ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಬಡವರಿಗೆ ಹೆಚ್ಚು ತೆರಿಗೆ

ಕಾರ್ಪೊರೇಟ್‌ ಕಂಪನಿಗಳಿಗೆ ತೆರಿಗೆ ಕಡಿತ, ಭತ್ಯೆ: ಆಕ್ಸ್‌ಫಾಮ್‌ ಅಧ್ಯಯನ ವರದಿ
Last Updated 16 ಜನವರಿ 2023, 21:03 IST
ಅಕ್ಷರ ಗಾತ್ರ

ದೇಶದಲ್ಲಿ ಈಗ ಇರುವ ತೆರಿಗೆ ಪದ್ಧತಿಯು ಪ್ರತಿಗಾಮಿ ಸ್ವರೂಪದ್ದು ಎಂದು ಆಕ್ಸ್‌ಫಾಮ್‌ ಆರೋಪಿಸಿದೆ. ‘ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಪೊರೇಟ್ ತೆರಿಗೆಯನ್ನು ಭಾರಿ ಪ್ರಮಾಣದಲ್ಲಿ ಕಡಿತ ಮಾಡಲಾಗಿದೆ. ಜತೆಗೆ ಕಾರ್ಪೊರೇಟ್‌ ಕಂಪನಿಗಳಿಗೆ ಹಲವು ಭತ್ಯೆ ಮತ್ತು ವಿನಾಯಿತಿಗಳನ್ನು ಘೋಷಿಸಲಾಗಿದೆ. 2020–21ನೇ ಆರ್ಥಿಕ ವರ್ಷದಲ್ಲಿ ತೆರಿಗೆ ಕಡಿತ ಮತ್ತು ಭತ್ಯೆಗಳ ಕಾರಣ ಸರ್ಕಾರದ ಬೊಕ್ಕಸಕ್ಕೆ ₹1.03 ಲಕ್ಷ ಕೋಟಿ ಖೋತಾ ಆಗಿದೆ. ನಷ್ಟವಾದ ಈ ಆದಾಯವನ್ನು ತುಂಬಿಸಿಕೊಳ್ಳಲು ಕೇಂದ್ರ ಸರ್ಕಾರವು ಜಿಎಸ್‌ಟಿ ಮತ್ತು ಇಂಧನಗಳ ಮೇಲಿನ ಮೌಲ್ಯವರ್ಧಿತ ತೆರಿಗೆಗಳ ದರವನ್ನು ಏರಿಕೆ ಮಾಡಿದೆ’ ಎಂದು ಆಕ್ಸ್‌ಫಾಮ್‌ ವಿಶ್ಲೇಷಿಸಿದೆ.

‘ಪ್ರತಿಗಾಮಿ ತೆರಿಗೆ ಪದ್ಧತಿ’
ದೇಶದಲ್ಲಿ ಈಗ ಇರುವ ತೆರಿಗೆ ಪದ್ಧತಿಯು ಪ್ರತಿಗಾಮಿ ಸ್ವರೂಪದ್ದು ಎಂದು ಆಕ್ಸ್‌ಫಾಮ್‌ ಆರೋಪಿಸಿದೆ. ‘ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಪೊರೇಟ್ ತೆರಿಗೆಯನ್ನು ಭಾರಿ ಪ್ರಮಾಣದಲ್ಲಿ ಕಡಿತ ಮಾಡಲಾಗಿದೆ. ಜತೆಗೆ ಕಾರ್ಪೊರೇಟ್‌ ಕಂಪನಿಗಳಿಗೆ ಹಲವು ಭತ್ಯೆ ಮತ್ತು ವಿನಾಯಿತಿಗಳನ್ನು ಘೋಷಿಸಲಾಗಿದೆ. 2020–21ನೇ ಆರ್ಥಿಕ ವರ್ಷದಲ್ಲಿ ತೆರಿಗೆ ಕಡಿತ ಮತ್ತು ಭತ್ಯೆಗಳ ಕಾರಣ ಸರ್ಕಾರದ ಬೊಕ್ಕಸಕ್ಕೆ ₹1.03 ಲಕ್ಷ ಕೋಟಿ ಖೋತಾ ಆಗಿದೆ. ನಷ್ಟವಾದ ಈ ಆದಾಯವನ್ನು ತುಂಬಿಸಿಕೊಳ್ಳಲು ಕೇಂದ್ರ ಸರ್ಕಾರವು ಜಿಎಸ್‌ಟಿ ಮತ್ತು ಇಂಧನಗಳ ಮೇಲಿನ ಮೌಲ್ಯವರ್ಧಿತ ತೆರಿಗೆಗಳ ದರವನ್ನು ಏರಿಕೆ ಮಾಡಿದೆ’ ಎಂದು ಆಕ್ಸ್‌ಫಾಮ್‌ ವಿಶ್ಲೇಷಿಸಿದೆ.

ಇಂತಹ ಆರೋಪಗಳನ್ನು ಸರ್ಕಾರ ನಿರಾಕರಿಸುತ್ತಲೇ ಬಂದಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈಚೆಗಷ್ಟೇ, ‘ನಾನೂ ಮಧ್ಯಮ ವರ್ಗದಿಂದ ಬಂದವಳು, ಈ ವರ್ಗದ ಕಷ್ಟಗಳನ್ನು ಅರ್ಥಮಾಡಿಕೊಳ್ಳಬಲ್ಲೆ. ಹೀಗಾಗಿಯೇ ಈ ವರ್ಗದ ಮೇಲೆ ನಮ್ಮ ಸರ್ಕಾರವು ಹೊಸ ತೆರಿಗೆಗಳನ್ನು ಹೇರಿಲ್ಲ’ ಎಂದು ಹೇಳಿದ್ದರು. ಆದಾಯ ತೆರಿಗೆಯನ್ನು ಮಾತ್ರ ಗುರಿಯಾಗಿಸಿಕೊಂಡು ಅವರು ಈ ಮಾತು ಹೇಳಿದ್ದರು. ಆದರೆ, ‘ಪರೋಕ್ಷ ತೆರಿಗೆಗಳು ಏರಿಕೆ ಗತಿಯಲ್ಲೇ ಇವೆ’ ಎಂದು ಆಕ್ಸ್‌ಫಾಮ್‌ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

‘ಕಾರ್ಪೊರೇಟ್‌ ತೆರಿಗೆ ಕಡಿತದ ಪರಿಣಾಮವಾಗಿ, 2020–21ನೇ ಸಾಲಿನಲ್ಲಿ ಸಂಗ್ರಹವಾದ ಕಾರ್ಪೊರೇಟ್‌ ತೆರಿಗೆಯ ಒಟ್ಟು ಮೊತ್ತದಲ್ಲಿ ಶೇ 8ರಷ್ಟು ಇಳಿಕೆಯಾಗಿದೆ. ಅದೇ ವರ್ಷ ಸಂಗ್ರಹವಾದ ನೇರ ತೆರಿಗೆಯ ಒಟ್ಟು ಮೊತ್ತದಲ್ಲಿ ಶೇ 5ರಷ್ಟು ಇಳಿಕೆಯಾಗಿದೆ. ಆ ವರ್ಷದ ಬಜೆಟ್‌ನ ಒಟ್ಟು ಮೊತ್ತದಲ್ಲಿ ಖೋತಾ ಆದ ತೆರಿಗೆ ಆದಾಯದ ಪ್ರಮಾಣ ಶೇ 2.8ರಷ್ಟು. ಆದರೆ, ಕಾರ್ಪೊರೇಟ್‌ ತೆರಿಗೆ ಹೆಚ್ಚಿಸುವ ಬಗ್ಗೆ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಬದಲಿಗೆ ಪರೋಕ್ಷ ತೆರಿಗೆಯನ್ನು ಹೆಚ್ಚಿಸುವ ಮೂಲಕ ತನ್ನ ಆದಾಯವನ್ನು ಭದ್ರಪಡಿಸಿಕೊಳ್ಳುವತ್ತ ಗಮನ ಕೇಂದ್ರೀಕರಿಸಿದೆ’ ಎಂದು ಆಕ್ಸ್‌ಫಾಮ್‌ ತನ್ನ ವರದಿಯಲ್ಲಿ ವಿಶ್ಲೇಷಿಸಿದೆ.

ಕಾರ್ಪೊರೇಟ್‌ ತೆರಿಗೆ ಕಡಿತದಿಂದ ದೇಶದಲ್ಲಿ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ಹೆಚ್ಚಾಗುತ್ತದೆ. ತೆರಿಗೆಯನ್ನು ವಿಧಿಸಿದರೆ ಅದರಿಂದ ಆರ್ಥಿಕತೆಗೆ ಧಕ್ಕೆಯಾಗುತ್ತದೆ ಎಂಬ ವಾದವನ್ನು ಮುಂದಿಟ್ಟು, ತೆರಿಗೆ ಕಡಿತ ಮಾಡಲಾಗುತ್ತಿದೆ. ಕಾರ್ಪೊರೇಟ್‌ ತೆರಿಗೆ ಹೇರದೇ ಇರುವುದಕ್ಕೂ ಇದೇ ವಾದವನ್ನು ಮುಂದಿರಿಸಲಾಗುತ್ತಿದೆ. ಆದರೆ, ಇದೇ ಸಂದರ್ಭದಲ್ಲಿ ಬಡವರು ಮತ್ತು ಕೆಳ ಮಧ್ಯಮ ವರ್ಗದವರು ನಿತ್ಯಬಳಕೆಯ ವಸ್ತು ಮತ್ತು ಪದಾರ್ಥಗಳ ಮೇಲೆ ಹೆಚ್ಚಿನ ದರದ ಜಿಎಸ್‌ಟಿ ತೆರಬೇಕಾಗಿದೆ. ತಮ್ಮ ದುಡಿಮೆಯ ಹೆಚ್ಚಿನ ಭಾಗವನ್ನು ಈ ರೀತಿ ತೆರಿಗೆ ಪಾವತಿಸಲೇ ಈ ವರ್ಗವು ಬಳಸುತ್ತಿದೆ. ಇದರಿಂದ ಈ ಜನರ ವೆಚ್ಚದ ಸಾಮರ್ಥ್ಯ ಇಳಿಕೆಯಾಗಿದೆ. ಪರಿಣಾಮವಾಗಿ ಆರ್ಥಿಕ ಚಟುವಟಿಕೆಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಈ ತೆರಿಗೆ ಪದ್ಧತಿಯು ದೇಶದ ಆರ್ಥಿಕತೆಗೆ ಪ್ರತಿಕೂಲವಾಗಿ ಪರಿಣಮಿಸಿದೆ’ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಸಂಪತ್ತಿನ ಅಸಮಾನ ಹಂಚಿಕೆ
ದೇಶದ ಒಟ್ಟು ಜನಸಂಖ್ಯೆಯ ಶೇ 1ರಷ್ಟಿರುವ ಅತಿಶ್ರೀಮಂತರ ಬಳಿ ದೇಶದ ಒಟ್ಟು ಸಂಪತ್ತಿನ ಶೇ 40ರಷ್ಟು ಸಂಪತ್ತು ಇದೆ. ಆದರೆ, 70 ಕೋಟಿಗೂ ಹೆಚ್ಚು ಜನರಿರುವ ಬಡವ ಮತ್ತು ಕೆಳಮಧ್ಯಮ ವರ್ಗದ ಬಳಿ ಇರುವ ಸಂಪತ್ತು, ದೇಶದ ಒಟ್ಟು ಸಂಪತ್ತಿನ ಶೇ 3ರಷ್ಟಾಗುತ್ತದೆ. ಈಚಿನ ವರ್ಷಗಳಲ್ಲಿ ಈ ಅಂತರ ಹೆಚ್ಚಾಗುತ್ತಲೇ ಬಂದಿದೆ. ದೇಶದ ಒಟ್ಟು ಜನಸಂಖ್ಯೆಯ ಶೇ 50ರಷ್ಟಿರುವ ಬಡವರು ಮತ್ತು ಕೆಳಮಧ್ಯಮ ವರ್ಗದ ಜನರ ವಾರ್ಷಿಕ ಆದಾಯವು 2020–21ರಲ್ಲಿ, ದೇಶದ ಒಟ್ಟು ಆದಾಯದ ಶೇ 13ರಷ್ಟಕ್ಕೆ ಕುಸಿದಿತ್ತು. 2019–20ರಲ್ಲಿ ಈ ಪ್ರಮಾಣವು ಶೇ 16ರಷ್ಟಿತ್ತು. ಅದಕ್ಕೂ ಹಿಂದಿನ ವರ್ಷಗಳಲ್ಲಿ ಈ ಪ್ರಮಾಣವು ಹೆಚ್ಚೇ ಇತ್ತು. ಅತಿಶ್ರೀಮಂತರ ಪರವಾದ ತೆರಿಗೆ ನೀತಿಯ ಪರಿಣಾಮವಾಗಿ ಈ ಜನರ ಆದಾಯ ಇಳಿಕೆಯಾಗುತ್ತಲೇ ಇದೆ. ಪರಿಣಾಮವಾಗಿ ದೇಶದ ಒಟ್ಟು ಸಂಪತ್ತಿನಲ್ಲಿ ಈ ಜನರ ಸಂಪತ್ತಿನ ಪಾಲು ಕುಸಿಯುತ್ತಿದೆ. ಇದೇ ಸಂದರ್ಭದಲ್ಲಿ ಅತಿಶ್ರೀಮಂತರ ಪಾಲು ಏರಿಕೆಯಾಗುತ್ತಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಜಿಎಸ್‌ಟಿ ಹೊರೆ ಬಡವರ ಮೇಲೆ
ದೇಶದಲ್ಲಿ ಜಿಎಸ್‌ಟಿ ಸ್ವರೂಪದ ಪರೋಕ್ಷ ತೆರಿಗೆಯಿಂದ ಸಂಗ್ರಹವಾಗುವ ಆದಾಯ ಹೆಚ್ಚು. 2021–22ನೇ ಆರ್ಥಿಕ ವರ್ಷದಲ್ಲಿ ಜಿಎಸ್‌ಟಿಯಿಂದ ಒಟ್ಟು ₹ 14.83 ಲಕ್ಷ ಕೋಟಿಯಷ್ಟು ತೆರಿಗೆ ಸಂಗ್ರಹವಾಗಿದೆ. ಆದರೆ, ಇದರಲ್ಲಿ ಹೆಚ್ಚು ತೆರಿಗೆ ಪಾವತಿಸಿರುವುದು ಸಂಪತ್ತಿನ ಹಂಚಿಕೆ ಪಿರಮಿಡ್‌ನಲ್ಲಿ ತಳದಲ್ಲಿರುವ ಶೇ 50ರಷ್ಟು ಮಂದಿ. ಕಡಿಮೆ ಸಂಪತ್ತು ಹೊಂದಿರುವ ಮತ್ತು ಕಡಿಮೆ ಆದಾಯ ಹೊಂದಿರುವ ಜನವರ್ಗವು ತನ್ನ ಗಳಿಕೆಯ ದೊಡ್ಡ ಭಾಗವನ್ನು ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸುತ್ತಿದೆ.

ಆದರೆ ದೇಶದ ಶೇ 10ರಷ್ಟಿರುವ ಅತಿಶ್ರೀಮಂತರು ಜಿಎಸ್‌ಟಿ ರೂಪದಲ್ಲಿ ಪಾವತಿಸಿದ ತೆರಿಗೆ ಪ್ರಮಾಣ ಶೇ 3ರಷ್ಟು ಮಾತ್ರ. ಈ ವರ್ಗವು ಕಡಿಮೆ ಪ್ರಮಾಣದ ತೆರಿಗೆ ಪಾವತಿಸುತ್ತಿರುವ ಕಾರಣ, ಅವರ ಸಂಪತ್ತು ಏರಿಕೆಯಾಗುತ್ತಲೇ ಇದೆ. ಬಡವರು ಹೆಚ್ಚು ತೆರಿಗೆ ಪಾವತಿ ಮಾಡುತ್ತಿರುವ ಕಾರಣ, ಅವರ ಸಂಪತ್ತು ಏರಿಕೆಯಾಗುತ್ತಿಲ್ಲ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಅಸಮಾನತೆ ಹೆಚ್ಚಳ
ಭಾರತದಲ್ಲಿ ಅಸಮಾನತೆ ಹೆಚ್ಚುತ್ತಲೇ ಇದೆ ಎಂಬುದನ್ನು ಸರ್ಕಾರ ಸಿದ್ಧಪಡಿಸಿದ ವರದಿಗಳೇ ಹೇಳಿವೆ. ಪರಿಣತರು ಕೂಡ ಅದನ್ನೇ ಹೇಳಿದ್ದಾರೆ. ಸಮಾಜದ ಶೋಷಿತ ವರ್ಗಗಳ ಮೇಲೆ ಈ ಅಸಮಾನತೆಯ ಪರಿಣಾಮ ಹೆಚ್ಚು. ವಿಶೇಷವಾಗಿ ಪರಿಶಿಷ್ಟ ಪಂಗಡಗಳ ಜನರು ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ. ಬಡತನವನ್ನು ತೊಡೆದು ಶ್ರೀಮಂತಿಕೆಯತ್ತ ಸಾಗಲು ಇವರಿಗೆ ಸಾಧ್ಯವಾಗುತ್ತಿಲ್ಲ. ಜಾತಿ ವ್ಯವಸ್ಥೆಗೆ ಅನುಗುಣವಾಗಿಯೇ ಸಂಪತ್ತು ಕ್ರೋಡೀಕರಣವಾಗುತ್ತಿದೆ. ಚಾರಿತ್ರಿಕವಾಗಿ ಹಿಂದುಳಿದವರು ಹಿಂದೆಯೇ ಉಳಿಯುವಂತೆ ಆಗಿದೆ ಎಂದು ಆಕ್ಸ್‌ಫಾಮ್‌ ವರದಿಯು ಹೇಳಿದೆ.

* ಸಂಪತ್ತಿನ ಹಂಚಿಕೆಯ ಪಿರಮಿಡ್‌ನ ತಳಭಾಗದಲ್ಲಿರುವ ಶೇ 50ರಷ್ಟು ಮಂದಿ ಕೋವಿಡ್‌ ಸಾಂಕ್ರಾಮಿಕದ ಬಳಿಕ ಸಂಪತ್ತು ನಷ್ಟ ಮಾಡಿಕೊಂಡಿದ್ದಾರೆ. ದೇಶದಲ್ಲಿನ ಬಡವರ ಸಂಖ್ಯೆ 22.89 ಕೋಟಿ
* ದೇಶದ ಅತಿ ಶ್ರೀಮಂತ 100 ಜನರ ಸಂಪತ್ತಿನ ಮೌಲ್ಯವು ₹54.12 ಲಕ್ಷ ಕೋಟಿಯಷ್ಟಿದೆ
* ಅತಿ ಶ್ರೀಮಂತ 10 ಜನರ ಸಂಪತ್ತು ₹27.52 ಕೋಟಿಯಷ್ಟಿದೆ

ಅತಿಶ್ರೀಮಂತರ ಮೇಲೆ ತೆರಿಗೆ ವಿಧಿಸಿ: ಆಕ್ಸ್‌ಫಾಮ್‌
ದೇಶದಲ್ಲಿ 2016ರ ನಂತರ ಸಂಪತ್ತು ತೆರಿಗೆಯನ್ನು ಕೈಬಿಡಲಾಗಿದೆ. ಬದಲಿಗೆ ಕೆಲವಾರು ಸ್ವರೂಪದ ಸಂಪತ್ತುಗಳಿಗೆ ಮಾತ್ರ ಅಲ್ಪ ಪ್ರಮಾಣದ ತೆರಿಗೆ ವಿಧಿಸಲಾಗುತ್ತಿದೆ. ದೇಶದ ಅತಿಶ್ರೀಮಂತರ ಸಂಪತ್ತಿನ ಮೇಲೆ ಅಲ್ಪ ಪ್ರಮಾಣದ ತೆರಿಗೆ ವಿಧಿಸಿದರೂ, ಸರ್ಕಾರದ ತೆರಿಗೆ ಆದಾಯ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಆಕ್ಸ್‌ಫಾಮ್‌ ಅಭಿಪ್ರಾಯಪಟ್ಟಿದೆ.

* 2017–2021ರ ನಡುವೆ ಉದ್ಯಮಿ ಗೌತಮ್ ಅದಾನಿ ಅವರಿಗೆ ದೊರೆತಿರುವ ತೆರಿಗೆ ವಿನಾಯಿತಿ ಮತ್ತು ವಿವಿಧ ನೆರವುಗಳ ಮೊತ್ತ ₹1.79 ಲಕ್ಷ ಕೋಟಿಯಷ್ಟಾಗುತ್ತದೆ. ಇಷ್ಟು ತೆರಿಗೆ ಸಂಗ್ರಹವಾಗಿದ್ದರೆ, ದೇಶದ ಪ್ರಾಥಮಿಕ ಶಾಲೆಗಳ 50 ಲಕ್ಷಕ್ಕೂ ಹೆಚ್ಚು ಶಿಕ್ಷಕರಿಗೆ ಒಂದು ವರ್ಷದಷ್ಟು ವೇತನ ನೀಡಬಹುದಾಗಿತ್ತು

* ದೇಶದ ಅತಿಶ್ರೀಮಂತ ಶೇ 10ರಷ್ಟು ಮಂದಿಯ ಸಂಪತ್ತಿನ ಮೇಲೆ ಶೇ 5ರಷ್ಟು ಒಂದು ಬಾರಿಯ ತೆರಿಗೆ ವಿಧಿಸಿದರೆ ₹1.37 ಲಕ್ಷ ಕೋಟಿ ಸಂಗ್ರಹವಾಗುತ್ತದೆ. ದೇಶದ ಆರೋಗ್ಯ ಸಚಿವಾಲಯದ ವಾರ್ಷಿಕ ಬಜೆಟ್‌ (₹86,200 ಕೋಟಿ) ಮತ್ತು ಆಯುಷ್ ಇಲಾಖೆಯ (ಒಟ್ಟು ₹3,050 ಕೋಟಿ) ಬಜೆಟ್‌ ಮೊತ್ತವನ್ನು ಭರಿಸಿ, ಇನ್ನೂ ಆರು ತಿಂಗಳ ವೆಚ್ಚವನ್ನು ಭರಿಸಬಹುದಾಗಿದೆ

* ದೇಶದ ಮೊದಲ 100 ಅತಿ ಶ್ರೀಮಂತರ ಸಂಪತ್ತಿನ ಮೇಲೆ ಶೇ 2.5ರಷ್ಟು ತೆರಿಗೆ ವಿಧಿಸಿದರೆ, ದೇಶದ ಸರ್ವಶಿಕ್ಷಣ ಅಭಿಯಾನಕ್ಕೆ ಅಗತ್ಯವಿರುವ ಒಂದು ವರ್ಷದ ವೆಚ್ಚವನ್ನು ಭರಿಸಬಹುದು

* ದೇಶದ ಎಲ್ಲಾ ಅತಿಶ್ರೀಮಂತರ ಸಂಪತ್ತಿನ ಮೇಲೆ ಶೇ 3ರಷ್ಟು ತೆರಿಗೆ ವಿಧಿಸಿದರೆ, ದೇಶದ ರಾಷ್ಟ್ರೀಯ ಆರೋಗ್ಯ ಮಿಷನ್‌ಗೆ ಐದು ವರ್ಷಗಳಿಗೆ ಅಗತ್ಯವಿರುವಷ್ಟು ಮೊತ್ತವನ್ನು ಸಂಗ್ರಹಿಸಬಹುದು

ಸಿರಿವಂತಿಕೆ ಏರಿಕೆ ಬಗೆ
ಭಾರತದಲ್ಲಿ ಸಿರಿವಂತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಸಿರಿವಂತರೇ ಮತ್ತೆ ಸಿರಿವಂತರಾಗುತ್ತಿದ್ದಾರೆ ಹಾಗೂ ಸಿರಿವಂತರ ಬಳಗಕ್ಕೆ ಇನ್ನಷ್ಟು ಜನ ಸೇರ್ಪಡೆಯಾಗುತ್ತಿದ್ದಾರೆ. 2020ರಲ್ಲಿ 102 ಜನರು 100 ಕೋಟಿ ಡಾಲರ್‌ಗಿಂತಲೂ (₹8,200 ಕೋಟಿ) ಅಧಿಕ ಸಂಪತ್ತು ಹೊಂದಿದ್ದರು. ಇವರ ಸಂಖ್ಯೆ ಕೇವಲ 2 ವರ್ಷಗಳಲ್ಲಿ 162ಕ್ಕೆ ಏರಿಕೆಯಾಗಿದೆ. 60 ಹೊಸ ಶ್ರೀಮಂತರು ಎರಡು ವರ್ಷಗಳ ಅವಧಿಯಲ್ಲಿ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಕೋವಿಡ್ ನಂತರದ ವರ್ಷಗಳಲ್ಲಿ ಆಗಿರುವ ಈ ಬೆಳವಣಿಗೆಯ ಮೇಲೆ ಆಕ್ಸ್‌ಫಾಮ್ ವರದಿ ಬೆಳಕು ಚೆಲ್ಲಿದೆ.

ಭಾರತದ ಅಗ್ರ 100 ಕೋಟ್ಯಧೀಶರ ಒಟ್ಟು ಸಂಪತ್ತಿನ ಮೌಲ್ಯ ₹54.12 ಲಕ್ಷ ಕೋಟಿಗೆ ತಲುಪಿದೆ. 100 ಶ್ರೀಮಂತರ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನದಲ್ಲಿರುವ ಶ್ರೀಮಂತರ ಒಟ್ಟು ಆಸ್ತಿ ಮೌಲ್ಯವೇ ₹27.52 ಲಕ್ಷ ಕೋಟಿಯಷ್ಟಿದೆ. 2021ಕ್ಕೆ ಹೋಲಿಸಿದರೆ, ಒಂದು ವರ್ಷದ ಅವಧಿಯಲ್ಲಿ ಈ ಸಂಪತ್ತಿನ ಮೌಲ್ಯ ಶೇ 32.8ರಷ್ಟು ಜಿಗಿದಿದೆ ಎಂದು ವರದಿ ಹೇಳಿದೆ.

ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಬಾಧಿಸಿದ್ದ ಅವಧಿಯಲ್ಲಿ ಜನಸಾಮಾನ್ಯರು ಚಿಕಿತ್ಸೆ, ಔಷಧಿ ಹಾಗೂ ಹೊತ್ತಿನ ಊಟಕ್ಕೂ ಪರದಾಡಿದ್ದರು. ಇದಕ್ಕೆ ವ್ಯತಿರಿಕ್ತವೆಂಬಂತೆ, ಶ್ರೀಮಂತರ ಆಸ್ತಿ ಬೆಟ್ಟದಂತೆ ಬೆಳೆಯುತ್ತಲೇ ಇತ್ತು. ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಮೊದಲ ಸ್ಥಾನದಲ್ಲಿರುವ, ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಅವರ ಆಸ್ತಿಯ ಪ್ರಮಾಣವು ಕೋವಿಡ್ ಅವಧಿಯಲ್ಲಿ ಎಂಟು ಪಟ್ಟು ಹೆಚ್ಚಳವಾಗಿದೆ. ಒಂದೇ ವರ್ಷದ ಅವಧಿಯಲ್ಲಿ ಇವರ ಆಸ್ತಿ ಮೌಲ್ಯವು ಮತ್ತೆ ಒಂದು ಪಟ್ಟು ಜಿಗಿಯಿತು. 2022ರ ಅಕ್ಟೋಬರ್ ವೇಳೆಗೆ ಅದು ₹10.96 ಲಕ್ಷ ಕೋಟಿ ತಲುಪಿತು. ಅದುವರೆಗೂ ಶ್ರೀಮಂತರಲ್ಲಿ ಮೊದಲಿಗರಾಗಿದ್ದ ಮುಕೇಶ್ ಅಂಬಾನಿ ಸ್ಥಾನವನ್ನು ಅದಾನಿ ಗಿಟ್ಟಿಸಿಕೊಂಡರು.

ಕೋವಿಡ್ ತಡೆ ಲಸಿಕೆಗಳನ್ನು ಪೂರೈಸಿದ್ದ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ಸೈರಸ್ ಪೂನಾವಾಲಾ ಅವರ ಆಸ್ತಿ ಮೌಲ್ಯವು 2021ರಿಂದ 2022ರ ನಡುವೆ ಶೇ 91ರಷ್ಟು ಏರಿಕೆ ಕಂಡಿದೆ ಎಂಬುದು ಗಮನಾರ್ಹ. ಕೋಟ್ಯಧೀಶರಾದ ಶಿವ ನಾಡಾರ್, ರಾಧಾಕೃಷ್ಣ ದಮಾನಿ, ಕುಮಾರ ಮಂಗಲಂ ಬಿರ್ಲಾ ಅವರು ಆಸ್ತಿಗೆ ಶೇ 20ರಷ್ಟು ಸಂಪತ್ತು ಹರಿದುಬಂದಿದೆ.

ಕೋಟ್ಯಧೀಶರನ್ನು ಸೃಷ್ಟಿಸಿದ ಕೋವಿಡ್!: ಕೋವಿಡ್–19 ಸಾಂಕ್ರಾಮಿಕ ಶುರುವಾದ ಬಳಿಕ ಆರೋಗ್ಯ ಮತ್ತು ಔಷಧ ಕ್ಷೇತ್ರಕ್ಕೆ ಭಾರಿ ಮಹತ್ವ ಬಂದಿತು. ಈ ವಲಯದಲ್ಲಿ ಭಾರಿ ಲಾಭವಿದೆ ಎಂಬ ಕಾರಣಕ್ಕೆ ಸಾಕಷ್ಟು ಹೂಡಿಕೆಯೂ ಆಗಿದೆ. ಈ ವಲಯದಲ್ಲಿ ತೊಡಗಿಸಿಕೊಂಡಿದ್ದ ಉದ್ಯಮಿಗಳು ನಿರೀಕ್ಷೆಯಂತೆ ಕೋಟ್ಯಧೀಶರಾಗಿ ಬದಲಾಗಿದ್ದಾರೆ. 166 ಭಾರತೀಯ ಕೋಟ್ಯಧೀಶರ ಪೈಕಿ ಶೇ 19ರಷ್ಟು ಕೋಟ್ಯಧೀಶರು ಆರೋಗ್ಯ ಮತ್ತು ಔಷಧ ವಲಯದಲ್ಲೇ ಇರುವುದು, ಈ ಕ್ಷೇತ್ರಕ್ಕೆ ಹಣದ ಹೊಳೆ ಹರಿದಿರುವುದನ್ನು ಸೂಚಿಸುತ್ತದೆ. 2021ರಲ್ಲಿ ಒಂದೇ ವರ್ಷದಲ್ಲಿ 7 ಮಂದಿ ಹೊಸ ಕೋಟ್ಯಧೀಶರು ಆರೋಗ್ಯ ಮತ್ತು ಔಷಧ ಕ್ಷೇತ್ರದಿಂದ ಹೊರಹೊಮ್ಮಿದ್ದಾರೆ. ಈ ಏಳು ಜನರ ಒಟ್ಟಾರೆ ಸಂಪತ್ತಿನ ಮೌಲ್ಯ ₹4.3 ಲಕ್ಷ ಕೋಟಿ ಎಂದು ಆಕ್ಸ್‌ಫಾಮ್ ವರದಿ ತಿಳಿಸಿದೆ. 2004–2019ರ ಅವಧಿಯಲ್ಲಿ ದೇಶದ ಆರ್ಥಿಕ ಪ್ರಗತಿಯು ಶೇ 5.2ರಿಂದ ಶೇ 8.5ರ ನಡುವೆ ಇತ್ತು. ಈಗಾಗಲೇ ಅಧಿಕ ಶ್ರೀಮಂತರಾಗಿ ಅಗ್ರ ಸ್ಥಾನದಲ್ಲಿರುವ ಗಣ್ಯರ ನಡುವೆಯೇ ಈ ಪ್ರಗತಿಯ ಲಾಭವು ಹಂಚಿಕೆಯಾಗಿದೆ. ಕೋವಿಡ್‌ನಿಂದಾಗಿ ಹೇರಲಾದ ಲಾಕ್‌ಡೌನ್‌ನಿಂದ ಅಗ್ರ ಶ್ರೀಮಂತರ ಗಳಿಕೆಯಲ್ಲಿ ಒಂದಿಷ್ಟು ಇಳಿಕೆಯಾಗಿದ್ದರೂ, ಸಂಪತ್ತಿನ ಸ್ಥಾನ ಭದ್ರವಾಗಿತ್ತು. ಸರ್ಕಾರದ ಹಲವು ನೀತಿಗಳು ಈ ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿಸಿವೆ.

ಆರೋಗ್ಯ, ತಯಾರಿಕೆ ವಲಯದಲ್ಲಿ ಹೆಚ್ಚು ಕೋಟ್ಯಧೀಶರು: ಶ್ರೀಮಂತರು ಹೆಚ್ಚಾಗಿ ಕಂಡುಬರುವ ಎರಡು ಮಹತ್ವದ ವಲಯಗಳನ್ನು ಆಕ್ಸ್‌ಫಾಮ್ ಗುರುತಿಸಿದೆ. ಆರೋಗ್ಯ ಹಾಗೂ ತಯಾರಿಕಾ ವಲಯದಲ್ಲೇ ಹೆಚ್ಚು ಶ್ರೀಮಂತರು ಕೇಂದ್ರೀಕೃತವಾಗಿದ್ದಾರೆ. ಸೈರಸ್ ಪೂನಾವಾಲಾ, ದಿಲೀಪ್ ಸಂಘವಿ, ಮುರಳಿ ದಿವಿ ಸೇರಿದಂತೆ 32 ಕೋಟ್ಯಧೀಶರು ಆರೋಗ್ಯ ವಲಯದಲ್ಲಿದ್ದಾರೆ. 31 ಕೋಟ್ಯಧೀಶರು ತಯಾರಿಕೆ ವಲಯದಲ್ಲಿದ್ದಾರೆ.

ಅಶ್ವನಿ ದನಿ, ಬೇನು ಗೋಪಾಲ್, ಮಹೇಂದ್ರ ಚೋಕ್ಸಿ ಅವರು ಈ ವಲಯದಲ್ಲಿ ಮೊದಲ ಮೂರು ಸ್ಥಾನಗಳಲ್ಲಿದ್ದಾರೆ. 16 ಮಂದಿ ತಂತ್ರಜ್ಞಾನ, 15 ಮಂದಿ ಫ್ಯಾಷನ್ ಮತ್ತು ರಿಟೇಲ್ ವಲಯ ಹಾಗೂ ಬಹು ವಲಯದ ಉದ್ಯಮಗಳಲ್ಲಿ 16 ಕೋಟ್ಯಧೀಶರು ಗುರುತಿಸಿ ಕೊಂಡಿದ್ದಾರೆ. ಮುಕೇಶ್ ಅಂಬಾನಿ, ಗೌತಮ್ ಅದಾನಿ, ಕುಮಾರ ಮಂಗಲಂ ಬಿರ್ಲಾ, ಬಜಾಜ್ ಸಹೋದರರು ವೈವಿಧ್ಯಮಯ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ದೇಶದಲ್ಲಿ ಆದಾಯ, ಸಂಪತ್ತು ಮತ್ತು ತೆರಿಗೆ ಹಂಚಿಕೆಯನ್ನು ವಿವರಿಸುವ ಗ್ರಾಫಿಕ್ಸ್‌
ದೇಶದಲ್ಲಿ ಆದಾಯ, ಸಂಪತ್ತು ಮತ್ತು ತೆರಿಗೆ ಹಂಚಿಕೆಯನ್ನು ವಿವರಿಸುವ ಗ್ರಾಫಿಕ್ಸ್‌

ಆಧಾರ: ಆಕ್ಸ್‌ಫಾಮ್‌ನ ‘ಸರ್ವೈವಲ್ ಆಫ್‌ ದಿ ರಿಚ್ಚೆಸ್ಟ್‌: ದಿ ಇಂಡಿಯಾ ಸ್ಟೋರಿ’ ವರದಿ, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT