ಶುಕ್ರವಾರ, ಸೆಪ್ಟೆಂಬರ್ 20, 2019
28 °C
ಹಣಕಾಸಿನ ವ್ಯವಹಾರವೇ ಕಾರಣ; ಸೊಲ್ಲಾಪುರದ ಎಂಐಎಂ ಮುಖಂಡ ತೌಫೀಕ್‌ ವಿರುದ್ಧ ದೂರು

ಕಾಂಗ್ರೆಸ್‌ ನಾಯಕಿ ರೇಷ್ಮಾ ಪಡೇಕನೂರ ಕೊಲೆ

Published:
Updated:
Prajavani

ವಿಜಯಪುರ: ವಿಜಯಪುರದ ಕಾಂಗ್ರೆಸ್‌ ನಾಯಕಿ ರೇಷ್ಮಾ ಪಡೇಕನೂರ ಕೊಲೆಯಾಗಿದೆ. ಕೊಲ್ಹಾರ ಸೇತುವೆ ಬಳಿ ಶುಕ್ರವಾರ ಶವ ಪತ್ತೆಯಾಗಿದೆ.

‘ಸೊಲ್ಲಾಪುರದ ಎಂಐಎಂ ಮುಖಂಡ ತೌಫೀಕ್ ಇಸ್ಮಾಯಿಲ್‌ ಶೇಖ್‌ ಜತೆ ರೇಷ್ಮಾ ಹಣಕಾಸಿನ ವ್ಯವಹಾರ ನಡೆಸಿದ್ದರು. ತೌಫೀಕ್‌ ₹ 13 ಲಕ್ಷ ನಗದನ್ನು ರೇಷ್ಮಾಗೆ ಕೊಡಬೇಕಿತ್ತು.

ಕೆಲ ದಿನಗಳ ಹಿಂದೆ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ನಡೆದಿತ್ತು. ಇಬ್ಬರೂ ಸೊಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದರು.

ಗುರುವಾರ ತಡರಾತ್ರಿ ತೌಫೀಕ್‌ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಮೊಬೈಲ್‌ನಲ್ಲಿ ಮಾತನಾಡಿದ. ಈ ಸಂದರ್ಭ ರೇಷ್ಮಾ ಹತ್ತು ನಿಮಿಷ ಹೊರಗೋಗಿ ರೊಕ್ಕದ ವಿಷಯ ಮಾತನಾಡಿಕೊಂಡು ಬರುವೆ ಎಂದು ರಾತ್ರಿ 12 ಗಂಟೆಗೆ ಹೊರಹೋದರು. ಮನೆಗೆ ಮರಳಲಿಲ್ಲ.

ತೌಫೀಕ್‌ ಮನೆ ಬಳಿಯೇ ಬಂದು ರೇಷ್ಮಾ ಕರೆದೊಯ್ದು, ಕೊಲೆಗೈದು ಶವ ಬಿಸಾಕಿ ಹೋಗಿದ್ದಾನೆ’ ಎಂದು ರೇಷ್ಮಾ ಪತಿ ಖಾಜಾ ಬಂದೇನವಾಜ್ ಪಡೇಕನೂರ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲಿಯೋ ಕೊಲೆಗೈದು, ಶವವನ್ನು ಕೊಲ್ಹಾರ ಸೇತುವೆ ಕೆಳಭಾಗಕ್ಕೆ ತಂದು ಬಿಸಾಕಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆ ವರದಿ ಕೈ ಸೇರಿದ ಬಳಿಕ ಯಾವ ರೀತಿ ಸಾವಾಗಿದೆ ಎಂಬುದು ತಿಳಿಯಲಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ವರ್ಷಗಳ ಹಿಂದೊಮ್ಮೆ ತೌಫೀಕ್‌ ಪತ್ನಿ ರೇಷ್ಮಾ ಮನೆ ಬಳಿ ಬಂದು, ರಂಪಾಟ ನಡೆಸಿದ್ದಳು. ಪ್ರಕರಣ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದರೂ; ದೂರು ದಾಖಲಾಗಿರಲಿಲ್ಲ. ರಾಜಿ ನಡೆದಿತ್ತು’ ಎಂಬುದು ತಿಳಿದು ಬಂದಿದೆ.

ಕರ್ನಾಟಕ ರಕ್ಷಣಾ ವೇದಿಕೆ ಮೂಲಕ ಸಾಮಾಜಿಕ ಕ್ಷೇತ್ರ ಪ್ರವೇಶಿಸಿದ್ದ ರೇಷ್ಮಾ ಪಡೇಕನೂರ, ಜೆಡಿಎಸ್‌ ಮೂಲಕ ರಾಜಕೀಯ ಪ್ರವೇಶಿಸಿದ್ದರು. ಹಲ ವರ್ಷ ವಿಜಯಪುರ ಜಿಲ್ಲಾ ಜೆಡಿಎಸ್‌ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದರು. 2013ರಲ್ಲಿ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮುಖ್ಯಮಂತ್ರಿ ಎಚ್‌,ಡಿ.ಕುಮಾರಸ್ವಾಮಿ ಜತೆ ನೇರ ಸಂಪರ್ಕ ಹೊಂದಿದ್ದರು.

2018ರ ವಿಧಾನಸಭಾ ಚುನಾವಣೆ ಸಂದರ್ಭ ಜೆಡಿಎಸ್ ತೊರೆದು, ಗೃಹ ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ, ಸಿದ್ದರಾಮಯ್ಯ ಸಮ್ಮುಖ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಹೊಂದಿರಲಿಲ್ಲ. ಚುನಾವಣೆ ಸಂದರ್ಭ ಮಾತ್ರ ಸಕ್ರಿಯರಾಗಿದ್ದರು.

Post Comments (+)