‘ಅಸಮಾನತೆಯಿಂದ ಅಭಿವೃದ್ಧಿ ಕುಂಠಿತ’

ಸೋಮವಾರ, ಮಾರ್ಚ್ 25, 2019
24 °C
‘ಅಭಿವೃದ್ಧಿ ಮತ್ತು ಸಮಾನತೆ’ ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣ

‘ಅಸಮಾನತೆಯಿಂದ ಅಭಿವೃದ್ಧಿ ಕುಂಠಿತ’

Published:
Updated:
Prajavani

ವಿಜಯಪುರ: ‘ಅಸಮಾನತೆಯು ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ. ಈ ನಿಟ್ಟಿನಲ್ಲಿ ಸಮಾನತೆಯ ಸೂತ್ರಗಳನ್ನು ಅನುಸರಿಸುವುದರ ಮೂಲಕ ಅಭಿವೃದ್ಧಿ ಹೊಂದಬಹುದು’ ಎಂದು ಜರ್ಮನಿಯ ಲೀಪ್ಜಿಗ್ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಎಲ್ಸೆನ್ಹ್ಯಾನ್ಸ್ ಹಾಟರ್ಮಟ್ ಅಭಿಪ್ರಾಯಪಟ್ಟರು.

ಅಕ್ಕಮಹಾದೇವಿ ಮಹಿಳಾ ವಿ.ವಿ.ಯ ಜ್ಞಾನಶಕ್ತಿ ಆವರಣದಲ್ಲಿ ಮಂಗಳವಾರ ನಡೆದ ‘ಅಭಿವೃದ್ಧಿ ಮತ್ತು ಸಮಾನತೆ’ ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ‘ಅಭಿವೃದ್ಧಿ ಎಂದರೇ, ಮಾರುಕಟ್ಟೆಯ ಮೂಲಕ ಆಗುವ ಅಭಿವೃದ್ಧಿ ಅಲ್ಲ. ಎಲ್ಲ ಕ್ಷೇತ್ರಗಳಲ್ಲಿಯೂ ಲಾಭ ಎನ್ನುವ ಅಂಶವನ್ನು ಪರಿಗಣನೆಗೆ ತೆಗೆದುಕೊಳ್ಳದೇ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ’ ಎಂದರು.

‘ಅತ್ಯಂತ ಬಡವರೂ ಇಂಗ್ಲಿಷ್ ಭಾಷೆ ಕಲಿಯುವುದರಿಂದ ಅಭಿವೃದ್ಧಿ ಸಾಧ್ಯ ಎಂಬ ಕಲ್ಪನೆ ತಪ್ಪು ದಾರಿಗೆಳೆಯುವಂತದ್ದು. ಜನರು ತಮ್ಮ ತಮ್ಮ ಭಾಷೆಯಲ್ಲಿಯೇ ಅಭಿವೃದ್ಧಿ ಸಾಧಿಸಿದ ಹಲವಾರು ದೇಶಗಳಿವೆ ಎಂಬುದನ್ನು ತಿಳಿಯಬೇಕು’ ಎಂದು ಕಿವಿಮಾತು ಹೇಳಿದರು.

‘ಗುಣಮಟ್ಟ ಜೀವನಾಭಿವೃದ್ಧಿಗೆ ಪೂರಕವಾಗಿರಬೇಕೆ ಹೊರತು ಭೌತಿಕವಾಗಿ ಅಲ್ಲ. ಜನಪರವಾಗಿರುವ ದೇಶಗಳು ಮಾತ್ರ ಅಭಿವೃದ್ಧಿಯನ್ನು ಕಾಣಬಹುದು. ಒಂದು ದೇಶದ ಆರ್ಥಿಕತೆಯ ಮೌಲ್ಯ, ಕೊಳ್ಳುವ ಶಕ್ತಿ ಎಲ್ಲರಿಗೂ ನಿಲುಕುವಂತಿರಬೇಕು. ಒಂದು ದೇಶದ ಒಬ್ಬ ಕಾರ್ಮಿಕನ ನಿಜ ವೇತನ ಅಭಿವೃದ್ಧಿಯಾಗಬೇಕು. ಅದಕ್ಕೆ ಕುಟುಂಬದ ಅವಶ್ಯಕತೆಯನ್ನು ಪೂರೈಸುವ ಶಕ್ತಿ ಅವನಿಗೆ ಇರಬೇಕು’ ಎಂದರು.

ಕೆನಡಾದ ಇಂಡಿಯಾ ಆಬ್ಸರ್ವರ್‌ ಪತ್ರಿಕೆಯ ಸಂಪಾದಕ, ಬಿ.ವಿ.ನಾಗ್ ಕಮ್ಯುನಿಕೇಷನ್ಸ್‌ನ ಅಧ್ಯಕ್ಷ ಬಿ.ವಿ.ನಾಗರಾಜು ಮಾತನಾಡಿ, ‘ದೇಶದಲ್ಲಿ ಎಪ್ಪತ್ತು ವರ್ಷಗಳಾದರೂ, ಸಹ ಮೂಗು ಮುಚ್ಚಿಕೊಂಡೇ ಓಡಾಡುವಂತಹ ಪರಿಸರದಲ್ಲಿ ನಾವಿದ್ದೇವೆ. ಇದರಿಂದ ಹೊರಬರಲು ಏನು ಮಾಡಬೇಕು ಮತ್ತು ಹೇಗೆ ಎಂಬುದರ ಅರಿವಿರಬೇಕು’ ಎಂದು ತಿಳಿಸಿದರು.

ಕುಲಪತಿ ಪ್ರೊ.ಸಬಿಹಾ ಮಾತನಾಡಿ ‘ಜಾತಿ, ಧರ್ಮ, ಲಿಂಗ, ಪ್ರದೇಶ ಇವುಗಳೆಲ್ಲವನ್ನೂ ಒಳಗೊಂಡಂತೆ ಸಮಾನತೆ ಸಾಧಿಸುವುದು ಅವಶ್ಯಕವಾಗಿದೆ. ಸ್ವಸ್ಥ ಮನಸ್ಸಿರುವ, ಮುಕ್ತವಾಗಿ ಅಭಿಪ್ರಾಯಗಳನ್ನು ಹೇಳಿಕೊಳ್ಳುವ ವಾತಾವರಣ ಬೇಕಿದೆ’ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಪುಣೆಯ ಸಮಾಜ ವಿಜ್ಞಾನ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಬಿ.ಟಿ.ಲಾವಣಿ, ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ.ಸುಧೇಷ್ಣಾ ಮುಖರ್ಜಿ ಪಾಲ್ಗೊಂಡಿದ್ದರು.

ಪ್ರೊ.ಓಂಕಾರ ಕಾಕಡೆ ಸ್ವಾಗತಿಸಿದರು. ಡಾ.ಲಕ್ಷ್ಮೀದೇವಿ ವೈ. ಪರಿಚಯಿಸಿದರು. ಕುಲಸಚಿವ ಪ್ರೊ.ಪಿ.ಜಿ.ತಡಸದ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ.ತಹಮೀನಾ ಕೊಲ್ಹಾರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !