ಇಂಗ್ಲಿಷ್‌ ಮಾಧ್ಯಮ ಶಾಲೆಗೆ ಡಿಸಿಎಂ ಬೆಂಬಲ

7

ಇಂಗ್ಲಿಷ್‌ ಮಾಧ್ಯಮ ಶಾಲೆಗೆ ಡಿಸಿಎಂ ಬೆಂಬಲ

Published:
Updated:

ಬೆಂಗಳೂರು: ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದರೆ, ಅದೇ ಪಕ್ಷವನ್ನು ಪ್ರತಿನಿಧಿಸುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅವರು, ಸರ್ಕಾರದ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. 

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ‘ನಮ್ಮ ಪಕ್ಷದವರು ನೂರು ಅಭಿಪ್ರಾಯ ಹೇಳಬಹುದು. ನನ್ನ ವೈಯಕ್ತಿಕ ಅಭಿಪ್ರಾಯವೂ ಬೇರೆಯೇ ಇರಬಹುದು. ಆದರೆ, ಇದು ಸರ್ಕಾರದ ನಿಲುವು. ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗಳನ್ನು ಆರಂಭಿಸಲಾಗುವುದು’ ಎಂದರು. 

‘ಅಭಿವೃದ್ಧಿಪರ ಗುರಿ ಹೊಂದಿರುವ ರಾಜ್ಯದ ಮಕ್ಕಳು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿರಬೇಕು. ಆ ಮಟ್ಟ ತಲುಪಬೇಕಾದರೆ ಇಂಗ್ಲಿಷ್‌ ಮಾಧ್ಯಮ ಅನಿವಾರ್ಯ. ಹಾಗೆಂದು ಕನ್ನಡ ಭಾಷೆಯನ್ನು ಕಡೆಗಣಿಸುವುದಿಲ್ಲ. ಇಂಗ್ಲಿಷ್‌ ಜತೆಗೇ ಕನ್ನಡ ಭಾಷೆಯನ್ನೂ ಬೋಧಿಸಲಾಗುತ್ತದೆ. ಸ್ಥಳೀಯ ಭಾಷೆಯನ್ನು ರಕ್ಷಿಸಿಕೊಂಡೇ ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧನೆ ನಡೆಸಲಾಗುತ್ತದೆ’ ಎಂದು ಅವರು ಹೇಳಿದರು.

‘ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ವಿಜ್ಞಾನ ಕೇಂದ್ರ ತೆರೆಯಲಾಗುವುದು’ ಎಂದೂ ಅವರು ಇದೇ ವೇಳೆ ಹೇಳಿದರು. 

ಸಾವಿರ ಶಾಲೆಗಳಲ್ಲಿ ಪ್ರಾಯೋಗಿಕ ಅನುಷ್ಠಾನ: ರಾಜ್ಯದ 1 ಸಾವಿರ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧನೆ ಆರಂಭಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ.ಜಾಫರ್‌ ಹೇಳಿದರು. 

‘ಪ್ರಾದೇಶಿಕ ಇಂಗ್ಲಿಷ್‌ ಸಂಸ್ಥೆ ಸಹಯೋಗದಲ್ಲಿ ರಾಜ್ಯದ 13 ಸಾವಿರ ಶಿಕ್ಷಕರಿಗೆ ಸ್ಪೋಕನ್‌ ಇಂಗ್ಲಿಷ್‌, ವ್ಯಾಕರಣ ತರಬೇತಿಯನ್ನು 30 ದಿನಗಳ ಕಾಲ ನೀಡಲಾಗಿದೆ. ಮುಂದೆ ಯಾವ ರೀತಿ ತರಬೇತಿ ನೀಡಬೇಕು’ ಎಂಬ ಬಗ್ಗೆ ಸಮಗ್ರವಾದ ರೂಪುರೇಷೆ ಮಾಡಿ ನಿರ್ಧರಿಸಲಾಗುವುದು ಎಂದು ಜಾಫರ್ ಹೇಳಿದರು.

ನಿರ್ಣಯಕ್ಕೆ ಎಚ್.ಡಿ. ರೇವಣ್ಣ ಕಿಡಿ

ಬೆಂಗಳೂರು: ಇಂಗ್ಲಿಷ್‌ ಮಾಧ್ಯಮ ಆರಂಭಿಸುವ ಸರ್ಕಾರದ ನಿಲುವು ವಿರೋಧಿಸಿ ಅಖಿಲ ಭಾರತ ಸಾಹಿತ್ಯ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯದ ವಿರುದ್ಧ ಸಚಿವ ಎಚ್.ಡಿ. ರೇವಣ್ಣ ಕಿಡಿಕಾರಿದರು.

‘ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತೇನೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಅವರು ತಿಳಿಸಿದರು.

‘ಇನ್ನೂ ಒಂದು ಸಾವಿರ ಇಂಗ್ಲಿಷ್‌ ಶಾಲೆಗಳನ್ನು ಆರಂಭಿಸುವುದಾದರೂ ನನ್ನ ಬೆಂಬಲ ಇದೆ. ಲೋಕೋಪಯೋಗಿ ಇಲಾಖೆ ಕಾಮಗಾರಿಗಳು ಸ್ಥಗಿತಗೊಂಡರೂ ಪರ್ವಾಗಿಲ್ಲ’ ಎಂದು ಏರುಧ್ವನಿಯಲ್ಲಿ ಹೇಳಿದರು.

‘ಬಡವರ ಮಕ್ಕಳಿಗೆ ಒಂದು ನ್ಯಾಯ,ಶ್ರೀಮಂತರ ಮಕ್ಕಳಿಗೆ ಒಂದು ನ್ಯಾಯ‌ ಏಕೆ. ಬೇಕಾದರೆ ರಾಜ್ಯದಲ್ಲಿರುವ ಎಲ್ಲ ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಮುಚ್ಚಿಸಿ ಬಿಡುವ ನಿರ್ಣಯವನ್ನು ಸಾಹಿತಿಗಳು ಕೈಗೊಳ್ಳಲಿ. ಇಲ್ಲವಾದರೆ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಅವಕಾಶ ನೀಡಬೇಕು’ ಎಂದರು.

‘ರೇವಣ್ಣನ ಮಕ್ಕಳು, ಮುಖ್ಯಮಂತ್ರಿ ಕುಮಾರಸ್ವಾಮಿ ಮಕ್ಕಳು, ಪರಮೇಶ್ವರ ಮಕ್ಕಳು ಇಂಗ್ಲಿಷ್‌ ಶಾಲೆಯಲ್ಲಿ ಕಲಿಯಬೇಕು. ಆದರೆ, ಬಡವರ ಮಕ್ಕಳು ಇಂಗ್ಲಿಷ್‌ ಶಾಲೆಯಲ್ಲಿ ಕಲಿಯಬಾರದಾ’ ಎಂದು ಕಿಡಿಕಾರಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !