ಶುಕ್ರವಾರ, ಜುಲೈ 1, 2022
23 °C

ದೇವ್ರೇ ಗತಿ!

ಲತಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಬಾಡಿಗೆ ಮನೆ ಬವಣೆ ಸಾಕಾಗಿ ಪತಿದೇವರ ತಲೆತಿಂದು ಅವರ ಬ್ಯಾಂಕ್ ಬ್ಯಾಲೆನ್ಸ್ ಶೂನ್ಯವಾಗಿಸಿದ್ದೂ ಸಾಲದೆಂಬಂತೆ ಸಾಲದ ಶೂಲಕ್ಕೇರಿಸಿ ಎಕ್ಸ್ಟೆನ್ಷನ್ ಏರಿಯಾದಲ್ಲಿ ಸ್ವಂತಕ್ಕೊಂದು ಸೂರು ಮಾಡಿಕೊಂಡದ್ದಾಗಿತ್ತು.

ಕರುಬೋ ಕಣ್ಣುಗಳಿಗೆ ರಾಚುವಂತೆ ಸಿಲ್ಕ್ ಸೀರೆಯುಟ್ಟು ಹಾಲುಕ್ಕಿಸಿ ಗೃಹಪ್ರವೇಶ ಮಾಡಿದ್ದೂ ಆಗಿತ್ತು. ಆದರೆ ಮಳೆಗಾಲದಲ್ಲಿ ಗೊತ್ತಾದದ್ದು ಕಚ್ಚಾ ಮಣ್ಣಿನ ಅಂಕುಡೊಂಕು ರಸ್ತೆಯ ಸಂಚಾರ ಅದೆಷ್ಟು ದುಸ್ತರ ಅಂತ. ಕಪ್ಪು ಜಿಗಿ ಮಣ್ಣಲ್ಲಿ ಚಪ್ಪಲ್ಲು ಹೂತು ಹೋಗಿ ಎಳೆದ್ರೆ ಬಾರು ಕಿತ್ತು ಬರ್ತಿತ್ತು! ಅವಸರದಲ್ಲಿ ನಡೆಯೋಕೆ ಶುರು ಮಾಡಿದ್ದೇ ಆದಲ್ಲಿ ಜಾರಿದ ದೇಹ ಭೂಸ್ಪರ್ಶ ಮಾಡುವುದು ಶತಃಸಿದ್ಧವಾಗಿತ್ತು. ಸದಾ ಸರ್ವದಾ ನಾಲ್ಕಿಂಚು ಮಣ್ಣು ಮೆತ್ತಿಕೊಂಡ ಚಪ್ಪಲ್ಲು ಹೊತ್ತು ಅಳೆದೂ ಸುರಿದೂ ನಡೆಯೋ ಪರಿಸ್ಥಿತಿ. ರಾಡಿಯ ಹೊಂಡಗಳೇ ಎಲ್ಲೆಲ್ಲೂ!

ನಮ್ ಕಾಲೊನಿಯ ಹಿತರಕ್ಷಕ ಸಂಘದವ್ರನ್ನ ಕೇಳಿದ್ರೆ ‘ಚೇರ್ಮನ್ನೇ ದುಡ್ಡು ನುಂಗಿ ನಾಪತ್ತೆಯಾಗಿ ಚೋರ್ಮನ್ ಆಗಿರೋದ್ರಿಂದ ಏನೂ ಮಾಡೋಕ್ಕಾಗದು’ ಎಂದೂ, ಕಾರ್ಪೊರೇಷನ್ಗೆ ಹೋಗಿ ಅಲವತ್ತುಕೊಂಡರೆ ‘ತಗ್ಗು ಪ್ರದೇಶದಲ್ಲೇಕೆ ಮನೆ ಕಟ್ಟಿದ್ದೀರಿ...’ ಎಂಬ ಉಡಾಫೆ ಉತ್ತರವೇ ಗತಿಯಾಗಿತ್ತು. ಇನ್ನು ಯಜಮಾನ್ರ ಹತ್ತಿರ ಗೋಗರೆದ್ರೆ 'ನೀನ್ ತಾನೇ ಮುಂದ್‌ವರ್ದು ಜಾಗ ನೋಡಿದ್ದು. ಈಗ ಅನುಭವಿಸು ನನ್ನೇನೂ ಕೇಳ್ಬೇಡ, ಸದ್ಯ ಸಾಲ ತೀರಿದ್ರೆ ಸಾಕಾಗಿದೆ...'

ತಾರಮ್ಮಯ್ಯ ಆಡ್ಸಿದ್ರೂ ಬಡಪೆಟ್ಟಿಗೆ ಸುಮ್ಮನಿರೋ ಜಾಯಮಾನದವಳಲ್ಲ ನಾನು. ಇದೀಗ ಕಟ್ಟ ಕಡೆಯ ಅಸ್ತ್ರ ಪ್ರಯೋಗಿಸಲು ಸನ್ನದ್ಧಳಾದೆ... ಅದೇ ಕಣ್ರೀ ‘ಸಂಕಟ ಬಂದಾಗ ವೆಂಕಟರಮಣ!’
ಅದೇನೋ ಸರಿ. ‘ದೇವ್ರೇ ನೀನೇ ಗತಿ, ಕಾಪಾಡಪ್ಪ’ ಅಂತ ಒಣಒಣ ಬೇಡ್ಕೊಂಡ್ರೆ ಆಗುತ್ಯೇ..? ಕಠಿಣ ತಪಸ್ಸು, ವ್ರತ ಕೈಗೊಳ್ಳದೇ ಸುಮ್ಸುಮ್ನೆ ಕರೆದ್ರೆ ಬರೋಕೆ ಅವನೇನು ನೆಂಟನೇ... ಆದರೆ, ಕಠಿಣ ತಪಸ್ಸು..? ಈ ಹೈಟೆಕ್ ಯುಗಕ್ಕೆ ಸರಿಹೊಂದದು. ಅಷ್ಟಕ್ಕೂ ಕಾಡಿಗೆ ಹೋಗಿ ತಪಸ್ಸು ಮಾಡೋಣ ಅಂದ್ರೆ ಎಲ್ಲಿದೆ ಕಾಡು? ಬರೀ ಕಾಂಕ್ರೀಟು. ಮನೇಲಿ ಇದ್ದುಕೊಂಡು ತಣ್ಣಗೆ ವ್ರತ ಮಾಡೋದೇ ಸರಿಯಾದ ಮಾರ್ಗ... ವ್ರತದ ಮೂಲಕ ದೇವ್ರನ್ನ ಒಲಿಸಿ ರಸ್ತೆ ಸಮಸ್ಯೆ ಬಗೆಹರಿಸ್ಕೊಳ್ಳೋ ಸ್ಕೆಚ್ ಹಾಕಿ ಕಾರ್ಯೋನ್ಮುಖಳಾದೆ.

ಒಳ್ಳೇ ಮುಹೂರ್ತದಲ್ಲಿ ವ್ರತ ಪ್ರಾರಂಭಿಸಿಯೇ ಬಿಟ್ಟೆ. ದಿನಾ ನಸುಕಿನಲ್ಲೆದ್ದು ಪ್ರಾತರ್ವಿಧಿ ಮುಗಿಸಿ, ನಮ್ ಓಣಿ ಗಸ್ತು ತಿರುಗಿ ಹಳೇ ಕಾಲದ ಕೊಕ್ಕೆ ಛತ್ರಿಯಿಂದ ಗಿಡಬಗ್ಸಿ ಒಂದಷ್ಟು ಹೂವು ಸಂಪಾದಿಸ್ತಿದ್ದೆ. ಅದ್ಹೇಗಪ್ಪಾ ಅಂತ ಪೆದ್ದ್ ಪೆದ್ದಾಗಿ ಕೇಳ್ಬೇಡಿ, ಈ ವಿಷಯದಲ್ಲಿ ನೀವೂ ಒಂದಲ್ಲ ಒಂದ್ ರೀತೀಲಿ ಅನುಭವಸ್ಥರೇ (ಹೂ ಕಳ್ಳತನ ಮಾಡಿ ಅಥವಾ ಮಾಡಿಸ್ಕೊಂಡು). ಮನೇಗ್ ಬಂದು ತಲೆಸ್ನಾನ ಮಾಡಿ ಮಡಿಸೀರೆ ಉಟ್ಕೊಂಡು ಆ ದಯಾಮಯನನ್ನ ಓಲೈಸೋ ಸ್ತೋತ್ರ- ಕಥನಗಳನ್ನೆಲ್ಲಾ ಓದ್ಕೊಂಡು ಅರಿಶಿನ- ಕುಂಕುಮ -ಚಂದನ ಲೇಪಿಸಿ, ಬಿಟ್ಟಿ ಸಿಕ್ಕ ಹೂವಿನ ರಾಶೀಲಿ ಮುಳುಗ್ಸಿ ದಿನಕ್ಕೊಂದು ನೈವೇದ್ಯಾನೂ ಇಡ್ತಿದ್ದೆ. (ಬೇಡ್ವೆ ಮತ್ತೆ?) ನನ್ನ ಈ ನಿತ್ಯದ ದಿನಚರಿ ಸಾಂಗವಾಗಿ ಸಾಗಿತ್ತು. ದಿನಾಲೂ ಬೆಳ್ಬೆಳಗ್ಗೆ ಗಂಟೆಗಟ್ಟಲೆ ಪೂಜೆ ಶುರುವಿಟ್ಟುಕೊಂಡ್ರೆ ಮನೇ ಮಂದಿಗೆಲ್ಲಾ ಏನ್ ಗತಿ ಅಂತ ಲೊಚ್ಗುಡ್ತಿದ್ದೀರಾ? ಇದೆಯಲ್ಲಾ ಹೊಟ್ಟೆಮೇಲೆ ತಣ್ಣೀರು ಪಟ್ಟಿ! ಅವ್ರೂ ಕಷ್ಟ ಪಡ್ಬೇಕಪ್ಪ.

ಅಂದು ಕೂಡ ಪೂಜೆ ಮುಗಿಸಿ ಇನ್ನೇನು ದೇವರಿಗೆ ಅಡ್ಡ ಬೀಳ್ಬೇಕು, ಹೊರಗೆ ಕ್ಷೀಣ ಧ್ವನಿಯಲ್ಲಿ ಯಾರೋ ನರಳುತ್ತಾ ಕರೆಯುತ್ತಿದ್ದಂತಹ ಸದ್ದು. ಧಾವಿಸಿದ್ದೆ... ಕೃಶ ಕಾಯದ, ಪಂಚೆ ಎಲ್ಲಾ ಕೆಸರಾಗಿರೋ ಬಡಪಾಯಿ! ಕಾಲಲ್ಲಿ ಕಿತ್ತು ಹೋಗಿರೋ ಹವಾಯಿ ಚಪ್ಪಲಿ ಬೇರೆ! ಕಾಲೂ ಕೆಸರಾಗಿತ್ತು. ಮುಂದೆ ಸಾಗಹಾಕೋಣ ಅಂತ ಗದರಲು ಇನ್ನೇನ್ ಬಾಯಿ ತೆರೀಬೇಕು... ಆತ ಅವಸರದಲ್ಲಿ ‘ನಿನಗೇನ್ ಬೇಕೋ ಕೇಳಿಕೋ ತಾಯೀ' ಅನ್ನಬೇಕೇ! ಥಟ್ಟನೆ ಮೈಯಲ್ಲಿ ಮಿಂಚಿನ ಸಂಚಾರ!! ಪರವಶಳಾಗಿ ಧೊಪ್ಪನೆ ಅಡ್ಡಬಿದ್ದೆ.

‘‘ವಿಚಿತ್ರ ಬೇಡಿಕೆ ತಾಯಿ ನಿಂದ , ಹವಾಯಿ ಚಪ್ಪಲ್ಲಿನ ಈ ಅವತಾರದಲ್ಲೇ ಅದೂ ಅದೇ ರಸ್ತೇಲಿ ನಡೆದುಕೊಂಡು ಬಂದೇ ದರ್ಶನ ಕೊಡು ಅಂತ ಯಾಕ್ ಬೇಡ್ಕೋತಿದ್ದೆ? ಈ ತರಹ ಯಾವ ಭಕ್ತನೂ ಕೇಳಿರಲಿಲ್ಲ...’’ ಕ್ಷೀಣನಾಗಿ ಕೇಳಿದ ಆ ದಯಾಮಯ. ಆತನಿರೋ ಗೆಟಪ್‌ಗೆ ಆ ಧ್ವನಿ ಸರಿಯಾಗೇ ಹೊಂದಿತ್ತು. ನಗು ಬಂದರೂ ತಡ್ಕೊಂಡಿದ್ದೆ. ಕಿಲಾಡಿ ದೇವರು! ಎಲ್ಲಾ ಗೊತ್ತಿದ್ರೂ ನನ್ ಬಾಯಲ್ಲೇ ಕೇಳೋ ಆಸೆ.

‘‘ಹೇ ದೇವಾ! ನನ್ನ ವ್ರತಕ್ಕೆ ಮೆಚ್ಚಿ ಗಾಳೀಲಿ ತೇಲ್ಕೊಂಡು ಥಟ್ಟಂತ ಪ್ರತ್ಯಕ್ಷ ಆಗ್ಬಿಟ್ರೆ ನಾವ್ ಅನುಭವಿಸಿರೋ ಕಷ್ಟ ನಿನಗೆ ಹೇಗ್ ಗೊತ್ತಾಗಿರೋದು? ಅದಕ್ಕೇ ಹಾಗ್ ಬೇಡ್ಕೊಂಡಿದ್ದು. ಈಗ್ಲಾದ್ರೂ ನನ್ನ ಕಷ್ಟ ಏನೂ೦ತ ತಿಳೀತಲ್ಲ. ಕ್ಷಮಿಸು ದೇವಾ! ಒಂದ್ಸಲ ನಡ್ಕೊಂಡು ಬಂದಿದ್ದಕ್ಕೇ ಈ ಪಾಟಿ ಏದುಸಿರು ಬಿಡ್ತಿದ್ಯಲ್ಲಾ, ದಿನಕ್ಕೆ ಹಲವಾರು ಬಾರಿ ಓಡಾಡೋ ನಮ್ ಗತಿ!? ಕರುಣೆ ತೋರ್ಸಿ ಆ ದಾರಿಗೊಂದು ಗತಿ ಕಾಣಿಸಿ ನಮ್ಮನ್ನು ಅನುಗ್ರಹಿಸು ತಂದೆ ’’ ಕೈ ಮುಗ್ದು ಸೊಂಟ ಬಗ್ಸಿ ಕಣ್ಣಲ್ಲೆಲ್ಲಾ ನೀರು ತುಂಬ್ಕೊಂಡು ಆರ್ತಳಾಗಿ ನಿಂತಿದ್ದೆ (ಹಳೇ ಪೌರಾಣಿಕ ನಾಟಕಗಳಲ್ಲಿ ಓವರ್ ಆ್ಯಕ್ಟಿಂಗ್ ಮಾಡೋ ಹಾಗೆ). ಅದನ್ನೆಲ್ಲಾ ಗಮನಿಸುವ ಸ್ಥಿತೀಲೂ ಇರಲಿಲ್ಲ ಭಗವಂತ. ಕಣ್ಣು ಕೋರೈಸುವ ತನ್ನ ಮೂಲ ರೂಪಧಾರಣೆ ಮಾಡಿ ನಿಟ್ಟುಸಿರು ಬಿಡ್ತಾ ‘‘ಒಂದ್ಮಾತು ತಾಯಿ, ನೀನೇನೋ ಕಷ್ಟ ಆದಾಗ್ಲೆಲ್ಲಾ ನನ್ನ ಕರೀತಿದ್ದೆ. (ನಾನು ಬರ್ತಿದ್ನೋ ಇಲ್ವೋ, ಆ ಮಾತು ಬೇರೆ) ಆದ್ರೆ ನನ್ ಕಷ್ಟ ಕಾಲ್ದಲ್ಲಿ ನಾ ಯಾರ ಮೊರೆ ಹೋಗೋದು ಅನ್ನೋದೇ ಪಾಡಾಗಿತ್ತು. ಅದ್ರಲ್ಲೂ ಹವಾಯಿ ಚಪ್ಪಲ್ಲು ಹಾಕ್ಕೊಂಡು ಆ ಅಂಟು ಮಣ್ಣಿನ ರಸ್ತೇಲಿ ನಾನ್ ಪಟ್ಟ ಪಾಡು..! ಈ ದುರವಸ್ಥೆ ಯಾವ ಶತ್ರುವಿಗೂ ಬೇಡ ತಾಯಿ! ನೀನು ಕೇಳಿದ್ದಕ್ಕೆಲ್ಲಾ ‘ತಥಾಸ್ತು’.

ದೇವಲೋಕಕ್ಕೆ ಹೋಗಿ ರೆಸ್ಟ್ ತಗೊಳ್ಳೋ ಗಡಿಬಿಡೀಲಿ ಇದ್ದ ಭಗವಂತ ನೈವೇದ್ಯದ ಕಡೆಗೆ ತಿರುಗಿಯೂ ನೋಡದೇ ಪುರುಸೊತ್ತಿಲ್ಲದ ಹಾಗೆ ಮಾಯ ಆಗ್ಬಿಡೋದೆ?! ಗೊಂದಲದಲ್ಲಿ ಹೊರಗೆ ಧಾವಿಸಿದಾಗ ನಮ್ ರಾಡಿ ರೋಡು ರಾಷ್ಟಪತಿ ಭವನದ ಮುಂದಿರೋ ರಸ್ತೆಯಂತೆ ನೀಟಾಗಿ ಸಪಾಟಾಗಿ ಲಕಲಕ ಅಂತ ಕಂಗೊಳಿಸುತ್ತಿತ್ತು! ಅಂತೂ ಇಂತೂ ನಮ್ ಬವಣೆ ನಿವಾರಣೆಯಾಗಿದ್ದಕ್ಕೆ ಸಂತಸ ತಡೀಲಾರ್ದೆ ಜಿಗಿದೇ ಬಿಟ್ಟೆ... ‘ಧೊಪ್ಪ್!’

ಅಯ್ಯೋ..! ಅಂಡು ಇಷ್ಟ್ಯಾಕೆ ನೋಯ್ತಿದೆ?... ಕಣ್ಬಿಟ್ಟು ನಿಧಾನವಾಗಿ ಗ್ರಹಿಸಿದಾಗ ತಿಳೀತು ನಾನು ಮಂಚದಿಂದ ಕೆಳಗೆ ಬಿದ್ದದ್ದು. ಸೊಂಟವೋ ವಿಪರೀತ ನೋಯ್ತಿತ್ತು. ಹಾಗಾದ್ರೆ ವ್ರತ... ದೇವರು ಪ್ರತ್ಯಕ್ಷ... ಎಲ್ಲಾ ಕನಸೆ? ಕಣ್ಣುಜ್ಜಿಕೊಳ್ತಾ ಪೆದ್ದುಪೆದ್ದಾಗಿ ಕಣ್ಣು ಪಿಳುಕಿಸಿದೆ. ಮಂಚದ ಮೇಲೆ ಗುಡ್ಡದಂತೆ ಬಿದ್ದುಕೊಂಡಿದ್ದ ನಮ್ಮೆಜಮಾನ್ರು ಕಿಚಾಯಿಸಿದ್ರು. ‘‘ಅಯ್ಯೋ ಸುಂದ್ರು, ಬಿದ್ಬಿಟ್ಯಲ್ಲೇ... ಸೊಂಟದ ಮೂಳೆಗಳೆಲ್ಲಾ ಅಲ್ಲಲ್ಲೇ ಇದ್ಯೇನೆ? ಅದ್ಯಾಕ್ ಹಾಗ್ ನೆಗದ್ಯೇ..? ನಿನಗೇನ್ ಬಂತೆ ಧಾಡಿ... ಬರಬರ್ತಾ ರಾಯರ ಕುದುರೆ...’’ ರಾಗ ಎಳೀತಾ ಉರಿಯೋ ಗಾಯದ ಮೇಲೆ ಉಪ್ಪು ಸುರಿಯೋ ಹಂಗೆ ವ್ಯಂಗ್ಯವಾಡಿದ್ರೂ ಪತಿದೇವರ ಮೇಲೆ ಈ ಸಲ ಮಾತ್ರ ಸಿಟ್ಟೇ ಬರ್ಲಿಲ್ಲ. ಯಾಕ್ಹೇಳಿ? ದೇವ್ರನ್ನ ಹೇಗ್ ಒಲಿಸಿಕೊಳ್ಳಬಹುದು; ಯಾವ ಗೆಟಪ್ನಲ್ಲಿ ಕರೆಸಿದ್ರೆ ಹೆಚ್ಚು ಫಲಕಾರಿ ಅನ್ನೋ ಚಿದಂಬರ ರಹಸ್ಯ ಬಯಲಾಯ್ತಲ್ಲ. ಇಂತಹ ಸುವರ್ಣಾವಕಾಶ ಬಿಡ್ತೀನಾ? ಸೊಂಟ ನೀವುತ್ತಾ ಲಗುಬಗೆಯಲ್ಲಿ ಎದ್ದೆ. ‘‘ಪಂಚಾಂಗ ಎಲ್ಲಿದೇರೀ..?’’ ಶುಭ ಮುಹೂರ್ತದಲ್ಲಿ ವ್ರತ ಪ್ರಾರಂಭಿಸೋ ಅವಸರ ನನಗೆ.

ಅರೆರೇ! ನೀವ್ಯಾಕ್ ಅವಸರ ಮಾಡ್ತಿದ್ದೀರಾ? ಓಹೋ! ಮುಹೂರ್ತ ನೋಡೋಕೇನು? ಸರಿ ಬಿಡಿ. ನಿಮ್ಮಗಳ ಕಷ್ಟಾನೂ ಪರಿಹರಿಸಿಕೊಳ್ಳಿ. ನನ್ ಮನೋಭೀಷ್ಟೇನೂ ಈಡೇರಲಿ ಅಂತ ಹಾರೈಸಿ. ನಿಮ್ಗೂ ಕೂಡ ‘ಆಲ್ ದಿ ಬೆಸ್ಟ್’. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.