ಪಶ್ಚಿಮಘಟ್ಟದ ಮಳೆಕಾಡುಗಳ ನಡುವೆಯೇ ನಿರ್ಮಿಸಿದ ಏಕಸಸ್ಯ ನೆಡು
ತೋಪುಗಳಿಂದಾದ ಅನಾಹುತಗಳ ಕುರಿತು ಅಧ್ಯಯನಗಳಾಗಿವೆ. ಅನುಷ್ಠಾನದಲ್ಲಿನ ಭ್ರಷ್ಟಾಚಾರಗಳನ್ನು ಸ್ವತಂತ್ರ ಸಮೀಕ್ಷೆಗಳು ಹಾಗೂ ನಾಗರಿಕ ಹೋರಾಟಗಳು ಬಯಲುಮಾಡಿವೆ. ಸುಳ್ಳು ದಾಖಲೆಗಳಲ್ಲಿ ಸೃಷ್ಟಿಸಿದ ‘ಅದೃಶ್ಯ ಕಾಡು’ಗಳ ಮಾಹಿತಿಯನ್ನು ತಿಳಿಸಲೆಂದೇ ಜಾಲತಾಣಗಳಿವೆ. ರಾಜ್ಯದ ಮಹಾಲೇಖಪಾಲರು (ಸಿಎಜಿ) ಈ ಕುರಿತಂತೆಲ್ಲ ತನಿಖೆ ನಡೆಸಿ, ಸರ್ಕಾರಕ್ಕೆ ಛೀಮಾರಿ ಹಾಕಿಯೂ ಆಗಿದೆ! ಪರಿಸರ ಜಾಗೃತಿ ಹೆಚ್ಚುತ್ತಿದೆ ಎಂದು ಸಂಭ್ರಮಪಡುವ ಕಾಲದಲ್ಲೇ, ಸರ್ಕಾರಿ ಯೋಜನೆಗಳು ಅನುಷ್ಠಾನಗೊಂಡ ಪರಿಯಿದು.

ತಪ್ಪುಗಳನ್ನೆಲ್ಲ ಸರಿಪಡಿಸಿಕೊಂಡು, ಕಾಡನ್ನು ವಿಸ್ತರಿಸುವ ಸುವರ್ಣ ಅವಕಾಶವೊಂದು ಇದೀಗ ಸರ್ಕಾರದ ಮುಂದಿದೆ. ಸುಪ್ರೀಂ ಕೋರ್ಟ್‌ನ ದಶಕಗಳ ಆದೇಶ ಮತ್ತು ನಿರ್ದೇಶನದ ಫಲವಾಗಿ, ಕೇಂದ್ರ ಅರಣ್ಯ ಸಚಿವಾಲಯದಡಿ ‘ಕಾಂಪಾ’ (CAMPA- Compensatory Afforestation Fund Management and Planning Authority) ಎಂಬ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಅಭಿವೃದ್ಧಿ ಯೋಜನೆಗಳಿಗೆ ಅರಣ್ಯವನ್ನು ಬಿಟ್ಟುಕೊಡುವಾಗ, ಭಾರತೀಯ ಅರಣ್ಯ ಕಾಯ್ದೆ (1980) ಅನ್ವಯ ಬದಲಿ ಅರಣ್ಯ ಬೆಳೆಸಲು ಸರ್ಕಾರವು ನಿಗದಿತ ಶುಲ್ಕವನ್ನು ಸ್ವೀಕರಿಸುತ್ತದೆ. ಹೀಗೆ ಸಂಗ್ರಹಿಸಿದ ಒಂದು ಲಕ್ಷ ಕೋಟಿ ರೂಪಾಯಿಗೂ ಮಿಕ್ಕಿದ ಮೊತ್ತವು ಈ ಪ್ರಾಧಿಕಾರದಲ್ಲಿದೆ. ಸೂಕ್ತ ಕಾನೂನು ಚೌಕಟ್ಟಿನ ಕೊರತೆಯಿಂದಾಗಿ ಈವರೆಗೆ ತಡೆಹಿಡಿದಿದ್ದ ಈ ನಿಧಿಯನ್ನು, ಸ್ಪಷ್ಟ ಮಾರ್ಗಸೂಚಿಗಳೊಂದಿಗೆ ಇದೀಗ ರಾಜ್ಯಗಳಿಗೆ ಬಿಡುಗಡೆ ಮಾಡಲಾಗುತ್ತಿದೆ. ಅರಣ್ಯ ರಕ್ಷಣೆ ಮತ್ತು ವಿಸ್ತರಣೆಗಷ್ಟೇ ಬಳಸಬೇಕಾದ ‘ಕಾಂಪಾ’ದ ಮೊದಲ ಕಂತಾಗಿ, ಕರ್ನಾಟಕಕ್ಕೆ ಒಂದು ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಮೊದಲ ಕಂತು ಇದೀಗ ಸಂದಾ
ಯವಾಗುತ್ತಿದೆ. ನಾಡಿನ ಕಾಡಿನ ಚಿತ್ರಣವನ್ನೇ ಬದಲಾಯಿ ಸಬಲ್ಲ ಐತಿಹಾಸಿಕ ಆರ್ಥಿಕ ಅವಕಾಶವಿದು.

ಜೀವವೈವಿಧ್ಯಗಳ ತವರಾಗಿಯೂ ಪಾರಿಸರಿಕ ಸೇವೆಗಳನ್ನೆಲ್ಲ ಒದಗಿಸುವ ನೈಸರ್ಗಿಕ ನಿಧಿಯಾಗಿಯೂ ಈ ಅರಣ್ಯಗಳನ್ನು ಬೆಳೆಸಬೇಕಿದೆ. ವೈಜ್ಞಾನಿಕ ಯೋಜನೆಗಳು ಹಾಗೂ ನೈಜ ಜನಸಹಭಾಗಿತ್ವದಲ್ಲಿನ ಪಾರದರ್ಶಕ ಅನುಷ್ಠಾನ ಮಾತ್ರ ಈ ಆಶಯಗಳನ್ನು ಸಾಧಿಸಬಲ್ಲದು. ಬರ, ನೆರೆ, ಭೂಕುಸಿತದಂಥ ಹವಾಮಾನ ಬದಲಾವಣೆಯ ಸವಾಲುಗಳನ್ನೆಲ್ಲ ಸಮರ್ಥವಾಗಿ ಎದುರಿಸಬಲ್ಲ ಹಸಿರು ಕವಚ ನಿರ್ಮಿಸುವ ಈ ಸುವರ್ಣ ಅವಕಾಶವನ್ನು, ಅರಣ್ಯ ಇಲಾಖೆಯು ಪ್ರಾಮಾಣಿಕವಾಗಿ ಬಳಸಿಕೊಳ್ಳಲೆಂದು ಹಾರೈಕೆ.

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ಪ್ರತಿಕ್ರಿಯಿಸಿ (+)