‘ಜಯಶಾಲಿ’ಗಳ ಅಪರಾಧ ಚರಿತ್ರೆ

ಬುಧವಾರ, ಜೂನ್ 26, 2019
29 °C
ಕುಕೃತ್ಯ ಆರೋಪಗಳ ಬಗ್ಗೆ ಜಾಹೀರಾತು ಕೊಟ್ಟ ಅಭ್ಯರ್ಥಿಗಳ ಸಂಖ್ಯೆ ಎಷ್ಟು?

‘ಜಯಶಾಲಿ’ಗಳ ಅಪರಾಧ ಚರಿತ್ರೆ

Published:
Updated:
Prajavani

ದೇಶದ ಪಾಲಿಗೆ ಅತ್ಯಂತ ಮಹತ್ವದ್ದಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ 2018ರ ಸೆಪ್ಟೆಂಬರ್‌ನಲ್ಲಿ ನಡೆಸಿತ್ತು. ಆ ಹೊತ್ತಿನಲ್ಲಿ ಲೋಕಸಭೆಯ ಶೇಕಡ 33ರಷ್ಟು ಸದಸ್ಯರು ಕ್ರಿಮಿನಲ್‌ ಮೊಕದ್ದಮೆ ಎದುರಿಸುತ್ತಿದ್ದರು. ಆ ಮೊಕದ್ದಮೆಗಳಲ್ಲಿ ಕೊಲೆ, ಅತ್ಯಾಚಾರ, ಅಪಹರಣದಂತಹ ಗಂಭೀರ ಸ್ವರೂಪದವು ಹಲವು ಇದ್ದವು. ರಾಜಕೀಯದ ಅಪರಾಧೀಕರಣ ಹೆಚ್ಚದಂತೆ ಏನಾದರೂ ಮಾಡಬೇಕು ಎಂದು ಸುಪ್ರೀಂ ಕೋರ್ಟನ್ನು ಕೇಳಿಕೊಳ್ಳಲಾಗಿತ್ತು. ಕೋರ್ಟ್‌ ಯಾವ ಆದೇಶ ನೀಡಿತು ಎಂಬುದನ್ನು ನಂತರ ನೋಡೋಣ. ಆದರೆ, ಇಂದಿನ ಲೋಕಸಭೆಯ ಶೇಕಡ 43ರಷ್ಟು ಸದಸ್ಯರ ವಿರುದ್ಧ ಕ್ರಿಮಿನಲ್‌ ಆರೋಪಗಳಿವೆ ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳೋಣ.

ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವುದಕ್ಕೆ ಅಪಾಯ ಎದುರಾದಾಗ, ಅದನ್ನು ನಿಭಾಯಿಸಲು ಚುನಾವಣಾ ಆಯೋಗದ ಕೈಯಲ್ಲಿ ಯಾವುದೇ ಕಾನೂನು ಇಲ್ಲದಿದ್ದಾಗ, ಚುನಾವಣೆಯು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯಲು ಅಗತ್ಯವಿರುವ ಆದೇಶ ಹೊರಡಿಸಲು ಅಥವಾ ನಿಯಮ ರೂಪಿಸಲು ಸಂವಿಧಾನದ 324ನೇ ವಿಧಿಯು ಆಯೋಗಕ್ಕೆ ಅಧಿಕಾರ ನೀಡುತ್ತದೆ. ಮಾದರಿ ನೀತಿ ಸಂಹಿತೆ ಬಗ್ಗೆ ನಿಮಗೆ ತಿಳಿದಿರಲಿಕ್ಕೆ ಸಾಕು.

ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಐವತ್ತು ವರ್ಷಗಳವರೆಗೆ, ಶಾಸನಸಭೆಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ಹಿನ್ನೆಲೆ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ಇರುತ್ತಿರಲಿಲ್ಲ. ಆದರೆ, ಅಭ್ಯರ್ಥಿಗಳ ಕೆಲವು ಮಹತ್ವದ ಮಾಹಿತಿಯನ್ನು ತಿಳಿಯುವ ಸಾಂವಿಧಾನಿಕ ಮೂಲಭೂತ ಹಕ್ಕು ಮತದಾರರಿಗೆ ಇದೆ ಎಂದು 2002ರಲ್ಲಿ ಸುಪ್ರೀಂ ಕೋರ್ಟ್‌ ಹೇಳಿತು. ಅಭ್ಯರ್ಥಿಯ ಕ್ರಿಮಿನಲ್ ಹಿನ್ನೆಲೆ, ಅಭ್ಯರ್ಥಿಯ ಹಾಗೂ ಅಭ್ಯರ್ಥಿಯ ಪತ್ನಿ ಅಥವಾ ಪತಿಯ ಆಸ್ತಿ ವಿವರ, ಅಭ್ಯರ್ಥಿಯ ವಿದ್ಯಾರ್ಹತೆ ಇತ್ಯಾದಿ ವಿವರಗಳನ್ನು ಅಭ್ಯರ್ಥಿಗಳು ನಾಮಪತ್ರದ ಜೊತೆಯಲ್ಲೇ ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ನಿಯಮ ರೂಪಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿತು.

ಇಂಥದ್ದೊಂದು ನಿರ್ದೇಶನ ನೀಡಬಾರದು ಎಂದು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿತ್ತು. ಆದರೆ ಅದನ್ನು ಕೋರ್ಟ್‌ ನಿರ್ಲಕ್ಷಿಸಿತು. ತೀರ್ಪಿನ ನಂತರ ಜನಪ್ರತಿನಿಧಿ ಕಾಯ್ದೆ– 1951ಕ್ಕೆ ತಿದ್ದುಪಡಿ ತಂದ ಸಂಸತ್ತು, ತೀರ್ಪಿನ ಕೆಲವು ಅಂಶಗಳನ್ನು ಅಪ್ರಸ್ತುತಗೊಳಿಸಿತು. ಆದರೆ, ಈ ತಿದ್ದುಪಡಿಗಳನ್ನು ಕೋರ್ಟ್‌ ರದ್ದುಪಡಿಸಿತು. 2002ರ ತನ್ನ ತೀರ್ಪನ್ನು ಎತ್ತಿಹಿಡಿಯಿತು.

ಇದರ ಜೊತೆ ಸಾರ್ವಜನಿಕರಿಂದ ಒತ್ತಡವೂ ಇತ್ತಾದ ಕಾರಣ, ರಾಜಕೀಯದ ಅಪರಾಧೀಕರಣ ಕಡಿಮೆ ಮಾಡುವ ಬದ್ಧತೆ ತನ್ನಲ್ಲೂ ಇದೆ ಎಂಬುದನ್ನು ತೋರಿಸುವ ಅನಿವಾರ್ಯಕ್ಕೆ ಸರ್ಕಾರ ಸಿಲುಕಿತು. ಸುಪ್ರೀಂ ಕೋರ್ಟ್‌ ಹೇಳಿದ ವಿವರಗಳನ್ನು ಅಭ್ಯರ್ಥಿಗಳು ನಾಮಪತ್ರದ ಜೊತೆ ಸಲ್ಲಿಸಬೇಕು ಎಂದು ಕೆಲವು ನಿಯಮಗಳಲ್ಲಿ ಸರ್ಕಾರ ಮಾರ್ಪಾಡು ತಂದಿತು.

ಆದರೆ, ರಾಜಕೀಯದ ಅಪರಾಧೀಕರಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತಾನು 2002ರಲ್ಲಿ ನೀಡಿದ್ದ ತೀರ್ಪು ದೊಡ್ಡ ಪರಿಣಾಮ ಬೀರಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್‌ 2018ರ ಸೆಪ್ಟೆಂಬರ್‌ನಲ್ಲಿ ಕಂಡುಕೊಂಡಿತು. ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿಗಳು ಚುನಾವಣೆಗಳಲ್ಲಿ ಹಿಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂಬುದನ್ನು ಕೋರ್ಟ್‌ ಗುರುತಿಸಿತು. ‘ಕ್ರಿಮಿನಲ್‌ ಹಿನ್ನೆಲೆ ಇರುವ ವ್ಯಕ್ತಿಯು ನಾಮಪತ್ರದ ಜೊತೆ ಆ ಕುರಿತ ಮಾಹಿತಿ ನೀಡುವುದಷ್ಟೇ ಅಲ್ಲದೆ, ತನ್ನ ಕ್ರಿಮಿನಲ್ ಹಿನ್ನೆಲೆಯ ವಿವರವನ್ನು ತನ್ನ ಕ್ಷೇತ್ರದಲ್ಲಿ ವ್ಯಾಪಕ ಓದುಗರ ಸಂಖ್ಯೆ ಹೊಂದಿರುವ ಪತ್ರಿಕೆ ಹಾಗೂ ವ್ಯಾಪಕ ವೀಕ್ಷಕರ ಸಂಖ್ಯೆ ಹೊಂದಿರುವ ವಾಹಿನಿ ಮೂಲಕ ಜಾಹೀರುಪಡಿಸಬೇಕು’ ಎಂದು 2018ರ ಸೆಪ್ಟೆಂಬರ್‌ 25ರಂದು ನೀಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಹೇಳಿತು. ನಾಮಪತ್ರ ಸಲ್ಲಿಕೆಯ ದಿನದಿಂದ ಮತದಾನದ ದಿನದ ನಡುವೆ ಮೂರು ಬಾರಿ ಜಾಹೀರಾತು ನೀಡಬೇಕು ಎಂದು ಹೇಳಿತು. ಅಭ್ಯರ್ಥಿಯು ಒಂದು ರಾಜಕೀಯ ಪಕ್ಷದಿಂದ ಕಣಕ್ಕಿಳಿದಿದ್ದರೆ, ಆ ಪಕ್ಷ ಕೂಡ ಜಾಹೀರಾತು ನೀಡಬೇಕು ಎಂದು ಕೋರ್ಟ್‌ ಹೇಳಿತು. ಈ ತೀರ್ಪನ್ನು ಮಾಧ್ಯಮಗಳು ವಿಸ್ತೃತವಾಗಿ ವರದಿ ಮಾಡಿದವು, ಸಾರ್ವಜನಿಕವಾಗಿ ಇದರ ಬಗ್ಗೆ ಚರ್ಚೆಗಳೂ ನಡೆದವು.

ಜಾಹೀರಾತನ್ನು ಹೇಗೆ ನೀಡಬೇಕು ಎಂಬ ವಿವರವನ್ನು ಚುನಾವಣಾ ಆಯೋಗವು 2018ರ ಅಕ್ಟೋಬರ್‌ನಲ್ಲಿ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಚುನಾವಣಾ ಅಧಿಕಾರಿಗಳಿಗೆ ರವಾನಿಸಿತು. ರಾಜ್ಯ ಹಾಗೂ ರಾಷ್ಟ್ರಮಟ್ಟದ ನೋಂದಾಯಿತ ರಾಜಕೀಯ ಪಕ್ಷಗಳಿಗೂ ಈ ಮಾಹಿತಿ ನೀಡಲಾಯಿತು.

2018ರ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ, ಮಿಜೋರಾಂ ಮತ್ತು ತೆಲಂಗಾಣ ವಿಧಾನಸಭೆಗಳಿಗೆ ನಡೆದ ಚುನಾವಣೆಗಳಲ್ಲಿ ಬಹುತೇಕ ಅಭ್ಯರ್ಥಿಗಳು ಈ ತೀರ್ಪನ್ನು ಪಾಲಿಸಲಿಲ್ಲ, ಯಾವ ಅಭ್ಯರ್ಥಿಯೂ ತನ್ನ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಜಾಹೀರಾತು ನೀಡಲಿಲ್ಲ. ಅದಾದ ನಂತರ, ಬಹುತೇಕರು ಈ ವಿಚಾರವಾಗಿ ಸಾರ್ವಜನಿಕವಾಗಿ ಮಾತನಾಡಲಿಲ್ಲ.

ಜಯ ಗಳಿಸಿದ ಅಭ್ಯರ್ಥಿಯೊಬ್ಬ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದರೆ, ಆತ ಅದನ್ನು ಸುಪ್ರೀಂ ಕೋರ್ಟ್‌ ನಿರ್ದೇಶನದ ಅನುಸಾರ ಜಾಹೀರುಪಡಿಸದೆ ಇದ್ದರೆ, ಆ ಅಭ್ಯರ್ಥಿಯ ಕ್ಷೇತ್ರದ ಯಾವುದೇ ಮತದಾರ ಹೈಕೋರ್ಟ್‌ನಲ್ಲಿ ಅದನ್ನು ಪ್ರಶ್ನಿಸಬಹುದು. ಅಭ್ಯರ್ಥಿಯ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೇಳಿಕೊಳ್ಳಬಹುದು. ಇಂತಹ ಅರ್ಜಿಗಳು ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 100(1)(ಡಿ)(5)ರ ಅಡಿ ಬರುತ್ತವೆ. ಆದರೆ, ಅಭ್ಯರ್ಥಿಯ ಆಯ್ಕೆಯನ್ನು ಪ್ರಶ್ನಿಸುವ ಇಂತಹ ಅರ್ಜಿಗಳನ್ನು ಫಲಿತಾಂಶ ಘೋಷಣೆಯಾದ 45 ದಿನಗಳ ಒಳಗೆ ಮಾತ್ರ ಸಲ್ಲಿಸಬಹುದು. ಇಂತಹ ಚುನಾವಣಾ ಅರ್ಜಿಗಳು ಗೆಲುವು ಕಾಣುವ ಸಾಧ್ಯತೆ ಹೆಚ್ಚಿರುತ್ತವೆ. ಏಕೆಂದರೆ, ಸುಪ್ರೀಂ ಕೋರ್ಟ್‌ ನಿರ್ದೇಶನವನ್ನು ಉಲ್ಲಂಘಿಸಿದ ನಂತರವೂ ತಾನು ಜಯಶಾಲಿ ಎಂದು ಯಾವುದೇ ಅಭ್ಯರ್ಥಿ ಹೇಳಿಕೊಳ್ಳುವುದನ್ನು ನ್ಯಾಯಾಂಗ ಮಾನ್ಯ ಮಾಡಲಿಕ್ಕಿಲ್ಲ– ಹಾಗೆ ಊಹಿಸಲಿಕ್ಕೂ ಸಾಧ್ಯವಿಲ್ಲ.

ಪರಾಜಿತ ಅಭ್ಯರ್ಥಿಗಳಲ್ಲಿ ಅತಿಹೆಚ್ಚಿನ ಮತ ಪಡೆದ, ಕ್ರಿಮಿನಲ್ ಹಿನ್ನೆಲೆ ಹೊಂದಿರದ ಅಭ್ಯರ್ಥಿ ಕೂಡ ಇಂತಹ ಚುನಾವಣಾ ಅರ್ಜಿ ಸಲ್ಲಿಸಬಹುದು. ‘ಇಡೀ ಚುನಾವಣೆಯನ್ನೇ ಅಸಿಂಧುಗೊಳಿಸುವ ಬದಲು, ನಿರ್ದೇಶನ ಪಾಲಿಸದ ಅಭ್ಯರ್ಥಿಯ ಆಯ್ಕೆಯನ್ನು ಮಾತ್ರ ಅಸಿಂಧುಗೊಳಿಸಿ, ತನ್ನನ್ನು ಜಯಶಾಲಿ ಎಂದು ಘೋಷಿಸಬೇಕು’ ಎಂಬ ಕೋರಿಕೆ ಇಡಬಹುದು.

ಈಗಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣದ ರಾಜ್ಯಗಳಲ್ಲಿ ಜಯಶಾಲಿಗಳಾದ ಅಭ್ಯರ್ಥಿಗಳ ಪೈಕಿ ಎಷ್ಟು ಜನರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ ಎಂಬುದನ್ನು ಒಮ್ಮೆ ನೋಡೋಣ. ಕರ್ನಾಟಕ: 10 ಜನ (ಅಷ್ಟೂ ಜನ ಬಿಜೆಪಿಯವರು). ಕೇರಳ: 17 ಜನ (ಇವರಲ್ಲಿ ಕಾಂಗ್ರೆಸ್ಸಿನ 14, ಮೂವರು ಇತರರು ಇದ್ದಾರೆ). ತಮಿಳುನಾಡು: 16 ಜನ (ಡಿಎಂಕೆಯ 11, ಐವರು ಇತರರು). ಆಂಧ್ರಪ್ರದೇಶ: 11 ಜನ (ವೈಎಸ್‌ಆರ್‌ಪಿಯ 10 ಹಾಗೂ ಒಬ್ಬ ಇತರ). ತೆಲಂಗಾಣ: 10 ಜನ (ಬಿಜೆಪಿ, ಟಿಆರ್‌ಎಸ್‌ ಹಾಗೂ ಕಾಂಗ್ರೆಸ್ಸಿನ ತಲಾ ಮೂವರು, ಒಬ್ಬ ಇತರ). ಒಟ್ಟಿನಲ್ಲಿ ಹೇಳುವುದಾದರೆ, ಈಗಿನ ಲೋಕಸಭೆಯ 233 ಸದಸ್ಯರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ. ಇವರಲ್ಲಿ ಬಿಜೆಪಿ ಸಂಸದರ ಸಂಖ್ಯೆ 116.

ರಾಜಕೀಯದ ಅಪರಾಧೀಕರಣ ತಡೆಯಲು ಸುಪ್ರೀಂ ಕೋರ್ಟ್‌ ತೀರ್ಪು ನೀಡಿ ಆಗಿದೆ. ಸುಪ್ರೀಂ ಕೋರ್ಟ್‌ನ ಈ ಮಹತ್ವದ ತೀರ್ಪನ್ನು ಉಲ್ಲಂಘಿಸಿಯೂ ಅಭ್ಯರ್ಥಿಯೊಬ್ಬ ‘ಜಯಶಾಲಿ’ ಎಂದೇ ಕರೆಸಿಕೊಳ್ಳುತ್ತಾನೆಯೇ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

ಲೇಖಕ: ಸುಪ್ರೀಂ ಕೋರ್ಟ್‌ನಲ್ಲಿ ವಕೀಲ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !